Monday, December 23, 2013

ಆರ್ಥಿಕ ಮಾರುಕಟ್ಟೆಯ ಸಾಧ್ಯತೆಗಳು-ಮಿತಿಗಳು

ರಘುರಾಮ್ ರಾಜನ್ ಭಾರತೀಯ ರಿಜರ್ವ್ ಬ್ಯಾಂಕಿನ ಹೊಸ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಆರಂಭಿಕ ಭಾಷಣ ಆಲಿಸಿದ ಮಾರುಕಟ್ಟೆಗಳು ಸಂತೋಷದಿಂದ ಸ್ವಾಗತಿಸಿವೆ. ಅವರೂ ಮಾರುಕಟ್ಟೆಗೆ ಪ್ರಿಯವಾಗುವ ಮಾತುಗಳನ್ನೇ ಆಡಿದ್ದಾರೆ. ಪಶ್ಚಿಮದಲ್ಲಿ ಆರ್ಥಿಕ ಮಾರುಕಟ್ಟೆಗಳ ತಾಂಡವ ನಡೆಯುತ್ತಿದ್ದಾಗ ಅಪಾಯದ ಗಂಟೆಯನ್ನು ಬಾರಿಸಿದ ಖ್ಯಾತಿ ರಾಜನ್ ಅವರದ್ದು. ಆದರೆ ಹಿಂದಿನ ಮುಖ್ಯಸ್ಥರಾಗಿದ್ದ ರೆಡ್ಡಿ ಮತ್ತು ಸುಬ್ಬಾರಾವುಗಳಿಗೆ ಹೋಲಿಸಿದರೆ ರಾಜನ್ ಮಾರುಕಟ್ಟೆಯ ಕಡೆಗೇ ವಾಲುತ್ತಾರೆ.

ಭಾರತ ಸರಕಾರ 2008ರಲ್ಲಿ ಆರ್ಥಿಕ ವಲಯಕ್ಕೆ ಅವಶ್ಯಕವಾದ ಸುಧಾರಣೆಗಳನ್ನು ಸೂಚಿಸಲು ರಾಜನ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತ್ತು. ಈಗ ಅವರೇ ಆರ್ಥಿಕ ರಂಗದ ಒಂದು ಮುಖ್ಯ ಹುದ್ದೆಯನ್ನಲಂಕರಿಸಿರುವುದರಿಂದ ತಮ್ಮ ವರದಿಯಲ್ಲಿ ಅವರು  ಹೇಳಿದ್ದೇನು – ಅದನ್ನು ಹೇಗೆ ಕಾರ್ಯರೂಪಕ್ಕಿಳಿಸಬಹುದು ಎಂಬುದನ್ನು ನಾವು ಚರ್ಚಿಸಬಹುದು. . ‘ನೂರು ಪುಟ್ಟ ಹೆಜ್ಜೆಗಳು’ ಎಂಬ ಆ ವರದಿ ಒಟ್ಟಾರೆ ಆರ್ಥಿಕ ವಲಯದ ಸುಧಾರಣೆಗಳನ್ನು ಸೂಚಿಸಿತ್ತಾದರೂ, ಇಲ್ಲಿ ನಾವು ಬಡವರಿಗೆ ಸಲ್ಲುವ ಆರ್ಥಿಕ ಸೇವೆಗಳ ಬಗ್ಗೆ ಮಾತ್ರ ಚರ್ಚಿಸೋಣ.

ಆರ್ಥಿಕ ಮಾರುಕಟ್ಟೆಯಲ್ಲಿ ಬಡವರೂ ಭಾಗವಹಿಸಬೇಕಿದ್ದರೆ ಅವರಿಗೆ ಅವಶ್ಯಕವಾದ ಸೇವೆಗಳನ್ನೊದಗಿಸಬೇಕು. ಇದನ್ನು ಸಾಧಿಸಲು ಬ್ಯಾಂಕುಗಳು ಹೆಚ್ಚೆ ಹೆಚ್ಚು ಶಾಖೆಗಳನ್ನು ತೆರೆಯಬೇಕು, ಹೆಚ್ಚು ಏಜೆಂಟರನ್ನು ನೇಮಿಸಬೇಕೆನ್ನುವುದು  ಹಿಂದಿನ ಮುಖ್ಯಸ್ಥರ ಒಲವಾಗಿತ್ತು. ಅದಕ್ಕಾಗಿ ಶೇಕಡಾ 25ರಷ್ಟು ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿ ತೆರೆಯಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿತ್ತು.

