
ರೂಪಾಯಿ ಕಿಲೋ ಅಕ್ಕಿಯ ಯೋಜನೆಯನ್ನು
ಸರಿಯಾಗಿ ನಡೆಸಿದಲ್ಲಿ ಬಡವರ ಮನೆಯಲ್ಲಿ ಕೆಲವು ಮೂಲಭೂತ ಬದಲಾವಣೆಗಳಾಗುತ್ತವೆ. ಮನೆಯಲ್ಲಿ ಒಂದು
ವಾರಕ್ಕೆ ಹೊಂದುವಷ್ಟು ಆಹಾರ ಪದಾರ್ಥದ ದಾಸ್ತಾನು ಇದ್ದರೆ ಅನಿವಾರ್ಯತೆಯಿಂದ – ಸಂಜೆಯ ಕೂಳಿಗೆಂದೇ
- ಕಡಿಮೆ ಕೂಲಿಗೆ, ಇಲ್ಲಸಲ್ಲದ ಕೆಲಸವನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. ಆ ತುರ್ತು ಇಲ್ಲದ
ಬಡ ಕುಟುಂಬಕ್ಕೆ ಕೆಲಸದ ಆಯ್ಕೆಯ ಸಾಧ್ಯತೆ ಹೆಚ್ಚಾಗುತ್ತದೆ. ಅಸಹಾಯಕತೆಯಿಂದ, ಚಡಪಡಿಕೆಯಿಂದ ,ಕೈಲಾಗದ,
ಮೈಗೊಪ್ಪದ, ಕಡಿಮೆ ಕೂಲಿಯ ಕೆಲಸ ಮಾಡುತ್ತಿದ್ದ ಬಡವರಿಗೆ ಆಯ್ಕೆಯ ಆತ್ಮವಿಶ್ವಾಸವನ್ನು ಇದು ನೀಡುತ್ತದೆ.
ಹಚ್ಚು ಕೂಲಿಯನ್ನು ಕೊಡದಿದ್ದರೆ ಕೆಲಸ ಮಾಡುವುದಿಲ್ಲವೆಂದು ಅವರು ಹೇಳುತ್ತಾರೆ. ಆ ಮಾತು
ಹೇಳಿದಾಕ್ಷಣಕ್ಕೆ ಅವರು ಸೋಮಾರಿಗಳಾಗುವುದಿಲ್ಲ. ಆತ್ಮವಿಶ್ವಾಸದ ಮಾತನ್ನು ತಲೆಹರಟೆಯೆಂದಾಗಲೀ –
ಸೋಮಾರಿತನವೆಂದಾಗಲೀ ವ್ಯಾಖ್ಯೆ ಮಾಡುವುದು ಸಮಂಜಸವಲ್ಲ.
ನಾವು ಆಹಾರ ಭದ್ರತೆಯನ್ನು ಕಡಿಮೆ ಬೆಲೆಯ
ಅಕ್ಕಿಯ ಮೂಲಕ ನೀಡಬೇಕೋ, ಅಥವಾ ಇದೇ ಉದ್ದೇಶವನ್ನು ಬೇರೆ ರೀತಿಯಿಂದ ಸಾಧಿಸಬಹುದೋ? ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆ(ನರೇಗಾ) ಉದ್ಯೋಗ ಭದ್ರತೆಯನ್ನು ನೀಡುವುದರ ಮೂಲಕ ಬಡವರಿಗೆ ಆದಾಯವನ್ನು ಆರ್ಜಿಸುವ ಅವಕಾಶವನ್ನು
ಒದಗಿಸುತ್ತದೆ. ಇದರಿಂದಾಗಿ ವರ್ಷಕ್ಕೆ ನೂರುದಿನಗಳಾದರೂ ಕೂಲಿ ಸಿಗುವ ಖಾತರಿಯಿದೆ. ಇದರಿಂದಲೂ
ಬಡವರ ಆಯ್ಕೆಗಳು ಹೆಚ್ಚುತ್ತವೆ. ಪಡಿತರ ಪದ್ಧತಿಯ ಮೂಲಕ ಕಡಿಮೆಬೆಲೆಗೆ ಅಕ್ಕಿಯನ್ನು ನೀಡುವ
ಮತ್ತು ಕೆಲಸವನ್ನು ನೀಡುವ ಯೋಜನೆಗಳಲ್ಲಿ ಯಾವುದು ಉತ್ತಮ?
