ರಾಜಾಸ್ಥಾನದ ಡುಂಗರ್
ಪುರದಲ್ಲಿ ಒಂದು ಸರ್ವೆ ನಡೆಸುತ್ತಿದ್ದ ಕಾಲಕ್ಕೆ ನನ್ನ ಜೊತೆಯಿದ್ದ ರಾಮಾಕಾಂತ ಸಹೂ ಆಹಾರಕ್ಕೆ
ತುಂಬಾ ಕಷ್ಟವಾಗುತ್ತಿದೆ ಎಂದು ಅಪಸ್ವರವನ್ನೆತ್ತಿದ. " ಊಟದಲ್ಲಿ ಟೊಮೇಟೋನೇ
ಇಲ್ಲ. ಊಟಕ್ಕೆ ರುಚಿಯೇ ಇಲ್ಲ" ಎಂದದ್ದಕ್ಕೆ ಮಾತು ಹಾರಿಸುತ್ತ ಹೇಳಿದ್ದೆ: "ನಮ್ಮ ಅಧ್ಯಯನ ಬಿಟ್ಟು ಡುಂಗರ್ ಪುರದ ತರಕಾರಿ ಮಾರುಕಟ್ಟೆಯ
ಆರ್ಥಿಕತೆಯನ್ನ ಪರಿಶೀಲಿಸೋಣ. ಟೊಮೇಟೋ ಎಲ್ಲಿಂದ ಬರುತ್ತೆ, ಸಾರಿಗೆ ಖರ್ಚು ಪರಿಶೀಲಿಸಿ ಆ
ಬೆಲೆಗೆ ಇಲ್ಲಿಯ ಬಡವರು ಅದನ್ನು ಕೊಳ್ಳಲು ಸಾಧ್ಯವೇ ನೋಡೋಣ" ಎಂದಿದ್ದೆ. ರಮಾಕಾಂತ
ತನ್ನ ಟೊಮೇಟೋ ಬೇಡಿಕೆಯನ್ನು ಬಿಟ್ಟುಕೊಟ್ಟದ್ದರಿಂದ ನಮ್ಮ ಮೂಲ ಸರ್ವೆಯನ್ನು
ಮುಂದುವರೆಸಿದ್ದೆವು. ಅಂದೇ ಮಧ್ಯಾಹ್ನ ವಾಪಸ್ಸಾಗುತ್ತಿರುವಾಗ ಡುಂಗರ್ ಪುರದಿಂದ ಅಷ್ಟೇನೂ
ದೂರವಲ್ಲದ ಬಿಚ್ಚಿವಾಡದ ಢಾಬಾದಲ್ಲಿ ಭರಪೂರ ಟೊಮೇಟೋ ಸಿಕ್ಕಿತ್ತು. ಹೊರಗಿನ ಜನರಷ್ಟೇ ಉಣ್ಣುವ
ಹೆದ್ದರಿಯ ಮೇಲಿದ್ದ ಬಿಚ್ಚಿವಾಡಾದ ಢಾಬಾದಲ್ಲಿ ಸ್ಥಳೀಯರಿರಲೇ ಇಲ್ಲ!
