2001ರಲ್ಲಿ ಅಮೇರಿಕದ
ಜಂಟಿ ಗೋಪುರಗಳ ಮೇಲೆ ಧಾಳಿ ನಡೆಸಿ ನೆಲಸಮ ಮಾಡಿದ ಅಲ್ ಕಾಯ್ದಾ ಉರುಳಿಸಿದ್ದು ಬರೇ
ಗೋಪುರಗಳನ್ನಷ್ಟೇ ಅಲ್ಲ. ಬದಲಿಗೆ, ಯಾವುದೇ ದೊಡ್ಡ ಆರ್ಥಿಕ ಸಮಸ್ಯೆಯಿಲ್ಲದೆಯೇ,
ಬಜೆಟ್ಟಿನಲ್ಲಿ ಖೋತಾ ಇಲ್ಲದೆಯೇ – ಬಿಲ್ ಕ್ಲಿಂಟನ್ನರ ಅಧ್ಯಕ್ಷೀಯಕಾಲದ ಬಂಗಾರಯುಗದ
ಮತ್ತಿನಲ್ಲಿದ್ದ ಅಮೆರಿಕದ ಅರ್ಥವ್ಯವಸ್ಥೆಗೆ ಬಲವಾದ ಧಕ್ಕೆ ನೀಡಿತ್ತು. ಜಗತ್ತಿನಿತಿಹಾಸದಲ್ಲಿ
ಸೆಪ್ಟೆಂಬರ್ 11 ಈಗೊಂದು ಮಹತ್ವದ ತಾರೀಖಾಗಿದೆ. ಅಂದಿನಿಂದ ವಿಮಾನಯಾನದ ನಿಯಮಗಳು ಬದಲಾಗಿವೆ,
ಗುರುತಿನ ಚೀಟಿಗಳ ಅವಶ್ಯಕತೆ ಹೆಚ್ಚಾಗಿದೆ, ಭಯಭೀತಿ ಹೆಚ್ಚಾಗಿದೆ, ಭದ್ರತೆಯ ಹೆಸರಿನಲ್ಲಿನ
ತಂತ್ರಜ್ಞಾನವೂ ತತ್ಫಲಿತ ಯಂತ್ರಗಳೂ, ಹೆಚ್ಚಾಗಿದೆ. ಜಗತ್ತಿನ ಅತ್ಯಂತ ಬಲಿಷ್ಠ ದೇಶವಾದ ಅಮೆರಿಕದ
ದಿನನಿತ್ಯದ ಭಯಭೀತಿ ನಮಗೆ ಎಲ್ಲೆಲ್ಲೂ ಕಾಣಿಸುತ್ತದೆ.
ಆರ್ಥಿಕ ಜಗತ್ತಿನ
ಪ್ರತೀಕಗಳಾಗಿದ್ದ ಜಂಟಿಗೋಪುರಗಳು ಕುಸಿಯುತ್ತಿದ್ದಂತೆ ಭದ್ರತೆಯ ಉದ್ಯಮಕ್ಕೆ ಒಂದು ಹೊಸದೇ
ಹುರುಪು ಬಂದಿತು. ಹೆಚ್ಚಾಗಿ ಖಾಸಗಿ ಕ್ಷೇತ್ರದಲ್ಲಿರುವ ಭದ್ರತಾ ಪರಿಕರಗಳನ್ನು ತಯಾರಿಸುವ
ಕಂಪನಿಗಳ ಲಾಭಾಂಶ ಹೆಚ್ಚುತ್ತಿದ್ದಂತೆ, ಸರಕಾರಗಳ ಖೋತಾ ಬೆಳೆಯುತ್ತಾ ಹೋಯಿತು. ಎಲ್ಲರೂ ತೆತ್ತ
ಆದಾಯ ಮತ್ತು ಇತರ ತೆರಿಗೆಗಳನ್ನು ತಮ್ಮ ದೇಶದ ಜನರ ಸುರಕ್ಷತೆಗಾಗಿ ಉಪಯೋಗಿಸಿದ್ದರಿಂದಾಗಿ
ಭದ್ರತೆಯ ಉದ್ಯಮದ ಪೋಷಣೆಯಾದದ್ದು ಸಹಜವೇ ಇತ್ತು. ಜಗತ್ತು ಈ ಆರ್ಥಿಕ ಹಲ್ಲೆಯಿಂದ ಚೇತರಿಸಿಕೊಂಡು
ಕೆಲ ವರ್ಷಗಳಲ್ಲಿ ಹೊಸ ವಿತ್ತೀಯ ಸ್ಥರವನ್ನು ಸೇರಬಹುದಿತ್ತು.
