Sunday, March 3, 2013

ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಳೀಯತೆಯ ರಕ್ಷಾಕವಚ


ಹಲವು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಮುಂಜಾನೆಯೂ ಕಾಫಿ, ಮಧ್ಯಾಹ್ನವೂ ಕಾಫಿ, ಸಂಜೆಯೂ ಕಾಫಿ. ಚಹಾ ಅನ್ನುವುದು ಉತ್ತರಭಾರತದ ಅತಿಥಿಗಳು ಬಂದಾಗ ಮಾತ್ರ ತಯಾರಾಗುತ್ತಿತ್ತು. ಅಥವಾ ಯಾರಾದರೂ ಬೇಕೆಂದರೆ – ಅಥವಾ ಯಾವಾಗಲಾದರೊಮ್ಮೆ ಬೇಜಾರಾಯಿತೆಂದರೆ ಚಹಾದ ಸೇವನೆ ನಡೆಯುತ್ತಿತ್ತು. ಆದರೆ 1994ರಲ್ಲಿ ನಮ್ಮ ಮನೆಯ ಕಾಫಿ ಸೇವನೆಯ ಅಭ್ಯಾಸದಲ್ಲಿ ಮೂಲಭೂತ ಬದಲಾವಣೆಯಾಯಿತು. ಆಗಿನಿಂದ, ಮುಂಜಾನೆಯ ಮೊದಲ ಪೇಯ ಕಾಫಿ. ಅಲ್ಲಿಂದ ಮುಂದಕ್ಕೆ ದಿನದಲ್ಲಿ ಹಲವು ಕಪ್ಪುಗಳ ಚಹಾ ಸೇವನೆ. ಪ್ರಮುಖ ಎನ್ನಿಸುವ ಅತಿಥಿಗಳು ಬಂದರೆ ಕಾಫಿ. ಕ್ರಮಕ್ರಮೇಣ ದಿನದಲ್ಲಿ ಕಾಫಿಯೂ ಆಗಬಹುದು, ಚಹಾವೂ ಆಗಬಹುದು ಎನ್ನುವ ಪರಿಸ್ಥಿತಿಗೆ ತಲುಪಿಬಿಟ್ಟೆವು. ಇದು ನಮ್ಮ ಮನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅನೆಕರ ಮನೆಯಲ್ಲಿ ಈ ಮೂಲಭೂತ ಬದಲಾವಣೆಯಾಯಿತು. ಇದಕ್ಕೆ ಕಾರಣ ಮಾತ್ರ ಕುತೂಹಲದ್ದು.

1991ರಿಂದ ನಮ್ಮ ದೇಶ ಉದಾರೀಕರಣದ ನೀತಿಯನ್ನು ಪಾಲಿಸುತ್ತಿದೆ. ಅದಕ್ಕೆ ಮೊದಲು ಕಾಫಿಬೀಜವನ್ನು ಸ್ಥಳೀಯವಾಗಿ ಸಂಗ್ರಹ ಮಾಡಿ ಇಲ್ಲಿನ ಮಾರುಕಟ್ಟೆಗೆ ಸರಬರಾಜು ಮಾಡುವ ಹಾಗೂ ರಫ್ತು ಮಾಡುವ ಅಧಿಕಾರ ಹೆಚ್ಚಾಗಿ ಸರಕಾರ ಮತ್ತು ಕಾಫಿ ಬೋರ್ಡಿನ ಬಳಿಯಿತ್ತು. ಆದರೆ ಉದಾರೀಕರಣದ ನೀತಿ ಜಾರಿಯಾಗುತ್ತಿದ್ದಂತೆ ಕಾಫಿಯ ವ್ಯಾಪಾರವೂ ಉದಾರೀಕರಣಗೊಂಡಿತು. 1993ರಲ್ಲಿ ಮೊದಲ ಬಾರಿಗೆ ಕಾಫಿ ಬೆಳೆಗಾರರಿಗೆ ತಮ್ಮ ಫಸಲಿನ ಶೇಕಡಾ 30ರಷ್ಟು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಪರವಾನಗಿ ಸಿಕ್ಕಿತು. 1994ರಲ್ಲಿ ಇದು ಇನ್ನೂ ಉದಾರೀಕರಣಗೊಂಡು 70ರಿಂದ 100 ಪ್ರತಿಶತ ರಫ್ತನ್ನೂ ಒಳಗೊಂಡ ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಅವಕಾಶ ಕಾಫಿ ಬೆಳೆಗಾರರಿಗೆ ದೊರೆಯಿತು. ಅದೇ ವರ್ಷದಲ್ಲಿ ಪ್ರಪಂಚದಲ್ಲಿ ಅತೀ ಹೆಚ್ಚು ಉತ್ಪಾದನೆ ಮಾಡುತ್ತಿದ್ದ ಬ್ರೆಜಿಲ್ ದೇಶದಲ್ಲಿ ಬರ ಮತ್ತು ಶೀತದ ಕಾರಣವಾಗಿ ಬಹಳಷ್ಟು ಬೆಳೆ ನಾಶವಾಗಿ ಜಗತ್ತಿನ ಕಾಫಿ ಬೆಲೆಯಲ್ಲಿ ವಿಪರೀತ ಉಬ್ಬರ ಕಂಡುಬಂದಿತು. ಇದರಿಂದಾಗಿ ವರ್ಷದ ಉತ್ಪಾದನೆಯ 60-65ಪ್ರತಿಶತ ದಾಟದಂತೆ ಭಾರತದಿಂದ ಆಗುತ್ತಿದ್ದ ರಫ್ತು ಆ ವರ್ಷದಲ್ಲಿ ಉತ್ಪಾದನೆಯ 76 ಪ್ರತಿಶತ ಮೀರಿಹೋಯಿತು. ಸ್ಥಳೀಯ ಬೆಲೆಗಳು ತಾರಕಕ್ಕೇರಿದವು. ಸ್ಥಳೀಯ ಗ್ರಾಹಕರಾದ ನಾವುಗಳು ಕಾಫಿಯಿಂದ ಚಹಾಕ್ಕೆ ರಫ್ತಾಗಿಬಿಟ್ಟೆವು!

