ಭ್ರಷ್ಟಾಚಾರ ಎಂಬುದು ಸದಾಬಹಾರ್ ಸೂಪರ್ ಸ್ಟಾರ್. ಒಂದು
ಕಡೆ ಕಾನೂನು ವ್ಯವಸ್ಥೆಯನ್ನು ಬಿಗಿ ಮಾಡಬಹುದಾದರೂ, ಭ್ರಷ್ಟಾಚಾರ ಒಂದು ಹೆಜ್ಜೆ ಮುಂದಿದ್ದು ಹೊಸ
ರೂಪದಲ್ಲಿ, ಹೊಸ ಪ್ರಯೋಗದೊಂದಿಗೆ ಮುಂದುವರೆಯುತ್ತದೆ. ಭ್ರಷ್ಟಾಚಾರದ ಪರಿಭಾಷೆಯೂ ಬದಲಾಗುತ್ತದೆ.
ಕೆಲ ವ್ಯವಹಾರಗಳನ್ನು ಭ್ರಷ್ಟಾಚಾರವೆಂದು ವರ್ಗೀಕರಿಸುವದೂ ಕಷ್ಟಕರ. ನನ್ನ ಗೆಳೆಯರೊಬ್ಬರು
ಭ್ರಷ್ಟಾಚಾರವನ್ನು ಮೂರು ಮಜಲುಗಳಲ್ಲಿ ವಿವರಿಸಿದ್ದರು ಅರ್ಥೈಸಿದ್ದರು.
ಭ್ರಷ್ಟಾಚಾರದ ನೇರ ವಿಧಾನವನ್ನು ‘ಜಬರಾನಾ‘ ಎಂದರು. ಅದರ ಹೊರರೂಪ ನಮಗೆ ದಿನನಿತ್ಯ ಕಾಣಿಸುತ್ತದೆ.
ಮೀಟರಿಗಿಂತ ‘ಮೇಲೆ‘ ಕೇಳುವ ಆಟೋ, ಸಂದರ್ಶನಾ ವೇಳೆಗೆ ಮೀರಿ ರೋಗಿಗಳನ್ನು
ನೋಡಗೊಡುವ ಆಸ್ಪತ್ರೆಯ ಸೆಕ್ಯೂರಿಟಿ, ಹೀಗೆ ಖಾಸಗೀ ಬದುಕು, ಸರಕಾರೀ ಕಾರ್ಯಾಲಯ, ಎಲ್ಲೆಲ್ಲೂ
ನಾವು ಜಬರಾನಾ ಕಾಣಬಹುದು. ಇದು ಕಿರಿಕಿರಿಯುಂಟುಮಾಡುವ ತೆರೆದ ಭ್ರಷ್ಟಾಚಾರ. ಜಬರ್ದಸ್ತಿಯಾಗಿ
ಇಂತಿಷ್ಟು ಕೊಡದಿದ್ದರೆ ಕೆಲಸವಾಗುವುದಿಲ್ಲ ಎನ್ನುವ ಖುಲ್ಲಂಖುಲ್ಲಾ ಲೇನ್ ದೇನ್ ನ ವಿಚಾರ.
ನನ್ನ ತೆಂದೆಯ ಮನೆಯ
ವಿದ್ಯುತ್ತು ಕಂಬದ ಫ್ಯೂಸು ಆಗಾಗ ಟಪ್ಪಾಗುತ್ತಿತ್ತು. ಹತ್ತು ರೂಪಾಯಿ ಇಸಿದು ವಿದ್ಯುತ್ ವಿಭಾಗದವ
ರಿಪೇರಿ ಮಾಡಿಕೊಡುತ್ತಿದ್ದ. ಹೀಗೆ ಆಗಾಗ ಜಬರಾನಾ ಮಾಡುತ್ತಿದ್ದವನ ಮೇಲೆ ಕಿಡಿಕಾರಿ, ಉನ್ನತ
ಸರಕಾರಿ ಹುದ್ದೆಯಲ್ಲಿದ್ದ ನನ್ನ ತಂದೆ "ವಿದ್ಯುತ್ ಬೋರ್ಡಿನ
ಚೇರ್ಮನ್ನರಿಗೆ ಫಿರ್ಯಾದು ಮಾಡಲೇ?" ಎಂದು ಬೆದರಿಸಿದರು.
