Sunday, October 28, 2012

ಎಫ್ ಡಿ ಐ ಅಂದರೆ ಭಯವೇಕೆ?


ಚಿಲ್ಲರೆ ವ್ಯಾಪಾರದಲ್ಲಿ ಎಫ್.ಡಿ.ಐ ಈಚಿನ ದಿನಗಳಲ್ಲಿ ಬಹುಚರ್ಚಿತ ವಿಷಯವಾಗಿದೆ. ಈ ವಿಷಯದ ಬಗ್ಗೆ ಅದನ್ನು ವಿರೋಧಿಸುವವರಿಂದ ಕೆಲವು ಆತಂಕಗಳೂ, ಬೆಂಬಲಿಸುವವರಿಂದ ಕೆಲವು ಭರವಸೆಗಳೂ ಕೇಳಿಬರುತ್ತಿವೆ. ಈ ಎರಡನ್ನೂ ನಾವು ತುಸು ಉದ್ವೇಗರಹಿತವಾಗಿ ನೋಡಬೇಕಾಗಿದೆ. ಈ ಮಲ್ಟಿಬ್ರಾಂಡ್ ಎಫ್.ಡಿ.ಐ ಅಂದಕೂಡಲೇ ನಮಗೆ ಕೇಳಿಬರುವುದು ವಾಲ್ ಮಾರ್ಟ್ ಹೆಸರು. ಒಂದು ಕ್ಷಣಕ್ಕೆ ವಾಲ್ ಮಾರ್ಟನ್ನು ಪಕ್ಕಕ್ಕಿಟ್ಟು ಇದರಿಂದ ರೈತರಿಗಾಗುವ ಪ್ರಯೋಜನವೇನು ಅನ್ನುವುದನ್ನು ಅರ್ಥಮಾಡಿಕೊಳ್ಳೋಣ.

ಈ ಪ್ರಸ್ತಾವದ ಬೆಂಬಲಿಗರು ಎಫ್.ಡಿ.ಐ ನಿಂದಾಗಿ ಒಟ್ಟಾರೆ ಆಗುವ ಲಾಭವನ್ನು ಉತ್ತಮ ಉದ್ಯೋಗಾವಕಾಶ ಮತ್ತು ಉತ್ತಮವಾದ ಭೌತಿಕ ಸದುಪಾಯಗಳು – ಗೋದಾಮುಗಳು, ಶೀತಲೀಕರಣಕ್ಕೆ ಅನುಗುಣವಾದ ದಾಸ್ತಾನು ವ್ಯವಸ್ಥೆ ಬರುತ್ತದೆಂದು ಹೇಳುತ್ತಿದ್ದಾರೆ. ಅದು ನಿಜವೇ? ಹಾಲಿನ ಕ್ಷೇತ್ರದಲ್ಲಿ ಅಮುಲ್ ಸಹಕಾರ ಸಂಸ್ಥೆ ಈ ಇಡೀ ಭೌತಿಕ ಸದುಪಾಯವನ್ನು ಉಂಟುಮಾಡಲು ಅನೇಕ ವರ್ಷಗಳನ್ನೇ ತೆಗೆದುಕೊಂಡಿತು. ಅದರಲ್ಲಿ ಹಾಲನ್ನು ಪ್ರತೀ ಹಳ್ಳಿಯ ಸಹಕಾರ ಸಂಘದಿಂದ ಕೊಳ್ಳುವುದಲ್ಲದೇ, ಅದನ್ನು ದಾಸ್ತಾನು ಮಾಡುವ ಸದುಪಾಯವನ್ನು ಏರ್ಪಾಟು ಮಾಡಿತು. ಇದಲ್ಲದೇ ಹಾಲನ್ನ, ಪುಡಿಯಾಗಿ, ಇತರೆ ಪದಾರ್ಥಗಳಾಗಿ ಪರಿವರ್ತಿಸಲು ಬೇಕಾದ ಸಂಶೋಧನೆಯನ್ನೂ ಅಮುಲ್ ಪ್ರೋತ್ಸಾಹಿಸಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಎಮ್ಮೆ ಹಾಲಿನಿಂದ ಪುಡಿಯನ್ನೂ, ಚೀಸನ್ನೂ ಮಾಡುವ ತಂತ್ರವನ್ನು ಭಾರತದಲ್ಲಿ ಅಳವಡಿಸಿತು. ಈ ಇಂಥ ಕೆಲಸವನ್ನು ವಿದೇಶೀ ಹೂಡಿಕೆದಾರರು ಮಾಡಬಹುದೇ? ಮಾಡುವುದಾದರೆ ನಾವು ಅದಕ್ಕೆ ಸ್ವಾಗತ ಕೋರಬೇಕು.