ಇದು ಭಾರತದ ಕಾಫಿಗೆ ಒದಗಿದ ಅವಕಾಶವೆಂದು ಪರಿಗಣಿಸಬೇಕೋ ದೇಶಕ್ಕೆ ಬಂದ ಆದಾಯ-ಮತ್ತು ವಿದೇಶೀ ವಿನಿಮಯದಿಂದ ಖುಷಿಯಾಗಬೇಕೋ – ಕಾಫಿ ಕೈ ತಪ್ಪಿದ್ದಕ್ಕೆ ದುಃಖಿಸಬೇಕೋ ತಿಳಿಯದಾಯಿತು. ವಿಶ್ವದ ಮಾರುಕಟ್ಟೆಯಲ್ಲಿ ಲೀನವಾಗುವುದರಿಂದ ಆಗಬಹುದಾದ ಲಾಭನಷ್ಟಗಳು ಹೀಗೆಂದು ಲೆಕ್ಕ ಕಟ್ಟುವುದಕ್ಕೆ ಕಷ್ಟವಾಗುತ್ತದೆ. ಆಗಿನ ಪರಿಸ್ಥಿತಿಯಲ್ಲಿ ದೇಶದ ಬಂಗಾರವನ್ನ ಅಡ ಇಟ್ಟು ವಿದೇಶೀ ವಿನಿಮಯಕ್ಕಾಗಿ ಪರದಾಡುತ್ತಿದ್ದ ಆ ದಿನಗಳಲ್ಲಿ ಇದನ್ನು ಸ್ವಾಗತಿಸುವುದೇ ಉತ್ತಮ ಕ್ರಿಯೆಯಾಗಿತ್ತೆನ್ನಿಸುತ್ತದೆ. ಆದರೆ ಆ ವರ್ಷದಲ್ಲಿ ಪ್ರಾರಂಭವಾದ ಪ್ರಕ್ರಿಯೆಯಿಂದಾಗಿ ಈಗ ನಾವು ಪ್ರತೀ ವರ್ಷ 75 ಪ್ರತಿಶತಕ್ಕೂ ಹೆಚ್ಚು ಕಾಫಿಯನ್ನ ರಫ್ತು ಮಾಡುತ್ತಲೇ ಬಂದಿದ್ದೇವೆ. ಜಾಗತೀಕರಣವೆಂದರೇನೆಂದು ತಿಳಿಯದ ಆ ದಿನಗಳಲ್ಲೇ ಜಾಗತೀಕರಣದ ಮೊದಲ ಪಾಠವನ್ನು ನಾನು ಕಲಿತಿದ್ದೆ!