ರಾಜನ್ ಅವರ ಆಲೋಚನೆ ಈ ವಿಚಾರದಲ್ಲಿ ಭಿನ್ನವಾಗಿದೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು ಬೇಕು.ಇವುಗಳ ನಡುವೆ ನಡೆಯಬಹುದಾದ ಪೈಪೋಟಿಯೇ ಈ ಸಮಸ್ಯೆಯ ಪರಿಹಾರಕ್ಕೆ  ಒಂದು ಉಪಾಯವೆಂದು ನಂಬಿದ್ದಾರೆ. ಆ ನಂಬಿಕೆಯಲ್ಲಿ ಹುರುಳಿದೆ. ನಾವು ಹೊಸ ಸಂಸ್ಥೆಗಳಿಗೆ ಅವಕಾಶ ನೀಡಿ ಅವು ತರಬಹುದಾದ ನಾವೀನ್ಯವನ್ನು ಸ್ವಾಗತಿಸದಿದ್ದರೆ; ಈಗಿರುವ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಭಾಗವಹಿಸುವ ಪ್ರಕ್ರಿಯೆಯನ್ನು ದುಸ್ತರಗೊಳಿಸಿದರೆ; ಖಾಸಗೀ ಪ್ರಯತ್ನಗಳನ್ನು ಸಂಸ್ಥಾಗತ ಚೌಕಟ್ಟಿನಿಂದ ಹೊರಗಿಟ್ಟರೆ - ಉಳಿಯುವುದು ಬಡ್ಡಿ ವ್ಯಾಪಾರಿಗಳು ಮತ್ತು ಕಾನೂನಿನ ಹಿಡತಕ್ಕೆ  ಸಿಗದ ಅನೌಪಚಾರಿಕ ವ್ಯವಸ್ಥೆಗಳು ಮಾತ್ರ. ಸರಕಾರೀ ಸಂಸ್ಥೆಗಳ ಜೊತೆಗೇ ಖಾಸಗೀ ಸಂಸ್ಥೆಗಳನ್ನೂ ಈ ಕೆಲಸಕ್ಕೆ ಪ್ರೇರೇಪಿಸಬೇಕೆನ್ನುವುದು ರಾಜನ್ ನಿಲುವು. ಆ ನಿಲುವಿನನುಸಾರ ಅವರು ಸಣ್ಣ ಪ್ರಾದೇಶಿಕ ಬ್ಯಾಂಕುಗಳ ಪ್ರಸ್ತಾವನೆಯೊಂದನ್ನು ಮುಂದಿಡುತ್ತಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹ ಪ್ರತಿಪಾದನೆಯಾಗಿದೆ.

ಆ ಮಾತಿನ ಜೊತೆಜೊತೆಗೇ ಸಾರ್ವಜನಿಕ ಕ್ಷೇತ್ರದ ದೊಡ್ಡ ಬ್ಯಾಂಕುಗಳಲ್ಲಿ ಖಾಸಗೀ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ಮಾತನ್ನೂ, ಸರಕಾರದ ಕಪಿಮುಷ್ಠಿಯಿಂದ ಸಾರ್ವಜನಿಕ ಬ್ಯಾಂಕುಗಳನ್ನು ಮುಕ್ತಗೊಳಿಸುವ ಮಾತನ್ನೂ ಅವರು ಆಡುತ್ತಾರೆ. ಮಾರುಕಟ್ಟೆಗಳನ್ನು  ತೆರೆದು ಹೊಸ ಸಂಸ್ಥೆಗಳಿಗೆ ನಾವು ಆಹ್ವಾನ ನೀಡಿ ಸ್ಪರ್ಧೆಯನ್ನು ಸೃಷ್ಟಿಸಬೇಕು  ಎಂಬುದೇನೋ ಸರಿ. ಆದರೆ ಮಾರುಕಟ್ಟೆಯನ್ನು ತೆರೆಯುವುದರ ಅರ್ಥ ಸರಕಾರೀ ಸಂಸ್ಥೆಗಳ ಖಾಸಗೀಕರಣ ಎನ್ನುವುದು ಎಷ್ಟರ ಮಟ್ಟಿಗೆ ಸಮರ್ಪಕ? ಮಾರುಕಟ್ಟೀಕರಣಕ್ಕೂ ಖಾಸಗೀಕರಣಕ್ಕೂ ಇರುವ ಕೊಂಡಿಯನ್ನು ಮುರಿದರೆ ಮಾರುಕಟ್ಟೆಯಲ್ಲಿ ಒಂದು ಭಿನ್ನ ಆಶಯದಿಂದ ಕೆಲಸ ಮಾಡುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳೂ ತಮ್ಮ ದಕ್ಷತೆಯನ್ನು ತೋರಬಹುದು ಇದಕ್ಕೆ ನಮ್ಮ ಭಾರತೀಯ ಸ್ಟೇಟ್ ಬ್ಯಾಂಕೇ ಸಾಕ್ಷಿಯಾಗಿದೆ.