ಹೂಡಿಕೆಯ ಪರವಾಗಿ ವಾದಿಸುತ್ತಿರುವವರು ಮಾರಾಟ ಮಾಡುತ್ತಿರುವುದು ಇಡುವಳಿ ಹೀಗೆ ಗ್ರಾಮ್ಯ ಪ್ರದೇಶಗಳಿಗೆ, ರೈತರ ಬಳಿಗೆ ಬರುವುದಾದರೆ ವಿದೇಶೀ ಹಣ ಯಾಕಾಗಬಾರದು? ಎಂಬ ಈ ಕನಸನ್ನು. ಇದು ಸಫಲವಾಗಬೇಕಾದರೆ ಹೂಡಕೆ ಹಾಕುವವರಿಗೆ ತಾಳ್ಮೆಯಿರಬೇಕು. ಅನೇಕ ವರ್ಷಗಳ ನಷ್ಟ ಅನುಭವಿಸುವ ತಾಕತ್ತಿರಬೇಕು. ಕಿರಿಕಿರಿಯ ಸ್ಥಳೀಯ ಮಾರುಕಟ್ಟೆ ಸಮಿತಿಯ ನಿಯಮಗಳ ಚೌಕಟ್ಟಿನೊಳಕ್ಕೆ ಕೆಲಸ ಮಾಡುವ ಕುಶಲತೆಯಿರಬೇಕು.

ಭಾರತದಲ್ಲಿಯೇ ಇದ್ದು ತಂಬಾಕಿನ ಮೂಲಕ ಗ್ರಾಮ್ಯ ಭಾರತವನ್ನು ಚೆನ್ನಾಗಿ ಅರಿತ ಐಟಿಸಿ ಕಂಪನಿ ತಮ್ಮ ಈ-ಚೌಪಾಲ್ ಅನ್ನುವ ಹೊಸ ತಂತ್ರವನ್ನು ಹೂಡಿ, ವ್ಯವಸಾಯೋತ್ಪನ್ನಗಳ ವ್ಯಾಪಾರಕ್ಕೆ ಇಳಿದಾಗ ಎದುರಿಸಿದ ತೊಂದರೆಗಳು ಅನೇಕ. ವ್ಯವಸಾಯೋತ್ಪನ್ನಗಳನ್ನು ಕೊಳ್ಳುವ ಅಡತಿಯಾಗಳ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡವರು ಯಾರು? ರೈತರಿಗೆ ಸಾಲ, ಬೀಜ, ರಸಗೊಬ್ಬರ, ಕೀಟನಾಶಕಗಳನ್ನೊದಗಿಸಿ, ಉತ್ಪನ್ನವನ್ನು ಕೊಳ್ಳವುದಕ್ಕೂ ಎದ್ದು ನಿಲ್ಲುವ ಈ ವ್ಯಕ್ತಿಯ ಸಂಸ್ಥಾಗತ ರೂಪುರೇಷೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭದ ಮಾತಲ್ಲ.  

ಹೀಗಾಗಿ ರೈತರ ಜೀವನ ಉತ್ತಮವಾಗುವ ಲೊಳಲೊಟ್ಟೆಯನ್ನು ನಾವುಗಳು ಮರೆಯಬಹುದು. ವ್ಯವಸಾಯೋತ್ಪನ್ನಗಳನ್ನು ಕೊಳ್ಳುವ ದೃಷ್ಟಿಯಿಂದ ನೋಡಿದರೆ ವಿದೇಶೀಯರ ಹೂಡಿಕೆಯಿಂದ ನಮಗಾಗಬಹುದಾದ ಲಾಭವಂತಿರಲಿ ಅವರುಗಳಿಗಾಗುವ ನಷ್ಟವನ್ನು ಅವರು ಅಂದಾಜು ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಸರ್ವನಾಶನವಾಗಿಬಿಟ್ಟಿರುವ ಬಡ ಭಾರತೀಯ ರೈತನನ್ನು ಇನ್ನಷ್ಟು ನಾಶ ಮಾಡುವ ಪ್ರತಿಭೆ ಈ ಕಂಪನಿಗಳಿಗಿದ್ದಂತಿಲ್ಲ. ಹೀಗಾಗಿ ಅವರನ್ನು ನಮ್ಮ ಅಖಾಡಾಕ್ಕೆ ಕರೆಯುವುದರಿಂದ ನಮಗೇ ತುಸು ವಿದೇಶೀ ವಿನಿಮಯ ಬಂದರೆ ಯಾಕಾಗಬಾರದು?