ಆದರೆ ಈ ಭಯೋತ್ಪಾದನೆಗೆ
ಉತ್ತರವಾಗಿ ಅಮೆರಿಕದ ಅಧ್ಯಕ್ಷ ಬುಷ್ ಅಫಘಾನಿಸ್ತಾನದ ಮೇಲೆ ಯುದ್ಧವನ್ನೇ ಸಾರಿದರು. ಹನ್ನೆರಡು
ವರುಷಗಳಾಗುತ್ತಾ ಬಂದರೂ ಈ ಯುದ್ಧ ಮುಗಿದಿಲ್ಲ. ಅಲ್ ಕಾಯ್ದಾ ಮಾಡಿದ ಅಗ್ಗದ ಧಾಳಿಗೆ ಅಮೆರಿಕ
ಆರೂನೂರಕ್ಕೂ ಹೆಚ್ಚು ಬಿಲಿಯನ್ ಡಾಲರುಗಳನ್ನು ಖರ್ಚುಮಾಡಿ ಅಫಘಾನಿಸ್ತಾನದಿಂದ
ನುಣುಚಿಕೊಳ್ಳಲಾಗದೆಯೇ ಒದ್ದಾಡುತ್ತಿದೆ. ಇದರ ಜೊತೆಗೆ ರಾಸಾಯನಿಕ ಶಸ್ತ್ರಾಸ್ತ್ರಗಳಿವೆಯೆಂಬ
ಕಾರಣ ಹಿಡಿದು ಇರಾಕಿನ ಮೇಲೆ ಸಾರಿದ ಎಂಟುನೂರು ಬಿಲಿಯನ್ ಡಾಲರುಗಳಿಗಿಂತ ಅಧಿಕ ಖರ್ಚಿನ
ಯುದ್ಧವಂತೂ ಅಲ್ ಕಾಯ್ದಾದಂತಹ ಭಯೋತ್ಪಾದಕ ಗುಂಪುಗಳಿಗೆ ಸಾಧನೆಯ ಭಾವನೆಯನ್ನು
ತಂದುಕೊಟ್ಟಿರಬಹುದು. ಅಫಘಾನಿಸ್ತಾನಕ್ಕೂ- ಇರಾಕಿಗೂ ಇಲ್ಲದ ನಂಟನ್ನು ಹುಡುಕಿ ಹೊರಟ ಬುಷ್ ತಮ್ಮ
ದೇಶದ ಆರ್ಥಿಕತೆಯನ್ನು ಎಷ್ಟರ ಮಟ್ಟಿಗೆ ಮುಳುಗಿಸಿದರೆಂದರೆ ಒಬಾಮಾರ ಎರಡನೆಯ ಅಧ್ಯಕ್ಷೀಯ
ಅವಧಿಯಲ್ಲಿಯೂ ಆ ಆರ್ಥಿಕ ಸಂಕಷ್ಟದಿಂದ ತಪ್ಪಿಸಿಬರುವ ಮಾರ್ಗಗಳು ಕಾಣಿಸುತ್ತಿಲ್ಲ.