ಕಡಿಮೆಬೆಲೆಯ ಅಕ್ಕಿ ಬಡವರಿಗೇ ಹೋಗಬೇಕು
– ಅದು ಬೇರೆಯವರ ಕೈಗೆ ಸಿಕ್ಕಿ ದುರುಪಯೋಗವಾಗಬಾರದು ಎನ್ನುವುದು ಪಡಿತರ ಪದ್ಧತಿಯ ಒಂದು ಮೂಲಭೂತ
ಅವಶ್ಯಕತ. ಇದಕ್ಕಾಗಿ ಸರಕಾರ ಬಡತನವಂದರೇನೆಂದು, ಬಡವರು ಯಾರೆಂದು ನಿಖರವಾಗಿ ನಿರ್ಧರಿಸಬೇಕು. ಬಡತನದ
ಮೀಮಾಂಸೆ ವರ್ಷಗಳಿಂದ ನಡೆಯುತ್ತಿದೆ. ದಿನಕ್ಕೆ ಇಂತಿಷ್ಟು ಆಹಾರವನ್ನು ಸೇವಿಸಲು ಬೇಕಾದ
ಆದಾಯವನ್ನು ಆರ್ಜಿಸಲಾಗದವರನ್ನು ಬಡವರೆಂದು ಹಿಂದಿನಿಂದಲೂ ಸರಕಾರ ಘೋಷಿಸುತ್ತಾ ಬಂದಿದೆ. ಆ ಮಾಪನ
ನಿಖರವಾಗಿಲ್ಲ. ಮೇಲಾಗಿ, ಸುಲಭದರದಲ್ಲಿ ಅಕ್ಕಿ ಸಿಗುವುದಾದರೆ ಬಡವರಲ್ಲದವರೂ ಬಡವರಾಗುತ್ತಾರೆ. ಸರಕಾರ
ಒಂದಿಷ್ಟು ಜನರನ್ನು ಬಡವರೆಂದೂ, ಮತ್ತಷ್ಟು ಜನರನ್ನು ಎಪಿಎಲ್ (ಬಡವರಲ್ಲದವರು) ಎಂದು ವರ್ಗೀಕರಿಸುವುದರಲ್ಲಿಯೇ ನಾನಾ ಪೈರವಿಗಳಿರುತ್ತವೆ.
ಬಡವರಲ್ಲದವರಿಗೆ ಈ ಅಕ್ಕಿ ಸಂದಾಯವಾಗಬಹುದಾದ ಸಣ್ಣಗಾತ್ರದ ತಪ್ಪೂ, ನಿಜವಾಗಿ ಬಡತನದಲ್ಲಿ
ತತ್ತರಿಸುತ್ತಿರುವವರಿಗೆ ಅಕ್ಕಿ ಸಿಗದಂತಹ ಮಹಾ ತಪ್ಪೂ ನಡೆಯಬಹುದು. ಆದರೆ ಈ ಬಡತನದ ವರ್ಗೀಕರಣದ
ಅವಶ್ಯಕತೆಯಿಲ್ಲದೆಯೇ ಸರಕಾರದ ಯೋಜನೆ ಅನ್ವಯವಾದರೆ? ಬಡವರಲ್ಲದವರು ಬಡವರೆಂದು ನೋಂದಾಯಿತರಾಗದವರು ಇದರಿಂದ ಲಾಭವನ್ನಾರ್ಜಿಸಿದರೂ
ಸರಕಾರಕ್ಕೆ ದೊಡ್ಡ ನಷ್ಟವಾಗದಿರುವಂತೆ ಯೋಜನೆಯನ್ನು ರೂಪಿಸಿದರೆ?