ನೀವು
ನಗರಪ್ರದೇಶದವರಾಗಿದ್ದರೆ, ನಿಮ್ಮ ಅಡುಗೆ ಮನೆಯ ಪದಾರ್ಥಗಳನ್ನು ಪರಿಶೀಲಿಸಿ ನೋಡಿ. ಸೋನಾ ಮಸೂರಿ ಅಕ್ಕಿ,
ತೊಗರಿಬೇಳೆ, ಧನಿಯಾ, ಜೀರಿಗೆ, ಮೆಂತ್ಯ, ಹಾಲು, ಬೆಣ್ಣೆ, ತುಪ್ಪ, ಸಾಂಬಾರ್ ಪುಡಿ,
ಉಪ್ಪಿನಕಾಯಿ,... ಎಲ್ಲವನ್ನೂ ಪರಿಶೀಲಿಸುತ್ತಾ ಮುಂದುವರೆದರೆ ಜಗತ್ತೇ ನಿಮ್ಮಲ್ಲಿರುವುದು
ಕಾಣಿಸುತ್ತದೆ. ಗುಜರಾತಿನ ಅಮುಲ್ ಬೆಣ್ಣೆ, ಆಸಾಮಿನ ಚಹಾ, ಬಾಬಾಬುಡನ್ ಗಿರಿಯ ಕಾಫಿ, ಮೀರಠ್ ನ
ಸಕ್ಕರೆ, ಪಂಜಾಬಿನ ಗೋಧಿ, ಗುಜರಾತಿನ ಶೇಂಗಾ ಎಣ್ಣೆ, ದಿಢೀರ್ ಅಡುಗೆಯೆಂದು ಕೆದಕುತ್ತಿದ್ದ
ಉಪ್ಪಿಟ್ಟಿಗೆ ಸವಾಲಾಗಿ ನಿಂತಿರುವ ನೂಡಲ್ಸ್. ನಮ್ಮದೇ ಎಂದು ಭ್ರಮಿಸಿದ್ದ ಎಂ.ಟಿ.ಆರ್ ಗೂ
ವಿದೇಶೀ ಮಾಲೀಕತ್ವದ ಲೇಪವಿದೆ. ಹಿಂದೆ ಬಿಜಿಎಲ್ ಸ್ವಾಮಿಯವರು ನಾವು ಸ್ಥಳೀಯವೆಂದು ನಂಬಿ ನಮ್ಮ
ಖಾದ್ಯಪದ್ಧತಿಗೆ ಒಗ್ಗಿಸಿಕೊಂಡಿದ್ದ ತರಕಾರಿಗಳನ್ನು ಪರಿಶೀಲಿಸಿ "ನಮ್ಮ ಹೊಟ್ಟೆಯಲ್ಲೊಂದು
ದಕ್ಷಿಣ ಅಮೇರಿಕಾ" ಎನ್ನುವ ಅದ್ಭುತ ಪುಸ್ತಕವನ್ನು ಬರೆದಿದ್ದರು. ಆದರೆ ಈಗಿನ ವಿಚಾರ
ನಮ್ಮ ಹಿತ್ತಲಿಗೆ ಪ್ರವೇಶಿದ, ನಾವು ಬೆಳೆಯುತ್ತಿರುವ ತರಕಾರಿಗಳದ್ದಲ್ಲ. ಬದಲಿಗೆ ನಮ್ಮ ಅಡುಗೆ
ಮನೆ ಪ್ರವೇಶಿಸಿರುವ ಜಗತ್ತಿನ ಬಗ್ಗೆ.
1935ರಲ್ಲಿ ಹಿಂದ್
ಸ್ವರಾಜ್ ರೂಪುರೇಷೆಗಳನ್ನು ಚರ್ಚಿಸುತ್ತಾ ಗಾಂಧೀಜಿ ಸ್ಥಳೀಯತೆ, ಸ್ವಾವಲಂಬನೆ ಮತ್ತು
ಸ್ವ-ಪರಿಪೂರ್ಣತೆಯ ಬಗ್ಗೆ ಲೌಕಿಕವನ್ನೊಳಗೊಂಡ ವಿಚಾರವನ್ನ ಮಂಡಿಸಿದ್ದರು: "ನಮ್ಮ ದಿನನಿತ್ಯದ ಅವಶ್ಯಕತೆಗಳಾದ ಆಹಾರ, ವಸ್ತ್ರ, ಮತ್ತು ಇತರ
ಮೂಲಭೂತ ಅವಶ್ಯಕತೆಗಳನ್ನು ನಾವು ಸ್ಥಳೀಯವಾಗಿಯೇ ಪೂರೈಸಿಕೊಳ್ಳಬೇಕು. ಆದರಿದನ್ನು ಅತಿರೇಕಕ್ಕೆ
ಒಯ್ಯಬಾರದು. ಸ್ವಾವಲಂಬನೆ ಎನ್ನುವುದರ ಅರ್ಥ ಸಂಕುಚಿತವೆಂದೇನೂ ಅಲ್ಲ..... ಗ್ರಾಮದಲ್ಲಿ
ಉತ್ಪಾದಿಸಲಾಗದ ವಸ್ತುಗಳನ್ನು ನಾವು ಹೊರಗಿನಿಂದ ತರಬೇಕು. ಅದಕ್ಕಾಗಿ ನಮಗೆ
ಅವಶ್ಯಕವಾದದ್ದಕ್ಕಿಂತ ಹೆಚ್ಚು ಉತ್ಪಾದನೆಯನ್ನೂ ಮಾಡಬೇಕು."
