Sunday, December 30, 2012

ಪ್ರೇಂಜೀಭಾಯಿ ಮತ್ತು ಕಛ್ ಪುರಾಣ


ಕಛ್ ಭಾರತದ ಅತೀ ದೊಡ್ಡ ಜಿಲ್ಲೆ. 2011ರ ಜನಗಣತಿಯಂತೆ ಅಲ್ಲಿ ವಾಸ್ತವ್ಯವಿರುವುದು 2 ದಶಲಕ್ಷ ಜನ. ಅಲ್ಲಿಯ ಜನಸಂಖ್ಯಾ ಸಾಂದ್ರತೆ ಪ್ರತಿ ಚದರ ಕಿಲೋಮೀಟರ್ ಗೆ ಕೇವಲ 46. ಭಾರತದ ಸರಾಸರಿ ಜನಸಾಂದ್ರತೆ ಕಿಲೋಮೀಟರಿಗೆ 382, ಗುಜರಾತ್ ರಾಜ್ಯದ್ದು 308, ಪಶ್ಚಿಮ ಬಂಗಾಲದ್ದು 1030 ಮತ್ತು ಬಿಹಾರದ್ದು 1102. ಈ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ಹದಿನೈದು ದಿನಕಾಲ 375 ಮಿಲಿಲೀಟರು ಮಳೆ ಬೀಳುತ್ತದೆ. ಕೃಷಿ ಅಷ್ಟಕ್ಕಷ್ಟೇ. ಕಡಲಿರುವುದರಿಂದ ಮೀನುಗಾರಿಕೆ ಇದೆ. ಈಚೆಗೆ ಕಡಲನ್ನು ಆಕ್ರಮಿಸಿಕೊಂಡಿರುವ ಅದಾನಿ ಸಂಸ್ಥೆಯಿಂದಾಗಿ ಆ ಕೆಲಸವನ್ನೂ ಜನ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೇ ಉಪ್ಪನ್ನು ಸರಬರಾಜು ಮಾಡುವಷ್ಟು ಉಪ್ಪು ಉತ್ಪಾದನೆಯಿದೆಯಾದರೂ ಅಲ್ಲಿ ಕೆಲಸ ಮಾಡುವ ಅಗಾರಿಯಾಗಳ ಕಡು ಬಡತನ ಮತ್ತು ಅಮಾನವೀಯ ಪರಿಸರ ಹೃದಯವಿದ್ರಾವಕವಾಗಿರುತ್ತದೆ. ಈ ಎಲ್ಲದರ ನಡುವೆಯೂ ಲ್ಲಿ ಇರುವ ಕಲಾವಂತಿಕೆಯನ್ನು ನೋಡಿಯೇ ನಂಬಬೇಕು.

ಬಬೂಲ್ ಮರದ ತುಕಡಿಯ ಮೇಲೆ ಆಕರ್ಷಕವಾದ ಅರಗಿನಿಂ ಚಿತ್ತಾರಗಳನ್ನು ಬಿಡಿಸುವ ವಾಡಾಗಳ ಕಲೆ, ತ್ಯಾಜ್ಯ ತಾಮ್ರದಿಂದ ತಯಾರಿಸುವ ಗಂಟೆ, ಹರಳೆಣ್ಣೆಯಲ್ಲಿ ತರಕಾರಿಯ ರಂಗುಗಳನ್ನು ಬೆರೆಸಿ ಚಿತ್ರಗಳನ್ನು ರಚಿಸುವ ರೋಗನಕಲೆ, ಚರ್ಮಶಿಲ್ಪಿಗಳು ತಯಾರಿಸುವ ಚಿತ್ತಾರದ ತೊಗಲಿನ ವಸ್ತುಗಳು, ಮತ್ತು ಈ ಎಲ್ಲಕ್ಕಿಂತಲೂ ಮಿಗಿಲಾಗಿ ವಸ್ತ್ರಗಳಿಗೆ ಸಂಬಂಧಿಸಿದ ಕಲೆ – ವಿವಿಧ ರೀತಿಯ ನೂಲುಗಳ ನೇಯ್ಗೆ, ಬಟ್ಟೆಯ ಮೇಲಿನ ಅಜ್ರಖ್ ಬ್ಲಾಕ್ ಮುದ್ರಣ, ಟೈ-ಡೈ ಎಂದೇ ಖ್ಯಾತವಾಗಿರುವ ಬಾಂದಣಿ ಹಾಗೂ ಕಸೂತಿ. ಮನೆಯ ಬಾಗಿಲಿನ ಮೇಲೂ, ಗೋಡೆಗಳ ಮೇಲೂ, ಚಿತ್ತಾರಗಳು. ಇದು ನಮಗೆ ಕಲೆ, ಅಲ್ಲಿ ಇದು ಸಹಜ. ಅವರ ಕೆಲಸಕ್ಕೆ ಕಲೆಯ ಪಟ್ಟ ಹಚ್ಚುವುದು ನಮ್ಮ ಮನೆಯ ಮುಂದಿನ ರಂಗೋಲೆಗೆ ಕಲೆಯ ಪಟ್ಟವನ್ನು ಹಚ್ಚಿದಹಾಗೇ.

