ನಾವು ಚಿಕ್ಕವರಿದ್ದಾಗ
ಬೆಂಗಳೂರಿನ ರಸ್ತೆಯ ಮೇಲೆ ನಮಗೆ ಬಿಟಿಎಸ್ ನ ಕೆಂಪು ಬಸ್ಸುಗಳಲ್ಲದೇ, ಎಚ್ಎಎಲ್, ಎಚ್ಎಂಟಿ,
ಐಟಿಐ, ಬಿಇಎಲ್ ಸಂಸ್ಥೆಗಳ ಬಸ್ಸುಗಳೂ ಕಾಣಿಸುತ್ತಿದ್ದುವು. ದಿನದ ಷಿಫ್ಟಿಗನುಸಾರ ನಗರದ ವಿವಿಧ
ಜಾಗಗಳಿಂದ (ಆಗ) ಊರಾಚೆ ಇದ್ದ ಫ್ಯಾಕಟರಿಗಳಿಗೆ ಜನ
ಹೋಗುತ್ತಿದ್ದರು. ಆ ಬಸ್ಸುಗಳಲ್ಲಿ ಇದ್ದವರೆಲ್ಲರೂ ಇಂಜಿನಿಯರುಗಳೇನೂ ಅಲ್ಲ. ಕೆಲವರು
ಇಂಜಿನಿಯರುಗಳಿದ್ದರೂ, ಐಟಿಐ ತರಬೇತಿ ಪಡೆದ ಮಾಡಿದ ಫೋರ್ಮನ್ನು, ಸೂಪರ್ ವೈಸರು, ಕಾರ್ಮಿಕರು –
ಹೀಗೆ ವಿವಿಧ ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದ ಸಮವಸ್ತ್ರ ಧರಿಸಿದ ಜನರು ಇರುತ್ತಿದ್ದರು. ಇದೂ ಸಾಲದೆಂಬಂತೆ,
ಸಂಸ್ಥೆಗಳಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುತ್ತಿದ್ದ ಜನರೂ ಇರುತ್ತಿದ್ದರು. ಬಸ್ಸಿನಲ್ಲಿ –
ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಮಾತನಾಡುವವರು ಸಿಗುತ್ತಿದ್ದರು. ಊಟವನ್ನು ಮನೆಮನೆಯಿಂದ
ಪಡೆದು ಟಿಫಿನ್ ಕ್ಯಾರಿಯರ್ ಗಳನ್ನು ಪಡೆದು ಸೈಕಲ್ ಮೇಲೆ ಒಯ್ಯುವ "ಡಬ್ಬಾವಾಲಾ"ಗಳೂ ಇದ್ದರು. ಫ್ಯಾಕ್ಟರಿಯಲ್ಲಿ
ವಿಭಾಗೀಯ ಕ್ಯಾಂಟೀನ್ ಇರುತ್ತಿತ್ತು. ಹಾಗೂ ಅಂದಿನ ಸಿನೇಮಾಗಳಲ್ಲಿ ಹೀರೋ ಕಾರ್ಮಿಕ
ನಾಯಕನಾಗಿರುವುದು ಅಪರೂಪವೇನೂ ಆಗಿರಲಿಲ್ಲ. ಕಾರ್ಮಿಕ ಸಂಘಗಳೂ ಚಟುವಟಿಕೆಯಿಂದಿದ್ದುವು.
ಕಾರ್ಮಿಕರು ಸಾಂಸ್ಕೃತಿಕ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮುದಾಯದಂತಹ
ಸಾಂಸ್ಕೃತಿಕ ಸಂಸ್ಥೆಗಳ ಮೂಲವೂ ಕಾರ್ಮಿಕ ಸಂಘಟನೆಯಲ್ಲಿತ್ತು.
ಈ ಲೋಕ ಈಗ ಬದಲಾಗುತ್ತಿರುವಂತೆ
ಅನ್ನಿಸುತ್ತದೆ. ನಮಗೆ ಬೆಂಗಳೂರಿನ ರಸ್ತೆಗಳ ಮೇಲೆ ಹೆಚ್ಚಿನಂಶ ಬಿಳಿ ಬಸ್ಸುಗಳು ಕಾಣಿಸುತ್ತವೆ.
