Sunday, May 12, 2013

ಸಹಕಾರೀ ಕ್ಷೇತ್ರದಲ್ಲಿ "ಪ್ರಗತಿ”ಯ ಗೊಂದಲ


ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಲದ  (ಅಮುಲ್) 2012-13ವರ್ಷದ ವ್ಯಾಪಾರ  13,750 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ. ಈ ಪ್ರಗತಿಯನ್ನು ನೋಡಿ ಮೆಚ್ಚುತ್ತಲೇ ಕೆಲವು ಕಷ್ಟದ ಪ್ರಶ್ನೆಗಳನ್ನು ನಾವು ಕೇಳಬೇಕು. ಸಹಕಾರಿ ಸಂಸ್ಥೆಗಳಲ್ಲಿ ಬೆಳೆವಣಿಗೆಯ/ಯಶಸ್ಸಿನ ಮಾಪನವೇನು? ಅವುಗಳಿಗೆ ಬೆಳವಣಿಗೆಯ ಮಿತಿಯಿರಬೇಕೇ? ಸಹಕಾರಿ ಸಂಸ್ಥೆಗಳು ಸ್ಥಳೀಯತೆಯನ್ನು ಎಷ್ಟು ಕಾಪಾಡಬೇಕು? ಇವು ಸರಳವಾದ ಪ್ರಶ್ನೆಗಳಲ್ಲವಾದರೂ ಕೇಳಲೇಬೇಕಾದ ಪ್ರಶ್ನೆಗಳು.

ಅಮುಲ್ ಸ್ಥಾಪಿತವಾದದ್ದು ಮೊದಲಿಗೆ ಖೇಡಾ ಜಿಲ್ಲೆಯಲ್ಲಿ. ನಂತರ ಗುಜರಾತಿನ ಹಾಲು ಉತ್ಪಾದಕರ ಸಹಕಾರಿ ಸಂಸ್ಥೆಯಾಗಿ ಬೆಳೆಯಿತು. ತನ್ನ ಸದಸ್ಯರು ಸರಬರಾಜು ಮಾಡುವ ಹಾಲಿಗೆ ಅತ್ಯಧಿಕ ಬೆಲೆಯನ್ನು ನೀಡಿ ಅವರ ಹಿತಾಸಕ್ತಿಯನ್ನು ಕಾಪಾಡುವುದು ಸಂಸ್ಥೆಯ ಮುಖ್ಯ ಉದ್ದೇಶ. ಹೈನುಗಾರಿಕೆ ಕ್ಷೇತ್ರದಲ್ಲಿರುವ ಬಹುತೇಕ ಸಹಕಾರಿ ಸಂಸ್ಥೆಗಳು ಗುಜರಾತ್ ಮಾದರಿಯಲ್ಲಿಯೇ ಸ್ಥಾಪಿತವಾಗಿವೆ. ಈ ಮಾದರಿಯಲ್ಲಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವಿರುತ್ತದೆ. ಆ ಸಂಘ ಉತ್ಪಾದಕರಿಂದ ಹಾಲನ್ನು ಶೇಖರಿಸುತ್ತದೆ. ಆ ಹಾಲನ್ನು ಜಿಲ್ಲಾ ಮಟ್ಟದ ಒಕ್ಕೂಟದಲ್ಲಿ ಸಂಸ್ಕರಿಸಲಾಗುತ್ತದೆ. ಗ್ರಾಮ ಮಟ್ಟದ ಸಹಕಾರ ಸಂಘಗಳ ಅಧ್ಯಕ್ಷರು ಜಿಲ್ಲಾ ಒಕ್ಕೂಟದ ಮಹಾಸಭೆಯ ಭಾಗವಾಗಿದ್ದು, ಒಕ್ಕೂಟದ ಆಡಳಿತ ಮಂಡಳಿಯನ್ನು ತಮ್ಮೊಳಗಿನ ಹಲವು ಹತ್ತು ಜನರನ್ನು ಚುನಾಯಿಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಹಾಲು ಹಾಲಿನ ಉತ್ಪನ್ನಗಳ ಸಂಸ್ಕರಣೆಯನ್ನು ಮಾಡುವ ಒಕ್ಕೂಟಗಳು ಒಟ್ಟಾಗಿ ರಾಜ್ಯ ಮಟ್ಟದ ಮಹಾಮಂಡಲದ ಮೂಲಕ ಮಾರಾಟ ಕಾರ್ಯ ನೆರವೇರುತ್ತದೆ. ಸಾಮಾನ್ಯವಾಗಿ ಒಕ್ಕೂಟದ ಅಧ್ಯಕ್ಷರೆಲ್ಲರೂ ಮಹಾಮಂಡಲದ ಮಹಾಸಭೆಯ ಮತ್ತು ಆಡಳಿತ ಮಂಡಲಿಯ ಸದಸ್ಯರಾಗಿ ಕೆಲಸ ಮಾಡುತ್ತಾರೆ. ಅವರುಗಳಲ್ಲೊಬ್ಬರು ಮಹಾಮಂಡಲದ ಅಧ್ಯಕ್ಷರಾಗುತ್ತಾರೆ. ಸಹಕಾರ ಸಂಘಗಳೂ, ಒಕ್ಕೂಟಗಳೂ ಸ್ಥಳೀಯವಾಗಿ ಹಾಲು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಬಹುದಾದರೂ, ಹೆಚ್ಚಿನ ಮಾರಾಟವನ್ನ ಮಹಾಮಂಡಲಿಯೇ ಮಾಡುತ್ತದೆ.

