ಫೋರ್ಬ್ಸ್ ಪತ್ರಿಕೆಯ ಬಿಲಿಯಾಧೀಶರ ಪಟ್ಟಿ ಈಚೆಗಷ್ಟೇ
ಪ್ರಕಟವಾಗಿದೆ. ಈ ಬಾರಿ 1,426 ಜನ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ 55
ಭಾರತೀಯರೂ ಒಳಗೊಂಡಿದ್ದಾರೆ. ಒಂದು ಬಿಲಿಯನ್
ಡಾಲರುಗಳೆಂದರೆ, ಸುಮಾರು 5,000 ಕೋಟಿ ರೂಪಾಯಿಗಳಿಗಳು. ಭಾರತದ ಅತೀ ಶ್ರೀಮಂತರಾದ ಮುಕೇಶ್
ಅಂಬಾನಿಯವರ ಒಟ್ಟಾರೆ ಆಸ್ತಿ 1 ಲಕ್ಷ ಕೋಟಿಗೂ ಮೀರಿದೆ. 27 ಅಂತಸ್ತಿನ 5,000 ಕೋಟಿ ರೂಪಾಯಿ
ಬೆಲೆಯ ಅವರ ಮುಂಬಯಿನ ಮನೆಯೊಂದೇ ಈ ಪಟ್ಟಿಯಲ್ಲಿ ಅವರನ್ನು ಷಾಮೀಲಾಗಿಸಲು ಸಾಕಾಗಿತ್ತು. ಅವರ
ಸಂಪತ್ತಿನ
ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಯಿದ್ದರೂ, ಪ್ರದರ್ಶಿಸದಿರುವ ಸಂಪತ್ತು ಇನ್ನೂ
ಬಹಳವಿದೆ ಎಂದು ಈ ಮಾಹಿತಿಯಿಂದ ತಿಳಿಯುತ್ತದೆ. ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವವರು
390 ಕೋಟಿ ರೂಪಾಯಿಯ ಖರ್ಚಿನಲ್ಲಿ ಮಗಳ ಮದುವೆಯನ್ನು ಫ್ರಾನ್ಸಿನ 18ನೇ ಶತಮಾನದ ಅರಮನೆಯಲ್ಲಿ 5
ದಿನಗಳ ಸಂಭ್ರಮಾಚರಣೆಯಲ್ಲಿ ನಡೆಸಿದ ಲಕ್ಷ್ಮೀನಿವಾಸ್ ಮಿತ್ತಲ್. ಈ ಮದುವೆ ಜಗತ್ತಿನ ಅತ್ಯಂತ
ದುಬಾರಿ ಮದುವೆಯೆಂಬ ಅಗ್ಗಳಿಕೆಯನ್ನು ಪಡೆದಿದೆ! ಶ್ರೀಮಂತರ ಮೂರನೆಯ ಸ್ಥಾನದಲ್ಲಿ ನಿಂತಿರುವವರು ಬೆಂಗಳೂರಿಗ ಅಜೀಂ ಪ್ರೇಂಜಿ. ಆತ ತಮ್ಮ
ಬಹುಪಾಲು ಶ್ರೀಮಂತಿಕೆಯನ್ನು ಸಾಮಾಜಿಕ ಕಾರ್ಯಕ್ಕೆ – ಅದರಲ್ಲೂ ವಿದ್ಯಾ ಕ್ಷೇತ್ರಕ್ಕೆ
ನೀಡುವುದಾಗಿ ಹೇಳಿರುವುದಲ್ಲದೇ, ಆ ನಿಟ್ಟಿನಲ್ಲಿ ದಾಪುಗಾಲನ್ನೂ ಹಾಕಿದ್ದಾರೆ. ಪ್ರೇಂಜಿ ತಮ್ಮ
ಸರಳತೆಗೂ ಹೆಸರುವಾಸಿಯಾಗಿದ್ದಾರೆ.
