ರಸ್ತೆಯಮೇಲೆ ನಿಮ್ಮ ವಾಹನ ಓಡಿಸುತ್ತಿರುತ್ತೀರ.
ಚೌಕದಲ್ಲಿ ಪೋಲೀಸು ಪೇದೆ ನಿಂತಿದ್ದಾನೆ. ಅಲ್ಲಿ ಓಡಾಡುತ್ತಲೇ ಅವನು ವಾಹನಗಳ ಸಂಚಾರವನ್ನು
ನಿಯಂತ್ರಿಸುತ್ತಿದ್ದಾನೆ. ದಿನವೂ ನೀವು ಅದೇ ರಸ್ತೆಯಲ್ಲಿಯೇ ಹೋಗುತ್ತೀರಿ. ಆದರೆ ಆ ಪೋಲೀಸು
ಪೇದೆಯ ಮುಖ ನಿಮಗೆ ನೆನಪಾಗುವುದೇ? ಒಬ್ಬ ಪೋಲೀಸು
ಪೇದೆಯಿಂದ ಇನ್ನೊಬ್ಬನನ್ನು ಬೇರ್ಪಡಿಸಿ ಹೇಳಲು ನಿಮಗೆ ಸಾಧ್ಯವೇ? ಪೋಲೀಸರೆಂದರೆ ನಿಮ್ಮ ಮನಸ್ಸಿಗೆ ಬರುವುದು ಅವರ
ಸಮವಸ್ತ್ರವೇ ವಿನಃ ಅವರ ಮುಖವಲ್ಲ. ಅಲ್ಲವೇ?
ನಗರದಲ್ಲಿ ಕಂಡುಬರುವ ಬಡತನವೂ ಹೀಗೇ. ನಮ್ಮ
ಎದುರಿಗಿದ್ದರೂ ನಮಗೆ ಕಾಣದೆಯೇ ಇರುತ್ತದೆ. ಕಾರು ಚಲಾಯಿಸುವ ಡ್ರೈವರು, ಮನೆಕೆಲಸಕ್ಕೆ ಹಾಜರಾಗುವ
ಹೆಣ್ಣುಮಕ್ಕಳು, ಮೆಟ್ರೋ ಕಟ್ಟುವ ಹಳದಿ ಹೆಲ್ಮೆಟ್ ಧರಿಸಿದ ಕಾರ್ಮಿಕರು, ತಳ್ಳುಗಾಡಿಯಲ್ಲಿ
ತರಕಾರಿ ಮಾರಾಟಮಾಡುವವರು, ದಿನನಿತ್ಯ ರಸ್ತೆ ಗುಡಿಸುವವರು, ಹಳೆಯ ಹರಕು ರದ್ದಿಯನ್ನು
ರಸ್ತೆಯಲ್ಲಿ ಹೆಕ್ಕುವವರು... ಇವರೆಲ್ಲಾ ಎಲ್ಲಿ ವಾಸವಾಗಿದ್ದಾರೆ? ಅವರ ನಿತ್ಯಕರ್ಮಗಳಿಗೆ ಉಪಾಯವೇನು? ಅವರಿಗೆ ನೀರು ಎಲ್ಲಿಂದ ಸರಬರಾಜಾಗುತ್ತದೆ? ಅವರ ಮಕ್ಕಳೇನು ಮಾಡುತ್ತಾರೆ ಎನ್ನು ಪ್ರಶ್ನೆಗಳನ್ನು ನಾವುಗಳು
ಕೇಳಿಕೊಂಡಾಗ ನಮಗೆ ಇದ್ದಕ್ಕಿದ್ದ ಹಾಗೆ ಈ ಜನ ಮಧ್ಯಮ-ಮೇಲ್ಮಧ್ಯಮವರ್ಗದವರ ಸೇವಾ ಪರಿಕರಗಳಾಗದೇ,
ವ್ಯಕ್ತಿಗಳಾಗಿ ಕಾಣಿಸುತ್ತಾರೆ. ಅವರ ಜೀವನವೂ ನಮಗೆ ಕಾಣಿಸುತ್ತಾ ಹೋಗುತ್ತದೆ. ಆ ಜೀವನದಲ್ಲಿನ
ಏರುಪೇರು, ಸುಖ-ದುಃಖ, ಕಷ್ಟ-ಸಂಭ್ರಮಗಳೂ ಕಾಣಸಿಗುತ್ತವೆ.
