Tuesday, October 23, 2012

ಕುರಿಯನ್: ಹಾಲು ಕುಡಿಯದ ಹುಡುಗಾ


ಭಾನುವಾರ ಮುಂಜಾನೆ ಎಚ್ಚರವಾಗುವಷ್ಟರಲ್ಲಿ ತಲುಪಿದ ಸುದ್ದಿ: "ವರ್ಗೀಸ್ ಕುರಿಯನ್ ಅಸುನೀಗಿದರು". ತೊಂಬತ್ತು ವರ್ಷ ಪೂರ್ಣ ಜೀವನ ನಡೆಸಿ ತಮ್ಮ ಕರ್ಮಭೂಮಿಯಾದ ಗುಜರಾತಿನಲ್ಲಿ ಅಸುನೀಗಿದ ಕುರಿಯನ್ ಅವರ ಸೇವೆಗೆ ಪ್ರತಿಯಾಗಿ ಕನಿಷ್ಟ ಒಂದು ಭಾರತ ರತ್ನ ಪುರಸ್ಕಾರವನ್ನೂ ಕೊಡದೆಯೇ ದೇಶ ಅವರನ್ನು ಬೀಳ್ಕೊಟ್ಟಿತು. ಸಿರಿಯನ್ ಕ್ರೈಸ್ತರಾದ ಆತನ ದೇಹವನ್ನು ಮಣ್ಣು ಮಾಡದೆಯೇ ಆತನ ಕೋರಿಕೆಯಂತೆ ಆಣಂದದ ಕೈಲಾಶಭೂಮಿಯಲ್ಲಿನ ವಿದ್ಯುತ್ ಚಿತಾಗಾರಕ್ಕೆ ಅರ್ಪಿಸಲಾಯಿತು. ತಮ್ಮ ಕಾಯಿದೆಯ ಪ್ರಕಾರ ತಮಗಿಷ್ಟಬಂದಂತೆ, ರಾಜನಂತೆ, ಜೀವಿಸಿದ ಕುರಿಯನ್ ಸಾವಿನಲ್ಲೂ ತಮ್ಮದೇ ಮಾರ್ಗವನ್ನು ಹಿಡಿದು ನಡೆದರು. ಅವರು ತಮ್ಮ ದೇಹವನ್ನು ಸ್ಥಳೀಯ ಸಂಸ್ಕೃತಿಗೆ – ತಾವು ದುಡಿದ ರೈತರ ಆಚಾರಕ್ಕೆ ಸಮರ್ಪಕವಾಗಿ ಸುಡಬೇಕೆಂದು ಕೇಳಿಕೊಂಡಿದ್ದರಂತೆ. ಎಂದೂ ಸ್ಥಳೀಯ ಸಂಸ್ಕೃತಿಗೆ ಒಗ್ಗಿಕೊಳ್ಳದ ಅವರ ಈ ಕೋರಿಕೆ ಅಸಾಧಾರಣವಾದದ್ದೇ. ಬದುಕಿರುವಾಗಲೇ ತಾವು ಇದ್ದ ಮೊದಲ ಮನೆ, ಅದರ ಗ್ಯಾರೇಜನ್ನು ಸಂಗ್ರಹಾಲಯವನ್ನಾಗಿಸಿದ್ದನ್ನು ಕಂಡು ತೃಪ್ತಿ ಪಟ್ಟಿದ್ದ ಆತನಿಗೆ ತಮ್ಮ ದೇಹದ ಮೇಲೊಂದು ಸ್ಮಾರಕವನ್ನು ನಿರ್ಮಿಸುವುದು ಇಷ್ಟವಿರಲಿಲ್ಲವೆನ್ನಿಸುತ್ತದೆ. ಸಾಂಪ್ರದಾಯಿಕ ಗುಜರಾತಿಗಳ ನಡುವೆ ತಮ್ಮ ಮಾಂಸಾಹಾರದ ಬಗ್ಗೆ ಖುಲ್ಲಂ ಖುಲ್ಲಾ ಆಗಿದ್ದು – ಪಾನವಿರೋಧಿ ಕಾಯಿದೆಯಿದ್ದ ಗುಜರಾತಿನಲ್ಲಿ ತಮ್ಮ ಸಂಜೆಯ ಪೆಗ್ಗನ್ನು ಸಂತೋಷದಿಂದಲೇ ಹಾಕುತ್ತಾರೆಂದು ಪ್ರತೀತಿಯಿದ್ದ, "ಹಾಲೆಂದರೆ ನನಗಿಷ್ಟವಿಲ್ಲ, ನಾನು ಕುಡಿಯುವುದಿಲ್ಲ" ಎನ್ನುತ್ತಿದ್ದ, ಎಂದೂ ಗುಜರಾತಿ ಭಾಷೆ ಮಾತಾಡದ ಕುರಿಯನ್ ಇದ್ದಕ್ಕಿದ್ದ ಹಾಗೆ ತಮ್ಮ ಸಾವಿಗೆ ಸ್ಥಳೀಯ ಸಂಸ್ಕೃತಿಯ ಲೇಪ ಕೊಡುವುದರಲ್ಲಿ ಅದಕ್ಕಿಂತಲೂ ಮಿಗಿಲಾದ ಅರ್ಥವಿರಬಹುದು.

