Thursday, May 23, 2013

ಸಹಕಾರಕ್ಕೆ ಸಮಾಜಶಾಸ್ತ್ರವನ್ನು ಲೇಪಿಸಿದ ಬಾವಿಸ್ಕರ್ ಅವರನ್ನು ನೆನೆಯುತ್ತಾ

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಬಿ.ಎಸ್.ಬಾವಿಸ್ಕರ್ ಏಪ್ರಿಲ್ ನಲ್ಲಿ ತೀರಿಕೊಂಡ ಸುದ್ದಿ ಯಾವ ಪತ್ರಿಕೆಯಲ್ಲೂ ಬಂದಂತಿಲ್ಲ. ಅವರ ಜೊತೆ ಕೆಲಸ ಮಾಡಿದ್ದ ಡಾನ್ ಆಟವುಡ್ ಒಂದು ಪುಟ್ಟ ಲೇಖನವನ್ನು ಬರೆದು ಪ್ರಕಟಿಸುವುದರ ಮೂಲಕ ನಮಗೆ ಬಾವಿಸ್ಕರ್ ಸಾವಿನ ಸುದ್ದಿ ಮುಟ್ಟಿದೆ. ಸಹಕಾರ ಚಳುವಳಿಯ ಬಗ್ಗೆ ವಿಸ್ತೃತ ಕೆಲಸ ಮಾಡಿದ್ದ ಬಾವಿಸ್ಕರ್ ಅವರನ್ನು ಮಾರುಕಟ್ಟೆಯ ಲೋಕ ಮರೆತಿರುವುದು ದುರಂತವೇ ಆಗಿದೆ. 

ಬಾವಿಸ್ಕರ್ ಅನೇಕ ಕಾರಣಗಳಿಂದ ಪ್ರಮುಖ ಸಮಾಜಶಾಸ್ತ್ರಜ್ಞರಾಗಿದ್ದರು. ಅವರ ಸಂಶೋಧನೆ ಕ್ಲಾಸಿಕಲ್ ಸಮಾಜಶಾಸ್ತ್ರಕ್ಕೆ ಸಂದದ್ದಲ್ಲ. ಎಂ.ಎನ್.ಶ್ರೀನಿವಾಸರಂತಹ ದಿಗ್ಗಜರ ವಿದ್ಯಾರ್ಥಿಯಾಗಿದ್ದರೂ, ಅವರು ಭಿನ್ನ ದಾರಿಯನ್ನೇ ತುಳಿದರು. ಅಂದಿಗೆ ಹೆಚ್ಚು ಜನಪ್ರಿಯವಾಗಿದ್ದ ಗ್ರಾಮಸಮಾಜ-ಜಾತಿಪದ್ಧತಿ-ಸಂಸ್ಕೃತೀಕರಣ-ಆಧುನಿಕೀಕರಣದ ಜಾಡನ್ನು ಬಿಟ್ಟು ಬಾವಿಸ್ಕರ್ ಸಹಕಾರ ಕ್ಷೇತ್ರವನ್ನು ವಿಸ್ತಾರವಾಗಿ ಅರ್ಥೈಸುವ ಕೆಲಸ ಮಾಡಿದರು. ಹೀಗೆ ಮಾಡುತ್ತಲೇ, ಸಮಾಜಶಾಸ್ತ್ರದ ಸೂತ್ರಗಳನ್ನು ಹಿಗ್ಗಿಸಿ ಸಹಕಾರ ಕ್ಷೇತ್ರಕ್ಕೆ ಹೊಸ ವಿಶ್ಲೇಷಣೆಯ ಸಾಧ್ಯತೆಗಳನ್ನು ತೆರೆದಿಟ್ಟರು.

ಬಾವಿಸ್ಕರ್ ಆವರ ಅಧ್ಯಯನ ಪ್ರಕಟವಾಗುವವರೆಗೆ ಸಹಕಾರವನ್ನು ಒಂದು ಮನೋಧರ್ಮವಾಗಿ ಮಾತ್ರ ನೋಡಲಾಗುತ್ತಿತ್ತು. ಅದು ಬಂಡವಾಳಶಾಹೀ ಪದ್ಧತಿಯನ್ನು ಅಲ್ಲಗಳೆವ, ಆದರೆ ಮಾರುಕಟ್ಟೆಯ ಸೂತ್ರಕ್ಕೆ ಬದ್ಧವಾಗಿರುವ ಒಂದು ನಿರ್ವಹಣಾ ವಿಧಾನವೆಂದೂ, ಒಬ್ಬರಿಗೊಬ್ಬರು ಸಹಕರಿಸಿ ಸಡೆದರೆ ಒಟ್ಟಾರೆ ಎಲ್ಲರಿಗೂ ಲಾಭವಾಗುತ್ತದೆಂಬ ನಂಬುಗೆಯಿಂದ ಆ ಸಿದ್ಧಾಂತವನ್ನು ಪ್ರತಿಪಾದಿಸಲಾಗುತ್ತಿತ್ತು.

ಬಾವಿಸ್ಕರ್ ಮಹಾರಾಷ್ಟ್ರದ ಕೋಪ್ರಗಾಂವ್ ನಲ್ಲಿ ತಮ್ಮ ಮೊದಲ ಅಧ್ಯಯನವನ್ನು ಮಾಡಿದರು. ಅದನ್ನು ಮುಂದುವರೆಸಿ, ಡಾನ್ ಆಟವುಡ್ ಜೊತೆ ಸೇರಿ ತಮ್ಮ ವಾದಸರಣಿಯನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಆರಂಭಿಸಿ, ಗುಜರಾತಿನ ಹೈನುಗಾರಿಕೆಯವರೆಗಿನ ಅಭಿವೃದ್ದಿಯನ್ನೂ, ಉತ್ತರ ಭಾರತದಲ್ಲಿ ಸಹಕಾರ ವಿಫಲತೆಯನ್ನೂ ಅಧ್ಯಯನ ಮಾಡಿದರು. ಮೂಲತಃ ಬಾವಿಸ್ಕರ್ ಮತ್ತು ಆಟವುಡ್ ರಾಜಕೀಯ-ಸಾಮಾಜಿಕ-ಜಾತಿ ವ್ಯವಸ್ಥೆಯ ಚೌಕಟ್ಟಿನಲ್ಲಿ ಸಹಕಾರವನ್ನು ಅಧ್ಯಯನ ಮಾಡಿ ಈ ಸಾಮಾಜ ನಿರ್ಮಿತಿಯ ತಲ್ಲಣಗಳ ನಡುವೆ ಸಹಕಾರ ಏಕೆ, ಹೇಗೆ ಸಫಲವಾಗಬಹುದು, ಎಲ್ಲಿ ವಿಫಲವಾಗಬಹುದು ಎನ್ನುವುದನ್ನು ಪರೀಕ್ಷಿಸಿದರು.

ಸಹಕಾರದ ಸಾಫಲ್ಯತೆಗೆ ಬಾವಿಸ್ಕರ್ ಮಂಡಿಸಿದ ವಿಶ್ಲೇಷಣೆಯು ಹೊಸ ಒಳನೋಟಗಳಿಂದ ಕೂಡಿತ್ತು. ಮುಖ್ಯವಾಗಿ ಮಹಾರಾಷ್ಟ್ರದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಾಫಲ್ಯವನ್ನು ಅರ್ಥೈಸುತ್ತಾ ಮಹಾರಾಷ್ಟ್ರದ ಆ ಭಾಗದಲ್ಲಿ ಕೃಷಿಯಲ್ಲಿ ತೊಡಗಿದ್ದ ಪ್ರಮುಖ ಜಾತಿಯ ಮರಾಠರಿಗೂ ಮಿಕ್ಕ ಸಣ್ಣ ರೈತರಿಗೂ ಮೊದಲಿನಿಂದಲೂ ಒಂದು ರೀತಿಯ ಸಾಮಾಜಿಕ ಹೊಂದಾಣಿಕೆಯಿದ್ದದ್ದನ್ನು ಅವರು ಗಮನಿಸಿದರು. ಅಲ್ಲಿನ ಭೂ ಒಡೆತನ ಮತ್ತು ಒಕ್ಕಲು ಪದ್ಧತಿಗಳನ್ನು ಅಧ್ಯಯನ ಮಾಡಿ, ಅಲ್ಲಿನ ಪ್ರಮುಖ ಜಾತಿಗೂ, ಇತರ ಅಲ್ಪ ಭೂಹಿಡುವಳಿಗಾರರಿಗೂ ಇದ್ದ ಏಕ ಸಾಂಸ್ಕೃತಿಕ ಅಸ್ಮಿತೆ ಮತ್ತು ಅದನ್ನು ಸೃಷ್ಟಿಸಿದ ಸಾಮಾಜಿಕ ನಿರ್ಮಿತಿಯಿಂದಾಗಿಯೇ ಸಹಕಾರ ನೆಲೆಸಿದೆ ಎಂದು ಹೇಳಿದರು. ಇದರ ಜೊತೆಗೆ ಇನ್ನೆರಡು ಆಯಾಮಗಳನ್ನು ಬಾವಿಸ್ಕರ್ ಕಂಡುಕೊಂಡರು ಒಂದು ಕಟಾವಿ ನಂತರ ಕಬ್ಬನ್ನು ಹೆಚ್ಚುಕಾಲ ದಾಸ್ತಾನು ಮಾಡಲು ಸಾಧ್ಯವಿಲ್ಲ ಅದನ್ನು ತಕ್ಷಣವೇ ಸಂಸ್ಕರಣೆಗೆ ಕಾರ್ಖಾನೆಗೆ ಕಳುಹಿಸಬೇಕು;  ಎರಡು ಅದನ್ನು ಸಂಸ್ಕರಿಸುವ ತಂತ್ರಜ್ಞಾನ ಮತ್ತು ಕಾರ್ಖಾನೆಯ ಕ್ಷಮತೆಗೆ ಸಾಕಾಗುವಷ್ಟು ಕಬ್ಬಿನ ಇಳುವರಿ ಮರಾಠರ ಬಳಿ ಇರುವುದು ಸಾಧ್ಯವಿರಲಿಲ್ಲ. ಹೀಗಾಗಿ, ಕಾರ್ಖಾನೆಗಳು ಲಾಭದಾಯಕವಾಗಿ ನಡೆಯಲು ಸಣ್ಣ ಹಿಡುವಳಿಗಾರರ ಕಬ್ಬಿನ ಅಗತ್ಯವಿತ್ತು. ಹೀಗೆ ತಂತ್ರಜ್ಞಾನ ಮತ್ತು ಕಬ್ಬಿನ ಮೂಲ ಅಂಶದ ಜೊತೆಗೆ ಜಾತಿಪದ್ಧತಿಗೂ ಸಂಬಂಧವನ್ನು ಕಲ್ಪಿಸಿ ಸಹಕಾರವನ್ನು ಬಾವಿಸ್ಕರ್ ಅರ್ಥೈಸಿದರು. ಇದೇ ವಾದವನ್ನು ಆಧಾರವಾಗಿಟ್ಟುಕೊಂಡು ಉತ್ತರ ಭಾರತದ ಪಂಜಾಬ್-ಹರಿಯಾಣಾ ಹಾಗೂ ಉತ್ತರಪ್ರದೇಶದಲ್ಲಿ ಯಾಕೆ ಸಹಕಾರೀ ಸಕ್ಕರೆ ಕಾರ್ಖಾನೆಗಳು ವಿಫಲವಾಗಿವೆ ಎಂಬುದನ್ನು ಅಲ್ಲಿನ ಜಾತಿ ವ್ಯವಸ್ಥೆಯಲ್ಲಿ ಪ್ರಮುಖ ಜಾತಿಯವರಿಗೂ ಕೆಳಜಾತಿಯವರಿಗೂ ಇರುವ ಕಂದರದ ಅಂತರ ಮತ್ತು ಜಮೀನ್ದಾರಿಕೆಯಿಂದಾಗಿ ಅಲ್ಲಿ ಎರಡೂ ಪಂಗಡಗಳು ಸಹಕರಿಸುವ ಸಾಧ್ಯತೆಗಳಿಲ್ಲ ಎಂದು ವಿವರಿಸಿದ್ದರು. ಇದೇ ವಾದವನ್ನು ಹೈನುಗಾರಿಕೆಯ ಕ್ಷೇತ್ರಕ್ಕೂ ವಿಸ್ತರಿಸಿ ಗುಜರಾತಿನ ಪಾಟೀದಾರ ಸಮುದಾಯ ಹಾಲು ಸರಬರಾಜು ಮಾಡುವ ಮಿಕ್ಕ ಜಾತಿಯವರನ್ನೂ ಒಳಗೊಳ್ಳುವ ಅವಶ್ಯಕತೆಯನ್ನು ವಿವರಿಸಿದ್ದರು. ಈ ಅಧ್ಯಯನ ಅನೇಕ ಬಡಜನರ ಜೀವನವನ್ನು ಹಸನು ಮಾಡಬಲ್ಲ ಸಹಕಾರೀ ಕ್ಷೇತ್ರದ ಬಗ್ಗೆ ಹಿಂದೆ ಲಭ್ಯವಿರದ ಒಳನೋಟವನ್ನು ಒದಗಿಸಿತ್ತು.

ಬಾವಿಸ್ಕರ್ ಅವರ ಪ್ರಮುಖವಾದ ಕೊಡುಗೆ ಸಹಕಾರೀ ಕ್ಷೇತ್ರದಲ್ಲಿದ್ದರೂ, ಅವರು ಶಾಂತಿ ಜಾರ್ಜ್ ಜೊತೆಯಲ್ಲಿ ಮಾಡಿದ ಗುಜರಾತಿನ ಅಪೌಷ್ಟಿಕತೆಯ ಬಗೆಗಿನ ಅಧ್ಯಯನ ಆ ರಾಜ್ಯದ ಹೈನುಗಾರಿಕೆ ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಟ್ಟಿತು. ಗುಜರಾತಿನ ಅಮುಲ್ ಮಾದರಿಯ ಸಹಕಾರ ವ್ಯವಸ್ಥೆಯೇ ದೇಶದ ಭವಿಷ್ಯವೆಂದು ಬೀಗುತ್ತಿದ್ದ ದಿನಗಳಲ್ಲಿ ಬಾವಿಸ್ಕರ್ ಮತ್ತು ಜಾರ್ಜ್ ಮೊದಲ ಬಾರಿಗೆ ಹಾಲು ಉತ್ಪಾದನೆಯ ತವರಾದ ಗುಜರಾತಿನಲ್ಲಿನ ಅಪೌಷ್ಟಿಕತೆಯ ಬಗ್ಗೆ ಮಾತನಾಡಿ, ಕುರಿಯನ್ ಅವರ ಸಿಟ್ಟಿಗೆ ಗುರಿಯಾದರು. ಇಲ್ಲಿ ಬಾವಿಸ್ಕರ್-ಜಾರ್ಜ್ ವಾದ ಇಂತಿತ್ತು: ಗುಜರಾತಿನ ಸಹಕಾರಿ ಚಳುವಳಿಯ ಸಫಲತೆಯೇ ಅಲ್ಲಿನ ಮಕ್ಕಳಿಗೆ ಮುಳುವಾಗಿದೆ ಸಹಕಾರಿ ಕ್ರಾಂತಿಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮುಂಬೈ ಮತ್ತಿತರ ಆಕರ್ಷಕ ಮಾರುಕಟ್ಟೆಗಳು ದೊರೆತಿರುವುದರಿಂದ ರೈತರು ತಮ್ಮ ಸ್ವಂತ ಬಳಕೆಗೂ ಒಂದಿಷ್ಟು ಹಾಲನ್ನಿಟ್ಟುಕೊಳ್ಳದೇ ಎಲ್ಲವನ್ನೂ ಹಣಕ್ಕಾಗಿ ಸಹಕಾರಿ ಸಂಘಗಳಿಗೆ ಸರಬರಾಜು ಮಾಡುತ್ತಿದ್ದಾರೆ. (ಇತ್ತೀಚೆಗೆ ತಮ್ಮ ನೂರು ಮೈಲಿ ಸೂತ್ರದ ಅಧ್ಯಯನಕ್ಕಾಗಿ ಮಾಹಿತಿಯನ್ನು ಶೇಖರಿಸಿದ ಶ್ರೀಮತಿ ಇಳಾ ಭಟ್ ಅಧ್ಯಯನದಲ್ಲಿಯೂ ಈ ಮಾತಿನ ಪುಷ್ಟೀಕರಣವಿದೆ). ಹೀಗಾಗಿ, ಮನೆಯಲ್ಲಿಯೇ ಇರಬೇಕಾಗಿದ್ದ ಪೌಷ್ಟಿಕಾಂಶದ ಒಂದೇ ವಸ್ತು ಮಾರುಕಟ್ಟೆಗೇರುತ್ತಿದೆ, ಇದು ಒಳ್ಳೆಯದಲ್ಲ ಎಂದು ಅವರು ವಾದಿಸಿದ್ದರು.

ಬಾವಿಸ್ಕರ್ ಮೇಲೆ ಕುರಿಯನ್ ಕೆಂಡಕಾರಿ ಅಮುಲ್ ಕೇವಲ ಹಾಲು ಮಾರಾಟಗಾರರ ಸಹಕಾರ ಸಂಘವೇ ಹೊರತು ಸಮಾಜ ಸೇವಾ ಸಂಸ್ಥೆಯಲ್ಲ ಎಂಬ ಅರ್ಥಬರುವ ನಿಲುವನ್ನು ತೆಗೆದುಕೊಂಡರು. ಆದರೆ ಕೆಲವು ದಿನಗಳಲ್ಲಿ ರೈತರ ಮಕ್ಕಳಿಗೆ ಪೌಷ್ಟಿಕ ಸೋಯಾ ಬಿಲ್ಲೆಗಳನ್ನು ಸಹಕಾರಿ ಸಂಘಗಳ ಮೂಲಕ ಹಂಚುವ ಕಾರ್ಯಕ್ರಮವನ್ನು ಕೈಗೊಂಡು ತನ್ಮೂಲಕ ಬಾವಿಸ್ಕರ್ ಅವರ ಟೀಕೆ ಸರಿಯೆಂದೇ ನಿರೂಪಿಸಿದರು.

ಇತ್ತ ಬಾವಿಸ್ಕರ್ ಪ್ರತಿಪಾದಿಸಿದ ಜಾತಿಪದ್ಧತಿ ಮತ್ತು ಸಹಕಾರದ ವಾದವೂ ಟೀಕೆಗೆ ಒಳಗಾಯಿತು. ಆ ಟೀಕೆ ಬಂದದ್ದೂ ಗುಜರಾತಿನ ಆಣಂದದಿಂದಲೇ. ಆರ್ಥಿಕ ಮತ್ತು ನಿರ್ವಹಣಾ ತಜ್ಞರಾಗಿದ್ದ ತುಷಾರ್ ಷಾ ಬಾವಿಸ್ಕರ್ ಅವರ ಪ್ರತಿಪಾದನೆಯನ್ನು ಪ್ರಶ್ನಿಸಿ ಕಟು ಟೀಕೆಯ ಲೇಖನವನ್ನು ಪ್ರಕಟಿಸಿದರು. ಷಾ ವಾದ ಇಂತಿತ್ತು: ಜಾತಿಪದ್ಧತಿಯೇ ಸಹಕಾರೀ ಆಂದೋಲನದ ಸಾಫಲ್ಯಕ್ಕೆ ಮೂಲಕಾರಣವಾಗಿದ್ದರೆ ಗುಜರಾತಿನಲ್ಲಿ ಎಲ್ಲ ರೀತಿಯ ಸಹಕಾರ ಸಂಘಗಳೂ ಸಫಲವಾಗಿರಬೇಕಿತ್ತು. ಬದಲಿಗೆ ಅಮುಲ್ ಇದ್ದ ಆಣಂದದಲ್ಲಿಯೇ ವಿಫಲ ಸಹಕಾರ ಸಂಘಗಳ ದೊಡ್ಡ ಯಾದಿಯನ್ನೇ ಅವರು ಬಾವಿಸ್ಕರ್ ಮುಂದಿಟ್ಟರು. ಚಿಕೋರಿ, ಬೀಡಿ ತಂಬಾಕು, ಹತ್ತಿ, ಸಕ್ಕರೆ ಎಲ್ಲ ರೀತಿಯ ಸಹಕಾರ ಸಂಘಗಳೂ ಇಲ್ಲಿ ವಿಫಲಗೊಂಡಿದ್ದುವು. ಷಾ ಈ ವಾದವನ್ನು ಮಂಡಿಸಿದಾಗ ಬಾವಿಸ್ಕರ್ ಮೌನವಾಗಿಯೇ ಇದ್ದರು. ಬಾವಿಸ್ಕರ್ ಅವರ ವಾದದಲ್ಲಿ ಜಾತಿಗಿಂತ ಮಿಗಿಲಾಗಿ ತಾಂತ್ರಿಕತೆ ಮತ್ತು ತಕ್ಷಣ ಸಂಸ್ಕರಣೆಯ ಅಂಶದ ಎರಡು ಹೆಚ್ಚುವರಿ ಅಂಶಗಳಿದ್ದುವು. ಆದರೆ ಬಾವಿಸ್ಕರ್ ಅವರ ವಾದವನ್ನು ತಳ್ಳಿಹಾಕಿ ತುಷಾರ್ ಷಾ ಮತ್ತೊಂದೇ ವಾದವನ್ನು ಮಂಡಿಸಿದರು.

ಸಹಕಾರ ಸಂಸ್ಥೆಗಳು ಸದಸ್ಯರ ಬದುಕು ಮತ್ತು  ಆರ್ಥಿಕತೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಾಗ ಮಾತ್ರ ಸಫಲವಾಗುತ್ತವೆ. ರೈತರ ಆದಾಯದ ಪ್ರಮುಖ ಭಾಗವನ್ನು ಗುಜರಾತಿನ ಹೈನುಗಾರಿಕೆ,  ಮಹಾರಾಷ್ಟ್ರದ ಸಕ್ಕರೆ, ಮುಲುಕನೂರಿನ ವ್ಯವಸಾಯೋತ್ಪನ್ನ ಸಹಕಾರಿ ಸಂಘಗಳೆಲ್ಲವೂ ನೀಡುತ್ತವೆ, ಆದ್ದರಿಂದ ಅಲ್ಲಿನ ಸಂಘಗಳು ಜಾತಿವ್ಯವಸ್ಥೆಯ ಪ್ರಮೇಯವಿಲ್ಲದಿದ್ದರೂ ಸಫಲವಾಗಿಯೇ ಇರುತ್ತಿದ್ದುವು. ಆರ್ಥಿಕತೆ ಮತ್ತು ಆಯೋಜನಾ ಕೌಶಲ್ಯವಿದ್ದರೆ ಜಾತಿ ಪದ್ಧತಿ ನಗಣ್ಯವಾಗುತ್ತದೆಂಬ ವಾದವನ್ನು ಮಂಡಿಸಿದರು.

