ಈಚಿನ ರಾಜಕೀಯ ಬೆಳವಣಿಗೆಯ ನಡುವೆ ಗರಮಾಗರಂ ಚರ್ಚೆಗೆ ಒಳಗಾಗಿರುವುದು ಅಮಾರ್ತ್ಯ
ಸೇನ್ ಮತ್ತು ಜಗದೀಶ್ ಭಗವತಿಯವರ ಅರ್ಥಶಾಸ್ತ್ರದ ಜಟಾಪಟಿ. ಇದು ದೇಶದ ಪ್ರಗತಿಯ ಹಾದಿಯನ್ನು
ಆರಿಸಿಕೊಳ್ಳುವ ಜಟಾಪಟಿಯೂ ಹೌದು. ಆದರೆ ದುರಂತವೆಂದರೆ ಅದನ್ನು ರಾಜಕೀಯ ಪಕ್ಷಗಳ ಪರ-ವಿರೋಧವಾಗಿ
ನಿಲ್ಲಿಸಿ ಕಪ್ಪು-ಬಿಳುಪಿನಲ್ಲಿ ಬಣ್ಣಿಸುವ ಪ್ರಕ್ರಿಯೆ ಪ್ರಾರಂಭವಾಗಿಬಿಟ್ಟಿದೆ. ಯಾರು
ಮಾರುಕಟ್ಟೆ ಪರ, ಯಾರು ವಿರೋಧಿಗಳು, ಯಾರು ದೇಶವನ್ನು ಲೈಸೆನ್ಸ್ ರಾಜ್ ಕಡೆಗೆ
ಹಿನ್ನಡೆಸುತ್ತಿದ್ದಾರೆ ಎಂದೆಲ್ಲಾ ಚರ್ಚೆಗಳು ಬಂದಿವೆ. ಆದರೆ ಈ ರೀತಿಯ ಚರ್ಚೆಗಳು ಅರ್ಥಶಾಸ್ತ್ರದ
ದಿಗ್ಗಜರಾದ ಇಬ್ಬರಿಗೂ ಮಾಡುತ್ತಿರುವ ಅನ್ಯಾಯವೇ ಆಗಿದೆ. ಮಾರುಕಟ್ಟೆಯನ್ನು ನಂಬುವವರೂ ಬಡತನದ
ಉಚ್ಚಾಟನೆಯ ಮಾರ್ಗಗಳ ಬಗ್ಗೆ ಯೋಚಿಸುತ್ತಾರೆ – ಹಾಗೂ ಅವರನ್ನು ಅರ್ಥವ್ಯವಸ್ಥೆಯಲ್ಲಿ ಒಳಗೊಳ್ಳುವ
ರೀತಿಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಮಾರುಕಟ್ಟೆಯೇ ಆರಾಧ್ಯ ದೇವರೆಂಬ ನಂಬಿಕೆಯನ್ನು
ಪ್ರಶ್ನಿಸುವವರೂ ಮಾರುಕಟ್ಟೆಯ ಚೌಕಟ್ಟನ್ನು ಗುರುತಿಸಿ ಅದರಲ್ಲಿ ನಡೆಯಬೇಕಾದ ಸುಧಾರಣೆಯನ್ನು
ಚರ್ಚಿಸುತ್ತಾರೆಯೇ ಹೊರತು ಮಾರುಕಟ್ಟೆಯನ್ನು ಅಲ್ಲಗಳೆಯುವುದಿಲ್ಲ.