ಕಛ್ ಪ್ರಾಂತ ಬಹಳ ದಿನಗಳವರೆಗೆ ಮಾರುಕಟ್ಟೆಯಿಂದ ದೂರವಿತ್ತು. ಜನಸಂಖ್ಯೆಯಿಲ್ಲದ, ಜನಸಾಂದ್ರತೆಯಿಲ್ಲದ ಜಾಗ ಮಾರುಕಟ್ಟೆಯ ದೊಡ್ಡ ವ್ಯಾಪಾರಿಗಳಿಗೆ ಆಕರ್ಷಕಲ್ಲ. ಇಂಥ ಜಾಗಗಳಲ್ಲಿ ಸ್ಥಳೀಯ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ಪೂರೈಸಿಕೊಳ್ಳವ ಪ್ರಕ್ರಿಯೆ ನಡೆಯುತ್ತದೆ. ದೂರದಿಂದ ವಸ್ತುಗಳು ಬರಬೇಕೆಂದರೆ ಅವು ದುಬಾರಿಯಾಗುತ್ತವೆ. ಆ ದುಬಾರಿ ವಸ್ತುಗಳನ್ನು ಕೊಳ್ಳಷ್ಟು ಹಣ ಬೇಕಾದರೆ ಸ್ಥಳೀಯ ವಸ್ತುಗಳನ್ನು ಹೊರಗಿನ ಮಾರುಕಟ್ಟೆಗಳಲ್ಲಿ ಮಾರಾಟಮಾಡಬೇಕು. ಆದರೆ ಕಛ್ ನಿಂದ ಕಳುಹಲು ಇದ್ದದ್ದು ಕೇವಲ ಉಪ್ಪು ಮತ್ತು ಕರಕುಶಲ ವಸ್ತುಗಳು ಮಾತ್ರ. ಜೊತೆಗೆ ಕಛ್ಛೀ ಜನರನ್ನೂ ರಫ್ತು ಮಾಡಬಹುದು. ಹೊರ ಊರುಗಳಿಗೆ ಬಂದು ಯಶಸ್ವೀ ವ್ಯಾಪಾರ ಮಾಡುತ್ತಿರುವ ಕಛ್ಛಿಗಳ ಯಶೋಗಾಥೆಗಳು ಬೇಕಾಷ್ಟಿವೆ. ಕಡಲ ತೀರದರಿಗೆ ವ್ಯಾಪಾರ ಸಹಜವಾಗಿಯೇ ಒಗ್ಗಿಬರುತ್ತದೆಂದು ಹೇಳುತ್ತಾರೆ. ಅದು ಕಛ್ಛಿಗಳಿಗೂ ವರ್ತಿಸುತ್ತದೆ.