ಆ ಬಸ್ಸುಗಳಲ್ಲಿ ಇಂಗ್ಲೀಷು, ಹಿಂದಿ ಮಾತನಾಡುವ ಯುವಕ ಯುವತಿಯರು ಕಾಣಸಿಗುತ್ತಾರೆ. ಅವರಿಗೆ
ಸಮವಸ್ತ್ರಗಳೇನೂ ಇಲ್ಲ. ಅವರುಗಳು ತಮ್ಮ ಕಂಪನಿಗಳು ಕೂಟ್ಟ ಊಟದ ಕೂಪನ್ನುಗಳಿಂದ ಫುಡ್
ಕೋರ್ಟಿನಲ್ಲಿ ತಮಗಿಷ್ಟ ಬಂದ ಖಾದ್ಯ ತಿನ್ನುತ್ತಾರೆ. ಬಿಳಿ ಬಸ್ಸುಗಳೊಂದಿಗೆ ಇನ್ನೋವಾ, ಸುಮೋ,
ಟಾವೆರಾಗಳೂ ಕಾಣಿಸುತ್ತವೆ. ಜೊತೆಗೆ ಹಳದಿ ಬಣ್ಣದ ಬಸ್ಸುಗಳೂ ಇವೆ. ಇವುಗಳಲ್ಲಿ ಪುಟ್ಟ ಮಕ್ಕಳು
ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯೆ ಕಲಿಸುವ ಶಾಲೆಗಳಿಗೂ, ದೊಡ್ಡ ಮಕ್ಕಳು ಇಂಜಿನಿಯರಿಂಗ್ ಕಲಿಸುವ
ಕಾಲೇಜುಗಳಿಗೂ ಹೋಗುತ್ತಾರೆ. ಸಿನೇಮಾದ ಹೀರೋಗಳು ಶ್ರೀಮಂತ ಮಾಲೀಕರಾಗಿ ದೊಡ್ಡ ಕಾರುಗಳಲ್ಲಿ
ಓಡಾಡುವುದು ಅಪರೂಪವೇನೂ ಅಲ್ಲ.
ಬೆಂಗಳೂರನ್ನು ಒಂದು
ಕಾಲಕ್ಕೆ ಸರಕಾರಿ ಉತ್ಪಾದನಾ ಸಂಸ್ಥೆಗಳ ರಾಜಧಾನಿ ಎಂದು ಕರೆಯುವ ಪರಿಪಾಠವಿತ್ತು. ಉದ್ಯಾನನಗರಿಯೂ,
ಪಿಂಚನಿದಾರರ ಸ್ವರ್ಗವೂ ಆಗಿದ್ದ ಬೆಂಗಳೂರಿನ ಅರ್ಥವ್ಯವಸ್ಥೆಯಲ್ಲಿ 1960ರಿಂದ 1990ರ ವರೆಗೆ 35 ರಿಂದ
38 ಪ್ರತಿಶತ ಉದ್ಯೋಗಾವಕಾಶ ಉತ್ಪಾದನಾ ಕ್ಷೇತ್ರದಿಂದ ಬರುತ್ತಿತ್ತು. ಮಿಕ್ಕ ಕೆಲಸಗಳು ‘ಸೇವೆ‘ಯ ಕ್ಷೇತ್ರದಿಂದ ಬರುತ್ತಿದ್ದುವು.
ಸಾರಿಗೆ, ವ್ಯಾಪಾರ, ಕಟ್ಟಡ ಕೆಲಸ, ಮನೆಗೆಲಸ ಹೀಗೆ ಉತ್ಪಾದನೆಯಲ್ಲಿ ತೊಡಗದ ಯಾವುದೇ ಕೆಲಸವನ್ನು
ಸೇವೆಯ ವರ್ಗದಲ್ಲಿ ಸೇರಿಸಬಹುದು. ಉತ್ಪಾದನಾ ಕ್ಷೇತ್ರವೆಂದ ಕೂಡಲೇ ದೊಡ್ಡ ಫಾಕ್ಟರಿಗಳನ್ನು ನಾವು
ಊಹಿಸಿಕೊಳ್ಳಬಹುದಾದರೂ, ದೊಡ್ಡ ಕೈಗಾರಿಕೆಗಳಿಗೆ ಪೂರಕವಾಗುವ ಸಣ್ಣ ಕೈಗಾರಿಕೆಗಳೂ ಇರುತ್ತವೆ.
