Sunday, October 28, 2012

ದೇವರ ಪ್ರಸಾದ, ಬಕ್ಷೀಸು, ರಸೀತಿಪುಸ್ತಕ


ಗಣಪತಿ ಹಬ್ಬದ ಸೀಜನ್ ಬಂತೆಂದರೆ ರಸೀದಿಯ ಪುಸ್ತಕಗಳು ಹೊರಬಂದು ಚಂದಾ ವಸೂಲಿಯ ಕಾರ್ಯಕ್ರಮ ಪ್ರಾರಂಭವಾಗಿಬಿಡುತ್ತದೆ. ಮೊಹಲ್ಲಾದ ಪಡ್ಡೆ ಹುಡುಗರಿಗೆಲ್ಲಾ ಇದ್ದಕ್ಕಿದ್ದಂತೆ ಭಕ್ತಿಯ ಭಾವ ಉಕ್ಕಿ ಹರಿದು ಸಾಂಸ್ಕೃತಿಕ ಪರಿಜ್ಞಾನ ಬಂದುಬಿಡುತ್ತದೆ. ಈ ಗಣಪತಿ ಹಬ್ಬದ ಅರ್ಥವ್ಯವಸ್ಥೆ ಗುಜರಾತಿನಲ್ಲಿ ನಡೆವ ದಸರಾ ಹಬ್ಬದ ದಾಂಡಿಯಾಗಿಂತ ಮತ್ತು ದೀಪಾವಳಿಯ ಬಕ್ಷೀಸಿನ ಅರ್ಥವ್ಯವಸ್ಥೆಗಿಂತ ಭಿನ್ನವಾಗಿದೆ.

ಗುಜರಾತಿನಲ್ಲಿ ಅನೇಕ ವರ್ಷಗಳನ್ನು ಕಳೆದ ನನಗೆ ಅಲ್ಲಿನ ವ್ಯಾಪಾರೀ ಮನೋಭಾವದಲ್ಲಿರುವ ವಿಚಿತ್ರ ನ್ಯಾಯ ಅರ್ಥವಾಗುವುದಕ್ಕೆ ವರ್ಷಗಳೇ ಹಿಡಿದುವು. ಆದರೆ ಅದನ್ನು ಅರ್ಥೈಸಿದ ನಂತರ ಅಲ್ಲಿನ ಜೀವನ ದುಸ್ತರವೆನ್ನಿಸಲಿಲ್ಲ. ಮೊದಲಿಗೆ ದಸರಾದ ದಾಂಡಿಯಾದ ಕಥೆ ಹೇಳುತ್ತೇನೆ. ಪ್ರತೀ ದಸರಾದಲ್ಲೂ ಹತ್ತೂ ದಿನ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ದಾಂಡಿಯಾ ಕಾರ್ಯಕ್ರಮವೆಂದರೆ ರಾತ್ರೆಯ ಊಟದ ನಂತರ ಇಡೀ ಸಮುದಾಯ ಒಂದೆಡೆ ಸೇರಿ ಅಲ್ಲಿನ ದಾಂಡಿಯಾ ಸಂಗೀತಕ್ಕೆ ವೃತ್ತಾಕಾರದಲ್ಲಿ ಕೋಲಾಟ ಆಡುವುದು. ನಿಮಗೆ ಆಟ ಬರಬೇಕೆನ್ನುವ ನಿಯಮವೇನೂ ಇಲ್ಲ. ಭಾಗವಹಿಸುವ ಮನಸ್ಸಿರಬೇಕು ಅಷ್ಟೇ. ಮೊದಲ ದಿನ ಕೆಲ ಘಂಟೆಗಳು ನಡೆಯುವ ಈ ಕಾರ್ಯಕ್ರಮ ದಶಮಿಯ ಹೊತ್ತಿಗೆ ಇಡೀ ರಾತ್ರೆಯ ಕಾರ್ಯಕ್ರಮವಾಗುತ್ತದೆ. ಸಾಮಾನ್ಯತಃ ಎಲ್ಲ ಮೊಹಲ್ಲಾಗಳಲ್ಲೂ, ಕ್ಯಾಂಪಸ್ಸಿನಲ್ಲೂ ತಮ್ಮದೇ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ಸಮುದಾಯದವರನ್ನು ಯಾರೂ ಹಣ ಕೇಳುವುದಿಲ್ಲ. ಆದರೆ ದಿನಕ್ಕೊಂದಿಷ್ಟು ಜನರ ಮನೆಯಿಂದ ಪ್ರಶಾದ್ ಬರುತ್ತದೆ, ಹಣ ಎಲ್ಲಿಂದ ಬಂತು, ಹೇಗೆ, ಎಷ್ಟು ಎನ್ನುವ ಹಿಸಾಬಿಲ್ಲದೇ ಸಂಭ್ರಮವಾಗಿ ಹಬ್ಬ ನಡೆಯುತ್ತದೆ. ಇದು ಯಾವ ನಿಯಮಗಳಿಗೂ ಬದ್ಧವಲ್ಲ. ನಮ್ಮ ಮನೆಯಲ್ಲಿ ನಡೆಯುವ ಜಂಟಿ ಸಂಸಾರದ ಖರ್ಚಿನ ಮಾದರಿಯಲ್ಲಿ ನಡೆದುಹೋಗುತ್ತದೆ. ಇಲ್ಲಿ ಯಾವ ಸರಕಾರದ ಪಾತ್ರವೂ ಇಲ್ಲ.