ಆದರೆ ಅಕ್ಕಿಯ ಯೋಜನೆಗೆ ಬಂದಾಗ
ಬಡವರಲ್ಲದ ನಾವೂ ರೂಪಾಯಿಗೆ ಕಿಲೋ ಅಕ್ಕಿ ಸಿಕ್ಕುವುದಾದರೆ ಕೊಳ್ಳಲು ತಯಾರಾಗುತ್ತೇವೆ. ಮೇಲಾಗಿ
ಬತ್ತ ಬೆಳೆಯುವ ಒಬ್ಬ ಸಣ್ಣ (ಬಡ) ರೈತನ ವಿಪರ್ಯಾಸವನ್ನು ನೋಡಿ – ತಾನು ಬೆಳೆದ ಬತ್ತಕ್ಕೆ ಮಾರುಕಟ್ಟೆಯ ಬೆಲೆಯನುಸಾರ ಆತ
ಅದನ್ನು ಮಾರುತ್ತಾನೆ. ಅದು ಸರಕಾರದ ಗೋದಾಮಿಗೆ ಹೋಗುತ್ತದೆ. ಅಲ್ಲಿಂದ ಪಡಿತರ ಅಂಗಡಿಗೆ
ರವಾನೆಯಾಗುತ್ತದೆ. ನಂತರ ಅದೇ ಬಡವ ಆ ಅಕ್ಕಿಯನ್ನು ಮತ್ತೆ ಅಂಗಡಿಯಿಂದ ರೂಪಾಯಿಗೊಂದು ಕಿಲೋ
ಲೆಕ್ಕದಲ್ಲಿ ಖರೀದಿಸುತ್ತಾನೆ!
ಅಂದರೆ ನರೇಗವನ್ನು ರೂಪಿಸಿರುವ
ರೀತಿಯಲ್ಲಿಯೇ ದುರುಪಯೋಗದ ಸಾಧ್ಯತೆ ಕಡಿಮೆಯಿದೆ. ಯೋಜನೆಗಳಲ್ಲಿ ಪಾಲ್ಗೊಳ್ಳುವ ಆಯ್ಕೆಯು ಫಲಾನುಭವಿಗಳ
ಮೇಲೆ ನಿರ್ಭರವಾಗುವಂತಹ ಯೋಜನೆಗಳು ಸರಕಾರದ ಬೊಕ್ಕಸಕ್ಕೆ ಕಡಿಮೆ ನಷ್ಟ ಮಾಡಬಹುದು. ಇಲ್ಲಿ ದುರುಪಯೋಗದ
ಸಾಧ್ಯತೆಗಳೂ ಕಡಿಮೆಯೇ. ಇದರರ್ಥ ನರೇಗಾದಲ್ಲಿ ದುರುಪಯೋಗ-ಭ್ರಷ್ಟಾಚಾರ ಇಲ್ಲವೆಂದೇನೂ ಅಲ್ಲ.
ದೈಹಿಕ ಶ್ರಮಕ್ಕೆ ಬದಲು ಯಂತ್ರಗಳನ್ನು ಬಳಸಿ ಕೂಲಿ ಪಡೆದಿರುವ ಕಥೆಗಳನ್ನು ಕೇಳಿದ್ದೇವೆ. ಆದರೂ
ಕಾರ್ಯಕ್ರಮವನ್ನು ರೂಪಿಸುವ ರೀತಿಯಲ್ಲಿ ಅಧಿಕಾರಿಗಳ ಆಯ್ಕೆ ಕಡಿಮೆಯಾದಷ್ಟೂ ನಾವು ದುರುಪಯೋಗವನ್ನು
ತಡೆಯುತ್ತೇವೆ.
