ಆಧಾರ್ ಯೋಜನೆಯ ಲಾಭಗಳನ್ನು ವಿವರಿಸುತ್ತಾ ನಂದನ್
ನಿಲೇಕಣಿ ಅದು ಒಂದು ದೊಡ್ಡ ಕ್ರಾಂತಿಯ ಮೊದಲ ಅಡಿಗಲ್ಲು ಎನ್ನುವ ಅರ್ಥ ಬರುವ ಹಾಗೆ ಮಾತನಾಡಿದ್ದಾರೆ.
ಮುಖ್ಯವಾಗಿ ಆಧಾರ್ ಬಂದಕೂಡಲೇ ಬದಿಬದಿಯಲ್ಲಿಯೇ ಎಲ್ಲರಿಗೂ ಬ್ಯಾಂಕಿನ ಖಾತೆ ಬರಬಹುದು
ಎನ್ನುವುದನ್ನು ಅವರು ಹೇಳುತ್ತಾರೆ. ಬ್ಯಾಂಕಿನ ಖಾತೆಗೆ ಅನೇಕ ಸವಲತ್ತುಗಳನ್ನು
ವಿತ್ತೀಯರೂಪದಲ್ಲಿ ಕೊಡಬಹುದು ಅನ್ನುವುದನ್ನೂ ಹೇಳುತ್ತಾರೆ. ಮೊದಲ ಹಂತದಲ್ಲಿ ಈಗ ಹಣದ
ರೂಪದಲ್ಲಿಯೇ ಸಂದಾಯವಾಗುತ್ತಿರುವ ಪಿಂಚನಿ, ನರೇಗಾದ ಕೂಲಿಗಳು ಖಾತೆಗೆ ನೇರವಾಗಿ ಹೋಗುತ್ತವೆ.
ಎರಡನೆಯ ಹಂತದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಸಿಗುವ ದಿನಸಿ, ಸೀಮೆಎಣ್ಣೆ,
ಇತ್ಯಾದಿಗಳ ಸರಕಾರಿ ಧರಕ್ಕೂ ಮಾರುಕಟ್ಟೆಯ ಧರಕ್ಕೂ ಇರುವ ವ್ಯತ್ಯಾಸವನ್ನು ವಿತ್ತೀಯ ರೂಪದಲ್ಲಿ
ಕೊಡುವ ಮಾತು ಕೇಳಿಬರುತ್ತಿದೆ. ಹೀಗಾದಾಗ ಮಧ್ಯವರ್ತಿಯ ಚಿಲ್ಲರೆ ಭ್ರಷ್ಟಾಚಾರವಿಲ್ಲದೇ, ನೇರವಾಗಿ
ಬಡವರ ಖಾತೆಗೆ ಸವಲತ್ತುಗಳು ತಲುಪುವ ಸುವರ್ಣಯುಗದ ಮಾತನ್ನು ನಂದನ್ ಆಡುತ್ತಾರೆ.
ಆಧಾರ್ ಯೋಜನೆಯಡಿಯಲ್ಲಿ ಸಂಗ್ರಹಿಸುತ್ತಿರುವುದು
ಗುರುತಿಗೆ ಸಂಬಂಧಿಸಿದ ಮಾಹಿತಿ ಮಾತ್ರ. ಹೆಸರು, ವಿಳಾಸ, ಲಿಂಗ, ಹತ್ತೂ ಬೆರಳ ಗುರುತು ಮತ್ತು
ಕಣ್ಣಿನ ಚಿತ್ರವನ್ನು ಸಂಗ್ರಹಿಸಲಾಗುತ್ತಿದೆ. ಈ ಮಾಹಿತಿಯ ದುರುಪಯೋಗದ ಟೀಕೆಯ ಮಾತು ಬಂದಾಗೆಲ್ಲಾ
ನಂದನ್ ಮಾಹಿತಿಯ ಮಿತಿಯನ್ನು ಒತ್ತಿ ಹೇಳುತ್ತಾರಾದರೂ ಅದೇ ಸ್ವರದಲ್ಲಿ ತಂತ್ರಜ್ಞಾನದ ಆಧಾರದ
ಮೇಲೆ ಚಿಲ್ಲರೆ ಭ್ರಷ್ಟಾಚಾರವನ್ನು ಹೊಡೆದೋಡಿಸುವ ಮಾತನ್ನೂ ಆಡುತ್ತಾರೆ. ಈ ಎರಡೂ ಮಾತುಗಳನ್ನು
ತಾಳೆಹಾಕಿ ನಂದನ್ ಆಶಾವಾದದಲ್ಲಿ ನಮ್ಮ ಅನುಮಾನಗಳನ್ನೂ ಸಿನಿಕತೆಯನ್ನೂ ಸೇರಿಸಬಹುದು.