ಇದಲ್ಲದೇ ಹೆಚ್ಚಿನ ಮನರಂಜನೆ ಬೇಕಿದ್ದರೆ ಫಾಲ್ಗುಣಿ ಫಾಟಕ್ ಳಂತಹ ದಾಂಡಿಯಾ ರಾಣಿ ಹಾಡುವ, ಸಿನೀ ತಾರೆಯರು ಭಾಗವಹಿಸುವ ದಾಂಡಿಯಾಕ್ಕೂ ಹೋಗಬಹುದು. ಅದಕ್ಕೆ ಪ್ರಾಯೋಜಕರಿರುತ್ತಾರೆ, ಪ್ರವೇಶ ಶುಲ್ಕವಿರುತ್ತದೆ. ಇದು ಶುದ್ಧ ಮಾರುಕಟ್ಟೆಯ ಮಾದರಿ. ಇಲ್ಲಿ ನಿಮಗೆ ಫಾಲ್ಗುಣಿ ಫಾಟಕ್ ಳ ಸಂಗೀತ ಬೇಕಿದ್ದರೆ ಹಣ ತೆತ್ತಬೇಕು. ಸಾಂಸ್ಕೃತಿಕ ಮನರಂಜನೆಯ ಜಾಗವನ್ನುಮಾರುಕಟ್ಟೆ ಪೂರ್ತಿಯಾಗಿ ಆಕ್ರಮಿಸುವ ಮೊದಲು ಇದರಲ್ಲೂ ಎರಡು ವರ್ಗಗಳಿದ್ದುವು. ಹಣ ತೆತ್ತು ಒಳಹೋಗುವ ಲೈವ್ ಕಾರ್ಯಕ್ರಮ ನೋಡುವ ಶ್ರೀಮಂತ/ಧಾರಾಳಿ ಜನರೊಂದು ವರ್ಗವಾದರೆ, ಒಳ ಹೋಗಲು ರೊಕ್ಕವಿಲ್ಲದೆಯೇ ಆಚೆಬದಿಯಲ್ಲಿನ ಟಿವಿ ಸ್ಕ್ರೀನಿನಲ್ಲಿ ಆನಂದ ಪಡೆವ ಬಡ/ಜುಗ್ಗ ಜನರದ್ದು ಮತ್ತೊಂದು ವರ್ಗ. ಬೆಂಗಳೂರಿನ ಕೋಟೆ ಮೈದಾನದಲ್ಲಿ ನಡೆಯುವ ರಾಮನವಮಿ ಸಂಗೀತೋತ್ಸವವೂ ಹೀಗೇ ನಡೆಯುತ್ತಿತ್ತು. ಲೈವ್ ನೋಡುವವರು ಕೋಟೆ ಮೈದಾನದಲ್ಲಿ, ಸಂಗೀತವನ್ನಷ್ಟೇ ಕೇಳುವವರು ಮಕ್ಕಳ ಕೂಟದ ಕಲ್ಲುಬೆಂಚನ್ನು ಆವರಿಸುತ್ತಿದ್ದರು.