ಗಾಂಧೀಜಿಯ ಮಾತುಗಳನ್ನು
ಕುಡಿಯುವ ನೀರಿಗೆ ಬರವಿರುವ ದೂರದ ಗ್ರಾಮಗಳಲ್ಲಿ ಕಾಣಸಿಗುವ ಪೆಪ್ಸಿ-ಕೋಕ್ ಬಾಟಲಿಗಳ ಜಾಗತೀಕರಣದ
ವಿಹಂಗಮ ದೃಶ್ಯದ ಈ ಯುಗದಲ್ಲಿ ಪ್ರತಿಪಾದಿಸಬೇಕೆ? ಅಹಮದಾಬಾದಿನಲ್ಲಿ ನೆಲೆಸಿರುವ ಗಾಂಧಿವಾದಿ ಇಳಾ ಭಟ್
ಸ್ಥಳೀಯತೆಯ ಮಾತನ್ನು ಚರ್ಚೆಗಿಳಿಸಿದ್ದಾರೆ. ಚರ್ಚೆಗೆ ಹೊಸ ಪರಿಭಾಷೆಯನ್ನೂ ಆಕೆ
ನೀಡಿದ್ದಾರೆ.
ಆಹಾರ, ವಸ್ತ್ರ, ಸೂರು
ನಮ್ಮ ಮೂಲಭೂತ ಅವಶ್ಯಕತೆಗಳು. ಅದರ ಜೊತೆಗೆ ವಿದ್ಯೆ, ಆರೋಗ್ಯ ಸೇವೆ ಮತ್ತು ವಿತ್ತೀಯ ಸೌಕರ್ಯದ
ಮೂರು ಮೂಲಭೂತ ಸೇವೆಗಳು. ಈ ಆರೂ ಸ್ಥಳೀಯವಾಗಿ, ಸ್ಥಳೀಯ ಸಂಪನ್ಮೂಲಗಳಿಂದ ಬರಬೇಕು ಎನ್ನುವ
ಸೂತ್ರವನ್ನು ಆಕೆ ಪ್ರತಿಪಾದಿಸುತ್ತಾರೆ.
ಸ್ಥಳೀಯತೆ ಮತ್ತು
ವಿಕೇಂದ್ರೀಕರಣದ ಭಾಷಣದ ನಡುವಿನ ಚರ್ಚೆಗೆ ಇಳಾ ಒಂದು ಚೌಕಟ್ಟನ್ನು ಒದಗಿಸಿಕೊಟ್ಟಿದ್ದಾರೆ –
ಗ್ರಾಮದಿಂದ ನೂರು ಮೈಲಿಯ ಸುತ್ತಳತೆಯಿಂದ ಈ ಆರೂ ಅವಶ್ಯಕತೆಗಳೂ ಪೂರೈಸುವಂತಿರಬೇಕೆಂದು ಆಕೆ
ಪ್ರತಿಪಾದಿಸುತ್ತಿದ್ದಾರೆ. ಈ ಆರೇ ಸೇವೆಗಳು ಇರಬೇಕೋ, ನೂರು ಮೈಲಿ ಸರಿಯೋ ಎನ್ನುವ ಚರ್ಚೆ
ಮುಂದಾಗಬಹುದಾದರೂ, ಈಗ ಚರ್ಚೆಯನ್ನು ಪ್ರಾರಂಭಿಸುವುದಕ್ಕೆ ಇದೊಂದು ತಳಹದಿಯೇ ಸೈ. ಇಳಾ ಇಷ್ಟಕ್ಕೇ
ತಮ್ಮ ಕೆಲಸವನ್ನು ಸೀಮಿತಗೊಳಿಸಿಲ್ಲ. ಈ ನೂರು ಮೈಲಿಯ ಸೂತ್ರವನ್ನು ಹಿಡಿದು ಸ್ಥಳೀಯತೆ ಎಷ್ಟರ
ಮಟ್ಟಿಗೆ ಉಳಿದಿದೆ ಎನ್ನುವ ಪರಿಶೀಲನೆಯನ್ನೂ ಮಾಡಿದ್ದಾರೆ. ಆರು ಸೇವೆಗಳ ಬಗ್ಗೆ ಇಳಾ
ಬರೆದಿದ್ದರೂ ನಾನು ಈ ಬಾರಿಯ ಚರ್ಚೆಯನ್ನು ಆಹಾರಕ್ಕೆ ಸೀಮಿತಗೊಳಿಸುತ್ತೇನೆ.