ಈಚೆಗೆ ಪ್ರಕಟಗೊಂಡ ಕ್ಯಾಥರೀನ್ ಬೂ ಎನ್ನುವ ಲೇಖಕಿಯ “Behind the
Beautiful Forevers” ಎನ್ನುವ ಪುಸ್ತಕ ಈ ಇಂಥ
ಜನರ ಜೀವನವನ್ನು ಚಿತ್ರಿಸುತ್ತದೆ. ಬೂ ಮುಂಬಯಿಯ ಅಣ್ಣಾವಾಡಿ ಕೊಳೆಗೇರಿಯಲ್ಲಿ ಹಲವು ವರ್ಷಗಳ ಕಾಲ
ಓಡಾಡಿ ನಡೆಸಿದ ಅಧ್ಯಯನ-ಸಂದರ್ಶನಗಳ ಫಲ ಈ ಪುಸ್ತಕ. ಕಡುಬಡತನದಲ್ಲಿ ಜೀವಿಸುವ, ರದ್ದಿಯಿಂದ ರಸ
ತೆಗೆದು ಮಾರಿ ಅಪಾಯಕಾರಿ ಪರಿಸರದಲ್ಲಿ ವಿಷಾನಿಲವನ್ನು ಉಸಿರಾಡುತ್ತಾ ಬದುಕುತ್ತಿರುವ ಅಸಹನೀಯ
ಬದುಕನ್ನು ಬೂ ಚಿತ್ರಿಸುತ್ತಾರೆ. ಬೂ ಚಿತ್ರಣದಲ್ಲಿ ಆಶಾವಾದದ ಕಿರಣವೇ ಕಾಣುವುದಿಲ್ಲ. ಎಲ್ಲರೂ
ಎಲ್ಲರಿಗೂ ದಗಾ ಹಚ್ಚುವ, ದಿನನಿತ್ಯದ ಬದುಕಿಗೆ ಪಕ್ಕದ ಮನೆಯವರ ಸುಖವನ್ನೇ ಬಲಿ ತೆಗೆದುಕೊಳ್ಳಲು
ಹೇಸದ ಅಮಾನವೀಯತೆ ಈ ಪುಸ್ತಕದಲ್ಲಿ ನಮಗೆ ಕಾಣಿಸುತ್ತದೆ. ನಾಳೆ ಏನಾಗುವುದು ಎಂದು ತಿಳಿಯದಂತಹ
ಪರಿಸ್ಥಿತಿಯಲ್ಲಿ ಇಂದಿನ ಪಾಪ-ಪುಣ್ಯಗಳ ಕಿಮ್ಮತ್ತೇನು? ಎಲ್ಲಿಂದಲೋ ವಲಸೆಬಂದು
ಜೀವನೋಪಾಯಕ್ಕಾಗಿ ಮುಂಬಯಿ ಸೇರಿದ ಜನರ ಅಸಹನೀಯ ಕಥೆಗಳನ್ನು ಬೂ ಬರೆಯುತ್ತಾರೆ.
ಬೂ ಬರೆದ ಈ ಪುಸ್ತಕ ಭಾರತಕ್ಕೆ ಸಂಬಂಧಿಸಿದ್ದಾದರೆ, ಭಾರತೀಯ ಮೂಲದ ಸುಧೀರ್ ಅಲ್ಲಾಡಿ
ವಂಕಟೇಶ್ ಚಿತ್ರಿಸುವ ಮತ್ತೊಂದು ಜಗತ್ತು, ಬೇರೆಯ ರೀತಿಯಲ್ಲಿ ನಮ್ಮ ಕಣ್ಣನ್ನು ತೆರೆಯಿಸುತ್ತದೆ.