ಈ ಎರಡೂ ಯುದ್ಧಗಳ ಮೇಲೆ
ಈ ಹನ್ನೆರಡು ವರ್ಷಗಳಲ್ಲಿ 1.5 ಟ್ರಿಲಿಯನ್ ಡಾಲರುಗಳು ನೇರವಾಗಿ ಖರ್ಚಾಗಿದೆಯೆಂದು ನ್ಯಾಷನಲ್
ಪ್ರಯಾರಿಟೀಸ್ ಪ್ರಾಜೆಕ್ಟ್ ಲೆಕ್ಕ ಕಟ್ಟಿದೆ. ಇದನ್ನು ನೋಡಿದಾಗ ಭಯೋತ್ಪಾದನೆಯ ಮೇಲಿನ ಆರ್ಥಿಕ
ಸಮರದಲ್ಲಿ ಭಯೋತ್ಪಾದನೆಯದೇ ಮೇಲುಗೈಯೆಂಬ ಸಕಾರಣವಾದ ಅನುಮಾನವನ್ನು ನಾವು ವ್ಯಕ್ತಪಡಿಸಬಹುದು.
"ಯುದ್ಧಗಳು ನಮ್ಮ ಅರ್ಥವ್ಯವಸ್ಥೆಗೆ ಒಳ್ಳೆಯದು ಎನ್ನುವ ಮಿಥ್ಯೆಯನ್ನು
ನಾವು ಮೊಟ್ಟಮೊದಲಿಗೆ ತಳ್ಳಿಹಾಕಬೇಕು. ಈ ಯೋಚನಾಲಹರಿ ಎರಡನೆಯ ಮಹಾಯುದ್ಧದ ಸಮಯಕ್ಕೆ
ಚಾಲ್ತಿಯಲ್ಲಿತ್ತು. ಆಗ ವಿಶ್ವವೇ ಒಂದು ಆರ್ಥಿಕ ಖಿನ್ನತೆಯನ್ನು ಅನುಭವಿಸುತ್ತಿತ್ತು. ಇದ್ದ
ಜನರಿಗೆಲ್ಲಾ ಉದ್ಯೋಗಾವಕಾಶವಿದ್ದು ಅವರುಗಳ ಉತ್ಪಾದನೆಯ ಪರಿಮಾಣಕ್ಕೆ ಸರಿಯಾದ ಬೇಡಿಕೆಯಿರದ ಆ
ಸಮಯದಲ್ಲಿ ಅರ್ಥವ್ಯವಸ್ಥೆ ಯಥಾವತ್ ನಿಂತುಬಿಟ್ಟಿತ್ತು. ಮಹಾಯುದ್ಧದ ಶಸ್ತ್ರಾಸ್ತ್ರ, ಯುದ್ಧ
ಸಾಮಗ್ರಿ ಮತ್ತು ಪರಿಕರಗಳ ಬೇಡಿಕೆಯನ್ನೂ ಆ ಮೂಲಕ ಉದ್ಯೋಗಾವಕಾಶವನ್ನೂ ಬೆಳೆಯಿಸುವ
ಅವಕಾಶವಿತ್ತು.... ಆದರೆ ಕೀನ್ಸ್ ತಮ್ಮ
ಉದ್ಯೋಗಾವಕಾಶದ ವೃತ್ತಾಂತದಲ್ಲಿ ಈ ವಾದಸರಣಿಯನ್ನು ತಳ್ಳಿಹಾಕಿದರು. ಕಡಿಮೆ ಬಡ್ಡಿದರ, ಸರಕಾರೀ
ಖರ್ಚಿನ ಮೂಲಕ ಯುದ್ಧ ಹೂಡದೆಯೇ ಅರ್ಥವ್ಯವಸ್ಥೆಯನ್ನೂ ಉದ್ಯೋಗಾವಕಾಶವನ್ನೂ ಸಕಾರಾತ್ಮಕವಾಗಿ
ಬೆಳೆಯಿಸುವುದು ಹೇಗೆಂದು ತೋರಿಸಿಕೊಟ್ಟರು."
