ಇದು ನಮ್ಮ ಸರಕಾರಿ ಶಾಲೆ/ ಶಾಲೆಗಿರುವುದೆ ನಾಲ್ಕು ಮೂಲೆ
ಹಂಚಿರುವ ಮೂಲೆಯಲ್ಲಿ ಮೇಷ್ಟ್ರು ಕೂರುವರು/ ಉಳಿದ ಕಡೆಗಳಲ್ಲಿ ನೀರು ಸೋರುವುದು
-ಎಚ್.ಡುಂಡಿರಾಜ್.

ಸಮಸ್ಯೆಗಳು ಕಡಿಮೆಯೇನಲ್ಲ. ಈ ರೀತಿಯ ಸಮಸ್ಯೆಗಳನ್ನು
ವ್ಯಾಪಾರಿಗಳ ಮುಂದಿಟ್ಟಾಗ ಇದು ಗಿಟ್ಟದ ವ್ಯಾಪಾರ, ಇದನ್ನು ಮುಚ್ಚಿಬಿಡೋಣ ಎಂದು ಹೇಳುವುದು ಸಹಜ.
ಅಥವಾ ಎರಡು ಶಾಲೆಗಳನ್ನು ಒಂದರಲ್ಲಿ ವಿಲೀನ ಮಾಡಿ ನೋಡೋಣ ಎನ್ನಬಹುದು. ಶಾಲೆಗಳನ್ನು ಮುಚ್ಚುವ,
ವಿಲೀನಗೊಳಿಸುವ ಈ ಪರಿಭಾಷೆ ನಮಗೆ ಕೇಳಿಸುತ್ತಿರುವುದು ಸರಕಾರದಿಂದ! ನಿಧಾನವಾಗಿ ಸರಕಾರದೊಳಕ್ಕೆ ಹಾಸುಹೊಕ್ಕಿರುವ
ಮೆಕಿನ್ಸೀಕರಣವು ನಮಗೆ ಕ್ರಮಕ್ರಮೇಣ ಕಾಣಿಸುತ್ತಿದೆ.
ಮೆಕಿನ್ಸೀಕರಣ ಎಂದರೇನು? ಸರಕಾರವನ್ನೂ ಒಂದು
ಜವಾಬ್ದಾರಿಯ ಮಾಪದಂಡದಲ್ಲಿ ಅಳೆದು ಅದರ ಲೇನ್-ದೇನ್ ಗಳನ್ನು ಪರೀಕ್ಷಿಸುವುದು ಈ ಪರಿಭಾಷೆ. ಇದು
ಒಂದು ಮಟ್ಟದಲ್ಲಿ ಸ್ವಾಗತಾರ್ಹವಾದರೂ ಆ ವಿಚಾರಧಾರೆಯ ಬಗ್ಗೆ ನಾವು ಎಚ್ಚರದಿಂದಿರಬೇಕು. ಸರಕಾರ
ತನ್ನ ಕರ್ತವ್ಯದ ಬಗ್ಗೆ ಜನತೆಗೆ ಜವಾಬುಗಳನ್ನು ನೀಡಬೇಕು ತನ್ನ ಕೆಲಸದ ಪ್ರಗತಿಪತ್ರವನ್ನು
ತಯಾರಿಸಬೇಕು ಎನ್ನುವ ಧಾರೆ ಸರಿಯಾದದ್ದಾದರೂ ಆ ಜವಾಬುಗಳನ್ನು ಮಾರುಕಟ್ಟೆಯ ಪರಿಭಾಷೆಗೆ
ಶರಣಾಗಿಸುವುದು ಸರಿಯೇ? ಸೋಮಾರಿ ಸರಕಾರಗಳು ಈ ಪರಿಭಾಷೆಯನ್ನು ದುರುಪಯೋಗ
ಪಡಿಸಿಕೊಳ್ಳುತ್ತಿವೆಯೇ?

ಹೋಗುತ್ತದೆ.
