ಕ್ಯಾನ್ಸರ್ ಗೆ ಬಳಸುವ ಔಷಧಿಯಾದ ಗ್ಲಿವೆಕ್ಕನ್ನು
ತಯಾರಿಸಿ ಮಾರಾಟಮಾಡುವ ಏಕಸ್ವಾಮ್ಯ ಹಕ್ಕಿಗೆ ಅರ್ಜಿ ಸಲ್ಲಿಸಿದ್ದ ನೊವಾರ್ಟಿಸ್ ಸಂಸ್ಥೆಯ
ಮನವಿಯನ್ನು ತಿರಸ್ಕರಿಸಿ ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿದೆ. ನೊವಾರ್ಟಿಸ್
ಸಂಸ್ಥೆ ಗೊಣಗುತ್ತಲೇ, ಭಾರತದ ಸಂದರ್ಭದಲ್ಲಿ ಮುಂದೆ ಹೊಸ ಔಷಧಗಳ ಸಂಶೋಧನೆಗೆ ಹಣ ಹೂಡುವುದು
ಕಷ್ಟವೆಂಬ ಬೆದರಿಕೆ ಹಾಕಿ ಈ ತೀರ್ಪನ್ನು ಒಪ್ಪಿದೆ. ಜೀವವನ್ನುಳಿಸುವ ಔಷಧವನ್ನು ಯಾವ ಬೆಲೆಗೆ
ಮಾರಬೇಕು, ಅದನ್ನು ರೂಪಿಸಲಾಗುವ ಸಂಶೋಧನೆಯ ಖರ್ಚನ್ನು ಯಾರು ಭರಿಸಬೇಕು ಅನ್ನುವುದು ಬಹು ಚರ್ಚಿತ
ಮಾತು. ವೈದ್ಯಕೀಯ ಕ್ಷೇತ್ರದಲ್ಲಿ ಜನರ ಜೀವ ಒಳಗೊಂಡಿರುವುದರಿಂದ ಈ ಚರ್ಚೆ ಹೆಚ್ಚಿನ ಮಹತ್ವವನ್ನು
ಪಡೆಯುತ್ತದಾದರೂ ಇದು ಈ ಕ್ಷೇತ್ರಕ್ಕೆ ಸೀಮಿತವಾಗಿಲ್ಲ.
ಗ್ಲಿವೆಕ್ ನ ಮೂಲ ಆಣ್ವಿಕ ರಚನೆಯನ್ನು ಕಂಡುಹಿಡಿದವರು
ಬ್ರಿಯಾನ್ ಡ್ರಕರ್. ಅವರ ಸಂಶೋಧನೆಗೆ ಧನಸಂಪನ್ಮೂಲವನ್ನು ಒದಗಿಸಿದ್ದು ಈಗ ನೊಪಾರ್ಟಿಸ್ ಆಗಿರುವ
ಅಂದಿನ ಸೀಬಾ ಗೇಗಿ ಸಂಸ್ಥೆ. ಸಂಶೋಧನೆಗೆ ಹೂಡಿದ ಧನ ಮತ್ತು ಅದರಿಂದ ಲಾಭವನ್ನಾರ್ಜಿಸಬೇಕೆನ್ನುವ ನೊವಾರ್ಟಿಸ್
ಇರಾದೆಯನ್ನು ನಾವು ಪ್ರಶ್ನಿಸಲಾರೆವು. ಆದರೆ ಜೀವ ಉಳಿಸುವ ಔಷಧ ಎಲ್ಲಿಯವರೆಗೆ ಮಾರುಕಟ್ಟೆಯ
ಸೂತ್ರಕ್ಕೆ ಒಳಗಾಗಬೇಕೆಂಬ ನೈತಿಕ ಪ್ರಶ್ನೆ ಇದೆ. ಮೂಲ ಆಣ್ವಿಕ ರಚನೆಗೆ ತುಸುವೇ ಬದಲಾವಣೆ ಮಾಡಿ ಏಕಸ್ವಾಮ್ಯ
ಹಕ್ಕನ್ನು ವಿಸ್ತರಿಸುವ ನೊವಾರ್ಟಿಸ್ ನ ನೈತಿಕತೆಯನ್ನು ಡ್ರಕರ್ ಪ್ರಶ್ನಿಸಿದ್ದಾರೆ. ಔಷಧಿಯನ್ನು
ಕಂಡುಹಿಡಿದ ಡ್ರಕರ್ ಅವರ ಮಾನವೀಯತೆಗಿಂತ, ಹಣ ಹೂಡಿದ ನೋವಾರ್ಟಿಸ್ ನ ಆರ್ಥಿಕತೆಯೇ ಹೆಚ್ಚು
ಮಹತ್ವವನ್ನು ಪಡೆದಿರುವ ವಿಕೃತಿಯನ್ನು ನಾವು ಕಾಣಬಹುದು.