ಅದಕ್ಕವನು "ಧಾರಾಳವಾಗಿ ಹೇಳಿ. ಚೇರ್ಮನ್ನರು ಕಂಬವೇರುತ್ತಾರೇನು? ಅದಕ್ಕೆ ನಾನೇ ಬೇಕಲ್ಲವೇ?" ಎಂದು ಹೇಳಿ ತನ್ನ ದುಡ್ಡನ್ನು ಇಸಿದಿದ್ದ. ಇದು ನಮ್ಮನ್ನು ಸಿಟ್ಟಿಗೆಬ್ಬಿಸಿ, ಅಸಹಾಯಕರನ್ನಾಗಿಸಿ,
ಬೇಸರ ತರಿಸುತ್ತದೆ. ಈ ಭ್ರಷ್ಟಾಚಾರದಲ್ಲಿ ಎಲ್ಲರೂ ಬಲಿಪಶುಗಳೇ. ಇದಕ್ಕೆ ಮದ್ದು ನೀಡುವುದು
ಕೇಜ್ರೀವಾಲರ ಲೋಕಪಾಲ್ ಗೂ ಆಗದು.
ಎರಡನೆಯ ರೀತಿಯ
ಭ್ರಷ್ಟಾಚಾರವನ್ನು ಗುರುತಿಸುವುದೇ ಕಷ್ಟ. ಇದನ್ನು ನಜರಾನಾ ಎನ್ನುತ್ತಾರೆ. ಇದರಲ್ಲಿ ಸ್ಪಷ್ಟವಾಗಿ
ಯಾವುದೇ ಲೇನ್ ದೇನ್ ನ ಮಾತುಕತೆ ಆಗುವುದಿಲ್ಲ. ಆಗುವ ಕೆಲಸಕ್ಕೂ, ರಿಷವತ್ತಿಗೂ ನೇರ ಸಂಬಂಧವನ್ನು
ಏರ್ಪಡಿಸುವುದು ಸಾಧ್ಯವಿಲ್ಲ. ಆದರೂ ಸೇವೆಯನುಸಾರ "ಏನಾದರೂ" ನೀಡಬೇಕು ಎನ್ನುವುದು ಸೇವೆ ಒದಗಿಸುವವರ ಇರಾದೆ.
ಅದನ್ನು ನೀಡದಿದ್ದರೆ ಅವರು ತಮ್ಮ ಅಸಮಾಧಾನವನ್ನು ತೋರಿಸುತ್ತಾರೆ. ಅದನ್ನು ಮನಸ್ಸಿನಲ್ಲಿಟ್ಟು
ನಿಮ್ಮ ಮುಂದಿನ ವ್ಯವಹಾರಗಳನ್ನು ನಡೆಸಿಕೊಡುತ್ತಾರೆ. ಹೋಟೇಲಿನಲ್ಲಿ ರೂಂ ಸರ್ವೀಸಿಗೆ ಟಿಪ್
ನಿರೀಕ್ಷಿಸುವ ಹುಡುಗ, ಕೆಲಸ ಮಾಡಿ ಚಹಾಗೆ ರೊಕ್ಕವನ್ನಪೇಕ್ಷಿಸುವ ಕೂಲಿಗಳು, ದಸರೆ, ದೀಪಾವಳಿ, ಕ್ರಿಸ್ಮಸ್,
ಹೊಸವರ್ಷಕ್ಕೆ, ಏನು ಗಿಫ್ಟ್ ಬಂತೆಂದು ಲೆಕ್ಕ ಹಾಕುವ ಸರಕಾರಿ ಅಧಿಕಾರಿ. ಉತ್ತಮ ಸೇವೆ ನೀಡುವ
ನಾಟಕ ಆಡುವವರೆಲ್ಲಾ ನಜರಾನಾ ಪದ್ಧತಿಗೆ ಸಂದವರು.