ಆಧಾರ್ ಯೋಜನೆಯ ಮಾಹಿತಿಯಿಂದಾಗಿ ಭ್ರಷ್ಟಾಚಾರರಹಿತ
ಸವಲತ್ತಿನ ಹಂಚಿಕೆಗೆ ಒಂದು ಚೌಕಟ್ಟನ್ನು ಹಾಕಿ ಕೊಟ್ಟು ಬೇನಾಮಿ ವ್ಯವಹಾರಗಳನ್ನು ತಡೆಯುವ
ಸಾಧ್ಯತೆಯಿದೆ. ಆದರೆ ಆಧಾರ್ ಗುರುತಿನ ಮೇಲೆ ಬ್ಯಾಂಕಿನಲ್ಲಿ ಖಾತೆ ತೆರೆಯುವುದೂ, ಕುಟುಂಬದ
ಬಡತನದ ಸ್ಥರ ನಿರ್ಧರಿಸುವುದೂ ಭಿನ್ನ ಇಲಾಖೆಗಳ, ಸ್ವತಂತ್ರ ತೀರ್ಮಾನಗಳಾಗುತ್ತವೆ. ಅವು ನಂದನ್
ಕೈಕೆಳಗಿಲ್ಲದಿದ್ದರೂ ಆ ಬಗ್ಗೆ ಯಾವ ಹಿಂಜರಿಕೆಯಲ್ಲದೆಯೇ ನಂದನ್ ಮಾತಾಡುತ್ತಾರೆ. ಆಧಾರ್
ಪೂರ್ಣಪ್ರಮಾಣದಲ್ಲಿ ವ್ಯೂಹಾನುಸಾರ ರೂಪುಗೊಂಡರೆ ಬಹುಶಃ ಆ ಆಶಾವಾದಕ್ಕೆ ತಾವಿರಬಹುದು.
ಹಾಗಾಗುವುದೇ? ಇದೊಂದು ಸಂಜೀವನಿಯೇ? ಸ್ವಲ್ಪ ಯೋಚಿಸಿನೋಡಬೇಕಾಗಿದೆ.
ಇದರ ಬಗ್ಗೆ ಅಪಸ್ವರ ಎತ್ತುವ ಮೊದಲು ನಂದನ್ ಅವರ
ತಾಂತ್ರಿಕ ದಕ್ಷತೆಯ ಈ ಯೋಜನೆ ಯಾವ ಸಂದರ್ಭದಲ್ಲಿ ಸಫಲವಾಗಬಹುದು ಎನ್ನುವುದನ್ನು ನೋಡೋಣ.
ಆಂಧ್ರಪ್ರದೇಶ ಸರಕಾರ ನಡೆಸುತ್ತಿರುವ "ವೆಲುಗು" ಎಂಬ ಯೋಜನೆಯಡಿ
ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಒಳಗೊಂಡ ಒಂದು ಯೋಜನೆಯಿದೆ. ತಿಂಗಳಿಗೆ ಅವಶ್ಯಕವಾದ ಅಕ್ಕಿಗೆ
ಸೀಮಿತವಾಗಿದ್ದ ರೈಸ್ ಕ್ರೆಡಿಟ್ ಲೈನ್ ಯೋಜನೆ, ಈಗ ವಿಸ್ತಾರಗೊಂಡು ಗ್ರಾಮೀಣ ದಿನಸಿ ಅಂಗಡಿಯಾಗಿ
ಪರಿವರ್ತಿತಗೊಂಡಿದೆ. ಅದರ ರೂಪುರೇಷೆ ಇಂತಿದೆ – ಕುಟುಂಬದ ಮೂಲಭೂತ ಅವಶ್ಯಕತೆಯ ನಾಲ್ಕು ಮುಖ್ಯ
ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮತ್ತು ಸಕ್ಕರೆಯ ಒಂದು ತಿಂಗಳ ದಾಸ್ತಾನನ್ನು
ಕೊಳ್ಳುವುದಕ್ಕೆ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಾಲ ನೀಡಲಾಗುತ್ತದೆ. ಗುಂಪಿನ ಪ್ರತೀ ಮಹಿಳೆಯೂ
ತನ್ನ ಕುಟುಂಬಕ್ಕೆ ಬೇಕಾದ ಈ ದಿನಸಿಗಳ ಅವಶ್ಯಕತೆಯನ್ನು ಮುಂಚಿತವಾಗಿ ತಿಳಿಸಬೇಕು. ಗ್ರಾಮದ
ಗುಂಪುಗಳ ಅವಶ್ಯಕತೆಗಳನ್ನು ಕಲೆಹಾಕಿ ಸಗಟಿನಲ್ಲಿ ಎಫ್.ಸಿ.ಐ ಗೋದಾಮುಗಳಿಂದ ಅಥವಾ ಮುಕ್ತ
ಮಾರುಕಟ್ಟೆಯಿಂದ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಕೊಂಡು ಮಹಿಳೆಯರಿಗೆ ಹಂಚಲಾಗುತ್ತದೆ.