ಭಾರತದ ಹತ್ತು ಮಂದಿ ಅತೀ ಶ್ರೀಮಂತರ ಆಸ್ತಿಯನ್ನು ಲೆಕ್ಕ
ಕಟ್ಟಿದರೆ ಅದು ಸುಮಾರು 5 ಲಕ್ಷಕೋಟಿ ರೂಪಾಯಿ ದಾಟುತ್ತದೆ. ಶ್ರೀಮಂತಿಕೆಯ ತಳಸ್ಥರದಲ್ಲಿರುವ
ಮಿಕ್ಕ 45 ಮಂದಿ ಬಿಲಿಯಾಧೀಶರ ಒಟ್ಟಾರೆ ಆಸ್ತಿ ಮೊದಲ ಹತ್ತು ಜನರ ಒಟ್ಟೂ ಶ್ರೀಮಂತಿಕೆಗಿಂತ
ಕಡಿಮೆ! ಈ 55 ಮಹನೀಯರ ಶ್ರೀಮಂತಿಕೆಯನ್ನು ಒಟ್ಟುಗೂಡಿಸಿದರೆ ಅವರುಗಳಲ್ಲೇ
ಸುಮಾರು 10 ಲಕ್ಷಕೋಟಿ ರೂಪಾಯಿಗಳಿವೆ.
ಸಂಖ್ಯೆಯಲ್ಲಿ ಈ ಮೊಬಲಗನ್ನು ನೋಡಿ ಶೂನ್ಯಗಳನ್ನು
ಎಣಿಸಬಯಸುವವರಿಗೆ ಈ ಸಂಖ್ಯೆ ಹೀಗೆ ಕಾಣುತ್ತದೆ - 1,00,00,00,00,00,000. ಈ
ಶ್ರೀಮಂತಿಕೆಯನ್ನು ಭಾರತದ 2011ರ ಜನಸಂಖ್ಯೆಗೆ ಸಮಾನವಾಗಿ ಹಂಚಿದರೆ, ಪ್ರತಿಯೊಬ್ಬರಿಗೂ ತಲಾ 8,000
ರೂಪಾಯಿಗಳೂ, ಪ್ರತೀ ಕುಟುಂಬಕ್ಕೆ 40,000 ರೂಪಾಯಿಗಳೂ ಸಿಗುತ್ತದೆ!
ಈ ಇಷ್ಟೂ ಶ್ರೀಮಂತಿಕೆ
ನಗದಿನ ರೂಪದಲ್ಲಿ ಕೊಳೆಯುತ್ತಿದೆ ಎನ್ನುವ ತಪ್ಪು ಅಭಿಪ್ರಾಯಕ್ಕೆ ನಾವು ಬರುವ ಸಾಧ್ಯತೆಯಿದೆ.
ಜೊತೆಗೆ, ಈ ಶ್ರೀಮಂತಿಕೆಯನ್ನು ಬೇಕಿದ್ದಲ್ಲಿ ಈ ಮಹನೀಯರು ನಗದಿನರೂಪಕ್ಕೆ ಸುಲಭವಾಗಿ
ಪರಿವರ್ತಿಸಬಹುದು ಎನ್ನುವ ತಪ್ಪು ಅಭಿಪ್ರಾಯವೂ ಮೂಡುವುದಕ್ಕೆ ಸಾಧ್ಯ. ಎರಡೂ ನಿಜವಲ್ಲ. ಈ
ಶ್ರೀಮಂತಿಕೆಯಲ್ಲಿರುವ ಹೆಚ್ಚಿನಂಶ ಆ ಶ್ರೀಮಂತರು ನಡೆಯಿಸುತ್ತಿರುವ ಉದ್ಯಿಮೆಯಲ್ಲಿ ಹೂಡಿಕೆಯ
ರೂಪದಲ್ಲಿದೆ. ಅದನ್ನು ನಗದಿನ ರೂಪಕ್ಕಿಳಿಸುವುದು ಸುಲಭವೂ ಅಲ್ಲ, ಸರಳವೂ ಅಲ್ಲ.