ಒಂದು ಬ್ಯಾಂಕಿನಲ್ಲಿ
ಸಾಲ ಪಡೆದ ಉದ್ಯೋಗಪತಿ ಹೇಳಿದರು˸ "ಬ್ಯಾಂಕಿನ ಚೇರ್ಮನ್ನರು
ಒಳ್ಳೆಯವರು. ನಮ್ಮ ಕಂಪನಿಗೆ ಸಾಲ ಕೊಟ್ಟರು." ಇದರಲ್ಲಿ
ಕಂಪನಿಗಿರಬೇಕಿದ್ದ ಒಳ್ಳೆಯತನ ಚೇರ್ಮನ್ನರಿಗೆ ಸಂದಾಯವಾದದ್ದು ಹೇಗೆ? "ಚೇರ್ಮನ್ನರು ಭ್ರಷ್ಟರೇ?" "ಛೇಛೇ ಇಲ್ಲ. ಆದರೆ ಸಾಲ ನೀಡಬೇಕೆಂದೇನೂ ಇರಲಿಲ್ಲವಾದರೂ
ನೀಡಿದರು. ಹೀಗಾಗಿ ನಾನೇ ಮೇಡಂಗೆ ಒಂದು ದುಬಾರಿ ವ್ಯಾನಿಟಿ ಬ್ಯಾಗನ್ನು ಕೊಟ್ಟು – ‘ಮೇಡಂಗೆ ಬ್ಯಾಗು, ಅದರಲ್ಲಿರುವುದು ನಿಮಗೆ‘ ಎಂದು ಹೇಳಿದೆ." ನಜರಾನಾದ್ದು ನಯವಾದ ದಾರಿ. ಈ ನಯದಲ್ಲಿ ಯಾವುದನ್ನೂ ಲೆಕ್ಕ ಕಟ್ಟುವುದು ಕಷ್ಟ.
ರಾಬರ್ಟ್ ವದ್ರಾ –
ಡಿಎಲ್ಎಫ್ ಪ್ರಕರಣವನ್ನೂ, ಸುಪ್ರಿಯಾ-ಸದಾನಂದ ಸುಳೆ – ಲವಾಸಾ ಪ್ರಕರಣವನ್ನೂ ನಜರಾನ ಎಂದೇ ಕರೆಯಬಹುದೇನೋ.
ವ್ಯವಹಾರ ನಡೆಯುವಾಗ ಇದರಲ್ಲಿ ಗಿಟ್ಟಬಹುದಾದ್ದು ಎಷ್ಟೆಂದು ಲೆಕ್ಕ ಕಟ್ಟುವುದು ಕಷ್ಟ. ಈ
ವ್ಯವಹಾರಗಳು ದುಡ್ಡಿನ ರೂಪದಲ್ಲಲ್ಲದೇ ವ್ಯವಹಾರದ ರೂಪದಲ್ಲಿ, ಮೇಜಿನ ಕೆಳಗಲ್ಲದೇ ಮೇಲೆಯೇ ನಡೆದು
ಸೃಜನಶೀಲ ಭ್ರಷ್ಟಾಚಾರವಾಗುತ್ತದೆ. ಇದರಲ್ಲಿ ಭ್ರಷ್ಟತೆಯ ಅಂಶ ನಿರೂಪಿಸುವ ಜವಾಬ್ದಾರಿ ತನಿಖಾಧಿಕಾರಿಯಮೇಲೆ
ಬೀಳುತ್ತದೆ. ಸರಳವಾಗಿರದ ನಜರಾನಾ ಕಷ್ಟದ ಭ್ರಷ್ಟತೆ.
ನಜರಾನಾದಲ್ಲಿ ನಾಜೂಕಾದ
ರೂಪಗಳುಂಟು. ಈ ರೂಪಗಳನ್ನು ಮೆಕಿನ್ಸಿ, ಬಿಸಿಜಿಯಂಥಹ ಕಂಪನಿಗಳು ಉಪಯೋಗಿಸಬಹುದೆಂದು ವಿಲಿಯಂ
ಕೀಚೆಲ್ ಬರೆಯುತ್ತಾರೆ. ರಾಜಕಾರಣಿಗಳ – ಉನ್ನತಾಧಿಕಾರಿಗಳ ಮಕ್ಕಳಿಗೆ ಸಿಗುವ ಹಾಲಿ-ಖಾಯಂ
ಕೆಲಸಗಳು, ಅವರುಗಳ ವಿದೇಶ ಯಾತ್ರೆಗಳಿಗೆ ಮಾಡುವ ಸವಲತ್ತುಗಳು ನಜರಾನಾದಲ್ಲಿಯೇ ಬರುತ್ತವೆ. ರಾಜಕಾರಣಿ
ಚಂದ್ರಬಾಬು ನಾಯುಡು ಮಗ ಒಂದೂವರೆ ವರ್ಷ ವಿಶ್ವ ಬ್ಯಾಂಕಿನಲ್ಲಿ ಕೆಲಸ ಮಾಡಿದ. ಅದು ಬಾಬು
ಅಧಿಕಾರಾವಧಿಯ ನಂತರವಾಗಿತ್ತು. ಆದರೆ ಬಾಬು ವಿಶ್ವ ಬ್ಯಾಂಕಿಗೆ ಎಷ್ಟು ಹತ್ತಿರದವರಾಗಿದ್ದರು
ಎಂದು ತಿಳಿದಿರುವವರಿಗೆ ಇದು ನಜರಾನಾ ಇರಬಹುದೆನ್ನುವ ಅನುಮಾನ ತರಿಸುತ್ತದೆ. ಹಾಗೆಯೇ ತಂಬಾಕಿನ
ವ್ಯಾಪಾರದಲ್ಲಿ ತೊಡಗಿರುವ ಕಂಪನಿಯೊಂದು ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಉದ್ಯೋಗ
ನೀಡುತ್ತಿದ್ದುದೂ ಸರ್ವವಿದಿತ ನಜರಾನಾದ ದಾರಿಯೇ.