ಖಾಸಗೀ ರಂಗದ ಕೆಲಸದಲ್ಲಿ ದಕ್ಷತೆಯಿರುತ್ತದೆ, ಹಣವು
ನೀರಿನಂತೆ ಹರಿಯದೇ ಜವಾಬ್ದಾರಿಯುತವಾಗಿ ಉಪಯೋಗಿಸಲ್ಪಡುತ್ತದೆಯೆಂಬ ವಾದವಿದೆ. ಆದರೆ ಸಾರ್ವಜನಿಕ
ಕ್ಷೇತ್ರದಲ್ಲಾಗುವ ಸಂಶೋಧನೆಯು ತಕ್ಷಣದ ಆರ್ಥಿಕ ಫಲಾಪೇಕ್ಷೆಯಿಲ್ಲದೆಯೇ ಆಗುತ್ತದಾದ್ದರಿಂದ ಅದರ ಲಾಭವು
ಎಲ್ಲರಿಗೂ ಸಮಾನವಾಗಿ ಸಲ್ಲುತ್ತದೆ. ವೈದ್ಯಕೀಯ ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿಯೂ ಈ
ವಾದವನ್ನೇ ವಿಸ್ತರಿಸಬಹುದು.
ಸಾರ್ವಜನಿಕ ಕ್ಷೇತ್ರದಿಂದ ಖಾಸಗೀಕರಣದತ್ತ ನಾವು
ಸಂಶೋಧನೆಯನ್ನು ಒಯ್ದ ಕೂಡಲೇ ಅದೊಂದು "ಬೌದ್ಧಿಕ ಆಸ್ತಿ" ಆಗುವ ಪರಿಯನ್ನೂ, ಆ "ಆಸ್ತಿ"ಯನ್ನು ಕಾಪಾಡಲು ಅದರ
ಸುತ್ತೊಂದು ಹಕ್ಕಿನ ಕೋಟೆಕಟ್ಟುವುದನ್ನೂ, ಆ "ಆಸ್ತಿ"ಯನ್ನು ರಕ್ಷಿಸಲೆಂದೇ ನೆಡೆವ ಸಮಾನಾಂತರ ಸಂಶೋಧನೆಯನ್ನೂ
ನಾವು ಕಾಣುತ್ತೇವೆ. ಇದಕ್ಕಾಗಿಯೇ ಒಮ್ಮೆ ಉಪಯೋಗಿಸಿದ ಬೀಜಗಳ ಫಲಿತವಾಗಿ ಬಂದ ಧಾನ್ಯ ಮತ್ತೆ ಬೀಜವಾಗಿ
ಉಪಯೋಗಿಸಲಾರದಂತಹ ಟರ್ಮಿನೇಟರ್ ತಂತ್ರವನ್ನು ಅಳವಡಿಸಿರುವುದು. ಬೌದ್ಧಿಕ "ಆಸ್ತಿ"ಯನ್ನು ಹೊಂದಿ ರೈತರನ್ನು
ಅಡಿಯಾಳಾಗಿಟ್ಟುಕೊಳ್ಳುವ ತಂತ್ರಗಳೂ ಕಂಡಿವೆ. ತಕ್ಷಣಕ್ಕೆ ಇದರಲ್ಲಿ ದಕ್ಷತೆಯ ಲಕ್ಷಣಗಳು