ಪ್ರತೀ ವರ್ಷವೂ ಈ
ಪಟ್ಟಿಯನ್ನು ಸೇರಿದವರೆಷ್ಟು ಮಂದಿ, ಅದರಿಂದ ಕುಸಿದವರೆಷ್ಟು ಮಂದಿ ಅನ್ನುವ ವಿಶ್ಲೇಷಣೆಯನ್ನು
ಮಾಡುಲಾಗುತ್ತದೆ. ಹೋದ ವರ್ಷಾಂತ್ಯಕ್ಕೆ 75,000 ಕೋಟಿರೂಪಾಯಿಗಳ ಶ್ರೀಮಂತಿಕೆಯಿದ್ದ ಪ್ರೇಂಜಿಯವರ
ಶ್ರೀಮಂತಿಕೆ ಈ ಬಾರಿಗೆ 55.000 ಕೋಟಿರೂಪಾಯಿಗಳಿಗೆ ಇಳಿದಿದೆ. ಹಾಗೆಯೇ ಎಚ್.ಸಿ.ಎಲ್. ಕಂಪನಿಯ ಶಿವ್
ನಾಡಾರರನ್ನು ಬಿಟ್ಟು ಸಾಫ್ಟ್ ವೇರ್ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಹೊಂದಿರುವ ಎಲ್ಲರ
ಶ್ರೀಮಂತಿಕೆಯೂ ಕುಸಿದಿದೆ. ಈ ವರ್ಷದಲ್ಲಿ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡವರು ಫಾರ್ಮಾ
ಕ್ಷೇತ್ರಕ್ಕೆ ಸೇರಿದ 8 ಮಂದಿ, ರಿಯಲ್ ಎಸ್ಟೇಟ್ ಮತ್ತು ಕಟ್ಟಡ ಕ್ಷೇತ್ರಕ್ಕೆ ಸೇರಿದ ಆರು ಮಂದಿ.
ಇದನ್ನು ನೋಡಿದಾಗ ದೇಶದಲ್ಲಿ ಯಾವ ಕ್ಷೇತ್ರಗಳು ಅತೀ ಲಾಭವನ್ನು ಪಡೆಯುತ್ತಿವೆ ಎನ್ನುವುದೂ ನಮಗೆ
ತಿಳಿಯುತ್ತದೆ.
ಈ ಶ್ರೀಮಂತಿಕೆಯ
ಏಳುಬೀಳಿನ ಮೀಮಾಂಸೆಯಿಂದ ಪ್ರೇಂಜಿಗಾಗಲೀ, ಮಿತ್ತಲ್ ಗಾಗಲೀ, ಅಂಬಾನಿಗಾಗಲೀ, ನಮಗಾಗಲೀ ಏನಾದರೂ
ಪ್ರಯೋಜನವಿದೆಯೇ? ಇದರಿಂದ ದೇಶದ ಆಡಳಿತ ಸೂತ್ರವನ್ನು ರೂಪಿಸಲು ಏನಾದರೂ ಉಪಯೋಗವಾದೀತೇ? ಈ
ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳಿಲ್ಲ. ಶ್ರೀಮಂತರ-ಸಿನೇಮಾ ತಾರೆಯರ ಖಾಸಗೀ ಬದುಕನ್ನು
ಕಿಂಡಿಯ ಮೂಲಕ ಹಣಕಿ ನೋಡುವ ವಿಕೃತಿಯಂತೆಯೇ ಈ ಮಾಹಿತಿಯೂ ವಿಕೃತಿಯಲ್ಲಿಯೇ ಮುಕ್ತಾಯವಾಗುತ್ತದೆ.