ಮೊದಲಿಗೆ ಬನಶಂಕರಿಯ ಬಳಿಯ ಎಂಎಂ ಇಂಡಸ್ಟ್ರಿಯಲ್ ಎಸ್ಟೇಟ್, ರಾಜಾಜಿನಗರದ ಎಸ್ಟೇಟು, ತದನಂತರ
ಪೀಣ್ಯ.. ಹೀಗೆ ಅನೇಕ ಸಣ್ಣ ಕೈಗಾರಿಗೆಗಳ ತಾಣಗಳೂ ನಮ್ಮಲ್ಲಿ ಇದ್ದುವು. ಇತ್ತೀಚಿನ ಅಂಕಿಸಂಖ್ಯೆಯ
ಪ್ರಕಾರ ಬೆಂಗಳೂರಿಗಿದ್ದ ಉತ್ಪಾದನಾ ಕ್ಷೇತ್ರವೆಂಬ ಮಹತ್ವ ಕ್ಷೀಣಿಸಿದ್ದು ಅದು ಸೇವಾ ಕ್ಷೇತ್ರದ
ರಾಜಧಾನಿಯಾಗಿದೆ. ಬೆಂಗಳೂರು ನಗರ ಅಮೆರಿಕಾಧ್ಯಕ್ಷ ಒಬಾಮಾರ ಚುನಾವಣೆಯ ಭಾಷಣಗಳಲ್ಲಿ
ಮರುಕಳಿತ್ತಿರುವ ಹಿನ್ನೆಲೆಯಲ್ಲಿ ಇದರ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬಹುದು.
ಈಚೆಗೆ ಪ್ರಕಟಗೊಂಡಿರುವ ಸ್ಟೇಟ್ ಆಫ್ ಅವರ್ ಸಿಟೀಸ್ ಎನ್ನುವ ಉಪಯುಕ್ತ ಮಾಹಿತಿ
ಪುಸ್ತಕದಲ್ಲಿ ಕರ್ನಾಟಕದ ಹದಿನೈದು ನಗರಗಳ ಮಾಹಿತಿಯಿದೆ. ಈ ಮಾಹಿತಿಯಿಂದ ನಾವು ನಗರದ ಬದಲಾಗುತ್ತಿರವ
ಮುಖಗಳನ್ನು ಗ್ರಹಿಸಬಹುದು. ಉತ್ಪಾದನಾ ಕ್ಷೇತ್ರದಿಂದ ಸೇವಾ ಕ್ಷೇತ್ರಕ್ಕೆ ವಾಲುತ್ತಿರುವ ಬೆಂಗಳೂರಿನ
ಯಾನವನ್ನು ನಿಖರವಾಗಿ ಗ್ರಹಿಸಲು ಈ ಮಾಹಿತಿಯಿಂದ ಸಾಧ್ಯವಾಗುತ್ತಿಲ್ಲ. ಶೇಕಡ 63 ಉದ್ಯೋಗಿಗಳು
ಸೇವೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರಾದರೂ, ಅದರಲ್ಲಿ ಬೌದ್ಧಿಕ, ತಾಂತ್ರಿಕ,
ಅರೆತಾಂತ್ರಿಕ, ದೈಹಿಕ ಶ್ರಮದ ಆಧಾರವಾಗಿ ಆಗುತ್ತಿರುವ ಬದಲಾವಣೆಗಳ ವಿವರಗಳು ಇಲ್ಲ. ಆ ಮಾಹಿತಿ
ಲಭ್ಯವೇ ಇಲ್ಲ, ಹಾಗೂ ಮುಂದಿನ ದಿನಗಳಲ್ಲಿ ಇಂಥ
ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಲೇಖಕರು ಬರೆಯುತ್ತಾರೆ. ಆದರೆ ಸಕಲ ನಗರಗಳಲ್ಲೂ ಉತ್ಪಾದನೆಯ
ಮಹತ್ವ ಕಡಿಮೆಯಾಗಿ ಉದ್ಯೋಗಾವಕಾಶಕ್ಕೆ ಸೇವಾಕ್ಷೇತ್ರದ ಮಹತ್ವವೇ ಹಚ್ಚಾಗಿದೆ.