ಬಡತನ-ಪ್ರಗತಿ-ಬೆಳವಣಿಗೆಗಳಿಂದ ದೂರಕ್ಕೆ ಹೋಗಿ ಒಂದು ಸಾಫ್ಟವೇರ್ ಸಂಸ್ಥೆಯನ್ನು
ರೂಪಿಸಬಹುದಾದ ಎರಡು ಮಾರ್ಗಗಳನ್ನು ಚರ್ಚಿಸಿದರೆ ನಮಗೆ ಎರಡೂ ಮಾರ್ಗಗಳಲ್ಲಿರುವ ಸೂಕ್ಷ್ಮ
ವ್ಯತ್ಯಾಸಗಳು ತಿಳಿಯಬಹುದು. ಭಾರತದ ಪ್ರಮುಖ ಸಾಫ್ಟವೇರ್ ಕಂಪನಿಯೊಂದರ ಉದಾಹರಣೆಯನ್ನು
ತೆಗೆದುಕೊಳ್ಳೋಣ. ಅಣುಸ್ಥಾವರ ನಿರ್ಮಾಣ, ತೈಲ ಬೆಲೆ ಪರಿಷ್ಕರಣೆ, ಏರ್‌ಲೈನ್ ವ್ಯಾಪಾರಗಳು
ಬಂಡವಾಳಕೇಂದ್ರಿತ ವ್ಯಾಪಾರಗಳಾಗಿರುತ್ತವೆ. ಅಲ್ಲಿ ಬಂಡವಾಳ ಹೂಡದಿದ್ದರೆ ವ್ಯಾಪಾರ
ಮುಂದುವರೆಯುವುದು ಸಾಧ್ಯವಿಲ್ಲ. ಆದರೆ ಬೌದ್ಧಿಕತೆಯನ್ನೂ ಆಲೋಚನಾ ಕುಶಲತೆಯನ್ನೂ
ಉಪಯೋಗಿಸುವ ಸಾಫ್ಟವೇರ್ ಸಂಸ್ಥೆಗಳು ಬಂಡವಾಳ ಕೇಂದ್ರಿತ
ಸಂಸ್ಥೆಗಳಲ್ಲ. ಅವು ಉದ್ಯೋಗಿಗಳ ಕೌಶಲ್ಯದ ಮೇಲೆ
ನಡೆಯುವ ಸಂಸ್ಥೆಗಳು. ಗೂಗಲ್ ಆಗಲೀ, ಆಪಲ್ ಆಗಲೀ, ಮೈಕ್ರೋಸಾಫ್ಟ್ ಆಗಲೀ, ನಿರಂತರ ಹೊಸ
ಆಲೋಚನೆಗಳು, ಹೊಸ ಐಡಿಯಾಗಳ ಆಧಾರದ ಮೇಲೆಯೇ ಮಾರುಕಟ್ಟೆಯ ಮುಂಚೂಣಿಯಲ್ಲಿ ನಿಂತಿರುತ್ತವೆ.
ಹೀಗಾಗಿಯೇ ನೀವು ಯಾವುದೇ ಸಾಫ್ಟವೇರ್ ಕಂಪನಿಯ ಆಸ್ತಿ-ಬಾಧ್ಯತೆಗಳ ಪಟ್ಟಿ ನೋಡಿದಾಗ ಅವು ಬಹುತೇಕ
ಋಣಮುಕ್ತವಾಗಿರುತ್ತವೆ. ಇವುಗಳಲ್ಲಿ ಬಹಳಷ್ಟು ಸಂಸ್ಥೆಗಳು
ಲಾಭದ ದುಡ್ಡನ್ನು ಬ್ಯಾಂಕು ಮತ್ತು ಇತರೆಡೆ ಹೂಡಿಕೆ ಮಾಡುವುದು ವಾಡಿಕೆ.
ರೂ.10,000 ಬಂಡವಾಳದಿಂದ ಪ್ರಾರಂಭವಾದ ಭಾರತದ ಒಂದು ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯ
ಮೂಲ ಬಂಡವಾಳ 1992ರಲ್ಲಿ 2 ಕೋಟಿ ರೂಪಾಯಿಗಳಷ್ಟಿತ್ತು. ನಂತರ ಮಾರುಕಟ್ಟೆಯಿಂದ ಒಂದಿಷ್ಟು
ಬಂಡವಾಳವನ್ನು ಆ ಕಂಪನಿ ಸಂಗ್ರಹಿಸಿತು. ಇಂದಿಗೆ ಆ ಹಣ ರೂ.287 ಕೋಟಿಯಷ್ಟು ಬಂಡವಾಳವಾಗಿ ಬೆಳೆದಿದೆ.
