Saturday, March 2, 2013

ಟಾಟಾರ ವ್ಯಾಪಾರವೂ, ಸಮಾಜಿಕ ಕಾರ್ಯಗಳೂ


ವ್ಯಾಪಾರಿ ಜಗತ್ತಿನಲ್ಲಿರುವ ಸಂಸ್ಥೆಗಳೆಲ್ಲಾ ಮಾರುಕಟ್ಟೆಯ ನಿಯಮಾನುಸಾರ ನಡೆದು ಮೂಲಧನವನ್ನು ಒದಗಿಸುವವರ ಶ್ರೀಮಂತಿಕೆಯನ್ನು ಬೆಳೆಯಿಸುತ್ತವೆ. ಈ ಸಂಸ್ಥೆಗಳು ಲಾಭವನ್ನು ಮೂಲಧನ ನೀಡಿದವರಿಗೆ ಲಾಭಾಂಶವನ್ನಾಗಿ ಹಂಚಿಡುತ್ತವೆ. ಕೆಲವು ಸಂಸ್ಥೆಗಳಿಗೆ ಲಾಭದ ಒಂದು ಭಾಗವನ್ನು ಸಾಮಾಜಿಕ ಜವಾಬ್ದಾರಿಯಾಗಿ ಅಭಿವೃದ್ಧಿಯ ಕೆಲಸಗಳಿಗೆ ಪ್ರತ್ಯೇಕವಾಗಿಡುವ ಪರಿಪಾಠವಿದೆ. ಇನ್ಫೋಸಿಸ್ ತನ್ನ ಲಾಭಾಂಶದ ಒಂದು ಪ್ರತಿಶತ ಭಾಗವನ್ನು ಸುಧಾ ಮೂರ್ತಿಯ ಅಧ್ಯಕ್ಷತೆಯ ಇನ್ಫೋಸಿಸ್ ಫೌಂಡೇಷನ್ನಿಗೆ ನೀಡುತ್ತದೆ. ಇದಲ್ಲದೇ ತಮ್ಮ ವೈಯಕ್ತಿಕ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ನೀಡುವ/ಉಪಯೋಗಿಸುವ ಉದಾಹರಣೆಗಳಾಗಿ ಬಿಲ್ ಗೇಟ್ಸ್, ವಾರನ್ ಬಫೆಟ್, ನಿಲೇಕಣಿ ದಂಪತಿಗಳು, ಪ್ರೇಂಜಿ ಹೀಗೆ ಅನೇಕರಿದ್ದಾರೆ. ಇವೆಲ್ಲಕ್ಕೂ ಅವರುಗಳ ವೈಯಕ್ತಿಕ ನಿರ್ಧಾರವೇ ಮೂಲಪ್ರೇರಣೆಯಾಗಿರುತ್ತದೆ. ಸ್ಟೀವ್ ಜಾಬ್ಸ್ ನಂತಹ ಯಶಸ್ವೀ ವ್ಯಾಪಾರಿ ತನ್ನ ಜೀವನದಲ್ಲಿ ಯಾವುದೇ ದೊಡ್ಡ ದೇಣಿಗೆಯನ್ನೂ ನೀಡದೇ ಇದ್ದುಬಿಟ್ಟ ಎನ್ನುವ ಟೀಕೆಗೆ ಒಳಗಾದರೂ, ಅದು ಆತನ ವೈಯಕ್ತಿಕ ನಿರ್ಧಾರವೆಂದು ಎಲ್ಲರೂ ತೆಪ್ಪಗಾದರು. 