ಸ್ಥಳೀಯತೆಯನ್ನು
ಕಾಪಾಡಿಕೊಳ್ಳಲು ಅವಶ್ಯಕವಾಗಿರುವುದು ಸ್ಥಳೀಯ ಆಹಾರವನ್ನಾಧರಿಸಿದ ಕೃಷಿ. ನಮ್ಮ ಡುಂಗರ್ ಪುರದ
ಉದಾಹರಣೆಯಲ್ಲಿ ಆ ಜಿಲ್ಲೆಯಲ್ಲಿ ಬೆಳೆದ ಅಷ್ಟೂ ಧಾನ್ಯಗಳಲ್ಲಿ ಮಾರುಕಟ್ಟೆಗೆ ಬರುತ್ತಿದ್ದುದು
ಕೇವಲ ಎರಡು ಪ್ರತಿಶತ ಇಳುವರಿ ಮಾತ್ರ. ಇದು ಮನೆಯ ಮಟ್ಟಿಗೆ ಎಷ್ಟು ಬೇಕೋ ಅಷ್ಟನ್ನೇ ಬೆಳೆಯುವ
ಕನಿಷ್ಠಾವಶ್ಯಕ ಕೃಷಿ. ಅಷ್ಟೇ ಜಮೀನಿರುವ ಬಡತನದ ಪರಿಸ್ಥಿತಿ. ಆದರೆ ಇಳಾರ ಪರಿಭಾಷೆಯಲ್ಲಿ ಇದು
ಸ್ವಾವಲಂಬೀ ಕೃಷಿಯಾಗಬೇಕಾಗಿದೆ. ಅಂದರೆ ಮನೆಯ ಮಟ್ಟಿಗಲ್ಲದೇ ಗ್ರಾಮದಲ್ಲಿ ಕೃಷಿ ನಡೆಸುವವರ
ಒಟ್ಟಾರೆ ಇಳುವರಿ ಗ್ರಾಮದ ಅವಶ್ಯಕತೆಗಳನ್ನು ಪೂರೈಸುವುದಕ್ಕಿಂತ ತುಸು ಹೆಚ್ಚಾಗಿಯೇ
ಇರಬೇಕಾಗುತ್ತದೆ. ಗ್ರಾಮದಲ್ಲಿ ದುಡ್ಡಿಗಾಗಲೀ – ಬೇರಾವ ಸೇವೆಯ ಬದಲಿಗಾಗಲೀ ಈ ಇಳುವರಿಯ
ಲೇನ್-ದೇನ್ ನಡೆಯುತ್ತದೆ. ಹೊರಗಡೆಯಿಂದ ಬರುವ ಧಾನ್ಯದ ಪರಿಮಾಣ ಸೀಮಿತವಾಗಿರಬೇಕು.
