Monday, December 10, 2012

ಕೇಜ್ರೀವಾಲರ ರಾಜಕೀಯ


ವಿಕೇಂದ್ರೀಕರಣದ ಬಗೆಗೆ ಬರೆಯುವಾಗ ಕೇಜ್ರೀವಾಲರ ರಾಜಕೀಯ ಅರಂಗೇಟ್ರಂಪದವನ್ನು ನಾನು ಉಪಯೋಗಿಸಿದ್ದು ಸರಿಯಲ್ಲವೆಂದು ಹಿತೈಷಿಗಳಾದ ಹಿರಿಯರೊಬ್ಬರು ಹೇಳಿದರು. ರಾಜಕೀಯವನ್ನು ಭಿನ್ನವಾಗಿ ಅರ್ಥೈಸುತ್ತಿರುವ, ಭ್ರಷ್ಟಾಚಾರವನ್ನು ಖುಲ್ಲಾ ಮಾಡಿ ದೊಡ್ಡವರ ಬಲೂನುಗಳಿಗೆ ಸೂಜಿ ಚುಚ್ಚಿ, ನಮ್ಮ ಸಂವಾದಕ್ಕೆ ಹೊಸತನವನ್ನು ತರುತ್ತಿರುವ ಶಕ್ತಿಗಳನ್ನು ಲೇವಡಿ ಮಾಡಿ ಲಘುವಾಗಿ ಮಾತಾಡಬಾರದು, ಗಂಭೀರ ವಿಚಾರವನ್ನು ಕುಹಕದಿಂದ ನೋಡಬಾರದು ಎಂದು ಅವರು ಹೇಳಿದ ಮಾತು ಸರಿಯೇ. ಆ ಬಗ್ಗೆ ಯೋಚಿಸುತ್ತಿದ್ದಂತೆ ಕೇಜ್ರೀವಾಲರ ರಾಜಕೀಯವನ್ನು ಅರ್ಥೈಸಿ ನೋಡೋಣ ಅನ್ನಿಸಿತು.

ರಾಜಕೀಯದಲ್ಲಿರುವವರ ಬಗ್ಗೆ ನಮ್ಮ ಪ್ರತಿಕ್ರಿಯೆಗಳು ಅವರ ವಿದ್ಯಮಾನಗಳಿಗೆ ನೀಡುವ ಸ್ಪಂದನವೇ ಆಗಿರುತ್ತದೆ. ಕೇಜ್ರೀವಾಲರನ್ನು ಅರ್ಥೈಸಲು, ಆರು ವರ್ಷಗಳ ಹಿಂದೆ ರಾಜಕೀಯ ಪ್ರವೇಶ ಮಾಡಿದ ಜಯಪ್ರಕಾಶ ನಾರಾಯಣರ ಶೈಲಿ, ಪೂರ್ವಾಪರಗಳನ್ನು ಉಪಯೋಗಿಸಬಹುದು. ಹಿರಿಯ ನಾಯಕರಾದ ಜೆಪಿಯವರ ಹೆಸರನ್ನು ಪಡೆದ ಈತನನ್ನೂ ಜನ ಪ್ರೀತಿಯಿಂದ ಜೆಪಿ ಎಂದೇ ಕರೆಯುತ್ತಾರೆ. ಜೆಪಿ-ಕೇಜ್ರೀವಾಲರಿಗೆ ಕೆಲವು ಸಾಮ್ಯತೆಗಳಿವೆ. ಬಹಳ ಭಿನ್ನತೆಗಳಿವೆ. ಇದರ ಪರಿಶೀಲನೆ ನನ್ನ ಆತ್ಮಾವಲೋಕನವೂ ಹೌದು.

ಕೇಜ್ರೀವಾಲರೂ ಜೆಪಿಯವರೂ ಸರಕಾರಿ ನೌಕರಿಯಲ್ಲಿದ್ದರು. ಇಬ್ಬರಿಗೂ ರಾಜಕೀಯದ ಹಿನ್ನೆಲೆಯಿಲ್ಲ. ಇಬ್ಬರೂ ರಾಜಕೀಯ ಪ್ರವೇಶಿಸಿ ತಮ್ಮ ದಿರಿಸನ್ನು ಬದಲಾಯಿಸಲಿಲ್ಲ. ಇಬ್ಬರೂ ಕೆಲದಿನ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸಿದರು. ಇಷ್ಟಕ್ಕೆ ಅವರ ಸಾಮ್ಯತೆ ಮುಗಿಯುತ್ತದೆ.

ಜೆಪಿ ವೈದ್ಯಕೀಯ ವಿದ್ಯೆ ಮುಗಿಸಿ, ಭಾರತೀಯ ಆಡಳಿತ ಸೇವೆಯನ್ನು ಸೇರಿ ಆಂಧ್ರಪ್ರದೇಶದಲ್ಲಿ ಕೆಲಸ ಮಾಡಿದರು. ಸೇವೆಯಲ್ಲಿದ್ದಾಗ ದಕ್ಷ, ಶುದ್ಧ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದರು. ತಮ್ಮ ಸೇವೆಯ ಭಾಗವಾಗಿ ರಾಜ್ಯಪಾಲರ ಆಪ್ತ ಕಾರ್ಯದರ್ಶಿಯಾಗಿಯೂ– ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿಯೂ ಕೆಲಸ ಮಾಡಿದ್ದರು. ಇವನ್ನು ನಿಭಾಯಿಸುತ್ತಾ ರಾಜಕೀಯ ವಿದ್ಯಮಾನ – ಪ್ರಕ್ರಿಯೆಗಳನ್ನು ಸಮೀಪದಿಂದ ನೋಡುವ ಅವಕಾಶವನ್ನು ಪಡೆದಿದ್ದರು.

ಸರಕಾರದಲ್ಲಿನ ಭ್ರಷ್ಟಾಚಾರ ಅವರನ್ನು ಕಾಡಿತ್ತು. ಅದಕ್ಕೆ ಕಾರಣವಾಗಿದ್ದ ವ್ಯವಸ್ಥೆಯಬಗ್ಗೆ ಜೆಪಿ ಯೋಚನೆ ಮಾಡಿದರು. ಚುನಾವಣಾ ವ್ಯವಸ್ಥೆ, ಚುನಾವಣೆಯಲ್ಲಿ ನಿಂತು ಗೆಲ್ಲಲು ಬೇಕಾದ ಆರ್ಥಿಕ ಬಲ, ಅದನ್ನು ಪಡೆಯುತ್ತಿದ್ದ ರೀತಿ ಎಲ್ಲವೂ ಕಾಡಿತು. ವ್ಯವಸ್ಥೆ ಬದಲಾಗಬೇಕಾದರೆ ಚುನಾವಣೆಗಳ ರೀತಿಯನ್ನು ಬದಲಾಯಿಸಬೇಕಾಗುತ್ತದೆ ಅನ್ನುವುದು ಜೆಪಿಯ ನಂಬಿಕೆ. ಅವರು ಫೌಂಡೇಶನ್ ಫರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಫ್ ಡಿ ಆರ್) ಎನ್ನುವ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು.

ಈ ಸಂಸ್ಥೆ ಹುಟ್ಟುವುದಕ್ಕೆ ವೇಳೆಗೆ ಸರಕಾರದಲ್ಲಿ 16 ವರ್ಷ ಸೇವೆಯನ್ನು ಜೆಪಿ ಸಲ್ಲಿಸಿಯಾಗಿತ್ತು. ಸರಕಾರಿ ಹುದ್ದೆಯಲ್ಲಿದ್ದೇ, ರಜೆ ಹಾಕಿ ಈ ಕೆಲಸವನ್ನು ಆತ ಮಾಡಬಹುದಿತ್ತು. 20 ವರ್ಷಗಳ ಸೇವೆಗೆ ಕಾದಿದ್ದರೆ ಜೀವಾವಧಿ ಪಿಂಚನಿಯೂ ಬರುತ್ತಿತ್ತು. ಆತ ಯಾವುದಕ್ಕೂ ಕಾಯಲಿಲ್ಲ. ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಎಫ್.ಡಿ.ಆರ್  ಪ್ರಾರಂಭಿಸಿದರು. ಹತ್ತು ವರ್ಷ ನಡೆಸಿದರು. ಚುನಾವಣಾ ನಿರೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಚುನಾವಣೆಗಳಲ್ಲಿ ಖರ್ಚಾಗುವ ಮೊತ್ತ, ಚುನಾವಣಾ ನೀತಿಸಂಹಿತೆಯ ಪಾಲನೆಯ ನಿರೀಕ್ಷಣಾ ಕೆಲಸವನ್ನು ಮಾಡಿದರು. ಜನತೆಗೆ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದರು. ಹೀಗೆ ವ್ಯವಸ್ಥೆಯಿಂದ ಹೊರಗೇ ಉಳಿದು ಸುಧಾರಣೆ ತರುವುದು ಕಷ್ಟವೆನ್ನಿಸಿದಾಗ ಅವರೇ ಅಖಾಡಾಕ್ಕೆ ಇಳಿದರು. ಹೀಗೆ ಅವರ ಲೋಕಸತ್ತಾ ಪಕ್ಷ ಸ್ಥಾಪನೆಯಾಯಿತು.

ಚುನಾವಣಾ ಪ್ರಕ್ರಿಯೆಯೇ ಅಲ್ಲದೇ, ಸಂವಿಧಾನದಲ್ಲಿಯೇ ಆಮೂಲಾಗ್ರ ಬದಲಾವಣೆಯಾದಾಗಲೇ ನಮ್ಮ ದೇಶದ ರಾಜಕೀಯ ವ್ಯವಸ್ಥೆ ಸುಧಾರಿಸುತ್ತದೆಂದು ಜೆಪಿ ನಂಬುತ್ತಾರೆ. ಇದಕ್ಕಾಗಿ ರಾಷ್ಟ್ರಾಧ್ಯಕ್ಷರ ನೇರ ಚುನಾವಣೆ, ಮತಗಳ ಶೇಕಡಾವಾರಿನ ಪ್ರಕಾರ ಸಂಸತ್ತಿನಲ್ಲಿ ಸ್ಥಾನಗಳ ಸಂಖ್ಯೆ, ಹೀಗೆ ಕೆಲವು ಕ್ರಾಂತಿಕಾರಿ ವಿಚಾರಗಳನ್ನು ಜೆಪಿ ಪ್ರತಿಪಾದಿಸಿದ್ದಾರೆ. ಆದರೆ ಇದರ ಸಾಧನೆಯ ದಾರಿ ಪ್ರಜಾತಂತ್ರವೇ ಹೊರತು ಕ್ರಾಂತಿ-ಚಳವಳಿ ಅಲ್ಲ ಎಂದು ಅವರು ನಂಬಿದ್ದಾರೆ. ಅವರ ಬದಲಾವಣೆಯ ಅಜೆಂಡಾ ದೂರದೃಷ್ಟಿಯದ್ದು. ಅವರು ತಮ್ಮ ಪಕ್ಷವನ್ನು ಕ್ರಮಕ್ರಮೇಣ – ಜನರನ್ನು ಒಳಗೊಳ್ಳುತ್ತಾ ಕಟ್ಟುತ್ತಿದ್ದಾರೆ. ಆರು ವರ್ಷಗಳಲ್ಲಿ ಅವರಿಗೆ ಪ್ರಾಪ್ತವಾಗಿರುವುದು ಒಂದು ಎಂ.ಎಲ್.ಎ ಸ್ಥಾನ. ಆ ಬಗ್ಗೆ ಜೆಪಿಗೆ ಚಡಪಡಿಕೆ, ಪಶ್ಚಾತ್ತಾಪವಿಲ್ಲ. ಆಮೂಲಾಗ್ರ ಬದಲಾವಣೆ ತಾಳ್ಮೆಯ ಕೆಲಸ. ಇರುವ ರಚನಾವ್ಯವಸ್ಥೆಯನ್ನು ಉರುಳಿಸುತ್ತಲೇ ಹೊಸತನ್ನು ಕಟ್ಟಬೇಕಾದ ಕೆಲಸ.

ಜೆಪಿ ತಮ್ಮ ರಾಜಕೀಯದಲ್ಲಿ ಯಾವುದೇ ಸ್ಥಳೀಯ ಚಿಲ್ಲರೆ ವಿಷಯವನ್ನು ಎತ್ತಿಲ್ಲ. ಅಕಸ್ಮಾತ್ ಮುಖ್ಯವಾದ ಸ್ಥಳೀಯ ವಿಷಯವು ಉದ್ಭವವಾದರೆ ಅದನ್ನು ರಾಷ್ಟ್ರದ ಮಟ್ಟಕ್ಕೇರಿಸಿ ತಮ್ಮ ವಾದವನ್ನು ಮಂಡಿಸುತ್ತಾರೆ. ತೆಲಂಗಾಣಾ ಬೇರೆ ರಾಜ್ಯವಾಗಬೇಕೆನ್ನುವ ವಿಚಾರ ಬಂದಾಗ ಜೆಪಿ ಸಣ್ಣ ರಾಜ್ಯಗಳಿಂದ ಉಂಟಾಗುವ ಲಾಭ ನಷ್ಟಗಳ ಚೌಕಟ್ಟಿನಲ್ಲಿ ತೆಲಂಗಾಣಾವನ್ನಿಟ್ಟು ತಮ್ಮ ವಾದವನ್ನು ಮಂಡಿಸುತ್ತಾರೆ. ಕರೀಂನಗರ-ವರಂಗಲ್ಲಿನಲ್ಲಿ ರೈತರ ಆತ್ಮಹತ್ಯೆಯ ಸುದ್ದಿ ಬಂದಾಗ ಕೃಷಿಯಲ್ಲಿನ ಅಸಮತೋಲನಗಳನ್ನು ಚರ್ಚಿಸುತ್ತಾರೆ. ಸಮಸ್ಯೆಯ ಮೂಲಕ್ಕೆ ಹೋಗಿ ತಮ್ಮ ವಿಶ್ಲೇಷಣೆಯನ್ನು ನೀಡುತ್ತಾರೆ. ಶುದ್ಧ-ಪಾರದರ್ಶಕ ರಾಜಕೀಯ ಮಾಡುವುದಕ್ಕೆಂದೇ ರಾಷ್ಟ್ರೀಯ ಪಕ್ಷಗಳನ್ನು ಸೇರುವ ಸರಳ ಉಪಾಯವನ್ನು ನಿರಾಕರಿಸಿರುವ ಜೆಪಿಯ ರಾಜಕೀಯ ಸದ್ದಿಲ್ಲದೇ ಬೆಳೆಯುತ್ತಿದೆ.

ಈ ಚೌಕಟ್ಟಿನಲ್ಲಿ ನಾವು ಕೇಜ್ರೀವಾಲರ ರಾಜಕೀಯವನ್ನಿಟ್ಟರೆ ಅವರ ಬಗೆಗೆ ಸಹಾನುಭೂತಿಯಿದ್ದರೂ ಅಸಮಾಧಾನ ಏಕಿರಬಹುದು ಎಂಬುದು ಅರ್ಥವಾಗುತ್ತದೆ. ಐಐಟಿ ಖಡಗಪುರದಲ್ಲಿ ಎಂಜಿನಿಯರಿಂಗ್ ಕಲಿತ ಕೇಜ್ರೀವಾಲರು ಕೆಲ ವರ್ಷಗಳ ನಂತರ ಭಾರತೀಯ ವಿತ್ತೀಯ ಸೇವೆಯ ಆದಾಯ ತೆರಿಗೆ ವಿಭಾಗ ಸೇರಿದರು. ಸೇವೆಯಲ್ಲಿದ್ದಾಗಲೇ ಸಂಬಳ ಸಹಿತ ರಜೆಹಾಕಿ ಉನ್ನತ ವ್ಯಾಸಂಗಕ್ಕೆಂದು ವಿಭಾಗದಿಂದ ಎರಡು ವರ್ಷ ದೂರ ಉಳಿದರು. ರಜೆಯ ಬಳಿಕ ವಿಭಾಗದಲ್ಲಿ ಎರಡು ವರ್ಷ ಸೇವೆಸಲ್ಲಿಸಬೇಕೆನ್ನುವುದು ಸಂಬಳ ಸಹಿತ ರಜೆಯ ಷರತ್ತಾಗಿತ್ತು. ಆದರೆ ಕೇಜ್ರೀವಾಲರು ಒಂದು ವರ್ಷವಷ್ಟೇ ದುಡಿದು ಮತ್ತೆ ರಜೆಯ ಮೇಲೆ ಹೋದರು. ತಾವು ನೌಕರಿಯಲ್ಲಿರುತ್ತಲೇ ಸ್ವಯಂ ಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಮಾಹಿತಿ ಹಕ್ಕು ಕಾಯಿದೆಯ ಕ್ಷೇತ್ರದಲ್ಲಿ ತಮ್ಮ ಕೆಲಸ ಮುಂದುವರೆಸಿದರು.

ದೇಶದ ಹಿತಕ್ಕಾಗಿ ದುಡುಯುತ್ತಿರುವುದರಿಂದ, ನಿಯಮಾನುಸಾರ ಸಲ್ಲಿಸಬೇಕಾದ ಸೇವೆಯನ್ನು ಮಾಫು ಮಾಡಬೇಕೆಂದು ಸರಕಾರವನ್ನು ಅವರು ಕೇಳಿಕೊಂಡರಾದರೂ ಸರಕಾರ ಒಪ್ಪಲಿಲ್ಲ. ಅದೇ ಚರ್ಚೆಯ ವಿಷಯವಾಯಿತು. ಆ ನಿಯಮೋಲ್ಲಂಘನಕ್ಕೆ ಕೊಡಬೇಕಾದ ಪರಿಹಾರವನ್ನು ಕೊಟ್ಟ ಮೇಲೇ ನೌಕರಿಯಿಂದ ಮುಕ್ತರಾಗಬೇಕಾಯಿತು.
ಕೇಜ್ರೀವಾಲರ ರಾಜಕೀಯಕ್ಕೆ ಒಂದು ತುರ್ತಿದೆ. ಅದು ಚಳವಳಿಯ ಮಾರ್ಗದಿಂದ ಕೂಡಿದೆ. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಸಾಧ್ಯವಿಲ್ಲವಾದರೂ, ಸಣ್ಣ-ಪುಟ್ಟ ಉಲ್ಲಂಘನೆಯ ಉದಾಹರಣೆಗಳು ದೊರೆಯುತ್ತವೆ. ಈ ಉಲ್ಲಂಘನೆಯಿಂದ ತಮಗೆ ಫಾಯಿದೆಯೂ ಇಲ್ಲ, ಸರಕಾರಕ್ಕೆ ನಷ್ಟವೂ ಇಲ್ಲ ಎಂದು ಕೇಜ್ರೀವಾಲರು ಸಮರ್ಥಿಸಿಕೊಳ್ಳುತ್ತಾರೆ. ಅವರದ್ದು end justifies the means– ಉದ್ದೇಶ ಸಾಧನೆಗೆ ಉಲ್ಲಂಘನೆ ಸಮರ್ಪಕ ಎನ್ನುವ ವಾದವಾಗಿದೆ. ಗಾಂಧೀಜಿಯವರ ಸತ್ಯಾಗ್ರಹವೂ ಉಲ್ಲಂಘನೆಯ ಮಾರ್ಗವೇ ಆಗಿತ್ತು. ಹಾಗೆಂದಕೂಡಲೇ ಕೇಜ್ರೀವಾಲರ ಸಮರ್ಥನೆ ಸುಲಭದ್ದು ಎನ್ನಲಾಗದು. ಯಾಕೆಂದರೆ ನಡೆ-ನುಡಿಯಲ್ಲಿ ಅಂತರವಿಲ್ಲದೇ ಒಂದು ನೈತಿಕ ಉತ್ತುಂಗತೆಯ ಸ್ಥಾನಮಾನ ಪಡೆದಾಗ ಮಾತ್ರ ಈ ಉಲ್ಲಂಘನೆ ಸಫಲವಾದೀತು. ಕೇಜ್ರೀವಾಲರು ಅಂಥರ ಸ್ಧಾನಮಾನವನ್ನು ಇನ್ನೂ ಪಡೆಯಬೇಕಾಗಿದೆ. ಅವರು ಚಳವಳಿಯಲ್ಲಿದ್ದಾಗ ಅಣ್ಣಾ ಹಜಾರೆಯವರಿಗಿರುವ ನೈತಿಕೆಯ ಆಧಾರದ ಮೇಲೆ ಅವರಿಗೀ ಸ್ಥಾನಮಾನ ದಕ್ಕಿತ್ತು. ರಾಜಕೀಯದಲ್ಲಿ ಅವರಿಗದು ಲಭ್ಯವಿಲ್ಲ. ತಮ್ಮ ಕಾಲ ಮೇಲೇ ತಾವು ನಿಂತುಕೊಳ್ಳಬೇಕಾಗಿದೆ.