ಈ ಕರಕುಶಲಗಳನ್ನೆಲ್ಲಾ ಒಂದು ಬದಿಗಿಟ್ಟು ಹತ್ತಿ, ನೂಲು, ನೇಯ್ಗೆ, ವಸ್ತ್ರಗಳ ಬಗ್ಗೆ ಮಾತಾಡೋಣ. ಇಲ್ಲಿನ ಹತ್ತಿ-ಕೃಷಿಯ ಒಂದು ಭಾಗ ಸಾವಯವ ಪದ್ಧತಿಯಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣ ಕುತೂಹಲದ್ದು. ಇಲ್ಲಿನ ನೀರು ಪೂರೈಕೆಯ ಪರಿಸ್ಥಿತಿಗನುಸಾರವಾಗಿ ಉತ್ತಮ ತಳಿಯ ಕೃಷಿ ಮಾಡಿ, ರಾಸಾಯನಿಕ ಗೊಬ್ಬರ ಬಳುಸುವುದರಲ್ಲಿ ಅರ್ಥವಿಲ್ಲ. ಕಾಲಾ ಕಾಟನ್ ಅನ್ನುವ ಹೆಸರು ಹೊತ್ತ ಈ ಹತ್ತಿ ಉತ್ತಮ ಗುಣಮಟ್ಟದ ಹತ್ತಿಯೇನೂ ಅಲ್ಲ. ಆದರೆ ಈಗ ಸಾವಯವಕ್ಕೆ ಒಂದು ರೀತಿಯ ಫ್ಯಾಷನ್ ಬಂದಿರುವುದರಿಂದ ಅದಕ್ಕೆ ಕಛ್ ನ ಹೊರಗೆ ದೊಡ್ಡ ಮಾರುಕಟ್ಟೆಯಿರಬಹುದು.

ಹತ್ತಿಯ ಕೃಷಿಯನ್ನು ಜನ ತಮ್ಮ ಇತರ ಕಸುಬುಗಳೊಂದಿಗೆ ನಡೆಯಿಸುತ್ತಾ ಬಂದಿದ್ದಾರೆ. ಸಹಜವಾದ ಪದ್ಧತಿ ಈಗ ಸಾವಯವ ಅನ್ನುವ ದೊಡ್ಡ ಹೆಸರನ್ನು ಪಡೆದಿದೆ. ಮಾರುಕಟ್ಟೆಯ ಸೋಂಕೇ ಇಲ್ಲದೇ ಉಳಿದ ಸಹಜ ಪದ್ಧತಿಗೆ ಈಗ ಇದ್ದಕ್ಕಿದ್ದ ಹಾಗೆ ಮಾರುಕಟ್ಟೆ ಲಭಿಸುತ್ತಿರುವಂತಿದೆ! ಜಗತ್ತಿನ ಫ್ಯಾಷನ್ ಯಾವ ಕಡೆಗೆ ತಿರುಗುವುದೋ ತಿಳಿಯದ ಮಾಯವಿದು.
ಹತ್ತಿಯ ಬೆಳವಣಿಗೆ ಇಳುವರಿಯಷ್ಟು ನೇಯುವ – ಅದನ್ನು ಮಾರುಕಟ್ಟೆಗೆ ಪೂರೈಸುವ ಸಾಮರ್ಥ್ಯ ಸ್ಥಳೀಯ ಸಂಸ್ಥೆಗಳಿಗಿಲ್ಲ. 