ಇದು ಈ ಪ್ರಮಾಣಕ್ಕೆ ಬೆಳೆದದ್ದು ಆರ್ಜಿಸಿದ ಲಾಭವನ್ನು ಬಂಡವಾಳವಾಗಿ ಪರಿವರ್ತಿಸಿದ್ದರಿಂದ. ಇಂದಿಗೆ ಆ ಸಂಸ್ಥೆಯು ಆರ್ಜಿಸಿ ಹಂಚದ ಲಾಭವೇ ರೂ. 35,000
ಕೋಟಿಗೂ ಮೀರಿ ಇದೆ. ಸುಮಾರು ರೂ.4,000 ಕೋಟಿಗಳ ಸ್ಥಿರಾಸ್ತಿಯಿರುವ ಈ ಸಂಸ್ಥೆಯ ಬಳಿ ರೊಕ್ಕವೇ ರೂ.20,000
ಕೋಟಿಗಳಷ್ಟಿದೆ. ಒಟ್ಟಾರೆ ರೂ.36,000 ಕೋಟಿಗಳಷ್ಟು ವ್ಯಾಪಾರ ಮಾಡುತ್ತಿರುವ ಈ ಸಂಸ್ಥೆಯ
ಮುಖ್ಯವಾದ ಖರ್ಚು ಉದ್ಯೋಗಿಗಳಿಗೆ ಸಂಬಳವಾಗಿ ನೀಡುತ್ತಿರುವ ರೂ.20,000 ಕೋಟಿ ರೂಪಾಯಿಗಳು. ಮಿಕ್ಕ ಖರ್ಚು, ತೆರಿಗೆಗಳನ್ನು ಕಳೆದರೆ ಸುಮಾರು ರೂ.9,000
ಕೋಟಿಗಳ ಲಾಭವನ್ನು ಈ ಸಂಸ್ಥೆ ಆರ್ಜಿಸಿರುವುದಲ್ಲದೆ, ಸುಮಾರು ರೂ.2,500 ಕೋಟಿಗಳಷ್ಟು
ಲಾಭಾಂಶವನ್ನು ಹಂಚಿಕೊಟ್ಟಿದೆ. ಇದರಲ್ಲಿ ಮೂಲ ಬಂಡವಾಳ ಹಾಕಿದವರಿಗೆ ಸುಮಾರು ರೂ.380 ಕೋಟಿಯಷ್ಟು
ಹಣ ಸಂದುತ್ತದೆ. ಅಷ್ಟೇ ಅಲ್ಲದೇ ಮೂಲ ಬಂಡವಾಳ ಹಾಕಿದವರು ಷೇರುಗಳ ಮುಖಬೆಲೆ ರೂ.46
ಕೋಟಿಗಳಿದ್ದರೂ ಮಾರುಕಟ್ಟೆಯ ದರ ಇಂದಿಗೆ ರೂ.26,000 ಕೋಟಿಗಳ ಮಟ್ಟದಲ್ಲಿದೆ.
ಬಂಡವಾಳವೇ ಮೂಲವೆಂದು ನಂಬಿರುವ ಮಾರುಕಟ್ಟೆಯ ದಾರಿಯನ್ನು ಹಿಡಿದು ಹೊರಟು ನೋಡಿದರೆ
ಇದರಿಂದ ದೇಶಕ್ಕೆ ಒಳಿತಾಗಿದೆಯೇ. ಖಂಡಿತವಾಗಿಯೂ ಆಗಿದೆ. ಈ ಸಂಸ್ಥೆಯಿಂದಾಗಿ ಒಂದು ಲಕ್ಷಕ್ಕಿಂತ
ಹೆಚ್ಚಿನ ಜನರಿಗೆ ಉದ್ಯೋಗಾವಕಾಶ ದೊರೆತಿದೆ. ದೇಶಕ್ಕೆ ವಿದೇಶೀ ವಿನಿಮಯದಿಂದ ಹಣ ಬಂದಿದೆ. ಕಳೆದ
ವರ್ಷ ರೂ.3,000 ಕೋಟಿಗಳಷ್ಟು ತೆರಿಗೆಗಳನ್ನು ಕಟ್ಟಿರುವುದರಿಂದ ಬೊಕ್ಕಸಕ್ಕೆ ಹಣ ಸಂದಿದೆ.
