Tuesday, December 17, 2013

ಸಹಕಾರಕ್ಕೆ ಕರುಣೆ ಸುತ್ತೋಲೆಗಳ ಕಂಟಕ

ಹೊರಗಿನವರು ನಮ್ಮ ಒಂದು ಗ್ರಾಮಕ್ಕೆ ಭೇಟಿ ನೀಡಿದರೆ, ಅಲ್ಲಿ ಸಾಮಾನ್ಯವಾಗಿ ಉಳಿದುಕೊಳ್ಳುವ ವ್ಯವಸ್ಥೆಯಿರುವುದಿಲ್ಲ. ಹತ್ತಿರದ ತಾಲೂಕು ಪಟ್ಟಣದ ಸರ್ಕೀಟ್ ಹೌಸೇ ಹೊರಗಿನವರಿಗೆ ಸಿಗಬಹುದಾದ ತಂಗುದಾಣ. ಬಾಡಿಗೆಗೂ ಮನೆಗಳು ಸಿಗುವುದು ದುರ್ಲಭ. ಒಂದು ಗ್ರಾಮದಲ್ಲಿ ಸಾಧಾರಣ ನಮಗೆ ಟಪಾಲಾಪೀಸು, ಹಾಲಿನ ಸಂಘ, ಪ್ರಾಥಮಿಕ ಶಾಲೆ, ಪಂಚಾಯ್ತಿ ಮತ್ತು ಗುಡಿ ಕಾಣಸಿಗಬಹುದು. ಈ ಎಲ್ಲವನ್ನೂ ಸ್ಥಳೀಯರೇ, ಅಥವಾ ಆಸುಪಾಸಿನ ಊರಿನವರೇ ನಡೆಸುತ್ತಾರೆ. ಹೀಗೆಯೇ ಹಲವು ಗ್ರಾಮಗಳಿಗೊಂದರಂತೆ ನಮಗೆ ಪ್ರಾಥಮಿಕ ವ್ಯವಸಾಯ ಪತ್ತಿನ ಸೇವಾ ಸಹಕಾರ ಸಂಘಗಳೂ ಕಾಣಿಸುತ್ತಿದ್ದುವು. ಈ ಸಂಘಗಳ ನಿರ್ವಹಣೆಯನ್ನು ಸ್ಥಳೀಯರು ನಡೆಸುತ್ತಿದ್ದರು, ಗ್ರಾಮದ ಯುವಕನೊಬ್ಬ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ, ಸಹಕಾರ ಸಂಘದ ವ್ಯಾಪಾರಕ್ಕನುಸಾರವಾಗಿ ಒಂದಿಬ್ಬರು ಹುಡುಗರಿಗೂ ಅಲ್ಲಿ ಕೆಲಸ ಸಿಗುತ್ತಿತ್ತು. ಈ ಸಂಘ ಗ್ರಾಮದ ರೈತರನ್ನು ಒಂದೆಡೆಗೆ ಸೇರಿಸುವ ಕೆಲಸ ಮಾಡುತ್ತಿತ್ತು. ಒಂದೆಡೆಗೆ ಸೇರಲು – ಅಥವಾ ಸಂಘಕ್ಕೆ ರೈತರು ಬರಲು ಮುಖ್ಯವಾದ ಕಾರಣವೆಂದರೆ ಆ ಸಂಘ ರೈತರ ಕೃಷಿಗೆ ಸಾಲವನ್ನು ನೀಡುತ್ತಿತ್ತು. ಅವರ ಹಣ ಠೇವಣಿಯಾಗಿಟ್ಟರೆ ಸ್ವೀಕರಿಸುತ್ತಿತ್ತು. ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡುತ್ತಿತ್ತು. ಹೀಗೆ ಗ್ರಾಮಸ್ಥರಿಗೆ ರಾಜಕೀಯ ಚರ್ಚಿಸಲು ಪಂಚಾಯ್ತಿ ಕಟ್ಟೆಯಿಂದ್ದಂತೆ, ಕೃಷಿಯನ್ನೂ ಅದರ ಅರ್ಥಿಕತೆಯನ್ನು ಹಂಚಿಕೊಳ್ಳಲು ಪತ್ತಿನ ಸಹಕಾರ ಸಂಘಗಳಿದ್ದುವು.