ಇಂತಿಷ್ಟು ವಿದ್ಯಾರ್ಥಿಗಳಿಲ್ಲದಿದ್ದರೆ ಶಾಲೆಗಳನ್ನು
ನಡೆಸುವುದು ಗಿಟ್ಟುವ ಮಾತಲ್ಲ ಎನ್ನುವ ಭಾಷೆಯನ್ನು ಸರಕಾರ ಆಡಿದ ಕೂಡಲೇ ನಾವು
ಎಚ್ಚೆತ್ತುಕೊಳ್ಳಬೇಕು. ಸರಕಾರಗಳಿರುವುದೇ ಗಿಟ್ಟದ ವ್ಯಾಪಾರವನ್ನು ಮಾಡಲು. ನಾವುಗಳು ತೆರಿಗೆ
ಕೊಡುವಾಗ ಅದರಿಂದ ಏನು ಗಿಟ್ಟುತ್ತದೆ ಎಂದು ಕೇಳುವುದಿಲ್ಲ. ಸರಕಾರ ಸ್ಪಷ್ಟವಾಗಿ ಹೇಳುವುದೂ
ಇಲ್ಲ. ಬಡವರ ಶಾಲೆಗಳು ಗಿಟ್ಟುವ ವ್ಯಾಪಾರವಾಗುವುದಿದ್ದರೆ ಈಗಾಗಲೇ ಅಲ್ಲಿ ಖಾಸಗೀ ರಂಗದ
ತಾಂಡವವನ್ನು ನಾವು ನೋಡಿರುತ್ತಿದ್ದೆವು.

ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲವೆಂದರೆ ಶಾಲೆಯ
ಅವಶ್ಯಕತೆಯಿಲ್ಲ ಎನ್ನುವ ನಿರ್ಧಾರಕ್ಕೆ ಬರುವ ಮುನ್ನ – ಮಕ್ಕಳು ಇಲ್ಲಿಗೆ ಏಕೆ ಬರುತ್ತಿಲ್ಲ
ಎನ್ನುವುದನ್ನು ಕೇಳಬೇಕು. ಮಕ್ಕಳನ್ನು ಶಾಲೆಗೆ ಕರೆಯಿಸಿಕೊಳ್ಳುವುದು ಹೇಗೆಂದು ಯೋಚಿಸಬೇಕು.
ಮೂಲಭೂತವಾಗಿ ಸರಕಾರ ಯಾವುದೇ ಶಾಲೆಯನ್ನು ಮುಚ್ಚುವ ಮುನ್ನ ಎರಡು ಪ್ರಶ್ನೆಗಳಿಗೆ ಜವಾಬನ್ನು
ನೀಡಲೇ ಬೇಕು – 1. ಶಾಲಾಕ್ಷೇತ್ರದಲ್ಲಿ ಶಿಕ್ಷಕರ ಹುದ್ದೆಗಳು ಎಷ್ಟು ಖಾಲಿಯಿವೆ, ಅದನ್ನು
ತುಂಬಲು ಮಾಡಿದ ಪ್ರಯಾಸವೇನು? 2. ಶಾಲೆಗಳಲ್ಲಿ ಶಿಕ್ಷಕರ ಹಾಜರಿಯ ಸರಾಸರಿ ಎಷ್ಟಿದೆ? ಈ ಎರಡೂ ಪ್ರಶ್ನೆಗಳಿಗೂ ಮೂಲಭೂತವಾದ ಸಮಾಧಾನವನ್ನು
ಸರಕಾರ ನೀಡಬೇಕು.

ಎಂ.ವಿ.ಫೌಂಡೇಶನ್ ನಮಗೆ ತೋರುವ ದಾರಿ ಜನರನ್ನು
ಒಳಗೊಳ್ಳುವ ದಾರಿ. ಸರಕಾರೀ ಯಂತ್ರಾಂಗವನ್ನು ನಾವು ಪ್ರಶ್ನಿಸಬಲ್ಲ ಆತ್ಮವಿಶ್ವಾಸವನ್ನು
ಹುಟ್ಟಿಸುವ ದಾರಿ. ಪ್ರಜಾಪ್ರಭುತ್ವದ ಅರ್ಥ ಐದು ವರ್ಷಕ್ಕೊಮ್ಮೆ ಓಟು ಹಾಕಿ ಸರಕಾರವನ್ನು ಬದಲಾಯಿಸುವುದರಲ್ಲಿಲ್ಲ.
ಸರಕಾರವನ್ನು ನಿರಂತರವಾಗಿ ನಮ್ಮ ವಿಚಾರಗಳ, ಅವಶ್ಯಕತೆಗಳ ಜೊತೆಗೆ ಒಳಗೊಳ್ಳವುದೂ
ಪ್ರಜಾಪ್ರಭುತ್ವದ ಕೆಲಸವೇ. ಈ ಕಾಲಾಪವನ್ನು ಸ್ಥಳೀಯ ಸರಕಾರಿ ಅಂಗಗಳಾದ ಪಂಚಾಯ್ತಿ, ಮಕ್ಕಳ
ಪೋಷಕರು, ಶಿಕ್ಷಕರನ್ನು ಒಳಗೂಡಿಸಿಕೊಂಡು ಮಾಡಬಹುದಾಗಿದೆ.
ಇದಲ್ಲದೇ ಖಾಸಗಿ ಕ್ಷೇತ್ರದ ಲಾಭಾರ್ಜನೆಯ ಫಲವಾಗಿಯೇ
ಬಂದಿರುವ ಅಜೀಂ ಪ್ರೇಂಜಿ ಫೌಂಡೇಶನ್, ಮಕ್ಕಳ ವಿದ್ಯಾಭ್ಯಾಸದ ಬಗೆಗೆ ಚಿಂತಿಸಲೆಂದೇ ಇರುವ ಸ್ವಯಂ
ಸೇವಾ ಸಂಸ್ಥೆಗಳಾದ ಪ್ರಥಮ್, ಅಕ್ಷರ ಫೌಂಡೆಶನ್ ಗಳಂತಹ ಸಂಸ್ಥೆಗಳನ್ನು ಹಚ್ಚೆಚ್ಚು ಒಳಗೊಂಡು
ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಯೋಜನೆಯನ್ನು ಸರಕಾರ ಹಾಕಿಕೊಳ್ಳಬೇಕಾಗಿದೆ.
ಏರ್ ಇಂಡಿಯಾದಂತಹ ಸಂಸ್ಥೆಯ ಉದ್ಯೋಗಿಗಳಿಗಾಗಿಯೋ ಅದನ್ನು
ಉಳಿಸುವ, ಆ ವ್ಯಾಪಾರದ ಮೇಲೆ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯಲು ತಯಾರಾದ ಕೇಂದ್ರ
ಸರಕಾರದ ದುಂದನ್ನು ನಾವು ಹೇಗೆ ಪ್ರಶ್ನಿಸಬೇಕೋ, ವರುಣನ ಕೃಪೆಗಾಗಿ ಕೋಟ್ಯಾನುಗಟ್ಟಲೆ ಹಣ ಸುರಿದು
ಪೂಜೆಗಳನ್ನು ಮಾಡಿಸಿದ ರಾಜ್ಯಸರಕಾರವನ್ನು ನಾವು ಹೇಗೆ ಪ್ರಶ್ನಿಸಬೇಕೋ, ಹಾಗೆಯೇ ಶಾಲೆಗಳ ಮೇಲೆ
ಅಗತ್ಯವಿದ್ದ ಖರ್ಚನ್ನು ಯಾಕೆ ಮಾಡುತ್ತಿಲ್ಲ ಎನ್ನುವುದನ್ನೂ ಪ್ರಶ್ನಿಸಬೇಕು.
ಸರಕಾರಿ ಶಾಲೆಗಳು ಚೆನ್ನಾಗಿ ನಡೆದ ಶಂಕರಪಲ್ಲಿಯಂತಹ ಜಾಗಗಳಲ್ಲಿ
ಬೇರೊಂದೇ ಸವಾಲು ಎದ್ದು ನಿಂತಿದೆ. ಸರಕಾರೀ ಶಾಲೆಗಳು ಭರ್ತಿಯಾಗಿ, ಮಕ್ಕಳು ವಿದ್ಯೆ
ಪಡೆಯಲಾರಂಭಿದ್ದು ಒಂದು ಕಥೆಯಾದರೆ, ಸರಕಾರೀ ಶಾಲೆಗಳ ಪ್ರಗತಿಯನ್ನು ನೋಡಿಯೇ ಆ ಜಾಗಕ್ಕೆ ಖಾಸಗೀ ಪ್ರಾಥಮಿಕ
ಶಾಲೆಗಳು ಬಂದ ಕಥೆಗಳನ್ನೂ ಕೇಳಿದ್ದೇವೆ. ಉನ್ನತ ವ್ಯಾಸಂಗದಲ್ಲಿ ಐಐಟಿ ಮತ್ತು ಐಐಎಂಗಳು ಹೇಗೆ
ಒಂದು ಮಾರುಕಟ್ಟೆಯನ್ನು ಸೃಷ್ಟಿಸಿದವೋ ಹಾಗೆಯೇ ಪ್ರಾಥಮಿಕ ಶಾಲೆಗಳೂ ಮಾಡಬಹುದು ಎನ್ನುವುದು
ವೇದ್ಯವಾಗುತ್ತದೆ. ಪ್ರಾಥಮಿಕ ವಿದ್ಯೆಯೂ ಒಂದು "ಮಾರುಕಟ್ಟೆ"ಯಾಗಬಹುದು. ಸರಕಾರೀ ಶಾಲೆಗಳು ಚೆನ್ನಾಗಿಯೇ ನಡೆಯುತ್ತಿದ್ದರೆ
– ಪೋಷಕರು ತುಸು ದುಬಾರಿಯಾದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಯಾಕೆ ಕಳುಹಿಸಬಹುದು? ಇದರ ಜವಾಬು ತುಸು ಜಟಿಲವಾದದ್ದು ಹಾಗೂ ಸಣ್ಣ ಅಪಾಯದಿಂದ
ಕೂಡಿದ್ದು.
ಮೊದಲು ಕಾರಣವನ್ನು ನೋಡೋಣ. ಖಾಸಗೀ ಶಾಲೆಗಳು ಇಂಗ್ಲೀಷಿನಲ್ಲಿ
ಪಾಠ ಮಾಡುವ ಆಮಿಷವನ್ನು ತೋರುತ್ತವೆ. ಶಾಲೆಗೆ ಕಳುಹಿಸುವುದೇ ಆದರೆ ಇಂಗ್ಲೀಷು ಮಾಧ್ಯಮದಲ್ಲಿಯೇ
ಯಾಕಾಗಬಾರದು ಎನ್ನಬಹುದಾದ ಪೋಷಕರ ಬಯಕೆಯನ್ನು ಸರಕಾರೀ ಶಾಲೆಗಳು ಈಡೇರಿಸಬೇಕೇ? ಮಾಧ್ಯಮ ನಾಜೂಕಿನ ವಿಷಯ. ನಾಡಿನ ದಿಗ್ಗಜರನೇಕರ
ನಂಬಿಕೆ, ಭಾವನೆಗಳು ಮಾಧ್ಯಮದ ಬಗ್ಗೆ ಒಡಗೂಡಿದೆ. ಆದರೂ ಇಂಗ್ಲೀಷು ಭಾಷೆಯ ವಾಸ್ತವವನ್ನು ಸರಕಾರಿ
ಶಾಲೆಗಳು ಹೇಗೆ ಎದುರಿಸುತ್ತವೆ?
ಎರಡನೆಯದು ಅಪಾಯದ ವಿಷಯ. ಪೋಷಕರ ಸಮಿತಿಯೂ ಇಲ್ಲದ,
ಪಂಚಾಯ್ತಿಯೂ ಇಲ್ಲದೇ ತಮ್ಮಷ್ಟಕ್ಕೆ ತಾವು ನಡೆಸುವ ಈ ಪುಟ್ಟ ಶಾಲೆಗಳ ಗುಣಮಟ್ಟದ ಬಗ್ಗೆ
ಪ್ರಶ್ನೆಗಳನ್ನೆತ್ತಲು ತಾವೇ ಇಲ್ಲವಾಗುತ್ತದೆ. ಹೀಗಾಗಿ ಜವಾಬು ಕೇಳಬಹುದಾದ ಸರಕಾರೀ ಶಾಲೆಗಳನ್ನು
ಬಿಟ್ಟುಕೊಡುವುದರಲ್ಲಿ ಅರ್ಥವಿಲ್ಲ.
ವಿದ್ಯೆ, ಆರೋಗ್ಯ, ಗಾಳಿ, ಬೆಳಕು, ನೀರು, ರಸ್ತೆ,
ಬಡವ-ಬಲ್ಲಿದನೆನ್ನದೆ ನಮಗೆಲ್ಲರಿಗೂ ಬೇಕಿರುವ ಮೂಲಭೂತ ಸೌಕರ್ಯಗಳು. ಇವು ಮೂಲತಃ ಮಾರಿಕೊಳ್ಳುವ
ವಸ್ತುಗಳಲ್ಲ. ಮಾರುಕಟ್ಟೆಯ ಸೂತ್ರ ಹೊಕ್ಕು ಇವುಗಳೂ ಮಾರಾಟಕ್ಕೆ ಬಂದಿರಬಹುದಾದರೂ ಇದರಿಂದ ಪಲಾಯನಗೈಯ್ಯುವ
ಸವಲತ್ತು ಸರಕಾರಕ್ಕಿಲ್ಲ. ಇವುಗಳು ಸರಕಾರದ ಜವಾಬ್ದಾರಿ. ಅಷ್ಟೇ.
No comments:
Post a Comment