ಸುಧೀರ್ ಐದು ವರ್ಷಗಳ ಕಾಲ ಶಿಕಾಗೋದ ರಾಬರ್ಟ್ ಟೈಲರ್ ಹೋಮ್ಸ್ ಎನ್ನುವ ಪ್ರಾಂತದಲ್ಲಿ ಮಾದಕ
ವಸ್ತುಗಳನ್ನು ಮಾರಾಟಮಾಡುವ ಕಪ್ಪು ಜನರ ಭೂಗತ ಗ್ಯಾಂಗುಗಳ ನಡುವೆ ಇದ್ದು ಅವರ ಜೀವನಶೈಲಿಯನ್ನು
ಚಿತ್ರಿಸುತ್ತಾರೆ. ಅಮೆರಿಕದ ಬಡವರ ಕಥೆ ನಮ್ಮ ಕಥೆಗಳಿಗಿಂತ ಭಿನ್ನವೇನೂ ಅಲ್ಲ. ಅಲ್ಲಿ-ಇಲ್ಲಿ
ಚೆಲ್ಲಾಪಿಲ್ಲಿಯಾಗಬಹುದಾಗಿದ್ದ ಬಡವರನ್ನು ಒಂದೆಡೆ "ಕಡಿಮೆ ಆದಾಯದವರ ವಸತಿ
ಸಮೂಹ" ಮಾಡಿ ಕಲೆಹಾಕಿರುವ ಜಾಗದಲ್ಲಿ ಸಣ್ಣ-ಪುಟ್ಟ ಅಪರಾಧ ಎಸಗುವವರೂ, ಮಾದಕ ವಸ್ತುಗಳನ್ನು ಮಾರಾಟ
ಮಾಡುವವರೂ, ಮಾರಾಟ ಮಾಡುವವರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುವವರೂ, ಅಂಥಹವರ
ನಡೆವೆಯಿದ್ದೇ ಕಿರಾಣಿಯಂಡಿಯಿಟ್ಟಿರುವವರೂ, ಅವರ ನಡುವೆಯೇ, ಅವರ ಸಮುದಾಯಕ್ಕೇ ಸೇರಿದ
ಪೋಲೀಸಿನವರೂ ಇದ್ದಾರೆ.
ನಗರಗಳಲ್ಲಿ ಸಹಜವಾಗಿ, ಜೀವನೋಪಾಯದ ಅವಶ್ಯಕತೆಗಳಿಗನುಸಾರ, ಅವಕಾಶವಿದ್ದಲ್ಲಿ ಕೊಳೆಗೇರಿಗಳು –
ಅಥವಾ ಕಡಿಮೆ ಆದಾಯದ ಸಮೂಹಗಳು ಕಾಣಿಸಿಕೊಳ್ಳುತ್ತವೆ. ಕ್ರಮಕ್ರಮೇಣ ಹತ್ತು ಪುಟ್ಟ ಟೆಂಟು-ತಗಡಿನ
ಷೆಡ್ಡಿನಿಂದ ಪ್ರಾರಂಭವಾದ ಈ ವಸತಿ ತನ್ನದೇ ಆಕಾರವನ್ನೂ, ಸಂಸ್ಕೃತಿಯನ್ನೂ, ವ್ಯಕ್ತಿತ್ವವನ್ನೂ
ಪಡೆದುಬಿಡುತ್ತದೆ. ಹೀಗೆ ಪಡೆದ ವ್ಯಕ್ತಿತ್ವವನ್ನು ಸ್ಥಾಯಿಗೊಳಿಸುವ ಪ್ರಕ್ರಿಯೆಯಲ್ಲಿ ಅಲ್ಲಿನ
ನಿವಾಸಿಗಳು ಪ್ರಯತ್ನಿಸುತ್ತಿರುತ್ತಾರೆ. ಆದರೆ ಸರಕಾರಗಳು ಯೋಜನೆಗಳನ್ನು ರೂಪಿಸುವ ರೀತಿಯೇ