ಸಂಸ್ಥೆ ಪ್ರತೀ ವರ್ಷ ತನ್ನ ಲಾಭಾಂಶದಿಂದ ಒಂದು ಭಾಗವನ್ನು ಸಮಾಜೋದ್ಧಾರದ ಕೆಲಸಗಳಿಗಾಗಿಯೇ
ಮೀಸಲಾಗಿಡುವುದರಿಂದ ಆ ಕಾರ್ಯಕ್ಕೆ ಸುಮಾರು ರೂ.90 ಕೋಟಿಗಳ ಧನವೂ ಲಭ್ಯವಿದೆ. ಇದರಲ್ಲಿ ನಮಗೆ
ಯಾಕೆ ತೊಂದರೆಗಳು ಕಾಣಬೇಕು?
ಈಗ ಸಂಸ್ಥೆಯಲ್ಲಿ ಹೂಡಿಕೆದಾರರೂ-ಉದ್ಯೋಗಿಗಳೂ
ಆಗಿರುವ ಇಬ್ಬರು ವ್ಯಕ್ತಿಗಳ ಆದಾಯವನ್ನು ನಾವು ನೋಡೋಣ. ಇಬ್ಬರಿಗೂ ತಲಾ ಸುಮಾರು ರೂ.50 ಲಕ್ಷ
ವಾರ್ಷಿಕ ಸಂಬಳವಿತ್ತಾದರೂ, ಲಾಭಾಂಶ ಹಂಚಿಕೆಯಿಂದ ಬಂದ ಆದಾಯ ಒಬ್ಬರಿಗೆ ರೂ.55 ಕೋಟಿ,
ಮತ್ತೊಬ್ಬರಿಗೆ ರೂ.20 ಕೋಟಿಗಳು. ಅರ್ಥಾತ್ –
ಬರೇ ಬಂಡವಾಳ ಹೂಡಿ ಸುಮ್ಮನೇ ಕೂತದ್ದರಿಂದಲೇ ಅವರಿಗೆ ಹೆಚ್ಚಿನ ಆದಾಯ ಬಂತೇ ಹೊರತು,
ಕೆಲಸಮಾಡಿದ್ದಕ್ಕೆ ಬಂದ ಸಂಬಳವು ಆ ಮೊತ್ತಕ್ಕೆ ಹೋಲಿಸಿದರೆ ತೀರಾ ಕಡಿಮೆ.
ಸಮತಾವಾದದ ಪ್ರತಿಪಾದಕರು ಇದನ್ನು ಹೇಗೆ ನೋಡಬಹುದು? ಇದ್ದಕ್ಕಿದ್ದ ಹಾಗೆ ಒಂದು ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ
ಸಂಸ್ಥೆಗಳಿಗೆ ಸಾಮಾನ್ಯಕ್ಕಿಂತ ಅತಿಯಾದ ಲಾಭ ಬರುತ್ತಿದೆಯೆಂದರೆ ಆ ಕ್ಷೇತ್ರಕ್ಕೆ ಯಾವ
ಸವಲತ್ತುಗಳನ್ನು ಕೊಡಬೇಕು, ಮತ್ತು ಯಾವರೀತಿಯ ತೆರಿಗೆಗಳನ್ನು ಹೇರಬೇಕು ಎನ್ನುವ ಪ್ರಶ್ನೆಯನ್ನು
ಕೇಳಬಹುದು.
ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು
ಕೇಂದ್ರೀಕೃತವಾಗದೇ ಆ ಸಂಪತ್ತು ವಿಸ್ತೃತವಾಗಿ ಹಂಚಿಕೆಯಾಗುವುದು ಹೇಗೆ? ಎಡಪಂಥೀಯ ವಿಚಾರಧಾರೆಯು ಇದನ್ನು ರಾಷ್ಟ್ರೀಕರಣದತ್ತ-ಸಮಾನತೆಯ
ಸಿದ್ಧಾಂತದತ್ತ ಒಯ್ಯುತ್ತದೆ. ಎಡಪಂಥೀಯ ವಿಚಾರಧಾರೆ ಮಾರುಕಟ್ಟೆಯನ್ನು ನಿರಾಕರಿಸಿದರೂ ಮಿಕ್ಕ
ವಿಚಾರಧಾರೆಗಳು ಮಾರುಕಟ್ಟೆಯ ಸೂತ್ರದಡಿಯಲ್ಲಿಯೇ ಈ ವ್ಯಾಪಾರದ ಲಾಭನಷ್ಟಗಳನ್ನು ಬೇರೆ ರೀತಿಯಿಂದ ಹಂಚಬಹುದಾದ
ಪ್ರಯತ್ನವನ್ನು ಮಾಡುತ್ತವೆ.
ಭಗವತಿಯಂತಹ ಅರ್ಥಶಾಸ್ತ್ರಜ್ಞರು ಈ ರೀತಿಯಾದಂತಹ
ಉದ್ಯಮಶೀಲತೆಯಿರುವುದರಿಂದ ಎಷ್ಟೋ ಜನರಿಗೆ ಉದ್ಯೋಗಾವಕಾಶವೂ ದೊರೆತು, ಸರಕಾರಕ್ಕೆ ಹೆಚ್ಚಿನ
ತೆರಿಗೆಯೂ ಬಂದು, ಉದ್ಯಮಶೀಲತೆಗೆ ಒಂದು ಪ್ರೋತ್ಸಾಹವನ್ನೂ ಕೊಟ್ಟಂತಾಗುತ್ತದೆ ಎಂದು
ವಾದಿಸುತ್ತಾರೆ. ಆದರೆ ಅಮಾರ್ತ್ಯ ಸೇನ್ ತರಹದ ಅರ್ಥಶಾಸ್ತ್ರಜ್ಞರು ಈ ಉದ್ಯಮದಲ್ಲಿ ನೌಕರಿ
ಗಿಟ್ಟಿಸುವ ಈ ಲಕ್ಷ ಮಂದಿ ತಯಾರಾಗುವುದು ಹೇಗೆ, ಅವರು ಕ್ಷಮತೆಯಿಂದ ಈ ಉದ್ಯಮದಲ್ಲಿ ಕೆಲಸ
ಮಾಡಬೇಕಾದರೆ ನಮ್ಮ ಸಮಾಜ ಯಾವ ರೀತಿಯಲ್ಲಿ ಆ ಲಕ್ಷಮಂದಿಯನ್ನು ತಯಾರು ಮಾಡಬೇಕು ಎನ್ನುವ
ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಯನ್ನು ಕೇಳಿದಾಗ – ಬರೇ ಉದ್ಯಮಶೀಲತೆಯ ಆಧಾರದ ಮೇಲೆಯೇ
ಎಲ್ಲವೂ ನಿರ್ಧಾರವಾಗಿದ್ದರೆ ಈ ಸಂಸ್ಥೆಗಳಲ್ಲಿ ಕೆಲಸಕ್ಕೆ ಹೋಗುವ ಉದ್ಯೋಗಿಗಳ ತರಬೇತಿಯ ಒಂದು
ಮಾರುಕಟ್ಟೆಯೂ ತಯಾರಾಗುತ್ತದೆ. ಆದರೆ ಆ ಮಾರುಕಟ್ಟೆಯಲ್ಲಿ ಆ ತರಬೇತಿಯನ್ನು ಪಡೆಯಲೂ ಆರ್ಥಿಕ
ಸವಲತ್ತುಗಳು ಬೇಕು. ಅಮಾರ್ತ್ಯ ಸೇನ್ ಈ ರೀತಿಯ ವಿದ್ಯೆಯನ್ನಾರ್ಜಿಸುವ ಸವಲತ್ತನ್ನು ಸರಕಾರ
ಬಡವರಿಗೆ ಒದಗಿಸಿಕೊಡಬೇಕು, ಹೀಗಾಗಿ ಹೆಚ್ಚೆಚ್ಚು ಶಾಲೆಗಳನ್ನು ನಡೆಸಬೇಕು, ಅಲ್ಲಿ ಮಧ್ಯಾಹ್ನದ
ಬಿಸಿಯೂಟ ಕೊಟ್ಟು ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕು, ಇದು ಸರಕಾರದ ಧರ್ಮ ಎಂದು ಹೇಳಿದರೆ,
ಭಗವತಿಯಂಥಹವರು ಸರಕಾರ ಪಡೆದ ತೆರಿಗೆಯಿಂದ ಬಡವರಿಗೆ ಹಣದ ರೂಪದಲ್ಲಿ, ಅಥವಾ ವೋಚರುಗಳ ಮೂಲಕ
ದುಡ್ಡನ್ನು ಹಂಚಿ, ಮಕ್ಕಳನ್ನು ಯಾವ ಶಾಲೆಗೆ ಕಳುಹಿಸಬೇಕೆಂಬ ಆಯ್ಕೆಯನ್ನು ಬಡವರಿಗೇ ನೀಡಬೇಕೆಂದು
ವಾದಿಸುತ್ತಾರೆ.