2010ರಲ್ಲಿ 29.5 ಮಿಲಿಯ ಬೇಲುಗಳಿದ್ದ ಭಾರತದ ಹತ್ತಿ ಉತ್ಪಾದನೆ 2011ಕ್ಕೆ 35 ಮಿಲಿಯ ಬೇಲುಗಳಿಗೆ ಬೆಳೆದಿತ್ತು. ಇದೇ ಸಮಯಕ್ಕೆ ಪಾಕಿಸ್ತಾನದಲ್ಲೂ, ಚೀನಾದಲ್ಲೂ ಹತ್ತಿಯ ಉತ್ಪಾದನೆ ಹವೆಯ ಕಾರಣವಾಗಿ ನೆಲಕಚ್ಚಿ ಒಟ್ಟಾರೆ ಹತ್ತಿಯ ಬೆಲೆ ವಿಶ್ವವ್ಯಾಪಿಯಾಗಿ ಏರುವುದಕ್ಕೆ ಕಾರಣವಾಯಿತು. ಇದರಿಂದ ನಮಗೆ ಖುಷಿಯಾಗಬೇಕು. ಜಾಗತೀಕರಣದಿಂದಾಗಿ ವಿಶ್ವದ ಮಾರುಕಟ್ಟೆಯೇ ನಮಗೆ ಲಭ್ಯವಿರುವಾಗ, ನಾವು ರಫ್ತುಮಾಡಿ ವಿದೇಶೀ ವಿನಿಮಯವನ್ನು ಸಂಪಾದಿಸುವ ಸುವರ್ಣಾವಕಾಶ ಇರುವಾಗಟ ರಫ್ತನ್ನು ತಡೆಯಬೇಕೆಂದು ನೂಲುವ ಮಿಲ್ಲುಗಳು ಸರಕಾರವನ್ನು ಕೇಳಿಕೊಂಡುವು. ಈ ಮಿಲ್ಲುಗಳೇ ಕಳೆದ ಐದಾರು ವರ್ಷಗಳಲ್ಲಿ ನೂಲನ್ನು ರಫ್ತುಮಾಡಿ ಲಾಭಗಳಿಸಿದ್ದುವು. ಆದರೀಗ ತಮ್ಮ ಕಚ್ಚಾಮಾಲಾದ ಹತ್ತಿಯಬೆಲೆ ತಾರಕಕ್ಕೇರಿದಾಗ ಅವರುಗಳಿಗೆ ರಾಷ್ಟ್ರಭಕ್ತಿಯುಕ್ಕಿಬಂದಂತಿತ್ತು.

ರಫ್ತನ್ನು ತಡೆದರೆ ಹತ್ತಿ ರೈತರ ಹಿತದೃಷ್ಟಿಯ ವಿರುದ್ಧ ಕೆಲಸ ಮಾಡಿದಂತಾಗುತ್ತದೆ. ಆದರೆ ತಡೆಯದಿದ್ದರೆ ನಮ್ಮ ನೂಲುವ ಮಿಲ್ಲುಗಳು ಹೊಡೆತ ತಿನ್ನುತ್ತವೆ. ನಮ್ಮ ನೂಲುವ ಮಿಲ್ಲುಗಳು ಮೆರೆದರೆ ನಮ್ಮ ನೇಕಾರರಿಗೆ ಹೊಡೆತ ಬೀಳುತ್ತದೆ. ಹತ್ತಿಯ ಬೆಲೆ – ನೂಲಿನ ಬೆಲೆ ಏರಿದಾಗ ಹೆಚ್ಚು ಏಟು ತಿಂದದ್ದು ನಮ್ಮ ನೇಕಾರರು. ಆ ಬೆಲೆಯೇರಿಕೆಯನ್ನು ನೇಕಾರರಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೃಷಿಯ ನಂತರ ಅತ್ಯಧಿಕ ಉದ್ಯೋಗಾವಕಾಶ ಒದಗಿಸುವ ನೇಯ್ಗೆಯನ್ನು ಜಾಗತೀಕರಣದ ಮಾರುಕಟ್ಟೆಗೆ ಒಗ್ಗಿಸಬೇಕೇ? ಒಂದು ಕಡೆ ವಿದೇಶೀ ವಿನಿಮಯ, ಒಂದು ಡೆ ರೈತರ ಹಿತದೃಷ್ಟಿ – ಈ ನಡುವೆ ನೇಕಾರರು ಬದುಕಬೇಕಾಗಿದೆ.