ಹೀಗೆಂದು ಐದು ವರ್ಷಗಳ ಹಿಂದೆ ವಾದಿಸಿ ಯುದ್ಧಕ್ಕೆ ನಾವು ತೆತ್ತಬೇಕಾದ ಬೆಲೆಯ ಬಗ್ಗೆ
ಬರೆದದ್ದು ನೊಬೆಲ್ ಪುರಸ್ಕಾರ ಪಡೆದ ಅರ್ಥಶಾಸ್ತ್ರಜ್ಞ ಸಿಗ್ಲಿಟ್ಜ್ ಮತ್ತು ಲಿಂಡಾ ಬಿಲ್ಮ್ಸ್.
ಯಾವ ದೇಶ – ಯಾರ ಮೇಲೆ –
ಯಾವ ಪರಿಸ್ಥಿತಿಯಲ್ಲಿ ಯುದ್ಧ ಸಾರುತ್ತದೆ ಅನ್ನುವುದನ್ನು ಆಧಾರವಾಗಿಟ್ಟುಕೊಂಡು ಆ ದೇಶದ
ಅರ್ಥವ್ಯವಸ್ಥೆಗೆ ಅದು ಒಳಿತೋ ಅಲ್ಲವೋ ಎನ್ನುವ ವಿಲಕ್ಷಣ ಚರ್ಚೆಯನ್ನು ಮಾಡಬಹುದು. ಈ
ಉದಹರಣೆಯಲ್ಲಿ -
ಒಂದು: ಅಮೆರಿಕ ಸಾರಿದ
ಯುದ್ಧದಿಂದಾಗಿ ಶಸ್ತ್ರಾಸ್ತ್ರ ತಯಾರಿಕರಿಗೆ ಹೆಚ್ಚಿನ ವ್ಯಾಪಾರ ಸಿಕ್ಕಿರಬಹುದು. ಈ ಯುದ್ಧದಲ್ಲಿ
ಉಪಯೋಗಿಸಿರುವ ಶಸ್ತ್ರಾಸ್ತ್ರಗಳ ತಯಾರಿ ತಮ್ಮದೇ ದೇಶದಲ್ಲಿ ಆಗಿದ್ದು ಅದರ ಫಾಯಿದೆ ಖಾಸಗೀ
ಕ್ಷೇತ್ರದ ಅಸ್ತ್ರ ತಯಾರಕರಿಗಾಗುತ್ತದೆ. ಸರಕಾರಕ್ಕೆ ಒಟ್ಟೂ ಖರ್ಚು ಮಾಡಿದ್ದಕ್ಕೆ ಪ್ರತಿಫಲವಾಗಿ
ಅದರ ಒಂದು ಭಾಗ ಮಾತ್ರ ತೆರಿಗೆಯಾಗಿ ಸಿಗುತ್ತದೆ. ಈ ಯುದ್ಧವನ್ನು ಇನ್ಯಾವುದೇ ದೇಶ ಸಾರಿ,
ಅಮೆರಿಕದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದರೆ ಆಗ ಅಮೆರಿಕಕ್ಕೆ ಫಾಯಿದೆಯಾಗುತ್ತಿತ್ತು.
ಅರ್ಥಾತ್: ತಾವು ಉತ್ಪನ್ನ ಮಾಡುವ ವಸ್ತುಗಳಿಗೆ ತಾವೇ ಗ್ರಾಹಕರಾಗಿ ಆ ವಸ್ತುಗಳನ್ನ ತಾವೇ
ಹಚ್ಚೆಚ್ಚು ಬಳಸಿದರೆ ಯಾವುದೇ ಫಾಯಿದೆಯಿಲ್ಲ!