ಈ ಎರಡೂ ವಾದಗಳಲ್ಲಿಯೂ ಇಬ್ಬರು ಮಹಾನುಭಾವರೂ
ಬಡವರನ್ನು ಮರೆತಿಲ್ಲ. ಆದರೆ ಇಬ್ಬರ ವಾದವಿರುವುದು ಕೋಳಿ ಮೊದಲೋ, ಮೊಟ್ಟೆ ಮೊದಲೋ
ಎನ್ನುವುದರಲ್ಲಿ. ಸೇನ್ ಮೊದಲು ಮೊಟ್ಟೆಯಿದ್ದರೆ – ಅಂದರೆ ಕೋಳಿ ಹುಟ್ಟುವ ಸಾಧನವಿದ್ದರೆ ಆ
ಪ್ರಗತಿಯ ಅಡಿಪಾಯ ಭದ್ರವಾಗಿರುತ್ತದೆ, ಅಲ್ಲಿಂದ ಬೆಳೆದ ಸಮಾಜದ ಆರ್ಥಿಕತೆ ಗಟ್ಟಿಯಾಗಿರುತ್ತದೆ
ಎಂದು ವಾದಿಸುತ್ತಾರೆ. ಭಗವತಿ ಕೋಳಿಯಿಂದ ಪ್ರಾರಂಭ ಮಾಡಿ ಅದರ ಫಲಿತದ ಒಂದಲ್ಲ ಅನೇಕ
ಮೊಟ್ಟೆಗಳನ್ನು ಎಣಿಸಿ, ಅದರಿಂದ ಕೋಳಿಗಳ ಹಿಂಡನ್ನೇ ತಯಾರು ಮಾಡುತ್ತಾರೆ.