ಆದರೆ ಹತ್ತಿ-ನೂಲು-ಬಟ್ಟೆ ಇಷ್ಟಕ್ಕೇ ಈ ಆರ್ಥಿಕತೆ ಮತ್ತು ರಾಜಕೀಯ ಮುಗಿಯುವುದಿಲ್ಲ. ನೈಸರ್ಗಿಕ ಮೂಲದಿಂದ ಉತ್ಪಾದನೆಯಾಗುವ ಹತ್ತಿ ಒಂದೆಡೆ ವಸ್ತ್ರದ ತಯಾರಿಕೆಗೆ ಕಚ್ಚಾಮಾಲಾದರೆ, ಖನನದಿಂದ ಉತ್ಪಾದನೆಯಾಗುವ ಮಾನವ ನಿರ್ಮಿತ ವಸ್ತ್ರಗಳು ಮತ್ತೊಂದೆಡೆಯಿವೆ. ಪಾಲಿಯೆಸ್ಟರ್ ಇತ್ಯಾದಿ ವಸ್ತ್ರಗಳೂ ಜಾಗತಿಕ ವಸ್ತ್ರದ ಮಾರುಕಟ್ಟೆಯಲ್ಲಿ ಹತ್ತಿಯ ವಸ್ತ್ರಗಳ ಒಟ್ಟಾರೆ ಆರ್ಥಿಕತೆಯನ್ನು ಒಂದು ರೀತಿಯಿಂದ ರೂಪಿಸುತ್ತವೆ! ಹೀಗಾಗಿ ನಾವು ಜಗತ್ತಿಗೆ ನಮ್ಮನ್ನು ತೆರೆತೆರೆದಂತೆ ನಮ್ಮೆದುರು ನಿಲ್ಲುವ ವಿಚಾರಗಳೂ ಜಟಿಲವಾಗುತ್ತಾ ಹೋಗುತ್ತವೆ. ಜಾಗತೀಕರಣದಿಂದ ಉಂಟಾಗುವ ವಿದೇಶಾವಲಂಬನೆ ಕೇವಲ ಆಮದಿಗೆ ಸಂಬಂಧಿಸಿದ್ದು ಎನ್ನುವುದನ್ನು ನಾವು ನಂಬಿರುವಂತಿದೆ. ಆದರೆ ರಫ್ತಿನಿಂದಲೂ ನಮ್ಮ ದೇಶದ ಲೆಕ್ಕಾಚಾರದಲ್ಲಿ ಏರುಪೇರಾಗಬಹುದು ಎನ್ನುವುದನ್ನು ಈ ಉದಾಹರಣೆಗಳು ತೋರಿಸುತ್ತವೆ.