ಕಂಡುಬಂದರೂ, ಕಾಲಾಂತರದಲ್ಲಿ ಇದು ವಿದ್ಯೆ-ಜ್ಞಾನದ ಅಧಿಪತ್ಯಕ್ಕೂ- ಆರ್ಥಿಕ ಅಧಿಪತ್ಯಕ್ಕೂ ಕೊಂಡಿ
ಹಾಕಿ, ಆ ಜ್ಞಾನವನ್ನು ವಿಸ್ತಾರವಾಗಿ ಹಂಚಿಕೊಳ್ಳದ ಸ್ವಾರ್ಥಪರತೆಯತ್ತ ಒಯ್ಯುತ್ತದೆ. ಹಾಗೆಂದೇ,
ವಿದ್ಯೆ, ಸಂಶೋಧನೆಗಳು ಖಾಸಗೀ ಕ್ಷೇತ್ರಕ್ಕಿಂತ, ಸಾರ್ವಜನಿಕ ಕ್ಷೇತ್ರದಲ್ಲಿ ಉಳಿಯುವುದೇ ಒಳಿತು.
ಸಂಶೋಧನೆ-ವಿದ್ಯೆಗಳಿಗೆ (ಅವು ಸಾರ್ವಜನಿಕ ಕ್ಷೇತ್ರದಲ್ಲಿದ್ದರೂ) ಮಾರುಕಟ್ಟೆಯ ಪರಿಭಾಷೆ ಬಂದಕೂಡಲೇ ನಾವು
ಎಚ್ಚೆತ್ತುಕೊಳ್ಳಬೇಕು. ಎಲ್ಲೋ ಒಂದು ಕಡೆ ಪ್ರಾಥಮಿಕ ವಿದ್ಯೆಯು ಸರಕಾರದ ಜವಾಬ್ದಾರಿ, ಆದರೆ
ಉನ್ನತ ವಿದ್ಯೆಯು ಮಾರುಕಟ್ಟೆಗೇರಿದರೆ ಅಪಾಯವಿಲ್ಲ ಎನ್ನುವ ನಂಬಿಕೆಯನ್ನು ಈ ಮಾರುಕಟ್ಟೆಯ
ಪರಿಭಾಷೆ ಮನದಟ್ಟು ಮಾಡಲು ಯತ್ನಿಸುತ್ತದೆ. ವೈದ್ಯಕೀಯ, ಕೃಷಿಯಂತಹ ವಿದ್ಯೆಗಳು ಸಾರ್ವಜನಿಕ
ಕ್ಷೇತ್ರದಲ್ಲಿ ಇರಬೇಕು ಎನ್ನುವ ವಾದವನ್ನು ಒಪ್ಪುವವರು ಸಿಗುತ್ತಾರೆ. ಆದರೆ ಸರಕಾರಿ ಸಂಸ್ಥೆಗಳು
ನಡೆಯಿಸುವ ಎಂಬಿಎ ಅಂತಹ ವಿದ್ಯಾಕಾರ್ಯಕ್ರಮಗಳು ಮಾರುಕಟ್ಟೆಗೆ ಏರುವದರಲ್ಲಿ ತಪ್ಪಿಲ್ಲವೆಂದು
ಅನೇಕರು ವಾದಿಸುತ್ತಾರೆ. ಎಷ್ಟೆಂದರೂ ವ್ಯಾಪಾರವನ್ನು ದಕ್ಷವಾಗಿ ನಡೆಯಿಸಲು ಹೇಳಿಕೊಡುವ
ಮ್ಯಾನೇಜ್ ಮೆಂಟಿನ ವಿದ್ಯೆಯಲ್ಲಿ ಜೀವ ಉಳಿಸುವ ತರ್ತೂ ಇಲ್ಲ, ಮಾನವೀಯತೆಯ ಮಾತೂ ಇಲ್ಲ. ಇದು ಮಾರುಕಟ್ಟೆಯ