ಈ ದೃಷ್ಟಿಯಿಂದ ನಮ್ಮ ಸರಕಾರ ರೂಪಾಯಿಗೊಂದು
ಕಿಲೋ ಅಕ್ಕಿ ಕೊಡುವುದಕ್ಕೆ ಬದಲಾಗಿ ಕೇಂದ್ರೀಯ ಯೋಜನೆಯಾದ ನರೇಗಾವನ್ನು ರಾಜ್ಯದಲ್ಲಿ
ವಿಸ್ತಾರವಾಗಿ ಜಾರಿಗೊಳಿಸಿ, ಹೆಚ್ಚಿನ ಹಣವನ್ನು ಈ ವಿಸ್ತರಣೆಗೆ ಮೀಸಲಿಟ್ಟಿದ್ದರೆ ಅಕ್ಕಿ-ದಾಸ್ತಾನು-ಖರೀದಿ-ಮಾರಾಟದ
ಅಲ್ಲೊಲಕಲ್ಲೋಲವಿಲ್ಲದೆಯೇ ಯೋಜನೆಯನ್ನು ವಿಸ್ತೃತವಾಗಿ ಮುಂದುವರೆಸಬಹುದಿತ್ತು. ರೂಪಾಯಿ ಕಿಲೋ
ಅಕ್ಕಿಯ ಯೋಜನೆಯಡಿ ಆಹಾರ ಭದ್ರತೆಯುಂಟಾಗಿ ತನ್ಮೂಲಕ ಕೂಲಿಯ ಆಯ್ಕೆ ಹೆಚ್ಚಾಗುತ್ತದೆ, ಆದರೆ ಯಾವ
ಆಹಾರ ಸೇವಿಸಬೇಕೆನ್ನುವ ಆಯ್ಕೆ ಕಡಿಮೆಯಾಗುತ್ತದೆ. ರಾಗಿ ಅಥವಾ ಜೋಳ ತಿನ್ನಬಹುದಾದ ಬಡವರನ್ನೂ ಈ
ಯೋಜನೆ ಅಕ್ಕಿಯ ಗ್ರಾಹಕರನ್ನಾಗಿಸುತ್ತದೆ. ಆ ಆಯ್ಕೆಯನ್ನೂ ಬಡವರಿಗೆ ನೀಡಬೇಕಾದರೆ ಅವರ ಕೈಗಳಿಗೆ
ಹೆಚ್ಚೆಚ್ಚು ಕೆಲಸವನ್ನೂ, ತನ್ಮೂಲಕ ಹಣವನ್ನೂ, ತನ್ಮೂಲಕ ಆಯ್ಕೆಯ ಸ್ವಾತಂತ್ರವನ್ನೂ ನೀಡಬೇಕು.

ನರೇಗಾ ಮತ್ತು ಒಂದು ರೂಪಾಯಿಯ
ಅಕ್ಕಿಯಿಂದಾಗಿ ಬಡವರಿಗೆ ಕೆಲಸದ ಆಯ್ಕೆಗಳು ಹೆಚ್ಚಿ ಕೂಲಿ ದರಗಳು ಬೆಳೆಯುತ್ತವೆ. ಬೆಳೆಯದಿದ್ದರೆ
ಈ ಎರಡೂ ಯೋಜನೆಗಳು ಅಸಫಲವೆಂದೇ ಪರಿಗಣಿಸಬೇಕು. ಕೂಲಿಯು ಬೆಳೆಯುವುದರಿಂದ ಕಡಿಮೆ ಕೂಲಿಗೆ
ದುಡಿಸಿಕೊಳ್ಳುತ್ತಿದ್ದ ಧಣಿಗಳ ಲಾಭವು ಕಡಿಮೆಯಾಗುವುದು. ಮೇಲಾಗಿ ಈ ಯೋಜನೆಗಳಿಗೆ ಆರ್ಥಿಕ
ಸಂಪನ್ಮೂಲವನ್ನು ಒದಗಿಸಲು ಹೆಚ್ಚು ತೆರಿಗೆಯನ್ನು ಹೇರಬೇಕಾಗುತ್ತದೆ. ಈ ತೆರಿಗೆಯನ್ನು ಕೊಡುವವರೂ
ಹೆಚ್ಚಿನ ಕೂಲಿ ಕೊಡುತ್ತಿರುವ ಧಣಿಗಳೇ! ಇದರಿಂದಾಗಿ ದರ ಹೆಚ್ಚಿ ಹಣದುಬ್ಬರವೂ ಆಗುತ್ತದೆ. ಆ ವರ್ತುಲದಿಂದ ಹೊರಬರಲು ಬೇರೊಂದು
ಸಾಹಸವನ್ನು ಮಾಡಬೇಕು. ಒಂದು ಸಮಸ್ಯೆಯ ಉತ್ತರದಲ್ಲಿಯೇ ಮತ್ತೊಂದು ಸಮಸ್ಯೆ ಅಡಕವಾಗಿರುತ್ತದೆ.
ನರೇಗಾವೂ, ಅಕ್ಕಿಯ ಯೋಜನೆಯೂ ಹುಲಿಸವಾರಿಯೇ ಸರಿ.
Tuesday, July 02, 2013
No comments:
Post a Comment