ಎರಡು: ಇರಾಕಿನ ಮೇಲೆ
ಸಾರಿದ ಯುದ್ಧದಿಂದಾಗಿ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಒಂದು ಕೈಯಿಕ್ಕಬಹುದೆನ್ನುವ ಆಶಾವಾದವೂ
ನಿಜವಾಗಲಿಲ್ಲ. ಯುದ್ಧ ಸಾರುವಾಗ - ಇರಾಕಿನ ಯುದ್ಧಕ್ಕೆ ಅಮೆರಿಕಕ್ಕೆ ಆಗುವ ನಿವ್ವಳ ಖರ್ಚು
ಹೆಚ್ಚೇನೂ ಅಲ್ಲ. ಆ ಖರ್ಚನ್ನು ಕಡಿತಗೊಂಡ ತೈಲದ ಬೆಲೆಯಿಂದಲೇ ವಸೂಲು ಮಾಡಬಹುದು ಎನ್ನುವ
ವಿಲಕ್ಷಣ ವಾದವನ್ನು ಮಂಡಿಸಲಾಗಿತ್ತು. ಆದರೆ ಆ ವಾದ ಕೆಲಸ ಮಾಡಿದಂತಿಲ್ಲ. ಅಧ್ಯಕ್ಷ ಬುಷ್ ಮತ್ತು
ಆತನಿಗೆ ಉಪದೇಶ ನೀಡುತ್ತಿದ್ದ ಇತರರಿಗೆ ಇದು ಗೊತ್ತಿರಲಿಲ್ಲವೆಂದೇ ಅನ್ನಿಸುತ್ತದೆ.
ಈ ಎಲ್ಲ ಚರ್ಚೆಯಿಂದ
ನಮಗೇನಾಗಬೇಕಾಗಿದೆ? ಜಗತ್ತಿನ ಅತ್ಯಂತ ಬಲಶಾಲೀ ರಾಷ್ಟ್ರವೊಂದು ಆರ್ಥಿಕವಾಗಿ ಹೀಗೆ ಏಕಾಏಕಿ
ಪ್ರಪಾತಕ್ಕಿಳಿಯುವುದೂ ನಮಗೂ ಜಗತ್ತಿಗೂ ಕಷ್ಟದ ವಿಚಾರವೇ. ನಾವು ಆರ್ಥಿಕವಾಗಿ
ಬಲಶಾಲಿಗಳಾಗಬೇಕಾದರೆ ನಮ್ಮ ಗ್ರಾಹಕರೂ, ಸುತ್ತಮುತ್ತಲಿನ ಪರಿಸರ ನಮ್ಮ ಉತ್ಪನ್ನವನ್ನು ಕೊಳ್ಳುವ
ಶಕ್ತಿಯನ್ನು ಹೊಂದಿದವರಾಗಿರಬೇಕು. ಈ ಯುದ್ಧದಿಂದ ಅಮೆರಿಕಕ್ಕಾಗಲೀ, ಅಫಘಾನಿಸ್ತಾನಕ್ಕಾಗಲೀ,
ಇರಾಕಿನ ಶ್ರೀ ಸಾಮಾನ್ಯರಿಗಾಗಲೀ ಯಾವುದೇ ಫಾಯಿದೆಯಾಗಿಲ್ಲ. ಒಟ್ಟಾರೆ ಸರ್ವನಾಶದ ಹಾದಿಯ ಈ
ಯುದ್ಧಗಳಿಂದ ಆದ ಆರ್ಥಿಕ ಕಷ್ಟಗಳ ಅನುರಣನ ವಿಶ್ವದಾದ್ಯಂತ ಕಾಣಿಸುತ್ತಿದೆ. ಈ ಯುದ್ಧಗಳು
ಅಮೆರಿಕೆಗೂ ಯುದ್ಧಕೋರ ರಾಷ್ಟ್ರಗಳಿಗೂ ತುಟ್ಟಿಯಾದ ಅರ್ಥಶಾಸ್ತ್ರದ ಪಾಠಗಳನ್ನು ಕಲಿಸಿವೆ.