ಖೇಡಾ-ಆಣಂದ ಮತ್ತು
ಸುರೇಂದ್ರನಗರ ಜಿಲ್ಲೆಯ ನೂರು ಮನೆಗಳನ್ನು ಆಯ್ದು ಆ ಮನೆಗಳಲ್ಲಿ ಎಷ್ಟರಮಟ್ಟಿಗೆ
ಸ್ಥಳೀಯತೆಯಿದೆ-ಎಷ್ಟು ಜಾಗತೀಕರಣಗೊಂಡಿದೆ ಎನ್ನುವುದನ್ನ ಇಳಾ ಪರಿಶೀಲಿಸುತ್ತಾರೆ. ಅವರ ಅಧ್ಯಯನದ
ಪ್ರಕಾರ ಈ ಗ್ರಾಮಗಳು ಮುಖ್ಯ ಆಹಾರದ ಮಟ್ಟಿಗೆ ಸಾಕಷ್ಟು ಸ್ಥಳೀಯತೆಯನ್ನು ಕಾಯ್ದಿರಿಸಿಕೊಂಡಿವೆ.
ಅಕ್ಕಿ, ಗೋಧಿ, ಮತ್ತು ಬೇಳೆಗಳು ಸ್ಥಳೀಯವಾಗಿಯೇ ಬೆಳೆಯಲಾಗುತ್ತದೆ. ಇದನ್ನು ದೃಢೀಕರಿಸಲು ಈ
ನೂರು ಸಂಸಾರಗಳ ಮಾಹಿತಿಯಲ್ಲದೇ ಜಿಲ್ಲೆಯ ಇಳುವರಿ-ಮಾರಟ-ಬಳಕೆಯ ಅಂಕಿ-ಸಂಖ್ಯೆಯನ್ನೂ ನೋಡಬಹುದು.
ಆದರೆ ಕೃಷಿಯೇ ಎಷ್ಟು ಸ್ಥಳೀಯತೆಯಿಂದ ಕೂಡಿದೆ? ಈ ಪ್ರಶ್ನೆಯನ್ನೆತ್ತಿದಾಗ ಹೊರಗಿನ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಉಪಯೋಗ
ಕಾಣುತ್ತದೆ. ಸ್ಥಳೀಯತೆಯನ್ನು ಕಾಪಾಡಬೇಕಾದರೆ ಸಾವಯವತೆಯನ್ನೂ ಕಾಪಾಡಬೇಕೇನೋ..
ಕೃಷಿ ಬಿಟ್ಟು ಹೈನುಗಾರಿಕೆಗೆ ಬಂದರೆ ನಮಗೆ ಮಾರುಕಟ್ಟೆಯ ಸೂತ್ರಗಳಿಂದಾಗಿರುವ ಬದಲಾವಣೆಗಳು
ಕಾಣಿಸುತ್ತವೆ. ಎರಡೂ ಜಿಲ್ಲೆಗಳಲ್ಲಿ ದೊಡ್ಡ ಡೈರಿಗಳಿರುವುದರಿಂದ ಹಾಲಿನ ವ್ಯಾಪಾರದಲ್ಲಿ
ವಿತ್ತೀಯತೆ ತಲೆದೂರಿದೆ. ಹಿಂದೆ ಗ್ರಾಮದಲ್ಲಿ ಯಾರದೇ ಮನೆಯಲ್ಲಿ ಮುಫತ್ತಾಗಿ ಮಜ್ಜಿಗೆ
ಸಿಗುತ್ತಿತ್ತು. ಈಗ ಸಂಪೂರ್ಣ ಮಾಯವಾಗಿದೆ. ಮನೆಯಲ್ಲಿ ದಿನದ ಚಹಾಕ್ಕಾಗುವಷ್ಟು ಮಾತ್ರ ಹಾಲನ್ನು
ಇಟ್ಟುಕೊಂಡು ಮಿಕ್ಕದ್ದನ್ನು ಡೈರಿಗೆ ಸುರಿಯುತ್ತಾರೆ. ಹೀಗಾಗಿ ಮನೆಗೆ ಅನಿರೀಕ್ಷಿತ ಅತಿಥಿಗಳು