ಕುರಿಯನ್ ನಮ್ಮ ದೇಶಕ್ಕೆ ಟೂ-ಇನ್-ವನ್ ಕೊಡುಗೆಯನ್ನ ನೀಡಿದ್ದರು. ಮೊದಲನೆಯ ಕೊಡುಗೆ ಹೈನುಗಾರಿಕೆಗೆ ಸಂಬಂಧಿಸಿದ್ದು. ಹಾಲು, ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವಲ್ಲಿ, ಅಗ್ರಸ್ಥಾನಕ್ಕೆ ಒಯ್ಯುವುದರಲ್ಲಿ ಕುರಿಯನ್ ಅವರ ಆಪರೇಷನ್ ಫ್ಲಡ್ ಯೋಜನೆ ಬಹಳ ಮುಖ್ಯವಾದ ಪಾತ್ರ ವಹಿಸಿತ್ತು. ಇದನ್ನು ಅವರು ಸಾಧಿಸಿದ ರೀತಿಯೂ ಅದ್ಭುತವಾದದ್ದು. ನಮ್ಮ ದುಡ್ಡನ್ನ ಖರ್ಚೇ ಮಾಡದೆ ಅನುದಾನಗಳಿಂದಲೇ ಆತ ಸ್ವಾವಲಂಬನೆಯನ್ನು ಸಾಧಿಸಿದ ಪರಿ ಈ ರೀತಿಯದ್ದು:

60-70ರ ದಶಕದಲ್ಲಿ ಯೂರೋಪಿನಲ್ಲಿ ಹೈನುಗಾರಿಕೆಯ ಅತೀ ಉತ್ಪಾದನೆಯಿಂದ ಬೆಣ್ಣೆ ಮತ್ತು ಹಾಲಿನ ಪುಡಿಯ ದಾಸ್ತಾನು ಮಿತಿ ಮೀರಿತ್ತು. ಅದನ್ನು ಬಡದೇಶವಾಗಿದ್ದ ಭಾರತಕ್ಕೆ ಅನುದಾನವಾಗಿ ಕೊಡಲು ಅವರು ತಯಾರಿದ್ದರು. ಅನುದಾನದ ರಾಜಕೀಯದಲ್ಲಿ ಹೊಸ ಮಾರುಕಟ್ಟೆಗಳನ್ನೂ ಹೊಸ ಗ್ರಾಹಕರನ್ನೂ ಸೃಷ್ಟಿಸುವುದೂ ಒಂದಾಗಿರುತ್ತದೆ. ಅಂದರೆ, ಇಲ್ಲಿ ಹೆಚ್ಚಿನ ಹಾಲು, ಉತ್ಪನ್ನಗಳನ್ನು ಸೇವಿಸುವುದನ್ನು ಜನ ಅಭ್ಯಾಸಮಾಡಿಕೊಂಡರೆ ಮುಂದೆ ಅವರುಗಳೇ ಹಣ ಕಟ್ಟಿ ಈ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಮಾರುಕಟ್ಟೆಗಳನ್ನು ಆಕ್ರಮಿಸುವ ಪರಿಯಿದು. ಹೀಗಾಗಿ ಅನುದಾನ ಕೊಡವುದರಲ್ಲಿ ಮುಂದೆ ಕೊಟ್ಟವರಿಗೆ ಲಾಭವಾಗುವುದೇ ಹೆಚ್ಚು.

ಕುರಿಯನ್ ಈ ಅನುದಾನವನ್ನು ಭಿನ್ನವಾಗಿ ನೋಡಿದರು. ಅನುದಾನದಿಂದ ಮಾರುಕಟ್ಟೆ ಬೆಳೆಸುವುದು, ಹಿಗ್ಗಿಸುವುದು ಉತ್ತಮವಾದ ವಿಚಾರವಾದರೂ, ಆ ಅನುದಾನವನ್ನು ಸಮರ್ಥವಾಗಿ ಬಳಸಬೇಕಿತ್ತು. ಪದಾರ್ಥಗಳನ್ನು ಮುಫತ್ತಾಗಿ, ಅಥವಾ ಅಗ್ಗದ ದರದಲ್ಲಿ ಜನರಿಗೆ ಹಂಚುವ ಬದಲು ಮಾರುಕಟ್ಟೆಯ ಬೆಲೆಗೇ ಅವುಗಳನ್ನು ಇಳಿಯಬಿಡುವುದೆಂದು ನಿರ್ಧರಿಸಿದರು. ಪ್ರತೀ ಉತ್ಪಾದಕನಿಗೂ ಒಬ್ಬ ಗ್ರಾಹಕನಿರಬೇಕೆಂಬ ಸತ್ಯವನ್ನು ಆತ ಮೊದಲಿಗೆ ಗ್ರಹಿಸಿದರು. ಹೀಗೆ ಹೈನುಗಾರಿಕೆಯ ಅಭಿವೃದ್ಧಿಯ ಮೊದಲ ಕೇಂದ್ರಬಿಂದು ಮಾರುಕಟ್ಟೆಯಾಯಿತು. ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾಗಳಿಗೆ ಅನುದಾನದ ಹಾಲು-ಉತ್ಪನ್ನಗಳನ್ನು ಸರಬರಾಜು ಮಾಡಿ, ಆ ಮಾರುಕಟ್ಟೆಗಳನ್ನು ಬೆಳೆಸಿದರೆ ಸ್ಥಳೀಯ ಉತ್ಪತ್ತಿಯನ್ನು ಮುಂದೆ ಮಾರಲು ಅನುಕೂಲವಾಗುವುದು. ಅನುದಾನದ ಮಾಲನ್ನು ಮಾರಾಟ ಮಾಡಿದ್ದರಿಂದ ಬಂದ ಧನರಾಶಿಯನ್ನು ಹಳ್ಳಿಗಳ ಕಡೆ, ಹೈನುಗಾರಿಕೆ ಅಭಿವೃದ್ಧಿಗೆ ಬಳಸಲಾಯಿತು. ಎಲ್ಲಕಡೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಏರ್ಪಡಿಸುವುದು, ತಳಿ ಅಭಿವೃದ್ಧಿ ಕಾರ್ಯಕ್ರಮ, ಉತ್ತಮ ಪಶು ಆಹಾರ ತಯಾರಿಸುವ ಫ್ಯಾಕಟರಿಗಳು ಮತ್ತು ದನಗಳಿಗೆ ವೈದ್ಯಕೀಯ ಸೌಲಭ್ಯ ಈ ಎಲ್ಲವೂ ಅವರ ಯೋಜನೆಯಲ್ಲಿತ್ತು. ನೇರವಾಗಿ ರೈತರಿಗೆ ಪಶುಗಳನ್ನು ಕೊಡುವುದಾಗಲೀ, ಸಬ್ಸಿಡಿಯ, ಕಡಿಮೆ ಬಡ್ಡಿಯ ಸಾಲವಾಗಲೀ, ವೈಯಕ್ತಿಕವಾಗಿ ಉಪಯೋಗವಾಗುವ ಯಾವುದೇ ವ್ಯೂಹ ಇದರಲ್ಲಿರಲಿಲ್ಲ ಎನ್ನುವುದನ್ನ ನಾವು ಗಮನಿಸಬೇಕು. ಉತ್ತಮ ಹೈನುಗಾರಿಗೆ ಆಗಬೇಕೆಂದರೆ ಇರಬೇಕಾದ ವಾತಾವರಣ ಮತ್ತು ಭೌತಿಕ ಪರಿಕರಗಳ ನಿರ್ಮಾಣಕ್ಕಾಗಿ ಮಾತ್ರ ಆ ಧನ ಉಪಯೋಗಿಸಲ್ಪಟ್ಟಿತು.

ಗುಜರಾತಿನಲ್ಲಿ ಒಂದು ಕಾಲದಲ್ಲಿ ದನಗಳ ವೈದ್ಯಕೀಯ ಸೌಲಭ್ಯ ಎಷ್ಟು ಅದ್ಭುತವಾಗಿತ್ತೆಂದರೆ, ಪಶುವೈದ್ಯರನ್ನು ವಯರ್ಲೆಸ್ ಮೂಲಕ ತುರ್ತಾಗಿ ಕರೆಯಿಸಿಕೊಳ್ಳಬಹುದಿತ್ತು. ಅದು ಇಂದಿನ 108 ಆಂಬ್ಯುಲೆನ್ಸ್ ಸೇವೆಗಿಂತ ಆ ಸೇವೆ ಉತ್ತಮವಾಗಿತ್ತು. ಅಮುಲ್ ನ ಸಂಸ್ಥಾಪಕರಾದ ತ್ರಿಭುವನದಾಸ್ ಪಟೇಲರು ತಮ್ಮ ಅಧ್ಯಕ್ಷ ಪದವಿಯನ್ನು ತ್ಯಜಿಸಿದಾಗ ಆ ಸಂಸ್ಥೆ ಬೀಳ್ಕೊಡುಗೆಯಾಗಿ ಅವರಿಗೆ ನೀಡಿದ ಸುಮಾರು ಆರು ಲಕ್ಷ ರೂಪಾಯಿ ಧನರಾಶಿಯನ್ನು ಆತ ಒಂದು ಫೌಂಡೇಶನ್ ಸ್ಧಾಪಿಸಲು ಬಳಸಿದರು. ಆ ಸಂಸ್ಥೆಯ ಉದ್ದೇಶ: ಖೇಡಾ ಜಿಲ್ಲೆಯಲ್ಲಿ ದನಗಳಿಗೆ ದೊರೆಯುತ್ತಿದ್ದ ಗುಣಮಟ್ಟದ ವೈದ್ಯಕೀಯ ಸೌಲಭ್ಯವನ್ನು ಜನರಿಗೂ ಒದಗಿಸುವುದು!