ಯುದ್ಧದ ಖರ್ಚು
ಯುದ್ಧಕ್ಕೇ ಸೀಮಿತಗೊಳ್ಳುವುದಿಲ್ಲ ಎಂದು ಸ್ಟಿಗ್ಲಿಟ್ಜ್ ಮತ್ತು ಬಿಲ್ಮ್ಸ್ ವಾದಿಸುತ್ತಾರೆ.
ಯುದ್ಧದಿಂದಾಗಿ ಪುನರ್ನಿರ್ಮಾಣದ ಖರ್ಚೂ, ಯುದ್ಧದಲ್ಲಿ ಹೋರಾಡಿದ ಗಾಯಾಳುಗಳ ಶೂಶ್ರೂಶೆಯ ಖರ್ಚೂ,
ನಾಶಗೊಂಡ ಶಸ್ತ್ರಾಸ್ತ್ರಗಳನ್ನು ಪುನಃ ಪಡೆಯಬೇಕಾದ ಖರ್ಚೂ ಸೇರಿರುವುದರಿಂದ ಈ ಜಂಟಿ ಯುದ್ಧದ
ಒಟ್ಟಾರೆ ಖರ್ಚು ಮೂರು ಟ್ರಿಲಿಯನ್ ಡಾಲರುಗಳೆಂದು ಅವರು ಐದು ವರ್ಷಗಳ ಹಿಂದೆ ಲೆಕ್ಕಮಾಡಿದ್ದರು.
ಅವರು ಅಂದಾಜು ಮಾಡಿರುವ ಖರ್ಚಿನಲ್ಲಿ ಯುದ್ಧದ ಖರ್ಚಿಗೆ ಪಡೆದಿರುವ ಸಾಲದ ಮೇಲಿನ ಬಡ್ಡಿ, ಮತ್ತು
ನೇರವಾಗಿ ಗುರುತಿಸಲಾಗದ ಅನೇಕ ಖರ್ಚುಗಳನ್ನು ಸೇರಿಸಿಲ್ಲ. ಆದರೂ, ಮೂರು ಟ್ರಲಿಯನ್
ಡಾಲರುಗಲೆಂದರೆ ನೂರೈವತ್ತು ಲಕ್ಷ ಕೋಟಿ ರೂಪಾಯಿಗಳು. ಇದರ ಅಂದಾಜು ಸಿಗಬೇಕೆಂದರೆ ಭಾರತದ
2012-13ರ ಬಜೆಟ್ಟಿನಲ್ಲಿ ನಮ್ಮ ಸರಕಾರದ ‘ಆಯ‘ದ ಅಂದಾಜು ಹತ್ತುಲಕ್ಷ ಕೋಟಿರೂಪಾಯಿಗಳಿದ್ದುವು
ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ. ಇದು ಇಂದಿನ ಭಾರತ ಸರಕಾರದ ಹದಿನೈದು ವರ್ಷಗಳ ಆಯಕ್ಕೆ
ಸಮಾನವಾಗಿದೆ. ಈ ಇಷ್ಟೂ ಖರ್ಚನ್ನು ಭರಿಸುತ್ತಿರುವುದು ಅಮೆರಿಕದ ಇಂದಿನ, ಮುಂದಿನ ತಲೆಮಾರಿನ
ಜನತೆ.
ಈ ಇಷ್ಟೂ ಹಣ
ಸಕಾರಾತ್ಮಕವಾಗಿ ಉಪಯೋಗಗೊಂಡಿದ್ದರೆ ಅಮೆರಿಕ ಇನ್ನಷ್ಟು ಉತ್ತಮ ಪರಿಸ್ಥಿತಿಯಲ್ಲಿರುತ್ತಿತ್ತು.
ಜಗತ್ತಿನ ಹಲವು ದೇಶಗಳಿಗೆ ಇದರಿಂದ ಫಾಯಿದೆಯಾಗುತ್ತಿತ್ತು. ಈ ಹಣ ಖರ್ಚಾಗದಿದ್ದರೂ ಕಡಿಮೆ
ತೆರಿಗೆಯಿಂದ ಇಂದಿನ ಮುಂದಿನ ತಲೆಮಾರುಗಳು ಇನ್ನಷ್ಟು ಸುಖದಿಂದ ಇರಬಹುದಿತ್ತು.