ಗೋಪುರಾಕಾರದ ಈ ನಿರ್ಮಿತಿಯ ಕೇಂದ್ರಬಿಂದು ಮತ್ತು ಅಡಿಗಲ್ಲು ಹಾಲು ಉತ್ಪಾದಕರು. ಹಾಲನ್ನು ಹೇಗೆ ಸಂಸ್ಕರಣೆ ಮಾಡಬೇಕು, ಎಷ್ಟನ್ನು ಹಾಲಿನ ರೂಪದಲ್ಲೇ ಮಾರಾಟ ಮಾಡಬೇಕು, ಯಾವ ಪರಿಮಾಣದಲ್ಲಿ ಬೆಣ್ಣೆ, ಚೀಸು, ಪನೀರು, ಮಜ್ಜಿಗೆ, ಐಸ್ ಕ್ರೀಂಗಳಾಗಿ ಪರಿವರ್ತಿಸಬೇಕೆನ್ನುವ ನಿರ್ಧಾರಗಳನ್ನು ಒಕ್ಕೂಟ-ಮಹಾಮಂಡಲದ ತಾಂತ್ರಿಕ ಮತ್ತು ನಿರ್ವಹಣಾ ಚತುರರಾದ ನೌಕರರು ಮಾಡುತ್ತಾರೆ. ಅದಕ್ಕೆ ಅಧ್ಯಕ್ಷರ ಒಪ್ಪಿಗೆಯ ಮುದ್ರೆ ಬೀಳುತ್ತದಾದರೂ ಈ ಸಾಧ್ಯತೆಗಳನ್ನು ಚುನಾಯಿತ ಪ್ರತಿನಿಧಿಗಳ ಮುಂದಿಡುವವರು ನೌಕರರೇ.

ಗುಜರಾತಿನ ಮಹಾಮಂಡಲ 2005ರ ವರೆಗೂ ಕುರಿಯನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕುರಿಯನ್ ಹಾಲು ಉತ್ಪಾದಕ ರೈತರಾಗಿರಲಿಲ್ಲ. ಆದರೂ ಅವರನ್ನು ಆಡಳಿತ ಮಂಡಲಿಯಲ್ಲಿ ಹೈನುಗಾರಿಕೆಯ ತಜ್ಞರೆಂದು ಸೇರಿಸಿಕೊಂಡು ಅವರನ್ನೇ ಅಧ್ಯಕ್ಷರಾಗಿ ಚುನಾಯಿಸುವ ಪ್ರಕ್ರಿಯೆಯಿತ್ತು. 2005ರಲ್ಲಿ ಕುರಿಯನ್ ಅಧ್ಯಕ್ಷ ಪದವಿಯಿಂದಿಳಿದರು. ಅಲ್ಲಿಯವರೆಗೂ ಅಮುಲ್‌ನ ಪ್ರಗತಿ ಒಂದು ಮಟ್ಟದಲ್ಲಿತ್ತು. ಅವರ ಅಧ್ಯಕ್ಷೀಯ ಅವಧಿಯ ಕಡೆಯ ಹತ್ತು ವರ್ಷಗಳು ಆ ಸಂಸ್ಥೆಯ ಬೆಳವಣಿಗೆ ವಾರ್ಷಿಕ ಶೇಕಡಾ 10ರಷ್ಟಿತ್ತು. ಕಡೆಯ ಐದು ವರ್ಷಗಳಲ್ಲಿ ಈ ಪ್ರಗತಿ ವಾರ್ಷಿಕ ಶೇಕಡಾ  6ಕ್ಕೆ ಕುಸಿದಿತ್ತು. ಕುರಿಯನ್ ಸಂಸ್ಥೆಯನ್ನು ಬಿಡುವ ವೇಳೆಗೆ ಅದರ ವ್ಯಾಪಾರ ಸುಮಾರು 2,900 ಕೋಟಿ ರೂಪಾಯಿಗಳಷ್ಟಿತ್ತು. ಕೇವಲ ಶೇಕಡಾ 6ರ ಪ್ರಗತಿಯನ್ನು  ಹೇಗೆ ಅರ್ಥೈಸಬೇಕು? ಅಧಿಕಾರದ ಕಡೆಯ ದಿನಗಳಲ್ಲಿ ಕುರಿಯನ್ ತಮ್ಮ ಆಡಳಿತದ ಮೊನಚನ್ನು ಕಳೆದುಕೊಂಡುಬಿಟ್ಟಿದ್ದರು ಎನ್ನಬಹುದೇ, ಅಥವಾ ಇದರಲ್ಲಿ ಇನ್ನೂ ಗಹನವಾದ ಅರ್ಥವೇನಾದರೂ ಇದೆಯೇ?