ಸಮಾಜವಾದ-ಪ್ರಗತಿಪರತೆ-ಎಡಪಂಥೀಯರನ್ನು ನಾವು ನಿಮಗೆ ಅಮೆರಿಕನ್ನರಲ್ಲಿ ಯಾರು ಹಿತವರು ಎಂದು ಕೇಳಿದರೆ ಬುಷ್, ಮೆಕ್ಕೇನ್, ರಾಮ್ನಿಗಳಿಗಿಂತ ಕ್ಲಿಂಟನ್-ಒಬಾಮಾರೇ ನಮಗೆ ಪ್ರಿಯರು ಎಂದು ಹೇಳುತ್ತಾರೆ. ವಿಚಾರಧಾರೆಯ ದೃಷ್ಟಿಯಿಂದ ಡೆಮಾಕ್ರಟ್ ಗಳು ರಿಪಬ್ಲಿಕನ್ನರಿಗಿಂತ ತುಸು ಎಡಬದಿಯಲ್ಲಿಯೇ ಇರುವುದರಿಂದ ನಮಗೆ ಅವರು ಹೆಚ್ಚು ಒಪ್ಪಿತರಾಗಬಹುದು. ಆದರೆ ಭಾರತದ ಹಿತದೃಷ್ಟಿಯಿಂದ ಯಾವಾಗಲೂ ನಮಗೆ ರಿಪಬ್ಲಿಕನ್ನರೇ ಹೆಚ್ಚು ಒಳಿತನ್ನು ಮಾಡಿದ್ದಾರೆ ಎಂದು ಅರ್ಥಶಾಸ್ತ್ರ ಪಾರಂಗತರು ಹೇಳುವುದನ್ನು ನಾವು ಕೇಳಿದ್ದೇವೆ. ಇದಕ್ಕೆ ಕಾರಣವಿದೆ. ಅಮೆರಿಕದಲ್ಲಿ ಮಾರುಕಟ್ಟೆಯ ಪ್ರೇಮಿಗಳು ಅಧಿಕಾರದಲ್ಲಿದ್ದರೆ ಭಾರತದ ವ್ಯಾಪಾರಕ್ಕೆ ಅದೂ ಹಿತ. ನಮ್ಮ ರಫ್ತಿಗೆ ಗ್ರಾಹಕರು ಬೇಕೆಂದರೆ ಅವರುಗಳು ಔಟ್ ಸೋರ್ಸಿಂಗ್ ಪರವಾಗಿರಬೇಕು. ಒಬಾಮಾ ತಮ್ಮದೇ ದೇಶದ ಉದ್ಯೋಗಾವಕಾಶವನ್ನು ರಕ್ಷಿಸುವ ಯೋಜನೆ ಹಾಕಿದಾಗ ನಮ್ಮ ವ್ಯಾಪಾರಕ್ಕೆ ಪೆಟ್ಟಾಗುವುದು ಸಹಜವೇ ಇದೆ. ಹೀಗಾಗಿ ನಮ್ಮ ವಿಚಾರಧಾರೆಯನ್ನೇ ಪಾಲಿಸುವ ವಿದೇಶೀಯರು ನಮ್ಮ ವ್ಯಾಪಾರಕ್ಕೇ ಮುಳುವಾಗುತ್ತಾರೆ.

ಒಂದು ವಿತ್ತೀಯ ವ್ಯವಸ್ಥೆಯನ್ನು ನೋಡುವಾಗಲೂ ನಾವು ಸ್ಥಳೀಯತೆ ಮತ್ತು ಜಾಗತಿಕ ಮಾರುಕಟ್ಟೆಗಳ ದೃಷ್ಟಿಯಿಂದ ನೋಡಬಹುದು. ಹಾಗೆ ನೋಡಿದರೆ ನಮ್ಮ ಬ್ಯಾಂಕುಗಳು ಸ್ಥಳೀಯವಾಗಿಯೇ ಉಳಿದುಕೊಂಡು ವಿಶ್ವ ವಿತ್ತೀಯ ವ್ಯವಸ್ಥೆಯಿಂದ ತುಸು ದೂರದಲ್ಲಿಯೇ ಇವೆ. ಆರ್ಥಿಕ ಉದಾರೀಕರಣದ ಭರದಲ್ಲಿ ನಮ್ಮ ವಿತ್ತೀಯ ವ್ಯವಸ್ಥೆಯನ್ನು ನಾವುಗಳು ಅದೇ ಗತಿಯಲ್ಲಿ ಜಾಗತೀಕರಿಸಲಿಲ್ಲ. ಇದಕ್ಕೆ ಮುಖ್ಯ ಕಾರಣರು ರಿಜರ್ವ್ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಯಾಗಾ ವೇಣುಗೋಪಾಲ ರೆಡ್ಡಿಯವರು. ನಮ್ಮ ಸಂಸ್ಥೆಗಳು ವಿತ್ತೀಯ ವ್ಯವಸ್ಥೆಯಲ್ಲಿ ದುಸ್ಸಹಸಗಳನ್ನು ಮಾಡಲು ಅವರು ಪರವಾನಗಿ ನೀಡಲಿಲ್ಲವಾದ್ದರಿಂದ ನಾವು ಅಮೆರಿಕದ ಜೊತೊಜೊತೆಯಾಗಿ ಮುಳುಗಬಹುದಾಗಿದ್ದ ಆಪತ್ತಿನಿಂದ ನಮ್ಮನ್ನು ರಕ್ಷಿಸಿದರು. ಅದೇ ವಿಶ್ವದ ಅರ್ಥವ್ಯವಸ್ಥೆಯಲ್ಲಿ ಐಕ್ಯಗೊಂಡಿದ್ದ ಯುರೋಪೂ ಅಮೇರಿಕದ ಬ್ಯಾಂಕಿಂಗ್ ವ್ಯವಸ್ಥೆಯ ಕುಸಿತದಿಂದ ತತ್ತರಿಸುತ್ತಿವೆ. ಇದು ಜಟಿಲವಾದ ಲೋಕವಾದರೂ ಇದನ್ನು ಅರ್ಥಮಾಡಿಕೊಳ್ಳುವುದು ಸರಳವೇನೋ. ವಿಪರೀತ ಸಾಲದ ಮೇಲೆ ಜೀವನವನ್ನು ನಡೆಸುವ ವ್ಯಕ್ತಿಯಾಗಲೀ, ಸಮಾಜವಾಗಲೀ ಆ ಸಾಲವನ್ನು ಬಡ್ಡಿ ಸಮೇತ ತೀರಿಸುವ ಆದಾಯವನ್ನು ಆರ್ಜಿಸಲಾಗದೇ ಹೋದರೆ ತತ್ತರಿಸುವುದು ಸಹಜ. ಅಮೆರಿಕದ ಲೆಕ್ಕಾಚಾರದಂತೆ ಅನೇಕ ವರ್ಷಗಳ ಬೆಳವಣಿಗೆಯ ಆಧಾರದ ಮೇಲೆ ಆದಾಯವನ್ನು ಆರ್ಜಿಸುವ ಶಕ್ತಿಯಿದೆ ಎಂದು ನಂಬಿಯೇ ಜನ ಸಾಲಗಳನ್ನು ಮಾಡಿ ಜೀವನವನ್ನು ನಡೆಸುತ್ತಿದ್ದರು. ಆದರೆ ಒಟ್ಟಾರೆ ಬೆಳವಣಿಗೆ ಕುಂಠಿತವಾದಾಗ ಎಲ್ಲರೂ ಏಕಕಾಲಕ್ಕೆ ತತ್ತರಿಸಿದರು. ಹೀಗೆ ಒಂದು ವಿತ್ತೀಯ ಸಂಸ್ಥೆ ತತ್ತರಿಸಿದರೆ ಅದರ ಪ್ರಭಾವದ ವ್ಯಾಪ್ತಿ ಹಿರಿದಾಗಿರುತ್ತದೆ. ಯಾಕೆಂದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒಬ್ಬರ ಕೈ ಇನ್ನೊಬ್ಬರ ಕಿಸೆಯಲ್ಲಿ ಸದಾಕಾಲ ಇರುತ್ತದೆ. ಹೀಗಾಗಿ ಅದರ ಕಾವು ಎಲ್ಲರಿಗೂ ತಟ್ಟುವುದು ಸಹಜ.