ವಿತ್ತ ಮಂತ್ರಿಗಳು ಈ ಮಾಹಿತಿಯ ಅನುಸಾರವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಅತೀ ಲಾಭ
ಪಡೆಯುತ್ತಿರುವ ಕ್ಷೇತ್ರಗಳನ್ನು ಗುರುತಿಸಿದರೆ ಆ ಕ್ಷೇತ್ರಗಳಲ್ಲಿ ಹೂಡಿಕೆಯಿಟ್ಟಿರುವವರ
ಕೈಯಲ್ಲಿ ಶ್ರೀಮಂತಿಕೆಯ ಕೇಂದ್ರೀಕರಣವಾಗುತ್ತಿರುವುದರಿಂದ – ಒಂದು ಸಮತಾವಾದದ ದೃಷ್ಟಿಕೋನವನ್ನು
ಹೇರಿ ತೆರಿಗೆಯ ನೀತಿಗಳನ್ನು ರೂಪಿಸಬಹುದು. ಆದರೆ ಇಂಥ ಮಾಹಿತಿಯಿಂದ ಅಂತಹ ಉನ್ನತ ಕೆಲಸ ಮಾಡಲು
ಯಾವ ಸರಕಾರವೂ ಪ್ರಯತ್ನಿಸಿಲ್ಲ. ಅನೇಕ ವರ್ಷಗಳ ಕಾಲ ಸಾಫ್ಟ್ ವೇರಿನಂತಹ ಕ್ಷೇತ್ರಗಳಿಗೆ
ತೆರಿಗೆಗಳ ವಿನಾಯ್ತಿಯನ್ನೂ, ರಫ್ತಿನ ಪ್ರೋತ್ಸಾಹಧನವನ್ನೂ, ಕೇಂದ್ರ ಸರಕಾರ ನೀಡಿದರೆ, ರಾಜ್ಯ
ಸರಕಾರಗಳು ಸುಲಭಧರದಲ್ಲಿ ಭೂಮಿಯನ್ನೂ ಮಿಕ್ಕ ಸವಲತ್ತುಗಳನ್ನೂ ಒದಗಿಸಿಕೊಟ್ಟಿವೆ. ಕಡೆಗೂ ಈ
ಕ್ಷೇತ್ರದಲ್ಲಿ ಹೂಡಿಕೆಯಿರುವ ನಾರಾಯಣಮೂರ್ತಿ ಪ್ರೇಂಜಿಗಳೇ ಸರಕಾರೀ ವಿನಾಯ್ತಿಗಳನ್ನು
ಮುಂದುವರೆಸುವ ಕಾರಣವಿಲ್ಲ ಎಂದು ಕೆಲವರ್ಷಗಳ ಹಿಂದೆ ಹೇಳಬೇಕಾಯಿತು!
ಶ್ರೀಮಂತರು ತಮ್ಮ
ಶ್ರೀಮಂತಿಕೆಯನ್ನು ಕಳೆದುಕೊಳ್ಳಲು ಕಾರಣಗಳೇನಿರಬಹುದು ಎನ್ನುವ ಮೀಮಾಂಸೆ ನಡೆಸಿದರೆ ತಿಳಿವ ಸತ್ಯ
– ಅವರು ನಿಜಕ್ಕೂ ಶ್ರೀಮಂತಿಕೆಯನ್ನು ಕಳೆದುಕೊಳ್ಳುತ್ತಿಲ್ಲ – ಬದಲಿಗೆ ಶ್ರೀಮಂತಿಕೆಯ
ಪಟ್ಟಿಯಲ್ಲಿ ಸ್ಥಾನಪಲ್ಲಟ ಮಾತ್ರವೇ ಆಗುತ್ತಿದೆ ಎಂಬುದನ್ನು ಮನಗಾಣುತ್ತೇವೆ. ಹೀಗಾಗಿ ಹೋದ
ವರ್ಷಕ್ಕಿಂತ ಈ ವರ್ಷ ಪ್ರೇಂಜಿ 20,000 ಕೋಟಿರೂಪಾಯಿಗಳಿಂದ ಬಡವರಾದರೆಂದರೆ ಅದಕ್ಕೆ ಶೇರು
ಮಾರುಕಟ್ಟೆಯಲ್ಲಿ ವಿಪ್ರೋದ ಶೇರಿನ ದರದ ಕುಸಿತವೇ ಕಾರಣವಾಗಿರುತ್ತದೆ. ಇದು ಕಾರ್ಯಕ್ಷಮತೆಗೆ
ಸಂಬಂಧಿಸಿದ್ದಲ್ಲ. ಆರ್ಥಿಕ ಜಗತ್ತಿನಲ್ಲಿ ಸದ್ಯಕ್ಕೆ ಚಲಾವಣೆಯಾಗುತ್ತಿರುವ ಅತೀ
ಲಾಭವನ್ನಾರ್ಜಿಸುವ ಸಾಧ್ಯತೆ ಮತ್ತೊಂದು ಕ್ಷೇತ್ರಕ್ಕೆ ಪಲ್ಲಟಗೊಂಡಿದೆ ಎನ್ನುವುದನ್ನು ಇದು
ನಿರೂಪಿಸುತ್ತದೆ.