ಉತ್ಪಾದನಾ
ಕ್ಷೇತ್ರದಲ್ಲಿಯೂ ಮೂಲಭೂತ ಬದಲಾವಣೆಗಳಾಗುತ್ತಿದೆ. ಅದಕ್ಕೆ ಸೇವಾ ಕ್ಷೇತ್ರದ ದೇಣಿಗೆಯೂ ಇದೆ.
ಒಟ್ಟಾರೆ ಅದೂ ಬೌದ್ಧಿಕತೆಯತ್ತ ವಾಲುತ್ತಿರುವುದನ್ನು ನಾವು ಗುರುತಿಸಬೇಕು. ಉತ್ಪಾದನಾ
ಕ್ಷೇತ್ರದಲ್ಲಿ ಬೆಳೆದಿರುವ ತಾಂತ್ರಿಕತೆ ಮತ್ತು ರೊಬೋಟಿಕ್ಸ್ ನ ಕೊಡುಗೆಯಿಂದಾಗಿ ಮುಂಚಿಗಿಂತಲೂ
ಕಡಿಮೆ ಕಾರ್ಮಿಕರನ್ನು ಬಳಸಿ ಹೆಚ್ಚಿನ ಉತ್ಪಾದಕತೆಯನ್ನು ಪಡೆಯಬಹುದು. ಈ ತಾಂತ್ರಿಕತೆಯ
ಫಲವಾಗಿಯೇ ನಿಮಗೆ ಇಂದು ಕಾರು-ಸ್ಕೂಟರ್ ರಿಪೇರಿಯಂಗಡಿಗಳೂ, ಸೈಕಲ್ ಷಾಪುಗಳೂ ಕಾಣಿಸುವುದಿಲ್ಲ.
ಬದಲಿಗೆ ಕಂಪನಿಗಳ ಅಧಿಕೃತ ಷೋರೂಮುಗಳ ಮುಂದೆ ಸರ್ವಿಸಿಂಗ್ ಮಾಡಿಸಲು ನಿಂತಿರುವ ಜನರ ಸಾಲು ಕಾಣಿಸುತ್ತದೆ.
ಅರ್ಥಾತ್ ಒಂದು ಸ್ಕೂಟರ್ ರಿಪೇರಿಯಂಗಡಿಯಲ್ಲಿ
ಸಹಾಯಕನಾಗಿ ಕೆಲಸ ಗಿಟ್ಟಿಸಬೇಕಿದ್ದರೂ ತುಸು ವಿದ್ಯೆ ಮತ್ತು ತರಬೇತಿಯಿಲ್ಲದೇ ಅದು
ಸಾಧ್ಯವಿಲ್ಲ. ಒಂದು ಸ್ಕ್ರೂಡ್ರೈವರ್ ಮತ್ತು ಸುತ್ತಿಗೆಯಿಂದ ರಿಪೇರಿಯಾಗುತ್ತಿದ್ದ "ಹಮಾರಾ ಬಜಾಜ್"ನ ದಿನಗಳು ಮುಗಿದಿವೆ.
ದೇಶದಾದ್ಯಂತ ಸೇವಾಕ್ಷೇತ್ರ
ಉತ್ಪಾದನಾ ಕ್ಷೇತ್ರಕ್ಕಿಂತ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಕರ್ನಾಟಕದ ಕಥೆಯೂ ಅದೇಯೇ. ಮಿತ
ಬೆಳವಣಿಗೆಯ ಉತ್ಪಾದನಾ ಕ್ಷೇತ್ರದಲ್ಲಿಯೂ ಉದ್ಯೋಗಾವಕಾಶಗಳು ತಾಂತ್ರಿಕತೆಯಿಂದಾಗಿ ಬೌದ್ಧಿಕವೂ,
ಸಂಖ್ಯಾಮಿತಿಯಿಂದ ಕೂಡಿದವೂ ಆಗಿವೆ. ದೈಹಿಕ ಶ್ರಮವನ್ನೇ ಆಧಾರವಾಗಿಟ್ಟುಕೊಂಡು ಬದುಕಿದ್ದ ಕಾರ್ಮಿಕ
ವರ್ಗಕ್ಕೆ ಈಗ ಕಟ್ಟಡ ಕಾರ್ಯ ಮತ್ತು ಸಾರಿಗೆ ವ್ಯವಸ್ಥೆಯೇ ಗತಿಯಾಗಿದೆಯೇನೋ. ಸೇವಾಕ್ಷೇತ್ರದಲ್ಲಿನ
ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಾ ಹೋಗುತ್ತಿದ್ದಂತೆ ಅದಕ್ಕೆ ಅವಶ್ಯಕವಾದ ತರಬೇತಿ ಮತ್ತು
ತಯಾರಿಯನ್ನು ಮಾಡಿಕೊಳ್ಳದಿದ್ದರೆ ಆ ಉದ್ಯೋಗಾವಕಾಶಗಳು ತಪ್ಪಿಹೋಗುತ್ತವೆ. ಕೆಲವು
ಕ್ಷೇತ್ರಗಳಲ್ಲಿ – ಮುಖ್ಯತಃ ಸೆಕ್ಯೂರಿಟಿ, ಹಾಸ್ಪಿಟಾಲಿಟಿ, ಮತ್ತು ರೀಟೈಲ್ ಉದ್ಯಮಗಳಲ್ಲಿ
ಸ್ಥಳೀಯರು ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ನಾವು ಯೋಚಿಸಿ ನೋಡಬೇಕು.
ನಮಗಿಷ್ಟವಿರಲೀ ಇಲ್ಲದಿರಲೀ ಜನರನ್ನು ಓಲೈಸುವ ಈ ಸೇವಾಕ್ಷೇತ್ರಗಳಲ್ಲಿ ಇಂಗ್ಲೀಷಿನ ಭಾಷಾಪ್ರಯೋಗದ
ಅವಶ್ಯಕತೆಯನ್ನು ನಾವು ಅಲ್ಲಗಳೆಯುವಂತಿಲ್ಲ.
ಇದರಿಂದಾಗಿ ಬೆಂಗಳೂರಿನಂತಹ
ನಗರಕ್ಕೆ ಆಗಿರುವ ಬದಲಾವಣೆಗಳೇನು? ಅದನ್ನು ಗ್ರಹಿಸುವುದು ಜಟಿಲವಾದರೂ ಒಂದು ಉದಾಹರಣೆ ನಮ್ಮ ಕಣ್ಣಿಗೆ ಹೊಡೆಯುತ್ತದೆ. ಹಿಂದೆ ಮದ್ಯ
ತಯಾರಿಸುವ ಫ್ಯಾಕ್ಟರಿ ಯುಬಿ, ರಾಜಾಜಿನಗರದ ಬಟ್ಟೆಗಿರಣಿ ರಾಮ್ ಕುಮಾರ್ ಮಿಲ್ಲು ಇಂಥವುಗಳು
ನಗರಕ್ಕೆ ಹತ್ತಿರವಾಗಿ- ನಗರದೊಳಗೇ ಇದ್ದುವು. ಅವು ಕಾರ್ಮಿಕರಿಗೆ ಹತ್ತಿರವಾಗಿದ್ದುವು. ಈಗ ಇದೇ
ಜಾಗದಲ್ಲಿ ಯುಬಿ ಸಿಟಿಯಂತಹ ಶ್ರೀಮಂತಿಕೆಯನ್ನು ಮೆರೆಯುವ ಮಾಲುಗಳು ಬಂದಿವೆ. ಆ
ಮಿಲ್ಲುಗಳಲ್ಲಿದ್ದಷ್ಟೇ ಉದ್ಯೋಗಾವಕಾಶ ಆ ಮಾಲುಗಳಲ್ಲೂ ಇವೆಯೆಂದು ಒಂದು ಕ್ಷಣಕ್ಕೆ ನಂಬೋಣ. ಆದರೆ
ಮಿಲ್ಲುಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮಾಲುಗಳಲ್ಲಿ ಉದ್ಯೋಗಾವಕಾಶ ದೊರೆಯಬಹುದೇ? ಮಾಲುಗಳಲ್ಲಿ
ಕೆಲಸಮಾಡುವವರು ಎಲ್ಲಿಂದ ವಲಸೆ ಬಂದಿರಬಹುದು? ಹಾಗೂ ಮಿಲ್ಲುಗಳಲ್ಲಿ ಕೆಲಸ ಮಾಡುತ್ತಿದ್ದವರು ಎಲ್ಲಿ ಹೋಗಿರಬಹುದು? ಈ ಪ್ರಶ್ನೆಗಳನ್ನು
ಕೇಳಿಕೊಂಡಾಗ ನಗರದಲ್ಲಿನ ಒಳ ಆತಂಕಗಳ ಪದರಗಳು ನಮಗೆ ಗೋಚರಿಸುತ್ತವೆ.
ತಲೆತಲಾಂತರದಿಂದ ಒಂದು ಜಾಗದಲ್ಲಿ ಇದ್ದವರು ಮನೆಯನ್ನು ಬಿಟ್ಟುಕೊಟ್ಟು ಎತ್ತಂಗಡಿಯಾಗಲು
ಸಿದ್ಧರಿಲ್ಲ ಎನ್ನುವ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ಆದರೆ ತಲೆತಲಾಂತರದಿಂದ ಇದ್ದ
ಉದ್ಯೋಗಾವಕಾಶವೇ ಎತ್ತಂಗಡಿಯಾದರೆ, ಪಕ್ಕದಲ್ಲಿದ್ದ ಫ್ಯಾಕ್ಟರಿಯೇ ನಾಪತ್ತೆಯಾದರೆ? ಅಥವಾ ಫ್ಯಾಕ್ಟರಿಗೆ
ಹೋಗಲು ಮೂರು ತಾಸು, ಬರಲು ಮೂರು ತಾಸಾದರೆ? ಸೈಕಲ್ಲಿನಲ್ಲಿ ಹೋಗಿಬರುತ್ತಿದ್ದ ಕೆಲಸಕ್ಕೆ ಬದಲಾಗಿ ಬಸ್ ಪಾಸಿಗೆ ಸಾವಿರ ಗಟ್ಟಲೆ
ಖರ್ಚಾದರೆ?
ಅಮೆರಿಕದ ಸ್ಥಳೀಯ ಕಾರ್ಮಿಕ ವರ್ಗದ ಆತಂಕವನ್ನು ಒಬಾಮಾ ಗ್ರಹಿಸಿ ಅವರ ಆರ್ಥಿಕ- ಸಾಮಾಜಿಕ
ವ್ಯವಸ್ಥೆಗೆ ಸವಾಲಾಗಿ ನಮ್ಮ ಬೆಂಗಳೂರು ನಿಂತಿದೆ ಎನ್ನುತ್ತಿರುವಾಗ, ನಮ್ಮದೇ ನಗರದಲ್ಲಿನ
ಒಳತಲ್ಲಣಗಳನ್ನು ನಾವು ಗ್ರಹಿಸುವುದರಲ್ಲಿ ವಿಫಲರಾಗಿದ್ದೇವೆಯೇ? ಎಂದು ಆತ್ಮಾವಲೋಕನ
ಮಾಡಿಕೊಳ್ಳಬೇಕು. ಈಶಾನ್ಯ ಭಾರತದ ಜನ ಗುಳೆ ಹೋದಾಗ ಬೆಂಗಳೂರಿನಲ್ಲಿ ಅವರುಗಳ ಗೈರುಹಾಜರಿಯಿಂದ ಸೇವಾಕ್ಷೇತ್ರಕ್ಕಾದ
ತಲ್ಲಣಕ್ಕೆ ಸಮಾನವಾಗಿಯೇ, ಆ ರಾಜ್ಯಗಳಲ್ಲೂ ಆಗಿತ್ತು ಎನ್ನುವುದನ್ನು ನಾವು ಗಮನಿಸಬೇಕು. ಆದರೆ ಆ
ತಲ್ಲಣದ ರೂಪುರೇಷೆ - ಒಳಬಂದವರಿಗೆ ಉದ್ಯೋಗಾವಕಾಶವಿಲ್ಲ ಎನ್ನುವ ತಲ್ಲಣವಾಗಿ
ಪರಿವರ್ತಿತಗೊಂಡಿತ್ತು. ಅಂಥದೇ ತಲ್ಲಣ ಇಲ್ಲಿಯೂ, ಸ್ಥಳೀಯ ಉದ್ಯೋಗಾವಕಾಶಗಳು ತಪ್ಪಿಹೋದಾಗಲೂ