ಇಲ್ಲಿಯೂ ವಿಕೇಂದ್ರೀಕರಣ ಮತ್ತು ಸ್ಥಳೀಯತೆಯೇ ನಮ್ಮ ಶ್ರೀರಕ್ಷೆಯಾಗಿ ಪರಿಣಮಿಸಿತು. ಅಕಸ್ಮಾತ್ ನಮ್ಮ ಸ್ಥಳೀಯ ವಿತ್ತೀಯ ವ್ಯವಸ್ಥೆಯಲ್ಲಿ ತೊಂದರೆಯಾದರೆ ನಾವು ವಿದೇಶೀ ಅನುದಾನದಿಂದ ಬಚಾವಾಗಬಹುದು. ಆದರೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಲೀನವಾದಾಗ ಎಲ್ಲಿಯದೋ ಸಮಸ್ಯೆಗಳೂ ನಮಗೆ ತಲೆನೋವನ್ನುಂಟುಮಾಡಬಹುದು ಎನ್ನುವುದನ್ನ ನಾವು ಮನಗಾಣಬೇಕು. ದೇಶಕ್ಕೆ ವಿದೇಶೀ ಹೂಡಿಕೆ ಬೇಕು ಎಂದು ಬೊಬ್ಬೆಯಿಡುತ್ತಿರುವ ಈ ಕಾಲದಲ್ಲಿ ನಾವು ನಮ್ಮಲ್ಲಿರುವ ಹೂಡಿಕೆಯನ್ನು ಸಂಪೂರ್ಣವಾಗಿ ಉಪಯೋಗಿಸಿ ಮುಗಿಸಿದ್ದೇವೆಯೇ ಎನ್ನು ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಸ್ಥಳೀಯತೆಯೇ ನಮಗೆ ಶ್ರೀರಕ್ಷೆ ಅನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಕಾಣಸಿಗುತ್ತಿವೆ.
No comments:

Post a Comment