ಹೀಗೆ ದೇಶಕ್ಕೆ ಬಂದ ಅನುದಾನವನ್ನು ನಮ್ಮ ದೇಶದ ಮಾರುಕಟ್ಟೆಯ ಸಬಲೀಕರಣಕ್ಕೆ ಉಪಯೋಗಿಸಿದ್ದಲ್ಲದೇ, ಇಲ್ಲಿನ ಉತ್ಪತ್ತಿ, ಮತ್ತು ಉತ್ಪಾದಕತೆಯ ಸಬಲೀಕರಣಕ್ಕೂ ಉಪಯೋಗಿಸಿ ಗುರುವಿಗೇ ತಿರುಮಂತ್ರ ಹಾಕಿದವರು ಕುರಿಯನ್. ಸ್ವಿಸ್ ದೇಶದಿಂದ ಭರಪೂರ ಧನಸಹಾಯ ಬಂತಾದರೂ, ಸ್ವಿಸ್ ದೇಶದ ಕಂಪನಿ ನೆಸ್ಲೆಗೆ ಇಲ್ಲಿನ ಹಾಲಿನ ಮಾರುಕಟ್ಟೆ ಸುಲಭವಾಗಿ ದಕ್ಕಲೇ ಇಲ್ಲ. ಅದೂ ಸಾಲದೆಂಬಂತೆ ನಸ್ಲೆಯ ತಂತ್ರಜ್ಞಾನವನ್ನೂ ನಮಗೆ ಸಮರ್ಪಕವಲ್ಲವೆಂದು ನಿರಾಕರಿಸಿ ಮೈಸೂರಿನ ಸಿ.ಎಫ್.ಟಿ.ಆರ್.ಐ ಮತ್ತು ರಕ್ಷಾ ಮಂತ್ರಾಲಯದವರ ಡಿ.ಆರ್.ಡಿ.ಒ ಅವರ ಸ್ಥಳೀಯ ತಂತ್ರಜ್ಞಾನವನ್ನು ಹಾಲಿನ ಪುಡಿ, ಚೀಸ್ ತಯಾರಿಸುವುದರಲ್ಲಿ ಕುರಿಯನ್ ಬಳಸಿದರು. ಎಮ್ಮೆಯ ಹಾಲಿನ ಸಂಸ್ಕರಣೆಗೆ ಆಧುನಿಕ ತಂತ್ರಜ್ಞಾನದ ಲೇಪವನ್ನು ತಂದದ್ದೇ ಅಮುಲ್ ಸಂಸ್ಥೆ.

ಕುರಿಯನ್ ಅವರ ಎರಡನೆಯ ಕೊಡುಗೆ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಹೈನುಗಾರಿಕೆಯಲ್ಲಿ ಕುರಿಯನ್ ಅವರ ಕೆಲಸದಷ್ಟೇ ಮಹತ್ವದ ಕೆಲಸವನ್ನು ಕೋಳಿ ಸಾಕಣೆಯ ಕ್ಷೇತ್ರದಲ್ಲಿ ವೆಂಕಟೇಶ್ವರ ಹ್ಯಾಚರೀಸ್ ನ ಬಿ.ವಿ.ರಾವ್ ಮಾಡಿದ್ದರು. ದೇಶದಲ್ಲಿ ಆಧುನಿಕ ಪೌಲ್ಟ್ರಿಯ ರೂವಾರಿ ಎಂದು ಆತನನ್ನು ಗುರುತಿಸಲಾಗುತ್ತದೆ. ಆದರೆ ಕುರಿಯನ್ ಅವರ ಮಹತ್ವ ರಾಯರಿಗಿಂತ ಹೆಚ್ಚಿರುವುದು ಒಂದು ಅಂಶದಲ್ಲಿ. ರಾವ್ ಖಾಸಗೀ ಕ್ಷೇತ್ರದಲ್ಲಿ ತಮ್ಮ ಸಾಧನೆ ಮಾಡಿದ್ದರು. ಆದರೆ ಕುರುಯನ್ ತಮ್ಮನ್ನು ಸಹಕಾರೀ ಕ್ಷೇತ್ರಕ್ಕೆ ಮುಡಿಪಾಗಿಟ್ಟುಕೊಂಡರು.

