Wednesday, November 21, 2012

ಟಾಪ್-ಡೌನ್ ಮತ್ತು ಬಾಟಮ್-ಅಪ್ ರಾಜಕೀಯ


ಈಚೆಗೆ ನಡೆದ ಒಂದು ಸಂವಾದದಲ್ಲಿ ದೇಶದ ಸಮಸ್ಯೆಗಳನ್ನು ಚರ್ಚಿಸುತ್ತಾ ಮಹಾಶಯರೊಬ್ಬರು ಕೇಂದ್ರ ಸರಕಾರದ ಮೇಲೆ ಮುಗಿಬಿದ್ದು ಅದರ ಯೋಜನೆಗಳೆಲ್ಲಾ ವಿಫಲವಾಗಿವೆ, ಟಾಪ್-ಡೌನ್ ಬಿಟ್ಟು ಬಾಟಮ್-ಅಪ್ ರೀತಿಯಲ್ಲಿ ನಾವು ಕೆಲಸ ಮಾಡಿದಾಗಲೇ ನಮ್ಮ ದೇಶದ ಶ್ರೀಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು. ತಮ್ಮ ರಾಜಕೀಯ ಅರಂಗೇಟ್ರಂ ಸೂಚಿಸುತ್ತಾ "ಜನರನ್ನು ಒಳಗೊಂಡ" ಯೋಜನೆಗಳನ್ನು ತಮ್ಮ ಪಕ್ಷ ತಯಾರಿಸುವುದೆಂದು ಕೇಜ್ರೀವಾಲ್ ಕೂಡಾ ಹೇಳಿದ್ದರು. ಗುಜರಾತಿನಿಂದ ವಸೂಲಾಗುವ ತೆರಿಗೆಯನ್ನು ಗುಜರಾತಿಗೇ ನೀಡಿಬಿಟ್ಟರೆ ಕೇಂದ್ರದ ಸಹಾಯವೇ ಬೇಡ ಎಂದು ನರೇಂದ್ರ ಮೋದಿ ಹೇಳಿದ್ದರು. ಬಾಳಾ ಠಾಕ್ರೆಯಂಥಹ ಸ್ಥಳೀಯ ನಾಯಕರು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುವುದಕ್ಕೂ ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಕರಿಸುವುದಕ್ಕೂ ಕಾರಣ ಈ ಕೇಂದ್ರೀಕರಣ-ವಿಕೇಂದ್ರೀಕರಣದ ಅಸಮತೋಲನದ ಕಷ್ಟದ ವಿಚಾರವೇ ಆಗಿರಬಹುದು.

ನಮ್ಮಂತಹ ಬೃಹತ್ ದೇಶದ ಕೇಂದ್ರ ಸರಕಾರ ಸ್ಥಳೀಯತೆಯನ್ನೂ ರಾಷ್ಟ್ರೀಯತೆನ್ನೂ ಪರಿಗಣಿಸಬೇಕಾದ ಕಷ್ಟದ ಪರಿಸ್ಥಿತಿಯಲ್ಲಿ ಇದೆ. ವಿಕೇಂದ್ರೀಕರಣ ಎಲ್ಲಿಯವರೆಗಿರಬೇಕು? ಅದು ಕೇವಲ ಯೋಜನೆಗಳ ಅನುಷ್ಠಾನಕ್ಕೆ ಸೀಮೀತವಾದ ಪ್ರಶ್ನೆಯೇ, ಅಥವಾ ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲಗಳ ವಿಷಯಕ್ಕೂ ವಿಕೇಂದ್ರೀಕರಣವನ್ನು ಒಯ್ಯುವುದು ಸಾಧ್ಯವೇ? ಸ್ಥಳೀಯ, ರಾಜ್ಯದ, ಕೇಂದ್ರದ ತೆರಿಗೆ ಮತ್ತು ಸಂಪನ್ಮೂಲಗಳನ್ನು ಹೇಗೆ ಹಂಚಬೇಕೆನ್ನುವ ಕಷ್ಟದ ಫಾರ್ಮುಲಾದ ಮೇಲೆ ಕೇಂದ್ರದ ಯೋಜನೆಗಳೂ ವಿಕೇಂದ್ರೀಕರಣದ ವಿಚಾರಗಳೂ ಇವೆ.

