(ನಾನು ಐಐಎಂನಲ್ಲಿ ಪ್ರಾಧ್ಯಾಪಕನಾಗಿರುವುದರಿಂದ ಈ ಲೇಖನವನ್ನು ಸ್ವಹಿತಾಸಕ್ತಿಯಿಂದ
ಬರೆದಿರಬಹುದೆಂಬ ಆರೋಪವನ್ನು ಮೊದಲಗೇ ಒಪ್ಪುತ್ತೇನೆ)
ಕರ್ನಾಟಕ ಸರಕಾರದ ಮಂತ್ರಿಗಳ ಕಾರ್ಯಕ್ಷಮತೆಯ ಬಗೆಗೆ ಐಐಎಂನ ಪ್ರಾಧ್ಯಾಪಕರು
ಮೌಲ್ಯಮಾಪನ ಮಾಡುತ್ತಾರೆಂಬ ಪ್ರಸ್ತಾಪವನ್ನು ಖಂಡಿಸಿ, ಅಲ್ಲಿನ ಪ್ರಾಧ್ಯಾಪಕರ ನೈತಿಕ
ಅಧಿಕಾರವನ್ನೂ ಕ್ಷಮತೆಯನ್ನೂ ಪ್ರಶ್ನಿಸಿ ಅನಂತಮೂರ್ತಿಯವರನ್ನು ಒಳಗೊಂಡಂತೆ ನಾಡಿನ ಕೆಲವು
ಬುದ್ಧಿಜೀವಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇದರ ಹಿಂದಿನ ರಾಜಕೀಯ ಏನೇ ಆದರೂ ಒಂದು ಉನ್ನತ ವಿದ್ಯಾ
ಸಂಸ್ಥೆ, ಅದರ ಕ್ಷಮತೆ-ನೈತಿಕ ನಿಲುವನ್ನೂ ಈ ರೀತಿಯಾಗಿ ಪ್ರಶ್ನಿಸುವುದು ಸಮಂಜಸವೇ?
ವಿಶ್ವವಿದ್ಯಾಲಯಗಳೂ, ಉನ್ನತ ವಿದ್ಯಾ ಸಂಸ್ಥೆಗಳೂ ಮುಕ್ತ ವಾತಾವರಣದಲ್ಲಿ
ಕೆಲಸಮಾಡುತ್ತವೆ. ಅಲ್ಲಿ ಕೆಲಸ ಮಾಡುವವರಿಗೆ ತಮ್ಮದೇ ಆದ ಪ್ರತ್ಯೇಕ ವಿಚಾರಧಾರೆಯೂ ಪಂಥವೂ
ಇರಬಹುದಾದರೂ ಸಂಸ್ಥೆಗೇ ಒಂದು ಪಂಥವಾಗಲೀ – ವಿಚಾರಧಾರೆಯಾಗಲೀ ಇರುವುದಿಲ್ಲ. ಹೌದು, ಒಂದೇ ರೀತಿಯ
ವಿಚಾರಧಾರೆಯ ಹಲವರು ಒಂದೇ ಉನ್ನತ ವಿದ್ಯಾ ಸಂಸ್ಥೆಯಲ್ಲಿ ಸೇರಿದಾಗ ಆ
ಸಂಸ್ಥೆಗೂ ಅಲ್ಲಿನ ಜನರ ವಿಚಾರಧಾರೆ ಅಂಟಬಹುದು. ಹೀಗಾಗಿಯೆ ಜವಾಹರಲಾಲ್ ನಹರೂ
ವಿಶ್ವವಿದ್ಯಾಲಯಕ್ಕೆ ಎಡಪಂಥೀಯರ ಅಡ್ಡಾ ಎಂದೂ, ಶೀಕಾಗೋ ಸ್ಕೂಲಿಗೆ ಮಾರುಕಟ್ಟೆವಾದಿಗಳ ಆಗರವೆಂದೂ
ಹೆಸರು ಬಂದಿರಬಹುದು. ಹಾಗೆಯೇ ಐಐಎಂ ಗಳಿಗೂ ಬಂಡವಾಳಶಾಹಿ, ಮಾರುಕಟ್ಟೆಗಳನ್ನು ಪ್ರೋತ್ಸಾಹಿಸುವ
ಸ್ಥಳ ಎಂಬ ಹಣೆಪಟ್ಟಿ ಅಂಟಿರಬಹುದು. ವ್ಯಾಪಾರೀ ಸೂತ್ರಗಳನ್ನೇ ಮುಖ್ಯವಾಗಿ ಕಲಿಸುವ ಆ ಜಾಗಕ್ಕೆ ಆ
ಹಣೆಪಟ್ಟಿ ಸಹಜವೇ. ಆದರೆ ಆ ಹಣೆಪಟ್ಟಿ ಅಂಟಿಸಿಕೊಂಡ ಮಾತ್ರಕ್ಕೇ ಈ ಸಂಸ್ಥೆಯ ನೈತಿಕ
ಅಧಿಕಾರವನ್ನೂ ಕ್ಷಮತೆಯನ್ನು ಪ್ರಶ್ನಿಸಬಹುದೇ?
ಐಐಎಂನಲ್ಲಿ ಕೆಲಸಮಾಡುತ್ತಿರುವ ಪ್ರಾಧ್ಯಾಪಕರು ಯಾವ ರೀತಿಯ ಭಿನ್ನ ಕೆಲಸಗಳನ್ನು
ಮಾಡುತ್ತಿರಬಹುದು ಎನ್ನುವುದಕ್ಕೆ ಉದಾಹರಣೆಗಳನ್ನು ನೀಡುತ್ತೇನೆ. ಈ ಉದಾಹರಣೆಗಳೂ ವೈಯಕ್ತಿಕ
ಸಾಧನೆಯ ಉದಾಹರಣೆಗಳೇ. ಆದರೆ ಅವುಗಳಿಗೆ ಐಐಎಂ ನ ಒಂದು ಕೊಂಡಿಯಿದೆ, ಹೇಗೆ ಈ ವ್ಯಕ್ತಿಗಳು – ಈ
ಉದಾಹರಣೆಗಳೂ ಐಐಎಂಗಳ ಮನೋಧರ್ಮವನ್ನು ನಿರ್ದೇಶಿಸುವುದಿಲ್ಲವೋ ಹಾಗೆಯೇ ಐಐಎಂ ಕೂಡಾ ಪ್ರಾಧ್ಯಾಪಕರ
ವಿಚಾರಧಾರೆಯನ್ನು ನಿರ್ದೇಶಿಸುವುದಿಲ್ಲ. ಉನ್ನತ ವಿದ್ಯಾ ಸಂಸ್ಥೆಗಳ ಯಶಸ್ಸಿನ ಗುಟ್ಟೇ ಅಲ್ಲಿನ
ವಿಚಾರಧಾರೆಯ ವೈವಿಧ್ಯತೆ, ಜಗಳಗಳು ಮತ್ತು ಭಿನ್ನಾಭಿಪ್ರಾಯಗಳಾಗಿವೆ. ಒಂದು ವಿಶ್ವವಿದ್ಯಾಲಯದ
ಮೊದಲ ಕುಲಪತಿಗಳಾಗಿ ದುಡಿದ ಅನಂತಮೂರ್ತಿಯವರಿಗೆ ಇದು ತಿಳಿದದ್ದೇ.
ಹಲವು ವರ್ಷಗಳ ಹಿಂದೆ ಚುನಾವಣೆ ಮತ್ತು ರಾಜಕಾರಣವನ್ನು ಶುದ್ಧಗೊಳಿಸಲು ಏನೆಲ್ಲಾ
ಮಾಡಬಹುದು ಎಂದು ಹಲವು ಪ್ರಾಧ್ಯಾಪಕರು ಯೋಚಿಸಿದರು. ಅವರೆಲ್ಲಾ ಐಐಎಂ ಅಹಮದಾಬದಿನಲ್ಲಿ
ದುಡಿಯುತ್ತಿದ್ದರು. ಮತದಾರ ತನ್ನ ಮತದ ಹಕ್ಕನ್ನು ಚಲಾಯಿಸುವಾಗ ತಾನು ಚುನಾಯಿಸುತ್ತಿರುವ
ಪ್ರತಿನಿಧಿಯ ಬಗೆಗೆ ಹೆಚ್ಚಿನ ಅಧಿಕೃತ ಮಾಹಿತಿ ಸಿಕ್ಕಾಗ ತನಗೆ ಸಮರ್ಪಕವಾದ ನಿರ್ಧಾರವನ್ನು
ಮಾಡುವುದಕ್ಕೆ ಆಸ್ಪದವಿದೆ ಎನ್ನುವ ಮಾತು ಚರ್ಚೆಗಳಿಂದ ಹೊರಹೊಮ್ಮಿತು.
ಪ್ರಾಧ್ಯಾಪಕರೂ, ಮತ್ತು
ಅದೇ ಸಂಸ್ಥೆಯ ಮಾಜೀ ವಿದ್ಯಾರ್ಥಿಗಳೂ ಸೇರಿ ಉಚ್ಚ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ
ಹಿತಾಸಕ್ತಿಯ ಮೊಕದ್ದಮೆಯನ್ನು ದಾಖಲಿಸಿದರು. ಆ ಮೊಕದ್ದಮೆಯ ಫಲವಾಗಿ ಇಂದು ನಮಗೆ ಚುನಾವಣಾ
ಕಣದಲ್ಲಿ ನಿಂತ ಅಭ್ಯರ್ಥಿಗಳ ಮೇಲೆ ನ್ಯಾಯಾಲಯದಲ್ಲಿ ದಾಖಲಾಗಿರುವ ಗಂಭೀರ ಆರೋಪಗಳೂ, ಅವರ ಆದಾಯ-ಆಸ್ತಿಯ
ವಿವರಗಳೂ ಲಭಿಸುತ್ತಿವೆ. ಈ ಪ್ರಾಧ್ಯಾಪಕರಲ್ಲಿ ಕೆಲವರು “ಪ್ರಜಾಪ್ರಭುತ್ವ
ಸುಧಾರಣಾ ಒಕ್ಕೂಟ” ಎಂಬ ಸಂಸ್ಥೆಯನ್ನು ಕಟ್ಟಿ, ಅಭ್ಯರ್ಥಿಗಳು ನೀಡಿದ
ಮಾಹಿತಿಯನ್ನು ಸಂಗ್ರಹಿಸಿ, ಒಟ್ಟಗೂಡಿಸಿ ಅದರ ವಿಶ್ಲೇಷಣೆಯನ್ನು ನಿಯಮಿತವಾಗಿ ನೀಡುತ್ತಿದ್ದಾರೆ.
ಈ ವಿಶ್ಲೇಷಣೆಗೂ, ಅದನ್ನು ಜನರಿಗೆ ಮುಟ್ಟಿಸುವ ಯೋಜನೆಗೂ, ಐಐಎಂಗಳಲ್ಲಿ ಕಲಿಸುವ ನಿರ್ವಹಣಾ
ಸೂತ್ರಗಳ ಹಿನ್ನೆಲೆಯಿದೆ.
ಈ ಕೆಲಸದಿಂದ ಉಪಯೋಗವೇನೆಂಬ ಒಂದು ಅಧ್ಯಯನದಲ್ಲಿ ಮೂಡಿ ಬಂದಿರುವ ವಿಚಾರ: ಈಗಾಗಲೇ ಚುನಾವಣೆಯ ಕಣದಲ್ಲಿರುತ್ತ ಗಂಭೀರ ಅಪರಾಧವೆಸಗಿದವರ ಸಂಖ್ಯೆ
ಕಡಿಮೆಯಾಗಿಲ್ಲವಾದರೂ, ಹೊಸ ಅಪರಾಧಿಗಳ ಪ್ರವೇಶಕ್ಕೆ ಇದು ಕಂಟಕವಾಗಿದೆಯೆಂದು ತಿಳಿದು ಬಂದಿದೆ.
ಅದೇನೇ ಇರಲಿ – ಈ ಆಲೋಚನೆ ಮೂಡಿಬಂದದ್ದು ಆ ಸಂಸ್ಥೆಯಲ್ಲಿದ್ದವರ ಕ್ಷಮತೆ ಮತ್ತು ನೈತಿಕ ಮೌಲ್ಯಗಳ
ಆಧಾರವಾಗಿಯೇ. ಅದರ ಜೊತೆಗೇ ಅಲ್ಲಿ ಬೋಧಿಸುವ ನಿರ್ವಹಣಾ ತಂತ್ರವೂ, ಪಾಲಿಸುವ ಪಾರದರ್ಶಕತ್ವದ
ಸೂತ್ರವನ್ನೂ ಕಾರ್ಯರೂಪಕ್ಕಿಳಿಸಲಾಗಿತ್ತು.
ಮೂರು ದಶಕಗಳ ಕೆಳಗೆ ಬೆಂಗಳೂರಿನಲ್ಲಿ ಪರಿಸರವಾದದ ಚರ್ಚೆ ಜೋರಾಗಿ ನಡೆದಿತ್ತು. ಆಗ
ಸಾಮಾಜಿಕ ಅರಣ್ಯವೆಂಬ ಕಾರ್ಯಕ್ರಮದಡಿ ನೀಲಗಿರಿ ಮರಗಳನ್ನು ರಾಜ್ಯದ ಹಲವೆಡೆ ನೆಡುವ ಕಾರ್ಯಕ್ರಮವಿತ್ತು.
ಜಯಂತ ಬಂದೋಪಾಧ್ಯಾಯರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಆ ಕಾರ್ಯಕ್ರಮದಿಂದ ಭೂಗರ್ಭ
ಜಲಸಂಪತ್ತು ನಾಶವಾಗುತ್ತಿರುವ ವಿಚಾರವನ್ನು ಮುಕ್ತವಾಗಿ ಚರ್ಚೆಗೆ ತರಲಾಗಿತ್ತು. ಜಯಂತ್ ಆಗ ಕೆಲಸ
ಮಾಡುತ್ತಿದ್ದದ್ದು ಬೆಂಗಳೂರಿನ ಐಐಎಂನಲ್ಲಿ. ಆ ಚರ್ಚೆಯಿಂದ ಪ್ರಭಾವಿತರಾದ ಒಬ್ಬ ಯುವ
ವಿದ್ಯಾರ್ಥಿಯ ಹೆಸರು ರಾಮಚಂದ್ರ ಗುಹಾ.
ರಾಮಚಂದ್ರ ಗುಹಾ ಆಗ್ಗೆ ಐಐಎಂ ಕೊಲ್ಕತಾದಲ್ಲಿ ಡಾಕ್ಟರೇಟ್ ಮಾಡಲು ಹೊರಟಿದ್ದರು.
ಮಾನವಶಾಸ್ತ್ರ-ಸಮಾಜಶಾಸ್ತ್ರದಲ್ಲಿ ಅವರು ಅಧ್ಯಯನ ನಡೆಸಿದ್ದರಾದರೂ, ಅವರು ಆಯ್ದುಕೊಂಡ ವಿಷಯ
ಪರಸರವಾದದ ಚರಿತ್ರೆಯಾಗಿತ್ತು. ಆದರೆ ಈ ರೀತಿಯ ಕೆಲಸಗಳೂ ಐಐಎಂ ನಂತಹ ಸಂಸ್ಥೆಗಳಲ್ಲಿ
ನಡೆಯುತ್ತವೆ ಎನ್ನುವುದನ್ನು ಊಹಿಸಲಾಗಲೀ, ಒಪ್ಪಲಾಗಲೀ ತಾಳ್ಮೆ ಬೇಕಾಗುತ್ತದೆ. ಈಗಲೂ ಸರಕಾರದ
ಸಕಾಲ ಕಾರ್ಯಕ್ರಮ, ರಾಗಿಗುಡ್ಡದ ಕೊಳೆಗೇರಿ ನಿರ್ಮೂಲನಾ ಮತ್ತು ಪುನರ್ನಿರಮಾಣ ಕಾರ್ಯಕ್ರಮ,
ಬೆಂಗಳೂರಿನಲ್ಲಿ ಭೂಗರ್ಭ ಜಲಸಂಪಲ್ಮೂಲ ಬದಲಾವಣೆಯಾಗುತ್ತಿರುವ ಬಗೆಗಿನ ಅಧ್ಯಯನ, ಆರೋಗ್ಯ, ವಿಮೆ,
ಸಾರಿಗೆ, ಪರಿಸರಕ್ಕೆ ಸಂಬಂಧಿಸಿದ ಅನೇಕ ಅಧ್ಯಯನಗಳು ಐಐಎಂಗಳಲ್ಲಿ ನಡೆಯುತ್ತಿವೆ. ಸಾಬರಮತಿ ನದಿ
ದಂಡೆಯ ಯೋಜನೆಯಿಂದ ಅಹಮದಾಬಾದು ನಗರದ ಸೌಂದರ್ಯ-ಪ್ರವಾಸೋದ್ಯಮ ಹೆಚ್ಚಿಸುವ ಮೋದಿಯವರ ಕನಸಿನ
ಯೋಜನೆಯಲ್ಲಿ ಅಲ್ಲಿನ ಬಡವರ ಪುನರಾವಾಸ, ಹಾಗೂ ಆ ಯೋಜನೆಯು ಪರಿಸರದ ಮೇಲೆ ಉಂಟುಮಾಡಬಹುದಾದ
ಪ್ರಶ್ನೆಗಳನ್ನು ಎತ್ತಿದವರೂ ಐಐಂ ನಲ್ಲಿ ಕೆಲಸಮಾಡುತ್ತಿದ್ದ ಪ್ರಾಧ್ಯಾಪಕರೇ. ಇವು
ಉದಾಹರಣೆಗಳಷ್ಟೇ.
ಈ ಹಿನ್ನೆಲೆಯಲ್ಲಿ “ಅಮೇರಿಕಾ ಸೇರಿದಂತೆ
ಇಡೀ ಜಗತ್ತಿನ ಆರ್ಥಿಕತೆ ಏರುಪೇರಾಗಲು ಅಲ್ಲಿನ ನಿರ್ವಹಣಾ ಸಂಸ್ಥೆಗಳ ಉತ್ಪಾದನೆಗಳಾದ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಹಣಕಾಸು ಅಧಿಕಾರಿಗಳು ಬಹಳವಾಗಿ ಕಾರಣ ಎಂದು ಅಮೇರಿಕಾ
ಒಪ್ಪಿಕೊಂಡಿದೆ. ಅಂತಹ ಸಂಸ್ಥೆಗಳ ನೆರಳಾದ ಐಐಎಂ ಪ್ರಾಧ್ಯಾಪಕರುಗಳಿಗೆ ಸರ್ಕಾರವೊಂದರ ಸಚಿವರ
ಮೌಲ್ಯಮಾಪನ ಮಾಡಲು ನೈತಿಕ ಹಕ್ಕು ಇದೆಯೇ?” ಎಂದು ಪ್ರಶ್ನಿಸಿರುವುದನ್ನು ಕಂಡಾಗ ನಮ್ಮ ಐಐಎಂಗಳ ಭಿನ್ನತೆಯನ್ನು
ಗಮನಿಸುವ ಗೋಜಿಗೆ ಹೋಗದೆಯೇ ಈ ವಕ್ತವ್ಯವನ್ನು ಹಿರಿಯರು ನೀಡಿರುವುದು ವೇದ್ಯವಾಗುತ್ತದೆ.
ಐಐಎಂಗಳನ್ನು ಸ್ಥಾಪಿಸಿದ ರೂವಾರಿಗಳಾದ ವಿಕ್ರಂ ಸಾರಾಭಾಯಿ, ರವಿ ಮಥಾಯಿಯಂಥಹವರ
ದರ್ಶನ ವ್ಯಾಪಾರವನ್ನೂ ಮೀರಿದ್ದಾಗಿತ್ತು. ಹೀಗಾಗಿಯೇ ನಮ್ಮ ಸಂಸ್ಥೆಗಳಿಗೆ ಒಂದು ಭಿನ್ನವಾದ
ಅಸ್ತಿತ್ವವನ್ನು ನೀಡುವುದರಲ್ಲಿ ಅವರು ಸಫಲರಾಗಿದ್ದರು. ಪಶ್ಚಿಮದಿಂದ ಸೂತ್ರಗಳನ್ನು ನಮ್ಮ
ಅನುಕೂಲಕ್ಕೆ ತಕ್ಕಂತೆ ಆಮದು ಮಾಡಿಕೊಳ್ಳಬೇಕು ಎಂಬುದನ್ನು ಆ ರೂವಾರಿಗಳು ವ್ಯಕ್ತಪಡಿಸಿದ್ದರು. ಅಮೆರಿಕದಲ್ಲಿ
ವ್ಯಾಪಾರ ಸೂತ್ರಗಳ ಅಧ್ಯಯನ ಬೋಧನೆ ಮಾಡುವ ಉನ್ನತ ವಿದ್ಯಾ ಸಂಸ್ಥೆಗಳನ್ನು ಬಿಜಿನೆಸ್ ಸ್ಕೂಲ್
(ವ್ಯಾಪಾರ ಸೂತ್ರಗಳ ಶಾಲೆ) ಎಂದು ಕರೆದರೂ, ಭಾರತದಲ್ಲಿ ಉದ್ದೇಶ ಪೂರ್ವಕವಾಗಿ ಈ ಸಂಸ್ಥೆಗಳನ್ನು
ಮ್ಯಾನೇಜಮೆಂಟ್ ಇನ್ಸಟಿಟ್ಯೂಟ್ (ನಿರ್ವಹಣಾ ಸೂತ್ರಗಳ ಸಂಸ್ಥೆ) ಎಂದು ಕರೆದೆವು. ಅದಕ್ಕೆ ಕಾರಣವೂ
ಇತ್ತು. ನಿರ್ವಹಣಾ ಸೂತ್ರಗಳು ವ್ಯಾಪಾರಕ್ಕೇ ಸೀಮಿತವಾಗದೇ ಇತರ ಕ್ಷೇತ್ರಗಳಿಗೂ – ಮುಖ್ಯವಾಗಿ
ಸಾರ್ವಜನಿಕ, ರಾಜಕೀಯ, ಸ್ವಯಂ ಸೇವಾ ಕ್ಷೇತ್ರಕ್ಕೂ ಅನ್ವಯವಾಗಬೇಕು;
ಕಾರ್ಯದಕ್ಷತೆ ಎಲ್ಲ ಕ್ಷೇತ್ರಗಳಲ್ಲೂ ಇರಬೇಕು ಎನ್ನುವ ವಿಚಾರಧಾರೆ ಅವರುಗಳದ್ದಾಗಿತ್ತು. ಹೀಗಾಗಿ
ಐಐಎಂಗಳ ಉದ್ದೇಶ ವಿಸ್ತಾರವಾಗಿ ವ್ಯಾಪಾರವನ್ನು ಮೀರಿತ್ತು, ಹಾಗೂ ಇಂದಿಗೂ ಇದೆ.
ಹಾಗೆಂದು ಐಐಎಂ ಸಂಸ್ಥೆಗಳು ಪ್ರಶ್ನಾತೀತವಾಗಿವೆ ಎನ್ನುವುದೂ ಸರಿಯಲ್ಲ. ಈ ಸಂಸ್ಥೆಗಳ ಬಗ್ಗೆ ಟೀಕೆ ಮಾಡುವುದಕ್ಕೂ ಸಾಕಷ್ಟು ಅಂಶಗಳನ್ನು ಅವು
ಒದಗಿಸಿಕೊಟ್ಟಿವೆ. ಉದಾಹರಣೆಗೆ ಐಐಎಂ ಅಹಮದಾಬಾದಿಗೆ ಸರಕಾರ ಹೆಚ್ಚಿನ ಸ್ವಾಯತ್ತತೆ ನೀಡಿ, ತಮ್ಮ
ನಿರ್ದೇಶಕರನ್ನು ಅವರ ನಿರ್ವಹಣಾ ಮಂಡಲಿಯೇ ಆಯ್ಕೆ ಮಾಡಿ ಸರಕಾರಕ್ಕೆ ಹೆಸರುಗಳನ್ನು ಕಳುಹಿಸಬಹುದು
ಎಂದಾಕ್ಷಣಕ್ಕೆ ಆ ಸ್ವಾಯತ್ತತೆಯನ್ನು ತಕ್ಷಣಕ್ಕೆ ಜವಾಬ್ದಾರಿಯುತವಾಗಿ ನಿರ್ವಹಿಸಲಾಗದೇ ಆರು
ತಿಂಗಳುಗಳಿಗೂ ಹೆಚ್ಚು ಮೀನ ಮೇಷ ಎಣಿಸಿ ಸಂಸ್ಥೆಯನ್ನು ಒಂದು ತ್ರಿಶಂಕು ಸ್ಥಿತಿಯಲ್ಲಿ
ಉಳಿಸಿಕೊಂಡಿದ್ದ ಘಟನೆ ಈಚೆಗಷ್ಟೇ ನಡೆಯಿತು. ಈ ಸಂಸ್ಥೆಗಳು ತಮ್ಮ ಹೆಚ್ಚಿನ ಶುಲ್ಕದಿಂದಾಗಿ
ಸಾಮಾನ್ಯರಿಗೆ ಎಟುಕದ ಎಲಿಟಿಸ್ಟ್ ಸಂಸ್ಥೆಗಳಾಗಿವೆ ಎನ್ನುವ ಆರೋಪವೂ ಇದೆ. ಈ ಎಲ್ಲ ವಿಷಯಗಳನ್ನೂ ಮುಕ್ತವಾಗಿ
ಚರ್ಚಿಸಬೇಕು. ಆದರೆ ಇಂಥ ಸಂಸ್ಥೆಗಳ ನೈತಿಕ ನಿಲುವನ್ನೇ ಪ್ರಶ್ನಿಸುವುದಾದರೆ ಅವುಗಳನ್ನು
ಮುಚ್ಚಿಹಾಕಲು ಬೇರೊಂದೇ ಅಭಿಯಾನವನ್ನು ನಡೆಸುವುದು ಉತ್ತಮ.
ಈಗ ಕರ್ನಾಟಕದ ಮಂತ್ರಿಗಳ ಕಾರ್ಯಕ್ಷಮತೆಯನ್ನು ಐಐಎಂ ನಂತಹ ಸಂಸ್ಥೆಯಿಂದ
ಮೌಲ್ಯಮಾಪನ ಮಾಡಿಸಬೇಕೋ ಬೇಡವೋ – ಅಥವಾ ಅದಕ್ಕೆ ಇನ್ನೂ ಉತ್ತಮ ಮಾರ್ಗವಿದೆಯೋ, ಅದು ಯಾರಿಂದ
ಆದರೆ ಸಮಂಜಸಪೂರ್ಣವಾಗುತ್ತದೆ ಎನ್ನುವುದು ಭಿನ್ನವಾದ ಚರ್ಚೆಯಾಗಿದೆ. ಆ ಚರ್ಚೆ ಆಗಬೇಕು. ಆದರೆ
ಅಂತಹ ಚರ್ಚೆ ಆರೋಗ್ಯಪೂರ್ಣ ವಾತಾವರಣದಲ್ಲಿ ಆಗಬೇಕು. ಆರೋಪ ಪ್ರತ್ಯಾರೋಪದ ವಾತಾವರಣದಲ್ಲಿ ಅಲ್ಲ.
No comments:
Post a Comment