Saturday, December 30, 2017

ಸರಕಾರದ ಮೌಲ್ಯಮಾಪನ ಮತ್ತು ಐಐಎಂಗಳ ಕ್ಷಮತೆ-ನೈತಿಕತೆ

(ನಾನು ಐಐಎಂನಲ್ಲಿ ಪ್ರಾಧ್ಯಾಪಕನಾಗಿರುವುದರಿಂದ ಈ ಲೇಖನವನ್ನು ಸ್ವಹಿತಾಸಕ್ತಿಯಿಂದ ಬರೆದಿರಬಹುದೆಂಬ ಆರೋಪವನ್ನು ಮೊದಲಗೇ ಒಪ್ಪುತ್ತೇನೆ)

ಕರ್ನಾಟಕ ಸರಕಾರದ ಮಂತ್ರಿಗಳ ಕಾರ್ಯಕ್ಷಮತೆಯ ಬಗೆಗೆ ಐಐಎಂನ ಪ್ರಾಧ್ಯಾಪಕರು ಮೌಲ್ಯಮಾಪನ ಮಾಡುತ್ತಾರೆಂಬ ಪ್ರಸ್ತಾಪವನ್ನು ಖಂಡಿಸಿ, ಅಲ್ಲಿನ ಪ್ರಾಧ್ಯಾಪಕರ ನೈತಿಕ ಅಧಿಕಾರವನ್ನೂ ಕ್ಷಮತೆಯನ್ನೂ ಪ್ರಶ್ನಿಸಿ ಅನಂತಮೂರ್ತಿಯವರನ್ನು ಒಳಗೊಂಡಂತೆ ನಾಡಿನ ಕೆಲವು ಬುದ್ಧಿಜೀವಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದರ ಹಿಂದಿನ ರಾಜಕೀಯ ಏನೇ ಆದರೂ ಒಂದು ಉನ್ನತ ವಿದ್ಯಾ ಸಂಸ್ಥೆ, ಅದರ ಕ್ಷಮತೆ-ನೈತಿಕ ನಿಲುವನ್ನೂ ಈ ರೀತಿಯಾಗಿ ಪ್ರಶ್ನಿಸುವುದು ಸಮಂಜಸವೇ? 

ವಿಶ್ವವಿದ್ಯಾಲಯಗಳೂ, ಉನ್ನತ ವಿದ್ಯಾ ಸಂಸ್ಥೆಗಳೂ ಮುಕ್ತ ವಾತಾವರಣದಲ್ಲಿ ಕೆಲಸಮಾಡುತ್ತವೆ. ಅಲ್ಲಿ ಕೆಲಸ ಮಾಡುವವರಿಗೆ ತಮ್ಮದೇ ಆದ ಪ್ರತ್ಯೇಕ ವಿಚಾರಧಾರೆಯೂ ಪಂಥವೂ ಇರಬಹುದಾದರೂ ಸಂಸ್ಥೆಗೇ ಒಂದು ಪಂಥವಾಗಲೀ – ವಿಚಾರಧಾರೆಯಾಗಲೀ ಇರುವುದಿಲ್ಲ. ಹೌದು, ಒಂದೇ ರೀತಿಯ ವಿಚಾರಧಾರೆಯ ಹಲವರು ಒಂದೇ ಉನ್ನತ ವಿದ್ಯಾ ಸಂಸ್ಥೆಯಲ್ಲಿ ಸೇರಿದಾಗ ಆ ಸಂಸ್ಥೆಗೂ ಅಲ್ಲಿನ ಜನರ ವಿಚಾರಧಾರೆ ಅಂಟಬಹುದು. ಹೀಗಾಗಿಯೆ ಜವಾಹರಲಾಲ್ ನಹರೂ ವಿಶ್ವವಿದ್ಯಾಲಯಕ್ಕೆ ಎಡಪಂಥೀಯರ ಅಡ್ಡಾ ಎಂದೂ, ಶೀಕಾಗೋ ಸ್ಕೂಲಿಗೆ ಮಾರುಕಟ್ಟೆವಾದಿಗಳ ಆಗರವೆಂದೂ ಹೆಸರು ಬಂದಿರಬಹುದು. ಹಾಗೆಯೇ ಐಐಎಂ ಗಳಿಗೂ ಬಂಡವಾಳಶಾಹಿ, ಮಾರುಕಟ್ಟೆಗಳನ್ನು ಪ್ರೋತ್ಸಾಹಿಸುವ ಸ್ಥಳ ಎಂಬ ಹಣೆಪಟ್ಟಿ ಅಂಟಿರಬಹುದು. ವ್ಯಾಪಾರೀ ಸೂತ್ರಗಳನ್ನೇ ಮುಖ್ಯವಾಗಿ ಕಲಿಸುವ ಆ ಜಾಗಕ್ಕೆ ಆ ಹಣೆಪಟ್ಟಿ ಸಹಜವೇ. ಆದರೆ ಆ ಹಣೆಪಟ್ಟಿ ಅಂಟಿಸಿಕೊಂಡ ಮಾತ್ರಕ್ಕೇ ಈ ಸಂಸ್ಥೆಯ ನೈತಿಕ ಅಧಿಕಾರವನ್ನೂ ಕ್ಷಮತೆಯನ್ನು ಪ್ರಶ್ನಿಸಬಹುದೇ?

ಐಐಎಂನಲ್ಲಿ ಕೆಲಸಮಾಡುತ್ತಿರುವ ಪ್ರಾಧ್ಯಾಪಕರು ಯಾವ ರೀತಿಯ ಭಿನ್ನ ಕೆಲಸಗಳನ್ನು ಮಾಡುತ್ತಿರಬಹುದು ಎನ್ನುವುದಕ್ಕೆ ಉದಾಹರಣೆಗಳನ್ನು ನೀಡುತ್ತೇನೆ. ಈ ಉದಾಹರಣೆಗಳೂ ವೈಯಕ್ತಿಕ ಸಾಧನೆಯ ಉದಾಹರಣೆಗಳೇ. ಆದರೆ ಅವುಗಳಿಗೆ ಐಐಎಂ ನ ಒಂದು ಕೊಂಡಿಯಿದೆ, ಹೇಗೆ ಈ ವ್ಯಕ್ತಿಗಳು – ಈ ಉದಾಹರಣೆಗಳೂ ಐಐಎಂಗಳ ಮನೋಧರ್ಮವನ್ನು ನಿರ್ದೇಶಿಸುವುದಿಲ್ಲವೋ ಹಾಗೆಯೇ ಐಐಎಂ ಕೂಡಾ ಪ್ರಾಧ್ಯಾಪಕರ ವಿಚಾರಧಾರೆಯನ್ನು ನಿರ್ದೇಶಿಸುವುದಿಲ್ಲ. ಉನ್ನತ ವಿದ್ಯಾ ಸಂಸ್ಥೆಗಳ ಯಶಸ್ಸಿನ ಗುಟ್ಟೇ ಅಲ್ಲಿನ ವಿಚಾರಧಾರೆಯ ವೈವಿಧ್ಯತೆ, ಜಗಳಗಳು ಮತ್ತು ಭಿನ್ನಾಭಿಪ್ರಾಯಗಳಾಗಿವೆ. ಒಂದು ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿ ದುಡಿದ ಅನಂತಮೂರ್ತಿಯವರಿಗೆ ಇದು ತಿಳಿದದ್ದೇ.
ಹಲವು ವರ್ಷಗಳ ಹಿಂದೆ ಚುನಾವಣೆ ಮತ್ತು ರಾಜಕಾರಣವನ್ನು ಶುದ್ಧಗೊಳಿಸಲು ಏನೆಲ್ಲಾ ಮಾಡಬಹುದು ಎಂದು ಹಲವು ಪ್ರಾಧ್ಯಾಪಕರು ಯೋಚಿಸಿದರು. ಅವರೆಲ್ಲಾ ಐಐಎಂ ಅಹಮದಾಬದಿನಲ್ಲಿ ದುಡಿಯುತ್ತಿದ್ದರು. ಮತದಾರ ತನ್ನ ಮತದ ಹಕ್ಕನ್ನು ಚಲಾಯಿಸುವಾಗ ತಾನು ಚುನಾಯಿಸುತ್ತಿರುವ ಪ್ರತಿನಿಧಿಯ ಬಗೆಗೆ ಹೆಚ್ಚಿನ ಅಧಿಕೃತ ಮಾಹಿತಿ ಸಿಕ್ಕಾಗ ತನಗೆ ಸಮರ್ಪಕವಾದ ನಿರ್ಧಾರವನ್ನು ಮಾಡುವುದಕ್ಕೆ ಆಸ್ಪದವಿದೆ ಎನ್ನುವ ಮಾತು ಚರ್ಚೆಗಳಿಂದ ಹೊರಹೊಮ್ಮಿತು. 

ಪ್ರಾಧ್ಯಾಪಕರೂ, ಮತ್ತು ಅದೇ ಸಂಸ್ಥೆಯ ಮಾಜೀ ವಿದ್ಯಾರ್ಥಿಗಳೂ ಸೇರಿ ಉಚ್ಚ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನು ದಾಖಲಿಸಿದರು. ಆ ಮೊಕದ್ದಮೆಯ ಫಲವಾಗಿ ಇಂದು ನಮಗೆ ಚುನಾವಣಾ ಕಣದಲ್ಲಿ ನಿಂತ ಅಭ್ಯರ್ಥಿಗಳ ಮೇಲೆ ನ್ಯಾಯಾಲಯದಲ್ಲಿ ದಾಖಲಾಗಿರುವ ಗಂಭೀರ ಆರೋಪಗಳೂ, ಅವರ ಆದಾಯ-ಆಸ್ತಿಯ ವಿವರಗಳೂ ಲಭಿಸುತ್ತಿವೆ. ಈ ಪ್ರಾಧ್ಯಾಪಕರಲ್ಲಿ ಕೆಲವರು ಪ್ರಜಾಪ್ರಭುತ್ವ ಸುಧಾರಣಾ ಒಕ್ಕೂಟಎಂಬ ಸಂಸ್ಥೆಯನ್ನು ಕಟ್ಟಿ, ಅಭ್ಯರ್ಥಿಗಳು ನೀಡಿದ ಮಾಹಿತಿಯನ್ನು ಸಂಗ್ರಹಿಸಿ, ಒಟ್ಟಗೂಡಿಸಿ ಅದರ ವಿಶ್ಲೇಷಣೆಯನ್ನು ನಿಯಮಿತವಾಗಿ ನೀಡುತ್ತಿದ್ದಾರೆ. ಈ ವಿಶ್ಲೇಷಣೆಗೂ, ಅದನ್ನು ಜನರಿಗೆ ಮುಟ್ಟಿಸುವ ಯೋಜನೆಗೂ, ಐಐಎಂಗಳಲ್ಲಿ ಕಲಿಸುವ ನಿರ್ವಹಣಾ ಸೂತ್ರಗಳ ಹಿನ್ನೆಲೆಯಿದೆ.

ಈ ಕೆಲಸದಿಂದ ಉಪಯೋಗವೇನೆಂಬ ಒಂದು ಅಧ್ಯಯನದಲ್ಲಿ ಮೂಡಿ ಬಂದಿರುವ ವಿಚಾರ: ಈಗಾಗಲೇ ಚುನಾವಣೆಯ ಕಣದಲ್ಲಿರುತ್ತ ಗಂಭೀರ ಅಪರಾಧವೆಸಗಿದವರ ಸಂಖ್ಯೆ ಕಡಿಮೆಯಾಗಿಲ್ಲವಾದರೂ, ಹೊಸ ಅಪರಾಧಿಗಳ ಪ್ರವೇಶಕ್ಕೆ ಇದು ಕಂಟಕವಾಗಿದೆಯೆಂದು ತಿಳಿದು ಬಂದಿದೆ. ಅದೇನೇ ಇರಲಿ – ಈ ಆಲೋಚನೆ ಮೂಡಿಬಂದದ್ದು ಆ ಸಂಸ್ಥೆಯಲ್ಲಿದ್ದವರ ಕ್ಷಮತೆ ಮತ್ತು ನೈತಿಕ ಮೌಲ್ಯಗಳ ಆಧಾರವಾಗಿಯೇ. ಅದರ ಜೊತೆಗೇ ಅಲ್ಲಿ ಬೋಧಿಸುವ ನಿರ್ವಹಣಾ ತಂತ್ರವೂ, ಪಾಲಿಸುವ ಪಾರದರ್ಶಕತ್ವದ ಸೂತ್ರವನ್ನೂ ಕಾರ್ಯರೂಪಕ್ಕಿಳಿಸಲಾಗಿತ್ತು.

ಮೂರು ದಶಕಗಳ ಕೆಳಗೆ ಬೆಂಗಳೂರಿನಲ್ಲಿ ಪರಿಸರವಾದದ ಚರ್ಚೆ ಜೋರಾಗಿ ನಡೆದಿತ್ತು. ಆಗ ಸಾಮಾಜಿಕ ಅರಣ್ಯವೆಂಬ ಕಾರ್ಯಕ್ರಮದಡಿ ನೀಲಗಿರಿ ಮರಗಳನ್ನು ರಾಜ್ಯದ ಹಲವೆಡೆ ನೆಡುವ ಕಾರ್ಯಕ್ರಮವಿತ್ತು. ಜಯಂತ ಬಂದೋಪಾಧ್ಯಾಯರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಆ ಕಾರ್ಯಕ್ರಮದಿಂದ ಭೂಗರ್ಭ ಜಲಸಂಪತ್ತು ನಾಶವಾಗುತ್ತಿರುವ ವಿಚಾರವನ್ನು ಮುಕ್ತವಾಗಿ ಚರ್ಚೆಗೆ ತರಲಾಗಿತ್ತು. ಜಯಂತ್ ಆಗ ಕೆಲಸ ಮಾಡುತ್ತಿದ್ದದ್ದು ಬೆಂಗಳೂರಿನ ಐಐಎಂನಲ್ಲಿ. ಆ ಚರ್ಚೆಯಿಂದ ಪ್ರಭಾವಿತರಾದ ಒಬ್ಬ ಯುವ ವಿದ್ಯಾರ್ಥಿಯ ಹೆಸರು ರಾಮಚಂದ್ರ ಗುಹಾ.

ರಾಮಚಂದ್ರ ಗುಹಾ ಆಗ್ಗೆ ಐಐಎಂ ಕೊಲ್ಕತಾದಲ್ಲಿ ಡಾಕ್ಟರೇಟ್ ಮಾಡಲು ಹೊರಟಿದ್ದರು. ಮಾನವಶಾಸ್ತ್ರ-ಸಮಾಜಶಾಸ್ತ್ರದಲ್ಲಿ ಅವರು ಅಧ್ಯಯನ ನಡೆಸಿದ್ದರಾದರೂ, ಅವರು ಆಯ್ದುಕೊಂಡ ವಿಷಯ ಪರಸರವಾದದ ಚರಿತ್ರೆಯಾಗಿತ್ತು. ಆದರೆ ಈ ರೀತಿಯ ಕೆಲಸಗಳೂ ಐಐಎಂ ನಂತಹ ಸಂಸ್ಥೆಗಳಲ್ಲಿ ನಡೆಯುತ್ತವೆ ಎನ್ನುವುದನ್ನು ಊಹಿಸಲಾಗಲೀ, ಒಪ್ಪಲಾಗಲೀ ತಾಳ್ಮೆ ಬೇಕಾಗುತ್ತದೆ. ಈಗಲೂ ಸರಕಾರದ ಸಕಾಲ ಕಾರ್ಯಕ್ರಮ, ರಾಗಿಗುಡ್ಡದ ಕೊಳೆಗೇರಿ ನಿರ್ಮೂಲನಾ ಮತ್ತು ಪುನರ್ನಿರಮಾಣ ಕಾರ್ಯಕ್ರಮ, ಬೆಂಗಳೂರಿನಲ್ಲಿ ಭೂಗರ್ಭ ಜಲಸಂಪಲ್ಮೂಲ ಬದಲಾವಣೆಯಾಗುತ್ತಿರುವ ಬಗೆಗಿನ ಅಧ್ಯಯನ, ಆರೋಗ್ಯ, ವಿಮೆ, ಸಾರಿಗೆ, ಪರಿಸರಕ್ಕೆ ಸಂಬಂಧಿಸಿದ ಅನೇಕ ಅಧ್ಯಯನಗಳು ಐಐಎಂಗಳಲ್ಲಿ ನಡೆಯುತ್ತಿವೆ. ಸಾಬರಮತಿ ನದಿ ದಂಡೆಯ ಯೋಜನೆಯಿಂದ ಅಹಮದಾಬಾದು ನಗರದ ಸೌಂದರ್ಯ-ಪ್ರವಾಸೋದ್ಯಮ ಹೆಚ್ಚಿಸುವ ಮೋದಿಯವರ ಕನಸಿನ ಯೋಜನೆಯಲ್ಲಿ ಅಲ್ಲಿನ ಬಡವರ ಪುನರಾವಾಸ, ಹಾಗೂ ಆ ಯೋಜನೆಯು ಪರಿಸರದ ಮೇಲೆ ಉಂಟುಮಾಡಬಹುದಾದ ಪ್ರಶ್ನೆಗಳನ್ನು ಎತ್ತಿದವರೂ ಐಐಂ ನಲ್ಲಿ ಕೆಲಸಮಾಡುತ್ತಿದ್ದ ಪ್ರಾಧ್ಯಾಪಕರೇ. ಇವು ಉದಾಹರಣೆಗಳಷ್ಟೇ.

ಈ ಹಿನ್ನೆಲೆಯಲ್ಲಿ ಅಮೇರಿಕಾ ಸೇರಿದಂತೆ ಇಡೀ ಜಗತ್ತಿನ ಆರ್ಥಿಕತೆ ಏರುಪೇರಾಗಲು ಅಲ್ಲಿನ ನಿರ್ವಹಣಾ ಸಂಸ್ಥೆಗಳ ಉತ್ಪಾದನೆಗಳಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಹಣಕಾಸು ಅಧಿಕಾರಿಗಳು ಬಹಳವಾಗಿ ಕಾರಣ ಎಂದು ಅಮೇರಿಕಾ ಒಪ್ಪಿಕೊಂಡಿದೆ. ಅಂತಹ ಸಂಸ್ಥೆಗಳ ನೆರಳಾದ ಐಐಎಂ ಪ್ರಾಧ್ಯಾಪಕರುಗಳಿಗೆ ಸರ್ಕಾರವೊಂದರ ಸಚಿವರ ಮೌಲ್ಯಮಾಪನ ಮಾಡಲು ನೈತಿಕ ಹಕ್ಕು ಇದೆಯೇ?” ಎಂದು ಪ್ರಶ್ನಿಸಿರುವುದನ್ನು ಕಂಡಾಗ ನಮ್ಮ ಐಐಎಂಗಳ ಭಿನ್ನತೆಯನ್ನು ಗಮನಿಸುವ ಗೋಜಿಗೆ ಹೋಗದೆಯೇ ಈ ವಕ್ತವ್ಯವನ್ನು ಹಿರಿಯರು ನೀಡಿರುವುದು ವೇದ್ಯವಾಗುತ್ತದೆ.

ಐಐಎಂಗಳನ್ನು ಸ್ಥಾಪಿಸಿದ ರೂವಾರಿಗಳಾದ ವಿಕ್ರಂ ಸಾರಾಭಾಯಿ, ರವಿ ಮಥಾಯಿಯಂಥಹವರ ದರ್ಶನ ವ್ಯಾಪಾರವನ್ನೂ ಮೀರಿದ್ದಾಗಿತ್ತು. ಹೀಗಾಗಿಯೇ ನಮ್ಮ ಸಂಸ್ಥೆಗಳಿಗೆ ಒಂದು ಭಿನ್ನವಾದ ಅಸ್ತಿತ್ವವನ್ನು ನೀಡುವುದರಲ್ಲಿ ಅವರು ಸಫಲರಾಗಿದ್ದರು. ಪಶ್ಚಿಮದಿಂದ ಸೂತ್ರಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಆಮದು ಮಾಡಿಕೊಳ್ಳಬೇಕು ಎಂಬುದನ್ನು ಆ ರೂವಾರಿಗಳು ವ್ಯಕ್ತಪಡಿಸಿದ್ದರು. ಅಮೆರಿಕದಲ್ಲಿ ವ್ಯಾಪಾರ ಸೂತ್ರಗಳ ಅಧ್ಯಯನ ಬೋಧನೆ ಮಾಡುವ ಉನ್ನತ ವಿದ್ಯಾ ಸಂಸ್ಥೆಗಳನ್ನು ಬಿಜಿನೆಸ್ ಸ್ಕೂಲ್ (ವ್ಯಾಪಾರ ಸೂತ್ರಗಳ ಶಾಲೆ) ಎಂದು ಕರೆದರೂ, ಭಾರತದಲ್ಲಿ ಉದ್ದೇಶ ಪೂರ್ವಕವಾಗಿ ಈ ಸಂಸ್ಥೆಗಳನ್ನು ಮ್ಯಾನೇಜಮೆಂಟ್ ಇನ್ಸಟಿಟ್ಯೂಟ್ (ನಿರ್ವಹಣಾ ಸೂತ್ರಗಳ ಸಂಸ್ಥೆ) ಎಂದು ಕರೆದೆವು. ಅದಕ್ಕೆ ಕಾರಣವೂ ಇತ್ತು. ನಿರ್ವಹಣಾ ಸೂತ್ರಗಳು ವ್ಯಾಪಾರಕ್ಕೇ ಸೀಮಿತವಾಗದೇ ಇತರ ಕ್ಷೇತ್ರಗಳಿಗೂ – ಮುಖ್ಯವಾಗಿ ಸಾರ್ವಜನಿಕ, ರಾಜಕೀಯ, ಸ್ವಯಂ ಸೇವಾ ಕ್ಷೇತ್ರಕ್ಕೂ ಅನ್ವಯವಾಗಬೇಕು; ಕಾರ್ಯದಕ್ಷತೆ ಎಲ್ಲ ಕ್ಷೇತ್ರಗಳಲ್ಲೂ ಇರಬೇಕು ಎನ್ನುವ ವಿಚಾರಧಾರೆ ಅವರುಗಳದ್ದಾಗಿತ್ತು. ಹೀಗಾಗಿ ಐಐಎಂಗಳ ಉದ್ದೇಶ ವಿಸ್ತಾರವಾಗಿ ವ್ಯಾಪಾರವನ್ನು ಮೀರಿತ್ತು, ಹಾಗೂ ಇಂದಿಗೂ ಇದೆ.

ಹಾಗೆಂದು ಐಐಎಂ ಸಂಸ್ಥೆಗಳು ಪ್ರಶ್ನಾತೀತವಾಗಿವೆ ಎನ್ನುವುದೂ ಸರಿಯಲ್ಲ. ಈ ಸಂಸ್ಥೆಗಳ ಬಗ್ಗೆ ಟೀಕೆ ಮಾಡುವುದಕ್ಕೂ ಸಾಕಷ್ಟು ಅಂಶಗಳನ್ನು ಅವು ಒದಗಿಸಿಕೊಟ್ಟಿವೆ. ಉದಾಹರಣೆಗೆ ಐಐಎಂ ಅಹಮದಾಬಾದಿಗೆ ಸರಕಾರ ಹೆಚ್ಚಿನ ಸ್ವಾಯತ್ತತೆ ನೀಡಿ, ತಮ್ಮ ನಿರ್ದೇಶಕರನ್ನು ಅವರ ನಿರ್ವಹಣಾ ಮಂಡಲಿಯೇ ಆಯ್ಕೆ ಮಾಡಿ ಸರಕಾರಕ್ಕೆ ಹೆಸರುಗಳನ್ನು ಕಳುಹಿಸಬಹುದು ಎಂದಾಕ್ಷಣಕ್ಕೆ ಆ ಸ್ವಾಯತ್ತತೆಯನ್ನು ತಕ್ಷಣಕ್ಕೆ ಜವಾಬ್ದಾರಿಯುತವಾಗಿ ನಿರ್ವಹಿಸಲಾಗದೇ ಆರು ತಿಂಗಳುಗಳಿಗೂ ಹೆಚ್ಚು ಮೀನ ಮೇಷ ಎಣಿಸಿ ಸಂಸ್ಥೆಯನ್ನು ಒಂದು ತ್ರಿಶಂಕು ಸ್ಥಿತಿಯಲ್ಲಿ ಉಳಿಸಿಕೊಂಡಿದ್ದ ಘಟನೆ ಈಚೆಗಷ್ಟೇ ನಡೆಯಿತು. ಈ ಸಂಸ್ಥೆಗಳು ತಮ್ಮ ಹೆಚ್ಚಿನ ಶುಲ್ಕದಿಂದಾಗಿ ಸಾಮಾನ್ಯರಿಗೆ ಎಟುಕದ ಎಲಿಟಿಸ್ಟ್ ಸಂಸ್ಥೆಗಳಾಗಿವೆ ಎನ್ನುವ ಆರೋಪವೂ ಇದೆ. ಈ ಎಲ್ಲ ವಿಷಯಗಳನ್ನೂ ಮುಕ್ತವಾಗಿ ಚರ್ಚಿಸಬೇಕು. ಆದರೆ ಇಂಥ ಸಂಸ್ಥೆಗಳ ನೈತಿಕ ನಿಲುವನ್ನೇ ಪ್ರಶ್ನಿಸುವುದಾದರೆ ಅವುಗಳನ್ನು ಮುಚ್ಚಿಹಾಕಲು ಬೇರೊಂದೇ ಅಭಿಯಾನವನ್ನು ನಡೆಸುವುದು ಉತ್ತಮ.