ಮಹಿಳೆಯರು ತಮ್ಮ ಆದಾಯದಿಂದ ಸರಳ ಬಡ್ಡಿ ಸೇರಿಸಿ ವಾರಕ್ಕೊಮ್ಮೆ ಕಂತನ್ನು ಕಟ್ಟುತ್ತಾರೆ.

ಆದರೆ ಈ
ಉದಾರಹಣೆಯನ್ನಿಟ್ಟುಕೊಂಡು ನಾವು ಈ ವಾದವನ್ನು ಒಪ್ಪುವುದರಲ್ಲಿ ಅಪಾಯವಿದೆ. ಆಂಧ್ರಪ್ರದೇಶದ
ಉದಾಹರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಎರಡು ಅಂಶಗಳು – ಒಂದು: ಅಲ್ಲಿ ಮಹಿಳೆಯರ
ಸ್ವಸಹಾಯ ಗುಂಪುಗಳಿದ್ದು ಆ ಸಂಘಟನೆಯ ಶಕ್ತಿಯಿಂದಾಗಿ ಸಗಟು ಖರೀದಿ ಸಾಧ್ಯವಾಯಿತು. ಎರಡು: ಅದಕ್ಕೆ ಬೇಕಾದ ಹಣವನ್ನು ಅವರು ತಮ್ಮ ಸ್ವ-ಶಕ್ತಿಯಿಂದ
ಪಡೆದರು. ಅಲ್ಲಿನ ಸ್ವ-ಸಹಾಯ ಗುಂಪುಗಳಿಗೆ ಎರಡು ದಶಕಗಳ ಜನಸಮುದಾಯದ ಸಂಘಟನೆಯ ಫಲವಾಗಿ ಉಂಟಾದ
ಉದ್ಯಮದ ಹಿನ್ನೆಲೆಯಿದೆ. ಗಮ್ಮತ್ತಿನ ವಿಷಯವೆಂದರೆ ಈ ಪ್ರಕ್ರಿಯೆಗೆ ತಂತ್ರಜ್ಞಾನದ ಅಡಿಪಾಯವೂ
ಗುರುತಿನ ಅವಶ್ಯಕತೆಯೂ ಇರಲಿಲ್ಲ. ಈಗ ನಂದನ್ ಹೇಳುವ ನಿಯಮಬದ್ಧ ಹಣ ಪಾವತಿಯ ವ್ಯೂಹಕ್ಕೆ
ಅತ್ಯವಶ್ಯಕವಾದ ಸಂಘಟನೆ ಹಾಗೂ ವಿತ್ತೀಯ ವ್ಯವಹಾರಗಳ ಅನುಭವವಿಲ್ಲದೆ, ನೇರವಾಗಿ ತಂತ್ರಜ್ಞಾನದ
ಜಾದೂ ಅಳವಡಿಸುವುದರಿಂದ ಆಗಬಹುದಾದ ಉಪಯೋಗಕ್ಕಿಂತ ಅಪಾಯವೇ ಹೆಚ್ಚೇನೋ.