ಆಗುತ್ತದೆ. ಎಲ್ಲ ಉದ್ಯೋಗಗಳೂ ಏಕಕಾಲಕ್ಕೆ ಮಾಯವಾಗುವುದಿಲ್ಲವಾದ್ದರಿಂದ, ಆ ತಲ್ಲಣ ನಮ್ಮ
ಮುಖಕ್ಕೆ ಹೊಡೆದಂತೆ ಕಾಣುವುದಿಲ್ಲ, ಆದರೆ ಅದು ಒಳಗೊಳಗೇ ಬೆಳೆಯುತ್ತಾ ಹೋಗುತ್ತಿದೆ.
ಇದರ ಅರ್ಥ ನಾವು ಬೇರೆ ಭಾಷೆಯ ಚಿತ್ರಗಳನ್ನು ಡಬ್ ಮಾಡಬಾರದು, ಬೇರೆ ಜನರನ್ನು ಇಲ್ಲಿಗೆ
ಸ್ವಾಗತಿಸ ಬಾರದು, ಎಲ್ಲವನ್ನೂ ಸ್ಥಳೀಕರಿಸಬೇಕು ಎಂದೇನೂ ಅಲ್ಲ. ಬದಲಿಗೆ ನಾವು ಮಾಡುವ
ಚಿತ್ರಗಳನ್ನು ಬೇರೆ ಭಾಷೆಗಳವರು ಯಾಕೆ ಡಬ್ ಮಾಡುತ್ತಿಲ್ಲ – ನಮ್ಮ ಚಿತ್ರಗಳು ಅಷ್ಟು
ಕಳಪೆಗೆಟ್ಟಿವೆಯೇ? ಎನ್ನುವಂಥಹ ಪ್ರಶ್ನೆಗಳನ್ನು ಕೇಳುವತ್ತ ನಮ್ಮನ್ನು ಪ್ರೇರೇಪಿಸಬೇಕು. ನಮ್ಮಲ್ಲಿರುವ
ಸಂಪನ್ಮೂಲಗಳನ್ನೂ, ಜನರ ಪ್ರತಿಭೆಯನ್ನೂ ನಾವು ಸಫಲವಾಗಿ ಹೇಗೆ ಉಪಯೋಗಿಸಬಹುದು ಹಾಗೂ
ಬದಲಾಗುತ್ತಿರುವ ಪ್ರಪಂಚದ ಸ್ಥಿತಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವ ಸವಾಲುಗಳನ್ನು
ನಾವು ಎದುರಿಸಬೇಕಾಗಿದೆ. ಇದರಲ್ಲಿ ನಮ್ಮ ಕಾರ್ಮಿಕ ಜಗತ್ತಿಗೆ ಅವಶ್ಯವಾದ ತರಬೇತಿಯೂ ಸೇರಿದೆ.
ಹಾಗೂ ದೂರದ ಫ್ಯಾಕ್ಟರಿಗಳಿಗೆ ಪ್ರಯಾಣ ಬೆಳೆಸುವ ಕಾರ್ಮಿಕರಿಗೆ ಟೆಕ್ಕಿಗಳಿಗೆ ಸಿಗುವಂತಹ ಸಾರಿಗೆ
ವ್ಯವಸ್ಥೆಯ ಸಮಾನತೆಯ ಬೇಡಿಕೆಯೂ ಸೇರಿದೆ.
No comments:
Post a Comment