ಒಬ್ಬ ರೈತ ಬೆಳೆವ ಹತ್ತಿಯನ್ನು 10 ನೇಕಾರರು ನೇಯಬಹುದು! ಇದೂ ಅಲ್ಲದೇ ನೇಕಾರರು ಸಾವಯವ ಹತ್ತಿಯನ್ನೇ ನೇಯಬೇಕೆಂದೇನೂ ಇಲ್ಲ. ಅದೇ ಕಛ್ ನ ಗಮ್ಮತ್ತು. ಸಾಮಾನ್ಯವಾಗಿ ನೇಯ್ಗೆಯಲ್ಲಿ ಒಂದು ಪ್ರಾಂತವೇ ನೇಯ್ಗೆಯ ಶೈಲಿಗೆ ಪ್ರಸಿದ್ಧವಾಗುತ್ತದೆ. ಯಮ್ಮಿಗನೂರಿನಲ್ಲಿ ಪಂಚೆ, ದುಪ್ಪಟ್ಟಿ, ತುವಾಲುಗಳು; ಉಪ್ಪಾಡದಲ್ಲಿ ಸೀರೆಗಳು, ಕಾಂಜೀವರ ಬನಾರಸ್ ಗಳಲ್ಲಿ ರೇಷ್ಮೆಯ ನೇಯ್ಗೆ, ಗದ್ವಾಲ್ ಪೋಚಂಪಲ್ಲಿಗಳಿಗೆ ತಮ್ಮದೇ ಆದ ವ್ಯಕ್ತಿತ್ವ, ಪಾಟನ್ ರೇಷ್ಮೆ ಸೀರೆಗಳು ತೆಳುತನಕ್ಕೆ ಹೊಂದಿರುವ ಖ್ಯಾತಿ – ಹೀಗೆ ಉಪಯೋಗಿಸುವ ಮಾಧ್ಯಮಕ್ಕೂ ನೇಯುವ ವಸ್ತ್ರಕ್ಕೂ ಒಂದು ವೈಶಿಷ್ಟ್ಯತೆ, ವ್ಯಕ್ತಿತ್ವ, ಹೆಸರಿನಿಂದಲೇ ಅದರ ಕಲಾವಂತಿಕೆಯನ್ನು ಗುರುತಿಸುವ ಸಾಧ್ಯತೆಯಿರುತ್ತದೆ. ಆದರೆ ಕಛ್ ನ ನೇಕಾರರು ಏನನ್ನಾದರೂ ನೇಯುತ್ತಾರೆ. ನಾಗೋರ್ ಗ್ರಾಮದ ಪ್ರೇಂಜೀಭಾಯಿಯನ್ನು ಸಂದರ್ಶಿಸಿ ಕಾಲಾ ನೂಲಿನಿಂದ ಸಾವಯವ ವಸ್ತ್ರಗಳನ್ನು ನೇಯುವ ಬಗ್ಗೆ ಚರ್ಚಿಸಲು ಹೋದಾಗ ಗಮ್ಮತ್ತಿನ ಸುದ್ದಿ ಎದುರಾಯಿತು.

ಡಬ್ಬಲ್ ಬೆಡ್ ದುಪ್ಪಟ್ಟಿಗಳನ್ನು ನೇಯುವುದು ಪ್ರೇಂಜಿಭಾಯಿಯ ವೈಶಿಷ್ಟ್ಯವಂತೆ. ಆದರೆ ಆ ದಿನ   ಪ್ರೇಂಜೀಭಾಯಿ ತನ್ನ ಮಗ್ಗದಲ್ಲಿ ಉಣ್ಣೆ ಮತ್ತು ಆಕ್ರಿಲಿಕ್ ಸೇರಿಸಿ ಶಾಲುವೊಂದನ್ನು ನೇಯುತ್ತಿದ್ದ. ಪ್ರೇಂಜೀಭಾಯಿಯನ್ನೊಳಗೊಂಡು ಅಲ್ಲಿನ ನೇಕಾರರು ಏನನ್ನಾದರೂ ನೇಯಬಲ್ಲವರಾಗಿದ್ದಾರೆ. ಕಾಲಾ ಹತ್ತಿಯೂ ಸೈ, ಪ್ಲಾಸ್ಟಿಕ್ ಕವರಿನ ಚಿಂದಿಯಿಂದ ಪ್ಲಾಸ್ಟಿಕ್ ಧರಿಗಳನ್ನ ನೇಯುವುದಕ್ಕೂ ಸೈ. ಇದೂ ಸಾಲದೆಂಬಂತೆ ಪ್ರೇಂಜಿಭಾಯಿ ಮತ್ತವನ ಮಗ ಎರಡು ವರ್ಷಗಳ ಕಾಲ ನೇಯುವುದನ್ನೇ ಬಿಟ್ಟು ತಿಂಗಳಿಗೆ ಆರುಸಾವಿರ ರೂಪಾಯಿ ಸಂಬಳದ ಮೇಲೆ ಸೆಕ್ಯೂರಿಟಿ ಗಾರ್ಡುಗಳಾಗಿಯೂ ಕೆಲಸ ಮಾಡುತ್ತಿದ್ದರು.