ಈ ವಾದಕ್ಕೂ ಬಾವಿಸ್ಕರ್ ಪ್ರತಿಕ್ರಿಯಿಸಲಿಲ್ಲ. ಸಮಾಜಶಾಸ್ತ್ರದ ತಮ್ಮ ವಾದವನ್ನು ಅರ್ಥಶಾಸ್ತ್ರಜ್ಞರೊಬ್ಬರು ಬೇರೊಂದು ನೆಲೆಯಿಂದ ಪ್ರಶ್ನಿಸುತ್ತಿದ್ದರು. ಹಾಗೆ ಪ್ರಶ್ನಿಸುವ ಅಧಿಕಾರ ತುಷಾರ್ ಷಾರಿಗಿದೆ. ತಮ್ಮ ವಾದವನ್ನವರು ಮಂಡಿಸಲಿ ಎನ್ನುವಂತೆ ಬಾವಿಸ್ಕರ್ ಸುಮ್ಮನಿದ್ದರು. ಆದರೆ ಕೆಲದಿನಗಳಲ್ಲಿಯೇ ತುಷಾರ್ ಷಾ, ತಮ್ಮ ಟೀಕೆಯ ಮೊನಚನ್ನು ಮೊಂಡು ಮಾಡಿದರು. ಬಾವಿಸ್ಕರ್ ವಾದದಲ್ಲಿ ಹುರುಳಿದೆ ಎಂದು ಅವರು ಒಪ್ಪಿದಂತಿತ್ತು. ಸೂರತ್ ಜಿಲ್ಲೆಯ ಓಲ್ಪಾಡ್ ಕ್ಷೇತ್ರದಲ್ಲಿ ಕೈಗೂಂಡ ಅಧ್ಯಯನವೇ ಅದಕ್ಕೆ ಕಾರಣವಾಯಿತು. ಆ ಅಧ್ಯಯನದಲ್ಲಿ ಸಹಕಾರ ಸಂಘಗಳು ಸಫಲವಾಗಲು ಷಾ ಅವರಿಗೆ ಯಾವುದೇ ಆರ್ಥಿಕ ಕಾರಣಗಳೂ ಕಾಣಲಿಲ್ಲ. ಸಹಕಾರ ಸಂಘಗಳನ್ನು ಕಟ್ಟುವುದು ಒಂದು ಆರಾಧನೆಯ, ಸೇವೆಯ ದ್ಯೋತಕ ಎಂದು ಭಾವಿಸಿ ನಡೆದಿದ್ದ ಅಲ್ಲಿನ ಪಾಟೀದಾರರು ಬಾವಿಸ್ಕರ್ ಗೂ ತುಷಾರ್ ಷಾ ಗೂ ರಾಜಿಯನ್ನು ಮಾಡಿಸಿದ್ದರು.

ಹೀಗೆ ಸಹಕಾರ ಕ್ಷೇತ್ರದಲ್ಲಿದ್ದ ಒಣ ಚರ್ಚೆಗಳಿಗೆ ಒಂದು ಗಾಂಭೀರ್ಯವನ್ನೂ, ಹೊಸ ಆಯಾಮವನ್ನೂ ತಂದಿದ್ದ ಮಿತಭಾಷಿ ಬಾವಿಸ್ಕರ್ ಸದ್ದಿಲ್ಲದೆಯೇ ನಮ್ಮನ್ನು ಅಗಲಿದ್ದಾರೆ. ಇಂದಿನ  ಯಾಂತ್ರಿಕ,  ಆಧುನಿಕ, ವಾಣಿಜ್ಯ ಮಾರುಕಟ್ಟೆಯ ಜಗತ್ತಿನಲ್ಲಿ ನಾವು  ಈ ರೀತಿಯ ದಿಗ್ಗಜರನ್ನು ಅವರ ಮರಣದಲ್ಲಿಯೂ ಸ್ಮರಿಸದಿರುವುದು ದುರಂತವೇ ಆಗಿದೆ.


ಭಾನುವಾರ, 19 ಮೇ 2013  




No comments:

Post a Comment