ಬ್ಯಾಂಕುಗಳು ಎಲ್ಲಿ ಬೇಕೋ ಅಲ್ಲಿ ತಮ್ಮ ಶಾಖೆಗಳನ್ನು ತೆರೆಯುವ ಮುಕ್ತ ಅವಕಾಶವನ್ನು ನೀಡಬೇಕೆನ್ನುವುದು ರಘುರಾಮ್ ರಾಜನ್ ಅವರ ಮತ್ತೊಂದು ವಾದ. ಹಿಂದೆ ನಗರದಲ್ಲಿ (ಹೆಚ್ಚು ಅವಕಾಶಗಳಿರುವೆಡೆ) ಒಂದು ಶಾಖೆ ತೆರೆಯಬೇಕೆಂದರೆ, ಈ ಸೌಲಭ್ಯಗಳು ಸಿಗದಿರುವ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಶಾಖೆಗಳನ್ನು ತೆರೆಯಬೇಕೆಂಬ ನಿಯಮವಿತ್ತು. ಈಚೆಗೆ ಶೇಕಡಾ 25ರಷ್ಟು ಶಾಖೆಗಳು ಹಳ್ಳಿಗಾಡಿನಲ್ಲಿರಬೇಕೆಂಬ ನಿಯಮವನ್ನು ಪಾಲಿಸಲಾಗುತ್ತಿದೆ. ಹೊಸ-ಹಳೆಯ ಬ್ಯಾಂಕುಗಳು ಎಲ್ಲಿ ಬೇಕೆಂದರಲ್ಲಿ ಶಾಖೆ ತೆರೆಯಬಹುದೆಂದಾದರೆ ದೇಶದ ಕೆಲವು ಭಾಗಗಳಿಗೆ ಈ ವಿತ್ತೀಯ ಸೇವೆಗಳು ಲಭ್ಯವಾಗುವುದು ಹೇಗೆ? ಈ ಪ್ರಶ್ನೆಯನ್ನು ಕೆಳಗಿನ ಉದಾಹರಣೆಯೊಂದಿಗೆ ಪರಿಶೀಲಿಸಬಹುದು. ಕೇರಳದ ತ್ರಿಶೂರಿನಲ್ಲಿ ಪ್ರತೀ 3,200 ಜನಸಂಖ್ಯೆಗೆ ಒಂದು ಬ್ಯಾಂಕ್ ಶಾಖೆಯಿದೆ. ಬಿಹಾರದ ಪಶ್ಚಿಮ ಚಂಪಾರನ್ ಜಿಲ್ಲೆಯಲ್ಲಿ 74,000 ಜನಸಂಖ್ಯೆಗೆ ಒಂದು ಶಾಖೆಯಿದೆ. ಮಾರುಕಟ್ಟೆಗಳ ನಿಯಮವನ್ನು ಪಾಲಿಸಿದರೆ ಸಹಜವಾಗಿ ಯಾವ ಬ್ಯಾಂಕು ಪಶ್ಚಿಮ ಚಂಪಾರನ್‌ಗೆ ಹೋಗಿ ತನ್ನ ವಿತ್ತೀಯ ಸೇವೆಗಳನ್ನು ನೀಡಬಹುದು? ಅದು ಬಿಡಿ, ಶೇಕಡಾ 25 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿದ್ದ ಮಾತ್ರಕ್ಕೆ  ಅವು ವಿತ್ತೀಯ ಸೇವೆಗಳನ್ನು ನೀಡುತ್ತವೆ ಎಂಬ ನಂಬಿಕೆಯಾದರೂ ಎಷ್ಟರ ಮಟ್ಟಿಗೆ ಸರಿ? ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳ 104 ಶಾಖೆಗಳಿವೆ. ಸರಾಸರಿ 100 ರೂಪಾಯಿಯ ಠೇವಣಿಗೆ ಅವು ಒಟ್ಚಾರೆ 54 ರೂಪಾಯಿಗಳ ಸಾಲವನ್ನು ನೀಡಿವೆ. ಆದರೆ ಅಲ್ಲಿರುವ ಹೊಸ ತಲೆಮಾರಿನ ಖಾಸಗೀ ಬ್ಯಾಂಕುಗಳ ಮೂರು ಶಾಖೆಗಳು ಶೇಖರಿಸಿರುವ 100 ಠೇವಣಿಗೆ ನೀಡಿರುವ ಸಾಲ, ಹತ್ತು ರೂಪಾಯಿ ದಾಟಿಲ್ಲ. ಹೀಗಾಗಿ ಮಾರುಕಟ್ಟೆಯ ಸೂತ್ರಗಳನ್ನೇ ನಂಬಿ ನಡೆವ ಖಾಸಗೀಕರಣದ ಸೂತ್ರವೇ ನಮ್ಮ ಆರ್ಥಿಕ ಒಳಗೊಳ್ಳುವಿಕೆಯ ಸವಾಲಿಗೆ ಜವಾಬೆನ್ನುವುದು ಸರಳ ಹಾಗೂ ಹುರುಳಿಲ್ಲದ ವಾದ.