ತಮ್ಮ ಕಾರ್ಯದಕ್ಷತೆಯ
ಕುಸಿತದಿಂದ, ವ್ಯಾಪಾರದ ವೈಫಲ್ಯದಿಂದ ಶ್ರೀಮಂತಿಕೆಯನ್ನು ನಾಶ ಮಾಡಿಕೊಳ್ಳಲು ವಿಶೇಷ ಪ್ರತಿಭೆ
ಬೇಕಿರುತ್ತದೆ. ಈ ಪ್ರತಿಭೆಯನ್ನು ತೋರಿದವರು ನಮ್ಮ ಕರ್ನಾಟಕದವರೇ ಆದ ವಿಜಯ್ ಮಲ್ಯರು. ಹೋದ ವರ್ಷ
ಶ್ರೀಮಂತರ ಪಟ್ಟಿಯಲ್ಲಿದ್ದ ಮಲ್ಯರು ತಮ್ಮ ಕಿಂಗ್ ಫಿಷರ್ ಏರ್ ಲೈನ್ಸ್ ನ (ಸುಮಾರು 10,000
ಕೋಟಿಯ) ನಷ್ಟದಿಂದ ತತ್ತರಿಸಿ "ಬಡವ"ರಾಗಿದ್ದಾರೆ. ಮಿಕ್ಕ ವಿಮಾನಯಾನ ಕಂಪನಿಗಳು ಈ
ರೀತಿಯ ದಯನೀಯ ಪರಿಸ್ಥಿತಿಯನ್ನು ತಲುಪಿಲ್ಲವಾದ್ದರಿಂದ ಇದನ್ನು ಮಲ್ಯರ ಪ್ರತಿಭೆಯಫಲವೆಂದೇ ನಾವು
ಪರಿಗಣಿಸಬೇಕು.
