Sunday, August 19, 2012

ಮಕ್ಕಳ ಶಾಲೆಗಳೂ, ಗಿಟ್ಟದ ವ್ಯಾಪಾರವೂ


ಇದು ನಮ್ಮ ಸರಕಾರಿ ಶಾಲೆ/ ಶಾಲೆಗಿರುವುದೆ ನಾಲ್ಕು ಮೂಲೆ
ಹಂಚಿರುವ ಮೂಲೆಯಲ್ಲಿ ಮೇಷ್ಟ್ರು ಕೂರುವರು/ ಉಳಿದ ಕಡೆಗಳಲ್ಲಿ ನೀರು ಸೋರುವುದು
-ಎಚ್.ಡುಂಡಿರಾಜ್.





ಇಂಥ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಯಾವ ಪೋಷಕರಾದರೂ ಎರಡು ಬಾರಿ ಯೋಚಿಸುವುದು ನಿಜವೇ. ಅಥವಾ ಶಾಲೆಗೆ ಶಿಕ್ಷಕರ ಹಾಜರಾತಿಯೇ ಕಡಿಮೆಯಿದೆ ಎಂದುಕೊಳ್ಳೋಣ, ಅಥವಾ ಶಿಕ್ಷಕರೇ ಇಲ್ಲವೆಂದುಕೊಳ್ಳೋಣ, ಅಥವಾ ಮಧ್ಯಾಹ್ನದ ಬಿಸಿಯೂಟಕ್ಕೆ ಬದಲು ಹಳಸಲು ಊಟ ಸಿಗುತ್ತಿದೆ ಅಂದುಕೊಳ್ಳೋಣ, ಅಥವಾ ಶಾಲೆ ಮಕ್ಕಳಿರುವ ಜಾಗದಿಂದ ಬಹುದೂರದಲ್ಲಿದೆ ಎಂದುಕೊಳ್ಳೋಣ, ಅಥವಾ....

ಸಮಸ್ಯೆಗಳು ಕಡಿಮೆಯೇನಲ್ಲ. ಈ ರೀತಿಯ ಸಮಸ್ಯೆಗಳನ್ನು ವ್ಯಾಪಾರಿಗಳ ಮುಂದಿಟ್ಟಾಗ ಇದು ಗಿಟ್ಟದ ವ್ಯಾಪಾರ, ಇದನ್ನು ಮುಚ್ಚಿಬಿಡೋಣ ಎಂದು ಹೇಳುವುದು ಸಹಜ. ಅಥವಾ ಎರಡು ಶಾಲೆಗಳನ್ನು ಒಂದರಲ್ಲಿ ವಿಲೀನ ಮಾಡಿ ನೋಡೋಣ ಎನ್ನಬಹುದು. ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ಈ ಪರಿಭಾಷೆ ನಮಗೆ ಕೇಳಿಸುತ್ತಿರುವುದು ಸರಕಾರದಿಂದ! ನಿಧಾನವಾಗಿ ಸರಕಾರದೊಳಕ್ಕೆ ಹಾಸುಹೊಕ್ಕಿರುವ ಮೆಕಿನ್ಸೀಕರಣವು ನಮಗೆ ಕ್ರಮಕ್ರಮೇಣ ಕಾಣಿಸುತ್ತಿದೆ.