ಇನ್ನು ಇದನ್ನು ವಿರೋಧಿಸುವವರು ಏನನ್ನುತ್ತಾರೆ? ಇದರಿಂದಾಗಿ ಸಣ್ಣ ಕಿರಾಣಿಯಂಗಡಿಯವರಿಗೆ ತೊಂದರೆಯಾಗುತ್ತದೆಂಬ ಮಾತು ಕೇಳಿಬರುತ್ತಿದೆ. ದೊಡ್ಡಾಲದ ಮರದ ಕೆಳಗೆ ಪುಟ್ಟ ಪುಟ್ಟ ಮಾಂ ಅಂಡ್ ಪಾಪ್ ಅಂಗಡಿಗಳು ನಲುಗಿಹೋಗುತ್ತವೆಂದು ಜನ ಹೇಳುತ್ತಿದ್ದಾರೆ, ಈ ಕಿರಾಣಿಯಂಗಡಿಗಳಲ್ಲಿ ಕೆಲಸ ಮಾಡುವ ಹುಡುಗರ ಉದ್ಯೋಗಾವಕಾಶ ನಾಶವಾಗಿ ಹೋಗುತ್ತದೆಂದು ಹೇಳುತ್ತಾರೆ. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಬಹುದಾದರೂ ದೇಶಕ್ಕೆ ಇದು ಒಳ್ಳೆಯದೇನನ್ನೂ ಮಾಡುವುದಿಲ್ಲ ಎನ್ನುವ ವಾದವಿದೆ. ಈ ವಾದದಲ್ಲಿ ತುಸು ಹುರುಳಿರಬಹುದಾದರೂ ನಮ್ಮ ಅನುಭವವನ್ನು ತಿರುವಿ ಹಾಕೋಣ 

ವಿದೇಶೀಯರು ತಮ್ಮ ಐಡಿಯಾವನ್ನು ಇಲ್ಲಿಗೆ ತಂದು ಅದನ್ನು ಭಾರತೀಕರಿಸುತ್ತೇವೆಂದು ಕೊಚ್ಚಿಕೊಳ್ಳುವುದು ಸರಳವಾದ ಮಾತಲ್ಲ. ಅದನ್ನು ಭಾರತೀಕರಿಸಬಲ್ಲವರು ನಾವೇಯೇ. ಒಂದು ಬ್ಲಾಕ್ ಬರಿ ರೀತಿಯ ಐ-ಫೋನ್ ರೀತಿಯ ಯಂತ್ರವನ್ನು ಅದು ಮಾರುಕಟ್ಟೆಗೆ ಬಂದ ಕೆಲ ತಿಂಗಳುಗಳೊಳಗೇ ತಯಾರಿಸುವ ಕ್ಷಮತೆಯಿರುವ ನಾವು ಭಾರತೀಯರು ವಾಲ್ ಮಾರ್ಟಿನ ಐಡಿಯಾವನ್ನು ವಿಸ್ತೃತವಾಗಿ ನಮ್ಮದಾಗಿಸಿಕೊಂಡಿಲ್ಲವೆಂದರೆ ಅದರಲ್ಲಿ ಏನೋ ವಿಷಯವಿರಲೇಬೇಕು. ಈಚೆಗೆ ದೊಡ್ಡದಾಗಿ ತೆರೆದ ಫುಡ್ ವರ್ಲ್ಡ್, ಸ್ಪೆನ್ಸರ್ಸ್, ಮೋರ್, ರಿಲಾಯನ್ಸ್, ಬಿಗ್ ಬಜಾರ್, ಸುಭಿಕ್ಷಾ ಗಳಲ್ಲಿ ಎಷ್ಟು ಅಂಗಡಿಗಳನ್ನು ಮುಚ್ಚಿದ್ದಾಗಿದೆ ಎನ್ನುವುದನ್ನು ಗಮನಿಸಿದರೆ ಇದರಲ್ಲಿರುವ ಅಪಾಯ ಗೋಚರಿಸುತ್ತದೆ. ಅತೀ ವೇಗದಲ್ಲಿ ಬೆಳೆಯಲೆತ್ನಿಸಿದ ಸುಭಿಕ್ಷಾ ಅಂತೂ ಪೂರ್ತಿಯಾಗಿ ದಿವಾಳಿ ತೆಗೆದು ಹೋಯಿತು.

ಭಾರತೀಯ ಗ್ರಾಹಕನನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ದೊಡ್ಡ ಪುಸ್ತಕದಂಗಡಿಗೆ ಹೋಗಿ, ಅಲ್ಲಿರುವ ಪುಸ್ತಕಗಳನ್ನೆಲ್ಲಾ ನೋಡಿ, ಜಾಲಾಡಿ, ರಿಯಾಯಿತಿ ಕೊಡುವ ಸಣ್ಣ ಅಂಗಡಿಯಲ್ಲಿ ಕೊಳ್ಳುವ, ಮಿಸ್ಡ್ ಕಾಲ್ ಸಂಸ್ಕೃತಿಯ ಜನಕರಾದ ಭಾರತೀಯರನ್ನು ಅಂದಾಜು ಮಾಡುವಲ್ಲಿ ವಿದೇಶೀ ಕಂಪನಿಗಳು ಎಡವುದರಲ್ಲಿ ಅನುಮಾನವಿಲ್ಲ. ಭಾರತೀಯರಿಗೆ ವ್ಯಾಪಾರ ಮಾಡುವುದಕ್ಕೆ, ವಸ್ತುಗಳನ್ನು ಕೊಳ್ಳುವುದಕ್ಕೆ ಸಮಯದ ಅಭಾವವಿಲ್ಲ. ಹೀಗಾಗಿ ಮನರಂಜನೆಗಾಗಿ ದೊಡ್ಡ ಅಂಗಡಿಗಳಿಗೆ ಹೋಗಿ, ನಿಜದ ಖರೀದಿ ಕಿರಾಣಿಯಂಗಡಿಯಲ್ಲಿ ಮಾಡಿಯಾರು. ಫೋನಿನಲ್ಲಿ ಆರ್ಡರ್ ತೆಗೆದು ಕೊಳ್ಳುವ, ಮನೆಗೆ ಹುಡುಗನನ್ನು ಕಳಿಸಿ ಡೆಲಿವರಿ ಮಾಡುವ, ಹಿಸಾಬಿನಲ್ಲಿ ಬರೆದಿಟ್ಟುಕೊಂಡು ಸಂಬಳದ ದಿನ ಹಣ ತೆಗೆದುಕೊಳ್ಳವ ಸವಲತ್ತನ್ನು ಕಿರಾಣಿಯಂಗಡಿಗಳಲ್ಲದೇ ಯಾರು ನೀಡಬಹುದು?

ಇರಲಿ, ಒಂದು ಕ್ಷಣದ ಮಟ್ಟಿಗೆ ಈ ಹೂಡಿಕೆಯಿಂದಾಗಿ ಅನೇಕ ಸಂಸ್ಥೆಗಳು ಭಾರತಕ್ಕೆ ಧಾಳಿಯಿಟ್ಟವು ಎಂದೇ ಅಂದುಕೊಳ್ಳೋಣ. ಅವರುಗಳೆಲ್ಲಾ ಸೇರಿ ಎಷ್ಟು ನಗರಗಳಲ್ಲಿ ಅಂಗಡಿ ತೆರೆಯಬಹುದು? ಒಟ್ಟಾರೆ ಎಷ್ಟು ಕೋಟಿ ರೂಪಾಯಿಯ ವ್ಯಾಪಾರ ಮಾಡಬಹುದು? ಭಾರತದ ಒಟ್ಟಾರೆ ಮಾರುಕಟ್ಟೆಯ ಎಷ್ಟು ಭಾಗವನ್ನು ಅವರುಗಳು ಆಕ್ರಮಿಸಿಕೊಳ್ಳಬಹುದು? ಈ ಪ್ರಶ್ನೆಗಳನ್ನು ಕೇಳುವಾಗ ನಾವು ಸಹಜವಾಗಿ ಕೇಳಬೇಕಾದ ಪ್ರಶ್ನೆಯೆಂದರೆ ಒಂದು ಮೆಕ್ ಡೊನಾಲ್ಡ್, ಒಂದು ಕೆ.ಎಫ್.ಸಿ. ಒಂದು ಪೀಡ್ಜಾ ಹಟ್, ಒಂದು ಡಾಮಿನೋಸ್ ಬಂದದ್ದರಿಂದ ಎಷ್ಟು ದರ್ಶಿನಿಗಳು ಮುಚ್ಚಿದುವು? ಬದಲಿಗೆ ಅವು ಬೆಳೆದಂತೆ ಎಂ.ಟಿ.ಆರ್ ನಾಲ್ಕು ಜಾಗಗಳಲ್ಲಿ ತನ್ನ ಹೊಟೇಲನ್ನು ತೆಗೆಯಿತು. ಶರವಣ ಭವನ, ಅಡ್ಯಾರ್ ಆನಂದ ಭವನ, ಅಡಿಗಾಸ್, ಕಾಮತ್ ಅನೇಕ ಜಾಗಗಳಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಪೀಡ್ಜಾದಿಂದ ಉಡುಪಿ ಹೋಟೆಲುಗಳ ಕೂದಲೂ ಕೊಂಕಿಲ್ಲವಾದರೆ ಈ ಎಫ್.ಡಿ.ಐನಿಂದ ಏನಾಗಬಹುದು?