ಬಂದರೆ ಹಾಲನ್ನು ಎರವಲು ಪಡೆಯಬೇಕಾದ ಸ್ಥಿತಿಯಲ್ಲಿ ಗ್ರಾಮಸ್ಥರು ಇದ್ದಾರೆ! ಇದು ಹೊಸ ವಿಚಾರವೇನೂ
ಅಲ್ಲ. ಈ ಬಗ್ಗೆ ಹಿಂದೆ ಬಾವಿಸ್ಕರ್ ಮತ್ತು ಶಾಂತಿ ಜಾರ್ಜ್ ಅಮುಲ್ ಸಹಕಾರ ಪದ್ಧತಿಯ
ಯಶಸ್ಸಿನಡಿಯೇ – ಇಡೀ ಹಾಲನ್ನು ಮಾರುವ ಪ್ರಕ್ರಿಯೆಯಿಂದ - ಗ್ರಾಮಪ್ರಾಂತದಲ್ಲಿ ಪೌಷ್ಠಿಕತೆಯ
ಹರಣವಾಗಿರುವುದನ್ನು ದಾಖಲಿಸಿದ್ದರು. ಈ ಸವಾಲಿಗೆ ಜವಾಬಾಗಿ ಅಮುಲ್ ಸಂಸ್ಥೆ
ಕೆಲದಿನಕಾಲ ಮಕ್ಕಳಿಗೆ ಪೌಷ್ಠಿಕತೆ ತುಂಬಿಸಿದ ಸೋಯಾ ತುಂಡುಗಳನ್ನು ಕಡಿಮೆ ಬೆಲೆಗೆ ಸರಬರಾಜು
ಮಾಡಿತ್ತು. ಆದರೆ ಆ ಯೋಜನೆ ಸ್ಥಳೀಯ ಆಹಾರ ಪದ್ಧತಿಗೆ ಒಗ್ಗದೇ ವಿಫಲವಾಗಿತ್ತು. ಇಳಾರ
ಅಧ್ಯಯನದಿಂದ ವಿತ್ತೀಕರಣ ತಂದಿರುವ ಅಪೌಷ್ಠಿಕತೆಯ ಚರ್ಚೆ ಮತ್ತೆ ಆರಂಭವಾಗಬಹುದು.
ಸ್ಥಳೀಯ ಆಹಾರದ
ಸೇವನೆಯಿಂದ ಸ್ಥಳೀಯ ಖಾದ್ಯ ಸಂಸ್ಕೃತಿಯೂ ಉಳಿಯಬಹುದು. ಇಂದು ಒಂದು ಕಿರಾಣಿಯಂಗಡಿಯಲ್ಲಿ
ದಾಸ್ತಾನಾಗಿರುವ ಸಾಮಾನುಗಳನ್ನು ನೋಡಿದರೆ ಎಷ್ಟರಮಟ್ಟಿಗೆ ಸ್ಥಳೀಯತೆ ನಾಶವಾಗಿದೆ ಎನ್ನುವುದು
ತಿಳಿಯುತ್ತದೆ. ಇದು ನಗರಗಳ ಕಥೆಯಷ್ಟೇ ಅಲ್ಲ. ಮಜ್ಜಿಗೆ ಮಾಯವಾಗಿ ಕೋಕ್ ಪ್ರತ್ಯಕ್ಷವಾಗಿರುವ
ಗ್ರಾಮದ ಕಥೆಯೂ ಇದೇಯೇ.
ಆಹಾರ ಪದಾರ್ಥಗಳು
ಹೊರಗಿನಿಂದ ಬರುತ್ತಿವೆ ಎನ್ನುವುದು ಒಂದು ಮಾತಾದರೆ – ತೆರೆದ ಮಾರುಕಟ್ಟೆಯಿಂದ ನಮ್ಮ ಕೃಷಿಗೆ
ಏನಾಗುತ್ತಿದೆ ಎನ್ನುವುದು ಮತ್ತೊಂದು ಮಾತು. ಇಳಾರ ಅಧ್ಯಯನದ ಗ್ರಾಮಗಳಲ್ಲಿ ಜಾಗತೀಕರಣದಿಂದಾದ
ಆಧುನಿಕ ಕೃಷಿಯ ಗ್ರಾಹಕರ ಮಗ್ಗುಲು ಮಾತ್ರ ಕಾಣಿಸುತ್ತದೆ. ಹೊರಗಿನಿಂದ ಬಂದ ನೂಡಲ್ಸ್
ಕುರುಕುರೆಯಂತಹ ತಿಂಡಿಗಳು ಆ ಗ್ರಾಮದಲ್ಲಿ ತಲೆಹಾಕಿವೆ.
ಆದರೆ ಜಗತ್ತೇ ನಮ್ಮ
ಗ್ರಾಹಕರಾದಾಗ ಏನಾಗಬಹುದು? ಹಾಲಿನ ವ್ಯಾಪಾರದ ಮೂಲಕ ನಮಗೆ ಇದರ ಒಂದು ಪುಟ್ಟ ಝಲಕ್ ಸಿಕ್ಕಿದೆ. ಪೆಪ್ಸಿ,
ಮೆಕ್ ಡೊನಲ್ಡ್ಸ್ ಕಂಪನಿಗಳಗಿತ್ತಿರುವ ಸ್ಥಳೀಕರಣದ ಷರತ್ತಿನ ಪ್ರಕಾರ ಅವರು ನಮ್ಮ ರೈತರೊಂದಿಗೆ
ಒಪ್ಪಂದ ನಡೆಸಿ ಮಾಡುತ್ತಿರುವ ಆಲೂಗಡ್ಡೆ, ಟೋಮೇಟೋ ಕೃಷಿಯಾಗಲೀ, ರಫ್ತಿಗಾಗಿಯೇ ಬೆಳೆಯುತ್ತಿರುವ
ಗರ್ಕಿನ್ ಗಳಾಗಲೀ, ಮಧ್ಯಪ್ರದೇಶದ ಕೃಷಿಯನ್ನಾಕ್ರಮಿಸಿರುವ ಸೋಯಾ ಬೆಳೆಯನ್ನು ಇಳಾ ಗಮನಿಸಿದ್ದರೆ
ನಮ್ಮ ಆಹಾರ ಭದ್ರತೆಯೂ, ಆಹಾರ ಸ್ವಾವಲಂಬನೆಯೂ ಹರಣವಾಗುತ್ತಿರುವುದನ್ನು ನೋಡುತ್ತಿದ್ದರು. ಆದರೆ
ಈ ವ್ಯಾಪಾರದಿಂದ ಬರುವ ವಿತ್ತೀಯ ಸ್ವಾವಲಂಬನೆಯ ಹೊಳಹುಗಳೂ ಸಿಗುತ್ತಿದ್ದುವೇನೋ. ಎಲ್ಲವೂ ವಿತ್ತೀಕರಣಗೊಳ್ಳುತ್ತಿರುವ ಈ ನಗದು ಪಾವತಿ ಯುಗದಲ್ಲಿ
ಇಳಾ ನೂರು ಮೈಲಿಯ ಸೂತ್ರದಿಂದ ನಮ್ಮನ್ನು ಎಚ್ಚರಿಸಿದ್ದಾರೆ. ಇದರ ಚರ್ಚೆ ಇನ್ನೂ ಮುಂದುವರೆಯಬೇಕಿದೆ.
ರಮಾಕಾಂತನ ಮಗ ಬಹುಶಃ ಟೊಮೇಟೋ ಹಣ್ಣನ್ನೇ ಕಾಣದೆ ಬರೆ ಅದರ ಪ್ಯೂರಿಯಿಂದ ಜೀವನ ಸಾಗಿಸುವ
ಪರಿಸ್ಥಿತಿಯೂ ಉಂಟಾಗಬಹುದು! ಹಾಗಾಗದಿರಲು ನಾವು ನಮ್ಮನ್ನೇ ಈ ನೂರು ಮೈಲಿ ಪರೀಕ್ಷೆಗೆ
ಒಡ್ಡಿಕೊಳ್ಳುವುದು ಒಳ್ಳೆಯದು
No comments:
Post a Comment