ಟಾಟಾ ಸಂಸ್ಥೆಗಳು ಇತರೆ ವ್ಯಾಪಾರಿ ಸಂಸ್ಥೆಗಳಿಗಿಂತ ಭಿನ್ನವಾಗಿವೆ. ಈ ಭಿನ್ನತೆಯಿರುವುದು ಟಾಟಾ ಸಂಸ್ಥೆಗಳ ಮಾಲೀಕತ್ವದ ವಿವರದಲ್ಲಿ. ಟಾಟಾ ಸಂಸ್ಥೆಗಳ ಷೇರುದರರ ಪಟ್ಟಿಯಲ್ಲಿ ಟಾಟಾ ಸನ್ಸ್ ಎನ್ನುವ ಹೆಸರು ಕಾಣಿಸುತ್ತದೆ.  ಟಾಟಾ ಸನ್ಸ್ ನ 66 ಪ್ರತಿಶತ ಮಾಲೀಕತ್ವವನ್ನು ಪಡೆದಿರುವುದು ಟಾಟಾ ದತ್ತಿಗಳಾದ ಸರ್ ದೊರಬ್ಜೀ ಟಾಟಾ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಹಾಗೂ ಇತರೆ ದತ್ತಿಗಳು. ಹೀಗಾಗಿ ಟಾಟಾ ಸನ್ಸ್ ನಿಂದ ಆರ್ಜಿಸಿದ ಲಾಭಾಂಶದ 66 ಪ್ರತಿಶತ ಧನ ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಾಗಿರುತ್ತದೆ. ಇದು ಯಾವುದೇ ವ್ಯಾಪಾರೀ ಸಂಸ್ಥೆಯ ಸಾಮಾಜಿಕ ಕಾರ್ಯಕ್ಕಿಂತ ಹಚ್ಚಿನ ಪರಿಮಾಣದ್ದು, ಹಾಗೂ ಸರ್ವಕಾಲಕ್ಕೂ ಹೀಗೇ ಇರುವುದು.

ಈ ರೀತಿಯಾದ ಮಾಲೀಕತ್ವದ ರೂಪುರೇಷೆಯನ್ನು ತಲೆತಲಾಂತರದಿಂದ ಹೊಂದಿರುವ ಟಾಟಾಗಳು ವೈಯಕ್ತಿಕ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಳ್ಳಲೇ ಇಲ್ಲ. ಹೀಗಾಗಿಯೇ ಭಾರತದ 100 ಜನ ಅತೀ ಶ್ರೀಮಂತರ ಯಾದಿಯಲ್ಲಿ ನಾರಾಯಣ ಮೂರ್ತಿ, ನಿಲೇಕಣಿ, ಶಿಬೂಲಾಲ್, ವಿ.ಜಿ.ಸಿದ್ಧಾರ್ಥ, ಕಿರಣ್ ಮಜೂಂದಾರ್ ಷಾ, ಮತ್ತು ಟಾಟಾ ಸಂಸ್ಥೆಗಳ ಅತೀ ದೊಡ್ಡ ವೈಯಕ್ತಿಕ ಷೇರುದಾರರಾದ ಪಾಲಂಜಿ ಮಿಸ್ತ್ರಿಯ ಹೆಸರಿದೆಯಾದರೂ ಟಾಟಾ ಹೆಸರು ಕಾಣುವುದಿಲ್ಲ. ಟಾಟಾ ಸನ್ಸ್ ನಲ್ಲಿ 18 ಪ್ರತಿಶತ ಮಾಲೀಕತ್ವ ಪಡೆದಿರುವ ಪಾಲಂಜಿ ಮಿಸ್ತ್ರಿ ಭಾರತದ ಶ್ರೀಮಂತರ ಯಾದಿಯಲ್ಲಿ 4ನೆ ಸ್ಥಾನದಲ್ಲಿದ್ದಾರೆ. ಅದೇ ಸಂಸ್ಥೆಯಲ್ಲಿ ಟಾಟಾ ದತ್ತಿಗಳು 66 ಪ್ರತಿಶತ ಷೇರುದಾರರಾಗಿವೆ. ಈ ಷೇರುಗಳು ಖಾಸಗಿಯಾಗಿ ಟಾಟಾ ಹೆಸರಿನಲ್ಲೇ ಉಳಿದಿದ್ದರೆ ಟಾಟಾ ಸಂತಾನವಾದ ರತನ್, ನವಲ್, ನೋಯೆಲ್ ಟಾಟಾರೂ ಈ ಯಾದಿಯಲ್ಲಿ ತಮ್ಮ ಸ್ಥಾನವನ್ನು ಪಡೆಯಬಹುದಿತ್ತು.

ಆದರೆ ಜೆಮ್ಷೆಡ್ಜಿ ಟಾಟಾರ ಮಕ್ಕಳಾದ ಸರ್ ರತನ್ ಟಾಟಾ ತಮ್ಮಿಡೀ ಸಂಪತ್ತನ್ನು ಒಂದು ದತ್ತಿಗೆ ಅಂಕಿತ ಮಾಡಿದರು ಈ ದತ್ತಿ 1919ರಲ್ಲಿ ಪ್ರಾರಂಭವಾಯಿತು. ಅವರ ಅಣ್ಣ ಸರ್ ದೊರಬ್ಜಿ ಟಾಟಾ ಕೂಡಾ ತಮ್ಮ ಸಂಪತ್ತನ್ನು 1932ರಲ್ಲಿ ಆರಂಭಿಸಿದ ಇನ್ನೊಂದು ದತ್ತಿಗೆ ನೀಡಿದರು. ಈ ಎರಡೂ ದತ್ತಿಗಳು ಆರ್ಜಿಸುವ ಆದಾಯವನ್ನು ಸಾಮಾಜಿಕ ಕಾರ್ಯಗಳಿಗಾಗಿಯೇ ಮೀಸಲಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ, ಟಾಟಾ ಮೂಲಭೂತ ಅನ್ವೇಷಣಾ ಸಂಸ್ಥೆ, ರಾಷ್ಟ್ರೀಯ ಉನ್ನತ ಅಧ್ಯಯನಾ ಸಂಸ್ಥೆ, ಟಾಟಾ ಸ್ಮಾರಕ ಆಸ್ಪತ್ರೆಗಳನ್ನು ನೋಡಿದಾಗ ಟಾಟಾ ದತ್ತಿಯ ಆಕರ ರೂಪದ ಫಲವನ್ನು ಕಾಣಬಹುದು. ದೇಶ-ಪ್ರಪಂಚಕ್ಕೆ ಉಪಯೋಗವಾಗುವಂತಹ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ, ಬೆಳೆಸುವಲ್ಲಿ ಈ ದತ್ತಿಗಳ ದೇಣಿಗೆ ಮಹತ್ತರವಾದದ್ದು. ಅಲ್ಲದೇ ಸರ್ ರತನ್ ಟಾಟಾ ದಕ್ಷಿಣ ಆಫ್ರಕಾದಲ್ಲಿ ಗಾಂಧೀಜಿಯವರ ಕಲಸಕ್ಕೂ ಧನಸಹಾಯವನ್ನು ಮಾಡಿದ್ದರು.

ಈಚೆಗೆ ಎಪ್ಪತ್ತೈದು ವರ್ಷ ದಾಟಿದ ರತನ್ ಟಾಟಾ (ಸರ್ ರತನ್ ಟಾಟಾರ ಮೊಮ್ಮಗ), ಟಾಟಾ ಸಂಸ್ಥೆಯ ವ್ಯಾಪಾರೀ ಅಂಗದಿಂದ ನಿವೃತ್ತಿ ಪಡೆದಿದ್ದಾರೆ. ಈಗಿನ ನಿವೃತ್ತಿ ಅವರ ಸಾಮಾಜಿಕ ಅಭಿವೃದ್ಧಿಯ ದತ್ತಿಗಳಿಗೆ ವರ್ತಿಸುವುದಿಲ್ಲ. ಹೀಗಾಗಿ ಅವರ ಹೆಚ್ಚಿನ ಸಮಯ ದತ್ತಿಗಳಿಗೆ ಲಭ್ಯವಾಗಬಹುದಾಗಿದೆ. ಇತ್ತ ರತನ್ ಟಾಟಾರ ಗಮನ ಹೆಚ್ಚಾದಾಗ ದತ್ತಿಗಳ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಬಹುದು.

ಹಾಗೆ ನೋಡಿದರೆ ಜೆ.ಆರ್.ಡಿ. ಟಾಟಾರು ಆ ಸಂಸ್ಥೆಯನ್ನು ನಡಯಿಸುತ್ತಿದ್ದ ರೀತಿಗೂ ರತನ್ ಟಾಟಾರು ನಡೆಯಿಸುತ್ತಿದ್ದ ರೀತಿಗೂ ಹಲವು ಭಿನ್ನತೆಗಳು ಆಗಲೇ ಕಂಡಿದ್ದೆವು. ಮೊದಲಿಗೆ ದತ್ತಿಗಳು ದೊಡ್ಡ ದೇಣಿಗೆಗಳನ್ನು ನೀಡುವುದಲ್ಲದೇ ಸಣ್ಣ-ಪುಟ್ಟ ದಾನಗಳನ್ನೂ ಮಾಡುತ್ತಿದ್ದುವು. ಅವುಗಳ ಕೆಲಸವೂ ದೇಶದಾದ್ಯಂತ ಇತ್ತು. ರತನ್ ಟಾಟಾ ಬಂದ ನಂತರ ಇದು ಬದಲಾಯಿತು. ಅವರು ದತ್ತಿಗಳಿಗೂ ಒಂದು ವ್ಯವಸ್ಥೆಯನ್ನು ಅಳವಡಿಸಿದರು. ರತನ್ ಟಾಟಾರ ನೇತೃತ್ವದಲ್ಲಿ ಕಲವೇ ಕ್ಷೇತ್ರಗಳನ್ನು ಆಯ್ದು ಅಲ್ಲಿ ಗಮನವನ್ನು ವ್ಯವಸ್ಥಿತವಾಗಿ ಕೇಂದ್ರೀಕರಿಸಿದರು. ನೈಸರ್ಗಿಕ ಸಂಪನ್ಮೂಲ, ವಿದ್ಯೆ, ನಗರ ಪ್ರಾಂತದ ಬಡತನ-ಜೀವನೋಪಾಯ, ಆರೋಗ್ಯ, ಜನತಾಂತ್ರಿಕ ಹೋರಾಟ ಮತ್ತು ಕಲೆಯ ಕ್ಷೇತ್ರಗಳಲ್ಲಿ ದೊರಾಬ್ಜಿ ಟಾಟಾ ದತ್ತಿ ಅನುದಾನಗಳನ್ನು ನೀಡಿತು, ರತನ್ ಟಾಟಾ ದತ್ತಿ ಇವುಗಳಿಗಿಂತ ಮಿಗಿಲಾಗಿ ಗ್ರಾಮೀಣ ಜೀವನೋಪಾಯ, ಜಲ, ಮತ್ತು ಬಡವರ ವಿತ್ತೀಯ ಸೇವೆಗಳತ್ತ ತನ್ನ ಕಾರ್ಯವನ್ನು ಕೇಂದ್ರೀಕರಿಸಿತು. ಇದರ ಜೊತೆಗೆ ರಾಜಾಸ್ಥಾನ, ಛತ್ತೀಸ್ ಘಡ, ಝಾರ್ಖಂಡ, ಮಧ್ಯಪ್ರದೇಶ ಹೀಗೆ ಕೆಲವು ಭೌಗೋಳಿಕ ಪ್ರಾಂತಗಳಲ್ಲಿ ಹೆಚ್ಚಿನ ಗಮನವನ್ನು ಹರಿಯಿಸಲಾಗಿತ್ತು. ಈಗ ಈ ಕಾರ್ಯವೈಖರಿಯಲ್ಲಿ ಇನ್ನೂ ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದು.