ಸೂತ್ರಕ್ಕೆ ಸಂದರೆ ತಪ್ಪಿಲ್ಲ. ಲಕ್ಷಾನುಗಟ್ಟಲೆ ಸಂಬಳ ಪಡೆಯಬಹುದಾದ ಈ ವಿದ್ಯಾರ್ಥಿಗಳ ಶುಲ್ಕವು
ಹೆಚ್ಚಿದ್ದರೂ ನಾವು ತಲೆ ಕೆಡಿಸಿಕೊಳ್ಳಬಾರದು ಎನ್ನುವ ವಾದದಲ್ಲಿ ಹುರುಳಿರುವಂತೆ ಕಾಣುತ್ತದೆ.
ಹೀಗಾಗಿಯೇ ಹಲವು ವರ್ಷಗಳ ಹಿಂದೆ ಐಐಎಂಗಳ ಶುಲ್ಕವನ್ನು 30,000 ರೂಪಾಯಿಗಳಿಗೆ ಸೀಮಿತವಾಗಿಡಬೇಕೆಂದ
ಅಂದಿನ ಮಾನವಸಂಪನ್ಮೂಲ ಮಂತ್ರಿಗಳಾದ ಮುರಳಿ ಮನೋಹರ ಜೋಷಿಯ ಮೇಲೆ ಎಲ್ಲರೂ ಮುಗಿಬಿದ್ದಿದ್ದರು.
ಆದರೆ ಅವರು ಕಾರ್ಯಗತಗೊಳಿಸಲು ಯತ್ನಿಸಿದ ರೀತಿಯನ್ನು ಪ್ರಶ್ನಿಸುತ್ತಲೇ ಅದರಲ್ಲಿರಬಹುದಾದ
ಹುರುಳನ್ನು ನಾವು ಹುಡುಕಬೇಕು.
1981ರಲ್ಲಿ ಅಹಮದಾಬಾದಿನ ಐಐಎಂನಿಂದ ಚಿನ್ನದ ಪದಕ ಪಡೆದ
ವಿಜಯ್ ಮಹಾಜನ್ ಎಂಬ ಯುವಕ ಸಿಟಿಬ್ಯಾಂಕು, ಯೂನಿಲಿವರ್ ಸಂಸ್ಥೆ ಸೇರಬಹುದಿತ್ತು. ಆತನ ಜೊತೆಗಿದ್ದ
ವಾಸಿಮಲೈ ರಸಗೊಬ್ಬರ ಮಾರಾಟಮಾಡುವ ಕಂಪನಿ ಸೇರಬಹುದಿತ್ತು. ಸಹಪಾಠಿ ಪ್ರಮೋದ್ ಕುಲಕರ್ಣಿ ದೊಡ್ಡ
ಉದ್ಯೋಗ ಸೇರಬಹುದಿತ್ತು. ಆದರೆ ವಿಜಯ್ ಗಾಂಧಿವಾದಿಗಳನ್ನು ಹುಡುಕಿ, ಬಿಹಾರ ಮತ್ತಿತರ ಬಡಪ್ರಾಂತಗಳಲ್ಲಿ
ಸಮಯಕಳೆದು ಪ್ರದಾನ್ ಎನ್ನುವ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಪ್ರಾರಂಭಿಸಿದರು. ವಾಸಿಮಲೈ ಮೊದಲಿಗೆ
ಪ್ರದಾನ್ ಸೇರಿ, ಕಡೆಗೆ ತಮ್ಮದೇ ನಾಯಕತ್ವದಲ್ಲಿ ಧಾನ್ ಫೌಂಡೇಷನ್ ಎನ್ನುವ ಗೌರವಾನ್ವಿತ
ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಪ್ರಮೋದ್ ಬೆಂಗಳೂರಿನಲ್ಲಿ ಸಾಥಿ ಎನ್ನುವ ಸಂಸ್ಥೆ
ನಡೆಸುತ್ತಾ, ಮನೆಯಿಂದ ಪಲಾಯನಗೈದ ಮಕ್ಕಳನ್ನು ಅವರ ಮನೆಗೆ ತಲುಪಿಸುವ, ಅವರ ಬಾಲ್ಯವನ್ನು ಅವರಿಗೆ
ವಾಪಸ್ಸಾಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಕೆಲಸಗಳಲ್ಲಿ ಎಲ್ಲರೂ ತಾವು ಕಲಿತ ಮ್ಯಾನೇಜ್ ಮೆಂಟಿನ
ಸೂತ್ರಗಳನ್ನು ಬಳಸುತ್ತಿದ್ದಾರೆ. ಅಂದು
ಐಐಎಂನ ಪ್ರೊಫೆಸರೂ (ಮಾಜೀ ನಿರ್ದೇಶಕರೂ) ಆಗಿದ್ದ ರವಿ
ಮಥಾಯಿಂದ ಸ್ಫೂರ್ತಿ ಪಡೆದ ಈ ಮೂರೂಜನ (ಹಾಗೂ ವಾರಗೆಯ ಅನೇಕರು) ಉದ್ಯೋಗಪತಿಗಳ ಅಡಿಯಾಳಾಗುವುದಕ್ಕೆ
ಬದಲಾಗಿ ಸಮಾಜಿಕ ಸೇವೆಯ ಕ್ಷೇತ್ರದಲ್ಲಿ ಕೆಲಸದ ಆಯ್ಕೆ ಮಾಡಿದರು.
ಉನ್ನತ ವಿದ್ಯೆಯ ಮಾರುಕಟ್ಟೀಕರಣಕ್ಕೂ ಈ ಮಹನೀಯರ
ಬದುಕಿಗೂ ಇರುವ ಬಾದರಾಯಣ ಸಂಬಂಧವೇನು? ಈ ಮೂರೂ ಜನ ತಮ್ಮ ವಿದ್ಯೆಯನ್ನಾರ್ಜಿಸಲು ಕಟ್ಟಿದ ಶುಲ್ಕ ಮುಂದೆ
ಬರಬಹುದಾದ ಅವರ ಸಂಬಳಕ್ಕೆ ತಾಳೆಹಾಕಿ ಮಾರುಕಟ್ಟೆಯ ಸೂತ್ರಕ್ಕನುಗುಣವಾಗಿ ನಿರ್ಧರಿಸಿದ್ದಲ್ಲ.