ನಮ್ಮ ಅರ್ಥವ್ಯವಸ್ಥೆಗೆ ಮಾರುಕಟ್ಟೆಯ ಸೋಂಕು ತಟ್ಟುವ ಮುನ್ನ ಸರಕಾರದ ಸವಲತ್ತುಗಳೂ ಹೀಗೇ ಇರುತ್ತಿದ್ದುವು – ರಸ್ತೆ ನಿರ್ಮಾಣ, ರೈಲು, ಸಾರಿಗೆ ವ್ಯವಸ್ಥೆ, ಸೇತುವೆ, ವಿಮಾನಾಶ್ರಯ ಎಲ್ಲವೂ ಸರಕಾರದ ಸುಪರ್ದಿನಲ್ಲಿತ್ತು. ಸರಕಾರ ಒಂದಿಷ್ಟು ಜನರ ಮೇಲೆ ತೆರೆಗೆ ಹೇರುತ್ತಿತ್ತು. ಆದರೆ ಆ ತೆರಿಗೆಯಿಂದ ಕಟ್ಟಲಾದ ಈ ವ್ಯವಸ್ಥೆ ಸವಲತ್ತುಗಳನ್ನು ಜನರೆಲ್ಲರೂ ಸಮಾನವಾಗಿ ಉಪಯೋಗಿಸುತ್ತಿದ್ದರು.

ದಸರಾದಿಂದ ದೀಪಾವಳಿಗೆ ಬರೋಣ. ದೀಪಾವಳಿ ಬಂತೆಂದರೆ ಬಕ್ಷೀಸಿನ ಸೀಜನ್ನು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಬಕ್ಷೀಸು ಎನ್ನುವುದು, ಯಾವುದಾದರೂ ಸೇವೆಯೊದಗಿಸಿದವರಿಗೆ ನಾವು ಖುಷಿಯಿಂದ ಕೊಡುವ ಕೃತಜ್ಞತಾ ಮೊತ್ತವಾಗಿರುತ್ತದೆ. ಆದರೆ ಅರ್ಥಜಗತ್ತನ್ನು ಅರೆದು ಕುಡಿದಿರುವ ಗುಜರಾತಿನಲ್ಲಿ ಈ ಖುಷಿಯ ಮೊತ್ತ ಒಂದು ಸೂತ್ರದ ಪ್ರಕಾರ ಬೋನಸ್ಸಿನ ರೂಪ ಪಡೆದಿದೆ. ಉತ್ಪತ್ತಿಯ ಕ್ಷೇತ್ರದಲ್ಲಿರುವ ಕಡ್ಡಾಯ ಬೋನಸ್ಸಿನ ಹಾಗೆ, ವರ್ಷಕ್ಕೆ ಒಂದು ತಿಂಗಳ ಅಧಿಕ ಸಂಬಳ ಕೊಡಬೇಕೆನ್ನುವುದು ಅಲ್ಲಿಯ ನಿಯಮ. ಆದರೆ ಬಕ್ಷೀಸು ನೀಡುವುದು ಒಂದು ಸರ್ವವ್ಯಾಪಿ ಸಂಭ್ರಮದ ಸಂಗತಿ. ದೀಪಾವಳಿಯಲ್ಲಿ ಬ್ಯಾಂಕಿಗೆ ಹೋಗಿ ಹಣ ತೆಗೆದರೆ ನಿಮಗೆ ಗರಮಾಗರಂ ಹೊಸ ನೋಟುಗಳು ಸಿಗುತ್ತವೆ. ಬಕ್ಷೀಸಿಗೆ ಯಾರೂ ಹೊರತಲ್ಲ. ಮನೆಗೆ ಪತ್ರಿಕೆ ಹಾಕುವ ಹುಡುಗ, ಹಾಲಿನ ಪ್ಯಾಕೆಟ್ಟು ಸರಬರಾಜು ಮಾಡುವವನು, ಕಡೆಗೆ ಕೇಶಕರ್ತನ ಮಾಡುವ ಸಲೂನಿನ ಹುಡುಗ ಎಲ್ಲರೂ ಬಕ್ಷೀಸಿಗೆ ರೆಡಿಯೇ. ಆದರೆ ಒಂದು ವಿಚಾರವಂತೂ ಸತ್ಯ. ಬಕ್ಷೀಸು ಕೇಳುವವರು, ಬಯಸುವವರು ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ವರ್ಷವಿಡೀ ಸೇವೆ ಮಾಡಿದವರೇ.

ದೀಪಾವಳಿಯ ಬಕ್ಷೀಸು ಕೃತಜ್ಞತೆಯ ದ್ಯೋತಕ. ಸೇವೆ ಸಲ್ಲಿಸಿದವರಿಗೆ ನಾವು ತೋರಿಸುವ ಸಜ್ಜನಿಕೆ. ಇದು ಕಾನೂನಿನ-ನಿಯಮದ ಮೇಲೆ ನಡೆಯುವುದಲ್ಲವಾದರೂ ಒಂದು ಸೂತ್ರದ ಆಧಾರದ ಮೇಲೆ ನಡೆಯುತ್ತದೆ. ನಮ್ಮ ಜೀವನಕ್ಕೆ ಮಾಡಿಕೊಟ್ಟ ಅನುಕೂಲಕ್ಕೆ ನಾವು ಗೊಣಗದೇ ಕಟ್ಟುವ ಸುಂಕ. ನ್ಯಾಯಕ್ಕೆಂದು ಒಂದು ತಿಂಗಳ ಸಂಬಳದ ಲೆಕ್ಕ ಕಟ್ಟಿದ್ದಾರೆ. ಇಲ್ಲಿ ಕಾರ್ಯಕಾರಣ ಸಂಬಂಧ ಅಷ್ಟು ಬಿಗಿಯಾಗಿಲ್ಲದಿದ್ದರೂ ಸಂಬಂಧದ ಒಂದು ಸೂತ್ರವಿದೆ.

ಆದರೆ ನಮ್ಮ ಅರ್ಥವ್ಯವಸ್ಥೆಯನ್ನು ಮಾರುಕಟ್ಟೆಯ ಸೂತ್ರಗಳು ಟೇಕೋವರ್ ಮಾಡಿದ ಕೂಡಲೇ - ಅರ್ಥಾತ್: ಪ್ರಜೆಗಳು ಗ್ರಾಹಕರಾದ ಕೂಡಲೇ - ಆದ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿ – ಕೆಲವು ಸವಲತ್ತುಗಳನ್ನು ಎಲ್ಲರೂ ಸಮಾನವಾಗಿ ಉಪಯೋಗಿಸುವುದಿಲ್ಲವಾದ್ದರಿಂದ, ಸಾಮಾನ್ಯವಾಗಿ ಯಾರು ಎಷ್ಟು ಉಪಯೋಗಿಸುತ್ತಾರೋ ಅಷ್ಟು ಉಪಯೋಗಿ ಶುಲ್ಕವನ್ನು ಕಟ್ಟಬೇಕೆಂಬ ಮೆಕಿನ್ಸೀಕರಣದ ಸೂತ್ರ ಬಂತು. ಹೀಗಾಗಿ ಹೊಸ ರಸ್ತೆ ಕಟ್ಟಿದರೆ ಅದನ್ನು ಉಪಯೋಗಿಸುವವರಿಂದ ಸುಂಕ ವಸೂಲಿ, ಜನಸಾಮಾನ್ಯರಿಗೆ ಆ ರಸ್ತೆ ಸುಂಕವಿಲ್ಲದೇ ಅಲಭ್ಯ. ಖಾಸಗೀ ಸಂಸ್ಥೆಗಳು ಕಟ್ಟಿದ ಹೊಸ ವಿಮಾನಾಶ್ರಯಕ್ಕೂ ಉಪಯೋಗಿ ಶುಲ್ಕ, ಹೀಗೆ ಹಣ ಕಟ್ಟಿದ ಉಪಯೋಗಿಗಳಿಗೇ ಮಾತ್ರವೇ ಕೆಲವು ಸೇವೆಗಳನ್ನೊದಗಿಸುವ ವ್ಯಾಪಾರಕ್ಕೆ ಸರಕಾರವೂ ಇಳಿಯಿತು. ಇದರಲ್ಲಿ ಒಂದು ರೀತಿಯ ನ್ಯಾಯವೂ ಇದೆಯೆನ್ನಿ – ಜೀವನದಲ್ಲಿ ಎಂದೂ ಉಪಯೋಗಿಸದ ಸೇತುವೆ, ರಸ್ತೆ, ವಿಮಾನಾಶ್ರಯಕ್ಕೆ ಎಲ್ಲರೂ ತೆತ್ತಿರುವ ತೆರಿಗೆಯ ಬೊಕ್ಕಸವನ್ನೇಕೆ ಬರಿದು ಮಾಡಬೇಕು. ಬದಲಿಗೆ ಸ್ಥಳೀಯರಿಗೆ ಉಪಯೋಗವಾಗುವುದಾದರೆ ಅವರೇ ಅದರ ಖರ್ಚನ್ನು ಭರಿಸಲಿ.
ಹೀಗೆಯೇ ವ್ಯಾಪಾರೀಕರಣ ಮುಂದುವರೆದಾಗ ಫಾಲ್ಗುಣಿಯ ಕಾರ್ಯಕ್ರಮಕ್ಕೆ ಹೊರಗಡೆ ಸ್ಕ್ರೀನುಗಳಿಲ್ಲ. ಆವರಣವನ್ನೇ ಹಿಗ್ಗಿಸಿ, ಒಳಗೇ ಅನೇಕ ಸಿಸಿಟಿವಿ ಪರದೆಗಳನ್ನು ಹಾಕಿದ್ದಾರೆ. ರಾಮನವಮಿಯ ಸ್ಪೀಕರುಗಳೆಲ್ಲಾ ಕೋಟೆ ಆವರಣದೊಳಮುಖವಾಗಿ ಮಕ್ಕಳಕೂಟದಲ್ಲಿ ಖಾಲಿ ತಣ್ಣನೆಯ ಗಾಳಿ ಮಾತ್ರ ಸಿಗುತ್ತದೆ. ಬಸವನಗುಡಿ ಗಣೇಶೋತ್ಸವದಲ್ಲಿ ಸುತ್ತಲೂ ಮುಚ್ಚಿದ ಬಟ್ಟೆಯ ನಡುವಿನಿಂದ ನಡೆದು ಒಳಹೋಗಬೇಕು. ಮಾರುಕಟ್ಟೆಯ ಸೂತ್ರಗಳು ರೊಕ್ಕ ಕೊಟ್ಟವರಿಗೆ ಸೇವೆಯನ್ನೊದಗಿಸುವುದನ್ನ ಪ್ರೋತ್ಸಾಹಿಸುವುದಲ್ಲದೇ, ತುಸು ಅತಿರೇಕಕ್ಕೆ ಹೋದಾಗ, ಹಣ ಕೊಡದವರಿಗೆ ಅದರ ಸೈಡ್ ಖುಷಿಯೂ ದಕ್ಕದಂತೆ ಮಾಡುತ್ತದೆ. ಆ ಮೂಲಕ ಅವರನ್ನು ರೊಕ್ಕ ತೆತ್ತುವತ್ತ ಆಕರ್ಷಿಸುವ ಹುನ್ನಾರವಾಗುತ್ತದೆ ಎಂದು ಮೆಕಿನ್ಸಿಗಳು ವಾದಿಸುತ್ತಾರೆ.

ಈ ಗಣಪತಿ ಹಬ್ಬದ ರಸೀದಿಯು ಕಥೆಯನ್ನು ವಿವರಿಸಲು ಯಾವ ಅರ್ಥಶಾಸ್ತ್ರವೂ ನಮ್ಮ ರಕ್ಷಣೆಗೆ ಬರುವುದಿಲ್ಲ. ಪಡ್ಡೆ ಹುಡುಗರ ಭಕ್ತಿಗೆ ಸುಂಕ ಕೊಡುವುದರಲ್ಲಿ ಯಾವ ಖುಷಿಯೂ ಇಲ್ಲ. ಆದರೂ ಚಂದಾ ನೀಡುತ್ತೇವೆ. ಹುಡುಗರು ಕೂಗಾಡಬಹುದು, ಹೂಕುಂಡಗಳನ್ನು ಮುರಿಯಬಹುದು, ಗೇಟನ್ನು ಕುಕ್ಕಿ ಹೋಗಬಹುದು, ಚಂದಾನೀಡದಿದ್ದರೆ ದೃಷ್ಟಿಯುದ್ಧಕ್ಕೆ ನಿರತರಾಗಬಹುದು, ಅತ್ತ ಕೊಟ್ಟು ಕೈತೊಳೆದುಕೊಳ್ಳುವುದೇ ಒಳ್ಳೆಯದು ಎಂದು ಭಾವಿಸಿ ಆದಷ್ಟೂ ಕಡಿಮೆ ಮೊತ್ತಕ್ಕೆ ರಸೀದಿಯನ್ನು ಇಸಿದುಕೊಳ್ಳುತ್ತೇವೆ. ಇದು ಒಂದು ಸರಕಾರಿತೆರಿಗೆಯಂತಹ ಅನಿವಾರ್ಯ ಕಿರಿಕಿರಿ. ಆದರೆ ಇದು ಇಲ್ಲಿಗೆ ಮುಗಿಯದೇ, ನಮ್ಮ ಮೊಹಲ್ಲಾದ ರಸ್ತೆಯೂ ಬಂದ್ ಆಗಿ, ಕರ್ಕಶ ಆರ್ಕೆಸ್ಟ್ರಾವನ್ನೂ ಕೇಳಬೇಕಾದ ಕಿರುಕುಳಕ್ಕೆ ನಮ್ಮ ಹುಡುಗರು ನಮ್ಮನ್ನು ದಬ್ಬುತ್ತಾರೆ.