ನಿಯಮಬದ್ಧ ವಿತ್ತೀಯ
ಪಾವತಿಯ ಯೋಜನೆಯಲ್ಲಿ ಲೇನ್ ದೇನ್ ಗೆ ಸಂಬಂಧಿಸಿದ ಪ್ರಶ್ನೆಗಳೂ, ನೈತಿಕ ಪ್ರಶ್ನೆಗಳೂ ಇವೆ. ಲೇನ್
ದೇನ್ ಗೆ ಸಂಬಂಧಿಸಿದ ಪ್ರಶ್ನೆಯೆಂದರೆ: ಸರಕಾರ ನೀಡುವ ವಿತ್ತೀಯ ಸಹಾಯವನ್ನು ಬ್ಯಾಂಕಿನ
ಖಾತೆಯಿಂದ ಬೇಕಾದಾಗ ಪಡೆಯುವ ಸರಿಯಾದ ಸದುಪಾಯ ನಮಗೆ ಇನ್ನೂ ಕಂಡಿಲ್ಲ. ಬ್ಯಾಂಕುಗಳು ಇದಕ್ಕಾಗಿ
ಏಜೆಂಟರನ್ನು ನಿಯಮಿಸಬಹುದಾದರೂ ಏಜೆಂಟರ ಹರವು ಹಾಗೂ ದಕ್ಷತೆಯ ಬಗ್ಗೆ ಪ್ರಶ್ನೆಗಳು ಇನ್ನೂ
ಉಳಿದುಕೊಂಡಿವೆ. ಅಲ್ಲಿ ಆಗಬಹುದಾದ ಭ್ರಷ್ಟಚಾರದ ರೂಪುರೇಷೆ ನಮಗಿನ್ನೂ ಅಂದಾಜಾಗಿಲ್ಲ. ಇದು
ನಿಧಾನವಾಗಿ ಕ್ರಮಕ್ರಮೇಣ ಬೆಳೆಯಬೇಕೇ ಹೊರತು, ಒಂದೇ ಏಟಿಗೆ ಬದಲಾಯಿಸುವ ವ್ಯೂಹವಲ್ಲ. ನ್ಯಾಯಬೆಲೆ
ಅಂಗಡಿಯ ದಿನಸಿ ನಿಂತು, ಸಮಯಕ್ಕೆ ಖಾತೆಯಿಂದ ದುಡ್ಡೂ ಸಿಗದ ಪರಿಸ್ಥಿತಿಯ ಸಾಧ್ಯತೆಯನ್ನು
ನಿರೀಕ್ಷಿಸಿಯೇ ನಡೆಯಬೇಕಾಗುತ್ತದೆ. ಆಂಧ್ರಪ್ರದೇಶದ ಮಹಿಳೆಯರು ತಮ್ಮ ಸಂಘಟನೆಯ ಫಲವಾಗಿ
ತಿಂಗಳಿಗೊಮ್ಮೆ ಪ್ರತ್ಯಕ್ಷವಾಗುವ ದಿನಸಿ ವ್ಯವಹಾರವನ್ನು ತಾವೇ ನಿಭಾಯಿಸಿ ಸಗಟು ಬೆಲೆಯ
ಪದಾರ್ಥಗಳು ಕೊಳ್ಳುತ್ತಿದ್ದಾರೆ. ಆ ಲಾಭ ಎಲ್ಲೆಲ್ಲೂ ಸಿಗುವ ಖಾತ್ರಿಯಿಲ್ಲ. ಪಕ್ಕದ
ಕಿರಾಣಿಯಂಗಡಿಯ ಬೆಲೆಗಳು ನ್ಯಾಯಬೆಲೆಯಾಗಿರುತ್ತದೆಂದೂ – ದುಡ್ಡಿನ ರೂಪದಲ್ಲಿ ಬಂದ ಸರಕಾರದ ಸಹಾಯ
ಸಫಲವಾಗಿ ದಿನಸಿಯಾಗಿ ಮಾರ್ಪಾಟಾಗುತ್ತದೆಂದೂ ಖಾತ್ರಿಯಿಲ್ಲ.
ಇನ್ನು ನೈತಿಕತೆಯ
ಪ್ರಶ್ನೆ. ವ್ಯವಹಾರ ಮಹಿಳೆಯರ ಕೈಯಲ್ಲಿದ್ದಾಗ ಅದು ಮನೆಯ ದಿನಸಿಗೆಂದೇ ಖರ್ಚಾಗುವ ಸಾಧ್ಯತೆ
ಹೆಚ್ಚು. ಈ ಹಣ ಪುರುಷರ ಖಾತೆಗೆ ಸೇರಿದರೆ ಅದು ಬೇರೆಲ್ಲಾದರೂ ಖರ್ಚಾಗಬಹುದು. ನ್ಯಾಯಬೆಲೆ
ಅಂಗಡಿಯಲ್ಲಿ ಸಿಗುವ ದಿನಸಿ, ದಿನಸಿಯ ರೂಪದಲ್ಲಿಯೇ ಉಳಿಯುವ ಸಾಧ್ಯತೆಯಿಂದಾಗಿ, ಮನೆಮಂದಿಗೆ
ಬೇಕಾದ ಪೌಷ್ಟಕತೆ ಪೂರೈಸಿದಂತಾಗುತ್ತದೆ. ಆದರೆ ವಿತ್ತೀಯ ಸಹಾಯಕ್ಕೆ ಇಂಥ ಖಾತ್ರಿಯಿಲ್ಲ.
