Wednesday, October 9, 2013

ಗುಟ್ಕಾ ನಿಷೇಧದ ವಿಚಾರಗಳು

ರಾತ್ರೆ ಒಂಬತ್ತೂವರೆ. ರಾಷ್ಟ್ರೀಯ ಎಕ್ಸಪ್ರೆಸ್ವೆ ನಂಬರ್ ಒಂದರಲ್ಲಿ ನಾನು ಆಣಂದದಿಂದ ಅಹಮದಾಬಾದಿಗೆ ಹೊರಡಬೇಕು. ಆ ರಸ್ತೆಯನ್ನು ಪ್ರವೇಶಿಸಿದರೆ ಮತ್ತೆ ಹೊರಬರಲು ಸಾಧ್ಯವಿಲ್ಲ, ವೇಗವಾಗಿಯೇ ಕಾರನ್ನು ಚಲಾಯಿಸಬೇಕು. ನನ್ನನ್ನು ಒಯ್ಯುತ್ತಿದ್ದ ಟ್ಯಾಕ್ಸಿಯ ಚಾಲಕ ಹೊರವಲಯದಲ್ಲಿ ಗಕ್ಕನೆ ನಿಲ್ಲಿಸಿದ. "ಏನಾಯಿತು?" ಎಂದೆ. "ಏನಿಲ್ಲ, ವಿಪರೀತ ನಿದ್ದೆ, ಸ್ವಲ್ಪ ಗುಟ್ಕಾ ತಿಂದರೆ ಸರಿಹೋಗುತ್ತದೆ" ಎಂದ. ಎರಡು ಪೊಟ್ಟಣ ಗುಟ್ಕಾ ಹಿಡಿದು ಬಂದ. ನನಗೆ ನಗುವಿಲ್ಲ, ಅಳುವಿಲ್ಲ. ಆತಂಕದಲ್ಲಿ (ಗುಟ್ಕಾ ಸೇವಿಸದೆಯೇ) ಕಣ್ಣೂ ಮಿಟುಕಿಸದಂತೆ ಜೀವವನ್ನು ಕೈಯಲ್ಲಿಹಿಡಿದು ಕೂತಿದ್ದೆ. ಯಾವ ತೊಂದರೆಯೂ ಇಲ್ಲದೆ, ಪೂರ್ಣ ಎಚ್ಚರದಿಂದ ನನ್ನನ್ನು ಬಿಡಬೇಕಾದ ಸ್ಥಳಕ್ಕೆ ಬಿಟ್ಟ. ಗುಟ್ಕಾದ ಗುಣಗಾನಕ್ಕೆ ಇದೂ ಒಂದು ಉದಾಹರಣೆ. ಕಷ್ಟಪಟ್ಟು ಕೆಲಸಮಾಡುವವರಿಗೆ ಗುಟ್ಕಾದಿಂದ ಉತ್ಪಾದಕತೆ ಹೆಚ್ಚಿ, ಆದಾಯವೂ ಹೆಚ್ಚುತ್ತದೆ. ಆದರೆ ಇದು ಸಮಂಜಸವಾದ ವಾದವೇ?

ಇಪ್ಪತ್ತೈದು ರಾಜ್ಯಗಳು ಗುಟ್ಕಾ-ಪಾನ್ ಮಸಾಲಾಗಳನ್ನು ನಿಷೇಧಿಸಿವೆ. ಮೇ 3 ರಂದು ಭಾರತದ ಸರ್ವೋಚ್ಚ ನ್ಯಾಯಾಲಯ ಈ ರಾಜ್ಯಗಳನ್ನು ಅನುಷ್ಠಾನ ವರದಿ ಕೊಡುವಂತೆಯೂ, ನಿಷೇಧಿಸದಿರುವ ರಾಜ್ಯಗಳು ತಮ್ಮ ನಿಲುವು ತಿಳಿಸಬೇಕೆಂದ ಮೇಲೆ, ಮೇ 31ರಂದು ಕಡೆಗೂ ಕರ್ನಾಟಕ ಸರಕಾರ ಗುಟ್ಕಾ ನಿಷೇಧಿಸಿ ಆದೇಶವನ್ನು ಹೊರಡಿಸಿದೆ. ಇದು ಸಿದ್ದರಾಮಯ್ಯನವರ ಸರಕಾರದ "ಪ್ರಗತಿ"ಪರ ಕ್ರಿಯೆಯೆನ್ನಬಹುದಾದರೂ, 2011ರ ಆಹಾರ ಸುರಕ್ಷತಾ ಗುಣಮಟ್ಟದ ಕಾಯಿದೆಯನುಸಾರ ತಂಬಾಕು ಮತ್ತು ಮಗ್ನೀಸಿಯಂ ಕಾರ್ಬನೇಟ್ ರೀತಿಯ ಪದಾರ್ಥಗಳು ಇವೆಯೆಂಬ ಕಾರಣವಾಗಿ ಗುಟ್ಕಾ ಕಾನೂನು ಬಾಹಿರವೇ ಆಗಿತ್ತು. ಈ ಘೋಷಣೆಯಿಂದ ಕಾನೂನಿನ ಅನುಷ್ಠಾನವಾಗುತ್ತದೆ, ಗುಟ್ಕಾ-ಪಾನ್ ಮಸಾಲದ ಬಗ್ಗೆ ವಿಶೇಷ ಗಮನವನ್ನೂ ಸೆಳೆಯಲು ಇದರಿಂದ ಸಾಧ್ಯವಾಗಿದೆ.

ಈ ನಿಷೇಧಾಜ್ಞೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅದರಿಂದ ಅಡಕೆ ಬೆಳೆಗಾರರರಿಗೆ ತೊಂದರೆಯಾಗುತ್ತದೆ ಎಂದು ವಿರೋಧ ಪಕ್ಷದವರು ವಾದಿಸಿದ್ದಾರೆ. ಆ ವಾದದಲ್ಲಿ ಎಷ್ಟು ಹುರುಳಿದೆ? ಹೊಗೆರಹಿತ ತಂಬಾಕು ಸೇವನೆಯ (ಗುಟ್ಕಾ, ಕಡ್ಡೀಪುಡಿ, ಮಾವಾ, ಖೈನಿ) ಅಂಕಿಸಂಖ್ಯೆಯನ್ನು ಸಮೀಕ್ಷೆ ಮಾಡೋಣ. ಹೊಗೆರಹಿತ ತಂಬಾಕಿನಲ್ಲಿ ಪ್ರಮುಖ ಪಾಲಿರುವುದು ಅಡಕೆಯ ಅವಶ್ಯಕತೆಯಿಲ್ಲದ ಖೈನಿಯದ್ದು. ಭಾರತದ ಉತ್ತರಪೂರ್ವ ರಾಜ್ಯಗಳು, ಮಧ್ಯಪ್ರದೇಶ, ಛತ್ತೀಸಗಡ, ಬಿಹಾರ್, ಒಡಿಶಾ ರಾಜ್ಯಗಳಲ್ಲಿ ವಯಸ್ಕ ಜನಸಂಖ್ಯೆಯ ಶೇಕಡಾ 30ಕ್ಕೂ ಹೆಚ್ಚು ಜನ ಹೊಗೆರಹಿತ ತಂಬಾಕನ್ನು ಸೇವಿಸುತ್ತಾರೆ. ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಗಳಲ್ಲಿ ವಯಸ್ಕ ಜನಸಂಖ್ಯೆಯ ಶೇಕಡಾ 20ರಿಂದ 30ರ ಹೊಗೆರಹಿತ ತಂಬಾಕನ್ನು ಸೇವಿಸುವವರಿದ್ದಾರೆ. ಈ ಎಲ್ಲ ರಾಜ್ಯಗಳೂ ಮೊದಲೇ ನಿಷೇಧಾಜ್ಞೆಯನ್ನು ಹೊರಡಿಸಿವೆ. ಹೀಗಾಗಿ ಅಡಕೆ ಬೆಳೆಗಾರರಿಗೆ ಈ ಘೋಷಣೆಯಿಂದ ಆಗಬಹುದಾದ ನಷ್ಟದ ಪಾಲು ನಗಣ್ಯವೇ. ಗುಟ್ಕಾ ನಿಷೇಧ ಹೇರುತ್ತಲೇ, ಅಡಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಕ್ರಮಗಳೇನು?

ಅಡಕೆ ನಮ್ಮ ನಡುವಿನಲ್ಲಿ ಅನಾದಿ ಕಾಲದಿಂದಲೂ ಇದೆ. ಅಡಕೆಯು ಆರೋಗ್ಯಕ್ಕೆ ಹಾನಿಕಾರಕವೋ ಅಲ್ಲವೋ ಅನ್ನುವುದು ಚರ್ಚಾಸ್ಪದವಾದರೂ, ಅಡಕೆಯ ಜೊತೆಗೆ ತಂಬಾಕು ಸೇರಿದ ಕೂಡಲೇ ಅದು ಮಾರಕ ಖಾದ್ಯವಾಗುವುದರಲ್ಲಿ ಅನುಮಾನ ಇಲ್ಲ. ಎಲೆ, ಅಡಕೆ, ಕಡ್ಡೀಪುಡಿಯ ಜೊತೆಗೆ ತಂಬಾಕಿನ ಸೇವನೆ ಮುಂಚಿನಿದಲೂ ಇತ್ತು. ಎಲೆಯ ಜೊತೆ ತಂಬಾಕು ಸೇವನೆ ಗುಟ್ಕಾಕ್ಕಿಂತ ಕಮ್ಮಿ ಹಾನಿಕಾರಕವೆಂದು ಸಂಶೋಧಕರು ಹೇಳಿದ್ದಾರೆ. ಪೊಟ್ಟಣದ ಈ ರೂಪದಲ್ಲಿ ಗುಟ್ಕಾ ಕಾಣಿಸಿಕೊಂಡದ್ದು 1975ರಲ್ಲಿ. ಸುಲಭವಾಗಿ ಎಲ್ಲವನ್ನೂ ಬೆರೆಸಿ ಬಾಯಿಗೇರಿಸಲು ತಯಾರಾದ ರೀತಿಯಲ್ಲಿ ಹಂಚಿಕೆ ಗುಟ್ಕಾ-ಪಾನ್ ಮಸಾಲಾದಿಂದ ಪ್ರಾರಂಭವಾಯಿತು. ಅಡಕೆಗೂ-ಗುಟ್ಕಾಕ್ಕೂ ಹೀಗೆ ಸಮೀಪದ ಸಂಬಂಧವಿದೆ.

ಕಳೆದ ಹದಿನೈದು ವರ್ಷಗಳಲ್ಲಿ ಅಡಕೆಯಡಿಯ ಕೃಷಿಯ ಭೂವಿಸ್ತೀರ್ಣ ದುಪ್ಪಟ್ಟಾಗಿದೆ. ಅಡಕೆಯ ಶೇಕಡಾ 45 ವಿಸ್ತೀರ್ಣ ಮತ್ತು ಶೇಕಡಾ 52 ಉತ್ಪಾದನೆ ಕರ್ನಾಟಕದಿಂದ ಬರುತ್ತದೆ. ಗುಟ್ಕಾದ ನಿಷೇಧದಿಂದ ನಮ್ಮ ಬೆಳೆಗಾರರ ಮೇಲೆ ಪರಿಣಾಮವಾಗುವುದು ಸಹಜವೇ. ಆದರೆ ಆ ಪರಿಣಾಮವು ನಮ್ಮ ಸರಕಾರದ ನಿಷೇಧಾಜ್ಞೆಯಿಂದ ಆಗುತ್ತಿಲ್ಲ, ದೇಶಾದ್ಯಂತ ನಡೆದಿರುವ ನಿಷೇಧ ಕಾರ್ಯಕ್ರಮದಿಂದ ಆಗಿದೆ. ಈ ನಿಷೇಧದಿಂದ ಹೆಚ್ಚಾಗಿ ಏಟು ಬೀಳುವುದು ಬೇಯಿಸಿದ ಕೆಂಪು ಅಡಕೆಗೆ ಮಾತ್ರ. ಕೆಂಪು ಅಡಕೆ ಒಟ್ಟಾರೆ ವಿಸ್ತೀರ್ಣದಲ್ಲಿ ಅರ್ಧದಷ್ಟಿದೆ. ಕಡಲ ತೀರದ ಪ್ರಾಂತದಲ್ಲಿ ಬೆಳೆಯುವ ಬಿಳಿ ಚಾಲಿ ಅಡಕೆಗೆ ಈ ನಿಷೇಧದಿಂದ ಯಾವ ಪೆಟ್ಟೂ ಬೀಳುವುದಿಲ್ಲ, ಈ ನಿಷೇಧದಿಂದಾಗಿ ಕೆಂಪು ಅಡಕೆ ಬೆಳೆಯುವ ಚಿಕ್ಕಮಗಳೂರು, ಶಿವಮೊಗ್ಗ ಪ್ರಾಂತದ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ.

ಆದರೆ ಈ ವಿಚಾರಗಳೂ ಇಂದಿನ ವಿಚಾರಗಳೇನೂ ಅಲ್ಲ. ಕರ್ನಾಟಕ ರಾಜ್ಯ ಸರಕಾರ ಗುಟ್ಕಾ ನಿಷೇಧಿಸಿರುವುದರಿಂದ ಇವುಗಳು ಚರ್ಚೆಗೆ ಬಂದಿವೆ ಅಷ್ಟೇ. ಇಲ್ಲವಾದರೆ 1997ರಷ್ಟು ಹಿಂದೆಯೇ ಪಾನ್ ಮಸಾಲಾ ಗುಟ್ಕಾದ ಸೇವನೆಯಿಂದ ಯುವಕರ ಮೇಲಾಗುವ ಪರಿಣಾಮಗಳನ್ನು ಪರಿಶೀಲಿಸಲು ಎಚ್.ನರಸಿಂಹಯ್ಯನವರ ನೇತೃತ್ವದಡಿ ಏರ್ಪಾಟು ಮಾಡಿದ್ದ ಸಮಿತಿಯೇ ಈ ಪದಾರ್ಥಗಳನ್ನು ಸಂಪೂರ್ಣ ನಿಷೇಧಿಸಬೇಕೆಂದು ಸೂಚಿಸಿತ್ತು. ಈ ವರದಿಗೆಮುನ್ನವೇ, ಅಡಕೆಯ ವಿಸ್ತೀರ್ಣ ದುಪ್ಪಟ್ಟಾಗುವುದಕ್ಕೂ ಮೊದಲು, ಸ್ವತಃ ಅಡಕೆ ಬೆಳೆಗಾರರೂ – ಚಿಂತಕರೂ ಆಗಿದ್ದ ಕೆ.ವಿ.ಸುಬ್ಬಣ್ಣನವರು "ಅಡಕೆಯ ಮಾನ" ಎನ್ನುವ ಲೇಖನವನ್ನು ಬರೆದಿದ್ದರು. ಅಡಕೆಯ ಬೆಳೆಯಡಿ ಹಿಗ್ಗುತ್ತಿರುವ ಭೂ ವಿಸ್ತೀರ್ಣವನ್ನೂ, ಅಡಕೆಯು ಗುಟ್ಕಾದಲ್ಲಿ ಸೇರಿರುವುದರಿಂದ ಆರೋಗ್ಯಕ್ಕೆ ಆಗುವ ತಲ್ಲಣಗಳನ್ನೂ ಚರ್ಚಿಸಿದ್ದರು. ಆಗ್ಗೆ ಸುಬ್ಬಣ್ಣನವರು ಗುಟ್ಕಾದ ನಿಷೇಧವನ್ನು ಸರಕಾರ ಮಾಡದಿರುವುದಕ್ಕೆ ಕಾರಣಗಳನ್ನು ನೀಡಿದ್ದರಾದರೂ, ಆ ಕಾರಣಗಳನ್ನೆಲ್ಲ ಮೀರಿ ಸರಕಾರಗಳು ಈಗ ನಿಷೇಧಾಜ್ಞೆಯನ್ನು ಹೊರಡಿಸಿವೆ. ಆದರೆ ಪ್ರಾವಾದಿಯಂತೆ ನುಡಿದ ಸುಬ್ಬಣ್ಣನವರ ಮಾತುಗಳು ಅಡಕೆಯ ಬೆಳೆಗಾರರ ಸುತ್ತ ಗಿರ್ಕಿ ಹೊಡೆಯುತ್ತವೆ.

ಮಿಕ್ಕ ಕೃಷಿಗೂ – ತೋಟಗಾರಿಕೆಯ ದೀರ್ಘಕಾಲಿಕ ಬೆಳೆ ಅಡಕೆಗೂ ಇರುವ ವ್ಯತ್ಯಾಸವನ್ನು ಗಮನದಲ್ಲಿಟ್ಟೇ ಸರಕಾರ ಈ ಸಮಸ್ಯೆಯನ್ನು ಎದುರಿಸಬೇಕು. ಪ್ರತೀ ವರ್ಷ ಬದಲಾಯಿಸಿ ಬಿತ್ತುವ ಕೃಷಿಗಿಂತ ತೋಟಗಾರಿಕೆಯ ಕೃಷಿ ಭಿನ್ನವಾಗಿದೆ. ಹೀಗಾಗಿ ಅಡಕೆಯ ಬೆಳವಣಿಗೆಯನ್ನು ಏಕಾಏಕಿ ನಿಲ್ಲಿಸಿ ಬೇರೆ ಬೆಳೆಗಳತ್ತ ಹೋಗಲು ಸಮಯ ಬೇಕು. ಆ ಸಮಯದ ಬಗೆಗಿನ ಎಚ್ಚರಿಕೆಯನ್ನೂ – ಅದನ್ನು ನಿಭಾಯಿಸುವ ಪರಿಯನ್ನೂ 2000 ಇಸವಿಯಲ್ಲಿ ನಿಯಾಮಕಗೊಂಡ ರೆತ್ತಿನಂ ಸಮಿತಿ ಗುರುತಿಸಿತ್ತು. ಅಡಕೆಯ ವಿಸ್ತೀರ್ಣವನ್ನು ಕಡಿಮೆಮಾಡಿ ಇತರೆ ಬೆಳೆಗಳನ್ನು ಪ್ರೋತ್ಸಾಹಿಸಬೇಕೆಂದು ಆ ಸಮಿತಿ ಸೂಚಿಸಿತ್ತು. 2009ರ ಗೋರಕನಾಥ ಸಮಿತಿಯೂ ಇದನ್ನೇ ಗುರುತಿಸಿ, ಕೆಲವು ಸೂಚನೆಗಳನ್ನು ನೀಡಿತ್ತು. ತಕ್ಷಣವೇ ಈ ಸಮಿತಿಗಳ ರೈತಪರ ಸೂಚನೆಗಳನ್ನು ಅನುಷ್ಠಾನಗೊಳಿಸಿದ್ದರೆ ಈಗ ನಮ್ಮ ಕಣ್ಣೆದುರಿಗೆ ಕಾಣಿಸಬಹುದಾದ ತೊಂದರೆಯು ಸುರಿಳೀತವಾಗುತ್ತಿತ್ತು. ಆದರೆ ಇಂದಿದ್ದರೆ ನಾಳಿಲ್ಲ ಎನ್ನುವಂತಿದ್ದ ಭಾಜಪದ ಸರಕಾರಕ್ಕೆ ಈ ದೂರದೃಷ್ಟಿಯಿರಲಿಲ್ಲ. ಈಗ ಸಿದ್ದರಾಮಯ್ಯನವರು ನಿಷೇಧವನ್ನು ಜಾರಿಯಲ್ಲಿಟ್ಟೇ ರೈತರ ಹಿತಾಸಕ್ತಿಯನ್ನು ಕಾಪಾಡುವ ಹುಲಿಸವಾರಿ ಮಾಡಬೇಕಾಗಿದೆ.

ಸುಬ್ಬಣ್ಣನವರು 1997ರಲ್ಲಿ ಬರೆದದ್ದು ಇದು: "ಅಡಕೆಯನ್ನು ಇನ್ನೆಷ್ಟು ಹೊಸರೀತಿಗಳಲ್ಲಿ ಪ್ರಯೋಜನಕಾರಿಯಾಗಿ ಬಳಸಬಹುದು ಎಂಬ ಬಗ್ಗೆ ಸಂಶೋಧನೆಯಾಗಬೇಕು. ಬೆಳೆಗಾರರೂ ವರ್ತಕರೂ ಆ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ನಮ್ಮ ಮಾಮ್ ಕೋಸ್, ಕ್ಯಾಂಪ್ ಕೋ, ತೋಟಗಾರ್ಸ್ ಮುಂತಾದ ಬೃಹತ್ ಸಹಕಾರಿ ಸಂಸ್ಥೆಗಳು ಈ ದಿಶೆಯಲ್ಲಿ ಕೇಂದ್ರೀಕೃತ ಪ್ರಯತ್ನವನ್ನು ನಡೆಸಬೇಕು..." ಆದರೆ ಸುಬ್ಬಣ್ಣನವರ ಈ ಹಿತವಚನವನ್ನು ಈ ಸಂಸ್ಥೆಗಳು ಹೇಗೆ ಗ್ರಹಿಸಿದವು? ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಆರೋಗ್ಯ ಮಂತ್ರಾಲಯದ ಸಮಿತಿ ಪಾನ್ ಮಸಾಲಾ-ಗುಟ್ಕಾದ ಹಾನಿಕಾರಕ ಪರಿಣಾಮಗಳನ್ನು ವಿವರಿಸಿ ನೀಡಿದ ವರದಿಯ ಹಿನ್ನೆಲೆಯಲ್ಲಿ, ಅಡಕೆಯನ್ನು ಸಮರ್ಥಿಸುತ್ತಾ ಸುಬ್ಬಣ್ಣನವರು ಹೆಸರಿಸಿರುವ ಮೂರೂ ಸಂಸ್ಥೆಗಳು ನ್ಯಾಯಾಲಯದ ಕಟ್ಟೆಯನ್ನು ಏರಿವೆ. ಆದರೆ ತಂಬಾಕಿನೊಂದಿಗಿನ ನಂಟಿದ್ದಷ್ಟೂ ದಿನ ಅಡಕೆಯ ಮಾನದ ಹಾನಿಯೇ ಆಗುತ್ತದೆಂದು ಅಡಕೆಯ ಬೆಳೆಗಾರರು ಮನಗಾಣಲೇ ಬೇಕು. ಅದರ ಪರಿಣಾಮ ಅವರಿಗೇ ತಟ್ಟುವುದು.

ಗುಟ್ಕಾ ನಿಷೇಧವನ್ನು ವಿರೋಧಿಸುವವರು ತಮ್ಮ ವಾದಕ್ಕೆ ಸಿಗರೇಟಿಗೆ ನಿಷೇಧವಿಲ್ಲವೆಂಬ ವಿತಂಡವಾದವನ್ನು ಒಡ್ಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಸಿಗರೇಟನ್ನು ನಿಷೇಧಿಸಬೇಕು ನಿಜ. ಸಿಗರೇಟು ತಯಾರಕರ ಲಾಬಿ ಪ್ರಭಾವಶಾಲಿಯಾದದ್ದು ಅನ್ನುವುದೂ ನಿಜ. ಸಿಗರೇಟಿನಿಂದ ಬೊಕ್ಕಸಕ್ಕೆ ಬರುವ ಆದಾಯದ ದೃಷ್ಟಿಯಿಂದ ಆ ಕ್ಷೇತ್ರವನ್ನು ಎದುರು ಹಾಕಿಕೊಳ್ಳುವುದು ಕಷ್ಟವೆನ್ನುವುದೂ ನಿಜ. ಆದರೆ ಸಿಗರೇಟು ಖಾದ್ಯ ವಸ್ತುವಲ್ಲ. ಅದಕ್ಕೆ ಮಾಡಬೇಕಾದ ಕಾನೂನಿನ ಬದಲಾವಣೆಯ ರೂಪರೇಷೆಯೇ ಬೇರೆ. ಮೊದಲು ಸಿಗರೇಟಿನ ಜಾಹೀರಾತನ್ನು ನಿಷೇಧಿಸಲಾಗಿದೆ. ಎರಡು - ಸಾರ್ವಜನಿಕ ಜಾಗಗಳಲ್ಲಿ ಸಿಗರೇಟಿನ ಸೇವನೆಯನ್ನು ನಿಷೇಧಿಸಲಾಗಿದೆ. ಮೂರು ನಾಲ್ಕನೆಯ ಹಜ್ಜೆಗಳೂ ಕಾಲಾಂತರದಲ್ಲಿ ಇಡಲಾಗುತ್ತದೆ. ಅಲ್ಲಿ ಪ್ರಗತಿ ಕಂಡಿಲ್ಲವೆಂದು ಗುಟ್ಕಾ ನಿಷೇಧವನ್ನು ತಡೆಯುವುದು ಸರಿಯೂ ಅಲ್ಲ, ಸಾಧುವೂ ಅಲ್ಲ.

ಕಾರಿನ ಚಾಲಕರು ಗುಟ್ಕಾದ ಹವ್ಯಾಸಕ್ಕೆ ಬೀಳಲು ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದೂ, ಎಚ್ಚರವಾಗಿರಬೇಕಾದ ತುರ್ತೂ ಕಾರಣಗಳಂತೆ. ಗುಟ್ಕಾ ನಿಷೇಧದಿಂದ ನಮ್ಮ ಚಾಲಕರು ಸಮಯಕ್ಕೆ ಊಟಮಾಡಿ, ಸರಿಯಾಗಿ ನಿದ್ದೆ ಮಾಡುವುದಾದರೆ – ಗುಟ್ಕಾದ ಕ್ಯಾನ್ಸರಿನಿಂದಾಗುವ ಸಾವುಗಳನ್ನು ತಪ್ಪಿಸುವುದಲ್ಲದೇ ರಸ್ತೆ ಅಪಘಾತಗಳನ್ನೂ ತಪ್ಪಿಸಬಹುದು.


ಶನಿವಾರ, 15 ಜೂನ್ 2013      

No comments:

Post a Comment