ರಾಜನ್ ಅವರು ಖಾಸಗೀ ಕ್ಷೇತ್ರದ ಮತ್ತು ಮಾರುಕಟ್ಟೆಗಳ ಮೇಲೆ ತಮ್ಮ ಅಚಲ ನಂಬಿಕೆಯನ್ನು ಸಾಕಾರಗೊಳಿಸಬೇಕಾದರೆ ಈ ಹಿಂದುಳಿದ ಕ್ಷೇತ್ರಗಳನ್ನು ಖಾಸಗೀ – ಮತ್ತು ಅವರು ಪ್ರತಿಪಾದಿಸುತ್ತಿರುವ ಕ್ಷೇತ್ರೀಯ, ಪ್ರಾಂತೀಯ, ಸ್ಥಳೀಯ ಬ್ಯಾಂಕುಗಳಿಗೆ ತೆರವು ಮಾಡಿಕೊಡಬೇಕು. ಒಂದೆರಡು ಕ್ಷೇತ್ರೀಯ ಗ್ರಾಮೀಣ ಬ್ಯಾಂಕುಗಳನ್ನು ಖಾಸಗೀಕರಣಕ್ಕೊಡ್ಡಬೇಕು. ಆಗ ಆ ವ್ಯಾಪಾರವನ್ನು ಮಾಡಲು ಎಷ್ಟು ಸಂಸ್ಥೆಗಳು ಪೈಪೋಟಿ ನಡೆಸುತ್ತವೆ ಎಂದು ನೋಡಿದ ಕೂಡಲೇ ಅವರಿಗೆ ಮಾರುಕಟ್ಟೆಯ ಮಿತಿಗಳು ಅರ್ಥವಾಗುತ್ತವೆ. ಸಾಮಾನ್ಯವಾಗಿ  ಮಾರುಕಟ್ಟೆ ದಕ್ಷವಾಗಿ ನಡೆಯುತ್ತದಾದರೂ, ಪಶ್ಚಿಮ ಚಂಪಾರನ್ ರೀತಿಯ ಜಾಗಗಳನ್ನು ಗುರುತಿಸದಿರುವುದೇ ಮಾರುಕಟ್ಟೆಯ ವೈಫಲ್ಯದ ಸಂಕೇತವಾಗುತ್ತದೆ.