ಇದನ್ನು ಅರ್ಥೈಸುವುದೇ ಹೇಗೆ? ಮಾರುಕಟ್ಟೆಯೊಂದಿಗೆ ಹೆಚ್ಚಾಗಿ ಏಕೀಕರಣಗೊಳ್ಳದ ಈ ಪ್ರಾಂತಕ್ಕೆ ಕೇಂದ್ರೀಕೃತ ಉತ್ಪಾದನೆ ಇರಲಿಲ್ಲ. ಕಲೆಗೆ ಪ್ರಸಿದ್ಧವಾದ ಕಛ್ ಗೆ ಒಂದು ಕಲಾಮಾಧ್ಯಮದ ವ್ಯಕ್ತಿತ್ವವಿರಲಿಲ್ಲ. ಸ್ಥಳೀಯ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ಪೂರೈಸಿಕೊಂಡು - ರಾಬಾರಿಗಳಿಗೆ ಶಾಲು, ಗಮ್ಚಾ ಬೇಕಿದ್ದರೆ ಅದಕ್ಕೂ ಸೈ, ದುಪ್ಪಟ್ಟಿ ಬೇಕಿದ್ದರೆ ಅದನ್ನೂ ಯಾವುದೇ ನೇಕಾರ ನೇಯುತ್ತಿದ್ದ. ನೇಕಾರರು ನೇಯ್ದ ಬಟ್ಟೆಯ ಮೇಲೆ ಅಜ್ರಕ್ ನ ಬ್ಲಾಕ್ ಪ್ರಿಂಟ್ ಡಿಜೈನು ಅಥವಾ ಬಾಂಧಣಿಯ ಬಣ್ಣಗಳ ಲೇಪವಾಗುತ್ತಿತ್ತು. ಹಾಗೆಯೇ ಅಲ್ಲಿನ ಚರ್ಮಶಿಲ್ಪಿಗಳು ಕುದುರೆಗಳಿಗೆ ಜೀನಿನಿಂದ ಹಿಡಿದು ಜನರ ಪಾದಗಳಿಗೆ ಬೇಕಾದ ಚಪ್ಪಲಿ-ಜೂತಿಗಳನ್ನು ಒದಗಿಸಿಕೊಡುತ್ತಿದ್ದರು. ಹೀಗಾಗಿ ಅಲ್ಲಿಯ ಕುಶಲ ಕರ್ಮಿಗಳು ತಮ್ಮ ಕಾಯಕದಲ್ಲಿ ಅತೀ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳದೇ ಬಹುಮುಖೀ ಪ್ರತಿಭೆಯನ್ನು ತೋರಿಸುತ್ತಿದ್ದರು.

ಹಿಂದೆಯೂ ಕೆಲವು ಸ್ವಯಂಸೇವಾ ಸಂಸ್ಥೆಗಳು ಕಛ್ ಕಲೆಯನ್ನು ಹೊರಪ್ರಪಂಚಕ್ಕೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದುವು. ಆದರೆ 2001ರ ಭೂಕಂಪ ಅಲ್ಲಿನ ಅರ್ಥವ್ಯವಸ್ಥೆಯನ್ನು ಮೂಲಭೂತವಾಗಿ ಬದಲಾಯಿಸಿಬಟ್ಟಿತು.
ಭೂಕಂಪಾನಂತರ ಕಛ್ ಗೆ ನೆರವಿನ ಮಹಾಪೂರವೇ ಬಂತು. ನೆರವಷ್ಟೇ ಅಲ್ಲ. ದಶಕಕ್ಕೆ ಸುಮಾರು 20ರಿಂದ 25 ಪ್ರತಿಶತ ಬೆಳೆಯುತ್ತಿದ್ದ ಜನಸಂಖ್ಯೆ ಭೂಕಂಪಾನಂತರದ ದಶಕದಲ್ಲಿ 32 ಪ್ರತಿಶತ ಬೆಳೆದಿದೆ! ಹೊರಗಿನ ಉದ್ಯಮಗಳೂ ಮಾರುಕಟ್ಟೆಗಳೂ ಕಛ್ ಗೆ ಬಂದಿವೆ. ಈ ನೆರವಿನ ಮಹಾಪೂರ ತನ್ನಷ್ಟಕ್ಕೆ ತಾನಿದ್ದ ಕಛ್ ಗೆ ವಿಶಾಲವಾದ ಮಾರುಕಟ್ಟೆಯ ಬಾಗಿಲನ್ನು ತೆರೆದಿದೆ. ಹೀಗಾಗಿ ಪ್ರೇಂಜಿಭಾಯಿ ಸದರಾಕ್ಕೆ ಬದಲು ನಕಲೀ ರೀಬಾಕ್ ಟೀಷರ್ಟನ್ನು ಧರಿಸುತ್ತಿದ್ದಾನೆ. ಅವನು ನೇಯಲಿರುವ ಕಾಲಾ ಆರ್ಗಾನಿಕ್ ಕಾಟನ್ನಿನ ಬಟ್ಟೆಯಿಂದ  ಹೊಲಿದ ಕುರ್ತಾಗಳನ್ನು ಸಾವಿರ ರೂಪಾಯಿಯ ಬೆಲೆಗೆ ಖರೀದಿಸಿ ನಗರದವರು ಆ ಬಗ್ಗೆ ಮಾತನಾಡುತ್ತಲೇ ಒಂದು ಸ್ಕಾಚ್ ಇಳಿಸುತ್ತಾರೆ.