ಈ ರೀತಿಯ ತುರ್ತಿನ ವ್ಯವಹಾರದಿಂದ ಕೇಜ್ರೀವಾಲರು ಅನವಶ್ಯಕವಾಗಿ ಟೀಕಾಹ್ವಾನ ಮಾಡಿಕೊಳ್ಳುತ್ತಿದ್ದಾರೆ.  ಮಾಹಿತಿ ಹಕ್ಕು ಕಾಯಿದೆಯನ್ನು ಕೇಂದ್ರ ಸರಕಾರದಲ್ಲಿ ಅನುಷ್ಠಾನಗೊಳಿಸುವ ಮುನ್ನ ಆ ಬಗ್ಗೆ ಅರುಣಾ ರಾಯ್ ಮತ್ತು ನಿಖಿಲ್ ಡೇ ಮತ್ತವರ ಮಜೂರ್ ಕಿಸಾನ್ ಶಕ್ತಿ ಸಂಘಟನ್ ಸಂಸ್ಥೆ, ರಾಜಾಸ್ಥಾನದಲ್ಲಿ ವರ್ಷಗಳೇ ಕೆಲಸ ಮಾಡಿದ್ದರು. ಮೊದಲಿಗೆ ಕಾಯಿದೆಯನ್ನು ರಾಜಾಸ್ಥಾನದಲ್ಲಿ ಅನುಷ್ಠಾನಗೊಳಿಸಲಾಯುತು. ಕೇಂದ್ರಕ್ಕೆ ಆ ಕಾಯಿದೆ ಬರಲು ಇನ್ನಷ್ಟು ವರ್ಷಗಳ ತಾಳ್ಮೆಯನ್ನು ವಹಿಸ ಬೇಕಾಯಿತು. ಸರಕಾರವನ್ನು ವಿರೋಧಿಸುತ್ತಲೇ, ಸರಕಾರದೊಂದಿಗೆ ಕೆಲಸ ಮಾಡುವ; ಸೋನಿಯಾ ಗಾಂಧಿಯವರ ರಾಷ್ಟ್ರೀಯ ಸಲಹಾ ಮಂಡಲಿಯ ತಮ್ಮ ಸದಸ್ಯತ್ವವನ್ನು ಸದುಪಯೋಗ ಪಡಿಸಿಕೊಂಡ ಅರುಣಾರ ತಾಳ್ಮೆಯ ಹಾದಿಯನ್ನು ಕೇಜ್ರೀವಾಲರು ತಮ್ಮದಾಗಿಸಿಕೊಳ್ಳಲೇ ಇಲ್ಲ.

ಕೇಜ್ರೀವಾಲರದ್ದು ಗಡುವುಗಳ ತುರ್ತಿನ ರಾಜಕೀಯ. ಹೀಗಾಗಿಯೇ ಲೋಕಪಾಲ್-ಜನಲೋಕಪಾಲ್ ಗಲಾಟೆಯಲ್ಲಿ ಹಠಮಾಡಿ, ಗಡುವು ನೀಡುವ ರಾಜಕೀಯದಿಂದಾಗಿ ಸರಕಾರದ ಜೊತೆ ಕೆಲಸಮಾಡಿ ಒಂದು ನಡುಹಾದಿ ತಲುಪುವ ಅವಕಾಶವನ್ನು ಆತ ಕಳೆದುಕೊಂಡರು. ಮಾತುಕತೆ ಮುರಿದು ಪ್ರತಿಭಟನೆ ಮುಂದುವರೆಸಿದರು. ಕೇಜ್ರೀವಾಲರ ತುರ್ತು ಅವರ ಕೆಲಸವನ್ನೂ ರಾಜಕೀಯವನ್ನೂ ಜೆಪಿಗಿಂತ, ಅರುಣಾ ರಾಯ್ ಗಿಂತ, ಇಳಾ ಭಟ್ ಗಿಂತ, ಕುರಿಯನ್ ಗಿಂತ ಭಿನ್ನವಾಗಿಸಿಬಿಡುತ್ತದೆ.

ನಮ್ಮ ಮುಂದಿರುವ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಪರಿಪಕ್ವತೆಯನ್ನು, ತಾಳ್ಮೆಯನ್ನೂ ಕೇಜ್ರೀವಾಲರು ತೋರಿಸಿ ಜನರ ಗೌರವವನ್ನು ಸಹಜವಾಗಿ ಸಂಪಾದಿಸಲು ಸಾಧ್ಯವೇ?  




No comments:

Post a Comment