ಮೆಕಿನ್ಸೀಕರಣ ಎಂದರೇನು? ಸರಕಾರವನ್ನೂ ಒಂದು ಜವಾಬ್ದಾರಿಯ ಮಾಪದಂಡದಲ್ಲಿ ಅಳೆದು ಅದರ ಲೇನ್-ದೇನ್ ಗಳನ್ನು ಪರೀಕ್ಷಿಸುವುದು ಈ ಪರಿಭಾಷೆ. ಇದು ಒಂದು ಮಟ್ಟದಲ್ಲಿ ಸ್ವಾಗತಾರ್ಹವಾದರೂ ಆ ವಿಚಾರಧಾರೆಯ ಬಗ್ಗೆ ನಾವು ಎಚ್ಚರದಿಂದಿರಬೇಕು. ಸರಕಾರ ತನ್ನ ಕರ್ತವ್ಯದ ಬಗ್ಗೆ ಜನತೆಗೆ ಜವಾಬುಗಳನ್ನು ನೀಡಬೇಕು ತನ್ನ ಕೆಲಸದ ಪ್ರಗತಿಪತ್ರವನ್ನು ತಯಾರಿಸಬೇಕು ಎನ್ನುವ ಧಾರೆ ಸರಿಯಾದದ್ದಾದರೂ ಆ ಜವಾಬುಗಳನ್ನು ಮಾರುಕಟ್ಟೆಯ ಪರಿಭಾಷೆಗೆ ಶರಣಾಗಿಸುವುದು ಸರಿಯೇ? ಸೋಮಾರಿ ಸರಕಾರಗಳು ಈ ಪರಿಭಾಷೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆಯೇ?

ಚೀನಾದ ಚಿಂತಕಿ, ಲೇಖಕಿ ಜಿಯಾನಿಂಗ್ ಜಾ ಮಾರುಕಟ್ಟೆಯ ಪರಿಭಾಷೆ ನಮ್ಮಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎನ್ನುವುದರ ಬಗ್ಗೆ ಟಿಪ್ಪಣಿ ಮಾಡುತ್ತಾ – ಸಂಸಾರ, ಬಂಧು ಬಳಗ ಎಂದು ಕರೆಯುತ್ತಿದ್ದುದನ್ನು ಇಂದು ಸೋಷಿಯಲ್ ಕ್ಯಾಪಿಟಲ್ (ಸಾಮಾಜಿಕ ಇಡುವಳಿ) ಎಂದೂ, ಉದ್ಯೋಗಿಗಳನ್ನು ಹ್ಯೂಮನ್ ರಿಸೋರ್ಸಸ್ (ಮಾನವ ಸಂಪನ್ಮೂಲ) ಎಂದೂ, ಮತ್ತು ಉತ್ತೇಜನವನ್ನು ಇನ್ಸೆಂಟಿವ್ (ಪ್ರಲೋಭನೆ?) ಎಂದೂ ಕರೆಯುವ, ಹೊಸ ಪರಭಾಷೆಯ ರೀತಿಯನ್ನು ಗುರುತಿಸುತ್ತಾರೆ. ಮಾರುಕಟ್ಟೆಯ ಪರಿಭಾಷೆ ದಿನಜೀವನದಲ್ಲಲ್ಲದೇ ಸರಕಾರಕ್ಕೂ ಹೊಕ್ಕಾಗ ಅದನ್ನು ಮೆಕಿನ್ಸೀಕರಣವೆಂದು ಕರೆಯಬಹುದು. ಉಪಯೋಗಿ ಶುಲ್ಕ, ವಯಬಲಿಟಿ, ಇತ್ಯಾದಿ ಮಾತುಗಳೇ ಸರಕಾರಕ್ಕೆ ಮುಖ್ಯವಾದಾಗ ಜವಾಬ್ದಾರಿ ಹಿನ್ನೆಲೆಗೆ ಅಟ್ಟಿದಂತಾಗುತ್ತದೆ. ಮಾರಕಟ್ಟೆಯ ಪರಿಭಾಷೆ ನಮ್ಮನ್ನು ಆವರಿಸಿದಂತೆಯೇ, ಸಂಕ್ಷೇಮದ ಪರಿಭಾಷೆ ಬಿಟ್ಟುಕೊಳ್ಳುತಾತಾ
ಹೋಗುತ್ತದೆ.