ಎಲ್ಲವನ್ನೂ ವಿತ್ತೀಕರಿಸುವುದು ಒಳ್ಳೆಯದೇ? ವಿತ್ತೀಕರಣದಿಂದ ಆಯ್ಕೆಗಳು ಹೆಚ್ಚಾಗುತ್ತವೆ
ಎನ್ನುವುದು ನಿಜವಾದರೂ ಆ ಆಯ್ಕೆಗಳು ಬಡವರಿಗೆ ಲಭ್ಯವಾಗಬಹುದೇ? – ದ್ರವ ರೂಪದ ಹಣಕ್ಕೆ
ಅನೇಕ ಬೇಡಿಕೆಗಳಿರುವ ಬಡತನದ ನಡುವೆ, ಆ ಆಯ್ಕೆಗಳನ್ನು ಜವಾಬ್ದಾರಿಯಿಂದ ಚಲಾಯಿಸುವ
ಪ್ರಬುದ್ಧತೆಯನ್ನು ಜನ ತೋರುತ್ತಾರೆಯೇ?
ಗುರುತಿನ ಚೀಟಿ
ನೀಡುತ್ತಿರುವ ನಂದನ್ ದೊಡ್ಡ ಮಾತುಗಳನ್ನು ಆಡುವಾಗ, ಅದರಲ್ಲಿ ಹುರುಳಿದ್ದರೂ ನಾವು ವಿತ್ತೀಕರಣದ
ಬಗ್ಗೆ ಎಚ್ಚರದಿಂದ ಇರಬೇಕು. ಎಡ ಪಂಥೀಯರು ದಿನಸಿಯ ರೂಪದಲ್ಲೇ ಸರಕಾರದ ಸಹಾಯವಿರಲಿ ಎಂದು
ವಾದಿಸುತ್ತಾರೆ. ಮಾರುಕಟ್ಟೆವಾದಿಗಳು ವಿತ್ತೀಕರಿಸುತ್ತಾರೆ. ಇದು ಸರಿಯೋ – ಅದು ಸರಿಯೋ ಎನ್ನುವ
ಪ್ರಶ್ನೆಯನ್ನು ಹಿಡಿದು ನಾವೆಲ್ಲಾ ವಾದ ಮಾಡುತ್ತೇವೆ. ಆದರೆ ಪರಿಸ್ಥಿತಿಗನುಗುಣವಾಗಿ ಯಾವುದೇ
ರೂಪದ ಸಹಾಯವೂ ಸಮರ್ಪಕವಾಗುತ್ತದೆ. ಆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಮ್ಮ
ಕರ್ನಾಟಕಕ್ಕೊಂದು, ಪಕ್ಕದ ಆಂಧ್ರಪ್ರದೇಶಕ್ಕಿನ್ನೊಂದು, ದೂರದ ಕಾಶ್ಮೀರಕ್ಕೆ ಮತ್ತೊಂದು
ಉಪಾಯವನ್ನು ಹುಡುಕಬಹುದು. ಸ್ಥಳೀಯ, ವಿಕೇಂದ್ರೀಕೃತ ಉಪಾಯವನ್ನು ನಾವು ಹುಡುಕಿಕೊಂಡಾಗ, ರಾಗಿ
ತಿನ್ನುವವರಿಗೆ ಗೋಧಿ ಸರಬರಾಜು ಮಾಡುವ ಆಭಾಸವನ್ನೂ, ಮಾತು ಮಾತಿಗೆ ದುಡ್ಡಿನ ಕಂತೆ ಬಿಸಾಕಿ
ಕೈತೊಳೆದುಕೊಳ್ಳುವ ಪ್ರಕ್ರಿಯೆಯನ್ನೂ ತಪ್ಪಿಸಬಹುದು.
No comments:
Post a Comment