ಒಂದು ರೀತಿಯಲ್ಲಿ
ಶ್ರೀಮಂತರು ತಮ್ಮ ಜೀವನ ಶೈಲಿಯಿಂದಾಗಿ, ಸೀಮಿತ ಸಂಖ್ಯೆಯಿಂದಾಗಿ ಸದಾ ಸುದ್ದಿಯಲ್ಲಿರುವುದರಿಂದ
ಅವರ ಶ್ರೀಮಂತಿಕೆಯ ಮೀಮಾಂಸೆಯನ್ನು ನಾವು ನಡೆಸಬಹುದಾಗಿದೆ. ಆದರೆ ಮಲ್ಯರಂತಹ ಶ್ರೀಮಂತರು
ಉತ್ತುಂಗದಿಂದ ಬಿದ್ದಾಗಲೂ ಸುಪ್ಪತ್ತಿಗೆಯ ಮೇಲೆಯೇ ಬೀಳುವುದರಿಂದ ಈ ಬೀಳಿನಿಂದ ಅವರ ವೈಯಕ್ತಿಕ
ಜೀವನ ಶೈಲಿಗೆ ಯಾವ ಧಕ್ಕೆಯೂ ಆಗುವುದಿಲ್ಲ. ಭಾರತದಲ್ಲಿ ವಿಫಲ ಉದ್ಯಮಗಳಿದ್ದಾಗ್ಯೂ "ಯಶಸ್ವೀ"
ಉದ್ದಿಮೆದಾರರಿರುವ ವಿರೋಧಾಭಾಸವನ್ನು ನಾವು ನೋಡುತ್ತಲೇ ಬಂದಿದ್ದೇವೆ. ಇದಕ್ಕೆ ಮಲ್ಯರಲ್ಲದೇ,
ಸತ್ಯಂನ ರಾಮಲಿಂಗರಾಜು, ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ರಮೇಶ್ ಗೆಲ್ಲಿ, ಉದಾಹರಣೆಗಳಾಗಿದ್ದಾರೆ.
ಆದರೆ ಶ್ರೀಮಂತರ
ಏಳುಬೀಳಿಗೆ ಕೊಟ್ಟಷ್ಟೇ ಗಮನವನ್ನು ನಾವು ಬಡವರ ಏಳುಬೀಳಿನ ಬಗ್ಗೆ ಕೊಡುತ್ತಿಲ್ಲ. ಯಾವ
ಪತ್ರಿಕೆಯೂ ವರ್ಷಕ್ಕೊಮ್ಮೆ ಬಡತನದ ರೂಪುರೇಖೆ ಆಯಾಮಗಳಬಗ್ಗೆ ಚರ್ಚಿಸುವುದಿಲ್ಲ. ಬಿಲಿಯ ಡಾಲರುಗಳ
ರೇಖೆಯಾಸುಪಾಸಿನಲ್ಲಿ ಮಿಡಿದಾಡುತ್ತಿರುವ ಶ್ರೀಮಂತರ ಶ್ರೀಮಂತಿಕೆಯನ್ನು ನಾವು ಅಳೆದೂ ಸುರಿದೂ
ಕಾರಣಗಳನ್ನು ಹುಡುಕುತ್ತಿರವಾಗ, ದಿನಕ್ಕೆ ಐವತ್ತು ಅಥವಾ ನೂರು ರೂಪಾಯಿಗಳ ಆದಾಯವಿರುವ ಎಷ್ಟು
ಬಡವರು ಈ ನೂರು ರೂಪಾಯಿಯ ಸೀಮೆಯನ್ನು ಉಲ್ಲಂಘನ ಮಾಡಿದರು, ಎಷ್ಟು ಮಂದಿ ನೂರರ ರೇಖೆಯ
ಮೇಲಿದ್ದವರು ಕೆಳಕ್ಕೆ ಜಾರಿದರು ಎನ್ನುವ ಚರ್ಚೆ ನಡೆಯುವುದೇ ಇಲ್ಲ. ಬಿಲಿಯ ಡಾಲರುಗಳ
ಆಸುಪಾಸಿನಲ್ಲಿ ಕೇವಲ 55 ಸಂಸಾರಗಳ ನಸೀಬು ಹೊರಳಾಡುತ್ತಿದ್ದರೆ, ಭಾರತದ ಜನಸಂಖ್ಯೆಯ ಸುಮಾರು 10
ಪ್ರತಿಶತ ಜನ ಈ ನೂರು ರೂಪಾಯಿಯ ರೇಖೆಯ ಆಸುಪಾಸಿನಲ್ಲಿ ತಡಕಾಡುತ್ತಿರುತ್ತಾರೆ. ನೂರು ರೂಪಾಯಿ
ಆದಾಯದ ರೇಖೆಯ ಕೆಳಸ್ಥರದಲ್ಲಿರುವ ಸುಮಾರು ಐದು ಕೋಟಿ ಕುಟುಂಬಗಳನ್ನು ನಾವು
ಪರಿಗಣಿಸುತ್ತಿಲ್ಲವೆಂಬುದನ್ನು ಗುರುತಿಸುತ್ತಲೇ ಅಂದಾಜು ಮಾಡಿದಾಗ ಸುಮಾರು ಎರಡೂವರೆ ಕೋಟಿ
ಕುಟುಂಬಗಳ ನಸೀಬನ್ನು ಚರ್ಚಿಸುವುದಕ್ಕೆ ನಮಗೆ ಸಮಯವೂ, ಪತ್ರಿಕೆಯ ಪುಟಗಳೂ ದೊರೆಯುವುದಿಲ್ಲ.