ಈ ಪ್ರಗತಿಯನ್ನು ಅಲ್ಲಿಂದ ಮುಂದಿನ ಏಳು ವರ್ಷಗಳ ಕಾಲಕ್ಕೆ ಹೋಲಿಸಿದರೆ ಇದ್ದಕ್ಕಿದ್ದ ಹಾಗೆ ವ್ಯಾಪಾರದ ಗತಿ ಬದಲಾಗುವುದನ್ನು ಕಾಣಬಹುದು. ಕುರಿಯನ್ ನಂತರದ ಏಳು ವರ್ಷಗಳಲ್ಲಿ ಅಮುಲ್ ವಾರ್ಷಿಕ  ಸರಾಸರಿ ಶೇಕಡಾ 22ರ  ಬೆಳವಣಿಗೆಯನ್ನು ಸಾಧಿಸಿತು. ಕುರಿಯನ್ ಅಧಿಕಾರ ಬಿಡುತ್ತಿದ್ದಂತೆಯೇ ತೀವ್ರ ಪ್ರಗತಿಯನ್ನು ಸಾಧಿಸಿದ್ದನ್ನು ಕಾಣುತ್ತೇವೆ. ಅಂದರೆ ಒಬ್ಬ ತಾಂತ್ರಿಕ ತಜ್ಞ ದಕ್ಷತೆಯಿಂದ ಆ ಸಂಸ್ಥೆಯನ್ನು ನಡೆಸಿಕೊಂಡು ಬಂದದ್ದೇನೋ ಸರಿ, ಆದರೆ ಆ ಸಂಸ್ಥೆಯ ಸಾಧ್ಯತೆಗಳನ್ನು ತೆರೆದು, ಮಿತಿಗಳನ್ನು ಮೀರುವ ಪ್ರಯತ್ನವನ್ನಾತ ಮಾಡಲಿಲ್ಲವೆ?

2011-12ರ ಅಂತ್ಯದಲ್ಲಿ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಂದಿನ ಅಧ್ಯಕ್ಷ ಪಾರ್ಥಿಭಾಯ್ ಬಟೋಲ್ "ಕಳೆದ ಮೂರು ವರ್ಷಗಳಲ್ಲಿ ಹಾಲಿನ ಖರೀದಿ ದರವನ್ನು ಶೇಕಡಾ 58ರಷ್ಟು  ಹೆಚ್ಚಿಸಿ ರೈತರನ್ನು ಹೈನುಗಾರಿಕೆಯತ್ತ ಆಕರ್ಷಿಸುವುದರಲ್ಲಿ ನಾವು ಸಫಲರಾಗಿದ್ದೇವೆ" ಎಂದಿದ್ದರು. ಇದೇ ರಾಗವನ್ನು ಅವರ ಕಾಲದಲ್ಲಿ ನೇಮಕಗೊಂಡು ಮುಂದುವರೆಯುತ್ತಿರುವ ಮುಖ್ಯಕಾರ್ಯನಿರ್ವಹಣಾಧಿಕಾರಿ ರೂಪಿಂದರ್ ಸೋದಿಯೂ ಆಲಾಪಿಸುತ್ತಾರೆ. ಅಂದರೆ ಕುರಿಯನ್ ಮಾಡಲಾರದ ಕೆಲಸವನ್ನು ಬಟೋಲ್ ಮಾಡಿಬಿಟ್ಟರೇ? ಬಟೋಲ್‌ಗೆ ತಮ್ಮ ಅಧಿಕಾರವನ್ನ ಉಳಿಸಿಕೊಳ್ಳಲು ದರಗಳನ್ನು ಹೆಚ್ಚಿಸುವ, ತಾವು ಪ್ರತಿನಿಧಿಸುವ ರೈತರನ್ನು ಸಂತೋಷವಾಗಿಡುವ ತುರ್ತು ಇತ್ತು. ಸಹಜವಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಕುರಿಯನ್ನರಿಗೆ ಆ ತುರ್ತು ಇರಲಿಲ್ಲ.