ಇಂತಿಷ್ಟು ವಿದ್ಯಾರ್ಥಿಗಳಿಲ್ಲದಿದ್ದರೆ ಶಾಲೆಗಳನ್ನು ನಡೆಸುವುದು ಗಿಟ್ಟುವ ಮಾತಲ್ಲ ಎನ್ನುವ ಭಾಷೆಯನ್ನು ಸರಕಾರ ಆಡಿದ ಕೂಡಲೇ ನಾವು ಎಚ್ಚೆತ್ತುಕೊಳ್ಳಬೇಕು. ಸರಕಾರಗಳಿರುವುದೇ ಗಿಟ್ಟದ ವ್ಯಾಪಾರವನ್ನು ಮಾಡಲು. ನಾವುಗಳು ತೆರಿಗೆ ಕೊಡುವಾಗ ಅದರಿಂದ ಏನು ಗಿಟ್ಟುತ್ತದೆ ಎಂದು ಕೇಳುವುದಿಲ್ಲ. ಸರಕಾರ ಸ್ಪಷ್ಟವಾಗಿ ಹೇಳುವುದೂ ಇಲ್ಲ. ಬಡವರ ಶಾಲೆಗಳು ಗಿಟ್ಟುವ ವ್ಯಾಪಾರವಾಗುವುದಿದ್ದರೆ ಈಗಾಗಲೇ ಅಲ್ಲಿ ಖಾಸಗೀ ರಂಗದ ತಾಂಡವವನ್ನು ನಾವು ನೋಡಿರುತ್ತಿದ್ದೆವು.

ಸರಕಾರಿ ಶಾಲೆಗಳ ಮಹತ್ವವನ್ನು ಯಾವುದೇ ರೀತಿಯಿಂದ ನಾವು ಕಡೆಗಣಿಸಬಾರದು. ಅವುಗಳ ಜೊತೆ ಕೆಲಸ ಮಾಡಿದಾಗ ಯಾವರೀತಿಯ ಬದಲಾವಣೆ ಆಗಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಮಂಡಲದಲ್ಲಿ ಎಂ.ವಿ.ಫೌಂಡೇಶನ್ ನಡೆಸಿರುವ ನಿರಂತರ ಕೆಲಸದ ಫಲವಾಗಿ ಸರಕಾರಿ ಶಾಲೆಗಳಲ್ಲಿ ಅದಮ್ಯ ಚೈತನ್ಯ ತುಂಬಿದೆ. ಅಲ್ಲಿ ಆಗಿರುವ ಜಾದೂ ಇಷ್ಟೇ: ಸರಕಾರಿ ಶಾಲೆಗಳು ವಿದ್ಯಾ ಇಲಾಖೆಯಡಿಯಿದ್ದರೂ, ಗ್ರಾಮ ಪಂಚಾಯ್ತಿಗಳನ್ನು ಈ ಕಲಸದಲ್ಲಿ ಜೊಡಿಸುವುದರಿಂದಾಗಿ ಅಲ್ಲಿನ ಶಾಲೆಗಳಿಗೆ ಹೊಸ ಹುರುಪು ಬಂದಿವೆ. ಶಾಲೆಯಲ್ಲಿ ಮಾಸ್ತರು ಇಲ್ಲವೇ? ಸ್ಥಳೀಯರ ದೇಣಿಗೆಯ ಮೂಲಕ ತಾತ್ಕಾಲಿಕ ಮಾಸ್ತರರನ್ನು ನಿಯಮಿಸಿ. ಮಕ್ಕಳಿಗೆ ಶೌಚಾಲಯವಿಲ್ಲವೇ? – ಪಕ್ಕದಲ್ಲಿ ಕಟ್ಟಿರುವ ರಿಸಾರ್ಟಿನ ಮಾಲೀಕರಿಂದ ಅದಕ್ಕೆ ಮರಮ್ಮತ್ತು ಮಾಡಿಸುವ ಕಾರ್ಯಕ್ರಮ ಮಾಡಿ. ಗ್ರಾಮಪಂಚಾಯ್ತಿಯ ಗೋಡೆಯ ಕಪ್ಪು ಫಲಕದ ಮೇಲೆ ಗ್ರಾಮದ ಮಕ್ಕಳ ಸಂಖ್ಯೆ, ಅಂಗನವಾಡಿಯಲ್ಲಿರುವ ಮಕ್ಕಳ ಸಂಖ್ಯೆ, ಸರಕಾರಿ ಹಾಗೂ ಖಾಸಗೀ ಪ್ರಾಥಮಿಕ ಶಾಲೆಗಳಿಗೆ ದಾಖಲಾಗಿರುವ ಮಕ್ಕಳ ಸಂಖ್ಯೆ ನಿಮಗೆ ಸಿಗುತ್ತದೆ. ಊರ ಶಾಲೆಯ ಬಗ್ಗೆ ಪಂಚಾಯ್ತಿ ಹೆಮ್ಮೆ ಪಡುವಹಾಗಾದರೆ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರಗಳನ್ನು ತಕ್ಕಮಟ್ಟಿಗೆ ಕಂಡುಕೊಳ್ಳುವ ಹಾಗಾದರೆ, ಶಾಲೆಗಳಲ್ಲಿನ ಹಾಜರಾತಿಯೂ ಹೆಚ್ಚುತ್ತದೆ, ಶಿಕ್ಷಕರ ಹುರುಪೂ ಹೆಚ್ಚುತ್ತದೆ. ಹಾಗೂ ಯಾವುದನ್ನೂ ಮುಚ್ಚುವ ಮುನ್ನ ನಾಲ್ಕು ಬಾರಿ ಯೋಚಿಸುವಂತಾಗುತ್ತದೆ.

ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲವೆಂದರೆ ಶಾಲೆಯ ಅವಶ್ಯಕತೆಯಿಲ್ಲ ಎನ್ನುವ ನಿರ್ಧಾರಕ್ಕೆ ಬರುವ ಮುನ್ನ – ಮಕ್ಕಳು ಇಲ್ಲಿಗೆ ಏಕೆ ಬರುತ್ತಿಲ್ಲ ಎನ್ನುವುದನ್ನು ಕೇಳಬೇಕು. ಮಕ್ಕಳನ್ನು ಶಾಲೆಗೆ ಕರೆಯಿಸಿಕೊಳ್ಳುವುದು ಹೇಗೆಂದು ಯೋಚಿಸಬೇಕು. ಮೂಲಭೂತವಾಗಿ ಸರಕಾರ ಯಾವುದೇ ಶಾಲೆಯನ್ನು ಮುಚ್ಚುವ ಮುನ್ನ ಎರಡು ಪ್ರಶ್ನೆಗಳಿಗೆ ಜವಾಬನ್ನು ನೀಡಲೇ ಬೇಕು – 1. ಶಾಲಾಕ್ಷೇತ್ರದಲ್ಲಿ ಶಿಕ್ಷಕರ ಹುದ್ದೆಗಳು ಎಷ್ಟು ಖಾಲಿಯಿವೆ, ಅದನ್ನು ತುಂಬಲು ಮಾಡಿದ ಪ್ರಯಾಸವೇನು? 2. ಶಾಲೆಗಳಲ್ಲಿ ಶಿಕ್ಷಕರ ಹಾಜರಿಯ ಸರಾಸರಿ ಎಷ್ಟಿದೆ? ಈ ಎರಡೂ ಪ್ರಶ್ನೆಗಳಿಗೂ ಮೂಲಭೂತವಾದ ಸಮಾಧಾನವನ್ನು ಸರಕಾರ ನೀಡಬೇಕು.