ತಾನೇ ನೇಯ್ದದ್ದನ್ನು ಯಾಕೆ ಧರಿಸುವುದಿಲ್ಲ ಎನ್ನುವುದಕ್ಕೆ ಪ್ರೇಂಜಿಭಾಯಿಯ ಉತ್ತರ "ಇದು ದುಬಾರಿ. ನೇಯುವುದಕ್ಕೂ ಮೇಂಟೇನ್ ಮಾಡುವುದಕ್ಕೂ..." ಎನ್ನುವುದು. ಪ್ರೇಂಜೀಭಾಯಿಯ ಜಾಗತೀಕರಣವೂ ಆಗಿದೆ ಎಂದೇ ಹೇಳಬೇಕು. ನೇಯುವುದು ಗಿಟ್ಟದಿದ್ದರೆ ಸೆಕ್ಯೂರಿಟಿ ಗಾರ್ಡ್ ಆಗುತ್ತೇನೆ ಎಂಬ ಈ ಹೊಸ ಜೀವನೋಪಾಧಿಯೂ ಭೂಕಂಪನಾನಂತರದ ಮಾರುಕಟ್ಟೆಗಳ ಪ್ರವೇಶದಿಂದ ಉಂಟಾದ ಅವಕಾಶವೇ. ಅವನ ಆದಾಯಕ್ಕೇನೂ ಕುಂದಿಲ್ಲ. ಆದಾಯ ಎಲ್ಲಿಂದ ಬರುತ್ತಿದೆ ಎಂದು ಯೋಚಿಸುವ, ತಲೆಕೆಡಿಸಿಕೊಳ್ಳುವ ವ್ಯವಧಾನ ಅವನಿಗಿಲ್ಲ. ಆದರೆ ನಾವುಗಳು ನಮ್ಮ ದೇಶವನ್ನು ನೇಕಾರರಿಂದ ಸೆಕ್ಯೂರಿಟಿ ಗಾರ್ಡುಗಳ ಪಡೆ ಬೆಳೆಸುವ ಮಾರುಕಟ್ಟೀಕರಣ-ಜಾಗತೀಕರಣದ ಕಡೆಗೆ ಒಯ್ಯಬೇಕೇ ಎನ್ನುವುದೇ ಪ್ರಶ್ನೆ.
ದೊಡ್ಡ ಇಡುವಳಿಗಳು ನಗರಗಳಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸುತ್ತವೆ ಎನ್ನುವ ಜಾಗತೀಕರಣದ ಪಂಡಿತರನ್ನು ನಾವು ಕೇಳಬೇಕಾದ್ದು ಅದು ಯಾವ ಉದ್ಯೋಗವನ್ನು ಕಲ್ಪಿಸುತ್ತದೆ ಅನ್ನುವುದಕ್ಕಿಂತ, ಯಾವ ಉದ್ಯೋಗಾವಕಾಶವನ್ನು ವಂಚಿಸುತ್ತದೆ ಎನ್ನುವುದೇ ಆಗಿದೆ.
1 comment: