
ಮತ್ತೊಂದು ಸಹಕಾರ ಸಂಘದ ಸದಸ್ಯರೊಬ್ಬರು ಹೇಳಿದ ಮಾತು: "ನಮ್ಮ ಅಧ್ಯಕ್ಷರು ನಮಗೆ ಮಾಡಿದ ಅತೀ ಮಹತ್ವದ
ಸೇವೆಯೆಂದರೆ ನಮ್ಮೊಂದಿಗೆ ನಿಷ್ಠೂರವಾಗಿ, ಶಿಸ್ತಿನಿಂದ ಇದ್ದದ್ದು." ಆ ಸಹಕಾರ ಸಂಘದ
ವಾರ್ಷಿಕ ವರದಿಯಲ್ಲಿ ಸಾಲ ಮರುಪಾವತಿ ಮಾಡದೇ ಇದ್ದವರ ಹೆಸರುಗಳನ್ನು ಅಚ್ಚು ಮಾಡುತ್ತಿದ್ದರು. ಅಧ್ಯಕ್ಷರು
ಲೆಕ್ಕಪತ್ರದ ಪುಸ್ತಕಗಳನ್ನು ಪ್ರತಿದಿನವೂ ತರಿಸಿ, ಕೆಳಬದಿಯಲ್ಲಿ ತಮ್ಮ ದಸ್ತಕತ್ತನ್ನು
ಹಾಕುತ್ತಿದ್ದರು. "ನೀವು ಲೆಕ್ಕ ಪತ್ರವನ್ನೂ ನೋಡುವುದೂ ಇಲ್ಲ,
ದಸ್ತಕತ್ತಿನಿಂದ ವಿಶೇಷ ಲಾಭವೂ ಇಲ್ಲ. ಆದರೂ ಯಾಕೆ ಈ ಹೆಚ್ಚುವರಿ ಕೆಲಸ?" ಎಂದು ಕೇಳಿದ್ದಕ್ಕೆ ಆತ
ಹೇಳಿದ್ದು: "ನಾನು ನೋಡುತ್ತೇನೆಂಬ ನಂಬಿಕೆಯಿಂದಲೇ ದಿನದ ಲೆಕ್ಕವನ್ನು
ಸಮಯಕ್ಕೆ ಬರೆದು ಮುಗಿಸುತ್ತಾರೆ. ನಮ್ಮವರು ನನ್ನ ಭಯದಿಂದಾಗಿ ಜಾಗರೂಕರಾಗಿರುತ್ತಾರೆ. ಅಷ್ಟೇ
ಸಾಕು."

ಸಹಕಾರೀ ಕ್ಷೇತ್ರದಲ್ಲಿ ಈ ರೀತಿಯಾಗಿ ಪುಟ್ಟ ಪುಟ್ಟ
ಅಂಶಗಳನ್ನು ಗಮನಿಸಿ ಸಹಕಾರೀ ಆಂದೋಲನವನ್ನು ಬೆಳೆಸಿದ ಹಲವು ನಾಯಕರ ಕಥೆಗಳು ನಮಗೆ ದೊರೆಯುತ್ತವೆ.
ಗುಜರಾತಿನ ತ್ರಿಭುವನದಾಸ ಪಟೇಲ್ ಬೆಳೆಸಿದ ಅಮುಲ್ ಸಂಸ್ಥೆ, ಮಹಾರಾಷ್ಟ್ರದಲ್ಲಿ ಸಹಕಾರೀ ಸಕ್ಕರೆ
ಕ್ಷೇತ್ರದಲ್ಲಿ ದುಡಿದ ವಸಂತದಾದಾ ಪಾಟೀಲ, ತಾತ್ಯಾಸಾಹೇಬ್ ಕೋರೆ, ವಿಠ್ಠಲರಾವ್ ವಿಖೇ ಪಾಟೀಲ್,
ಹಾಗೂ ಕರ್ನಾಟಕದ್ದಲ್ಲೇ ಸಹಕಾರೀ ಆಂದೋಲನದ ಬಗ್ಗೆ ಸದಾ ಶ್ರಮಿಸುತ್ತಿದ್ದ ಕೆ.ಎಚ್.ಪಾಟೀಲ್ ಅವರಂಥಹ
ಧುರೀಣರು ಆಗಿ ಹೋಗಿದ್ದಾರೆ. ಈ ಹಿರಿಯರನ್ನು,
ಮೇಲಿನ ಎರಡು ಕಥೆಗಳನ್ನೂ ಹೇಳಲು ಒಂದು ಕಾರಣವಿದೆ.
ಈ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರೀ ವರ್ಷವೆಂದು
ವಿಶ್ವ ಸಂಸ್ಥೆ ಘೋಷಿಸಿದೆ. ಈ ಘೋಷಣೆಯ ಪರಿಣಾಮ ಯಾವುದೇ ರೀತಿಯಲ್ಲಿ ನಮ್ಮ ದೇಶದ ಆರ್ಥಿಕ ನೀತಿಯ
ಮೇಲಾಗಲೀ, ಅಥವಾ ಸಹಕಾರೀ ಕ್ಷೇತ್ರದ ಬಗೆಗಿನ ನಿಲುವಿನ ಮೇಲಾಗಲೀ ಆದಂತಿಲ್ಲ. ನಾವು ಬಂಡವಾಳಶಾಹೀ
ಮಾರುಕಟ್ಟೆಯ ಸಿದ್ದಾಂತಕ್ಕೆ ಶರಣಾಗಿ ಸಹಕಾರೀ ತತ್ವ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವ
ಸಾಮೂಹಿಕ ನಂಬಿಕೆಯನ್ನು ನಮ್ಮದಾಗಿಸಿಕೊಂಡಹಾಗಿದೆ. ಆದರೆ ಎಲ್ಲಕಾಲಕ್ಕಿಂತ ಹೆಚ್ಚು– ಬೆಳವಣಿಗೆಯ
ಜೊತೆಜೊತೆಗೇ ಸಂಪತ್ತಿನ ಧೃವೀಕರಣವಾಗದಂತೆ ಸಮಾನತೆಯ ಅಂಶವನ್ನು ಗಮಸಿಸಿಟ್ಟುಕೊಳ್ಳಬೇಕಾದ ಈ
ಸಮಯದಲ್ಲಿ ಸಹಕಾರೀ ತತ್ವದ ಮಹತ್ವವನ್ನು ನಾವು ಮನಗಾಣಬೇಕಾಗಿದೆ.
ಬತ್ತ, ಜೋಳ, ರಾಗಿ, ಕಬ್ಬು ಬಳೆವ ರೈತರ ಕಾರ್ಯ ಸರಪಳಿ
ಹೀಗಿದ್ದೀತು: ಬೆಳೆ ಬೆಳೆಯಲು ಬೇಕಾದ ಸಾಲವನ್ನು ದ್ರವ ರೂಪದಲ್ಲಿ ಅಥವಾ ಪಕ್ಕದ
ವ್ಯಾಪಾರಿಯಿಂದ – ಬೀಜ, ರಸಗೊಬ್ಬರ, ಕೀಟನಾಶಕಗಳ ರೂಪದಲ್ಲಿ ಕೊಳ್ಳುವುದು. ಈ ಸಾಲಕ್ಕೆ ಸರಾಸರಿ
ತಿಂಗಳಿಗೆ ನೂರಕ್ಕೆ ಮೂರು ಪೈಸೆಗಿಂತ ಹೆಚ್ಚೇ ಬಡ್ಡಿ ಕಟ್ಟಬೇಕು. ಉತ್ತು, ಬಿತ್ತು ಬೆಳೆದು ಕೂಲಿ
ಕೊಟ್ಟು, ಟ್ರಾಕ್ಟರ್ ಓಡಿಸಿ, ಕಡೆಗೆ ಕುಯಿಲಾಗಿ ಬಂದ ಇಳುವರಿಯನ್ನು ಮತ್ತೆ ವ್ಯವಸಾಯೋತ್ಪನ್ನ
ಮಾರುಕಟ್ಟೆ ಸಮಿತಿಯ ಯಾರ್ಡಿನಲ್ಲಿ ಮಾರಾಟ ಮಾಡಬೇಕು. ಅಥವಾ ತಮ್ಮ ಊರಿಂದಲೇ ಅದನ್ನು ಎತ್ತಿ
ಒಯ್ಯುವ ಏಜೆಂಟಿಗೆ ಇಳುವರಿಯನ್ನು ನೀಡಬೇಕು. ಎಲ್ಲವೂ ಸರಿಯಾಗಿದ್ದರೆ ಸಾಲದ ಮೊತ್ತವನ್ನು
ಕತ್ತರಿಸಿ ಮಿಕ್ಕ ರೊಕ್ಕವನ್ನು ಒಂದು ಹದಿನೈದು ದಿನಗಳಕಾಲದಲ್ಲಿ ರೈತ ಕಾಣಬಹುದು. ಉತ್ಪನ್ನದ ತೂಕ
ಕಟ್ಟುವವರು ಅದನ್ನು ಕೊಳ್ಳುವ ವ್ಯಾಪಾರಿಗಳೇ. ಗುಣಮಟ್ಟವನ್ನು ನಿರ್ಧರಿಸುವವರೂ ಅವರೇ. ಬೆಲೆ
ಕಟ್ಟುವವರೂ ಅವರೇ. ಮಾರುಕಟ್ಟೆ ಸಮಿತಿಯ ಕಾನೂನು ರೈತರ ಹಿತರಕ್ಷಣೆ ಮಾಡಬಹುದು. ಆದರೆ ಈ ವ್ಯಾಪಾರದ
ಇಡೀ ಸರಪಣಿಯಲ್ಲಿ ಬೆಳೆ ಬೆಳೆವ ರೈತನ ಕೈಯಲ್ಲಿ ಯಾವ ನಿರ್ಧಾರವೂ ಇಲ್ಲ. ಎಲ್ಲವೂ ಬಂಡವಾಳವಿರುವ
ವಿತರಕ-ಖರೀದಿದಾರರ ಬಳಿಯೇ ಇದೆ.
ಈ ಜಾಗಕ್ಕೆ ಮುಲುಕನೂರಿನ ಸಹಕಾರ ಸಂಘವನ್ನು ತಂದು
ನಿಲ್ಲಿಸೋಣ. ರೈತರಿಂದ ತುಸು ಹೂಡಿಕೆ, ಅದರ ಮೇಲೆ ಸರಕಾರಿ ಬ್ಯಾಂಕಿನಿಂದ ತುಸು ಸಾಲ, ಆ ಸಾಲದ
ಹಣದಲ್ಲಿ ಮಂಡಲಿಯೇ ಸಗಟಿನಲ್ಲಿ ಕೊಂಡ ಬೀಜ, ರಸಗೊಬ್ಬರ, ಕೀಟನಾಶಕ. ಕುಯಿಲಿನ ನಂತರ ಬಂದ ಇಳುವರಿಯ
ಖರೀದಿಯೂ ಸಂಘದ್ದೇ, ಗುಣಮಟ್ಟ-ತೂಕ-ಬೆಲೆಯ ನಿರ್ಧಾರವನ್ನು ಸದಸ್ಯರ ಹಿತಾಸಕ್ತಿಯನ್ನು
ಕಾಯ್ದಿರಿಸುತ್ತಲೇ ಮಾಡಿದ ಲಾಭವೂ ಮಂಡಲಿಯದ್ದೇ. ಲಾಭಾಂಶ ಮತ್ತೆ ರೈತರಿಗೇ ವಾಪಸ್ಸು.....
ಈ ಎರಡೂ ಮಾದರಿಗಳು ಮಾರುಕಟ್ಟೆಯ ಸೂತ್ರವನ್ನು
ಅಲ್ಲಗಳೆದೆಯೇ, ಅದಕ್ಕನುಗುಣವಾಗಿಯೇ ಕೆಲಸಮಾಡುತ್ತಿವೆ. ಆದರೆ ಮೊದಲ ಮಾದರಿ ಬಂಡವಾಳವೇ ಮೂಲವಾದ
ಮಾರುಕಟ್ಟೆಯ ಮಾದರಿ. ಎರಡನೆಯದು, ಬಂಡವಾಳ ಮುಖ್ಯವಾದರೂ ಮೂಲವಲ್ಲದ, ಬದಲಿಗೆ ವಸ್ತುಗಳನ್ನು
ಖರೀದಿಸುವವರು-ಸರಬರಾಜುಮಾಡುವವರ ಕೂಡುಕೊಳ್ಳುವಿಕೆಯ ವ್ಯವಹಾರವನ್ನೇ ಮೂಲವಾಗಿರಿಸಿಕೊಂಡ ಸಹಕಾರಿ
ಮಾದರಿ. ಸಹಕಾರಿ ಮಾದರಿಯ ಉಪಸೂತ್ರಗಳಲ್ಲಿ ಒಂದು ನೈತಿಕ ನ್ಯಾಯ ನಮಗೆ ಕಾಣುತ್ತದೆ. ಈ ನೈತಿಕ
ಸೂತ್ರದ ಮೂಲವನ್ನು ಅರ್ಥಮಾಡಿಕೊಂಡರೆ ಎಲ್ಲವನ್ನೂ ಮಾರುಕಟ್ಟೆಗೆ ಇಳಿಬಿಟ್ಟಿರುವ ಈ ಸಮಯದಲ್ಲಿ
ಸಹಕಾರಿತನದ ಮಹತ್ವ ನಮಗೆ ಅರ್ಥವಾಗುತ್ತದೆ.
ಮೊದಲ ಮಾದರಿಯಲ್ಲಿ ಆದ ವ್ಯಾಪಾರದ ಪ್ರತೀ ಹಂತದಲ್ಲೂ ಆದ
ಲಾಭ ಸಲ್ಲುವುದು ಸಮುದಾಯದ ಹೊರಗಿರುವ, ಬಂಡವಾಳ ಹೂಡಿದ ವ್ಯಾಪಾರಸ್ಥರಿಗೆ. ಎರಡನೆಯ
ಉದಾಹರಣೆಯಲ್ಲಿ ಈ ಹಣ ಸಮುದಾಯದೊಳಗೇ, ಗ್ರಾಮದೊಳಗೇ ಉಳಿಯುತ್ತದೆ. ಇದರಲ್ಲಿ ಯಾವುದೇ ದಾನವಾಗಲೀ,
ದೇಣಿಗೆಯಾಗಲೀ, ಸಬ್ಸಿಡಿಯಾಗಲೀ ಇಲ್ಲ.

ಕೃಷಿ ಸಹಕಾರಿ ಕ್ಷೇತ್ರಕ್ಕೆ ಮೊದಲ ಪೆಟ್ಟು ಬಿದ್ದದ್ದು
ಚೌಧುರಿ ದೇವೀಲಾಲ್ ನೇತೃತ್ವದಲ್ಲಿ. ಮಧು ದಂಡವತೆ ವಿತ್ತ ಮಂತ್ರಿಗಳಾಗಿದ್ದಾಗ ಘೋಷಿಸಿದ್ದ 1989ರ
ಸಾಲಮನ್ನಾ ಕಾರ್ಯಕ್ರಮದಿಂದಾಗಿ. ವಿಶ್ವನಾಥರೆಡ್ಡಿಯವರು ಬೆಳೆಸಿದ್ದ "ಶಿಸ್ತ"ನ್ನು ಆ ಕಾರ್ಯಕ್ರಮ ಒಂದೇ ಏಟಿಗೆ ಮಟ್ಟಹಾಕಿತ್ತು. ಮುಲುಕನೂರು
ಅದರಿಂದ ಬಜಾವಾಯಿತಾದರೂ, ರೈತರ ಹಿತಾಸಕ್ತಿಯಿಂದ ಕೈಗೊಂಡ ಈ ಕ್ರಮ ರೈತರ ಸಂಘಗಳಿಗೆ ಮುಳುವಾಯಿತು.
2005ರಲ್ಲಿ ನಿವೇದಿಸಿದ ವೈದ್ಯನಾಥನ್ ಸಮಿತಿಯ ವರದಿಯನ್ನು ಅನುಷ್ಠಾನಗೂಳಿಸಿ ಸಹಕಾರಿ
ಕ್ಷೇತ್ರವನ್ನು ಪುನರುಜ್ಜೀವನಗೊಳಿಸು ಕಾರ್ಯಕ್ರಮದ ನಡುವೆಯೇ ಪಳನಿಯಪ್ಪನ್ ಚಿದಂಬರಂ ನೇತೃತ್ವದಲ್ಲಿ
ಮತ್ತೊಂದು ಸಾಲಮನ್ನಾದ ನಾಟಕವಾಡಿ, ಸಹಕಾರೀ ಕ್ಷೇತ್ರದ ಸರಕಾರೀಕರಣವನ್ನು ಮುಂದುವರೆಸಲಾಯಿತು.
ಹೀಗೆ ಮಾರುಕಟ್ಟೆಯ ಬಂಡವಾಳಶಾಹೀ ಸೂತ್ರಗಳು ಒಂದೆಡೆ, ಮತ್ತು ಸರಕಾರೀ ವೈಫಲ್ಯತೆ ಮತ್ತೊಂದೆಡೆ
ಸಹಕಾರೀ ಆಂದೋಲನವನ್ನು ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿರುವ ವಿಷಯಕ್ಕೆ ಇಳಿಸಿಬಿಟ್ಟಿದೆ.
ಸಹಕಾರೀ ಕ್ಷೇತ್ರದ ಶ್ರೀಮುಡಿಗೆ ಸರಕಾರ ಕೈಯಿಕ್ಕದೇ
ಇರುವ ಜಾಗಗಳಲ್ಲಿ ಸಹಕಾರ ಚೆನ್ನಾಗಿಯೇ ನಡೆದಿದೆ. ಗುಜರಾತಿನ ಹೈನುಗಾರಿಕೆ ಅದಕ್ಕೆ ಒಂದು
ಉದಾಹರಣೆ. ಬರೇ ಹೈನುಗಾರಿಕೆ ಅನ್ನದೇ ಗುಜರಾತಿನ ಹೈನುಗಾರಿಕೆ ಅನ್ನುವುದಕ್ಕೆ ಸಬಲವಾಗಿ ಸಫಲವಾಗಿ
ಮುನ್ನಡೆಯುತ್ತಿರುವ ಕರ್ನಾಟಕದ ಹೈನುಗಾರಿಕೆಯಲ್ಲಿನ ಈಚಿನ ವಿದ್ಯಮಾನಗಳು ಕಾರಣ!

"ನಮಗೆ ನಮ್ಮದೇ ಬ್ಯಾಂಕೊಂದು
ಯಾಕಿರಬಾರದು?" ಎಂದು ಪೂರಿಬಜಾರ್ ನಲ್ಲಿ
ಉಪಯೋಗಿಸಿದ ಬಟ್ಟೆಯ ವ್ಯಾಪಾರ ಮಾಡುವ ಚಂದಾಬೇನ್
ಕೇಳಿದಳು. "ಯಾಕೆಂದರೆ, ನಮ್ಮ ಬಳಿ
ಹಣವಿಲ್ಲ. ಬ್ಯಾಂಕನ್ನು ಸ್ಥಾಪಿಸಲು ತುಂಬಾ ತುಂಬಾ ಬಂಡವಾಳ ಬೇಕು." ಎಂದು ನಾನು ಉತ್ತರಿಸಿದೆ. ಅದಕ್ಕೆ ಆಕೆ
ಹೇಳಿದ ಮಾತು ಇಂತಿತ್ತು: "ನಾವು ಬಡವರಿರಬಹುದು. ಆದರೆ
ನಾವೆಷ್ಟೊಂದು ಜನ ಇದ್ದೇವೆ!"

No comments:
Post a Comment