ರಾಜನ್ ಅವರ ನೂರು ಪುಟ್ಟ ಹೆಜ್ಜೆಗಳಲ್ಲಿ ಇರುವ ಮತ್ತೊಂದು ಅಪಾಯಕಾರಿ ಹೆಜ್ಜೆ ಪ್ರಯಾರಿಟಿ ಸೆಕ್ಟರ್ ಲೆಂಡಿಂಗ್ ನೋಟ್ಸ್ (ಪಿ.ಎಸ್.ಎಲ್.ಎನ್)ಗೆ ಸಂಬಂಧಿಸಿದ್ದು. ಬ್ಯಾಂಕುಗಳು ನೀಡುವ ಪ್ರತೀ ಸಾಲದಲ್ಲಿ ಶೇಕಡಾ 40ರಷ್ಟು ದೇಶದ ಆದ್ಯತೆಯ ಕ್ಷೇತ್ರಗಳಿಗೆ ನೀಡಬೇಕು. ಅದರಲ್ಲಿ ಶೇಕಡ 18ರಷ್ಟು ಕೃಷಿಗೆ ಮೀಸಲಿಟ್ಟಿದ್ದರೆ, ಮಿಕ್ಕಂತೆ ಸಣ್ಣ ಉದ್ಯಮ, ವಸತಿ, ವಿದ್ಯೆ, ದುರ್ಬಲ ವರ್ಗದ ಜನರ ಸಾಲ, ಹೀಗೆ ಬೇರೆ ಸಾರ್ವಜನಿಕ ಹಿತದಿಂದ ಕೂಡಿದ ಆದ್ಯತೆಗಳ ಪಟ್ಟಿಯಿದೆ. ಇದನ್ನು ಆದ್ಯತಾ ಬಾಧ್ಯತೆ ಎಂದು ಕರೆಯಬಹುದು. (ಬ್ಯಾಂಕುಗಳಲ್ಲದೇ) ಬೇರಾರಾದರೂ ಈ ಆದ್ಯತಾ ಬಾಧ್ಯತೆಯ ಸಾಲವನ್ನು ನೀಡಿದ್ದರೆ, ಆ ಸಂಸ್ಥೆ ನೀಡಿದ ಸಾಲದ ಮೊಬಲಗಿಗೆ ಸರಿಹೊಂದುವ ಒಂದು ಮಾಹಿತಿ ಪತ್ರವನ್ನು ಬ್ಯಾಂಕುಗಳು ಕೊಂಡು ತಮ್ಮ ಜವಾಬ್ದಾರಿಯನ್ನು ತೊಳೆದುಕೊಳ್ಳಬಹುದು. ಇದು ಆಕ್ಟಿವ್ ದರ್ಶನದಲ್ಲಿ ಟಿವಿಯ ತೆರೆಯ ಮೇಲೆ ತಿಮ್ಮಪ್ಪನ ದರ್ಶನ ಪಡೆದು ಧನ್ಯರಾಗುವ ರೀತಿ, ಅಥವಾ ಹೆಲಿಕಾಪ್ಟರಿನಲ್ಲಿ ವೈಷ್ಣೋದೇವಿ ತಲುಪಿ ಅನಾಯಾಸವಾಗಿ ವಿಐಪಿ ದರ್ಶನ ಪಡೆವ ರೀತಿ. ಆದರೆ ಇದರಲ್ಲಿ ಎರಡು ತೊಡಕುಗಳಿವೆ.

ಮೊದಲನೆಯದು ಆದ್ಯತಾ ಬಾಧ್ಯತೆ ಎಂಬುದು ಬ್ಯಾಂಕುಗಳು ಪಾಲಿಸಬೇಕಾದ ನಿಯಮ. ಈ ನಿಯಮವನ್ನು ಹೇಗಾದರೂ ಮಾಡಿ ಸಾಲ ಕೊಡಿಸಬೇಕು ಎಂಬುದಕ್ಕಾಗಿ ರೂಪಿಸಲಾಗಿಲ್ಲ. ಬದಲಿಗೆ ಬ್ಯಾಂಕಿನ ನಿಯಮಾವಳಿಯನುಸಾರ ಗ್ರಾಹಕರ ಹಿತದೃಷ್ಟಿ ಕಾಪಾಡುತ್ತಾ  ಈ ಸಾಲಗಳು ಬಡವರಿಗೂ-ಕೃಷಿಕರಿಗೂ ದೊರೆಯಬೇಕೆನ್ನುವುದು ಈ ನಿಯಮದ ಆಶಯ.