ಭಿನ್ನವಾಗಿರುತ್ತದೆ. ಮೊದಲಿಗೆ ಯಾರ ಗಮನಕ್ಕೂ ಬರದ ಹಾಗೆ ನಿಧಾನವಾಗಿ ಇಂಥ ವಸತಿಗಳು
ಬೆಳೆಯುತ್ತವೆ. ಹೀಗೆ ಬೆಳೆದು ದೊಡ್ಡದಾಗಿ ಕೊಳೆಗೇರಿಯಾದಾಗ ಅದನ್ನು ನಿರ್ಮೂಲನ ಮಾಡುವ ಪ್ರಯಾಸ
ನಡೆಯುತ್ತದೆ. ಪುನರ್ವಸತಿಯ ಹೆಸರಿನಲ್ಲಿ ಜನರನ್ನು ಅಲ್ಲಿಂದ ಎತ್ತಂಗಡಿ ಮಾಡಿ ರಾಬರ್ಟ್ ಟೈಲರ್
ಹೋಮ್ಸ್ ನಂತಹ ಬಹುಮಹಡಿಯ ನಿರ್ಮಾಣಕ್ಕೆ ನಮ್ಮ ಸರಕಾರಗಳೂ ಬಡವರನ್ನ ವರ್ಗಾಯಿಸುವ
ಕಾರ್ಯಕ್ರಮವನ್ನು ರೂಪಿಸುತ್ತವೆ.
ರಾಬರ್ಟ್ ಟೈಲರ್ ಹೋಮ್ಸ್ ಇಂಥದೊಂದು ಪುನರ್ವಸತಿಯ ಯೋಜನೆಯ ಪ್ರತೀಕ. ಇಲ್ಲಿ ಭೂಗತ ಜಗತ್ತಿನ
ಹಲವು ಸ್ಥರದ ಜನರು ಇದ್ದರು. ಸುಧೀರ್ ಅಧ್ಯಯನ ಮುಗಿಸುವ ವೇಳೆಗೆ ಸರಕಾರ ಆ ಪುನರ್ವಸತಿ
ಯೋಜನೆಯನ್ನು ನಲಸಮಮಾಡುವ ಹೊಸ ಕಾರ್ಯಕ್ರಮ ಹಾಕುತ್ತದೆ. ಸ್ಥಾಯಿ ಎಂದು ನಂಬಿ ಬದುಕಿದ್ದ ಆ ಜನರ
ಬದುಕು ಮತ್ತೆ ಜಂಗಮಾವಸ್ಥೆಗಿಳಿಯುತ್ತದೆ.
ಸದಾ ಜಂಗಮಾವಸ್ಥೆಗಿಳಿಯಬಹುದಾದ ಅಪಾಯದಲ್ಲಿ ಈ ಜನ ಬದುಕನ್ನು ಕಳೆಯಬೇಕಾಗುತ್ತದೆ.
ಬಡತನದಲ್ಲಿ ಸಿಲುಕಿ ಅದರಿಂದ ತಪ್ಪಿಸಿಬರಲು ಯಾಕೆ ಜನ ಪ್ರಯತ್ನಮಾಡುವುದಿಲ್ಲ ಎನ್ನುವ ಪ್ರಶ್ನೆಗೆ
ಉತ್ತರ ಜನ ಸೋಮಾರಿಗಳು-ಕುಡುಕರು ಅನ್ನುವುದು ಸುತರಾಂ ನಿಜವಲ್ಲ ಎಂದು ಮತ್ತೊಬ್ಬ ಭಾರತೀಯ ಸಂಜಾತ
ಅನಿರುದ್ಧ ಕೃಷ್ಣ ತಮ್ಮ ಅಧ್ಯಯನಗಳ ಆಧಾರದ ಮೇಲೆ ಹೇಳುತ್ತಾರೆ. ಆದರೆ ಈ ಜನ ಇದ್ದಾಗ ಇದ್ಹಾಂಗ
ಇರುವುದು ಯಾಕೆ? ಈ ಜಟಿಲ ಪ್ರಶ್ನೆಗೆ ಒಂದೆರಡು ಸರಳೀಕೃತ ಜವಾಬುಗಳನ್ನು ಕೊಡಲು ನಾವು ಪ್ರಯತ್ನಿಸಬಹುದು.
"ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ 25 ಪ್ರತಿಶತ ಹೆಚ್ಚುತ್ತದೆ" ಎಂಬ ಸಂಶೋಧನಾ ಅಂಕಿಅಂಶವನ್ನು
ಶ್ರೀಮತಿ ಬೇಯ್ಲಿಗೆ ಸುಧೀರ್ ಮಾಹಿತಿಯಾಗಿ ನೀಡುತ್ತಾರೆ. ಈ ಅಂಕಿ ನಿಜವಿರಬಹುದಾದರೂ, ಸಂಜೆಯ
ಹೊಟ್ಟೆಪಾಡಿಗೆ ಗತಿಯಿಲ್ಲದವರಿಗೆ ಈ ಮಾಹಿತಿಯ ಉಪ್ಪಿನಕಾಯಿಯಿಂದ ಉಪಯೋಗವೇನು? ಇಂಥ ಮಾಹಿತಿಗಳಿಂದ ಸರಕಾರ
ಇವರುಗಳಿಗಾಗಿ ಏನಾದರೂ ಮಾಡಲು ಸಾಧ್ಯವೇ? ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದಾಗ ನಮಗೆ ನಾವು ನೋಡಿಯೂ ಕಾಣದ ಅನಾಮಿಕ ಮುಖಗಳ
ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಇದೂ ಒಂದು ಕಥೆ: ಬೆಂಗಳೂರಿನ ಮುಖ್ಯ ಬಡಾವಣೆಯ ಅಂಚಿನಲ್ಲಿ ಬೆಳೆದ ಕೊಳೆಗೇರಿಯಲ್ಲಿ ಟೋನಿ ಇದ್ದಾನೆ. ಅನೇಕ
ವರ್ಷಗಳಿಂದ ಅಲ್ಲೇ ನೆಲೆಸಿದ್ದರೂ, ಆ ಜಾಗದಲ್ಲಿರುವುದಕ್ಕೆ ಪುರಾವೆಯಾಗಿ ಯಾವ ದಾಖಲೆಗಳೂ ಇಲ್ಲ.
ಆ ಜಾಗ ಬಿಟ್ಟುಹೋದರೆ ಮತ್ತೆ ಅಲ್ಲಿಗೆ ಬಂದು ನೆಲೆಸಬಹುದೆಂಬ ಖಾತ್ರಿಯೂ ಇಲ್ಲ. ಸರಕಾರ ಎಂದು
ಬೇಕಾದರೂ ಅವರುಗಳನ್ನು ಎತ್ತಂಗಡಿ ಮಾಡಬಹುದೆಂಬ ಭೀತಿಯೂ ಇದೆ.... ರೈಲಿನ ಕಾಯ್ದಿರಿಸಿದ
ಡಬ್ಬಿಯಲ್ಲಿ ಆರಕ್ಷಣೆಯಿಲ್ಲದೆಯೇ ಪ್ರಯಾಣ ನಡೆಸಬೇಕಾದ ಒಂದು ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಒಂದೇ
ಖಾಲಿ ಸೀಟಲ್ಲಿ ಹೇಗೋ ಕೂತಿದ್ದೀರಿ. ಟಾಯ್ಲೆಟ್ಟಿಗೆ ಹೋಗಲೆಂದು ಜಾಗ ಬಿಟ್ಟರೆ ಅದು ಖಾಲಿಯಾಗೇ
ನಿಮಗೆ ಕಾಯುತ್ತಿರಬಹುದು ಎನ್ನುವ ಖಾತ್ರಿಯಿಲ್ಲ. ಅಲ್ಲೇ ಕೂತಿದ್ದರೆ ಆರಕ್ಷಣೆ ಮಾಡಿದಾತ ಬಂದು
ನಿಮ್ಮನ್ನು ಎಬ್ಬಿಸಬಹುದು. ಇಲ್ಲ ಟಿಟಿಇ ಕೂಡ ಕಾನೂನಿನ ಪುಸ್ತಕ ಓದಿ ನಿಮ್ಮನ್ನು ಎಬ್ಬಿಸಬಹುದು.