ಈ ನಮ್ಮ ಚರ್ಚೆ ಇಲ್ಲಿಗೆ ನಿಂತುಬಿಟ್ಟರೆ ಗುಜರಾತ್ ಹಾಲು ಮಾರಾಟ ಮಹಾಮಂಡಲದಲ್ಲಿ  ಯಾವ ತೊಂದರೆಯೂ ಕಾಣುವುದಿಲ್ಲ. ಆದರೆ ಬಟೋಲ್ ತಮ್ಮ ಮೊದಲ ನಾಲ್ಕು ವರ್ಷದ ಅಧಿಕಾರಾವಧಿಯ ನಂತರದ ಚುನಾವಣೆಯ ಕಾಲಕ್ಕೆ ನಡೆದ ರಾಜಕೀಯವನ್ನು ಆ ಸಂಸ್ಥೆಯ ಎಷ್ಟು ತೆಳುವಾದ ಅಡಿಪಾಯದ ಮೇಲೆ ನಡೆಯುತ್ತಿದೆ ಅನ್ನುವುದನ್ನು ತೋರುತ್ತದೆ. ಸುಮಾರು 30 ಲಕ್ಷ ರೈತರ ಹಿತಾಸಕ್ತಿಯನ್ನು ಹೊಂದಿರುವ ಸಂಸ್ಥೆ ಹದಿನೈದು ಜನರ ಆಡಳಿತ ಮಂಡಲಿಯ ರಾಜಕೀಯದ ತೂತೂಮೈಮೈನಲ್ಲಿ ಸಿಲುಕಿ ನಲುಗಿತು. ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಡೆಯುತ್ತಿದ್ದ ವಾರ್ಷಿಕ ಮಹಾಸಭೆ ಸ್ಥಳೀಯ ರಾಜಕೀಯದಿಂದಾಗಿ ಆಗಸ್ಟ್ ತಿಂಗಳವರೆಗೂ ನಡೆಯಲೇ ಇಲ್ಲ! ವಾರ್ಷಿಕ ಮಹಾಸಭೆ ನಡೆಯುವುದೇ ಸಾಧ್ಯವಿಲ್ಲವೇನೋ ಅನ್ನುವ ಮಟ್ಟಕ್ಕೆ ತಲುಪಿಬಿಟ್ಟಿತ್ತಾದರೂ ಕಡೆಗೆ ಒಳ ಒಪ್ಪಂದಗಳ ಮೇರೆಗೆ ಅದು ನಡೆಯಿತು. ಆಡಳಿತ ಮಂಡಲಿಯ ಜನರು ಈ ಸಂಸ್ಥೆಯನ್ನು ನಷ್ಟಗಳ ಕೂಪಕ್ಕೆ ತಳ್ಳಿದ್ದರೆ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವ ಸಾಧ್ಯತೆಯಿತ್ತೇ ವಿನಃ ವೈಯಕ್ತಿಕವಾಗಿ ಬೇರಾವ ಆರ್ಥಿಕ ನಷ್ಟವೂ ಅವರಿಗೆ ಆಗುತ್ತಿರಲಿಲ್ಲ. ಕಡೆಗೂ ಬಟೋಲ್ ಗೆದ್ದು ಸದಸ್ಯರ ಹಿತಾಸಕ್ತಿಯನ್ನು ಕಾಪಾಡಿದರೆನ್ನಿ!