ಸಹಕಾರೀ ಕ್ಷೇತ್ರದಲ್ಲೂ ಅಂತರರಾಷ್ಟ್ರೀಯ ಪೈಪೋಟಿಗೆ ಸಾಮಾನವಾಗಬಲ್ಲ ಕೆಲಸವನ್ನು ಮಾಡಬಹುದೆಂದು ನಿರೂಪಿಸಿ ತೋರಿಸಿದವರು ಕುರಿಯನ್. ಅವರು ಅಧಿಕಾರ ಬಿಟ್ಟು ಅನೇಕ ವರ್ಷಗಳೇ ಆದರೂ ಆವರು ಕಟ್ಟಿದ ಸಂಸ್ಥೆಗಳು ಲಾಭದಾಯಕವಾಗಿ, ಗ್ರಾಹಕರು ನೀಡುವ ಪ್ರತೀ ರೂಪಾಯಿಗೆ ಕನಿಷ್ಟ 70 ಪೈಸೆಯನ್ನು ಉತ್ಪಾದಕರ  ಜೇಬಿಗೆ ಸೇರಿಸುವ ಕೆಲಸವನ್ನು ಮುಂದುವರೆಸಿರುವ ಸಾಧನೆ ಸಾಮಾನ್ಯದ್ದೇನೂ ಅಲ್ಲ. ಗ್ರಾಹಕರ ಧನವನ್ನು ಒಂದು-ಎರಡು ದನಗಳನ್ನು ಕಟ್ಟಿರುವ ಸಣ್ಣ ಹಿಡುವಳಿಯ ಹೈನುಗಾರರ ಜೋಳಿಗೆಗೆ ಹಾಗಿ ಒಟ್ಟಾರೆ ಅವರ ಆದಾಯವನ್ನು ಹೆಚ್ಚಿಸುವ ಶ್ರೇಯಸ್ಸು ಕುರಿಯನ್ ಗೆ ಸಲ್ಲುತ್ತದೆ. ಗ್ರಾಮೀಣ ಗುಜರಾತಿನ ಚೌಕಗಳಲ್ಲಿ ಗಾಂಧಿ-ಸರದಾರ್ ಪಟೇಲರ ಪ್ರತಿಮೆಕಂಡರೂ, ರೈತರ ಮನೆಗಳಲ್ಲಿ ನಿಮಗೆ ಕುರಿಯನ್ ಅವರ ಫೋಟೋ ತೂಗುಬಿಟ್ಟಿರುವುದು ಕಾಣಿಸುತ್ತದೆ. ಮಂಡ್ಯ ಜಿಲ್ಲೆಗೆ ದೈವೀಭೂತರಾದ ವಿಶ್ವೇಶ್ವರಯ್ಯನವರಂತೆಯೇ ಖೇಡಾ ಜಿಲ್ಲೆಯ ಕುರಿಯನ್ ಕಥೆಯಾಗಿದೆ.

ಕುರಿಯನ್ನರ ಈ ಸಾಧನೆಗೆ ದೇಶದ ಬೊಕ್ಕಸದಿಂದ ಅರ್ಥಾತ್ ನಮ್ಮ ತೆರೆಗಿಯಿಂದ ಆದ ಖರ್ಚು ಎಷ್ಟು? ಇದಕ್ಕೆ ಉತ್ತರ ಸೊನ್ನೆ. ಅದೇ ಗಮ್ಮತ್ತಿನ ವಿಚಾರ. ಆಹಾರದ ಅನುದಾನವನ್ನು ಮಾರಾಟ ಮಾಡುವುದರಿಂದ ಬಂದ ಹಣದಿಂದ ನಮಗೆ ಹೈನುಗಾರಿಕೆಯ ಸ್ವಾವಲಂಬನೆ ಬಂದಿದೆ. ಸಹಕಾರಿ ರಂಗದಲ್ಲಿ ಮಿಕ್ಕಂತೆ ಎಷ್ಟು ಖರ್ಚಾಗಿರಬಹುದು?  ಅದಕ್ಕೆ ಲೆಕ್ಕ ಕಟ್ಟುವುದು ಕಷ್ಟವಾದರೂ ಈ ಉದಾಹರಣೆಯನ್ನು ನೋಡಿ:

ಹಲವು ವರ್ಷಗಳ ಕೆಳಗೆ ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಏರ್ಪಡಿಸಿದ್ದ ವೈದ್ಯನಾಥನ್ ಸಮಿತಿಯ ವರದಿಯ ಪ್ರಕಾರ ವ್ಯವಸಾಯ ಸಹಕಾರಿ ಕ್ಷೇತ್ರದ ಪುನಶ್ಚೇತನಕ್ಕೆ ಬೇಕಾಗಿದ್ದ ಅಂದಾಜು ಮೊತ್ತ 15,000 ಕೋಟಿ ರೂಪಾಯಿಗಳು. ಕೃಷಿಸಾಲ ಮನ್ನಾದ ಖರ್ಚು 70,000 ಕೋಟಿ ರೂಪಾಯಿಗಳು. ಇದರಿಂದ ರೈತರಿಗೆ ಆದ ಲಾಭ – ಅಂದಾಜೂ ಗೊತ್ತಿಲ್ಲ. ವೈದ್ಯನಾಥನ್ ವರದಿಯಲ್ಲಿದ್ದ ಒಂದು ವಿಶೇಷವೆಂದರೆ ಸಹಕಾರ ರಂಗದ ಪುನಶ್ಚೇತನದ ಹಣ ಬೇಕಿದ್ದರೆ ರಾಜ್ಯ ಸರಕಾರಗಳು ಸಹಕಾರೀ ಕಾನೂನಿನಲ್ಲಿ ಪರಿಷ್ಕಾರಗಳನ್ನು ಮಾಡಿ ಅದನ್ನು ಸಹಕಾರಿ ಸಿದ್ಧಂತಕ್ಕೆ ಹೆಚ್ಚು ಸಮೀಪಕ್ಕೆ ಒಯ್ಯಬೇಕಿತ್ತು. ಅನೇಕ ರಾಜ್ಯಗಳು ಆ ಎಲ್ಲ ನಿಬಂಧನೆಗಳನ್ನೂ ಧನರಾಶಿಯ ಕಾರಣವಾಗಿಯೇ ಒಪ್ಪಿದುವು. ಇದೇ ರೀತಿಯ ಯೋಜನೆ ನಷ್ಟದಲ್ಲಿ ನಡೆಯುತ್ತಿದ್ದ, ವಿಫಲವಾದ ಹಾಲು ಉತ್ಪಾದಕರ ಸಂಘಗಳನ್ನು ಪುನಶ್ಚೇತನಗೊಳಿಸಲು ಪ್ರಸ್ತಾಪಿಸಿದಾಗ ಆ ಯೋಜನೆಯೇ ತೋಪಾಯಿತು. ಯಾಕೆಂದರೆ ಒಟ್ಟಾರೆ ನಷ್ಟ, ಅದಕ್ಕೆ ಪರಿಹಾರವಾಗಿ ಕೊಡಬೇಕಿದ್ದ ಅನುದಾನದ ಮೊತ್ತ ಸಾಕಷ್ಟಿರಲಿಲ್ಲ. ಹೈನುಗಾರಿಕೆಯಲ್ಲಿ ವಿಫಲವಾದ ಸಹಕಾರ ಸಂಘಗಳ ನಷ್ಟದ ಮೊತ್ತ ಕೇವಲ 240 ಕೋಟಿಗಳಾಗಿದ್ದುವು. ಎಲ್ಲಿ 240 ಕೋಟಿ, ಎಲ್ಲಿ 15000 ಕೋಟಿ?

ಇಂದು ಗುಜರಾತಿನಲ್ಲಿ, ಕರ್ನಾಟಕದಲ್ಲಿ ವೈಭವದ ಹೈನುಗಾರಿಕೆ ನಡೆಯುತ್ತಿದೆಯೆಂದರೆ ಅದರ ಮೂಲಗುರುಗಳು ಯಾರು ಅನ್ನುವುದರ ಬಗ್ಗೆ ನಮಗೆ ಅನುಮಾನವೇ ಬೇಡ. ಇಂತಹ ರತ್ನ ನಮ್ಮ ನಡುವೆಯಿಲ್ಲ. ಆದರೆ ಅವರು ಕಟ್ಟಿ ಕೊಟ್ಟ ಸಂಸ್ಥೆಗಳಿವೆ. ಅವರ ವಿಚಾರಗಳೂ ನಮ್ಮೊಡನೆ ಇವೆ. ಇವೆರಡೂ ಅವರ ಸ್ಮಾರಕಗಳಿಗಿಂತ ಹೆಚ್ಚು ಮಹತ್ವದ್ದು.



No comments:

Post a Comment