ಒಂದು ವರ್ಷದಿಂದ ಸುದ್ದಿಯಲ್ಲಿರುವ ಬೆಂಗಳೂರು ವಿಮಾನಾಶ್ರಯದ ಬಳಿ ವಸೂಲು ಮಾಡುವ ಯತ್ನದಲ್ಲಿರುವ ಸುಂಕದ ಕಥೆ ಇದೇ ರೀತಿಯದ್ದು. ಸಾಮಾನ್ಯತಃ ದೀಪಾವಳಿ ಬಕ್ಷೀಸಿನಂತೆ ಒಳ್ಳೆಯರಸ್ತೆಯನ್ನು ಉಪಯೋಗಿಸಿದ ಸಂತಸದಿಂದ, ಸಮಯವನ್ನುಳಿಸಿದ ಕೃತಜ್ಞತೆಯಿಂದ ನೈಸ್ ರಸ್ತೆಯ ಮೇಲೆ ನೀಡುವ ಸುಂಕದಂತೆ ಇದರ ಕಥೆಯೂ ಇರಬೇಕಿತ್ತು. ಅರ್ಥಾತ್: ಸುಂಕ ಕಟ್ಟಲು ಇಷ್ಟವಿಲ್ಲದಿದ್ದರೆ ಆ ರಸ್ತೆಯನ್ನೇರದೇ ಇರುವ ಹಕ್ಕೂ ಜನರಿಗೆ ಇರಬೇಕಿತ್ತು. ಸಾಮಾನ್ಯತಃ ದಿನವೂ ಉಪಯೋಗಿಸುವ ರಸ್ತೆಗಳಿಗೆ, ನಗರಪ್ರಾಂತದ ರಸ್ತೆಗಳಿಗೆ ಸುಂಕ ಹಾಕುವುದು ಮಕಿನ್ಸೀಕರಣದಲ್ಲೂ ಕಂಡದ್ದಿಲ್ಲ. ಆದರೆ ಇನ್ನೂ ಕಟ್ಟುತ್ತಿರುವ, ಹಾಗೂ ಕಟ್ಟುವ ಪ್ರಕ್ರಿಯೆಯಲ್ಲಿ ಈಗ ಆ ಭಾಗದ ರಸ್ತೆಯನ್ನು ಉಪಯೋಗಿಸುವ ಕಷ್ಟದ ಕಿರುಕುಳವನ್ನು ಅನುಭವಿಸುತ್ತಿರುವವರ ಮೇಲೆ ಹೇರುತ್ತಿರುವ ಈ ಸುಂಕ ಯಾವ ರೀತಿಯ ನ್ಯಾಯದ ದೃಷ್ಟಿಯಿಂದ ನೋಡಲು ಸಾಧ್ಯ? ಏಕಸ್ವಾಮ್ಯ ಪದ್ಧತಿಯೂ, ಸರಕಾರದ ಅಧಿಕಾರವೂ ಒಂದೆಡೆ ಕೈಗೂಡಿಸಿದಾಗ ಏನಾಗಬಹುದು ಎನ್ನುವುದಕ್ಕೆ ಈ ಸುಂಕದ ವಸೂಲಿಯೇ ಸಾಕ್ಷೀಭೂತವಾಗಿದೆ. ಬೇಡದ ಗಲಾಟೆಗೆ ಹರಿಯುವ ರಸೀತಿಯಂತೆಯೇ, ಭಿಕಾರಿ ಸರಕಾರದ ಈ ವ್ಯವಸ್ಥೆ ನಮಗೆ ಕಾಣುತ್ತಿದೆ.No comments:

Post a Comment