ವಿದ್ಯಾಕ್ಷೇತ್ರದಲ್ಲಿ ಖಾಸಗೀ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬರುತ್ತಿವೆ, ನಿಜ. ವಿದ್ಯಾ ಹಕ್ಕು ಕಾಯಿದೆಯಡಿಯಲ್ಲಿ ಅಲ್ಲೊಂದಿಷ್ಟು ಸ್ಥಾನಗಳೂ ಬಡವರಿಗಾಗಿ ಮೀಸಲಿಡಲಾಗುವುದು. ಅದೂ ನಿಜ. ಆದರೂ ಸರಕಾರದ ಜವಾಬ್ದಾರಿಯೇನೂ ಕಡಿಮೆಯಾಗುವುದಿಲ್ಲ. ಖಾಸಗೀ ಸಂಸ್ಥೆಗಳಲ್ಲಿ ಎರಡು ವಿಧದ ಸಂಸ್ಥೆಗಳಿವೆ. ದೊಡ್ಡ ಉದ್ಯೋಗಪತಿಗಳಿಂದ ತೆರೆಯಲ್ಪಡುವ ಎಲಿಟಿಸ್ಟ್/ಶ್ರೀಮಂತರ ಶಾಲೆಗಳು ಒಂದು ನಿಟ್ಟಿನದು. ಆ ಬಗ್ಗೆ ನಾವು ಯೋಚಿಸಲೂ ಬಾರದು. ಅದಕ್ಕೆ ಅದರದೇ ಆದ ವ್ಯಾಪಾರಿ ಮೌಲ್ಯಗಳೂ, ಗ್ರಾಹಕರೂ ಇದ್ದಾರೆ. ಆದರೆ ಎರಡನೆಯದು ಸಣ್ಣ ಮಟ್ಟದ ಇಂಗ್ಲೀಷು ಕಲಿಸುತ್ತೇವೆ, ಮಕ್ಕಳನ್ನು ಬುದ್ಧಿವಂತರನ್ನಾಗಿಸುತ್ತೇವೆ ಎನ್ನುವ ಬಡವರ ಕೈಗೆಟುಕಿಸುವಂತೆ ಕಾಣುವ ಪುಟ್ಟ ಪುಟ್ಟ ಶಾಲೆಗಳು. ಈ ಶಾಲೆಗಳ ಗುಣಮಟ್ಟದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಅವರನ್ನು ಪ್ರಶ್ನಿಸುವ ಆತ್ಮವಿಶ್ವಾಸವೂ ಪೋಷಕರಿಗಿರುವುದಿಲ್ಲ.

ಎಂ.ವಿ.ಫೌಂಡೇಶನ್ ನಮಗೆ ತೋರುವ ದಾರಿ ಜನರನ್ನು ಒಳಗೊಳ್ಳುವ ದಾರಿ. ಸರಕಾರೀ ಯಂತ್ರಾಂಗವನ್ನು ನಾವು ಪ್ರಶ್ನಿಸಬಲ್ಲ ಆತ್ಮವಿಶ್ವಾಸವನ್ನು ಹುಟ್ಟಿಸುವ ದಾರಿ. ಪ್ರಜಾಪ್ರಭುತ್ವದ ಅರ್ಥ ಐದು ವರ್ಷಕ್ಕೊಮ್ಮೆ ಓಟು ಹಾಕಿ ಸರಕಾರವನ್ನು ಬದಲಾಯಿಸುವುದರಲ್ಲಿಲ್ಲ. ಸರಕಾರವನ್ನು ನಿರಂತರವಾಗಿ ನಮ್ಮ ವಿಚಾರಗಳ, ಅವಶ್ಯಕತೆಗಳ ಜೊತೆಗೆ ಒಳಗೊಳ್ಳವುದೂ ಪ್ರಜಾಪ್ರಭುತ್ವದ ಕೆಲಸವೇ. ಈ ಕಾಲಾಪವನ್ನು ಸ್ಥಳೀಯ ಸರಕಾರಿ ಅಂಗಗಳಾದ ಪಂಚಾಯ್ತಿ, ಮಕ್ಕಳ ಪೋಷಕರು, ಶಿಕ್ಷಕರನ್ನು ಒಳಗೂಡಿಸಿಕೊಂಡು ಮಾಡಬಹುದಾಗಿದೆ.