ಈ ಬಗ್ಗೆ ವ್ಯಾಪಕ
ಅಧ್ಯಯನ ನಡೆಸಿರುವ ಅನಿರುದ್ಧ ಕೃಷ್ಣರ ಪ್ರಕಾರ ಈ ನೂರುರೂಪಾಯಿಯ ಆದಾಯದ ರೇಖೆಯನ್ನು ಉಲ್ಲಂಘಿಸಿ
ಮೇಲಕ್ಕೇರುವವರು ಜನಸಂಖ್ಯೆಯ ಸುಮಾರು 10 ಪ್ರತಿಶತ ಕುಟುಂಬಗಳಾದರೆ ಆ ರೇಖೆಯಮೇಲಿಂದ ಕೆಳಕ್ಕೆ
ಜಾರುವ ಕುಟುಂಬಗಳು ಜನಸಂಖ್ಯೆಯ ಸುಮಾರು 8 ಪ್ರತಿಶತ ಕುಟುಂಬಗಳಾಗಿರುತ್ತಾರೆ! ಅವರ ಅಂದಾಜಿನ
ಪ್ರಕಾರ ನಿವ್ವಳವಾಗಿ ಈ ರೇಖೆಯ ಉಲ್ಲಂಘನದ ಸಂಖ್ಯೆ ವರ್ಷಕ್ಕೆ ಕೇವಲ 2 ಪ್ರತಿಶತವಿರುತ್ತದೆ. ಈ
ಸಂಖ್ಯೆಗಳು ಭಾರತದ ವಿವಿಧ ಭಾಗಗಳಿಗೆ ವರ್ತಿಸುತ್ತವೆಯಷ್ಟೇ ಅಲ್ಲ, ಕೀನ್ಯಾ, ಹಾಗೂ ಮುಂದುವರೆದ
ಅಮೆರಿಕಕ್ಕೂ ವರ್ತಿಸುತ್ತದೆ. ಬಡವರು ಈ ಸೀಮೋಲ್ಲಂಘನ ಮಾಡಲು ಕಾರಣ ವಿಭಿನ್ನ ಮೂಲಗಳಿಂದ ಬರುವ
ಆದಾಯ, ನೌಕರಿ, ಮತ್ತು ಉದ್ಯಮಶೀಲತೆಯಾದರೆ, ಮೇಲುಸ್ಥರದಿಂದ ಕೆಳಜಾರಲು ಇರುವ ಕಾರಣಗಳೇ
ಭಿನ್ನವಾಗಿವೆ. ಈ ಕಾರಣಗಳು ಸೋಮಾರಿತನ, ಕುಡುಕುತನ, ಲೋಲುಪಜೀವನವಂತೂ ಖಂಡಿತಾ ಅಲ್ಲವೆಂದು ಆತ
ಹೇಳುತ್ತಾರೆ. ಬಡತನಕ್ಕೆ ಜಾರಲು ಅನಿರುದ್ಧ ಕೃಷ್ಣ ಗುರುತಿಸಿರುವ ಮೂರು ಮುಖ್ಯ ಕಾರಣಗಳೆಂದರೆ
ಅನಾರೋಗ್ಯ, ಸಾಮಾಜಿಕ ಜವಾಬ್ದಾರಿಗಳು (ಮದುವೆ, ಮಗುವಿನ ಜನನಕ್ಕೆ ಔತಣಕೂಟ, ಮೃತ್ಯುಭೋಜನ
ಇತ್ಯಾದಿ) ಮತ್ತು ಬರ ಎನ್ನುವುದನ್ನು. ಇವೆಲ್ಲಕ್ಕಿಂತ ಮಿಗಿಲಾಗಿ, ಮೇಲಿನ ಖರ್ಚುಗಳಿಗೆ ಪಡೆವ
ಸಾಲದ ಭಾರವೂ ಬಡತನಕ್ಕೆ ಜಾರಲು ಕಾರಣವಾಗಬಹುದೆಂದು ಆತ ಹೇಳುತ್ತಾರೆ.
ಶ್ರೀಮಂತರ
ಸ್ಥಾನಪಲ್ಲಟವಾಗುವುದಕ್ಕೆ ಅವರ ಉದ್ಯಮದ ಲಾಭನಷ್ಟಗಳ ಸಂದರ್ಭ ಹೆಚ್ಚು ಹಾಗೂ ಕಾರ್ಯಕ್ಷಮತೆ
ಮುಖ್ಯವಲ್ಲದ ಕಾರಣವಾದಂತೆಯೇ, ಬಡವರ ಸ್ಥಾನಪಲ್ಲಟಕ್ಕೂ ತಮ್ಮ ಕೈಮೀರಿದ ಆರೋಗ್ಯ ಮೃತ್ಯು ಮತ್ತು
ಬರಗಳಂತಹ ಕಾರಣಗಳೇ ಕಾಣಿಸುತ್ತಿವೆ. ಆದರೆ ಜಗತ್ತಿನ ಅತ್ಯಂತ ದುಬಾರಿ ಮದುವೆ ಮಾಡಿದ ಲಕ್ಷ್ಮೀ
ಮಿತ್ತಲ್ ಯಾವರೀತಿಯಿಂದಲೂ ಬಡವರಾಗಲಿಲ್ಲ. ಆದರೆ ಕೆಳಸ್ಥರದಲ್ಲಿರುವವರು ಒಂದೇ ಔತಣಕೂಟಕ್ಕೆ
ತತ್ತರಿಸಿಹೋಗುತ್ತಾರೆ. ಬೆಳವಣಿಗೆಯೇ ಬೀಜಮಂತ್ರವಾಗಿರುವ ಈ ಮಾರುಕಟ್ಟೀಕರಣದ ಸಂದರ್ಭದಲ್ಲಿ
ಹೆಚ್ಚುತ್ತಿರುವ ಶ್ರೀಮಂತಿಕೆ, ಮತ್ತು ಅದಕ್ಕಿಂತ ಹೆಚ್ಚಾಗಿ ಅವಕಾಶದ ಅಸಮಾನತೆಯ ಮಾತುಗಳನ್ನು
ಎತ್ತಲು ಒಂದಷ್ಟು ಪತ್ರಿಕೆಯ ಪುಟಗಳನ್ನು ಕಾಯ್ದಿರಿಸುವ ಸಮಯ ಬಂದಿದೆ. ಲೋಲುಪತೆಗೆ ಮೀಸಲಾಗಿರುವ
ಪೇಜ್ ಥ್ರೀಗೆ ಸಮಾನಾಂತರವಾಗಿ ನಮ್ಮಲ್ಲಿರುವ ಬಡತನ ಅಸಮಾನತೆಯನ್ನು ಅರಿಯಲೊಂದು ಪೇಜು ಬೇಕಾಗಿದೆ.
ಅದು ಪೇಜ್ ವನ್ ಆದರೆಯೇ ಒಳಿತು.
ಗುರುವಾರ, 02 ಮೇ 2013
No comments:
Post a Comment