ಬದಲಿಗೆ ಸರಕಾರಿ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಅಂದು ತೆಗೆದುಕೊಳ್ಳುತ್ತಿದ್ದ ಶುಲ್ಕಕ್ಕೆ ಹೊಂದಿಕೂಂಡಂತೆ
ಇತ್ತು. ಐಐಎಂಗಳಲ್ಲಿರುವ ಇಂದಿನ ಮಾರುಕಟ್ಟೀಕರಣದ ಶುಲ್ಕದನುಸಾರ (ವರ್ಷಕ್ಕೆ ಸರಾಸರಿ 5 ರಿಂದ 8
ಲಕ್ಷ ರೂಪಾಯಿಗಳು) ವಿದ್ಯಾರ್ಥಿಗಳು ಬ್ಯಾಂಕುಗಳಿಂದ ಸಾಲ ಎತ್ತಿ ವಿದ್ಯೆಯನ್ನಾರ್ಜಿಸ ಬೇಕಿದ್ದರೆ
ಎಂಟುಹತ್ತು ವರ್ಷಗಳ ಕಾಲ ತಿಂಗಳಿಗೆ 15,000 ರಿಂದ 25,000 ರೂಪಾಯಿಗಳವರೆಗೆ ಸಾಲ-ಬಡ್ಡಿಯ
ಕಂತನ್ನು ಕಟ್ಟಬೇಕು. ಇದರ ಮೇಲೆ ತಮ್ಮ ಜೀವನಾವಶ್ಯಕತೆಗಳಿಗೆ ಸಾಕಾಗುವಷ್ಟು ಸಂಬಳವೂ ಬೇಕು. ಈ ಸಾಲದಭಾರ
ಹೊತ್ತ ವಿದ್ಯಾರ್ಥಿ ಸಾಮಾಜಿಕ ಸೇವೆಯ ಅಥವಾ ಕಡಿಮೆ ಸಂಬಳದ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಬಹುದಾದ
ಸಾಧ್ಯತೆಯನ್ನೇ ಮಾರುಕಟ್ಟೀಕರಣದ ಶುಲ್ಕ ಅಲ್ಲಗಳೆಯುತ್ತಿದೆ. ಈ ಶುಲ್ಕದ ಲಾಭವನ್ನು ಕಡೆಗೂ ಪಡೆಯುವವರು
ಹೆಚ್ಚಿನ ಸಂಬಳ ಕೊಡಬಹುದಾದ ಉದ್ಯೋಗಪತಿಗಳು. ಹೀಗಾಗಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಶುಲ್ಕ
ಹೇರುವುದಕ್ಕಿಂತ ಅವರಿಂದ ಲಾಭ ಪಡೆಯುವ ಉದ್ಯೋಗಪತಿಗಳಿಂತ ನೇಮಕಾತಿ ಶುಲ್ಕ ಹೇರಿ
ಉನ್ನತವಿದ್ಯಾಸಂಸ್ಥೆಗಳು ತಮ್ಮ ಲಾಭವನ್ನಾರ್ಜಿಸಬೇಕು.
ಹೆಚ್ಚಿನ ಶುಲ್ಕದಿಂದಾಗಿಯೇ ಇಲ್ಲಿಂದ ತೇರ್ಗಡೆಯಾದವರು
ವ್ಯಾಪಾರದ ಜಗತ್ತಿನ ನೌಕರಿಯನ್ನಾಯ್ಕೆ ಮಾಡಿಕೊಳ್ಳುತ್ತಾರೆ. ಇದೇ ಸೂತ್ರವನ್ನು ಉನ್ನತ ವೈದ್ಯಕೀಯ
ವ್ಯಾಸಂಗಕ್ಕೂ, ಸಂಶೋಧನೆಗೂ ವರ್ತಿಸಿದರೆ, ತುಟ್ಟಿ ವಿದ್ಯೆಯ ಬೆಲೆಯು ಕಡೆಗೆ ಬೀಳುವುದು ರೋಗಿಗಳ
ತಲೆಯ ಮೇಲೆಯೇ ಎನ್ನುವುದು ವೇದ್ಯವಾಗುತ್ತದೆ. ರೋಗಗಳು ಶ್ರೀಮಂತಿಕೆಯ ಆಧಾರದ ಮೇಲೆ ಜನರನ್ನು
ಹುಡುಕಿ ಬರುವುದಿಲ್ಲವಷ್ಟೆ.