ನಮ್ಮ ಸಂಸತ್ತಿನ ಮೇಲೆ
ಧಾಳಿ ಮಾಡಿದ ಕೆಲ ಭಯೋತ್ಪಾದಕರು, ಮುಂಬೈನಲ್ಲಿ ನೂರಾರು ನಾಗರೀಕರನ್ನು ಕೊಂದ ಕೈಬೆರಳೆಣಿಕೆಯ
ಭಯೋತ್ಪಾದಕರು ಬಯಸಿದ್ದು ಭಾರತವನ್ನು ಮುಳುಗಿಸುವ ಇಂಥದೇ ಒಂದು ಯುದ್ಧವನ್ನು ಎಂಬುದನ್ನ ನಾವು
ನೆನಪಿಟ್ಟುಕೊಳ್ಳಬೇಕು. ಕಾರ್ಗಿಲ್ ಕಾಲಕ್ಕೆ ನಾವು ನಮ್ಮ ಕಡೆಯಿಂದ ಯುದ್ಧಕ್ಕೆ ಸಜ್ಜಾಗಿ ನಮ್ಮ
ಪಡೆಗಳನ್ನು ನಮ್ಮ ಸರಹದ್ದಿನ ಬಳಿಗೆ ಒಯ್ದಿದ್ದೆವು. ನಮ್ಮ ದೇಶ ದುರ್ಬಲವಲ್ಲವೆಂದು
ನಿರೂಪಿಸುವುದಕ್ಕೆ ಆ ಬೆದರಿಕೆಯನ್ನು ನಾವು ನೀಡಬೇಕಿತ್ತು. ಆದರೆ ಯುದ್ಧಕ್ಕೆ ಯಾವುದೇ
ಅರ್ಥನೀತಿಯ ಆಧಾರವೂ ಇರಲಿಲ್ಲ.
ನಮಗೆ ಅಹಿಂಸೆಯ
ಪಾಠಗಳನ್ನು ಕಲಿಸಿದ ಮಹಾತ್ಮ, ಅಲಿಪ್ತ ನೀತಿಯನ್ನೂ ಶಾಂತಿಯ ಮಾರ್ಗವನ್ನೂ ಪ್ರತಿಪಾದಿಸಿದ ಪಂಡಿತ್
ನೆಹರೂ, ಉತ್ತಮ ವಿಚಾರಗಳನ್ನು
ನಮ್ಮಲ್ಲಿ ಬಿತ್ತರುವುದರಿಂದ ಭಾರತಕ್ಕೆ ಲಾಭವೇ ಆಗಿದೆ. ಭಾರತದ ಸ್ವಾತಂತ್ರವು ಯುದ್ಧದ ಫಲವಾಗಿ
ಬಂದಿದ್ದರೆ ನಮ್ಮ ಆರ್ಥಿಕ ಅಡಿಪಾಯ ದುರ್ಬಲವಾಗಿರುತ್ತಿತ್ತು. ಗಾಂಧಿ ತೋರಿಸಿದ ರಚನಾತ್ಮಕ
ಶಾಂತಿಪೂರ್ಣ ಹೋರಾಟವೇ ನಮಗೆ ಶ್ರೀರಕ್ಷೆ ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಲೇ ನಮ್ಮ
ನೆರೆಹೊರೆಯ ದೇಶಗಳೊಂದಿಗೆ ನಾವು ರಚನಾತ್ಮಕವಾಗಿಯೂ ಶಾಂತಿಪೂರ್ಣವಾಗಿಯೂ ವ್ಯವಹರಿಬೇಕಾಗಿದೆ.
ಬುಧವಾರ, 13 ಫೆಬ್ರವರಿ 2013
No comments:
Post a Comment