ಈ ಪರಿಸ್ಥಿತಿಯಲ್ಲಿ ರೈಲು ಹೊರಡಲು ಸಿದ್ಧವಾಗಿದೆ. ಜೀವನವೀಡೀ ಇಂಥದೊಂದು ತ್ರಿಶಂಕು
ಸ್ಥಿತಿಯಲ್ಲಿ ಕಳೆಯುತ್ತಿರುವ ಟೋನಿಗೆ ನೀವು ಸುಧೀರ್ ಹೇಳಿದ ಮಾಹಿತಿಯನ್ನು ನೀಡಿ ನಿನ್ನ
ಮಕ್ಕಳನ್ನು ಶಾಲೆಗೆ ಕಳಿಸು – ಓದಿಸು, ನಿನ್ನ ಆದಾಯ ಬೆಳೆಯಿಸುವ ಬೇರೊಂದು ಕೆಲಸವನ್ನು – ಸ್ವಂತ
ವ್ಯಾಪಾರವನ್ನು ಮಾಡು ಎಂದು ಹಿತನುಡಿದರೆ ಅವನ ಪ್ರತಿಕ್ರಿಯೆಯೇನಿರಬಹುದು?
ತ್ರಿಶಂಕು ಸ್ಥಿತಿಯಲ್ಲಿ ಜೀವಿಸುವ ನಗರದ ಬಡವರಿಗೆ ಸಂಜೆಯ ಗಂಜಿ ಹೊಂದಿಸುವುದೇ ಮುಖ್ಯವಾದಾಗ
– ಉಜ್ವಲ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡು, ಶಾಂತಿನಗರದಲ್ಲಿರುವ ನಿನಗೆ ಪೀಣ್ಯದಾಚೆ
ಅದ್ಭುತ ಮನೆಯನ್ನು ನಿರ್ಮಾಣ ಮಾಡಿಕೊಡುವೆ, ಮಕ್ಕಳನ್ನು ಇಸ್ಕೂಲಿಗೆ ಕಳಿಸು ಎಂದೆಲ್ಲಾ
ಯೋಜನೆಗಳನ್ನು ತೋರಿಸಿದರೆ, ಅದು ನಿಜವಾದರೂ ನಂಬುವ ಮಾರ್ಗವಿದೆಯೇ?
ದೆಹಲಿಯಲ್ಲಿ ಕಾಮನ್ ವೆಲ್ತ್ ಪಂದ್ಯಾವಳಿ ನಡೆದಾಗ ನಗರವನ್ನು ಸುಂದರೀಕರಣ ನಡೆಸುವ
ಪ್ರಕ್ರಿಯೆಯಲ್ಲಿ ಅನೇಕ ಕೊಳೆಗೇರಿಗಳನ್ನು ನೆಲಸಮ ಮಾಡಿ ಜನರನ್ನು ಎತ್ತಂಗಡಿ ಮಾಡಲಾಯಿತು. ಆ
ಪ್ರಕ್ರಿಯೆಯನ್ನು ಮಧ್ಯಮ-ಮೇಲ್ಮಧ್ಯಮ ವರ್ಗದ ಜನ ಮೊದಮೊದಲಿಗೆ ಕೊಂಡಾಡಿದರಾದರೂ ಎತ್ತಂಗಡಿಯಾದವರು
ತಮ್ಮ ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಡ್ರೈವರ್, ಮನೆಗೆಲಸದವರು, ಇಸ್ತ್ರಿ ಮಾಡುವವರು,
ತರಕಾರಿ ಮಾರಾಟ ಮಾಡುವವರು ಎಂದು ಕೆಲವೇ ದಿನಗಳಲ್ಲಿ ತಿಳಿಯುತ್ತಿದ್ದಂತೆಯೆ ಸುಂದರೀಕರಣದ
ಕಾರ್ಯಕ್ರಮಕ್ಕೆ ತಿಲಾಂಜಲಿಯಿಕ್ಕಬೇಕೆಂದು ವಾದಿಸಿದರಂತೆ. ಯೋಜನೆಗಳಿಗೆ ನಿಜವಾದ ವ್ಯಕ್ತಿಗಳ
ಮುಖವನ್ನು ಹೊಂದಿಸುತ್ತಿದ್ದಂತೆಯೇ ಪ್ರತಿಕ್ರಿಯೆ ಹೇಗೆ ಬದಲಾಗಬಹುದು. ನೋಡಿ.