ವ್ಯಾಪಾರಕ್ಕೆ ಸಂದ
ನಜರಾನಗಳು ಒಂದೆಡೆ. ಅಮೆರಿಕನ್ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್, ಯೇಲ್, ಸ್ಟಾನ್ ಫರ್ಡ್,
ಡ್ಯೂಕ್, ಕಾರ್ನೆಲ್, ವಾರ್ಟನ್ ಹೀಗೆ ಅನೇಕ ವಿಶ್ವವಿದ್ಯಾನಿಲಯಗಳಿಗೂ ಶ್ರೀಮಂತ – ಉದ್ಯೋಗಪತಿಗಳ
ಮಕ್ಕಳಿಗೂ ಇರುವ ಅವಿನಾಭಾವ ಸಂಬಂಧ ಎಂಥದ್ದು? ದೊಡ್ಡ ಉದ್ಯೋಗಪತಿಗಳ - ಧೀರೂಭಾಯಿ ಅಂಬಾನಿಯಿಂದ
ನಾರಾಯಣಮೂರ್ತಿಯ - ಮಕ್ಕಳು ಭಾರತದ ಐಐಟಿ-ಐಐಎಂ ಗಳನ್ನು ಬಿಟ್ಟು ವಿದೇಶೀ ವಿಶ್ವವಿದ್ಯಾಲಯಗಳ ತೆರೆದ
ಬಾಗಿಲನ್ನರಸಿ ಹೋಗುವುದೇಕೆ? ನಾರಾಯಣಮೂರ್ತಿಯವರು ತಮ್ಮ ಮಗನಿಗೆ ಐಐಟಿಯಲ್ಲಿ ಸೀಟು
ಪಡೆಯುವುದು ಕಷ್ಟಸಾಧ್ಯವಾದ್ದರಿಂದಲೇ ವಿದೇಶಕ್ಕೆ ಕಳುಹಿದೆ ಎಂದು ಸಂದರ್ಶನವೊಂದರಲ್ಲಿ
ಹೇಳಿದ್ದಾರೆ. ಇದನ್ನು ನೆಟ್ ವರ್ಕಿಂಗ್ ನಜರಾನಾ ಎನ್ನಲೂಬಹುದು. ಈ ರೀತಿಯ ನಜರಾನಾದಿಂದ
ಉದ್ಯೋಗಪತಿಗಳ ದ್ವಾರಗಳು ಆ ವಿಶ್ವವಿದ್ಯಾಲಯಗಳಿಗೆ ತೆರೆಯುತ್ತವೆ – ಕನ್ಸಲ್ಟಿಂಗ್ ಪ್ರಾಜೆಕ್ಟು,
ಒಂದಿಷ್ಟು ದೇಣಿಗೆ, ಸ್ಕಾಲರ್ಶಿಪ್ಪು, ಸ್ಟಡೀ ಸೆಂಟರು, ಹೀಗೆ. ನಜರಾನಾದ ಭವ್ಯತೆಯೆಂದರೆ ಅದನ್ನು
ಸೇವೆಯ ನಂತರವೇ ನೀಡಬೇಕೆನ್ನುವ ಪದ್ಧತಿಯೇನೂ ಇಲ್ಲ. ಸೇವೆಯ ಅಪೇಕ್ಷೆಯಿಂದಲೂ ನಜರಾನಾವನ್ನು
ಸಲ್ಲಿಸಬಹುದು. ನಾಜೂಕಾದ ನಜರಾನಾಗಳು ಕಾಲನಿಯಮವನ್ನೂ ಮೀರಿ ನಡೆಯುತ್ತವೆ.