ಈಗ ಕರ್ನಾಟಕದ ಮಂತ್ರಿಗಳ ಕಾರ್ಯಕ್ಷಮತೆಯನ್ನು ಐಐಎಂ ನಂತಹ ಸಂಸ್ಥೆಯಿಂದ ಮೌಲ್ಯಮಾಪನ ಮಾಡಿಸಬೇಕೋ ಬೇಡವೋ – ಅಥವಾ ಅದಕ್ಕೆ ಇನ್ನೂ ಉತ್ತಮ ಮಾರ್ಗವಿದೆಯೋ, ಅದು ಯಾರಿಂದ ಆದರೆ ಸಮಂಜಸಪೂರ್ಣವಾಗುತ್ತದೆ ಎನ್ನುವುದು ಭಿನ್ನವಾದ ಚರ್ಚೆಯಾಗಿದೆ. ಆ ಚರ್ಚೆ ಆಗಬೇಕು. ಆದರೆ ಅಂತಹ ಚರ್ಚೆ ಆರೋಗ್ಯಪೂರ್ಣ ವಾತಾವರಣದಲ್ಲಿ ಆಗಬೇಕು. ಆರೋಪ ಪ್ರತ್ಯಾರೋಪದ ವಾತಾವರಣದಲ್ಲಿ ಅಲ್ಲ.


Tuesday, December 24, 2013

ಕೃಷಿ ಮಾರುಕಟ್ಟೆಯ ವಿಚಾರಗಳು.

ನಮ್ಮ ಸರಕಾರ ಕೆಲವು ದಿನಗಳ ಹಿಂದಷ್ಟೇ ನೂತನ ಕೃಷಿ ಮಾರಾಟ ನೀತಿಯನ್ನು ಪ್ರಕಟಮಾಡಿದೆ. ನೂತನ ನೀತಿಯಲ್ಲಿ ರೈತಪರ ಮತ್ತು ಕ್ರಾಂತಿಕಾರಿ ವಿಚಾರಗಳಿರಬಹುದೆಂದು, ಆಶಿಸಿದವರಿಗೆ ನಿರಾಶೆಯನ್ನುಂಟು ಮಾಡಲೆಂದೇ ಈ ಪ್ರಕಟಣೆಯನ್ನು ಸರಕಾರ ಹೊರಡಿಸಿದಂತಿದೆ. ಅಂದರಿಕೀ ಮಂಚಿವಾಡು ಆಗುವ ತವಕದಲ್ಲಿ ಇದು ಏಕಕಾಲಕ್ಕೆ ರೈತಪರವೂ, ವ್ಯಾಪಾರಿಗಳ ಪರವೂ, ಸಹಕಾರದ ಪರವೂ, ಖಾಸಗೀಕರಣದ ಪರವೂ, ಸಾಂಪ್ರದಾಯಿಕತೆಯ ಪರವೂ, ಸುಧಾರಣೆಯ ಪರವೂ ಗುಣಮಟ್ಟದ ಪರವೂ, ತಾಂತ್ರಿಕತೆಯ ಪರವೂ, ಪಾರದರ್ಶಕತ್ವದ ಪರವೂ, ಸೌಕರ್ಯಗಳನ್ನು ಹೆಚ್ಚಿಸುವುದರ ಪರವೂ ಆಗಿದ್ದು – ಈ ನೀತಿ ಲಾಗೂ ಆದಾಕ್ಷಣಕ್ಕೆ ಕೃಷಿಯು ರಾಮರಾಜ್ಯದಲ್ಲಿ ನಡೆಯುತ್ತಿದೆ ಎಂಬ ಭಾವನೆ ಉಂಟುಮಾಡುವ ಎಲ್ಲಿಗೂ ಸಲ್ಲದ ದಾಖಲೆಯಾಗಿದೆ. ಈ ರೀತಿಯ ದಾಖಲೆಯನ್ನು ಟೀಕಿಸುವುದೂ ಕಷ್ಟವೇ – “ರೈತರ ಹಿತರಕ್ಷಣೆಯನ್ನು ಕಾಪಾಡಲು ಕರ್ನಾಟಕ ಕೃಷಿ ಉತ್ಪನ್ನ (ನಿಯಂತ್ರಣಾ ಮತ್ತು ಅಭಿವೃದ್ಧಿ) ಅಧಿನಿಯಮ 1966ರಲ್ಲಿಯ ಎಲ್ಲ ರೈತಸ್ನೇಹಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು” ಎಂಬ ವಾಕ್ಯದ ಅರ್ಥವೇನು? ಇಷ್ಟುದಿನ ಅದು ಅನುಷ್ಠಾನದಲ್ಲಿರಲಿಲ್ಲವೇ? ರೈತ ಸ್ನೇಹಿ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದಾಗ ರೈತವಿರೋಧಿ ನಿಯಮಗಳನ್ನು ಬದಿಗಿಡಲಾಗುವುದೇ ಅಥವಾ ರೈತ ವಿರೋಧಿ ನಿಯಮಗಳು ಇಲ್ಲವೇ ಇಲ್ಲವೆ?

ನಮ್ಮ ರೈತರ ಎದುರಿಗೆ ಇರುವ ಸವಾಲುಗಳು ಹಲವು. ಮಿಕ್ಕ ವ್ಯಾಪಾರಕ್ಕಿಂತ ಕೃಷಿಯ ವ್ಯಾಪಾರವು ಜಟಿಲವಾದದ್ದು. ಇದಕ್ಕೆ ಕಾರಣ ಅನೇಕಾನೇಕ ಸಣ್ಣ ರೈತರ ಉತ್ಪತ್ತಿಯನ್ನು (ರೈತರ ಸಂಖ್ಯೆಗೆ ಹೋಲಿಸಿದರೆ) ಕೆಲವಷ್ಟೇ ವ್ಯಾಪಾರಿಗಳು ಕೊಳ್ಳುತ್ತಾರೆ. ಅಲ್ಲಿಯೇ ಒಂದು ಅಸಮಾನತೆ ಬಂದುಬಿಡುತ್ತದೆ. ಇದರ ಜೊತೆಗೆ ಕೃಷಿ ಉತ್ಪನ್ನವನ್ನು ಜಾಗರೂಕವಾಗಿ ದಾಸ್ತಾನು ಮಾಡಬೇಕು. ಹಾಗಾಗದಿದ್ದರೆ ಮೂಲಕ್ಕೇ ಮೋಸವಾಗುತ್ತದೆ. ರೈತರಿಗೆ ದಾಸ್ತಾನು ಮಾಡಲು ಭೌತಿಕ ಸದುಪಾಯವಿರುವುದಿಲ್ಲ.  ಬಿತ್ತನೆಯಿಂದ ಪ್ರಾರಂಭವಾಗುವ ಕೃಷಿಯ ಪ್ರಕ್ರಿಯೆಗೆ ವರ್ಷವಿಡೀ ಖರ್ಚುಗಳೇ ಆಗಿ ಆದಾಯವು ಒಮ್ಮೆಗೆ ಮಾತ್ರ ಬರುತ್ತದೆ. ಆದಾಯ ಬರುವ ಕಾಲಕ್ಕಾಗಲೇ ರೈತರು ತಮ್ಮ ಹಣವನ್ನು ಸುರಿದು – ಯಾವುದಾದರೂ ಮೂಲದಿಂದ ಎಷ್ಟಾದರೂ ಹಣ ಬರಲಿ ಎನ್ನುವ ಮಟ್ಟಿಗೆ ಅಸಹಾಯಕರಾಗಿರುತ್ತಾರೆ.

ಜಗತ್ತಿನಲ್ಲಿ ಎಲ್ಲಿ ಎಷ್ಟು ಉತ್ಪಾದನೆಯಾಗಿದೆ, ಯಾವ ಜಾಗದಲ್ಲಿ ಹೆಚ್ಚು ದಾಸ್ತಾನಿದೆ, ಮಾಲಿಗೆ ಎಲ್ಲಿ ಎಷ್ಟು ಬೆಲೆ ಗಿಟ್ಟುತ್ತಿದೆ ಎಂಬ ಮಾಹಿತಿ ರೈತರಿಗಿಂತ ಹೆಚ್ಚು ವ್ಯಾಪಾರಿಗಳಿಗಿರುತ್ತದೆ. ಹೀಗಾಗಿ ಒಬ್ಬ ರೈತ ತನ್ನ ಉತ್ಪತ್ತಿಯನ್ನು ಮಾರಾಟ ಮಾಡುವಾಗ ಅನೇಕ ತೊಡಕುಗಳ ಮತ್ತು ಅನಿವಾರ್ಯತೆಗಳ ಮಧ್ಯೆ ತನ್ನ ನಿರ್ಧಾರಗಳನ್ನು ಕೈಗೊಳ್ಳುತ್ತಾನೆ. ಖರೀದಿ ಮಾಡುವವರಿಗೂ – ಮಾರಟ ಮಾಡುವವರಿಗೂ ಸಮಾನತೆ ಎಂಬ ಸೂತ್ರವನ್ನು ಈ ಚೌಕಟ್ಟಿನಲ್ಲಿ ಅರ್ಥೈಸಬೇಕು.

ಮಾರಾಟ ನೀತಿಯಲ್ಲಿ ಮೂರು ಸ್ಪಷ್ಟ ಘಟ್ಟಗಳಿರುವುದನ್ನು ಸರಕಾರ ಗುರುತಿಸಬೇಕು. ಮೊದಲ ಘಟ್ಟ ರೈತನಿಂದ ಉತ್ಪತ್ತಿಯನ್ನು ಕೊಳ್ಳುವುದು. ಎರಡನೆಯದು ನಂತರ ದಾಸ್ತಾನು-ಪರಿಷ್ಕರಣೆಯಗೆ ಸಂಬಂಧಿಸಿದ್ದು. ಮೂರನೆಯದ್ದು ಗ್ರಾಹಕರನ್ನು ತಲುಪುವ ಘಟ್ಟ. ಮೊದಲ ಘಟ್ಟಕ್ಕೆ ಸಲ್ಲುವ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ, ಖಾಸಗೀ ಮಾರುಕಟ್ಟೆಗಳಿಗೆ ಪರವಾನಗಿ ನೀಡುವ, ಪಾರದರ್ಶಕತೆಯನ್ನು ಹೆಚ್ಚಿಸುವ ನೀತಿ ಸೂತ್ರಗಳು ಆದಷ್ಟೂ ರೈತಪರವಾಗಿರಬೇಕು.

ಇದರ ಸಾಧನೆಗೆ ಮಾರ್ಗಸೂಚಿಯಾಗಿ ನಮ್ಮ ಷೇರುಮಾರುಕಟ್ಟೆ ಇದೆ. ಮೊದಲಿಗೆ ಷೇರು ಮಾರುಕಟ್ಟೆಯಲ್ಲಿಯೂ ಅಪಾರದರ್ಶಕವಾಗಿ, ಕೂಗಾಟ, ಕೈಸನ್ನೆಗಳ ಮೂಲಕ ಷೇರುಗಳನ್ನು ಕೂಡುಕೊಳ್ಳುವ ವ್ಯಾಪಾರ ನಡೆಯುತ್ತಿತ್ತು.  ಕಾಲಾಂತರದಲ್ಲಿ ಷೇರು ಮಾರುಕಟ್ಟೆಯ ಗಣಕೀಕರವಾಗಿ, ತಂತ್ರಜ್ಞಾನ ಸಿಕ್ಕಂತೆ ಹೆಚ್ಚಿನ ಜನರಿಗೆ ಕೈಗೆಟುಕುವ – ಸಣ್ಣ ಹೂಡಿಕೆದಾರರನ್ನು ಒಳಗೊಳ್ಳುವ ರೀತಿಯಲ್ಲಿ ಅದು ರೂಪುಗೊಂಡಿದೆ. ಅಲ್ಲಿ ಇನ್ನೂ ಸುಧಾರಣೆಗಳಾಗಬೇಕಾಗಿದೆಯಾದರೂ, ಒಂದು ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಎಷ್ಟೋ ಉತ್ತಮವಾಗಿಯೂ ಹೂಡಿಕೆದಾರರ ಹಕ್ಕುಗಳನ್ನು ಕಾಪಾಡುವ ರೀತಿಯಲ್ಲಿಯೂ ಬೆಳೆದಿದೆ.

ಆದರೆ ಷೇರು ಮಾರುಕಟ್ಟೆಗೂ, ಕೃಷಿ ಉತ್ಪನ್ನದ ಮಾರುಕಟ್ಟೆಗೂ ಮೂಲಭೂತ ಭಿನ್ನತೆಯಿದೆ. ಹೀಗಾಗಿ ಸುಧಾರಣೆಯ ನೀತಿಯು ಸರಳವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಷೇರುಮಾರುಕಟ್ಟೆಯಲ್ಲಿ ಸುಲಭವಾಗಿ ಎಲೆಕ್ಟ್ರಾನಿಕ್ ವ್ಯವಹಾರ ನಡೆಸಲು ಸಾಧ್ಯವಾದದ್ದೇಕೆಂದರೆ ಅಲ್ಲಿ ಮಾರಾಟ-ಖರೀದಿ ಆಗುತ್ತಿದ್ದದ್ದು ಕಾಗದದ ಮೇಲಿರುವ ಷೇರು ಪತ್ರಗಳು. ಆ ಪತ್ರಗಳನ್ನು ಸುಲಭವಾಗಿ ಡೀಮಟೀರಿಯಲೈಸ್ ಮಾಡಿ ಕಾಗದವೇ ಇಲ್ಲದೇ ಒಂದು ಖಾತೆಯಲ್ಲಿ ಷೇರುಗಳನ್ನಿರಿಸಿ ಎಲಕ್ಟ್ರಾನಿಕ್ ರೂಪದಲ್ಲಿ ವ್ಯವಹಾರ ಮಾಡುವುದು ಸಾಧ್ಯವಾಗಿತ್ತು. ಆದರೆ ಕೃಷಿ ಮಾರುಕಟ್ಟೆಯಲ್ಲಿ ಇದು ಸರಳವಲ್ಲ. ಕಡೆಗೂ ರೈತ ತಾನು ಬೆಳೆದ ಅಕ್ಕಿ-ಧಾನ್ಯ-ತರಕಾರಿಗಳನ್ನು ಭೌತಿಕವಾಗಿ ಒಯ್ದು ತಲುಪಿಸಿ ಸುರಕ್ಷಿತವಾಗಿ ದಾಸ್ತಾನು ಮಾಡಬೇಕು. ದಾಸ್ತಾನು ಮಾಡಿದ ಮಾಲು-ಅದರ ತೂಕ, ಗುಣಮಟ್ಟದ ನಿರ್ದಿಷ್ಟ ಮಾಪಕಗಳು ಇರಬೇಕು. ಈ ವೈಜ್ಞಾನಿಕ ಮಾಪಕಗಳು ಉಂಟಾದಾಗ ದಾಸ್ತಾನು ಕೇಂದ್ರಕ್ಕೆ ಸಲ್ಲಿಸಿದ ಮಾಲಿಗೆ ಸಿಕ್ಕ ಧೃಡೀಕರಿಣ ಪತ್ರದ ಆಧಾರದ ಮೇಲೆಯೇ ಅವನು ವ್ಯಾಪಾರ ಮಾಡಬಹುದು.

ಸರಕಾರದ ಮಾರಾಟ ನೀತಿಯಲ್ಲಿ ಮೊದಲಿಗೆ ಈ ಘಟ್ಟದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಈ ಘಟ್ಟದಲ್ಲಿ ರೈತರ ಹಿತರಕ್ಷಣೆಯ ವಿಚಾರ ಮಾಡಬೇಕು. ಏಕೆಂದರೆ ರೈತನು ಮಾಲನ್ನು ತಂದಾಗ ಮೋಸವಾಗುವುದೇ ತೂಕ-ಗುಣಮಟ್ಟದ ವಿಚಾರದಲ್ಲಿ. ಅಲ್ಲಿ ನಮಗೆ ತಂತ್ರಜ್ಞಾನವೂ ಬೇಕು, ರೈತ ಹಿತರಕ್ಷಣೆಯ ನಿಯಮಾವಳಿ-ಪ್ರಣಾಲಿಗಳೂ ಬೇಕು.

ಆಧುನಿಕ ತಂತ್ರಜ್ಞಾನವನ್ನು ಅಳವಡಿಸುವುದು ಸರಳವಾದ ವಿಚಾರವೇನೂ ಅಲ್ಲ. ಯಾಕೆಂದರೆ ತೊಂದರೆಗಳು ತಂತ್ರಜ್ಞಾನಕ್ಕೆ ಸೀಮಿತವಾಗಿರುವುದಿಲ್ಲ. ಅಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕೆಲಸಮಾಡುತ್ತವೆ. ತಲೆತಲಾಂತರದಿಂದ ಬಂದಿರುವ ರೈತರ ಮತ್ತು ಏಜೆಂಟರ (ಅಡತಿಯಾ) ಸಂಬಂಧಗಳಲ್ಲಿ ಒಂದು ಮಟ್ಟದ ಶೋಷಣೆಯಿರಬಹುದಾದರೂ ಮತ್ತೊಂದು ಮಟ್ಟದ ಸಂಬಂಧವೂ ಇದೆ. ಈ ಏಜೆಂಟರೇ ರೈತರಿಗೆ ಬೇಕಾದಾಗ ಹಣವನ್ನು ಒದಗಿಸುತ್ತಾರೆ, ಅವರೇ ಕೀಟನಾಶಕಗಳನ್ನೂ ಸರಬರಾಜು ಮಾಡುತ್ತಾರೆ. ಕೃಷಿಯೊಂದಿಗೆ ಬೆಳೆದುಬಂದಿರುವ ಪರಂಪರಾಗತ ಸಂಬಂಧವನ್ನು ಮುರಿದು – ಮಾರುಕಟ್ಟೆಯ ಕೊಂಡಿಯನ್ನು ಮಾತ್ರ ಬೇರ್ಪಡಿಸುವುದು ಸುಲಭದವಲ್ಲ.

ಹೊಸಕೋಟೆಯ ಬಳಿ ಮದರ್ ಡೈರಿಯ ಸಫಲ್ ಸಂಸ್ಥೆ ಅತ್ಯಾಧುನಿಕ ಮಾರುಕಟ್ಟೆಯ ವಿಧಾನವನ್ನು ಹಣ್ಣು ಮತ್ತು ತರಕಾರಿಗಳಿಗಾಗಿ ಏರ್ಪಾಟು ಮಾಡಿದೆ. ಆಲ್ಲಿ ಮಾಲಿನ ಗುಣಮಟ್ಟದ ವರ್ಗೀಕರಣ ವೈಜ್ಞಾನಿಕವಾಗಿ ಆಗುತ್ತದೆ. ಪಾರದರ್ಶಕವಾಗಿ ಎಲೆಕ್ಟ್ರಾನಿಕ್ ಪದ್ಧತಿಯ ಮೂಲಕ ಹರಾಜಿನ ಪ್ರಕ್ರಿಯೆ ನಡೆಯುತ್ತದೆ. ಆದರೆ ಬೆಂಗಳೂರಿಗೆ ಬರುವ ಹಣ್ಣು-ತರಕಾರಿಗಳ ಒಟ್ಟಾರೆ ಮಾಲಿನಲ್ಲಿ ಎಷ್ಟು ಪರಿಮಾಣ ಅಲ್ಲಿನ ಮಾರುಕಟ್ಟೆಯಲ್ಲಿ ವ್ಯಾಪಾರವಾಗುವುದು ಎನ್ನುವ ಪ್ರಶ್ನೆಯಿದ್ದೇ ಇದೆ. ಸಹಜವಾಗಿ ಯಶವಂತಪುರಕ್ಕೆ, ತರುಗುಪೇಟೆಗೆ, ಕೆ.ಆರ್.ಮಾರುಕಟ್ಟೆಗೆ, ಲಾಲಬಾಗಿಗೆ ದಿನನಿತ್ಯ ಹೋಗುತ್ತಿರುವ ರೈತರು ಇದ್ದಕ್ಕಿದ್ದ ಹಾಗೆ ತಮ್ಮ ಹಳೆಯ ಸಂಬಂಧಗಳನ್ನು ಕಳಚಿ ಹೊಸಕೋಟೆಗೆ ಹೋಗುತ್ತಾರೆಯೇ? ಇದೇ ಕಷ್ಟದ ಪ್ರಶ್ನೆ.
ಮಾರುಕಟ್ಟೆಯ ನೀತಿಯು ಸಕ್ಷಮವಾಗಿ ಕೆಲಸ ಮಾಡುವುದಕ್ಕೆ ಮಾರುಕಟ್ಟೆಗೆ ಮಾಲು ಬರುವುದರ ಹಿಂದಿನ ಘಟ್ಟಗಳನ್ನು– ಅಂದರೆ ರೈತನ ಆರ್ಥಿಕ ಸಂಪನ್ಮೂಲ, ಕೃಷಿಯ ಇತರೆ ಪರಿಕರಗಳಿಗೂ ಮಾರಾಟ ಮಾಡುವ ಮಾಲಿಗೂ ಇರಬಹುದಾದ ಸಂಬಂಧವನ್ನೂ ಮಾರುಕಟ್ಟೆಯ ನೀತಿ ಅರಿತುಕೊಳ್ಳಬೇಕು.

ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎನ್ನುವ ಧೈರ್ಯದ ಮಾತು ಸರಿಯೇ. ಆದರೆ ಯಾವುದೇ ಬದಲಾವಣೆಯಲ್ಲಿ ಪ್ರಸಕ್ತ ಮಾರುಕಟ್ಟೆಯಲ್ಲಿ ಭಾಗವಹಿಸುತ್ತಿರುವವರ ಪಾತ್ರಗಳು ಹೇಗೆ ಬದಲಾಗವುದು ಎನ್ನುವುದರ ಒಂದು ಕನಿಷ್ಟ ಮಟ್ಟದ ಪರಿಕಲ್ಪನೆ ಇರಬೇಕಾಗುತ್ತದೆ.

ಉದಾಹರಣೆಗೆ ಈ ಪರಿಸ್ಥಿತಿಯನ್ನು ಊಹಿಸೋಣ. ರೈತರಿಗೆ ಪ್ರತಿನಿತ್ಯ ವಿವಿಧ ಮಾರುಕಟ್ಟೆಗಳಲ್ಲಿರುವ ಧರದ ಬಗ್ಗೆ ಮೊಬೈಲಿನ ಮೂಲಕ ಮಾಹಿತಿ ದೊರೆಯುತ್ತದೆ; ಬೆಳೆಯ ಕಟಾವಾಗಿ ತೇವ್ಯ ಕಡಿಮೆಯಾದ ಕೂಡಲೇ ಚೀಲಗಳಿಗೆ ತುಂಬದೆಯೇ ನೇರ ಟ್ರಾಕ್ಟರಿನ ಟ್ರೇಲರಿಗೆ ಏರಿಸಿ, ಮಾರುಕಟ್ಟೆಗೆ ಒಯ್ದು ವೇ ಬ್ರಿಜ್ ಮೇಲೆ ತೂಕ ಹಾಕಿ – ನೇರವಾಗಿ ಖರೀದಿದಾರರ ದಾಸ್ತಾನು ಸೈಲೋಗಳಲ್ಲಿ ತುಂಬಲು ಸಾಧ್ಯವಾಗುತ್ತದೆ; ಅಲ್ಲಿ ವೈಜ್ಞಾನಿಕವಾಗಿ ಯಂತ್ರಗಳ ಮೂಲಕ ಗುಣಮಟ್ಟದ ನಿರ್ಧಾರವಾಗುತ್ತದೆ; ಖರೀದಿದಾರರು ತಕ್ಷಣಕ್ಕೆ ಸರಿಯಾದ ರಸೀತಿ ಕೊಟ್ಟು ಹಣ ಪಾವತಿಸುತ್ತಾರೆ. ಈ ಪರಿಸ್ಥಿತಿ ನನಸಾಗಲು ತಂತ್ರಜ್ಞಾನದ ತೊಡಕಿಲ್ಲ. ಇದರಿಂದ ಒಟ್ಟಾರೆ ರೈತರಿಗೆ (ಗೋಣಿ ಚೀಲ, ಹಮಾಲಿ, ಪ್ರತೀ ಮೂಟೆಯ ತೂಕದ ಪ್ರಕ್ರಿಯೆ, ಗುಣಮಟ್ಟ ಮಾಪನದ ಖರ್ಚುಗಳು) ಉಳಿತಾಯವೇ ಆಗುತ್ತದೆ. ಆದರೆ ಈ ತಂತ್ರಜ್ಞಾನವನ್ನು ಅಳವಡಿಸಬೇಕಾದರೆ ತೂಕದ ಮೋಸ ಮಾಡುತ್ತಿದ್ದ ವ್ಯಾಪಾರಿ, ಗೋಣಿಚೀಲದ ವ್ಯಾಪಾರಿ, ಹಮಾಲಿಗಳು, ಗುಣಮಟ್ಟವನ್ನು ನಿರ್ಧರಿಸುವ ತಜ್ಞ – ಈ ಎಲ್ಲರ ಜೀವನೋಪಾಧಿಗಳೂ ಒಂದಲ್ಲಾ ಒಂದು ರೀತಿಯಲ್ಲಿ ಏಟು ತಿನ್ನುತ್ತವೆ. ಹೀಗಾಗಿ ಸುಧಾರಣೆಯ ಪ್ರಕ್ರಿಯೆಯಲ್ಲಿ ಈ ಎಲ್ಲ ಮಾರುಕಟ್ಟೆಯ ಪಾತ್ರಧಾರಿಗಳ ಪಾತ್ರದ ಪರಿಶೀಲನೆ – ಹಾಗೂ ಆ ಪಾತ್ರಧಾರಿಗಳನ್ನು ನಾವು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳದಿದ್ದರೆ ಅವರುಗಳೇ ಈ ಸುಧಾರಣೆಗೆ ದೊಡ್ಡ ಕಂಟಕವಾಗುತ್ತಾರೆ.

ಷೇರು ಮಾರುಕಟ್ಟೆಯು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿದ ಕೂಡಲೇ ಷೇರು ದಳ್ಳಾಳಿಗಳ ಅವಶ್ಯಕತೆಯಿಲ್ಲವಾಯಿತು. ಪ್ರಾಂತೀಯ ಷೇರು ಮಾರುಕಟ್ಟೆಯಶ್ಯಕತೆ ಇಲ್ಲವಾಯಿತು. ಬೆಂಗಳೂರಿನ ಸ್ಟಾಕ್ ಎಕ್ಸಚೇಂಜ್ ತನ್ನು ಷೇರು ವ್ಯಾಪಾರವನ್ನು ಮುಚ್ಚಿ ಬೇರೆ ಚಟುವಟಿಕೆಗಳನ್ನು ಹುಡುಕುವ ಪ್ರಯಾಸದಲ್ಲಿದೆ. ನಮ್ಮ ಕೃಷಿಗೂ ಆ ಪರಿಸ್ಥಿತಿ ಬಂದ ದಿನ ರೈತರಿಗೆ ಹಬ್ಬವೇ ಆಗುತ್ತದೆ. ಆದರೆ ಅದಕ್ಕೆ ಬೇಕಾದ ಅಡಿಪಾಯ ಇನ್ನೂ ನಿರ್ಮಾಣವಾಗಬೇಕು. ಈ ಅಡಿಪಾಯವಿಲ್ಲದೆಯೇ ನಾವು ಕಮಾಡಿಟಿ ಎಕ್ಸಚೇಂಜುಗಳನ್ನು ಕಟ್ಟಿ, ಇಲ್ಲದ ಮಾಲಿನ ಊಹಾಪೋಹದ ವ್ಯಾಪಾರವನ್ನೂ –ಕೃಷಿ ಉತ್ಪನ್ನಗಳ ಮೇಲಿನ ದರದ ಆಧಾರವಾಗಿ ಮಾಲೇ ಸರಬರಾಜು ಮಾಡದ ಕೂಡಕೊಳ್ಳುವಿಕೆಯ ಆಟವನ್ನೂ ಆಡುತ್ತಿದ್ದೇವೆ. ಇದರಿಂದಾಗಿ ಕೃಷಿ ಉತ್ಪನ್ನಗಳ ದರದಲ್ಲಿ ವಿಪರೀತ ಏರುಪೇರಾಗುತ್ತದೆಯೇ ಹೊರತು ರೈತರಿಗೆ ಲಾಭವೇನೂ ಕಾಣುತ್ತಿಲ್ಲ.

ಹೊಸ ನೀತಿಯಂತೆ ಸರಕಾರವು ಎಲ್ಲವನ್ನೂ ಒಂದೇ ಏಟಿಗೆ ಮಾಡಹೊರಟು ಯಾವುದೂ ಗೆಲ್ಲದಂತೆ ಮಾಡುವುದಕ್ಕಿಂತ – ಮೂಲಭೂತ ವ್ಯವಸ್ಥೆಯ ಮೇಲೆ – ಅದನ್ನು ಕಟ್ಟುವ ಪರಿಯ ಬಗ್ಗೆ ಯೋಚಿಸಿದರೆ – ಒಂದೊಂದು ಬಾರಿಗೆ ಒಂದೊಂದೇ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಇಟ್ಟರೆ ರೈತರಿಗೂ ಉಪಯೋಗವಾಗುತ್ತದೆ. ಆಧುನಿಕ ಮಾರುಕಟ್ಟೆ ಹೇಗಿರಬಹುದು ಎನ್ನುವುದಕ್ಕೆ ಹೊಸಕೋಟೆಯಲ್ಲಿ ಸಫಲ್ ಇದೆ. ಅದು ಯಾಕೆ ಹಣ್ಣು ತರಕಾರಿಗಳ ವಹಿವಾಟಿನ ಮೂಲಬಿಂದು ಆಗಿಲ್ಲ ಎನ್ನುವುದಕ್ಕೂ ಕೆಲವು ಕಲಿಕೆಗಳಿವೆ. ಎರಡನ್ನೂ ಸರಕಾರ ಪರಿಗಣಿಸಬೇಕು.

ಬುಧವಾರ, 25 ಸೆಪ್ಟಂಬರ್ 2013


Monday, December 23, 2013

ಆರ್ಥಿಕ ಮಾರುಕಟ್ಟೆಯ ಸಾಧ್ಯತೆಗಳು-ಮಿತಿಗಳು

ರಘುರಾಮ್ ರಾಜನ್ ಭಾರತೀಯ ರಿಜರ್ವ್ ಬ್ಯಾಂಕಿನ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಆರಂಭಿಕ ಭಾಷಣ ಆಲಿಸಿದ ಮಾರುಕಟ್ಟೆಗಳು ಸಂತೋಷದಿಂದ ಸ್ವಾಗತಿಸಿವೆ. ಅವರೂ ಮಾರುಕಟ್ಟೆಗೆ ಪ್ರಿಯವಾಗುವ ಮಾತುಗಳನ್ನೇ ಆಡಿದ್ದಾರೆ. ಪಶ್ಚಿಮದಲ್ಲಿ ಆರ್ಥಿಕ ಮಾರುಕಟ್ಟೆಗಳ ತಾಂಡವ ನಡೆಯುತ್ತಿದ್ದಾಗ ಅಪಾಯದ ಗಂಟೆಯನ್ನು ಬಾರಿಸಿದ ಖ್ಯಾತಿ ರಾಜನ್ ಅವರದ್ದು. ಆದರೆ ಹಿಂದಿನ ಮುಖ್ಯಸ್ಥರಾಗಿದ್ದ ರೆಡ್ಡಿ ಮತ್ತು ಸುಬ್ಬಾರಾವುಗಳಿಗೆ ಹೋಲಿಸಿದರೆ ರಾಜನ್ ಮಾರುಕಟ್ಟೆಯ ಕಡೆಗೇ ವಾಲುತ್ತಾರೆ.

ಭಾರತ ಸರಕಾರ 2008ರಲ್ಲಿ ಆರ್ಥಿಕ ವಲಯಕ್ಕೆ ಅವಶ್ಯಕವಾದ ಸುಧಾರಣೆಗಳನ್ನು ಸೂಚಿಸಲು ರಾಜನ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತ್ತು. ಈಗ ಅವರೇ ಆರ್ಥಿಕ ರಂಗದ ಒಂದು ಮುಖ್ಯ ಹುದ್ದೆಯನ್ನಲಂಕರಿಸಿರುವುದರಿಂದ ತಮ್ಮ ವರದಿಯಲ್ಲಿ ಅವರು  ಹೇಳಿದ್ದೇನು – ಅದನ್ನು ಹೇಗೆ ಕಾರ್ಯರೂಪಕ್ಕಿಳಿಸಬಹುದು ಎಂಬುದನ್ನು ನಾವು ಚರ್ಚಿಸಬಹುದು. . ‘ನೂರು ಪುಟ್ಟ ಹೆಜ್ಜೆಗಳು’ ಎಂಬ ಆ ವರದಿ ಒಟ್ಟಾರೆ ಆರ್ಥಿಕ ವಲಯದ ಸುಧಾರಣೆಗಳನ್ನು ಸೂಚಿಸಿತ್ತಾದರೂ, ಇಲ್ಲಿ ನಾವು ಬಡವರಿಗೆ ಸಲ್ಲುವ ಆರ್ಥಿಕ ಸೇವೆಗಳ ಬಗ್ಗೆ ಮಾತ್ರ ಚರ್ಚಿಸೋಣ.

ಆರ್ಥಿಕ ಮಾರುಕಟ್ಟೆಯಲ್ಲಿ ಬಡವರೂ ಭಾಗವಹಿಸಬೇಕಿದ್ದರೆ ಅವರಿಗೆ ಅವಶ್ಯಕವಾದ ಸೇವೆಗಳನ್ನೊದಗಿಸಬೇಕು. ಇದನ್ನು ಸಾಧಿಸಲು ಬ್ಯಾಂಕುಗಳು ಹೆಚ್ಚೆ ಹೆಚ್ಚು ಶಾಖೆಗಳನ್ನು ತೆರೆಯಬೇಕು, ಹೆಚ್ಚು ಏಜೆಂಟರನ್ನು ನೇಮಿಸಬೇಕೆನ್ನುವುದು  ಹಿಂದಿನ ಮುಖ್ಯಸ್ಥರ ಒಲವಾಗಿತ್ತು. ಅದಕ್ಕಾಗಿ ಶೇಕಡಾ 25ರಷ್ಟು ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿ ತೆರೆಯಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿತ್ತು.

ರಾಜನ್ ಅವರ ಆಲೋಚನೆ ಈ ವಿಚಾರದಲ್ಲಿ ಭಿನ್ನವಾಗಿದೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು ಬೇಕು.ಇವುಗಳ ನಡುವೆ ನಡೆಯಬಹುದಾದ ಪೈಪೋಟಿಯೇ ಈ ಸಮಸ್ಯೆಯ ಪರಿಹಾರಕ್ಕೆ  ಒಂದು ಉಪಾಯವೆಂದು ನಂಬಿದ್ದಾರೆ. ಆ ನಂಬಿಕೆಯಲ್ಲಿ ಹುರುಳಿದೆ. ನಾವು ಹೊಸ ಸಂಸ್ಥೆಗಳಿಗೆ ಅವಕಾಶ ನೀಡಿ ಅವು ತರಬಹುದಾದ ನಾವೀನ್ಯವನ್ನು ಸ್ವಾಗತಿಸದಿದ್ದರೆ; ಈಗಿರುವ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಭಾಗವಹಿಸುವ ಪ್ರಕ್ರಿಯೆಯನ್ನು ದುಸ್ತರಗೊಳಿಸಿದರೆ; ಖಾಸಗೀ ಪ್ರಯತ್ನಗಳನ್ನು ಸಂಸ್ಥಾಗತ ಚೌಕಟ್ಟಿನಿಂದ ಹೊರಗಿಟ್ಟರೆ - ಉಳಿಯುವುದು ಬಡ್ಡಿ ವ್ಯಾಪಾರಿಗಳು ಮತ್ತು ಕಾನೂನಿನ ಹಿಡತಕ್ಕೆ  ಸಿಗದ ಅನೌಪಚಾರಿಕ ವ್ಯವಸ್ಥೆಗಳು ಮಾತ್ರ. ಸರಕಾರೀ ಸಂಸ್ಥೆಗಳ ಜೊತೆಗೇ ಖಾಸಗೀ ಸಂಸ್ಥೆಗಳನ್ನೂ ಈ ಕೆಲಸಕ್ಕೆ ಪ್ರೇರೇಪಿಸಬೇಕೆನ್ನುವುದು ರಾಜನ್ ನಿಲುವು. ಆ ನಿಲುವಿನನುಸಾರ ಅವರು ಸಣ್ಣ ಪ್ರಾದೇಶಿಕ ಬ್ಯಾಂಕುಗಳ ಪ್ರಸ್ತಾವನೆಯೊಂದನ್ನು ಮುಂದಿಡುತ್ತಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಪ್ರತಿಪಾದನೆಯಾಗಿದೆ.

ಆ ಮಾತಿನ ಜೊತೆಜೊತೆಗೇ ಸಾರ್ವಜನಿಕ ಕ್ಷೇತ್ರದ ದೊಡ್ಡ ಬ್ಯಾಂಕುಗಳಲ್ಲಿ ಖಾಸಗೀ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ಮಾತನ್ನೂ, ಸರಕಾರದ ಕಪಿಮುಷ್ಠಿಯಿಂದ ಸಾರ್ವಜನಿಕ ಬ್ಯಾಂಕುಗಳನ್ನು ಮುಕ್ತಗೊಳಿಸುವ ಮಾತನ್ನೂ ಅವರು ಆಡುತ್ತಾರೆ. ಮಾರುಕಟ್ಟೆಗಳನ್ನು  ತೆರೆದು ಹೊಸ ಸಂಸ್ಥೆಗಳಿಗೆ ನಾವು ಆಹ್ವಾನ ನೀಡಿ ಸ್ಪರ್ಧೆಯನ್ನು ಸೃಷ್ಟಿಸಬೇಕು  ಎಂಬುದೇನೋ ಸರಿ. ಆದರೆ ಮಾರುಕಟ್ಟೆಯನ್ನು ತೆರೆಯುವುದರ ಅರ್ಥ ಸರಕಾರೀ ಸಂಸ್ಥೆಗಳ ಖಾಸಗೀಕರಣ ಎನ್ನುವುದು ಎಷ್ಟರ ಮಟ್ಟಿಗೆ ಸಮರ್ಪಕ? ಮಾರುಕಟ್ಟೀಕರಣಕ್ಕೂ ಖಾಸಗೀಕರಣಕ್ಕೂ ಇರುವ ಕೊಂಡಿಯನ್ನು ಮುರಿದರೆ ಮಾರುಕಟ್ಟೆಯಲ್ಲಿ ಒಂದು ಭಿನ್ನ ಆಶಯದಿಂದ ಕೆಲಸ ಮಾಡುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳೂ ತಮ್ಮ ದಕ್ಷತೆಯನ್ನು ತೋರಬಹುದು ಇದಕ್ಕೆ ನಮ್ಮ ಭಾರತೀಯ ಸ್ಟೇಟ್ ಬ್ಯಾಂಕೇ ಸಾಕ್ಷಿಯಾಗಿದೆ.

ಬ್ಯಾಂಕುಗಳು ಎಲ್ಲಿ ಬೇಕೋ ಅಲ್ಲಿ ತಮ್ಮ ಶಾಖೆಗಳನ್ನು ತೆರೆಯುವ ಮುಕ್ತ ಅವಕಾಶವನ್ನು ನೀಡಬೇಕೆನ್ನುವುದು ರಘುರಾಮ್ ರಾಜನ್ ಅವರ ಮತ್ತೊಂದು ವಾದ. ಹಿಂದೆ ನಗರದಲ್ಲಿ (ಹೆಚ್ಚು ಅವಕಾಶಗಳಿರುವೆಡೆ) ಒಂದು ಶಾಖೆ ತೆರೆಯಬೇಕೆಂದರೆ, ಈ ಸೌಲಭ್ಯಗಳು ಸಿಗದಿರುವ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಶಾಖೆಗಳನ್ನು ತೆರೆಯಬೇಕೆಂಬ ನಿಯಮವಿತ್ತು. ಈಚೆಗೆ ಶೇಕಡಾ 25ರಷ್ಟು ಶಾಖೆಗಳು ಹಳ್ಳಿಗಾಡಿನಲ್ಲಿರಬೇಕೆಂಬ ನಿಯಮವನ್ನು ಪಾಲಿಸಲಾಗುತ್ತಿದೆ. ಹೊಸ-ಹಳೆಯ ಬ್ಯಾಂಕುಗಳು ಎಲ್ಲಿ ಬೇಕೆಂದರಲ್ಲಿ ಶಾಖೆ ತೆರೆಯಬಹುದೆಂದಾದರೆ ದೇಶದ ಕೆಲವು ಭಾಗಗಳಿಗೆ ಈ ವಿತ್ತೀಯ ಸೇವೆಗಳು ಲಭ್ಯವಾಗುವುದು ಹೇಗೆ? ಈ ಪ್ರಶ್ನೆಯನ್ನು ಕೆಳಗಿನ ಉದಾಹರಣೆಯೊಂದಿಗೆ ಪರಿಶೀಲಿಸಬಹುದು. ಕೇರಳದ ತ್ರಿಶೂರಿನಲ್ಲಿ ಪ್ರತೀ 3,200 ಜನಸಂಖ್ಯೆಗೆ ಒಂದು ಬ್ಯಾಂಕ್ ಶಾಖೆಯಿದೆ. ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯಲ್ಲಿ 74,000 ಜನಸಂಖ್ಯೆಗೆ ಒಂದು ಶಾಖೆಯಿದೆ. ಮಾರುಕಟ್ಟೆಗಳ ನಿಯಮವನ್ನು ಪಾಲಿಸಿದರೆ ಸಹಜವಾಗಿ ಯಾವ ಬ್ಯಾಂಕು ಪಶ್ಚಿಮ ಚಂಪಾರನ್‌ಗೆ ಹೋಗಿ ತನ್ನ ವಿತ್ತೀಯ ಸೇವೆಗಳನ್ನು ನೀಡಬಹುದು? ಅದು ಬಿಡಿ, ಶೇಕಡಾ 25 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿದ್ದ ಮಾತ್ರಕ್ಕೆ  ಅವು ವಿತ್ತೀಯ ಸೇವೆಗಳನ್ನು ನೀಡುತ್ತವೆ ಎಂಬ ನಂಬಿಕೆಯಾದರೂ ಎಷ್ಟರ ಮಟ್ಟಿಗೆ ಸರಿ? ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳ 104 ಶಾಖೆಗಳಿವೆ. ಸರಾಸರಿ 100 ರೂಪಾಯಿಯ ಠೇವಣಿಗೆ ಅವು ಒಟ್ಚಾರೆ 54 ರೂಪಾಯಿಗಳ ಸಾಲವನ್ನು ನೀಡಿವೆ. ಆದರೆ ಅಲ್ಲಿರುವ ಹೊಸ ತಲೆಮಾರಿನ ಖಾಸಗೀ ಬ್ಯಾಂಕುಗಳ ಮೂರು ಶಾಖೆಗಳು ಶೇಖರಿಸಿರುವ 100 ಠೇವಣಿಗೆ ನೀಡಿರುವ ಸಾಲ, ಹತ್ತು ರೂಪಾಯಿ ದಾಟಿಲ್ಲ. ಹೀಗಾಗಿ ಮಾರುಕಟ್ಟೆಯ ಸೂತ್ರಗಳನ್ನೇ ನಂಬಿ ನಡೆವ ಖಾಸಗೀಕರಣದ ಸೂತ್ರವೇ ನಮ್ಮ ಆರ್ಥಿಕ ಒಳಗೊಳ್ಳುವಿಕೆಯ ಸವಾಲಿಗೆ ಜವಾಬೆನ್ನುವುದು ಸರಳ ಹಾಗೂ ಹುರುಳಿಲ್ಲದ ವಾದ.

ರಾಜನ್ ಅವರು ಖಾಸಗೀ ಕ್ಷೇತ್ರದ ಮತ್ತು ಮಾರುಕಟ್ಟೆಗಳ ಮೇಲೆ ತಮ್ಮ ಅಚಲ ನಂಬಿಕೆಯನ್ನು ಸಾಕಾರಗೊಳಿಸಬೇಕಾದರೆ ಈ ಹಿಂದುಳಿದ ಕ್ಷೇತ್ರಗಳನ್ನು ಖಾಸಗೀ – ಮತ್ತು ಅವರು ಪ್ರತಿಪಾದಿಸುತ್ತಿರುವ ಕ್ಷೇತ್ರೀಯ, ಪ್ರಾಂತೀಯ, ಸ್ಥಳೀಯ ಬ್ಯಾಂಕುಗಳಿಗೆ ತೆರವು ಮಾಡಿಕೊಡಬೇಕು. ಒಂದೆರಡು ಕ್ಷೇತ್ರೀಯ ಗ್ರಾಮೀಣ ಬ್ಯಾಂಕುಗಳನ್ನು ಖಾಸಗೀಕರಣಕ್ಕೊಡ್ಡಬೇಕು. ಆಗ ಆ ವ್ಯಾಪಾರವನ್ನು ಮಾಡಲು ಎಷ್ಟು ಸಂಸ್ಥೆಗಳು ಪೈಪೋಟಿ ನಡೆಸುತ್ತವೆ ಎಂದು ನೋಡಿದ ಕೂಡಲೇ ಅವರಿಗೆ ಮಾರುಕಟ್ಟೆಯ ಮಿತಿಗಳು ಅರ್ಥವಾಗುತ್ತವೆ. ಸಾಮಾನ್ಯವಾಗಿ  ಮಾರುಕಟ್ಟೆ ದಕ್ಷವಾಗಿ ನಡೆಯುತ್ತದಾದರೂ, ಪಶ್ಚಿಮ ಚಂಪಾರನ್ ರೀತಿಯ ಜಾಗಗಳನ್ನು ಗುರುತಿಸದಿರುವುದೇ ಮಾರುಕಟ್ಟೆಯ ವೈಫಲ್ಯದ ಸಂಕೇತವಾಗುತ್ತದೆ.

ರಾಜನ್ ಅವರ ನೂರು ಪುಟ್ಟ ಹೆಜ್ಜೆಗಳಲ್ಲಿ ಇರುವ ಮತ್ತೊಂದು ಅಪಾಯಕಾರಿ ಹೆಜ್ಜೆ ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್ ನೋಟ್ಸ್ (ಪಿ.ಎಸ್.ಎಲ್.ಎನ್)ಗೆ ಸಂಬಂಧಿಸಿದ್ದು. ಬ್ಯಾಂಕುಗಳು ನೀಡುವ ಪ್ರತೀ ಸಾಲದಲ್ಲಿ ಶೇಕಡಾ 40ರಷ್ಟು ದೇಶದ ಆದ್ಯತೆಯ ಕ್ಷೇತ್ರಗಳಿಗೆ ನೀಡಬೇಕು. ಅದರಲ್ಲಿ ಶೇಕಡ 18ರಷ್ಟು ಕೃಷಿಗೆ ಮೀಸಲಿಟ್ಟಿದ್ದರೆ, ಮಿಕ್ಕಂತೆ ಸಣ್ಣ ಉದ್ಯಮ, ವಸತಿ, ವಿದ್ಯೆ, ದುರ್ಬಲ ವರ್ಗದ ಜನರ ಸಾಲ, ಹೀಗೆ ಬೇರೆ ಸಾರ್ವಜನಿಕ ಹಿತದಿಂದ ಕೂಡಿದ ಆದ್ಯತೆಗಳ ಪಟ್ಟಿಯಿದೆ. ಇದನ್ನು ಆದ್ಯತಾ ಬಾಧ್ಯತೆ ಎಂದು ಕರೆಯಬಹುದು. (ಬ್ಯಾಂಕುಗಳಲ್ಲದೇ) ಬೇರಾರಾದರೂ ಈ ಆದ್ಯತಾ ಬಾಧ್ಯತೆಯ ಸಾಲವನ್ನು ನೀಡಿದ್ದರೆ, ಆ ಸಂಸ್ಥೆ ನೀಡಿದ ಸಾಲದ ಮೊಬಲಗಿಗೆ ಸರಿಹೊಂದುವ ಒಂದು ಮಾಹಿತಿ ಪತ್ರವನ್ನು ಬ್ಯಾಂಕುಗಳು ಕೊಂಡು ತಮ್ಮ ಜವಾಬ್ದಾರಿಯನ್ನು ತೊಳೆದುಕೊಳ್ಳಬಹುದು. ಇದು ಆಕ್ಟಿವ್ ದರ್ಶನದಲ್ಲಿ ಟಿವಿಯ ತೆರೆಯ ಮೇಲೆ ತಿಮ್ಮಪ್ಪನ ದರ್ಶನ ಪಡೆದು ಧನ್ಯರಾಗುವ ರೀತಿ, ಅಥವಾ ಹೆಲಿಕಾಪ್ಟರಿನಲ್ಲಿ ವೈಷ್ಣೋದೇವಿ ತಲುಪಿ ಅನಾಯಾಸವಾಗಿ ವಿಐಪಿ ದರ್ಶನ ಪಡೆವ ರೀತಿ. ಆದರೆ ಇದರಲ್ಲಿ ಎರಡು ತೊಡಕುಗಳಿವೆ.

ಮೊದಲನೆಯದು ಆದ್ಯತಾ ಬಾಧ್ಯತೆ ಎಂಬುದು ಬ್ಯಾಂಕುಗಳು ಪಾಲಿಸಬೇಕಾದ ನಿಯಮ. ಈ ನಿಯಮವನ್ನು ಹೇಗಾದರೂ ಮಾಡಿ ಸಾಲ ಕೊಡಿಸಬೇಕು ಎಂಬುದಕ್ಕಾಗಿ ರೂಪಿಸಲಾಗಿಲ್ಲ. ಬದಲಿಗೆ ಬ್ಯಾಂಕಿನ ನಿಯಮಾವಳಿಯನುಸಾರ ಗ್ರಾಹಕರ ಹಿತದೃಷ್ಟಿ ಕಾಪಾಡುತ್ತಾ  ಈ ಸಾಲಗಳು ಬಡವರಿಗೂ-ಕೃಷಿಕರಿಗೂ ದೊರೆಯಬೇಕೆನ್ನುವುದು ಈ ನಿಯಮದ ಆಶಯ.

ಎರಡನೆಯದು ಇನ್ನೂ ಗಮ್ಮತ್ತಿನ ವಿಚಾರ. ಒಂದು ಸಂಸ್ಥೆ ತನ್ನ ಸಂಪನ್ಮೂಲದಿಂದ ಸಾಲವನ್ನು ನೀಡಿದೆ. ಅದನ್ನು ವಸೂಲು ಮಾಡಿ ಲಾಭವನ್ನಾರ್ಜಿಸುತ್ತಿದೆ. ಅಲ್ಲಿಗೆ ಆ ವ್ಯವಹಾರ ಮುಗಿಯಿತು. ಆದರೆ ಪಿ.ಎಸ್.ಎಲ್.ಎನ್ ಎಂದಾಕ್ಷಣ, ಈಗಾಗಲೇ ಆಗಿರುವ ಈ ವ್ಯವಹಾರವನ್ನೇ (ಹೊಸ ಗ್ರಾಹಕರಿಲ್ಲದೇ, ಹೊಸ ಸಾಲವಿಲ್ಲದೇ) ವ್ಯಾಪಾರದ ವಸ್ತುವನ್ನಾಗಿಸಿಬಿಡುತ್ತದೆ. ಅದರ ಮೇಲೆ ಖರೀದಿ, ಮಾರಾಟ, ಲಾಭಗಳು ಉಂಟಾಗುತ್ತವೆ. ಅದನ್ನು ನಡೆಸುವವರ ಖರ್ಚುಗಳೂ ಸಂಬಳಗಳೂ ಆಗುತ್ತವೆ. ಹೀಗೆ ಬಡವರ ಸಾಲವೆನ್ನುವ ಒಂದು ಪುಟ್ಟ ವ್ಯವಹಾರಕ್ಕೆ ಲೇಪಿಸಿದ ಈ ಬಹು ಅಂತಸ್ತಿನ ವ್ಯಾಪಾರದ ಖರ್ಚುಗಳನ್ನು ಭರಿಸುವರು ಯಾರು? ಬಡವ-ಗ್ರಾಹಕ, ಅಲ್ಲ ಸಂಸ್ಥೆ, ಅಲ್ಲ ಸರಕಾರ, ಅಂತೂ ಯಾರ ತಲೆಗೋ ಈ ವ್ಯಾಪಾರದ ಖರ್ಚುಗಳು ಬೀಳುತ್ತವೆ.. ಇದು ಅವಶ್ಯವೇ?

ಅಮೆರಿಕದ ಅರ್ಥವ್ಯವಸ್ಥೆ ಕೆಲವು ವರ್ಷಗಳ ಕೆಳಗೆ ಕುಸಿಯಲು ಅತಿಯಾದ ವಿತ್ತೀಕರಣವೇ ಕಾರಣವಾಗಿತ್ತು. ಅದರ ಅಪಾಯಗಳನ್ನು ರಾಜನ್ ಬಲ್ಲರು. ಆ ಬಗ್ಗೆ ಅವರು ಎಚ್ಚರದ ಮಾತನ್ನು ಆಡಿದ್ದರು. ಆದರೂ ರಾಜನ್ ಅವರ ಒಲವು ಆ ದಿಕ್ಕಿನಲ್ಲಿಯೇ ಇದೆ. ಮಿಕ್ಕ ವಿತ್ತೀಕರಣವಾದಿಗಳಷ್ಟು ತೀವ್ರಗತಿಯಲ್ಲಿ ಹಾಗೂ ಆಳವಾಗಿ ರಾಜನ್ ಮುಂದುವರಿಯಲಾರರು. ಆದರೆ ಆ ದಿಕ್ಕಿನ ಮೋಡಿಯಿಂದ ಅವರು ಮುಕ್ತರಲ್ಲ.

ಮಾರುಕಟ್ಟೆಗಳು ಬೇಕು. ಆದರೆ ಮಾರುಕಟ್ಟೆಗಳಿಗೆ ಮಿತಿಗಳಿವೆ; ಮಾರುಕಟ್ಟೀಕರಣ ಮತ್ತ ಸರಕಾರದ ಖಾಸಗೀಕರಣ ಎರಡೂ ಭಿನ್ನ ವಿಚಾರಗಳು; ಮಾರುಕಟ್ಟೀಕರಣವೆಂದರೆ ಅದು ವಿತ್ತೀಕರಣವಾಗಲೇಬೇಕಾಗಿಲ್ಲ; ಈ ಮೂರು ವಿಚಾರಗಳನ್ನು ರಾಜನ್ ನೆನಪಿಟ್ಟುಕೊಂಡರೆ ಸುಬ್ಬಾರಾವುಗಿಂತ ಉದಾರವಾಗಿಯಾಗಿ ಆದರೆ ಮಾರುಕಟ್ಟೆಯ ಅಡಿಯಾಳಾಗದೇ ದೇಶದ ಆರ್ಥಿಕ ಸೂತ್ರಗಳನ್ನು ನಿರ್ವಹಿಸಬಹುದು. ಆದರೆ ಸದ್ಯ ನಮಗೆ ಆ ಲಕ್ಷಣಗಳು ಕಾಣಿಸುತ್ತಿಲ್ಲವೇ.


Wednesday, 11 September 2013


Tuesday, December 17, 2013

ರಿಜರ್ವ್ ಬ್ಯಾಂಕಿನ ಸ್ವಾತಂತ್ರವನ್ನು ಕಾಪಾಡಿದ ದುವ್ವೂರಿ ಸುಬ್ಬಾರಾವು

ಭಾರತೀಯ ರಿಜರ್ವ್ ಬ್ಯಾಂಕಿನ ಮುಖ್ಯಸ್ಥರಾದ ಶ್ರೀ ದುವ್ವೂರಿ ಸುಬ್ಬಾರಾವು ಸೆಪ್ಟೆಂಬರ್ 4ಕ್ಕೆ ನಮ್ಮ ಅಧಿಕಾರಾವಧಿಯನ್ನು ಮುಗಿಸುತ್ತಾರೆ. ಸುಬ್ಬಾರಾವು ರಿಜರ್ವ್ ಬ್ಯಾಂಕಿಗೆ ಬರುವುದಕ್ಕೆ ಮೊದಲು ಭಾರತ ಸರಕಾರದ ವಿತ್ತ ಮಂತ್ರಾಲಯದಲ್ಲಿದ್ದರು. ಅವರು ರಿಜರ್ವ್ ಬ್ಯಾಂಕಿಗೆ ಬಂದಾಗ, ವಿತ್ತ ಮಂತ್ರಾಲಯದ ನೀತಿಗಳಿಗನಸಾರವಾಗಿ ನಡೆದುಕೊಳ್ಳಬಹುದೆಂಬ ಅಪೇಕ್ಷೆ ಅವರನ್ನು ನೇಮಕ ಮಾಡಿದವರಿಗಿತ್ತು. ಆ ಅಪೇಕ್ಷೆಯಂತೆಯೇ ನಡೆದುಕೊಳ್ಳಬಹುದೆಂಬ ನಿರೀಕ್ಷೆ ಇತರರದ್ದಾಗಿತ್ತು. ಹಿಂದಿನ ಮುಖ್ಯಸ್ಥ ವೇಣುಗೋಪಾಲ ರೆಡ್ಡಿಯವರು ತಮ್ಮ ಸ್ವತಂತ್ರ ನಿಲುವಿಗೆ ಹೆಸರುವಾಸಿಯಾಗಿದ್ದವರು. ರೆಡ್ಡಿಯವರಿಗಿಂತ ಭಿನ್ನವಾಗಿ, ವಿತ್ತಮಂತ್ರಾಲಯದ ದಿಶಾನಿರ್ದೇನಕ್ಕನುಸಾರವಾಗಿ ಸಾಗಬಹುದೆಂದುಕೊಂಡಿದ್ದವರ ನಿರೀಕ್ಷೆಯನ್ನು ಹುಸಿಮಾಡಿ ಸುಬ್ಬಾರಾವು ತಮ್ಮ ಸ್ಥಾನದ ಸ್ವಾತಂತ್ರವನ್ನು ಕಾಪಾಡಿಕೊಂಡು ಬಂದರು.

ಸರಕಾರದ ನೀತಿಯನ್ನು ಮುಂದುವರೆಸುವ, ಬೆಳೆಸುವ ಅಧಿಕಾರಿಗಳು ಇಂಥ ಸ್ಥಾನಗಳಲ್ಲಿರಬೇಕೆಂದು ಸರಕಾರದ ಬಯಕೆ. ಇಂಥ ಸ್ಥಾನಗಳಿಗೆ ದಕ್ಷ ಅಧಿಕಾರಿಗಳೂ ಬೇಕು. ಸರಕಾರದ ಸೂತ್ರವನ್ನು ಪ್ರಶ್ನಿಸದೇ – ದಕ್ಷತೆಯನ್ನೂ ತೋರಬೇಕೆನ್ನುವುದು ವಿರೋಧಾಭಾಸವೇ ಸರಿ. ಆದರೂ ದೇಶದ ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳು ಈ ದ್ವಂದ್ವವನ್ನು ಅಂತರ್ಗತಗೊಳಿಸಿಕೊಂಡು ತಮ್ಮ ಕೆಲಸ ಮಾಡುತ್ತಾರೆ. ಸರಕಾರದ ಮಂತ್ರಾಲಯದಲ್ಲಿ ಅಧಿಕಾರಿಯಾಗಿ ಕೆಲಸಮಾಡುವಾಗ ಅವರಿಗೆ ಆಯ್ಕೆಗಳು ಕಡಿಮೆ. ತಮ್ಮ ಆಲೋಚನೆಗಳನ್ನು ಸಲಹೆಯಾಗಿ ನೀಡಬಹುದಾದರೂ ಕಡೆಗೆ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಚುನಾಯಿತವಾದ ಸರಕಾರದ ಯೋಜನೆಗಳನುಸಾರ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಹೀಗಾಗಿ ಸರಕಾರದಲ್ಲಿ ಕೆಲಸ ಮಾಡುವ ದಕ್ಷ ಅಧಿಕಾರಿಗಳ ಸ್ವಾತಂತ್ರಕ್ಕೆ ಮಿತಿಗಳಿವೆ.

ಸರಕಾರ ರಿಜರ್ವ್ ಬ್ಯಾಂಕಿನ ಮುಖ್ಯಸ್ಥರನ್ನು ನೇಮಕ ಮಾಡುತ್ತದೆ. ದೇಶದ ಹಿತದೃಷ್ಟಿಯನ್ನಿಟ್ಟು ಬ್ಯಾಂಕಿನ ಮುಖ್ಯಸ್ಥರು ಸ್ವತಂತ್ರವಾಗಿ ತಮ್ಮ ನೀತಿಗಳನ್ನು ರೂಪಿಸಬಹುದು. ಇಲ್ಲಿನ ಮುಖ್ಯಸ್ಥರಿಗೆ ಸರಕಾರದೊಳಗೆ ಕೆಲಸ ಮಾಡುವಾಗ ಸಿಗದ ಸ್ವಾತಂತ್ರ ದೊರೆಯುತ್ತದೆ. ಹಿಂದಿನ ಮುಖ್ಯಸ್ಥರಾಗಿದ್ದ ವೇಣುಗೋಪಾಲ ರೆಡ್ಡಿ ಹಾಗೂ ಸುಬ್ಬಾರಾವು ತಮ್ಮ ದಕ್ಷತೆಯನ್ನಲ್ಲದೇ ಸ್ವತಂತ್ರ ಆಲೋಚನೆಯನ್ನೂ – ಕಾರ್ಯವಿಧಾನವನ್ನೂ ಪ್ರದರ್ಶಿಸಿದ್ದನ್ನು ನಾವು ಕಂಡಿದ್ದೇವೆ. ಅಷ್ಟೇ ಅಲ್ಲ, ಅವರಿಬ್ಬರೂ ಅಧಿಕಾರದಲ್ಲಿದ್ದದ್ದರಿಂದ ದೇಶದ ಅರ್ಥವ್ಯವಸ್ಥೆಗೆ ಒಳಿತೇ ಆಗಿದೆ.

ಸುಬ್ಬಾರಾವು ಹಾಗೂ ರೆಡ್ಡಿ ಸಂಪ್ರದಾಯ ಬದ್ಧ ಮಡಿವಂತ ಮುಖ್ಯಸ್ಥರಾಗಿದ್ದರೆಂದು ಪ್ರತೀತಿ. ಆರ್ಥಿಕ ರಂಗದಲ್ಲಿ ಸರಕಾರ ಮತ್ತು ಇತರ ಸಂಸ್ಥೆಗಳ ಸಾಹಸ-ಸರ್ಕಸ್ಸುಗಳನ್ನು ಇಬ್ಬರೂ ಅನುಮಾನದಿಂದ ನೋಡುತ್ತಿದ್ದರು. ಸರಕಾರವು ಬೆಳವಣಿಗೆಯ ಪಥದಲ್ಲಿ ನಾಗಾಲೋಟದಿಂದ ಓಡಬೇಕೆಂದು ಬಯಸಿದಾಗ, ಸುರಕ್ಷತೆಯ ಸ್ಪೀಡ್ ಬ್ರೇಕರುಗಳನ್ನೂ, ಸೀಟ್ ಬೆಲ್ಟುಗಳನ್ನು ಕಟ್ಟಿದರು. ವಿಶ್ವವ್ಯಾಪೀ ಆರ್ಥಿಕ ಸಂಕಟವುಂಟಾದಾಗ, ಭಾರತ ಅದರಿಂದ ಬಚಾವಾದದ್ದು ರೆಡ್ಡಿಯವರ ನೀತಿಗಳಿಂದಾಗಿಯೇ ಎಂಬ ಅಭಿಪ್ರಾಯವನ್ನು ಅಂತರರಾಷ್ಟ್ರೀಯ ವಿತ್ತೀಯ ತಜ್ಞರು ಒಪ್ಪಿದ್ದಾರೆ. ಸುಬ್ಬಾರಾವು ರೆಡ್ಡಿಯವರ ಶೈಲಿಯನ್ನೇ ಅನುಸರಿಸಿ ನಡೆದವರು. ಈ ಧೋರಣೆಯಿಂದಾಗಿ ವಿತ್ತ ಮಂತ್ರಾಲಯಕ್ಕೆ ಖುಷಿಯೇನೂ ಆಗಲಿಲ್ಲ. ಮಂತ್ರಾಲಯಕ್ಕೂ-ಬ್ಯಾಂಕಿಗೂ ನಿರಂತರ ಜಟಾಪಟಿ ನಡೆಯುತ್ತಲೇ ಇತ್ತು.

ಇದು ಹೀಗೇಕೆ? ಕೇಂದ್ರ ಸರಕಾರದ್ದು ದ್ವಿಮುಖ ಆರ್ಥಿಕನೀತಿ. ಒಂದೆಡೆ ಮನಮೋಹನ ಸಿಂಗ್, ಮಾಂಟೆಕ್ ಸಿಂಗ್, ಚಿದಂಬರಂ ಗಳ ಮಾರುಕಟ್ಟೆಯ ಸೂತ್ರಗಳು, ಅದರ ಆಧಾರದ ಮೇಲೆ ರೂಪಿಸುತ್ತಿರುವ ಖಾಸಗೀಕರಣ, ಅಂತರರಾಷ್ಟ್ರೀಕರಣದ ನೀತಿಗಳಿಗನುಸಾರವಾಗಿ ಭಾರತಕ್ಕೆ ವಿದೇಶೀ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನದಲ್ಲಿದ್ದರೆ, ಇನ್ನೊಂದೆಡೆ ಸೋನಿಯಾ-ರಾಹುಲ್ ದ್ವಯರ ಸಾಮಾಜಿಕ ಭದ್ರತೆ, ಆಹಾರ ಭದ್ರತೆ, ಗ್ರಾಮೀಣ ಉಪಾಧಿ, ಆರ್ಥಿಕ ಒಳಗಳ್ಳುವಿಕೆಯಂತಹ ಮಾರುಕಟ್ಟೆಯ ಸೂತ್ರಗಳಾಚೆ ನಿಲ್ಲುವ ಕಾರ್ಯಕ್ರಮಗಳಿವೆ.

ಉದ್ಯಮ ಬೆಳೆಯಲು, ಹೂಡಿಕೆ ದೇಶದೊಳಕ್ಕೆ ಬರಲು ಆರ್ಥಿಕ ನೀತಿಯು ಉದಾರೀಕರಣದತ್ತ ವಾಲಬೇಕು. ಸುಲಭ ಬಡ್ಡಿದರದಲ್ಲಿ ಸಾಲವು ಲಭ್ಯವಾಗಬೇಕು. ಸರಳವಾದ ತೆರಿಗೆಯ ನೀತಿ ಬೇಕು. ಅಂತರರಾಷ್ಟ್ರೀಯ ಹಣಕಾಸು ವಿನಿಮಯ ಸರಳವಾಗಿರಬೇಕು. ಅದೇ ಕಾಲಕ್ಕೆ ಖರ್ಚನ್ನು ನಿಭಾಯಿಸಲು ಆರ್ಥಿಕ ಶಿಸ್ತೂ ಬೇಕು. ನಾವು ನಮ್ಮನ್ನು ಮಾರುಕಟ್ಟೆಗೆ ತೆರೆದುಕೊಂಡಷ್ಟೇ ವೇಗದಲ್ಲಿ ಆರ್ಥಿಕ ಪ್ರಗತಿಯಾಗುತ್ತದೆನ್ನುವುದರಲ್ಲಿ ಹುರುಳಿದೆ. ಆದರೆ ಮಾರುಕಟ್ಟೆಗೆ ನಮ್ಮನ್ನು ನಾವು ತೆರೆದುಕೊಂಡಷ್ಟೂ, ವ್ಯಾಪಾರೀ ಜಗತ್ತಿನ ಸಹಜ ಏರುಪೇರುಗಳಿಗೂ ನಮ್ಮನ್ನು ಒಡ್ಡಿಕೊಳ್ಳುತ್ತೇವೆ. ನಮ್ಮ ಬಾಗಿಲನ್ನು ನಾವು ತೆರೆದಿಟ್ಟಾಗ ಎಷ್ಟು ಸಹಜವಾಗಿ ವಿದೇಶೀ ಹೂಡಿಕೆಯು ಒಳಬರುವುದೋ ಹಾಗೆಯೇ ಸಂಕಷ್ಟಕಾಲದಲ್ಲಿ ಅದೇ ಬಾಗಿಲಿನಿಂದ ವಿದೇಶೀ ಹೂಡಿಕೆ ಪಲಾಯನ ಮಾಡುತ್ತದೆ. ಹೀಗಾಗಿಯೇ ನಮ್ಮ ಆರ್ಥಿಕ ಸ್ಥಿರತೆಯನ್ನು ಗಮನಿಸದೇ ಮಾರುಕಟ್ಟೀಕರಣದತ್ತ ಓಡುವುದು ಅಪಾಯದ ಕಡೆಗಿನ ಓಟವಾಗುತ್ತದೆ.

ಸುಬ್ಬಾರಾವು ತಮ್ಮ ಅಧಿಕಾರಾವಧಿಯಲ್ಲಿ, ಉತ್ಪಾದಕತೆ ಕುಂಠಿತವಾಗುತ್ತಿರುವ, ಹಣದುಬ್ಬರದ ಕಷ್ಟದ ಸ್ಥಿತಿಯಲ್ಲಿ ಸ್ಥಿರತೆಯತ್ತ ವಾಲಿ ಸರಕಾರದ ಯೋಜನೆಗಳಿಗೆ ಮುಳ್ಳಾಗಿ ನಿಂತರು. ಸುಬ್ಬಾರಾವು ಉದಾರವಾದಿಯಾಗಿದ್ದರೆ ಇಂದಿನ ಸಂಕಷ್ಟ ಕಡಿಮೆಯಾಗುತ್ತಿತ್ತೆನ್ನುವುದಕ್ಕೆ ಸೂಚನೆಗಳಿಲ್ಲ. ಸರಕಾರದ ಅರ್ಥ ನೀತಿ ಸರಿಯಾಗಿದ್ದರೆ ರಿಜರ್ವ್ ಬ್ಯಾಂಕಿನ ಮಡಿವಂತಿಕೆ ಉದ್ಯಮ-ಉತ್ಪಾದಕತೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಲು ಸಾಧ್ಯವಿಲ್ಲ. ರೆಡ್ಡಿಯವರ ಕಾರ್ಯಕಾಲದಲ್ಲಿ ಅವರ ಮಡಿವಂತಿಕೆ ದೇಶದ ಆರ್ಥಿಕ ಪ್ರಗತಿಯನ್ನೇನೂ ಕುಂಠಿತಗೊಳಿಸಿರಲಿಲ್ಲ.

ರೆಡ್ಡಿಯವರಾಗಲೀ ಸುಬ್ಬಾರಾವಾಗಲೀ ಶುದ್ಧ ಅರ್ಥಶಾಸ್ತ್ರಜ್ಞರಲ್ಲ. ಇಬ್ಬರಿಗೂ ಅರ್ಥಶಾಸ್ತ್ರದ ಒಳ್ಳೆಯ ಅರಿವಿತ್ತಾದರೂ ಇಬ್ಬರೂ ಆಡಳಿತ ಸೇವೆಯಿಂದ ಬಂದವರು. ಜಿಲ್ಲೆಯ ಮಟ್ಟದಲ್ಲಿ ಕೆಲಸಮಾಡಿದವರು. ಸರಕಾರದ ಕಾರ್ಯವೈಖರಿಯನ್ನರಿತವರು. ಬಡವರನ್ನೂ ಅವರ ಕಷ್ಟಗಳನ್ನೂ ಕಂಡವರು. ಆರ್ಥಿಕ ಪ್ರಪಂಚಕ್ಕಿಂತ ದೊಡ್ಡ ಕ್ಯಾನ್ವಾಸಿನಲ್ಲಿ ಕೆಲಸ ಮಾಡಿದವರು. ಇವರು ರಿಜರ್ವ್ ಬ್ಯಾಂಕಿನಂತಹ ಸಂಸ್ಥೆಯ ಅಧಿಕಾರವನ್ನು ಅಲಂಕರಿಸಿದಾಗ ಅವರಿಗೆ ಮಾರುಕಟ್ಟೆ- ಶುದ್ಧ ಅರ್ಥನೀತಿಗಿಂತ ಮಿಗಿಲಾದ ವಿಚಾರಗಳು ಕಾಣುತ್ತವೆ. ಸುಬ್ಬಾರಾವು ಅವರ ಅಧಿಕಾರಾವಧಿಯಲ್ಲಿ ಪಾರದರ್ಶಕತೆಯನ್ನು – ಬಡವರ ಬಗೆಗಿನ ಒಂದು ಕಾಳಜಿಯನ್ನೂ ರಿಜರ್ವ್ ಬ್ಯಾಂಕಿನ ಕಾರ್ಯವೈಖರಿಯಲ್ಲಿ ತಂದರು.

ಮೂರುತಿಂಗಳಿಗೊಮ್ಮೆ ಘೋಷಿಸುವ ಋಣ ನೀತಿ ರೂಪಿಸುವುದಕ್ಕೆ ಮುನ್ನ ಅರ್ಥಶಾಸ್ತ್ರಜ್ಞರ ಸಲಹಾ ಸಮಿತಿಯೊಂದು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆಯನ್ನು ನೀಡುತ್ತದೆ. ಆ ಸಲಹೆಯು ಗೌಪ್ಯವಾಗಿರುತ್ತದೆ. ಆದರೆ ಸುಬ್ಬಾರಾವು ತಮ್ಮ ಅಧಿಕಾರಾವಧಿಯಲ್ಲಿ ಸಲಹಾಸಮಿತಿಯ ಶಿಫಾರಸ್ಸನ್ನು ಬಹಿರಂಗ ಗೊಳಿಸಿ ಪಾರದರ್ಶಕತೆಯನ್ನು ತಂದರು. ಇದರಿಂದ ನಮಗೆ ತಿಳಿದದ್ದೇನೆಂದರೆ, ಸುಬ್ಬಾರಾವು ಬಹುತೇಕ ಈ ತಜ್ಞರ ಸಲಹೆಯನ್ನು ಒಪ್ಪದೇ ತಮ್ಮದೇ ನಿಲುವನ್ನು ಪ್ರಕಟಪಡಿಸಿದ್ದಲ್ಲದೇ, ಅದನ್ನು ಬಹಿರಂಗವಾಗಿ ಒಪ್ಪಿ, ತಮ್ಮ ನಿರ್ಧಾರದ ಜವಾಬ್ದಾರಿಯನ್ನೂ ಹೊರಲು ಸಿದ್ಧರಿದ್ದರು.

ಗ್ರಾಮೀಣ ಪ್ರದೇಶದವರಿಗೆ ಹಾಗೂ ಬಡವರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸಲು ಸುಬ್ಬಾರಾವು ಅನೇಕ ಕ್ರಮಗಳನ್ನು ಕೈಗೊಂಡರು. ಅದರಲ್ಲಿ ಮೊದಲ ಕ್ರಮವಾಗಿ 2,000 ಜನಸಂಖ್ಯೆಯುಳ್ಳ ಪ್ರತೀ ಹಳ್ಳಿಯನ್ನೂ ಒಂದು ಬ್ಯಾಂಕಿಗೆ ಸೇರಿಸಿ ಆ ಹಳ್ಳಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಮೂಲಭೂತ ಜವಾಬ್ದಾರಿಯನ್ನು, ಅದನ್ನು ಸಾಧಿಸಲು ಪ್ರತೀ ಬ್ಯಾಂಕೂ ಮೂರು ವರ್ಷಗಳ ಒಂದು ಯೋಜನೆಯನ್ನು ತಯಾರಿಸಬೇಕೆಂದು ನಿರ್ದೇಶಿಸಿ ಆ ಕೆಲಸದ ಪರಾಮರ್ಶೆಯನ್ನು ಕೈಗೊಂಡರು. ರಿಜರ್ವ್ ಬ್ಯಾಂಕಿನ ವತಿಯಿಂದ ಗ್ರಾಮಭೇಟಿ-ಔಟ್‌ರೀಚ್ ಕಾರ್ಯಕ್ರಮಗಳನ್ನು  ಕೈಗೊಂಡರು. ಸುಬ್ಬಾರಾವು ಉದಾರ-ಮಾರುಕಟ್ಟೆವಾದಿಯಾಗಿದ್ದರೆ ದೇಶದ ಆರ್ಥಿಕ ವಲಯ ಹೇಗಿರಬಹುದಿತ್ತು ಎನ್ನುವುದು ಊಹೆಯ ಮಾತು. ಅವರು ಆ ಹುದ್ದೆಯಲ್ಲಿದ್ದದ್ದರಿಂದ ದೇಶದ ಆರ್ಥಿಕ ವಲಯಕ್ಕೆ ಒಂದು ಸ್ಥಿರತೆ ಮತ್ತು ಈಗಿನ ಕಷ್ಟದ ಪರಿಸ್ಥಿತಿಯನ್ನೆದುರಿಸುವ ದಕ್ಷತೆಯನ್ನು ಬಂದಿತು. ಉದಾರೀಕರಣದ ಭರಾಟೆಯಲ್ಲಿ ಸ್ಥಳೀಯತೆಗೆ ಬೇಕಿದ್ದ ರಕ್ಷಾಕವಚವನ್ನು ಅವರೆಂದೂ ಮರೆಯಲಿಲ್ಲ.

ಆದರೀಗ ರಿಜರ್ವ್ ಬ್ಯಾಂಕಿನ ನಾಯಕತ್ವದಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುತ್ತಿವೆ. ಮಡಿವಂತಿಕೆಯಿಂದ ಅದು ಮಾರುಕಟ್ಟೆಯೆಡೆಗೆ ಹಂತ ಹಂತವಾಗಿ ಪಯಣ ಬೆಳೆಸುತ್ತಿದೆ ಅನ್ನಿಸುತ್ತಿದೆ. ಮೊದಲಿಗೆ ಡೆಪ್ಯೂಟಿ ಗವರ್ನರ್ (ಡಿ.ಜಿ) ಆಗಿದ್ದ ಅರ್ಥಶಾಸ್ತ್ರಜ್ಞ  ಸುಬೀರ್ ಗೋಕರ್ಣ್ ಅವರ ಅಧಿಕಾರಾವಧಿ ಮುಗಿದಾಗ ಅದನ್ನು ವಿನಾಕಾರಣ ಸರಕಾರ ಮುಂದುವರೆಸಲಿಲ್ಲ. ಗೋಕರ್ಣ್ ಅವರ ಮುಂದುವರಿಕೆಯ ಪರವಾಗಿ ಸುಬ್ಬಾರಾವು ವಾದಿಸಿ ಸೋತರು. (ಹಿಂದೆ ಉಷಾ ತೋರಟ್ ಅವರಿಗೂ ಇದೇ ಗತಿಯಾಗಿತ್ತು). ಬದಲಿಗೆ ಆ ಜಾಗಕ್ಕೆ ಊರ್ಜಿತ್ ಪಟೇಲ್ ಎನ್ನುವ ಅರ್ಥಶಾಸ್ತ್ರಜ್ಞರನ್ನು ಸರಕಾರ ನೇಮಿಸಿತು. ಸಾಧಾರಣವಾಗಿ ಅರ್ಥಶಾಸ್ತ್ರಜ್ಞ ಡಿಜಿ ಹುದ್ದೆಗೆ ವಿದ್ಯಾಕ್ಷೇತ್ರದಿಂದ ಅಥವಾ ಸರಕಾರಿ ಕ್ಷೇತ್ರದಿಂದ ಬಂದವರನ್ನು ನೇಮಿಸುವುದೇ ರೂಢಿಯಾಗಿತ್ತು (ರಂಗರಾಜನ್, ರೆಡ್ಡಿ, ರಾಕೇಶ್ ಮೋಹನ್, ಎಲ್ಲರೂ ವಿದ್ಯಾ-ಸರಕಾರಿ ಕ್ಷೇತ್ರದಿಂದ ಬಂದವರೇ). ಗೋಕರ್ಣ್ ಮೂಲಭೂತವಾಗಿ ಸಂಶೋಧಕರೂ-ಪ್ರಾಧ್ಯಾಪಕರೂ ಆಗಿದ್ದರಾದರೂ ರಿಜರ್ವ್ ಬ್ಯಾಂಕ್ ಸೇರುವುದಕ್ಕೆ ಮೊದಲು ಖಾಸಗೀ ಕ್ಷೇತ್ರದ ಕ್ರಿಸಿಲ್-ಎಸ್ಅಂಡ್ ಪಿ ಸಂಸ್ಥೆಯಲ್ಲಿ ಅರ್ಥಶಾಸ್ತ್ರಜ್ಞರಾಗಿ ದುಡಿಯುತ್ತಿದ್ದರು. ಕ್ರಿಸಿಲ್ ಮೂಲತಃ ಉದ್ಯಮದ ಕ್ಷಮತೆಯನ್ನು ಅಳೆಯುವ-ಅರ್ಥಮಾಡಿಕೊಂಡು ಮೌಲ್ಯಮಾಪನ ಮಾಡುವ ಸಂಸ್ಥೆ. ಅದಕ್ಕೆ ಮಿಕ್ಕ ಉದ್ಯಮಗಳಂತೆ ಯಾವ ಖಾಸಗೀ ಆಸಕ್ತಿಗಳೂ ಇಲ್ಲ. ಆದರೆ ಊರ್ಜಿತ್ ಪಟೇಲ್ ಹಿಂದೆ ರಿಲಯನ್ಸ್ ಸಂಸ್ಥೆಯಲ್ಲಿ ಕೆಲಸಮಾಡಿದವರು. ನಂತರ ಅಂತರರಾಷ್ಟ್ರೀಯ ಸಲಹಾ ಸಂಸ್ಥೆಯಾದ ಬಿಸಿಜಿಯಲ್ಲಿ ದುಡಿದವರು. ಅವರಲ್ಲಿ ಸಹಜವಾಗಿ ಖಾಸಗೀ ಕ್ಷೇತ್ರದ ಹಿನ್ನೆಲೆಯೂ - ಆಲೋಚನಾ ಕ್ರಮವೂ ಇದೆ. ಈಗ ಸುಬ್ಬಾರಾವು ಜಾಗಕ್ಕೆ ನೇಮಕಗೊಳ್ಳಲಿರುವವರು ಅರ್ಥಶಾಸ್ತ್ರಜ್ಞರಾದ ರಘುರಾಮ್ ರಾಜನ್. ರಾಜನ್ ವಿದ್ಯಾಕ್ಷೇತ್ರದಿಂದ ಬಂದವರಾದರೂ ಉದಾರೀಕರಣದ ಪ್ರತಿಪಾದಕರಾಗಿದ್ದಾರೆ. ಅವರು ಜಗದ್ವಿಖ್ಯಾತ ಶಿಕಾಗೋ ಸ್ಕೂಲಿಗೆ ಸೇರಿದವರು. ಶಿಕಾಗೋ ಸ್ಕೂಲೆಂದರೆ ಉದಾರೀಕರಣ ಮಾರುಕಟ್ಟೀಕರಣವನ್ನು ಪ್ರತಿಪಾದಿಸುವ ಮನೋಭಾವದವರು ಎಂದು ವಿಧಿತವಾಗಿದೆ.

ಹೀಗೆ ಈ ಎರಡೂ ಜನರ ನೇಮಕದಲ್ಲಿ ಸರಕಾರದ ಉದಾರೀಕರಣದ ಮಂತ್ರಕ್ಕೆ ತಾಳ ಹಾಕಬಹುದಾದ (ದಕ್ಷ) ಅಧಿಕಾರಿಗಳು ಸಿಕ್ಕಂತಾಗಿದೆ. ಈ ನೇಮಕದಿಂದ ರಿಜರ್ವ್ ಬ್ಯಾಂಕು ತನ್ನ ಮಡಿವಂತಿಕೆಯನ್ನು ಕಳಚಿ ಉದಾರೀಕರಣದತ್ತ ವಾಲುತ್ತದೋ ಎಂದು ನಾವು ಕಾದು ನೋಡಬೇಕು. ಅಷ್ಟೇ ಅಲ್ಲ ಆ ವಾಲುವಿಕೆಯಿಂದಾಗಿ ಭಾರತದ ಅರ್ಥವ್ಯವಸ್ಥೆಯ ಮೇಲೆ ಏನು ಪರಿಣಾಮವಾಗಬಹುದು ಎನ್ನುವುದೂ ಕುತೂಹಲದ ವಿಷಯ. ಹೊಸ ಬ್ಯಾಂಕುಗಳು, ಉದಾರೀಕರಣ, ಮಾರುಕಟ್ಟೀಕರಣ, ಸ್ವತಂತ್ರ ರಿಜರ್ವ್ ಬ್ಯಾಂಕಿನ ಮುಖ್ಯಸ್ಥರು, ಬರಲಿರುವ ಚುನಾವಣೆ... ಹೀಗೆ ಅರ್ಥವ್ಯವಸ್ಥೆಗೆ ಅವಕಾಶಗಳೂ ಕಂಟಕಗಳೂ ಏಕಕಾಲಕ್ಕೆ ಕಾಣಿಸುತ್ತಿದೆ. ಹೊರಗಿನಿಂದ ಬಂದಿರುವ, ಅಂತರರಾಷ್ಟ್ರೀಯ ದೃಕ್ಪಥದ ರಾಜನ್ ಸ್ಥಳೀಯ ಗೊಂದಲಗಳನ್ನು ಮೀರಿ ನಮ್ಮ ಅರ್ಥವ್ಯವಸ್ಥೆಯನ್ನು ಉಳಿಸಿ ಬೆಳೆಸುವರೋ ಕಾದು ನೋಡಬೇಕಾಗಿದೆ.

ಮಂಗಳವಾರ, 27 ಆಗಸ್ಟ್ 2013ಸಹಕಾರಕ್ಕೆ ಕರುಣೆ ಸುತ್ತೋಲೆಗಳ ಕಂಟಕ

ಹೊರಗಿನವರು ನಮ್ಮ ಒಂದು ಗ್ರಾಮಕ್ಕೆ ಭೇಟಿ ನೀಡಿದರೆ, ಅಲ್ಲಿ ಸಾಮಾನ್ಯವಾಗಿ ಉಳಿದುಕೊಳ್ಳುವ ವ್ಯವಸ್ಥೆಯಿರುವುದಿಲ್ಲ. ಹತ್ತಿರದ ತಾಲೂಕು ಪಟ್ಟಣದ ಸರ್ಕೀಟ್ ಹೌಸೇ ಹೊರಗಿನವರಿಗೆ ಸಿಗಬಹುದಾದ ತಂಗುದಾಣ. ಬಾಡಿಗೆಗೂ ಮನೆಗಳು ಸಿಗುವುದು ದುರ್ಲಭ. ಒಂದು ಗ್ರಾಮದಲ್ಲಿ ಸಾಧಾರಣ ನಮಗೆ ಟಪಾಲಾಪೀಸು, ಹಾಲಿನ ಸಂಘ, ಪ್ರಾಥಮಿಕ ಶಾಲೆ, ಪಂಚಾಯ್ತಿ ಮತ್ತು ಗುಡಿ ಕಾಣಸಿಗಬಹುದು. ಈ ಎಲ್ಲವನ್ನೂ ಸ್ಥಳೀಯರೇ, ಅಥವಾ ಆಸುಪಾಸಿನ ಊರಿನವರೇ ನಡೆಸುತ್ತಾರೆ. ಹೀಗೆಯೇ ಹಲವು ಗ್ರಾಮಗಳಿಗೊಂದರಂತೆ ನಮಗೆ ಪ್ರಾಥಮಿಕ ವ್ಯವಸಾಯ ಪತ್ತಿನ ಸೇವಾ ಸಹಕಾರ ಸಂಘಗಳೂ ಕಾಣಿಸುತ್ತಿದ್ದುವು. ಈ ಸಂಘಗಳ ನಿರ್ವಹಣೆಯನ್ನು ಸ್ಥಳೀಯರು ನಡೆಸುತ್ತಿದ್ದರು, ಗ್ರಾಮದ ಯುವಕನೊಬ್ಬ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ, ಸಹಕಾರ ಸಂಘದ ವ್ಯಾಪಾರಕ್ಕನುಸಾರವಾಗಿ ಒಂದಿಬ್ಬರು ಹುಡುಗರಿಗೂ ಅಲ್ಲಿ ಕೆಲಸ ಸಿಗುತ್ತಿತ್ತು. ಈ ಸಂಘ ಗ್ರಾಮದ ರೈತರನ್ನು ಒಂದೆಡೆಗೆ ಸೇರಿಸುವ ಕೆಲಸ ಮಾಡುತ್ತಿತ್ತು. ಒಂದೆಡೆಗೆ ಸೇರಲು – ಅಥವಾ ಸಂಘಕ್ಕೆ ರೈತರು ಬರಲು ಮುಖ್ಯವಾದ ಕಾರಣವೆಂದರೆ ಆ ಸಂಘ ರೈತರ ಕೃಷಿಗೆ ಸಾಲವನ್ನು ನೀಡುತ್ತಿತ್ತು. ಅವರ ಹಣ ಠೇವಣಿಯಾಗಿಟ್ಟರೆ ಸ್ವೀಕರಿಸುತ್ತಿತ್ತು. ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುತ್ತಿತ್ತು. ಹೀಗೆ ಗ್ರಾಮಸ್ಥರಿಗೆ ರಾಜಕೀಯ ಚರ್ಚಿಸಲು ಪಂಚಾಯ್ತಿ ಕಟ್ಟೆಯಿಂದ್ದಂತೆ, ಕೃಷಿಯನ್ನೂ ಅದರ ಅರ್ಥಿಕತೆಯನ್ನು ಹಂಚಿಕೊಳ್ಳಲು ಪತ್ತಿನ ಸಹಕಾರ ಸಂಘಗಳಿದ್ದುವು.

ಸಹಕಾರ ಸಂಘಗಳಿಗೆ ತಮ್ಮದೇ ಕಟ್ಟಡವೂ, ವ್ಯಾಪಾರದ ವಸ್ತುಗಳನ್ನು ದಾಸ್ತಾನು ಮಾಡಲು ಒಂದಿಷ್ಟು ಸ್ಥಳವೂ ಒಂದು ಮಳಿಗೆಯೂ ಇರುತ್ತಿತ್ತು. ಕೃಷಿಗೆ ಮೂಲಾಧಾರವಾಗಿ ಸುಮಾರು 80,000ಕ್ಕೂ ಪತ್ತಿನ ಸಹಕಾರ ಸಂಘಗಳು ದೇಶದಲ್ಲಿದ್ದುವು. ಕೆಲವು ಚೆನ್ನಾಗಿ ಕೆಲಸ ಮಾಡುತ್ತಿದ್ದುವು, ಕೆಲವು ಅಷ್ಟಕ್ಕಷ್ಟೇ ಮತ್ತು ಕೆಲವು ಭ್ರಷ್ಟಾಚಾರದ ರಾಡಿಯಲ್ಲಿ ಮುಳುಗಿದ್ದುವು. ಆದರೆ ಅವೆಲ್ಲವು ಜನರ-ಗ್ರಾಮಸ್ಥರ ಸಮಸ್ಯೆಯಾಗಿತ್ತೇ ವಿನಃ ಸರಕಾರದ ಸಮಸ್ಯೆಯಾಗಿರಲಿಲ್ಲ.

ಪತ್ತಿನ ಸಹಕಾರ ಸಂಘ ನಡೆಯಬೇಕಿದ್ದರೆ ಅವುಗಳಿಗೆ ಸದಸ್ಯರ ಮೂಲಧನದ ಅವಶ್ಯಕತೆಯಿತ್ತು. ನಿಯಮಾನುಸಾರ ನೂರು ರೂಪಾಯಿನ ಬಂಡವಾಳವನ್ನು ಹೂಡಿದರೆ, ಸಾವಿರ ರೂಪಾಯಿನ ಸಾಲವನ್ನು ಈ ಸಹಕಾರ ಸಂಘ ನೀಡಬೇಕಿತ್ತು. ಹಾಗಾದರೆ ಮಿಕ್ಕ 900 ರೂಪಾಯಿಗಳನ್ನು ಸಹಕಾರ ಸಂಘಗಳು ಎಲ್ಲಿಂದ ತರುತ್ತಿದ್ದುವು? ಈ ಪ್ರಶ್ನೆಗೆ ಎರಡು ಉತ್ತರಗಳಿವೆ. ಒಂದು: ಚೆನ್ನಾಗಿ ನಡೆಯುತ್ತಿದ್ದ ಸಹಕಾರ ಸಂಘಗಳಲ್ಲಿ ಸದಸ್ಯರು ಬಂಡವಾಳವನ್ನಲ್ಲದೇ ತಮ್ಮ ಉಳಿತಾಯವನ್ನೂ ಠೇವಣಿಗಳ ರೂಪದಲ್ಲಿ ಕಾಯ್ದಿರಿಸುತ್ತಿದ್ದರು. ಸದಸ್ಯರಾದವರೆಲ್ಲರೂ ಅಲ್ಲಿ ಠೇವಣಿಗಳನ್ನು ಯಾವ ನಿಬಂಧನೆಯೂ ಇಲ್ಲದೇ ಇಡಬಹುದಾಗಿತ್ತು. ಪರಸ್ಪರತೆಯ ಸೂತ್ರದ ಆಧಾರದ ಮೇಲೆ ನಡೆಯುತ್ತಿದ್ದ ಈ ಸಂಸ್ಥೆಯು ಸ್ಥಳೀಯವಾಗಿದ್ದದ್ದರಿಂದ ಯಾವುದೇ ರಿಜರ್ವ್ ಬ್ಯಾಂಕಿನ ಪರವಾನಗಿ ಬೇಕಿರಲಿಲ್ಲ. ಸದಸ್ಯರಲ್ಲದವರ ಠೇವಣಿಗಳನ್ನು ಈ ಸಹಕಾರ ಸಂಘಗಳು ಸ್ವೀಕರಿಸುವುದು ನಿಷಿದ್ಧವಾಗಿತ್ತು ಅಷ್ಟೇ. ಎರಡು: ಠೇವಣಿಗಳನ್ನು ಸಂಗ್ರಹಿಸಲಾಗದ ಸಂಘಗಳು, ಅಥವಾ ಠೇವಣಿಗಳು ಸಾಲದ ಸಂಘಗಳು ಇನ್ನಷ್ಟು ಹಣ ಬೇಕಿದ್ದರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ ಸಾಲವನ್ನು ಪಡೆಯುತ್ತಿದ್ದುವು. ಪ್ರಾಥಮಿಕ ಸಹಕಾರ ಸಂಘಕ್ಕೂ - ಜಿಲ್ಲಾ ಕೇಂದ್ರ ಬ್ಯಾಂಕಿಗಿದ್ದ ಸಂಬಂಧ ಸದಸ್ಯರಿಗೂ ಸಂಘಕ್ಕೂ ಇದ್ದ ಸಂಬಂಧದಂತೆಯೇ ಇತ್ತು. ಹತ್ತು ರೂಪಾಯಿನ ಬಂಡವಾಳ, ಅದರ ಮೇಲೆ ನೂರು ರೂಪಾಯಿನ ಸಾಲ. ಜಿಲ್ಲಾ ಕೇಂದ್ರ ಬ್ಯಾಂಕು, ಬ್ಯಾಂಕಾದದ್ದರಿಂದ ಸದಸ್ಯರಲ್ಲದ ಜನತೆಯಿಂದ, ಪರಸ್ಪರತೆಯ ಸೂತ್ರವನ್ನು ಅನುಸರಿಸದೆಯೇ ಠೇವಣಿಗಳನ್ನು ಸಂಗ್ರಹಿಸಬಹುದಿತ್ತು. ಅಕಸ್ಮಾತ್ ಅದಕ್ಕೂ ಠೇವಣಿಗಳು ಸಾಕಾಗದಿದ್ದರೆ ರಾಜ್ಯ ಮಟ್ಟದ ಅಪೆಕ್ಸ್ ಬ್ಯಾಂಕಿನಂದ ಇದೇ ಪದ್ಧತಿ-ನಿಯಮಾನುಸಾರ ಆರ್ಥಿಕ ಸಂಪನ್ಮೂಲಗಳನ್ನು ಪಡೆಯಬಹುದಿತ್ತು. ಈ ಎಲ್ಲ ಸಂಸ್ಥೆಗಳ ಶಿಖರ ಮಟ್ಟದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು (ನಾಬಾರ್ಡ್) ಕುಳಿತಿತ್ತು. ಎಲ್ಲೂ ಸಲ್ಲದಾಗ ಸರಕಾರದಿಂದ, ಮತ್ತು ಜನತೆಯಿಂದ ದುಡ್ಡನ್ನು ಸಂಗ್ರಹಿಸುವ ಈ ಸಂಸ್ಥೆ ಸಹಕಾರ ಕ್ಷೇತ್ರಕ್ಕೆ ಹಣವನ್ನು ಪೂರೈಸುತ್ತಿತ್ತು.ಈ ವ್ಯಾಪಾರ ಸರಳವಾಗಿ ನಡೆಯಬೇಕೆಂದರೆ ಮೂರೂ ಸ್ಥರಗಳ ಸಂಸ್ಥೆಗಳು ಲಾಭದಾಯಕವಾಗಿ, ತಮ್ಮ ಆಡಳಿತ ಖರ್ಚುಗಳಿಗಾಗುವಷ್ಟು ಆದಾಯವನ್ನು ಆರ್ಜಿಸಿ ಮುಂದುವರೆಯಬೇಕಿತ್ತು. ಅಂದರೆ ಅಪೆಕ್ಸ್ ಬ್ಯಾಂಕು ಶೇಕಡಾ 6ರ ಬಡ್ಡಿಯಲ್ಲಿ ಹಣವನ್ನು ಸಂಗ್ರಹಿಸಿದರೆ ಸುಮಾರು ಶೇಕಡಾ 8ರ ಬಡ್ಡಿದರದಲ್ಲಿ ಜಿಲ್ಲಾ ಬ್ಯಾಂಕುಗಳಿಗೂ, ಅಲ್ಲಿಂದ ಶೇಕಡಾ 10ರ ಬಡ್ಡಿಯಲ್ಲಿ ಪ್ರಾಥಮಿಕ ಸಂಘಗಳಿಗೂ ಅಲ್ಲಿಂದ ಶೇಕಡಾ 12ರ ಬಡ್ಡಿದರದಲ್ಲಿ ರೈತರಿಗೂ ಸಾಲವನ್ನು ನೀಡಿ, ಯಾರೂ ಎಂದೂ ಬಾಕಿ ಉಳಿಸಿಕೊಳ್ಳದ ಪರಿಸ್ಥಿತಿಯಲ್ಲಿ ಈ ವ್ಯಾಪಾರ ನಡೆಯಬಹುದಿತ್ತು. ಅಂದರೆ ಇದೇ ವಾದಸರಣಿಯ ಪ್ರಕಾರ ಗ್ರಾಮದ ಸಹಕಾರ ಸಂಘಗಳು ಶೇಕಡಾ 10ರಷ್ಟು ಬಡ್ಡಿಯನ್ನು ಠೇವಣಿಗಳ ಮೇಲೆ ನೀಡಿದರೂ ಒಂದು ರೀತಿಯಿಂದ ವ್ಯಾಪಾರವನ್ನು ಮುಂದರೆಸಬಹುದಿತ್ತು. ಆದರೆ ಸರಕಾರಗಳಿಗೆ ಬಡರೈತರನ್ನು ಉದ್ಧಾರ ಮಾಡುವ ತೆವಲಿತ್ತಾದ್ದರಿಂದ ಬಡ್ಡಿಯೇ ಇಲ್ಲದೇ ಸಾಲವನ್ನೂ, ಇರುವ ಸಾಲವನ್ನು ಕಾಲಕಾಲಕ್ಕೆ ಮನ್ನಾ ಮಾಡುವ ಹುನ್ನಾರವನ್ನು ಹೂಡಿ – ರೈತರಿಗೂ ಸಹಕಾರ ಸಂಘಗಳಿಗೂ ಇದ್ದ ಸಹಜ ವ್ಯಾಪಾರಿ ಸಂಬಂಧವನ್ನು ಕಲಕಿಹಾಕಿಬಿಟ್ಟಿತು. ಈ ಲೆಕ್ಕಾಚಾರದ ನಡುವೆ ಅಪೆಕ್ಸ್ ಬ್ಯಾಂಕಿಗೆ ಶೇಕಡಾ 6ರ ಬಡ್ಡಿದರದಲ್ಲಿ ಹಣ ಸಿಗುವುದೂ ಇಲ್ಲ, ಶೇಕಡಾ 12ರ ದರದಲ್ಲಿ ರೈತರಿಗೆ ಸಾಲಕೊಡುವುದೂ ಸಾಧ್ಯವಿಲ್ಲ – ಯಾಕೆಂದರೆ ಕೃಷಿಸಾಲಕ್ಕೆ ಶೇಕಡಾ 9ರ ಬಡ್ಡಿದರವನ್ನು ಸರಕಾರವೇ ಸೂಚಿಸಿದೆ.

ಒಂದು ಲಕ್ಷರೂಪಾಯಿಯ ಸಾಲವನ್ನು ರೈತ ಪಡೆದರೆ, ಬೆಳೆ ನಾಟಿ ಅದು ಮಾರುಕಟ್ಟೆಗೆ ಸೇರುವ ಆರರಿಂದ ಎಂಟು ತಿಂಗಳ ಸಮಯದಲ್ಲಿ ವ್ಯಾಪಾರೀ ಸೂತ್ರದನುಸಾರ ಅದಕ್ಕಾಗುವ ಬಡ್ಡಿ ಸುಮಾರು 8,000 ರೂಪಾಯಿಗಳು. ಸರಕಾರ ನಿಗದಿ ಮಾಡಿದ ಶೇಕಡಾ 9ರ ದರವನ್ನು ಇದರ ಮೇಲೆ ಹೇರಿದರೆ ರೈತರಿಗಾಗುವ ಉಳಿತಾಯ ಕೇವಲ 2,000 ರೂಪಾಯಿಗಳು. ಮತ್ತು ರಾಜ್ಯ ಸರಕಾರದ ಕಡಿಮೆ ಬಡ್ಡಿ, ಬಡ್ಡಿರಹಿತ ಸಾಲ, ಎಲ್ಲವನ್ನೂ ಹೇರಿದರೆ ಉಳಿತಾಯ ಇನ್ನೂ 6,000 ರೂಪಾಯಿಗಳನ್ನು ದಾಟುವುದಿಲ್ಲ. ಇದಕ್ಕೆ ಮಾಡಬೇಕಾದ ಲೆಕ್ಕ ಪತ್ರದ ಸರ್ಕಸ್ಸೂ, ಕಾಯಬೇಕಾದ ಕಾಲ, ಎಲ್ಲವನ್ನೂ ಪರಿಗಣಿಸಿದರೆ ಅಂಗೈಯಲ್ಲಿ ತೀರ್ಥ ಹಾಕಲು ಅಣೆಕಟ್ಟನ್ನು ಕಟ್ಟಿದಂತೆ ಕಾಣುತ್ತದೆ. ಸಹಕಾರ ಸಂಘಗಳು ನಷ್ಟದ ಕೂಪದಲ್ಲಿಯೇ ಉಳಿಯಲು ಇದಕ್ಕಿಂತ ಸರಳ ಉಪಾಯ ಸಿಗುವುದಿಲ್ಲ! ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿ, ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವಂತೆ ಮಾಡಿದರೆ ರೈತರೇ ತಮಗೆ ಬೇಕಾದ ಸಾಲವನ್ನು ಬೇಕಾದ ಕಡೆಯಿಂದ ಪಡೆಯುತ್ತಾರೆ. ಇದಕ್ಕೆ ಉದಾಹರಣೆಯಾಗಿ ಹೈನುಗಾರಿಕೆಯ ಕ್ಷೇತ್ರ ನಮ್ಮ ಮುಂದಿದೆ.

ದೊಡ್ಡ ಉದ್ಯೋಗದಲ್ಲೂ ಇಂಥಹ ಉದಾಹರಣೆಗಳಿವೆ. ರಿಲೈಯನ್ಸ್ ನಂತಹ ದೊಡ್ಡ ಸಂಸ್ಥೆ ಮಾರಾಟ ಮಾಡುವ ಗ್ಯಾಸ್ ದರವನ್ನು ಕಂಪನಿಗೆ ಗಿಟ್ಟುವ ರೀತಿಯಲ್ಲಿ ಸರಕಾರ ನಿರ್ಧರಿಸಿದೆ. ವಿದ್ಯುತ್ತು ಸರಬರಾಜು ಮಾಡುವ ಖಾಸಗೀ ಸಂಸ್ಥೆಗಳ ಜೊತೆ ಪವರ್ ಪರ್ಚೇಸ್ ಎಗ್ರೀಮೆಂಟುಗಳಿರುತ್ತವೆ. ಆದರೆ ಕೆಲವು ಬೆಳೆಗಳನ್ನು ಬಿಟ್ಟರೆ ಕೃಷಿಯಲ್ಲಿ ಮಾರುಕಟ್ಟೆಯ ದರಗಳು ಎಷ್ಟು ಗಿಟ್ಟಬಹುದು ಎಂದು ಯೋಚಿಸುವುದೂ ಕಷ್ಟವಾಗಿರುವ ರೈತರ ಸಹಕಾರ ಸಂಘಗಳಿಗೆ ಚಿಲ್ಲರೆ ಹಣದ ತುಣುಕುಗಳನ್ನು ಉಣಬಡಿಸಿ ಸರಕಾರಗಳು ತಮ್ಮ ಕೈತೊಳೆದುಕೊಳ್ಳುತ್ತಿವೆ. ಸಹಜವಾಗಿಯೆ ನಷ್ಟಕ್ಕೆ ಬಿದ್ದಿರುವ ಮೂರು ಸ್ಥರದ ಸಹಕಾರ ಸಂಘಗಳ ಪಾತ್ರವನ್ನು ಪುನರ್ ನಿರ್ದೇಶಿಸಲು ನಾಬಾರ್ಡ್ ಅಧ್ಯಕ್ಷರಾದ ಪ್ರಕಾಶ್ ಬಕ್ಷಿ ನೇತೃತ್ವದಲ್ಲಿ ನಿಯಮಿಸಿದ ಸಮಿತಿ ಒಂದು ವರದಿಯನ್ನೂ, ಆ ವರದಿಯ ಆಧಾರದ ಮೇಲೆ ಒಂದು ಸುತ್ತೋಲೆಯನ್ನೂ ಹೊರಡಿಸಿದೆ.

ಬಕ್ಷಿ ಸಮಿತಿಯ ವರದಿ ಮತ್ತು ಸುತ್ತೋಲೆಯ ಸಾರಾಂಶವಿಷ್ಟೇ. ಮೂರು ಸ್ಥರಗಳ ಸಹಕಾರಿ ವ್ಯವಸ್ಥೆಯನ್ನು ಮರುರೂಪಿಸಬೇಕು. ಅದಕ್ಕೆ ಸಿದ್ಧ ಉಪಾಯವೆಂದರೆ ಪ್ರಾಥಮಿಕ ಸಂಘಗಳನ್ನು ಜಿಲ್ಲಾ ಬ್ಯಾಂಕುಗಳ ಏಜೆಂಟರನ್ನಾಗಿ ನಿಯಮಿಸುವುದು. ಗ್ರಾಮಸ್ಥರ ಅಷ್ಟೂ ಠೇವಣಿ, ಸಾಲ, ಬಂಡವಾಳ ಎಲ್ಲವನ್ನೂ ಜಿಲ್ಲಾ ಬ್ಯಾಂಕುಗಳಿಗೆ ವರ್ಗಾಯಿಸಿ ಸ್ಥಳೀಯತೆಯನ್ನು ಕಳೆದುಕೊಂಡು ಜಿಲ್ಲಾ ಬ್ಯಾಂಕುಗಳು ನೀಡಿದಷ್ಟು ಸೇವೆಯನ್ನು ಸ್ವೀಕರಿಸಿ ತೆಪ್ಪಗಿರುವುದು. ಆ ಸುತ್ತೋಲೆ ನಿರ್ದೇಶನರೂಪದ್ದಲ್ಲವೆಂದೂ, ಕೇವಲ ಮಾರ್ಗದರ್ಶಿರೂಪದ್ದೆಂದೂ ನಾಬಾರ್ಡ್ ಸ್ಪಷ್ಟೀಕರಣವನ್ನು ನೀಡಿದೆಯಾದರೂ ಅದರ ಧ್ವನಿಯಂತೂ ಸಮಂಜಸವಾಗಿಲ್ಲ. ಪ್ರಾಥಮಿಕ ಸಂಘಗಳು ವ್ಯವಸ್ಥೆಯ ಅಡಿಪಾಯ. ಅದನ್ನೇ ಈ ಸುತ್ತೋಲೆ ಅಲುಗಾಡಿಸುತ್ತಿದೆ. ಪರಸ್ಪರತೆ-ಸ್ಥಳೀಯತೆಯಿಂದ ದೂರ, ಕೇಂದ್ರೀಕರ6ಣದತ್ತ ಸಹಕಾರಿ ವ್ಯವಸ್ಥೆಯನ್ನು ಒಯ್ಯುತ್ತಿರುವ ಇದನ್ನು ಸಹಕಾರಿ ವಿರೋಧಿ ಸುತ್ತೋಲೆಯಂದೇ ಪರಿಗಣಿಸಬೇಕು.

ಸಂಘಗಳು ಕೇಂದ್ರ ಬ್ಯಾಂಕಿನ ಏಜೆಂಟರಾಗುವುದು ಕಿರಾಣಿಯಂಡಿಯ ಮಾಲೀಕರು ದೊಡ್ಡ ಸೂಪರ್ ಬಜಾರಿನ ಉದ್ಯೋಗಿಯಾಗಿ ಗಲ್ಲಾದ ಮೇಲೆ ಕೂರಬಹುದು ಎನ್ನುವಷ್ಟೇ ಕುಚೋದ್ಯದ ಮಾತಾಗಿದೆ. ಈ ಲೇಖನದ ಬಹುಭಾಗದಲ್ಲಿ ಸಹಕಾರವನ್ನು ಭೂತಕಾಲದಲ್ಲಿ ಬರೆದಿರುವುದಕ್ಕೆ ಇದೇ ನಿಜವಾಗಬಹುದೇನೋ ಎನ್ನುವ ಅನುಮಾನವೇ ಕಾರಣ. ಸಹಕಾರವು ವರ್ತವಾನವಾಗುವುದಕ್ಕೆ ಸರಕಾರ – ನಾಬಾರ್ಡ್ ಗಳು ಬಿಡುತ್ತಿಲ್ಲ. ನನ್ನ ಅನುಮಾನ ತಪ್ಪಾಗಿ ಸಹಕಾರವು ವರ್ತಮಾನವೇ ಆದಲ್ಲಿ ಒಳ್ಳೆಯದೇ. ಅದು ಹಾಗಾಗಬೇಕಾದರೆ ಸಂಸ್ಥೆಗಳನ್ನು ನಾಶ ಮಾಡುವ ಬಡ್ಡಿ ರಿಯಾಯಿತಿ, ಸಾಲಮನ್ನಾ, ಮತ್ತು ಸರಕಾರದ-ನಾಬಾರ್ಡುಗಳ ಕರುಣೆಯ ವಿರುದ್ಧ ಒಂದು ಆಂದೋಲನವನ್ನೇ ಸಹಕಾರಿ ನಾಯಕರು ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಮದಲ್ಲಿ ಟಪಾಲಾಪೀಸು, ಪಂಚಾಯ್ತಿ ಕಟ್ಟೆಗಳ ಜೊತೆಗೆ ಸಹಕಾರಿ ಸಂಘಗಳ ಸ್ಮಾರಕಗಳಷ್ಟೇ ನಾವು ಕಾಣಬಹುದು.


ಪ್ರಕಾಶ್ ಬಕ್ಷಿ ನಾಬಾರ್ಡ್ ಅಧ್ಯಕ್ಷರಾಗುವುದಕ್ಕೆ ಮುನ್ನ ಪ್ರಧಾನ ಮಹಾಪ್ರಬಂಧಕರಾಗಿದ್ದಾಗ ತಮ್ಮ ಆಡಳಿತ ವಿಭಾಗದ ಕಾಗದ ಪತ್ರಗಳ ಮೇಲೆ ಈ ಮಾತನ್ನು ಛಪಾಯಿಸಿದ್ದರು "ಸಹಕಾರವನ್ನು ಜನರು ಕಟ್ಟುತ್ತಾರೆ. ಸಹಕಾರವು ಒಂದು ತುಂಡು ಕಾಗದ, ಅದರ ಮೇಲಿನ ಅಕ್ಷರಗಳಿಂದ ಉದ್ಭವವಾಗುವುದಿಲ್ಲ. ಸಹಕಾರವನ್ನು ಜನರಿಗೇ ಬಿಟ್ಟುಬಿಡೋಣ." ಹೀಗೆ ಬರೆದ ಬಕ್ಷಿಯವರೇ ದಯವಿಟ್ಟು ನೀವು ಬರೆದದ್ದನ್ನ ಮೊದಲಿಗೆ ಓದಿ. ಅದರ ಆಧಾರದ ಮೇಲೆಯೇ ವರದಿಗಳನ್ನೂ ಸುತ್ತೋಲೆಗಳನ್ನೂ ತಯಾರಿಸಿ. ಪ್ಲೀಸ್.

ಮಂಗಳವಾರ, 13 ಆಗಸ್ಟ್ 2013
ಸಮತಾವಾದ ಮತ್ತು ಬೆಳವಣಿಗೆ: ಯಾವುದು ಹಿತ?

ಈಚಿನ ರಾಜಕೀಯ ಬೆಳವಣಿಗೆಯ ನಡುವೆ ಗರಮಾಗರಂ ಚರ್ಚೆಗೆ ಒಳಗಾಗಿರುವುದು ಅಮಾರ್ತ್ಯ ಸೇನ್ ಮತ್ತು ಜಗದೀಶ್ ಭಗವತಿಯವರ ಅರ್ಥಶಾಸ್ತ್ರದ ಜಟಾಪಟಿ. ಇದು ದೇಶದ ಪ್ರಗತಿಯ ಹಾದಿಯನ್ನು ಆರಿಸಿಕೊಳ್ಳುವ ಜಟಾಪಟಿಯೂ ಹೌದು. ಆದರೆ ದುರಂತವೆಂದರೆ ಅದನ್ನು ರಾಜಕೀಯ ಪಕ್ಷಗಳ ಪರ-ವಿರೋಧವಾಗಿ ನಿಲ್ಲಿಸಿ ಕಪ್ಪು-ಬಿಳುಪಿನಲ್ಲಿ ಬಣ್ಣಿಸುವ ಪ್ರಕ್ರಿಯೆ ಪ್ರಾರಂಭವಾಗಿಬಿಟ್ಟಿದೆ. ಯಾರು ಮಾರುಕಟ್ಟೆ ಪರ, ಯಾರು ವಿರೋಧಿಗಳು, ಯಾರು ದೇಶವನ್ನು ಲೈಸೆನ್ಸ್ ರಾಜ್ ಕಡೆಗೆ ಹಿನ್ನಡೆಸುತ್ತಿದ್ದಾರೆ ಎಂದೆಲ್ಲಾ ಚರ್ಚೆಗಳು ಬಂದಿವೆ. ಆದರೆ ಈ ರೀತಿಯ ಚರ್ಚೆಗಳು ಅರ್ಥಶಾಸ್ತ್ರದ ದಿಗ್ಗಜರಾದ ಇಬ್ಬರಿಗೂ ಮಾಡುತ್ತಿರುವ ಅನ್ಯಾಯವೇ ಆಗಿದೆ. ಮಾರುಕಟ್ಟೆಯನ್ನು ನಂಬುವವರೂ ಬಡತನದ ಉಚ್ಚಾಟನೆಯ ಮಾರ್ಗಗಳ ಬಗ್ಗೆ ಯೋಚಿಸುತ್ತಾರೆ – ಹಾಗೂ ಅವರನ್ನು ಅರ್ಥವ್ಯವಸ್ಥೆಯಲ್ಲಿ ಒಳಗೊಳ್ಳುವ ರೀತಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಮಾರುಕಟ್ಟೆಯೇ ಆರಾಧ್ಯ ದೇವರೆಂಬ ನಂಬಿಕೆಯನ್ನು ಪ್ರಶ್ನಿಸುವವರೂ ಮಾರುಕಟ್ಟೆಯ ಚೌಕಟ್ಟನ್ನು ಗುರುತಿಸಿ ಅದರಲ್ಲಿ ನಡೆಯಬೇಕಾದ ಸುಧಾರಣೆಯನ್ನು ಚರ್ಚಿಸುತ್ತಾರೆಯೇ ಹೊರತು ಮಾರುಕಟ್ಟೆಯನ್ನು ಅಲ್ಲಗಳೆಯುವುದಿಲ್ಲ.ಬಡತನ-ಪ್ರಗತಿ-ಬೆಳವಣಿಗೆಗಳಿಂದ ದೂರಕ್ಕೆ ಹೋಗಿ ಒಂದು ಸಾಫ್ಟವೇರ್ ಸಂಸ್ಥೆಯನ್ನು ರೂಪಿಸಬಹುದಾದ ಎರಡು ಮಾರ್ಗಗಳನ್ನು ಚರ್ಚಿಸಿದರೆ ನಮಗೆ ಎರಡೂ ಮಾರ್ಗಗಳಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳು ತಿಳಿಯಬಹುದು. ಭಾರತದ ಪ್ರಮುಖ ಸಾಫ್ಟವೇರ್ ಕಂಪನಿಯೊಂದರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಣುಸ್ಥಾವರ ನಿರ್ಮಾಣ, ತೈಲ ಬೆಲೆ ಪರಿಷ್ಕರಣೆ, ಏರ್‌ಲೈನ್ ವ್ಯಾಪಾರಗಳು ಬಂಡವಾಳಕೇಂದ್ರಿತ ವ್ಯಾಪಾರಗಳಾಗಿರುತ್ತವೆ. ಅಲ್ಲಿ ಬಂಡವಾಳ ಹೂಡದಿದ್ದರೆ ವ್ಯಾಪಾರ ಮುಂದುವರೆಯುವುದು ಸಾಧ್ಯವಿಲ್ಲ. ಆದರೆ ಬೌದ್ಧಿಕತೆಯನ್ನೂ ಆಲೋಚನಾ ಕುಶಲತೆಯನ್ನೂ ಉಪಯೋಗಿಸುವ  ಸಾಫ್ಟವೇರ್ ಸಂಸ್ಥೆಗಳು ಬಂಡವಾಳ ಕೇಂದ್ರಿತ  ಸಂಸ್ಥೆಗಳಲ್ಲ. ಅವು ಉದ್ಯೋಗಿಗಳ ಕೌಶಲ್ಯದ ಮೇಲೆ ನಡೆಯುವ ಸಂಸ್ಥೆಗಳು. ಗೂಗಲ್ ಆಗಲೀ, ಆಪಲ್ ಆಗಲೀ, ಮೈಕ್ರೋಸಾಫ್ಟ್ ಆಗಲೀ, ನಿರಂತರ ಹೊಸ ಆಲೋಚನೆಗಳು, ಹೊಸ ಐಡಿಯಾಗಳ ಆಧಾರದ ಮೇಲೆಯೇ ಮಾರುಕಟ್ಟೆಯ ಮುಂಚೂಣಿಯಲ್ಲಿ ನಿಂತಿರುತ್ತವೆ. ಹೀಗಾಗಿಯೇ ನೀವು ಯಾವುದೇ ಸಾಫ್ಟವೇರ್ ಕಂಪನಿಯ ಆಸ್ತಿ-ಬಾಧ್ಯತೆಗಳ ಪಟ್ಟಿ ನೋಡಿದಾಗ ಅವು ಬಹುತೇಕ ಋಣಮುಕ್ತವಾಗಿರುತ್ತವೆ. ಇವುಗಳಲ್ಲಿ ಬಹಳಷ್ಟು  ಸಂಸ್ಥೆಗಳು ಲಾಭದ ದುಡ್ಡನ್ನು ಬ್ಯಾಂಕು ಮತ್ತು ಇತರೆಡೆ ಹೂಡಿಕೆ ಮಾಡುವುದು ವಾಡಿಕೆ.

ರೂ.10,000 ಬಂಡವಾಳದಿಂದ ಪ್ರಾರಂಭವಾದ ಭಾರತದ ಒಂದು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯ ಮೂಲ ಬಂಡವಾಳ 1992ರಲ್ಲಿ 2 ಕೋಟಿ ರೂಪಾಯಿಗಳಷ್ಟಿತ್ತು. ನಂತರ ಮಾರುಕಟ್ಟೆಯಿಂದ ಒಂದಿಷ್ಟು ಬಂಡವಾಳವನ್ನು ಆ ಕಂಪನಿ ಸಂಗ್ರಹಿಸಿತು. ಇಂದಿಗೆ ಆ ಹಣ ರೂ.287 ಕೋಟಿಯಷ್ಟು ಬಂಡವಾಳವಾಗಿ ಬೆಳೆದಿದೆ. ಇದು ಈ ಪ್ರಮಾಣಕ್ಕೆ ಬೆಳೆದದ್ದು ಆರ್ಜಿಸಿದ ಲಾಭವನ್ನು ಬಂಡವಾಳವಾಗಿ ಪರಿವರ್ತಿಸಿದ್ದರಿಂದ.  ಇಂದಿಗೆ ಆ ಸಂಸ್ಥೆಯು ಆರ್ಜಿಸಿ ಹಂಚದ ಲಾಭವೇ ರೂ. 35,000 ಕೋಟಿಗೂ ಮೀರಿ ಇದೆ. ಸುಮಾರು ರೂ.4,000 ಕೋಟಿಗಳ ಸ್ಥಿರಾಸ್ತಿಯಿರುವ ಈ ಸಂಸ್ಥೆಯ ಬಳಿ ರೊಕ್ಕವೇ ರೂ.20,000 ಕೋಟಿಗಳಷ್ಟಿದೆ. ಒಟ್ಟಾರೆ ರೂ.36,000 ಕೋಟಿಗಳಷ್ಟು ವ್ಯಾಪಾರ ಮಾಡುತ್ತಿರುವ ಈ ಸಂಸ್ಥೆಯ ಮುಖ್ಯವಾದ ಖರ್ಚು ಉದ್ಯೋಗಿಗಳಿಗೆ ಸಂಬಳವಾಗಿ ನೀಡುತ್ತಿರುವ ರೂ.20,000 ಕೋಟಿ ರೂಪಾಯಿಗಳು.  ಮಿಕ್ಕ ಖರ್ಚು, ತೆರಿಗೆಗಳನ್ನು ಕಳೆದರೆ ಸುಮಾರು ರೂ.9,000 ಕೋಟಿಗಳ ಲಾಭವನ್ನು ಈ ಸಂಸ್ಥೆ ಆರ್ಜಿಸಿರುವುದಲ್ಲದೆ, ಸುಮಾರು ರೂ.2,500 ಕೋಟಿಗಳಷ್ಟು ಲಾಭಾಂಶವನ್ನು ಹಂಚಿಕೊಟ್ಟಿದೆ. ಇದರಲ್ಲಿ ಮೂಲ ಬಂಡವಾಳ ಹಾಕಿದವರಿಗೆ ಸುಮಾರು ರೂ.380 ಕೋಟಿಯಷ್ಟು ಹಣ ಸಂದುತ್ತದೆ. ಅಷ್ಟೇ ಅಲ್ಲದೇ ಮೂಲ ಬಂಡವಾಳ ಹಾಕಿದವರು ಷೇರುಗಳ ಮುಖಬೆಲೆ ರೂ.46 ಕೋಟಿಗಳಿದ್ದರೂ ಮಾರುಕಟ್ಟೆಯ ದರ ಇಂದಿಗೆ ರೂ.26,000 ಕೋಟಿಗಳ ಮಟ್ಟದಲ್ಲಿದೆ.

ಬಂಡವಾಳವೇ ಮೂಲವೆಂದು ನಂಬಿರುವ ಮಾರುಕಟ್ಟೆಯ ದಾರಿಯನ್ನು ಹಿಡಿದು ಹೊರಟು ನೋಡಿದರೆ ಇದರಿಂದ ದೇಶಕ್ಕೆ ಒಳಿತಾಗಿದೆಯೇ. ಖಂಡಿತವಾಗಿಯೂ ಆಗಿದೆ. ಈ ಸಂಸ್ಥೆಯಿಂದಾಗಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಉದ್ಯೋಗಾವಕಾಶ ದೊರೆತಿದೆ. ದೇಶಕ್ಕೆ ವಿದೇಶೀ ವಿನಿಮಯದಿಂದ ಹಣ ಬಂದಿದೆ. ಕಳೆದ ವರ್ಷ ರೂ.3,000 ಕೋಟಿಗಳಷ್ಟು ತೆರಿಗೆಗಳನ್ನು ಕಟ್ಟಿರುವುದರಿಂದ ಬೊಕ್ಕಸಕ್ಕೆ ಹಣ ಸಂದಿದೆ. ಸಂಸ್ಥೆ ಪ್ರತೀ ವರ್ಷ ತನ್ನ ಲಾಭಾಂಶದಿಂದ ಒಂದು ಭಾಗವನ್ನು ಸಮಾಜೋದ್ಧಾರದ ಕೆಲಸಗಳಿಗಾಗಿಯೇ ಮೀಸಲಾಗಿಡುವುದರಿಂದ ಆ ಕಾರ್ಯಕ್ಕೆ ಸುಮಾರು ರೂ.90 ಕೋಟಿಗಳ ಧನವೂ ಲಭ್ಯವಿದೆ. ಇದರಲ್ಲಿ ನಮಗೆ ಯಾಕೆ ತೊಂದರೆಗಳು ಕಾಣಬೇಕು?

ಈಗ ಸಂಸ್ಥೆಯಲ್ಲಿ ಹೂಡಿಕೆದಾರರೂ-ಉದ್ಯೋಗಿಗಳೂ ಆಗಿರುವ ಇಬ್ಬರು ವ್ಯಕ್ತಿಗಳ ಆದಾಯವನ್ನು ನಾವು ನೋಡೋಣ. ಇಬ್ಬರಿಗೂ ತಲಾ ಸುಮಾರು ರೂ.50 ಲಕ್ಷ ವಾರ್ಷಿಕ ಸಂಬಳವಿತ್ತಾದರೂ, ಲಾಭಾಂಶ ಹಂಚಿಕೆಯಿಂದ ಬಂದ ಆದಾಯ ಒಬ್ಬರಿಗೆ ರೂ.55 ಕೋಟಿ, ಮತ್ತೊಬ್ಬರಿಗೆ ರೂ.20 ಕೋಟಿಗಳು. ಅರ್ಥಾತ್  – ಬರೇ ಬಂಡವಾಳ ಹೂಡಿ ಸುಮ್ಮನೇ ಕೂತದ್ದರಿಂದಲೇ ಅವರಿಗೆ ಹೆಚ್ಚಿನ ಆದಾಯ ಬಂತೇ ಹೊರತು, ಕೆಲಸಮಾಡಿದ್ದಕ್ಕೆ ಬಂದ ಸಂಬಳವು ಆ ಮೊತ್ತಕ್ಕೆ ಹೋಲಿಸಿದರೆ ತೀರಾ ಕಡಿಮೆ.

ಸಮತಾವಾದದ ಪ್ರತಿಪಾದಕರು ಇದನ್ನು ಹೇಗೆ ನೋಡಬಹುದು? ಇದ್ದಕ್ಕಿದ್ದ ಹಾಗೆ ಒಂದು ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಸಂಸ್ಥೆಗಳಿಗೆ ಸಾಮಾನ್ಯಕ್ಕಿಂತ ಅತಿಯಾದ ಲಾಭ ಬರುತ್ತಿದೆಯೆಂದರೆ ಆ ಕ್ಷೇತ್ರಕ್ಕೆ ಯಾವ ಸವಲತ್ತುಗಳನ್ನು ಕೊಡಬೇಕು, ಮತ್ತು ಯಾವರೀತಿಯ ತೆರಿಗೆಗಳನ್ನು ಹೇರಬೇಕು ಎನ್ನುವ ಪ್ರಶ್ನೆಯನ್ನು ಕೇಳಬಹುದು.

ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗದೇ ಆ ಸಂಪತ್ತು ವಿಸ್ತೃತವಾಗಿ ಹಂಚಿಕೆಯಾಗುವುದು ಹೇಗೆ? ಎಡಪಂಥೀಯ ವಿಚಾರಧಾರೆಯು ಇದನ್ನು ರಾಷ್ಟ್ರೀಕರಣದತ್ತ-ಸಮಾನತೆಯ ಸಿದ್ಧಾಂತದತ್ತ ಒಯ್ಯುತ್ತದೆ. ಎಡಪಂಥೀಯ ವಿಚಾರಧಾರೆ ಮಾರುಕಟ್ಟೆಯನ್ನು ನಿರಾಕರಿಸಿದರೂ ಮಿಕ್ಕ ವಿಚಾರಧಾರೆಗಳು ಮಾರುಕಟ್ಟೆಯ ಸೂತ್ರದಡಿಯಲ್ಲಿಯೇ ಈ ವ್ಯಾಪಾರದ ಲಾಭನಷ್ಟಗಳನ್ನು ಬೇರೆ ರೀತಿಯಿಂದ ಹಂಚಬಹುದಾದ ಪ್ರಯತ್ನವನ್ನು ಮಾಡುತ್ತವೆ.

ಭಗವತಿಯಂತಹ ಅರ್ಥಶಾಸ್ತ್ರಜ್ಞರು ಈ ರೀತಿಯಾದಂತಹ ಉದ್ಯಮಶೀಲತೆಯಿರುವುದರಿಂದ ಎಷ್ಟೋ ಜನರಿಗೆ ಉದ್ಯೋಗಾವಕಾಶವೂ ದೊರೆತು, ಸರಕಾರಕ್ಕೆ ಹೆಚ್ಚಿನ ತೆರಿಗೆಯೂ ಬಂದು, ಉದ್ಯಮಶೀಲತೆಗೆ ಒಂದು ಪ್ರೋತ್ಸಾಹವನ್ನೂ ಕೊಟ್ಟಂತಾಗುತ್ತದೆ ಎಂದು ವಾದಿಸುತ್ತಾರೆ. ಆದರೆ ಅಮಾರ್ತ್ಯ ಸೇನ್ ತರಹದ ಅರ್ಥಶಾಸ್ತ್ರಜ್ಞರು ಈ ಉದ್ಯಮದಲ್ಲಿ ನೌಕರಿ ಗಿಟ್ಟಿಸುವ ಈ ಲಕ್ಷ ಮಂದಿ ತಯಾರಾಗುವುದು ಹೇಗೆ, ಅವರು ಕ್ಷಮತೆಯಿಂದ ಈ ಉದ್ಯಮದಲ್ಲಿ ಕೆಲಸ ಮಾಡಬೇಕಾದರೆ ನಮ್ಮ ಸಮಾಜ ಯಾವ ರೀತಿಯಲ್ಲಿ ಆ ಲಕ್ಷಮಂದಿಯನ್ನು ತಯಾರು ಮಾಡಬೇಕು ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಯನ್ನು ಕೇಳಿದಾಗ – ಬರೇ ಉದ್ಯಮಶೀಲತೆಯ ಆಧಾರದ ಮೇಲೆಯೇ ಎಲ್ಲವೂ ನಿರ್ಧಾರವಾಗಿದ್ದರೆ ಈ ಸಂಸ್ಥೆಗಳಲ್ಲಿ ಕೆಲಸಕ್ಕೆ ಹೋಗುವ ಉದ್ಯೋಗಿಗಳ ತರಬೇತಿಯ ಒಂದು ಮಾರುಕಟ್ಟೆಯೂ ತಯಾರಾಗುತ್ತದೆ. ಆದರೆ ಆ ಮಾರುಕಟ್ಟೆಯಲ್ಲಿ ಆ ತರಬೇತಿಯನ್ನು ಪಡೆಯಲೂ ಆರ್ಥಿಕ ಸವಲತ್ತುಗಳು ಬೇಕು. ಅಮಾರ್ತ್ಯ ಸೇನ್ ಈ ರೀತಿಯ ವಿದ್ಯೆಯನ್ನಾರ್ಜಿಸುವ ಸವಲತ್ತನ್ನು ಸರಕಾರ ಬಡವರಿಗೆ ಒದಗಿಸಿಕೊಡಬೇಕು, ಹೀಗಾಗಿ ಹೆಚ್ಚೆಚ್ಚು ಶಾಲೆಗಳನ್ನು ನಡೆಸಬೇಕು, ಅಲ್ಲಿ ಮಧ್ಯಾಹ್ನದ ಬಿಸಿಯೂಟ ಕೊಟ್ಟು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು, ಇದು ಸರಕಾರದ ಧರ್ಮ ಎಂದು ಹೇಳಿದರೆ, ಭಗವತಿಯಂಥಹವರು ಸರಕಾರ ಪಡೆದ ತೆರಿಗೆಯಿಂದ ಬಡವರಿಗೆ ಹಣದ ರೂಪದಲ್ಲಿ, ಅಥವಾ ವೋಚರುಗಳ ಮೂಲಕ ದುಡ್ಡನ್ನು ಹಂಚಿ, ಮಕ್ಕಳನ್ನು ಯಾವ ಶಾಲೆಗೆ ಕಳುಹಿಸಬೇಕೆಂಬ ಆಯ್ಕೆಯನ್ನು ಬಡವರಿಗೇ ನೀಡಬೇಕೆಂದು ವಾದಿಸುತ್ತಾರೆ.

ಈ ಎರಡೂ ವಾದಗಳಲ್ಲಿಯೂ ಇಬ್ಬರು ಮಹಾನುಭಾವರೂ ಬಡವರನ್ನು ಮರೆತಿಲ್ಲ. ಆದರೆ ಇಬ್ಬರ ವಾದವಿರುವುದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವುದರಲ್ಲಿ. ಸೇನ್ ಮೊದಲು ಮೊಟ್ಟೆಯಿದ್ದರೆ – ಅಂದರೆ ಕೋಳಿ ಹುಟ್ಟುವ ಸಾಧನವಿದ್ದರೆ ಆ ಪ್ರಗತಿಯ ಅಡಿಪಾಯ ಭದ್ರವಾಗಿರುತ್ತದೆ, ಅಲ್ಲಿಂದ ಬೆಳೆದ ಸಮಾಜದ ಆರ್ಥಿಕತೆ ಗಟ್ಟಿಯಾಗಿರುತ್ತದೆ ಎಂದು ವಾದಿಸುತ್ತಾರೆ. ಭಗವತಿ ಕೋಳಿಯಿಂದ ಪ್ರಾರಂಭ ಮಾಡಿ ಅದರ ಫಲಿತದ ಒಂದಲ್ಲ ಅನೇಕ ಮೊಟ್ಟೆಗಳನ್ನು ಎಣಿಸಿ, ಅದರಿಂದ ಕೋಳಿಗಳ ಹಿಂಡನ್ನೇ ತಯಾರು ಮಾಡುತ್ತಾರೆ.

ಆದರೆ ಈ ಎರಡು ವಾದಗಳ ನಡುವೆ ಮತ್ತೊಂದು ಸಣ್ಣ ವಿವರವೂ ಸಿಕ್ಕಿಹಾಕಿಕೊಂಡಿದೆ. ಈ ಸಾಫ್ಟವೇರ್ ಸಂಸ್ಥೆ ಬಂಡವಾಳ ಮೂಲದ ಸಂಸ್ಥೆಯಾಗಿರದೇ ಉದ್ಯೋಗಿಗಳ ಸಹಕಾರೀ ಸಂಸ್ಥೆಯಾಗಿದ್ದರೆ ಏನಾಗುತ್ತಿತ್ತು? ಮಿಕ್ಕ ಅರ್ಥವ್ಯವಸ್ಥೆ ಹೇಗೇ ಇರಲಿ – ಆ ಅರ್ಥವ್ಯವಸ್ಥೆಯ ನಿಯಮಗಳ, ಅದೇ ಮಾರುಕಟ್ಟೆ, ತೆರಿಗೆ, ಆರ್ಥಿಕ ನೀತಿಯಡಿಯಲ್ಲಿಯೇ ಈ ಸಂಸ್ಥೆಯನ್ನೇ ಭಿನ್ನವಾಗಿ ರೂಪಿಸಿದ್ದರೆ? ಅಂದರೆ ಇದು ಉದ್ಯೋಗಿಗಳ ಒಂದು ಸಹಕಾರ ಸಂಘವಾಗಿದ್ದರೆ, ಆಗ ಬಂಡವಾಳ ಹೂಡಿದವರಿಗೆ ತಮ್ಮ ಬಂಡವಾಳಕ್ಕೆ (ಬ್ಯಾಂಕುಗಳು ನೀಡುವುದಕ್ಕಿಂತ ಹೆಚ್ಚೇ) ವರ್ಷಕ್ಕೆ ಶೇಕಡಾ 20ರ ಬಡ್ಡಿಯನ್ನು ಕೊಟ್ಟರು ಎಂದುಕೊಳ್ಳೋಣ. ಈ ಸಂಸ್ಥೆಯಲ್ಲಿ ಅದು ರೂ.68 ಕೋಟಿಗಳಷ್ಟಾಗುತ್ತದೆ. ಮಿಕ್ಕ ಹಣವನ್ನು ಉದ್ಯೋಗಿಗಳು ತಾವು ಮಾಡಿದ ಕೆಲಸಕ್ಕನುಸಾರವಾಗಿ ಹಂಚಿಕೊಳ್ಳುತ್ತಿದ್ದರು. ಎಲ್ಲರೂ ಸಮಾನ ದಕ್ಷತೆಯಿಂದ ಕೆಲಸಮಾಡಿ, ಸಮಾನವಾಗಿ ಹಂಚಿದೆವು ಎಂದುಕೊಂಡರೂ ಲಕ್ಷ ಉದ್ಯೋಗಿಗಳಿಗೆ ತಲಾ ಎಂಟು ಲಕ್ಷರೂಪಾಯಿಗಳು ಸಂದುತ್ತಿದ್ದವು. ಅಂದರೆ ಬೆರಳೆಣಿಕೆಯಷ್ಟು ಸಹಸ್ರಕೋಟ್ಯಾಧಿಪತಿಗಳನ್ನು ತಯಾರುಮಾಡಿ ಅವರಲ್ಲಿ ಸಂಪತ್ತಿನ ಕೇಂದ್ರೀಕರಣವನ್ನು ತಪ್ಪಿಸಿ, ಒಂದು ಲಕ್ಷ ಮಂದಿ ಮಿಲಿಯಾಧಿಪತಿಗಳನ್ನು ಈ ಸಂಸ್ಥೆ ತಯಾರುಮಾಡಬಹುದಿತ್ತು.

ಪ್ರಗತಿ, ಬೆಳವಣಿಗೆ, ಸಮತಾವಾದ, ಸಮಾನತೆಯ ವಿಚಾರಗಳು ಹೀಗೆ ತುಂಬಾ ಸಂಕೀರ್ಣತೆಯಿಂದ ಕೂಡಿದವುಗಳು. ಇವನ್ನು ಸೇನ್-ಕಾಂಗ್ರೆಸ್, ಭಗವತಿ-ಮೋದಿ ಗಳ ಸರಳೀಕರಣಕ್ಕಿಳಿಸುವುದು ಭಾರತದ ರತ್ನಗಳಾದ ಇಬ್ಬರಿಗೂ ಅನ್ಯಾಯವೆಸಗಿದಂತೆಯೇ. ಆದರೂ 30 ಸೆಕೆಂಡುಗಳಲ್ಲಿ ಯಸ್-ನೋ ಉತ್ತರ ಬಯಸುವ ನಮ್ಮ ದೃಶ್ಯಮಾಧ್ಯಮಗಳ ಸದ್ದಿನ ನಡುವೆ ಚರ್ಚೆಗೆ ತಾವೆಲ್ಲಿ?


ಶುಕ್ರವಾರ, 26 ಜುಲೈ 2013


Thursday, October 10, 2013

ಗೋಡೆ ಸರಹದ್ದುಗಳ ನಡುವೆ ನಲುಗುವ ಬಜೆಟ್ಟು

ಬಜೆಟ್ಟು ಮಂಡಿಸುವುದು ಸರಳವಾದ ಕೆಲಸವೇನೂ ಅಲ್ಲ. ಅದರಲ್ಲೂ ತೆರಿಗೆಗಳನ್ನೇರಿಸದೇ, ಜನಪರ-ರೈತಪರ-ಬಡವರ ಪರ ಬಜೆಟ್ಟನ್ನು ಮಂಡಿಸುವುದು ಹುಲಿಸವಾರಿಯಂತಹ ಕಠಿಣವಾದ ಕೆಲಸವೇ. ಆ ಕೆಲಸದ ನಡುವೆ ನಮ್ಮಂತಹವರ ಅವಸ್ವರವನ್ನೂ ವಿತ್ತ-ಮುಖ್ಯ ಮಂತ್ರಿಗಳು ಕೇಳಬೇಕು. ಅಂದರಿಕೀ ಮಂಚಿವಾಡು ಆಗುವುದು ಸಾಧ್ಯವೇ ಇಲ್ಲವಾದ್ದರಿಂದ ಸರಕಾರ, ಖಾತೆ-ವಿಭಾಗಗಳ ಗೋಡೆ ಸರಹದ್ದುಗಳ ನಡುವೆ ಬಜೆಟ್ಟನ್ನು ರೂಪಿಸಬೇಕು. ಈ ರೀತಿಯ ಕಿಂಡಿಗಳನ್ನೇರ್ಪಡಿಸಿ ಅವುಗಳಿಗೆ ಹಣವನ್ನು ತುಂಬುವ, ಅದರಿಂದ ಖರ್ಚು ಮಾಡುವುದರಲ್ಲಿ ಬಜೆಟ್ಟನ್ನು ರೂಪಿಸವ ಪ್ರಕ್ರಿಯೆಗೆ ಸಂಬಂಧಿಸಿದ ಒಂದು ಅಪಾಯವಿದೆ.