ಟಾಟಾರ ವ್ಯಾಪಾರೀ ಜಗತ್ತು, ದತ್ತಿಗಳ ಜಗತ್ತು ಭಿನ್ನವಾದದ್ದು. ಶಿಂಗೂರಿನಲ್ಲಿ ನ್ಯಾನೋ ಘಟಕ ಬರಬಾರದೆಂದು ಟಾಟಾರ ವಿರುದ್ಧ ಧರಣಿ ಕೂತಿದ್ದ ಅನೂರಾಧಾ ತಲ್ವಾರರ ಸಂಸ್ಥೆಗೆ ಟಾಟಾ ದತ್ತಿಗಳೂ ದೇಣಿಗೆಯನ್ನು ನೀಡಿದ್ದುವು. ಮೇಧಾ ಪಾಟ್ಕರ್  ಮತ್ತು ಅನೂರಾಧಾ ತಲ್ವಾರ್ ವ್ಯಾಸಂಗ ಮಾಡಿದ್ದು ಟಾಟಾ ದತ್ತಿಗಳ ಸಹಾಯದಿಂದ ನಡೆಯುತ್ತಿದ್ದ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯಲ್ಲಿ. ಮಮತಾರ ತೃಣಮೂಲಕ್ಕೂ ಟಾಟಾ ಸಂಸ್ಥೆಗಳು ದೇಣಿಗೆ ನೀಡಿದ್ದುವು. ಶಿಂಗೂರಿನ ಗಲಭೆಯ ನಂತರ ಮಮತಾ ಅದನ್ನು ಹಿಂದಕ್ಕೆ ನೀಡಿದರು. ಟಾಟಾ ಸಂಸ್ಥೆಯವರಿಗೆ ತಮ್ಮನ್ನು ವಿರೋಧಿಸಿದವರಿಗೆ ದೇಣಿಗೆಯನ್ನು ನೀಡಿದ್ದರಲ್ಲಿ ಯಾವ ವಿರೋಧಾಭಾಸವೂ ಕಂಡಂತಿಲ್ಲ.

ಈಗ ರತನ್ ಟಾಟಾ ತಮ್ಮ ಹೆಚ್ಚಿನ ಸಮಯವನ್ನು ದತ್ತಿಗಳಿಗೆ ನೀಡುವುದರಿಂದ, ದತ್ತಿಗಳ ಕಾರ್ಯವೈಖರಿಯಲ್ಲಿ ಬದಲಾವಣೆಗಳಾಗಬಹುದು. ರತನ್ ಟಾಟಾರ ದೃಕ್ಪಥ ಅಂತರರಾಷ್ಟ್ರೀಯವಾದದ್ದು. ಅವರಡಿಯಲ್ಲಿ ಟಾಟಾ ಸಂಸ್ಥೆಯ ವ್ಯಾಪಾರ ಹೆಚ್ಚು ಅಂತರರಾಷ್ಟ್ರೀಯವಾಗಿ, 80 ದೇಶಗಳಿಗೆ ಹಬ್ಬಿತ್ತು. ಟೆಟ್ಲಿ ಚಹಾ, ಜಾಗ್ವಾರ್ ಲ್ಯಾಂಡ್ ರೋವರ್ ಕಾರು, ಕೋರಸ್ ಉಕ್ಕು ಹಾಗೂ ತಮ್ಮ ಅಧಿಕಾರಾವಧಿಯಲ್ಲಿಯೇ ಕೊಳ್ಳಲು ಪ್ರಯತ್ನಿಸಿದ ಓರಿಯಂಟ್ ಎಕ್ಸ್ ಪ್ರೆಸ್ ಹೋಟೇಲು ಸರಣಿ ಇವೆಲ್ಲವೂ ಟಾಟಾರ ಬಹುರಾಷ್ಟ್ರೀಯತೆಯನ್ನು ನಿರೂಪಿಸಿವೆ. ರತನ್ ಟಾಟಾರ ವೈಯಕ್ತಿಕ ಆಸಕ್ತಿಯಿಂದ ಕೈಗೊಂಡ ಎರಡು ದೊಡ್ಡ ದೇಣಿಗೆಗಳ ಮಹತ್ವವೂ ಮರೆಯುವಂತಿಲ್ಲ. ತಮ್ಮ ತಾಜ್ ಲ್ಯಾಂಡ್ಸ್ ಎಂಡ್ ಹೋಟೇಲಿನಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಕ್ಲಾಸ್ ರೂಮನ್ನು ಅವರ ಅಂತರರಾಷ್ಟ್ರೀಯ ತಾಲೀಮಿಗಾಗಿ ಕಟ್ಟಿಸಿಕೊಟ್ಟರು. ಅಲ್ಲದೇ ತಾವು ಓದಿದ ಕೋರ್ನೆಲ್ ವಿಶ್ವವಿದ್ಯಾಲಯಕ್ಕೆ 50 ಮಿಲಿಯ ಡಾಲರಿನ ದತ್ತಿ ಕೊಟ್ಟರು. ಹೀಗಾಗಿ ಮುಂದೆಯೂ ಅವರ ನೇತೃತ್ವದ ದೇಣಿಗೆ ಅಂತರರಾಷ್ಟ್ರೀಯ ಬಣ್ಣ ಪಡಯಬಹುದಾಗಿದೆ.