ಆದರೆ ಈ ಎರಡು ವಾದಗಳ ನಡುವೆ ಮತ್ತೊಂದು ಸಣ್ಣ
ವಿವರವೂ ಸಿಕ್ಕಿಹಾಕಿಕೊಂಡಿದೆ. ಈ ಸಾಫ್ಟವೇರ್ ಸಂಸ್ಥೆ ಬಂಡವಾಳ ಮೂಲದ ಸಂಸ್ಥೆಯಾಗಿರದೇ
ಉದ್ಯೋಗಿಗಳ ಸಹಕಾರೀ ಸಂಸ್ಥೆಯಾಗಿದ್ದರೆ ಏನಾಗುತ್ತಿತ್ತು? ಮಿಕ್ಕ ಅರ್ಥವ್ಯವಸ್ಥೆ ಹೇಗೇ ಇರಲಿ – ಆ
ಅರ್ಥವ್ಯವಸ್ಥೆಯ ನಿಯಮಗಳ, ಅದೇ ಮಾರುಕಟ್ಟೆ, ತೆರಿಗೆ, ಆರ್ಥಿಕ ನೀತಿಯಡಿಯಲ್ಲಿಯೇ ಈ
ಸಂಸ್ಥೆಯನ್ನೇ ಭಿನ್ನವಾಗಿ ರೂಪಿಸಿದ್ದರೆ? ಅಂದರೆ ಇದು ಉದ್ಯೋಗಿಗಳ ಒಂದು ಸಹಕಾರ
ಸಂಘವಾಗಿದ್ದರೆ, ಆಗ ಬಂಡವಾಳ ಹೂಡಿದವರಿಗೆ ತಮ್ಮ ಬಂಡವಾಳಕ್ಕೆ (ಬ್ಯಾಂಕುಗಳು ನೀಡುವುದಕ್ಕಿಂತ ಹೆಚ್ಚೇ) ವರ್ಷಕ್ಕೆ ಶೇಕಡಾ 20ರ ಬಡ್ಡಿಯನ್ನು ಕೊಟ್ಟರು ಎಂದುಕೊಳ್ಳೋಣ. ಈ ಸಂಸ್ಥೆಯಲ್ಲಿ ಅದು ರೂ.68
ಕೋಟಿಗಳಷ್ಟಾಗುತ್ತದೆ. ಮಿಕ್ಕ ಹಣವನ್ನು ಉದ್ಯೋಗಿಗಳು ತಾವು ಮಾಡಿದ ಕೆಲಸಕ್ಕನುಸಾರವಾಗಿ
ಹಂಚಿಕೊಳ್ಳುತ್ತಿದ್ದರು. ಎಲ್ಲರೂ ಸಮಾನ ದಕ್ಷತೆಯಿಂದ ಕೆಲಸಮಾಡಿ, ಸಮಾನವಾಗಿ ಹಂಚಿದೆವು
ಎಂದುಕೊಂಡರೂ ಲಕ್ಷ ಉದ್ಯೋಗಿಗಳಿಗೆ ತಲಾ ಎಂಟು ಲಕ್ಷರೂಪಾಯಿಗಳು ಸಂದುತ್ತಿದ್ದವು. ಅಂದರೆ
ಬೆರಳೆಣಿಕೆಯಷ್ಟು ಸಹಸ್ರಕೋಟ್ಯಾಧಿಪತಿಗಳನ್ನು ತಯಾರುಮಾಡಿ ಅವರಲ್ಲಿ ಸಂಪತ್ತಿನ
ಕೇಂದ್ರೀಕರಣವನ್ನು ತಪ್ಪಿಸಿ, ಒಂದು ಲಕ್ಷ ಮಂದಿ ಮಿಲಿಯಾಧಿಪತಿಗಳನ್ನು ಈ ಸಂಸ್ಥೆ
ತಯಾರುಮಾಡಬಹುದಿತ್ತು.
ಪ್ರಗತಿ, ಬೆಳವಣಿಗೆ, ಸಮತಾವಾದ, ಸಮಾನತೆಯ ವಿಚಾರಗಳು
ಹೀಗೆ ತುಂಬಾ ಸಂಕೀರ್ಣತೆಯಿಂದ ಕೂಡಿದವುಗಳು. ಇವನ್ನು ಸೇನ್-ಕಾಂಗ್ರೆಸ್, ಭಗವತಿ-ಮೋದಿ ಗಳ
ಸರಳೀಕರಣಕ್ಕಿಳಿಸುವುದು ಭಾರತದ ರತ್ನಗಳಾದ ಇಬ್ಬರಿಗೂ ಅನ್ಯಾಯವೆಸಗಿದಂತೆಯೇ. ಆದರೂ 30
ಸೆಕೆಂಡುಗಳಲ್ಲಿ ಯಸ್-ನೋ ಉತ್ತರ ಬಯಸುವ ನಮ್ಮ ದೃಶ್ಯಮಾಧ್ಯಮಗಳ ಸದ್ದಿನ ನಡುವೆ ಚರ್ಚೆಗೆ
ತಾವೆಲ್ಲಿ?
ಶುಕ್ರವಾರ, 26 ಜುಲೈ 2013
No comments:
Post a Comment