ವಿತ್ತೀಯ ಕ್ಷೇತ್ರ
ವಿಕಸಿತವಾಗುತ್ತಿರುವಂತೆ, ನಜರಾನಾದ ರೂಪ ಗಹನವಾಗುತ್ತದೆ. ಹಣಕ್ಕೆ ಬದಲು ಷೇರುಗಳು, ಇತರೇ
ಸವಲತ್ತುಗಳು, ಕಂಪನಿಗಳನ್ನು ಸೇರಲು ಆಮಿಷ, ಈ ಎಲ್ಲವನ್ನೂ ಪರೀಕ್ಷಿಸಿದರೆ ಸರಕಾರಿ ಭ್ರಷ್ಟಾಚಾರ
ಚಿಲ್ಲರೆಯಾಗಿ ಕಾಣಿಸುತ್ತದೆ. ಆದರೆ ಖಾಸಗೀ ಕ್ಷೇತ್ರದಲ್ಲಿ ರಿಷವತ್ತಿಲ್ಲ. ಅದನ್ನು ಇನ್ಸೆಂಟಿವ್
ಎಂದು ಕರೆಯುತ್ತೇವೆ. ಅದಕ್ಕೆ ಘನತೆ ನೀಡುತ್ತೇವೆ.
ಮೂರನೆಯ ಮಾದರಿಯ ಭ್ರಷ್ಟಾಚಾರ
ಶುಕರಾನಾ. ಇದು ಭ್ರಷ್ಟಾಚಾರ ಹೌದೋ ಅಲ್ಲವೋ ಅನ್ನುವ ಅನುಮಾನವುಂಟು ಮಾಡುವ ಪರಿ. ಶುಕರಾನಾ,
ಕೃತಜ್ಞತೆಯ ದ್ಯೋತಕ. ದೀಪಾವಳಿಯ ಬಕ್ಷೀಸು, ಸಿಹಿತಿಂಡಿ, ರೂಪದಲ್ಲಿ ಆರಂಭವಾಗುವ ಶುಕರಾನಾ ಉನ್ನತ
ಮಟ್ಟಕ್ಕೂ ಏರುತ್ತದೆ. ಯುವರಾಜ್ ಸಿಂಗ್ ಒಂದೇ ಓವರಿನಲ್ಲಿ ಆರು ಸಿಕ್ಸರ್ ಬಾರಿಸಿದ್ದಕ್ಕೆ, ಲಲಿತ್
ಮೋದಿ ಕೊಟ್ಟ ಪೋರ್ಶ ಕಾರು ಶುಕರಾನಾ. ಶುಕರಾನಾ ಭ್ರಷ್ಟಾಚಾರವಲ್ಲ, ಜನ ಪ್ರತಿಫಲಾಪೇಕ್ಷೆಯಿಲ್ಲದೆಯೇ
ಕೆಲಸ ಮಾಡುತ್ತಾರೆ. ಹಾಗಾದ ಕೆಲಸದ ಖುಷಿಯಿಂದ ಮಿಠಾಯಿ ಕೊಟ್ಟರೆ ಅದನ್ನು ಸ್ವೀಕರಿಸುವುದು
ಸಜ್ಜನಿಕೆಯೇ ಹೊರತು ಭ್ರಷ್ಟಾಚಾರ ಅಲ್ಲವೆನ್ನುವ ವಾದವನ್ನು ನಂಬಬಹುದಿತ್ತು.