ಒಬ್ಬ ಬೆಂಗಳೂರಿಗನಾಗಿ ಬಜೆಟ್ಟನ್ನು ನೋಡುವ ಪರಿ ಹೇಗೆ? ಬೆಂಗಳೂರು ನಗರಕ್ಕೇ ಸುಮಾರು ರೂ.8,640 ಕೋಟಿಗಳಷ್ಟು ಹಣವನ್ನು ಮೀಸಲಿಡಲಾಗಿದೆ. ಇದು ಒಟ್ಟಾರೆ ಬಜೆಟ್ಟಿನ ಶೇಕಡಾ 7ರಷ್ಟಿದೆ. ಆದರೆ ಒಟ್ಟಾರೆ ನಗರಾಭಿವೃದ್ಧಿಗೆಂದು ಇಟ್ಟಿರುವ ಸುಮಾರು ರೂ,9,286 ಕೋಟಿಗಳಲ್ಲಿ  ಸಿಂಹಪಾಲು ಬೆಂಗಳೂರಿಗೇ ಸೀಮಿತವಾಗಿದೆ ಎನ್ನುವುದು ಗಮನಾರ್ಹ. ತಮ್ಮೂರಾದ ಮೈಸೂರನ್ನೂ ಬಿಟ್ಟು ಬೆಂಗಳೂರಿನ ಮೇಲೆ ಸಿದ್ದರಾಮಯ್ಯನವರ ಪ್ರೀತಿಗೆ ಕಾರಣವೇನಿರಬಹುದು? ಅನೇಕ ರೈತಪರ- ಗ್ರಾಮೀಣ ಪರವಾದ ಯೋಜನೆಗಳ ನಡುವೆ ಈ ವಿವರ ಕಣ್ಣುತಪ್ಪಿಹೋಗಬಹುದು. ಹೀಗಾಗಿ ಸಿದ್ದರಾಮಯ್ಯನವರ ಬೆಂಗಳೂರು-ಪರ ಬಜೆಟ್ಟು, ಎಸ್.ಎಂ.ಕೃಷ್ಣರ ಹಾದಿಯನ್ನು ಹಿಡಿದ ಬಜೆಟ್ಟಿನಂತೆ ಕಾಣುವುದಿಲ್ಲ. ಬೆಂಗಳೂರಿಗೆ ನೀಡಿರುವ ಅರ್ಥಪೂರ್ಣ ಯೋಜನೆಗಳು, ಎಂ.ಜಿ ರೋಡಿಗೆ ವೈಫೈ ಸೌಲಭ್ಯವನ್ನು ಒದಗಿಸುವ ವಿಚಿತ್ರ ಘೋಷಣೆಗಳ ನಡುವೆಯೂ ಈ ಬಜೆಟ್ಟು ಜನಪರವೆಂದೇ ಅನ್ನಿಸುತ್ತದೆ.
ಬೆಂಗಳೂರಿಗರಿಗೆ ಒಟ್ಟಾರೆ ಅಭಿವೃದ್ಧಿಯನ್ನು ಒದಗಿಸಿಕೊಡುವ ಈ ಬಜೆಟ್ಟನ್ನು ಯಾಕೆ ಸ್ವಾಗತಿಸಬಾರದು? ಇಲ್ಲಿನ ಸೌಲಭ್ಯಗಳು ಉತ್ತಮಗೊಂಡರೆ ಯಾಕೆ ಗೊಣಗಾಡಬೇಕು? ಈ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಇಲ್ಲಿರುವ ಆಲೋಚನಾಮಟ್ಟದ ತೊಡಕುಗಳನ್ನು ಪರಿಶೀಲಿಸೋಣ.

ನಮ್ಮನ್ನು ನಿತ್ಯ ಕಾಡುವ ವಿಷಯಗಳಾದ ತ್ಯಾಜ್ಯ ವಿಲೇವಾರಿ, ರಸ್ತೆ, ಬಿಡಿಎ ಸೈಟುಗಳು, ಮೇಲ್ಸೇತುವೆ-ಕೆಳಸೇತುವೆಗಳು ಮತ್ತು ಬೆಂಗಳೂರಿಗೆ ಬರಬೇಕಾದ ಹೂಡಿಕೆ, ಹೀಗೆ ಐಟಿ-ಬಿಟಿ ನಗರದ ಬಗ್ಗೆ ಇರಬೇಕಾದ್ದೆಲ್ಲವೂ ಇಲ್ಲಿನ ಬಜೆಟ್ಟಿನಲ್ಲಿದೆ. ಆದರೆ ಬೆಂಗಳೂರು ಬೆಳೆಯುವ ಗತಿಗೂ ಒಂದು ಮಿತಿಯಿದೆ. ಇಲ್ಲಿ ಬರುವ ವಲಸೆಗಾರರನ್ನು ಸ್ವೀಕರಿಸಲೂ ಒಂದು ಮಿತಿಯಿದೆ. ಈ ಎಲ್ಲವನ್ನು ಮೀರಿ ಉತ್ತಮ ನಗರವಾಗಿರುವುದು ಒಂದು ಸಾಹಸವೇ ಸೈ. ಆದರೂ ಪ್ರತೀ ಬಜೆಟ್ಟಿನ ನಗರಾಭಿವೃದ್ಧಿಯ ಮಾತಾದಾಗಲೂ ಯಾಕೆ ಬರೇ ಬೆಂಗಳೂರಿನ ಹೆಸರೇ ರಾರಾಜಿಸುತ್ತದೆ? ವಿತ್ತ-ಮುಖ್ಯಮಂತ್ರಿಗಳ ಭಾಷಣದಲ್ಲಿ ಬೆಂಗಳೂರಿಗೆಂದೇ ಒಂದು ಪ್ರತ್ಯೇಕ ಭಾಗವಿದೆ. ಜೊತೆಗೆ ನೀರು ಸರಬರಾಜು ಮಂಡಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆಯೂ ಒಂದಿಷ್ಟು ಮಾತಿದೆ. ಇದನ್ನು ಮೀರಿ ನೋಡಿದರೆ ರಾಜ್ಯದ ಮಿಕ್ಕ ಗ್ರಾಮೇತರ ಜಾಗಗಳ ಬಗ್ಗೆ ಹೆಚ್ಚಿನ ಮಾತು ಕಾಣುವುದಿಲ್ಲ. ಅದಕ್ಕೆ ಮುಡಿಪಾಗಿಟ್ಟಿರುವ ಆರ್ಥಿಕ ಸಂಪನ್ಮೂಲಗಳೂ ಅಷ್ಟಕ್ಕಷ್ಟೇ.

ಇದಕ್ಕೆ ಕಾರಣ ಸರಕಾರಗಳು ರಾಜ್ಯವನ್ನು ನೋಡುವ ರೀತಿಯೇ ಆಗಿರಬಹುದು. ಅಭಿವೃದ್ಧಿಯ ಮಾತು ಬಂದ ಕೂಡಲೇ ನಾವು ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಎನ್ನುವ ದ್ವಿಮುಖ ಸೂತ್ರವನ್ನು ಹಿಡಿದು ಹೊರಡುತ್ತೇವೆ. ಈ ಎರಡರ ಮಧ್ಯೆ ದೊಡ್ಡಗೋಡೆಯನ್ನು ಅಭೇದ್ಯ ಸರಹದ್ದನ್ನೂ ನಿರ್ಮಿಸಿಬಿಡುತ್ತೇವೆ. ನಗರಾಭಿವೃದ್ಧಿ ಮುಖ್ಯವಾಗಿ ರಾಜಧಾನಿಗೆ ಸೀಮಿತವಾಗಿ, ಒಂದಿಷ್ಟು ದೊಡ್ಡ ನಗರಗಳಿಗೆ ಕೆಲವು ಯೋಜನೆಗಳು ಹೋಗುತ್ತವೆ. ಮಿಕ್ಕಂತೆ ಎಲ್ಲವೂ ಗ್ರಾಮೀಣಾಭಿವೃದ್ಧಿಯೇ. ಇಲ್ಲಿಯೇ ನಾವು ಬೆಳೆ ಸಾಲಕ್ಕೆ ಬಡ್ಡಿ ದರದಲ್ಲಿ ಕಡಿತ ಉಂಟುಮಾಡುತ್ತೇವೆ. ಹತ್ತು ಲಕ್ಷ ಸಾಲ ಪಡೆವ ದೊಡ್ಡ ರೈತರಿಗೂ ಶೇಕಡಾ 3ಕ್ಕೇ ಬಡ್ಡಿದರವನ್ನು ಸೀಮಿತಗೊಳಿಸುತ್ತೇವೆ. ಗುಂಪುಗಳನ್ನು ಸೇರಿದ ಮಹಿಳೆಯರಿಗೆ ಬಡತನದ ಪ್ರಮೇಯವೇ ಇಲ್ಲದೇ ಶೇಕಡಾ 4ರ ಬಡ್ಡಿಗೆ ಸಾಲನೀಡುತ್ತೇವೆ, ಹಾಲು ಸರಬರಾಜು ಮಾಡುವವರು ಎಷ್ಟೇ ಶ್ರೀಮಂತರಾಗಿದ್ದರೂ ನಾಲ್ಕು ರೂಪಾಯಿ ಹೆಚ್ಚು ಬೆಲೆ ನೀಡುತ್ತೇವೆ, ಕೃಷಿ ಉತ್ಪನ್ನಕ್ಕೆ ಉತ್ತಮ ಬೆಲೆ ನಿರ್ಧರಿಸುವಂತೆ ಸಮಿತಿಯನ್ನು ನಿರ್ಮಿಸುತ್ತೇವೆ. ಇಲ್ಲಿ ಗ್ರಾಮಸಮಾಜವನ್ನು ಕೃಷಿಗೂ, ಕೃಷಿಯನ್ನು ಬಡತನಕ್ಕೂ ಸಮೀಕರಿಸುವ ವಿಚಿತ್ರ ಆಲೋಚನೆ ನಮಗೆ ಕಾಣುತ್ತದೆ.

ಗ್ರಾಮಕ್ಕೂ ನಗರಕ್ಕೂ ನಡುವೆ ಪೇಟೆ-ಪಟ್ಟಣಗಳಿವೆ. ಗ್ರಾಮಗಳಲ್ಲೂ ಕೃಷಿಯನ್ನು ಮೀರಿದ ವ್ಯಾಪಾರಗಳಿವೆ. ಆದರೆ ಗ್ರಾಮವೆಂದರೆ ಬಡತನ-ಕೃಷಿ. ನಗರವೆಂದರೆ ರಸ್ತೆ, ರಹದಾರಿ, ಮೆಟ್ರೋ. ಪ್ರಾಂತೀಯ ಬೆಳವಣಿಗೆಯೆಂದರೆ – ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಕಾರ್ಖಾನೆಗಳನ್ನು ಸ್ಥಾಪಿಸುವ ಸರಳ ಸೂತ್ರ ಬಜೆಟ್ಟಿನ ತಯಾರಿಕೆಯಲ್ಲಿ ಇರುವಂತಿದೆ.

ನಾವು ಬೆಂಗಳೂರಿನ ಅಭಿವೃದ್ಧಿಯ ಮಂತ್ರ ಜಪಿಸುವಾಗ ಕೇಳಲೇಬೇಕಾದ ಪ್ರಶ್ನೆಗಳನ್ನು ಕೇಳುತ್ತಿದ್ದೆವೆಯೇ? (1) ಬೆಂಗಳೂರನ್ನು ಒಂದು ಉತ್ತಮ ನಗರವಾಗಿ ಅಭಿವೃದ್ಧಪಡಿಸುವುದು ಹೇಗೆ?  ಜೊತೆಜೊತೆಗೇ ಎರಡನೆಯ ಪ್ರಶ್ನೆ (2) ಬೆಂಗಳೂರಿನ ಅನವಶ್ಯಕ ಬೆಳವಣಿಗೆಗೆ ಕಡಿವಾಣ ಹಾಕಿ, ರಾಜ್ಯದ ಮಿಕ್ಕ ನಗರಗಳನ್ನೂ ಬೆಳೆಯಿಸುವ ಪರಿಯೇನು? ಈ ಪ್ರಶ್ನೆಗಳಿಗೆ ಉತ್ತರವನ್ನು ಬೆಂಗಳೂರಿನಲ್ಲಿ ಹುಡುಕಿ ಪ್ರಯೋಜನವಿಲ್ಲ. ನಗರಾಭಿವೃದ್ಧಿಯನ್ನು ಬೆಂಗಳೂರು ಕೇಂದ್ರಿತವಾಗಲ್ಲದೇ ರಾಜ್ಯದ ಇತರ ನಗರಗಳನ್ನೂ ಒಳಗೊಂಡು ನೋಡಿದಾಗ ಉದ್ಭವವಾಗುವ ಪ್ರಶ್ನೆಗಳು ಇಂತಿವೆ:

·        ಬೆಂಗಳೂರಿಗೆ ಒಳವಲಸೆ ಬರುತ್ತಿರುವವರು ಯಾರು?
·        ಅವರು ಬೆಂಗಳೂರಿಗೇ ಬರಲು ಕಾರಣವೇನು? ಅದು ಬೆಂಗಳೂರು ಕೇಂದ್ರಿತ ಕಾರಣವೇ ಅಥವಾ ಕೇವಲ ನಗರ ಕೇಂದ್ರಿತ ಕಾರಣವೇ?
·        ಒಳವಲಸೆ ಬರುತ್ತಿರುವವರು ಎಲ್ಲಿಂದ ಬರುತ್ತಿದ್ದಾರೆ? ಅವರು ಬರುತ್ತಿರುವ ಪ್ರಾಂತಗಳಲ್ಲಿರುವ ತೊಂದರೆಗಳೇನು?
·        ಬೆಂಗಳೂರಿಗೇ ಪ್ರತ್ಯೇಕವಾಗಿ ವರ್ತಿಸುವಂತಹ ಆರ್ಥಿಕ ಚಟುವಟಿಕೆಗಳು ಏನು? ಬೆಂಗಳೂರಿನಂತಹುದೇ ಅನೇಕ ಕೇಂದ್ರಗಳನ್ನು ರಾಜ್ಯದಲ್ಲಿ ನಿರ್ಮಿಸುವುದು ಸಾಧ್ಯವೇ?

ಈ ಪ್ರಶ್ನೆಗಳನ್ನು ಭಾಷಾ ಹೋರಾಟದ, ಸಂಸ್ಕೃತಿಯನ್ನು ರಕ್ಷಿಸುವ, ಹೊರನಾಡಿಗರಿಗೆ ನಗರವನ್ನು ಮುಚ್ಚುವ ದೃಷ್ಟಿಯಿಂದ ಕೇಳುತ್ತಿಲ್ಲ. ಆ ದೃಷ್ಟಿಯಿಂದ ಪ್ರಶ್ನೆಗಳನ್ನು ಕೇಳಲು ಸಾಕಷ್ಟು ಜನರೂ ಕನ್ನಡಪರ ಗುಂಪುಗಳೂ ಇವೆ. ಈ ಪ್ರಶ್ನೆಯನ್ನು ಆರ್ಥಿಕ ದೃಷ್ಟಿಯಿಂದ ಕೇಳಿದಾಗ ನಮಗೇನು ಜವಾಬು ಸಿಗಬಹುದು?

ದುರಾದೃಷ್ಟವಶಾತ್ತು ಬಜೆಟ್ಟುಗಳನ್ನು ರೂಪಿಸುವಾಗ ಈ ಇಂಥ ಪ್ರಶ್ನೆಗಳನ್ನು ಯಾರೂ ಕೇಳುವುದಿಲ್ಲ. ರಾಜ್ಯದಲ್ಲಿ ಒಂದೇ ಪ್ರಮುಖ ನಗರವಿದ್ದಾಗ ಆಗುವ ದುರಂತವಿದು. ಬೆಂಗಳೂರೇತರ ನಗರ-ಪಟ್ಟಣ-ಪೇಟೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಬಜೆಟ್ಟು ಏನು ಹೇಳುತ್ತದೆ? ಮೈಸೂರು-ಮಂಗಳೂರು-ಹುಬ್ಬಳ್ಳಿ-ಬೆಳಗಾವಿಗಳಿಗೆ ಮೇಲ್ಸೇತುವೆಗಳು, ಸಾರಿಗೆ ಸೌಲಭ್ಯ, ಸಭಾಭವನಗಳು, ಬೇಕಿಲ್ಲವೇ? ವಲಸೆ ಹೋಗುವ ಜನರು ಬೆಂಗಳೂರನ್ನೇ ಆಯ್ದುಕೊಳ್ಳುತ್ತಿದ್ದಾರೆಯೇ ಅಥವಾ ಬೇರೆ ದಾರಿಯಿಲ್ಲದೆಯೇ ಬೆಂಗಳೂರಿಗೆ ಬರುತ್ತಿದ್ದಾರೆಯೇ? ಬೆಂಗಳೂರಿಗಾಗುತ್ತಿರುವ ಅನೈಚ್ಛಿಕ ಒಳವಲಸೆಯನ್ನೂ ನಗರದ ಅನೈಚ್ಛಿಕ ಬೆಳವಣಿಗೆಯನ್ನೂ ತಡೆಯುವುದು ಹೇಗೆ? ಈ ದೃಷ್ಟಿಯಿಂದ ರಾಜ್ಯದ ಬಜೆಟ್ಟನ್ನು ನೋಡಿದಾಗ ನಮಗೆ ಅಸಮಾಧಾನವೇ ಆದೀತು. ರಾಜ್ಯದ ಇತರ ಗ್ರಾಮೇತರ ಪ್ರದೇಶಗಳಿಗೆ ಈ ಬಜೆಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನ ವಿತ್ತ-ಮುಖ್ಯಮಂತ್ರಿಗಳು ಕೊಟ್ಟಿಲ್ಲ.

ದೆಹಲಿಯಲ್ಲಿದ್ದ ರಾಮಚಂದ್ರ ಗುಹಾ ಖಾಯಂ ಬೆಂಗಳೂರಿಗರಾಗಲು ಶಾನಭಾಗರ ಪ್ರೀಮಿಯರ್ ಮತ್ತು ಮೂರ್ತಿಯವರ ಸೆಲೆಕ್ಟ್ ಬುಕ್ಸೇ ಕಾರಣವೆಂದು ಒಮ್ಮೆ ಹೇಳಿದ್ದರು. ರಾಮ್ ರ ಈ ಒಳವಲಸೆ ಐಚ್ಛಿಕವಾದ, ಆಲೋಚನಾಪೂರ್ಣ ವಲಸೆಯಾಗುತ್ತದೆ. ಆದರೆ ಬೇರಾವ ದಾರಿಯೂ ಕಾಣದೇ ಕೃಷಿಯ ವೈಫಲ್ಯದಿಂದಾಗಿ – ಗ್ರಾಮದ ಆರ್ಥಿಕತೆಯಲ್ಲಿ ಜೀವನೋಪಾಯವು ದುಸ್ತರವಾಗಿ ಅನಿವಾರ್ಯವಾಗಿ ಬೆಂಗಳೂರಿಗೆ ಬರುವವರನ್ನು ತಡೆಯುವುದು ಹೇಗೆ?

ಗ್ರಾಮವೆಂದರೆ ಕೃಷಿಯೆಂಬ ತೀವ್ರ ದೃಕ್ಪಥದಿಂದಲೂ ನಮಗೆ ಲಾಭ ಆಗಬಹುದಿತ್ತು. ಕೃಷಿಗೆ ಮೀಸಲಾಗಿಟ್ಟಿರುವ ಆರ್ಥಿಕ ಸಂಪನ್ಮೂಲಗಳಿಂದಲೇ ನಮ್ಮ ಕೃಷಿ ಆರ್ಥಿಕವಾಗಿ ಲಾಭದಾಯಕವಾಗಬೇಕಿತ್ತು. ಕೃಷಿಯಿಂದಾಗಿ ಗ್ರಾಮದಿಂದ ಹೊರವಲಸೆಯಾಗದ ಪರಿಸ್ಥಿತಿ ಇರಬೇಕಿತ್ತು. ಆದರೆ ಕೃಷಿಗೂ ಗ್ರಾಮೀಣಾಭಿವೃದ್ಧಿಗೂ ಮೀಸಲಿಟ್ಟಿರುವ ಸಂಪನ್ಮೂಲಗಳು ಕೃಷಿಯನ್ನು ಲಾಭದಾಯಕವಾದ ಕಾಯಕವನ್ನಾಗಿಸುವುದರಲ್ಲಿ ವಿಫಲಗೊಂಡಿವೆ. ಈ ದುಡ್ಡು ಬಡ್ಡೀರಹಿತ ಸಾಲದತ್ತ ಹರಿದಿದೆ. ಅದೇ ದುಡ್ಡು ಉತ್ಪಾದಕತೆಯನ್ನು ಬೆಳೆಸುವತ್ತ – ಕೃಷಿ ವಿಸ್ತರಣಾ ಸೇವೆಗಳನ್ನು ಒದಗಿಸುವತ್ತ ಕೇಂದ್ರೀಕರಿಸಬಹುದಿತ್ತು. ಉತ್ಪಾದಕತೆ ಬೆಳೆಯದಿದ್ದರೆ, ಪೈರು ನಾಶವಾದರೆ ಈ ಬಡ್ಡೀರಹಿತ ಸಾಲದಿಂದ ರೈತರು ಏನು ಮಾಡಲಿಕ್ಕೆ ಸಾಧ್ಯ? ದೇಶದಾದ್ಯಂತ ರೈತರ ಆತ್ಮಹತ್ಯೆಯ ಸುದ್ದಿ ಬರುತ್ತಿರುವುದಕ್ಕೆ, ಬಜೆಟ್ಟಿನಲ್ಲಿ ಕೃಷಿಗೆ ಇಟ್ಟಿರುವ ಆರ್ಥಿಕ ಸಂಪನ್ಮೂಲಗಳು ಸಾಲದಿರುವುದು ಕಾರಣವೇ ಅಲ್ಲ. ಆದರೆ ಆ ಹಣ ಯಾವ ದಿಕ್ಕಿನಲ್ಲಿ ಹರಿಯುತ್ತಿದೆ ಎನ್ನುವುದನ್ನು ನಾವು ನೋಡಬೇಕು.

ದೊಡ್ಡ ನಗರಗಳಾಚೆಗಿನ ಕೃಷಿಯೇತರ ಉದ್ಯಮದ ಬಗ್ಗೆ ಈ ಬಜೆಟ್ಟು ಚಕಾರವನ್ನೂ ಉಸುರುವುದಿಲ್ಲ. ಕ್ಲಸ್ಟರ್ ಅಭಿವೃದ್ಧಿ ಯೋಜನೆಗಳೆಲ್ಲಿ? ಅತೀ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳೆಲ್ಲಿ? ಬಜೆಟ್ಟು ಈ ಎಲ್ಲವನ್ನೂ – ಅಂದರೆ ಬೆಂಗಳೂರಾಚೆಯ ಗ್ರಾಮೇತರ-ಕೃಷಿಯೇತರ ಆರ್ಥಿಕ ಚಟುವಟಿಕೆಗಳನ್ನು ದಿವ್ಯ ನಿರ್ಲಕ್ಷ್ಯದಿಂದ ನೋಡುತ್ತದೆ. ಗ್ರಾಮಕ್ಕೂ-ನಗರಕ್ಕೂ, ಕೃಷಿಗೂ-ಉದ್ಯಮಕ್ಕೂ ಕಟ್ಟಿರುವ ಅಭೇದ್ಯ ಗೋಡೆ ಸರಹದ್ದುಗಳನ್ನು ಮೀರಿದ ಹೊರತು, ರಾಜ್ಯದ ಒಟ್ಟಾರೆ ಪ್ರಗತಿಯಾಗುವುದಿಲ್ಲ. ರಾಜ್ಯದ ಇತರೆಡೆ ಪ್ರಗತಿಯಾಗದಿದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುವುದೂ ಇಲ್ಲ. ಹೀಗಾಗಿ ರೂ.8,640 ಕೋಟಿ ಪಡೆದಿರುವ ಬೆಂಗಳೂರಿಗರು ಸಮಾಧಾನಕ್ಕಿಂತ ಹೆಚ್ಚು ಆತಂಕವನ್ನೇ ತೋರಬೇಕಾಗುತ್ತದೆ.

ಭಾನುವಾರ, 14 ಜುಲೈ 2013