ಆನಂತರದ 2012ರ ಚುನಾವಣೆಯಲ್ಲಿ ಹೆಚ್ಚಿನ ಕಿತ್ತಾಟವಿಲ್ಲದಯೇ ಅಧಿಕಾರದ ಹಸ್ತಾಂತರವಾಯಿತು. ಬಟೋಲ್‌ಗಿಂತ ತಾವೇನೂ ಕಡಿಮೆಯಿಲ್ಲವೆಂದು ಹಾಲೀ ಅಧ್ಯಕ್ಷ ವಿಪುಲ್ ಚೌಧರಿಯವರು ನಿರೂಪಿಸಬೇಕಾಗಿದೆ. ಹೀಗಾಗಿ ಮಹಾಮಂಡಲ ತೀವ್ರ ಗತಿಯಲ್ಲಿ ಪ್ರಗತಿ ಸಾಧಿಸಲು ವ್ಯಾಪಾರವನ್ನು ಬೆಳೆಸಿಕೊಂಡು ಹೋಗುತ್ತಿದೆ. ಬಟೋಲ್ ಸಮಯದಲ್ಲಿ ಪ್ರಾರಂಭವಾಗಿ ಮುಂದುವರೆದಿರುವ ತೀವ್ರ ಬೆಳವಣಿಗೆಯ ಪ್ರಕ್ರಿಯೆ ಒಳ್ಳೆಯದೋ ಅಲ್ಲವೋ ಎನ್ನುವುದನ್ನು ನಾವು ಪರಾಮರ್ಶಿಸಬೇಕು. ಕಾರಣ: ಗುಜರಾತ್ ಮಹಾಮಂಡಲ ತೀವ್ರಗತಿಯಲ್ಲಿ ರಾಜ್ಯದ ಹೊರಭಾಗದಲ್ಲಿಯೂ ಹಾಲಿನ ಖರೀದಿ ಮತ್ತು ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. 2011-12ರಲ್ಲಿ ಶೇಖರಿಸಿದ ಹಾಲಿನ ಶೇಕಡಾ 10ರಷ್ಟನ್ನು   ಹೊರ ರಾಜ್ಯಗಳಿಂದ, ಸಂಸ್ಥೆಯ ಸದಸ್ಯತ್ವ ಹೊಂದಲಾಗದ ರೈತರಿಂದ ಪಡೆದಿದೆ. 2012-13ರಲ್ಲಿ ಈ ಪರಿಮಾಣ ಇನ್ನೂ ಹೆಚ್ಚಾಗಿದೆಯಲ್ಲದೇ, ಇದೇ ಅಮುಲ್ ನ ಬೆಳವಣಿಗೆಯ ಬೀಜಮಂತ್ರವಾಗಿದೆ.

ಕುರಿಯನ್ ಆಡಳಿತಕಾಲದ ಅಂತ್ಯದಲ್ಲಿ ಬೆಳವಣಿಗೆ ಕುಂಠಿತಗೊಂಡರೂ ಸ್ಥಳೀಯತೆಯನ್ನು ಬಿಟ್ಟುಕೊಡದೆಯೇ ಆತ ಬಹುಶಃ ಗುಜರಾತಿನ ರೈತರಿಗೆ ವಿಧೇಯರಾಗಿದ್ದರು. ಈಗ ರೈತರಿಂದಲೇ ಚುನಾಯಿತರಾದ ನಾಯಕರು ರೈತರಿಗೆ ಹೆಚ್ಚು ಬೆಲೆ/ಲಾಭವನ್ನು ಹಂಚುವ ಉತ್ಸಾಹದಲ್ಲಿ  ಪ್ರಗತಿಯ ಬೆನ್ನೇರಿ ಗುಜರಾತಿನಿಂದಾಚೆಗೆ ಹೋಗುವ ಪ್ರಕ್ರಿಯೆಗೆ ನಾಂದಿ ಹಾಡಿದ್ದಾರೆ. ವ್ಯಾಪಾರಿ ದೃಷ್ಟಿಯಿಂದ ಇದು ಸ್ವಾಗತಾರ್ಹವಾದರೂ, ಸಹಕಾರಿ ದೃಷ್ಟಿಯಿಂದ ಇದು ಅಪಾಯದ ದಾರಿ.