ದತ್ತಿಗಳೂ ಒಂದು ನೀತಿಯನ್ನನುಸರಿಸಿ ನಡೆದಿವೆ ಯಾವ ಸಮಾಜದಲ್ಲಿ ವ್ಯಾಪಾರ ಮಾಡಿ ಲಾಭವನ್ನಾರ್ಜಿಸುತ್ತೇವೆಯೋ ಆ ಜಾಗವನ್ನು ಉತ್ತಮ ಪಡಿಸಲು, ಅಲ್ಲೇ ಹಂಚಲು ದತ್ತಿಯನ್ನು ಉಪಯೋಗಿಸಬೇಕು. ಹೀಗೆ ಟಾಟಾ ದತ್ತಿಗಳ ಅಂತರರಾಷ್ಟ್ರೀಕರಣವೂ ಸಮರ್ಪಕವಾಗಿಯೇ ಕಾಣಿಸುತ್ತದೆ.

ಟಾಟಾ ಮೇಲೆ ಎಂದೂ ಕಳಂಕವೇ ಬಿದ್ದಿಲ್ಲವೆಂದೇನೂ ಇಲ್ಲ. ಚಹಾ ತೋಟಗಳಿರುವ ಅಸ್ಸಾಂನಲ್ಲಿ ಉಗ್ರಗಾಮಿ ಉಲ್ಫಾಗಳಿಗೆ ಪರೋಕ್ಷವಾಗಿ ಸಹಾಯ ಮಾಡಿ ತಮ್ಮ ವ್ಯಾಪಾರವನ್ನು ಉಳಿಸಿಕೊಂಡಿದ್ದಾರೆಂದೂ, ಉಕ್ಕು ಕಾರ್ಖಾನೆಯಿರುವ ಝಾರ್ಖಂಡದಲ್ಲಿ ಬುಡಕಟ್ಟು ಜನಾಂಗದವರಿಗೆ ನ್ಯಾಯ ಒದಗಿಸಿಲ್ಲವೆಂದೂ, ಶಿಂಗೂರಿನ ಮಮತಾ ಕಾಂಡವೂ, ನೀರಾ ರಾಡಿಯಾ ಟೇಪುಗಳಿಂದ ಹೊರಬಂದ ಮಾತುಕತೆಗಳೂ ಟಾಟಾರ ವ್ಯಾಪಾರದ ಮೇಲೆ ಪ್ರಶ್ನೆಗಳನ್ನು ಕೂಡಿಸಿವೆ. ಆದರೂ, ನಮ್ಮ ದೇಶದ ಅತ್ಯಂತ ಗೌರವ ಪಾತ್ರ ವ್ಯಾಪಾರಿ ಸಂಸ್ಥೆಯಾಗಿ ಟಾಟಾ ಸಂಸ್ಥೆ ನಿಂತಿದೆ. ಅದರ ಖ್ಯಾತಿಗೆ ಸಂಸ್ಥಾಪಕರಾದ ಜೆಮ್ಷಡ್ಜಿ ಟಾಟಾರಷ್ಟೇ ಅದನ್ನು ಬೆಳೆಯಿಸಿದ ಜೆ.ಆರ್.ಡಿ. ಮತ್ತು ರತನ್ ಟಾಟಾರ ದೇಣಿಗೆಯೂ ಮಹತ್ವದ್ದು.

ಪಡೆದ ಲಾಭವನ್ನೆಲ್ಲಾ ಸಮಾಜಕ್ಕರ್ಪಿಸಿ ಕೆರೆಯನೀರನು ಕೆರೆಗೆಚೆಲ್ಲಿ ವರವಪಡೆದ ವ್ಯಾಪಾರಿಗಳು ನಮ್ಮಲ್ಲಿ ವಿರಳ.

No comments:

Post a Comment