ವಿಕೇಂದ್ರೀಕರಣದ ಅತಿರೇಕ ರಾಷ್ಟ್ರೀಯ ಸಮಸ್ಯೆಗಳಿಗೆ ಸ್ಥಳೀಯ ಪರಿಹಾರಗಳತ್ತ ನಮ್ಮನ್ನಟ್ಟುತ್ತದೆ. ರೈತನೊಬ್ಬ ತನ್ನ ಜಮೀನಿನ ನೀರಾವರಿಗೆ ವಿಕೇಂದ್ರೀಕೃತ ಪರಿಹಾರ ಹುಡುಕಿದರೆ ಅವನು ಕೊಳವೆಬಾವಿಯನ್ನು ತೋಡುತ್ತಾನೆ. ಆದರೆ ಪರಿಸರದ ಹಿತದೃಷ್ಟಿಯಿಂದ, ಗ್ರಾಮದ-ಪ್ರಾಂತದ ಸಂಪನ್ಮೂಲಗಳನ್ನು ಪರಿಗಣಿಸಿದಾಗ, ಕೊಳವೆಬಾವಿಗಿಂತ ಉತ್ತಮ ಉಪಾಯ ಸಿಗಬಹುದು. ಹೀಗೆಂದು ಮನೆಯ ಮಟ್ಟದ ವಿಕೇಂದ್ರೀಕರಣ ಬಿಟ್ಟು ಗ್ರಾಮದ ಮಟ್ಟಿಗಿನ ವಿಕೇಂದ್ರೀಕರಣದ ಸೂತ್ರಗಳನ್ನು ಪರೀಕ್ಷಿಸಬಹುದೇ?

ಗ್ರಾಮದ ಮಟ್ಟದಲ್ಲಿ, ಗ್ರಾಮದ ಒಳಿತನ್ನು ನೋಡಿಕೊಳ್ಳುವ ವಿಕೇಂದ್ರೀಕೃತ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬಹುದು. ಅಲ್ಲಿನ ಕೆರೆ, ಕಟ್ಟೆ, ಬಾವಿಯನ್ನು ಗ್ರಾಮಸಮೂಹ ಹೇಗೆ ಉಪಯೋಗಿಸಕೊಳ್ಳಬಹುದೆಂದು ನಿರ್ಧರಿಸಬಹುದು. ವಾಟರ್ ಶೆಡ್ ಮಾಡಬಹುದು. ಎಲ್ಲವೂ ನಿಜ. ಆದರೆ ಅವೆಲ್ಲಕ್ಕೆ ಗ್ರಾಮದಿಂದಲೇ ಎಷ್ಟು ಆರ್ಥಿಕ ಸಂಪನ್ಮೂಲಗಳನ್ನು ಕಲೆಹಾಕಲು ಸಾಧ್ಯ? ಸ್ಥಳೀಯವಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಗಬಹುದಾದ ಗ್ರಾಮ ಪಂಚಾಯ್ತಿಯ ಬಜೆಟ್ಟು, ಸ್ಥಳೀಯ ಕಾರ್ಯಕ್ರಮಗಳಿಗೆ ಎಷ್ಟು ಆರ್ಥಿಕ ಸಂಪನ್ಮೂಲವನ್ನು ಒದಗಿಸಬಹುದು? ಈ ಪ್ರಶ್ನೆಗಳನ್ನು ನಾವು ಕೇಳಿಕೊಂಡಾಗ ಕೇಂದ್ರೀಕೃತ ವ್ಯವಸ್ಥೆಯ ಅಗತ್ಯ ಮತ್ತು ಮಹತ್ವ ನಮಗೆ ಕಾಣಸಿಗುತ್ತದೆ. ಉದಾಹರಣೆಗೆ ಮೊಬೈಲ್ ಕಂಪನಿಗಳಿಗೆ ಬೇಕಾದ ತರಂಗಗಳನ್ನು ಉಪಯೋಗಿಸುವ ಹಕ್ಕನ್ನು ನೀಡುವ ಪ್ರಕ್ರಿಯೆಯನ್ನು ಗ್ರಾಮ ಪಂಚಾಯ್ತಿ ನೀಡುವುದು ಅಸಾಧ್ಯವಾದ ಮಾತು. ಗ್ರಾಮದಲ್ಲಿ ತಯಾರಾದ ಉತ್ಪನ್ನಗಳು ಹೊರಗಡೆಯ ಮಾರುಕಟ್ಟೆಯನ್ನು ತಲುಪಬೇಕಾದ ಸಾರಿಗೆ, ಅದಕ್ಕೆ ಬೇಕಾದ ರಸ್ತೆಯನ್ನು ಒದಗಿಸುವ ಜವಾಬ್ದಾರಿ ಯಾರದ್ದು? ಅದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲವು ಎಲ್ಲಿಂದ ಬರುತ್ತದೆ? ಅನೇಕ ಸ್ಥಳೀಯ ವಿಚಾರಗಳ ಪರಿಹಾರವೂ ಹೊರಲೋಕದ ಕೊಂಡಿಯ ಮೇಲೆ ಆಧಾರಿತವಾಗಿರುವಾಗ ಸ್ಥಳೀಯತೆ ಎಲ್ಲಿ ಮುಗಿಯುತ್ತದೆ ಎಂದು ನಿರ್ಧರಿಸುವುದು ಕಷ್ಟವಾಗುತ್ತದೆ. ಅಂದರೆ ಬೇರೆಲ್ಲೋ ಆಗುತ್ತಿರುವ ಉತ್ಪಾದನೆ, ಯಾರೋ ತಮ್ಮ ಆದಾಯಕ್ಕೆ ಸಲ್ಲಿಸಿದ ತೆರಿಗೆಯ ಫಲ ಗ್ರಾಮಕ್ಕೆ ಸಲ್ಲಬೇಕಾದರೆ, ಮುಂದುವರೆದ ಪ್ರದೇಶದ ಸಂಪನ್ಮೂಲಗಳು ಹಿಂದುಳಿದ ಪ್ರಾಂತಕ್ಕೆ ಹರಿಯಬೇಕಾದರೆ ಅದಕ್ಕೊಂದು ಕೇಂದ್ರೀಕರಣದ ಶಕ್ತಿಯ ಅವಶ್ಯಕತೆ ಇದೆ. ಈ ಕೇಂದ್ರೀಕರಣವನ್ನು ವಿಕೇಂದ್ರೀಕರಣದ ಸೂತ್ರಗಳಾಧಾರದ ಮೇಲೆ ಎಷ್ಟರ ಮಟ್ಟಿಗೆ ಮಾಡಬಹುದು?

ಗ್ರಾಮದಿಂದ ಜಿಲ್ಲೆಗೆ, ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ದೇಶಕ್ಕೆ ಈ ವಾದವನ್ನು ಮುಂದುವರೆಯಿಸಿದಂತೆ ನಮಗೆ ರಾಷ್ಟ್ರೀಯ ಹೆದ್ದಾರಿಗಳ ಮಹತ್ವವೂ, ಅಣೆಕಟ್ಟುಗಳ ತರ್ಕವೂ, ವಿದ್ಯುತ್ ಉತ್ಪಾದನೆಯ ಯೋಜನೆಗಳ ಅವಶ್ಯಕತೆಯೂ ಕಾಣಿಸುತ್ತದೆ. ಈ ಮಧ್ಯೆ, ವ್ಯಾಪಕ ಅಭಿವೃದ್ಧಿಯ ಸಲುವಾಗಿ ಮುಳುಗಡೆಯಾಗಬೇಕಾದ ಗ್ರಾಮಗಳ ಚಿತ್ರಗಳೂ, ಸರಕಾರ ಒತ್ತುವರಿ ಮಾಡಿದ ಭೂಮಿ-ಮನೆಯನ್ನು ಕಳೆದುಕೊಂಡವರ ಹೃದಯ ವಿದ್ರಾವಕ ಕಥೆಗಳು ಕೇಳಿಸುತ್ತವೆ, ಚಿತ್ರಗಳು ಕಾಣಿಸುತ್ತವೆ. ದೊಡ್ಡ ಕೇಂದ್ರೀಕೃತ ಯೋಜನೆಯೆಂದರೆ ಅವುಗಳು ವಿಕೇಂದ್ರೀಕರಣದ ಸೂತ್ರಗಳ ವಿರುದ್ಧವೇ – ಸ್ಥಳೀಯರ ಹಿತಕ್ಕೆ ವಿಮುಖವಾಗಿಯೇ ನಡೆಯುವ ಸಹಜತೆ ಕಾಣಿಸುತ್ತದೆ. ಈ ತ್ಯಾಗ-ನಷ್ಟದ ಒಪ್ಪಂದವಿಲ್ಲವಾದರೆ ನಮ್ಮ ರಾಜ್ಯಕ್ಕೆ ಕನ್ನಂಬಾಡಿಯೂ ಮಂಡ್ಯ-ಬೆಂಗಳೂರುಗಳಿಗೆ ಕಾವೇರಿಯೂ ಇಲ್ಲವಾಗುತ್ತಿತ್ತು. ಹೀಗಾಗಿ ವಿಕೇಂದ್ರೀಕರಣವೇ ಮದ್ದು ಎನ್ನುವ ವಾದವನ್ನು ಒಪ್ಪಿಯೇ ಅದರ ಮಿತಿಗಳನ್ನು ನಮ್ಮ ಮುಂದಿಟ್ಟು ಪ್ರಗತಿಪಥದಲ್ಲಿರಬೇಕಾಗುತ್ತದೆ.

ಹೀಗೆಂದು ಈಗ ನಮ್ಮ ದೇಶದ ರಾಜಕೀಯ-ಆರ್ಥಿಕ ವ್ಯವಸ್ಥೆಯೇ ಅತ್ಯುತ್ತಮ ಎಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಾವು ಬಳಸಬೇಕಾದ ವಿಕೇಂದ್ರೀಕರಣದ ಸೂತ್ರಗಳ ಬಗ್ಗೆ ಸರ್ವಮತ ಸಮ್ಮತಿಯೂ ಇಲ್ಲ, ಸರಳ ಉಪಾಯವೂ ಇಲ್ಲ. ಆದರೆ ಇದರಲ್ಲಿ ಆರ್ಥಿಕತೆಗೆ- ರಾಜಕೀಯಕ್ಕೆ ಸಂಬಂಧಿಸಿದ ಎರಡು ಮುಖ್ಯ ಅಂಶಗಳಿವೆ.

ನಾವು ಈಗ ನಡೆಸುತ್ತಿರುವ ಆರ್ಥಿಕ ವ್ಯವಸ್ಥೆಯೇ ಅತೀ ಕೇಂದ್ರೀಕೃತವಾದದ್ದು. ಕೇಂದ್ರೀಕೃತ ಮಾರಾಟ ತೆರಿಗೆ ಮತ್ತು ಇತರೆ ಸುಧಾರಣೆಗಳ ಚರ್ಚೆಯನ್ನು ಪರಿಗಣಿಸಿದರೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಹೆಚ್ಚು ಕೇಂದ್ರೀಕರಣದತ್ತ ಒಯ್ಯುವ ಹುನ್ನಾರ ಕಾಣಿಸುತ್ತದೆ. ಇಂದಿನ ವ್ಯವಸ್ಥೆಯಲ್ಲಿ ಕೇಂದ್ರಕ್ಕೆ ಇರುವ ರಾಜಕೀಯ ಶಕ್ತಿಗಿಂತ ಅನೇಕ ಪಟ್ಟು ಹೆಚ್ಚಿನ ಆರ್ಥಿಕ ಶಕ್ತಿಯಿದೆ. ನಾವು ಕಟ್ಟುವ ದಿನನಿತ್ಯದ ತೆರಿಗೆಗಳಾದ ಕೇಂದ್ರೀಯ ಅಬಕಾರಿ ಮತ್ತು ಆದಾಯ ತೆರಿಗೆಗಳು ನೇರವಾಗಿ ಕೇಂದ್ರಕ್ಕೆ ಸಂದಾಯವಾಗುತ್ತದೆ. ಹೀಗಾಗಿಯೇ ರಾಜ್ಯ ಸರಕಾರಗಳ ಬಜೆಟ್ಟಿಗಿಂತ ಬಹುಪಟ್ಟು ಹೆಚ್ಚು ಮಹತ್ವವು ಕೇಂದ್ರದ ಬಜೆಟ್ಟಿಗೆ ಇದೆ. ಈ ಗಲಾಟೆಯಲ್ಲಿ ನಾವು ನಗರಪಾಲಿಕೆ-ಪಂಚಾಯ್ತಿಗಳ ಬಜೆಟ್ಟನ್ನು ಮರೆತೇ ಬಿಟ್ಟಿದ್ದೇವೆ. ಅವುಗಳ ಆರ್ಥಿಕತೆಯನ್ನು ಕೇಂದ್ರೀಕೃತ ಬಜೆಟ್ಟಿನ ಅನುದಾನದ ಆಧಾದಲ್ಲಿ ನಡೆಸಿ ಆರ್ಥಿಕ ವಿಕೇಂದ್ರೀಕರಣಕ್ಕೆ ತಿಲಾಂಜಲಿಯನ್ನತ್ತಿದ್ದೇವೆ. ಪಂಚಾಯ್ತಿಗಳಿಗೆ ಹೆಚ್ಚಿನ ಆರ್ಥಿಕ ಬಲವಿದ್ದಿದ್ದರೆ ಕನ್ನಡ ಮಾಧ್ಯಮದ ಶಾಲೆಗಳನ್ನು ಮುಚ್ಚುವ ರಾಜ್ಯ ಸರಕಾರದ ಹುನ್ನಾರವನ್ನು ಸ್ಥಳೀಯ ರಾಜಕೀಯವೇ ನಿರ್ವೀರ್ಯಗೊಳಿಸುತ್ತಿತ್ತು. ಸಬಲವಾದ ರಾಜ್ಯ ಸರಕಾರಗಳಾದ ಬಿಹಾರ, ಪಶ್ಚಿಮ ಬಂಗಾಲ ಕೇಂದ್ರ ಸರಕಾರದ ವ್ಯವಹಾರಗಳಲ್ಲಿ ತಲೆ ಹಾಕುವುದೂ, ತಮ್ಮ ರಾಜ್ಯಗಳಿಗೆ ಪ್ರತ್ಯೇಕ ಪ್ಯಾಕೇಜುಗಳನ್ನು ಕೇಳುವುದೂ, ಕೇಂದ್ರ ಮಂತ್ರಿಮಂಡಲದಲ್ಲಿ ಸ್ಥಾನಕ್ಕೆ ಹಾತೊರೆಯವುವುದೂ ಆರ್ಥಿಕ ವ್ಯವಸ್ಥೆಯ ಕೇಂದ್ರೀಕರಣದ ಫಲವಾಗಿಯೇ ಇರಬಹುದು.

ಇನ್ನು ರಾಜಕೀಯದ ವಿಚಾರ. ಇಂದಿರಾಗಾಂಧಿಯ ತದನಂತರ ದೇಶದ ರಾಜಕೀಯವು ವಿಕೇಂದ್ರೀಕರಣಗೊಳ್ಳುತ್ತಲೇ ಇದೆ. ತೆಲುಗು ದೇಶಂ, ತೃಣಮೂಲ, ಬಿಜು ಜನತಾದಳ, ಶಿವಸೇನೆಯಂತಹ ರಾಜಕೀಯ ಶಕ್ತಿಗಳು ಉದ್ಭವವಾಗಿರುವುದೇ ಈ ಆರ್ಥಿಕ-ರಾಜಕೀಯ ಶಕ್ತಿಯ ನಡುವಿನ ಅಸಮತೋಲನ ಫಲವಾಗಿಯೇ? ಮುಂಬಯಿ ನಗರದಿಂದ, ಗುಜರಾತ್ ರಾಜ್ಯದಿಂದ ವಸೂಲಾಗುವ ತೆರಿಗೆಯ ಮಟ್ಟವನ್ನು ಲೆಕ್ಕ ಕಟ್ಟಿ ಅದೇ ಪ್ರಮಾಣದಲ್ಲಿ ಆ ಪ್ರಾಂತಗಳಿಗೆ ಕೇಂದ್ರದ ಸಂಪನ್ಮೂಲಗಳು ಹೋಗುವುದಿದ್ದರೆ ದೇಶದ ಬಜೆಟ್ಟಿನ ರೂಪುರೇಷೆಯೇ ಭಿನ್ನವಾಗಿ ಕಾಣುತ್ತಿತ್ತು!