ನಗರದಲ್ಲಿರುವ ಬಡತನದ ಸಮಸ್ಯೆ ಜಟಿಲವಾದದ್ದು. ಬಡವರ ಸಮಸ್ಯೆ ಬಡತನದ ಸಮಸ್ಯೆಗಿಂದ
ಭಿನ್ನವಾದದ್ದು. ಬಡತನ ನಿರ್ಮೂಲನಕ್ಕೆ ಯೋಜನೆಗಳನ್ನು ಹಾಕುವುದ ಸಾಮಾನ್ಯ. ಆದರೆ ಬಡವರ
ಸಮಸ್ಯೆಯನ್ನು ಪರಿಹರಿಸಲು ಯೋಜನೆಗಳು? ಬೂ ಮತ್ತು ಸುಧೀರ್ ಪುಸ್ತಕಗಳನ್ನು ಓದಿದಾಗ ನಮಗೆ ಇದು ದೂರದ ಬೆಟ್ಟದಂತೆ ಕಾಣಿಸುತ್ತದೆ.
ಸರಳವಾದ ಉಪಾಯಗಳೂ, ಪರಿಹಾರಗಳೂ ಇಲ್ಲ.
ಬಡತನಕ್ಕೆ ಕೊಳೆಗೇರಿಯ ಪ್ರತೀಕವನ್ನು ಕೊಡುವುದಕ್ಕೆ ಬದಲು ನಾವೊಂದು ಮುಖವನ್ನು,
ವ್ಯಕ್ತಿಯನ್ನು, ಕುಟುಂಬವನ್ನು ಪ್ರತೀಕವಾಗಿ ಇಟ್ಟುಕೊಂಡರೆ ಭಿನ್ನವಾಗಿ ಯೋಚಿಸುವ ಕಲೆಯನ್ನು
ಬೆಳೆಯಿಸಿಕೊಳ್ಳಬಹುದು. ಆಗ ನಾವು ಕೊಳೆಗೇರಿಯ ಮನೆಯಿಂದ ಪುನರ್ವಸತಿ ಮಾಡಿಸುವುದು ಹೇಗೆ, ಹೊಸ
ಕಟ್ಟಡಗಳನ್ನ ನಿರ್ಮಿಸುವುದೂ, ಅದನ್ನು ನಿರ್ನಾಮ ಮಾಡುವುದೂ ಹೇಗೆಂದು ಯೋಚಿಸುವುದಕ್ಕೆ ಬದಲು
ನಮ್ಮ ಟೋನಿ ಇಂದಿನ ಸಂಜೆಯ ಗಂಜಿಯ ಚಿಂತೆಯಿಲ್ಲದೆಯೇ ನಾಳಿನಬಗ್ಗೆ ಯೋಚಿಸುವ, ನಾಳಿನ
ಚಿಂತೆಯಿಲ್ಲದೆ ಮುಂದಿನ ತಿಂಗಳು, ಮುಂದಿನ ವರ್ಷ, ಮುಂದಿನ ದಶಕ, ಮುಂದಿನ ತಲೆಮಾರಿನ ಬಗ್ಗೆ
ಯೋಚಿಸುವ ಆಂತರಿಕ ಶಕ್ತಿಯನ್ನು ತರಿಸುವುದು ಹೇಗೆಂದು ಚಿಂತೆಮಾಡುತ್ತೇವೆ. ಆಗ ನಾವು ಬಡತನದ
ನಿರ್ಮೂಲನೆಗೆ ಬದಲು ಬಡವರ ಸಶಕ್ತೀಕರಣದಬಗ್ಗೆ ಮಾತಾಡುತ್ತೇವೆ.
No comments:
Post a Comment