ಆದರೆ ಭಾರತೀಯ ರಜತ್
ಗುಪ್ತಾರ ಮೇಲೆ ಅಮೆರಿಕದಲ್ಲಿ ನಡೆಯುತ್ತಿರುವ ವಿಚಾರಣೆಯ ಪ್ರಕಾರ ಶುಕರಾನಾವೂ ಭ್ರಷ್ಟಾಚಾರವಾಗಬಹುದು
ಎಂದು ಸಾಹೀತಾಗಿದೆ. ಗುಪ್ತಾ, ಗುಪ್ತ ಮಾಹಿತಿಯನ್ನು ತಮ್ಮ ಸ್ನೇಹದ ವತಿಯಿಂದಾಗಿ ರಾಜ್ ರಾಜರತ್ನಂ
ಎನ್ನುವ ವಾಲ್ ಸ್ಟ್ರೀಟ್ ವ್ಯಾಪಾರಿಯ ಬಳಿ ಹಂಚಿಕೊಂಡರು. ಅದರಿಂದ ಗುಪ್ತಾಗೆ ನೇರವಾಗಿ ಲಾಭವಾದ
ಸೂಚನೆ ಇಲ್ಲ. ರಾಜ್ ಗೆ ಲಾಭವಾಯಿತು. ಇದೂ ಮೋಸವೆಂದು ಜ್ಯೂರಿ ತೀರ್ಮಾನಿಸಿದೆ. ಹೀಗೆ ಅನ್ಯಾಯದ
ಸರಪಳಿಯಲ್ಲಿ ಅರಿವಿದ್ದೋ-ಅರಿವಿಲ್ಲದೆಯೋ ಶುಕರಾನಾ ಮಾಡುತ್ತಾ ಷಾಮೀಲಾಗಿರುವುದೂ
ಭ್ರಷ್ಟಾಚಾರವೆಂದು ತೀರ್ಮಾನವಾಗಿದೆ.
ಕೇಜ್ರೀವಾಲ್
ಮಾಡುತ್ತಿರುವ ಹಂಗಾಮಾದಲ್ಲಿ ನಜರಾನಾ-ಶುಕರಾನಾ ರೂಪದ ಭ್ರಷ್ಟಾಚಾರಗಳನ್ನು ಸಾಬೀತು ಪಡಿಸುವುದು
ಅತ್ಯಂತ ಕಷ್ಟದ ಕೆಲಸ. ನಮ್ಮ ಕನೂನಿನ ಚೌಕಟ್ಟಿನಲ್ಲಿ ರಜತ್ ಗುಪ್ತಾರಂಥಹ ಕೇಸು ನಿಲ್ಲುವುದು
ಕಷ್ಟಸಾಧ್ಯ.
ನನ್ನ ಜೀವನದಲ್ಲಾದ
ಆಸಕ್ತಿಕರ ಭ್ರಷ್ಟಾಚಾರದ ಕಥೆ ಹೇಳಿ ನಿಲ್ಲಿಸುತ್ತೇನೆ. ಮೂವತ್ತಮೂರು ವರ್ಷಗಳ ಹಿಂದೆ,
ಸಂಜೆಯವೇಳೆ, ಹಾರ್ಡ್ವಿಕ್ ಹೈಸ್ಕೂಲಿನಿಂದ ಚಾಮುಂಡಿಪುರಂ ಕಡೆಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದ
ನನ್ನನ್ನು ಹವಲ್ದಾರ ಸೈಕಲ್ಲಿಗೆ ಲೈಟಿಲ್ಲ ಎಂದು ಹಿಡಿದು ಸೈಕಲ್ ಜಫ್ತು ಮಾಡಿದ. ಆಗಿನ್ನೂ
ಶಾಲೆಯಲ್ಲಿದ್ದ ನಾನು ಕಂಗಾಲಾದೆ. ನನ್ನ ಅಪರಾಧಕ್ಕೆ ನನ್ನನ್ನು ಮನೆಗೆ ಓಡಿಸಿ ಅಪ್ಪನ ಬಳಿ ಹಣ
ಇಸಿದು ಒಂದು ಅರವತ್ತು ಕ್ಯಾಂಡಲ್ ಬಲ್ಬನ್ನು ಕೊಂಡುತರುವಂತೆ ನಿರ್ದೇಶಿಸಿದ. ನಾನು ತಂದು
ಕೊಟ್ಟೆ. ನನ್ನೆದುರಿಗೇ ಅದನ್ನು ಲಕ್ಷ್ಮೀಪುರಂ ಠಾಣೆಯ ಕೋಣೆಗೆ ಹೋಲ್ಡರಿಗೆ ಹಾಕಿ ಲೈಟು ತರಿಸಿಕೊಂಡ.
ಇದು ಜಬರಾನಾ, ನಜರಾನಾ, ಶುಕರಾನಾ.. ಎಲ್ಲವೂ ಆಗಿತ್ತು.
No comments:
Post a Comment