ಪ್ರಾಂತೀಯ ಪಕ್ಷಗಳ ಪ್ರಾಮುಖ್ಯತೆ ವಿಕೇಂದ್ರೀಕೃತ ಅಭಿವೃದ್ಧಿಯನ್ನು ಬಯಸುವ, ಸ್ಥಳೀಯ ಪರಿಹಾರಗಳನ್ನು ಕಂಡುಕೊಳ್ಳಬೇಕೆನ್ನುವ ಆಶಯದ ಅಭಿವ್ಯಕ್ತಿಯೇ ಆಗಿದೆ.  ರಾಜಕೀಯವಾಗಿ ಬಂದ ಅಧಿಕಾರವನ್ನು ಆರ್ಥಿಕ ಹಕ್ಕುಗಳನ್ನಾಗಿ ಮಾರ್ಪಡಿಸಿಕೊಳ್ಳುವ ಶಕ್ತಿ ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ. ಹೀಗಾಗಿಯೇ ಆರ್ಥಿಕ ಕೇಂದ್ರೀಕರಣದ "ಸುಧಾರಣಾ" ತಂತ್ರಗಳಿಗೆ ರಾಜ್ಯ ಸರಕಾರಗಳು ಅಡ್ಡಗಾಲು ಹಾಕುತ್ತಿವೆ. ಅದೇ ಕಾರಣವಾಗಿ ಅನೇಕ ವರ್ಷಗಳಿಂದ ಚರ್ಚೆಯಲ್ಲಿರುವ ಜಿ.ಎಸ್.ಟಿ-ಮಾರಾಟತೆರಿಗೆಯ ಕೇಂದ್ರೀಕರಣದ ಯೋಜನೆ ತಕ್ಷಣದಲ್ಲಿಯೇ ಜಾರಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಕೇಂದ್ರ-ರಾಜ್ಯಗಳ ನಡುವಿನ ಜಟಾಪಟಿಯೇ ಹೀಗಿದ್ದು, ರಾಜ್ಯಗಳೇ ಅಸಹಾಯಕ ಪರಿಸ್ಥಿತಿಯಲ್ಲಿರುವಂತೆ ಕಾಣುವಾಗ ಇನ್ನು ನಮ್ಮ ನಗರಪಾಲಿಕೆ-ಗ್ರಾಮಪಂಚಾಯ್ತಿಗಳ ಗತಿಯೇನು? ಯಾವ ದಿನ ನಮ್ಮ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರ ಕಛೇರಿ ಮತ್ತು ಕಾರು ಜಿಲ್ಲಾಧಿಕಾರಿಯ ಕಛೇರಿ ಮತ್ತು ಕಾರಿಗಿಂತ ಉತ್ತಮವಾಗಿರುತ್ತದೋ, ಯಾವದಿನ ಗ್ರಾಮ ಸರಪಂಚರ ಗತ್ತು ಕಂದಾಯ ವಿಭಾಗದ ಅಧಿಕಾರಿಯ ಗತ್ತಿಗಿಂತ ಜೋರಾಗಿರುತ್ತದೋ, ಆ ದಿನ ನಮ್ಮ ಆರ್ಥಿಕ ವ್ಯವಸ್ಥೆಯೂ ರಾಜಕೀಯ ವ್ಯವಸ್ಥೆಯಷ್ಟೇ ವಿಕೇಂದ್ರೀಕೃತವಾಗಿದೆ ಎಂದು ನಾವು ನಂಬಬಹುದು. ಆ ಪರಿಸ್ಥಿತಿ ಉಂಟಾದಾಗ: ಕೇಂದ್ರದ ಒಂದು ಅಣೆಕಟ್ಟಿನ ಯೋಜನೆಗೆ ಇಡೀ ಗ್ರಾಮವೇ ಮುಳುಗಡೆಯಾಗುವುದಾದರೆ ಆ ಗ್ರಾಮಕ್ಕೆ- ಗ್ರಾಮದ ಜನರಿಗೆ ಸಲ್ಲಬೇಕಾದ ಪರಿಹಾರದ ಬಗ್ಗೆ ಸರಪಂಚರ ಸಭೆ ನಡೆದು ಲೇನ್-ದೇನ್ ಗಳ ಇತ್ಯರ್ಥವಾಗುತ್ತದೆಯೇ ಹೊರತು ಅದು ಹಕ್ಕುಗಳನ್ನು ಬೇಡಿಪಡೆಯುವ ಚಳುವಳಿಯ ರೂಪ ಪಡೆಯುವುದಿಲ್ಲ. ಆ ರೀತಿಯ ವಿಕೇಂದ್ರೀಕರಣವನ್ನು ಕೈಗೊಳ್ಳುವ ಧೈರ್ಯ ನಮ್ಮ ರಾಜಕೀಯ ಪರಿಸ್ಥಿತಿಯಲ್ಲಿ ಕಾಣುತ್ತಿಲ್ಲ.

ಹೀಗಾಗಿಯೇ ನಾವು ಬಾಟಮ್-ಅಪ್ ಬೇಡಿಕೆಯನ್ನು ಮಂಡಿಸುತ್ತಲೇ ಟಾಪ್-ಡೌನ್ ವ್ಯವಸ್ಥೆಯಲ್ಲಿ ಚಳುವಳಿಗಳ ಮೂಲಕ ನಮ್ಮ ಬೇಡಿಕೆಗಳನ್ನು ಪೂರೈಸುವ ವ್ಯವಸ್ಥೆಯಲ್ಲಿ ಬದುಕಬೇಕಾದ ಅನಿವಾರ್ಯತೆಯಲ್ಲಿದ್ದೇವೆ.




No comments:

Post a Comment