ಎರಡನೆಯದು ಇನ್ನೂ ಗಮ್ಮತ್ತಿನ ವಿಚಾರ. ಒಂದು ಸಂಸ್ಥೆ ತನ್ನ ಸಂಪನ್ಮೂಲದಿಂದ ಸಾಲವನ್ನು ನೀಡಿದೆ. ಅದನ್ನು ವಸೂಲು ಮಾಡಿ ಲಾಭವನ್ನಾರ್ಜಿಸುತ್ತಿದೆ. ಅಲ್ಲಿಗೆ ಆ ವ್ಯವಹಾರ ಮುಗಿಯಿತು. ಆದರೆ ಪಿ.ಎಸ್.ಎಲ್.ಎನ್ ಎಂದಾಕ್ಷಣ, ಈಗಾಗಲೇ ಆಗಿರುವ ಈ ವ್ಯವಹಾರವನ್ನೇ (ಹೊಸ ಗ್ರಾಹಕರಿಲ್ಲದೇ, ಹೊಸ ಸಾಲವಿಲ್ಲದೇ) ವ್ಯಾಪಾರದ ವಸ್ತುವನ್ನಾಗಿಸಿಬಿಡುತ್ತದೆ. ಅದರ ಮೇಲೆ ಖರೀದಿ, ಮಾರಾಟ, ಲಾಭಗಳು ಉಂಟಾಗುತ್ತವೆ. ಅದನ್ನು ನಡೆಸುವವರ ಖರ್ಚುಗಳೂ ಸಂಬಳಗಳೂ ಆಗುತ್ತವೆ. ಹೀಗೆ ಬಡವರ ಸಾಲವೆನ್ನುವ ಒಂದು ಪುಟ್ಟ ವ್ಯವಹಾರಕ್ಕೆ ಲೇಪಿಸಿದ ಈ ಬಹು ಅಂತಸ್ತಿನ ವ್ಯಾಪಾರದ ಖರ್ಚುಗಳನ್ನು ಭರಿಸುವರು ಯಾರು? ಬಡವ-ಗ್ರಾಹಕ, ಅಲ್ಲ ಸಂಸ್ಥೆ, ಅಲ್ಲ ಸರಕಾರ, ಅಂತೂ ಯಾರ ತಲೆಗೋ ಈ ವ್ಯಾಪಾರದ ಖರ್ಚುಗಳು ಬೀಳುತ್ತವೆ.. ಇದು ಅವಶ್ಯವೇ?

ಅಮೆರಿಕದ ಅರ್ಥವ್ಯವಸ್ಥೆ ಕೆಲವು ವರ್ಷಗಳ ಕೆಳಗೆ ಕುಸಿಯಲು ಅತಿಯಾದ ವಿತ್ತೀಕರಣವೇ ಕಾರಣವಾಗಿತ್ತು. ಅದರ ಅಪಾಯಗಳನ್ನು ರಾಜನ್ ಬಲ್ಲರು. ಆ ಬಗ್ಗೆ ಅವರು ಎಚ್ಚರದ ಮಾತನ್ನು ಆಡಿದ್ದರು. ಆದರೂ ರಾಜನ್ ಅವರ ಒಲವು ಆ ದಿಕ್ಕಿನಲ್ಲಿಯೇ ಇದೆ. ಮಿಕ್ಕ ವಿತ್ತೀಕರಣವಾದಿಗಳಷ್ಟು ತೀವ್ರಗತಿಯಲ್ಲಿ ಹಾಗೂ ಆಳವಾಗಿ ರಾಜನ್ ಮುಂದುವರಿಯಲಾರರು. ಆದರೆ ಆ ದಿಕ್ಕಿನ ಮೋಡಿಯಿಂದ ಅವರು ಮುಕ್ತರಲ್ಲ.

ಮಾರುಕಟ್ಟೆಗಳು ಬೇಕು. ಆದರೆ ಮಾರುಕಟ್ಟೆಗಳಿಗೆ ಮಿತಿಗಳಿವೆ; ಮಾರುಕಟ್ಟೀಕರಣ ಮತ್ತ ಸರಕಾರದ ಖಾಸಗೀಕರಣ ಎರಡೂ ಭಿನ್ನ ವಿಚಾರಗಳು; ಮಾರುಕಟ್ಟೀಕರಣವೆಂದರೆ ಅದು ವಿತ್ತೀಕರಣವಾಗಲೇಬೇಕಾಗಿಲ್ಲ; ಈ ಮೂರು ವಿಚಾರಗಳನ್ನು ರಾಜನ್ ನೆನಪಿಟ್ಟುಕೊಂಡರೆ ಸುಬ್ಬಾರಾವುಗಿಂತ ಉದಾರವಾಗಿಯಾಗಿ ಆದರೆ ಮಾರುಕಟ್ಟೆಯ ಅಡಿಯಾಳಾಗದೇ ದೇಶದ ಆರ್ಥಿಕ ಸೂತ್ರಗಳನ್ನು ನಿರ್ವಹಿಸಬಹುದು. ಆದರೆ ಸದ್ಯ ನಮಗೆ ಆ ಲಕ್ಷಣಗಳು ಕಾಣಿಸುತ್ತಿಲ್ಲವೇ.


Wednesday, 11 September 2013


No comments:

Post a Comment