ಇದಲ್ಲದೇ ಖಾಸಗಿ ಕ್ಷೇತ್ರದ ಲಾಭಾರ್ಜನೆಯ ಫಲವಾಗಿಯೇ ಬಂದಿರುವ ಅಜೀಂ ಪ್ರೇಂಜಿ ಫೌಂಡೇಶನ್, ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಚಿಂತಿಸಲೆಂದೇ ಇರುವ ಸ್ವಯಂ ಸೇವಾ ಸಂಸ್ಥೆಗಳಾದ ಪ್ರಥಮ್, ಅಕ್ಷರ ಫೌಂಡೆಶನ್ ಗಳಂತಹ ಸಂಸ್ಥೆಗಳನ್ನು ಹಚ್ಚೆಚ್ಚು ಒಳಗೊಂಡು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಯೋಜನೆಯನ್ನು ಸರಕಾರ ಹಾಕಿಕೊಳ್ಳಬೇಕಾಗಿದೆ.

ಏರ್ ಇಂಡಿಯಾದಂತಹ ಸಂಸ್ಥೆಯ ಉದ್ಯೋಗಿಗಳಿಗಾಗಿಯೋ ಅದನ್ನು ಉಳಿಸುವ, ಆ ವ್ಯಾಪಾರದ ಮೇಲೆ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯಲು ತಯಾರಾದ ಕೇಂದ್ರ ಸರಕಾರದ ದುಂದನ್ನು ನಾವು ಹೇಗೆ ಪ್ರಶ್ನಿಸಬೇಕೋ, ವರುಣನ ಕೃಪೆಗಾಗಿ ಕೋಟ್ಯಾನುಗಟ್ಟಲೆ ಹಣ ಸುರಿದು ಪೂಜೆಗಳನ್ನು ಮಾಡಿಸಿದ ರಾಜ್ಯಸರಕಾರವನ್ನು ನಾವು ಹೇಗೆ ಪ್ರಶ್ನಿಸಬೇಕೋ, ಹಾಗೆಯೇ ಶಾಲೆಗಳ ಮೇಲೆ ಅಗತ್ಯವಿದ್ದ ಖರ್ಚನ್ನು ಯಾಕೆ ಮಾಡುತ್ತಿಲ್ಲ ಎನ್ನುವುದನ್ನೂ ಪ್ರಶ್ನಿಸಬೇಕು.

ಸರಕಾರಿ ಶಾಲೆಗಳು ಚೆನ್ನಾಗಿ ನಡೆದ ಶಂಕರಪಲ್ಲಿಯಂತಹ ಜಾಗಗಳಲ್ಲಿ ಬೇರೊಂದೇ ಸವಾಲು ಎದ್ದು ನಿಂತಿದೆ. ಸರಕಾರೀ ಶಾಲೆಗಳು ಭರ್ತಿಯಾಗಿ, ಮಕ್ಕಳು ವಿದ್ಯೆ ಪಡೆಯಲಾರಂಭಿದ್ದು ಒಂದು ಕಥೆಯಾದರೆ, ಸರಕಾರೀ ಶಾಲೆಗಳ ಪ್ರಗತಿಯನ್ನು ನೋಡಿಯೇ ಆ ಜಾಗಕ್ಕೆ ಖಾಸಗೀ ಪ್ರಾಥಮಿಕ ಶಾಲೆಗಳು ಬಂದ ಕಥೆಗಳನ್ನೂ ಕೇಳಿದ್ದೇವೆ. ಉನ್ನತ ವ್ಯಾಸಂಗದಲ್ಲಿ ಐಐಟಿ ಮತ್ತು ಐಐಎಂಗಳು ಹೇಗೆ ಒಂದು ಮಾರುಕಟ್ಟೆಯನ್ನು ಸೃಷ್ಟಿಸಿದವೋ ಹಾಗೆಯೇ ಪ್ರಾಥಮಿಕ ಶಾಲೆಗಳೂ ಮಾಡಬಹುದು ಎನ್ನುವುದು ವೇದ್ಯವಾಗುತ್ತದೆ. ಪ್ರಾಥಮಿಕ ವಿದ್ಯೆಯೂ ಒಂದು "ಮಾರುಕಟ್ಟೆ"ಯಾಗಬಹುದು. ಸರಕಾರೀ ಶಾಲೆಗಳು ಚೆನ್ನಾಗಿಯೇ ನಡೆಯುತ್ತಿದ್ದರೆ – ಪೋಷಕರು ತುಸು ದುಬಾರಿಯಾದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಯಾಕೆ ಕಳುಹಿಸಬಹುದು? ಇದರ ಜವಾಬು ತುಸು ಜಟಿಲವಾದದ್ದು ಹಾಗೂ ಸಣ್ಣ ಅಪಾಯದಿಂದ ಕೂಡಿದ್ದು.

ಮೊದಲು ಕಾರಣವನ್ನು ನೋಡೋಣ. ಖಾಸಗೀ ಶಾಲೆಗಳು ಇಂಗ್ಲೀಷಿನಲ್ಲಿ ಪಾಠ ಮಾಡುವ ಆಮಿಷವನ್ನು ತೋರುತ್ತವೆ. ಶಾಲೆಗೆ ಕಳುಹಿಸುವುದೇ ಆದರೆ ಇಂಗ್ಲೀಷು ಮಾಧ್ಯಮದಲ್ಲಿಯೇ ಯಾಕಾಗಬಾರದು ಎನ್ನಬಹುದಾದ ಪೋಷಕರ ಬಯಕೆಯನ್ನು ಸರಕಾರೀ ಶಾಲೆಗಳು ಈಡೇರಿಸಬೇಕೇ? ಮಾಧ್ಯಮ ನಾಜೂಕಿನ ವಿಷಯ. ನಾಡಿನ ದಿಗ್ಗಜರನೇಕರ ನಂಬಿಕೆ, ಭಾವನೆಗಳು ಮಾಧ್ಯಮದ ಬಗ್ಗೆ ಒಡಗೂಡಿದೆ. ಆದರೂ ಇಂಗ್ಲೀಷು ಭಾಷೆಯ ವಾಸ್ತವವನ್ನು ಸರಕಾರಿ ಶಾಲೆಗಳು ಹೇಗೆ ಎದುರಿಸುತ್ತವೆ?

ಎರಡನೆಯದು ಅಪಾಯದ ವಿಷಯ. ಪೋಷಕರ ಸಮಿತಿಯೂ ಇಲ್ಲದ, ಪಂಚಾಯ್ತಿಯೂ ಇಲ್ಲದೇ ತಮ್ಮಷ್ಟಕ್ಕೆ ತಾವು ನಡೆಸುವ ಈ ಪುಟ್ಟ ಶಾಲೆಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನೆತ್ತಲು ತಾವೇ ಇಲ್ಲವಾಗುತ್ತದೆ. ಹೀಗಾಗಿ ಜವಾಬು ಕೇಳಬಹುದಾದ ಸರಕಾರೀ ಶಾಲೆಗಳನ್ನು ಬಿಟ್ಟುಕೊಡುವುದರಲ್ಲಿ ಅರ್ಥವಿಲ್ಲ.

ವಿದ್ಯೆ, ಆರೋಗ್ಯ, ಗಾಳಿ, ಬೆಳಕು, ನೀರು, ರಸ್ತೆ, ಬಡವ-ಬಲ್ಲಿದನೆನ್ನದೆ ನಮಗೆಲ್ಲರಿಗೂ ಬೇಕಿರುವ ಮೂಲಭೂತ ಸೌಕರ್ಯಗಳು. ಇವು ಮೂಲತಃ ಮಾರಿಕೊಳ್ಳುವ ವಸ್ತುಗಳಲ್ಲ. ಮಾರುಕಟ್ಟೆಯ ಸೂತ್ರ ಹೊಕ್ಕು ಇವುಗಳೂ ಮಾರಾಟಕ್ಕೆ ಬಂದಿರಬಹುದಾದರೂ ಇದರಿಂದ ಪಲಾಯನಗೈಯ್ಯುವ ಸವಲತ್ತು ಸರಕಾರಕ್ಕಿಲ್ಲ. ಇವುಗಳು ಸರಕಾರದ ಜವಾಬ್ದಾರಿ. ಅಷ್ಟೇ.




No comments:

Post a Comment