ಬಡವರಲ್ಲದವರು ಬಡತನಕ್ಕೆ ಜಾರುವುದಕ್ಕೆ ವೈದ್ಯಕೀಯ
ಖರ್ಚುಗಳೇ ಮೂಲಕಾರಣ ಎಂದು ಹಲವು ಅಧ್ಯಯನಗಳು ತೋರಿಸಿವೆ. ಈ ಅಧ್ಯಯನಗಳನ್ನು ಕಂಡ ಮಾರುಕಟ್ಟೆಯ
ಧುರೀಣರು ಇದರಲ್ಲೂ ಒಂದು ಬಾಟಂ ಆಫ್ ದ ಪಿರಮಿಡ್ (ಗೋಪುರದ ಕೆಳಭಾಗದ) ಮಾರುಕಟ್ಟೆ ಹುಡುಕುತ್ತಾರೆ.
ಮಾರುಕಟ್ಟೆಯ ಧುರೀಣರು ಎಲ್ಲರಿಗೂ ಆರೋಗ್ಯ ವಿಮೆಯನ್ನು ಮಾರಾಟ ಮಾಡುವುದು ಹೇಗೆಂದು ಯೋಚಿಸುತ್ತಾರೆ.
ಇತ್ತ ವೈದ್ಯ ವೃತ್ತಿ ಬಡವರ ಸೇವೆಗೆ ಕಂಕಣಬದ್ಧರಾಗಿ ನಿಲ್ಲದಿರುವುದಕ್ಕೆ ಕಾರಣಗಳನ್ನು ಹುಡುಕುತ್ತ,
ಅದಕ್ಕೆ ಆರ್ಥಿಕ ಲೋಕದ ಕಾಗದದ ಪರಿಷ್ಕಾರಗಳನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ,
ಮಾರುಕಟ್ಟೀಕರಣದ ಮೂಲ ಕಾರಣವನ್ನೇ ನಾವು ಕಾಣುವುದಿಲ್ಲ. ಉನ್ನತ ವಿದ್ಯೆ – ಸಂಶೋಧನೆಗಳನ್ನು
ಮಾರುಕಟ್ಟೆಯ ಸೂತ್ರಗಳಿಗೆ ಒಡ್ಡಿದ ದಿನವೇ ಈ ತೊಂದರೆ ಪ್ರಾರಂಭವಾಗುತ್ತದೆ. ಆದರೆ ಆ
ಪರಿಭಾಷೆಯುಂಟುಮಾಡಿದ ತೊಂದರೆಗೆ, ಅದೇ ಮಾರುಕಟ್ಟೆಯ ಸೂತ್ರದಲ್ಲಿ ಪರಿಷ್ಕಾರವನ್ನು ಹುಡುಕುತ್ತಿರುವುದು
ವಿಪರ್ಯಾಸವಲ್ಲವೇ?
ಹೀಗಾಗಿಯೇ ನೊವಾರ್ಟಿಸ್ ಬಗೆಗಿನ ತೀರ್ಪನ್ನು ನಾವು
ಸ್ವಾಗತಿಸಬೇಕು. ನೊವಾರ್ಟಿಸ್ ನೀಡಿರುವ ಬೆದರಿಕೆಗನುಸಾರವಾಗಿ ಸಂಶೋಧನೆಯನ್ನು ನಿಲ್ಲಿಸಿದರೆ
ಮಾನವ ಕುಲಕ್ಕೆ ಆಗುವ ನಷ್ಟಕ್ಕಿಂತ ಆ ಕಂಪನಿಯ ನಷ್ಟವೇ ಹೆಚ್ಚು. ಆ ಅಂಥ ಸಂಶೋಧನೆಗಾಗುವ
ಖರ್ಚನ್ನು ಸಾರ್ವಜನಿಕ ಕ್ಷೇತ್ರವೇ ಹೆಚ್ಚೆಚ್ಚು ವಹಿಸಿಕೊಂಡರೆ ಮನುಕುಲಕ್ಕೆ ಹೆಚ್ಚಿನ ಉಪಯೋಗವೂ
ಆಗುತ್ತದೆ.
22 ಎಪ್ರಿಲ್ 2013
No comments:
Post a Comment