ನಿಜವಾದ ಕಥೆಯೆಂದರೆ ನಮ್ಮ ಬೊಕ್ಕಸದಲ್ಲಿದ್ದ ವಿದೇಶಿ ವಿನಿಮಯ ಕುಗ್ಗಿದೆ. ತೈಲದ ಬೆಲೆ, ಹಾಗೂ ಒಟ್ಟಾರೆ ವಿನಿಮಯ ದರದಲ್ಲಿ ಆಗುತ್ತಿರುವ ಏರುಪೇರಿನಿಂದಾಗಿ ದೇಶ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಾಗಿ ವಿದೇಶೀ ವಿನಿಮಯ ಯಾವುದೇ ರೀತಿಯಲ್ಲಿ ನಮ್ಮ ಬೊಕ್ಕಸಕ್ಕೆ ಬಂದರೂ ಅದು ಸ್ವಾಗತಾರ್ಹ ಎನ್ನುವ ಸ್ಥಿತಿಗೆ ನಮ್ಮ ಕೇಂದ್ರ ಸರಕಾರ ತಲುಪಿದೆ. ಈ ವ್ಯೂಹದಲ್ಲಿ ಡೀಜಲ್ ಬೆಲಯೇರಿಸುವುದೂ, ಹಾಗೂ ಹಲವು ಕ್ಷೇತ್ರದಲ್ಲಿ ಹೂಡಿಕೆಯನ್ನು ಆಹ್ವಾನಿಸುವುದೂ ಒಂದು ಭಾಗವಾಗಿದೆ. ಲಾಭ ಮಾಡಲು ಕಷ್ಟವಾದ ಚಿಲ್ಲರೆ ವ್ಯಾಪಾರ, ವಿಪರೀತ ನಷ್ಟ ಮಾಡುತ್ತಿರುವ ವಾಯುಯಾನ ಕ್ಷೇತ್ರದ ನೆಪದಲ್ಲಿ ವಿದೇಶೀ ವಿನಮಯ ಬಂದರೆ ಹಾವೂ ಸಾಯುವುದಿಲ್ಲ, ಕೋಲೂ ಮುರಿಯುವುದಿಲ್ಲ. ಆದರೂ ವಿದೇಶೀಯರೆಂದರೆ ಯಾವುದೋ ಜಾದೂ ತರುತ್ತಾರೆಂಬ ಭಯ-ಅಥವ-ಭಕ್ತಿಯನ್ನಷ್ಟೇ ತೋರಿ ನಾವು ಬೇಕುಬೇಡವೆನ್ನುತ್ತಿದ್ದೇವೆ. ಅಕಸ್ಮಾತ್ ಹೂಡಿಕೆಯ ನಿರ್ಧಾರ ತಪ್ಪಾಯಿತು ಎಂದು ನಮಗನ್ನಿಸಿದರೆ ಜಾರ್ಜ್ ಫರ್ನಾಂಡಿಸ್ ರಂಥಹವರನ್ನು ಉತ್ಪಾದನಾ ಕ್ಷೇತ್ರದ ಮಂತ್ರಿಯನ್ನಾಗಿಸಿದರೆ ಸಾಕು. ಒಂದೇ ಏಟಿಗೆ 1977ರಲ್ಲಿ ಕೋಕಾಕೋಲಾವನ್ನು ಹೊರಗಟ್ಟಿದಂತೆ ಎಲ್ಲರನ್ನೂ ಅಟ್ಟಿಬಿಡುತ್ತಾರೆ.

ವಿದೇಶೀಯರು ನಮ್ಮನ್ನು "ಉಪಯೋಗಿಸುತ್ತಿದ್ದಾರೆ" ಅನ್ನುವ ಭಯದಿಂದ ನಾವು ಇದನ್ನು ನೋಡುತ್ತಿದ್ದೇವೆ. ನಾವು ವಿದೇಶೀಯರನ್ನು "ಉಪಯೋಗಿಸುತ್ತಿದ್ದೇವೆ" ಅನ್ನುವ ಆತ್ಮಾಭಿಮಾನದಿಂದ ಇದನ್ನು ಕಂಡರೆ ಇದರಲ್ಲಿರುವ ಅನೇಕ ಗೊಂದಲಗಳು ತಾವಾಗಿಯೇ ದೂರವಾಗುತ್ತವೆ.




No comments:

Post a Comment