ಮೂರು ಮಜಲಿನ ಮಹಡಿಯ ಮೇಲೆ ಕುಂತವರ ರಾಜಕೀಯವನ್ನು ಕೆಳಸ್ತರದಲ್ಲಿರುವ ರೈತರು ಅಸಹಾಯಕರಾಗಿ ನೋಡಬೇಕಾದ್ದನ್ನು 2010ರ ರಾಜಕೀಯದಲ್ಲಿ ನೋಡಿದೆವು. ನಮ್ಮ ಜನತಾಂತ್ರಿಕ ವ್ಯವಸ್ಥೆಯಲ್ಲಿ ರಾಷ್ಟ್ರಾಧ್ಯಕ್ಷರನ್ನು ಬದಲಾಯಿಸಬೇಕಾದ ಪರಿಸ್ಥಿತಿ ಉಂಟಾದರೆ ಸಾಮಾನ್ಯ ಪ್ರಜೆಗಳಾಗಿ ನಾವು ಎಷ್ಟು ಅಸಹಾಯಕರಾಗಿರುತ್ತೇವೋ, ಅಷ್ಟೇ ಅಸಹಾಯಕತೆಯನ್ನು ಕೆಳಸ್ತರದಲ್ಲಿರು ರೈತರೂ ಅನುಭವಿಸಬೇಕು. ಯಾಕೆಂದರೆ ಆ ಪ್ರಾಥಮಿಕ ಸಹಕಾರ ಸಂಘದಲ್ಲಿರುವವರು ಚುನಾಯಿಸಲು ಸಾಧ್ಯವಿರುವುದು ತಮ್ಮ ಅಧ್ಯಕ್ಷರನ್ನು ಮಾತ್ರ. ಅಲ್ಲಿಂದ ಮುಂದಕ್ಕೆ ಯಾವ ಮಾತೂ ಅಧ್ಯಕ್ಷರ ಮತ್ತು ಅವರು ಚುನಾಯಿಸುವ ಒಕ್ಕೂಟದ ಆಡಳಿತ ಮಂಡಲಿ ಮತ್ತದರ ಅಧ್ಯಕ್ಷರ ಮೂಲಕವೇ ನಡೆಯುತ್ತದೆ. ಹೀಗಾಗಿ ಸಂಸ್ಥೆ ದೊಡ್ಡದಾದಷ್ಟೂ, ತಾಂತ್ರಿಕ ಸಂಕೀರ್ಣತೆಯನ್ನು ಬೆಳೆಯಿಸಿಕೊಂಡಷ್ಟೂ, ಸ್ಥಳೀಯತೆಯಿಂದ ದೂರವಾದಷ್ಟೂ, ರೈತರಿಂದ ದೂರವಾಗಿ ಉದ್ಯೋಗಿಗಳ, ಕೈಗೆಟುಕದ ಕೆಲವೇ ಪ್ರತಿನಿಧಿಗಳ ಕೈಗೆ ಸಿಕ್ಕಿಬೀಳುತ್ತದೆ. ಕುರಿಯನ್ ರಂತಹ ರೈತ ಹಿತೈಷಿಗಳಿದ್ದಷ್ಟೂ ದಿನ ಇದ್ಯಾವುದರಿಂದಲೂ ಅಪಾಯವಿಲ್ಲ. ಆದರೆ ಹೈನುಗಾರಿಕೆ-ರೈತರ ಬಗ್ಗೆ ಕಳಕಳಿಯಿಲ್ಲದ ನಾಯಕರು ಬಂದ ದಿನವೇ ಸಂಸ್ಥೆಯ ಅವನತಿ ಪ್ರಾರಂಭವಾಗುತ್ತದೆ.

ತೀವ್ರಗತಿಯ ಬೆಳವಣಿಗೆ, ಮಾರುಕಟ್ಟೆಯ ಪಾಲು, ಹೆಚ್ಚಿನ ವ್ಯಾಪಾರ, ಲಾಭ, ಎಲ್ಲವೂ ಪಟ್ಟಭದ್ರ ಹಿತಾಸಕ್ತಿಗಳನ್ನು ಆಕರ್ಷಿಸುವ ಅಯಸ್ಕಾಂತಗಳೇ. ಗುಜರಾತಿನ ಮಹಾಮಂಡಲ ತೀವ್ರಗತಿಯಲ್ಲಿ, ಅದೂ ರಾಜ್ಯದಿಂದ ದೂರದ, ತನ್ನ ಸದಸ್ಯರಿಂದ ದೂರವಾದ ವ್ಯಾಪಾರದಿಂದಾಗಿ ಅಂತಹ  ಅಯಸ್ಕಾಂತವಾಗುತ್ತಿರುವುದು ನಮಗೆ ಖುಷಿಗಿಂತ ಆತಂಕವನ್ನೇ ಉಂಟುಮಾಡಬೇಕು.

ಭಾನುವಾರ, 05 ಮೇ 2013


No comments:

Post a Comment