ಸಹಕಾರ ಸಂಘಗಳಿಗೆ ತಮ್ಮದೇ ಕಟ್ಟಡವೂ, ವ್ಯಾಪಾರದ ವಸ್ತುಗಳನ್ನು ದಾಸ್ತಾನು ಮಾಡಲು ಒಂದಿಷ್ಟು ಸ್ಥಳವೂ ಒಂದು ಮಳಿಗೆಯೂ ಇರುತ್ತಿತ್ತು. ಕೃಷಿಗೆ ಮೂಲಾಧಾರವಾಗಿ ಸುಮಾರು 80,000ಕ್ಕೂ ಪತ್ತಿನ ಸಹಕಾರ ಸಂಘಗಳು ದೇಶದಲ್ಲಿದ್ದುವು. ಕೆಲವು ಚೆನ್ನಾಗಿ ಕೆಲಸ ಮಾಡುತ್ತಿದ್ದುವು, ಕೆಲವು ಅಷ್ಟಕ್ಕಷ್ಟೇ ಮತ್ತು ಕೆಲವು ಭ್ರಷ್ಟಾಚಾರದ ರಾಡಿಯಲ್ಲಿ ಮುಳುಗಿದ್ದುವು. ಆದರೆ ಅವೆಲ್ಲವು ಜನರ-ಗ್ರಾಮಸ್ಥರ ಸಮಸ್ಯೆಯಾಗಿತ್ತೇ ವಿನಃ ಸರಕಾರದ ಸಮಸ್ಯೆಯಾಗಿರಲಿಲ್ಲ.

ಪತ್ತಿನ ಸಹಕಾರ ಸಂಘ ನಡೆಯಬೇಕಿದ್ದರೆ ಅವುಗಳಿಗೆ ಸದಸ್ಯರ ಮೂಲಧನದ ಅವಶ್ಯಕತೆಯಿತ್ತು. ನಿಯಮಾನುಸಾರ ನೂರು ರೂಪಾಯಿನ ಬಂಡವಾಳವನ್ನು ಹೂಡಿದರೆ, ಸಾವಿರ ರೂಪಾಯಿನ ಸಾಲವನ್ನು ಈ ಸಹಕಾರ ಸಂಘ ನೀಡಬೇಕಿತ್ತು. ಹಾಗಾದರೆ ಮಿಕ್ಕ 900 ರೂಪಾಯಿಗಳನ್ನು ಸಹಕಾರ ಸಂಘಗಳು ಎಲ್ಲಿಂದ ತರುತ್ತಿದ್ದುವು? ಈ ಪ್ರಶ್ನೆಗೆ ಎರಡು ಉತ್ತರಗಳಿವೆ. ಒಂದು: ಚೆನ್ನಾಗಿ ನಡೆಯುತ್ತಿದ್ದ ಸಹಕಾರ ಸಂಘಗಳಲ್ಲಿ ಸದಸ್ಯರು ಬಂಡವಾಳವನ್ನಲ್ಲದೇ ತಮ್ಮ ಉಳಿತಾಯವನ್ನೂ ಠೇವಣಿಗಳ ರೂಪದಲ್ಲಿ ಕಾಯ್ದಿರಿಸುತ್ತಿದ್ದರು. ಸದಸ್ಯರಾದವರೆಲ್ಲರೂ ಅಲ್ಲಿ ಠೇವಣಿಗಳನ್ನು ಯಾವ ನಿಬಂಧನೆಯೂ ಇಲ್ಲದೇ ಇಡಬಹುದಾಗಿತ್ತು. ಪರಸ್ಪರತೆಯ ಸೂತ್ರದ ಆಧಾರದ ಮೇಲೆ ನಡೆಯುತ್ತಿದ್ದ ಈ ಸಂಸ್ಥೆಯು ಸ್ಥಳೀಯವಾಗಿದ್ದದ್ದರಿಂದ ಯಾವುದೇ ರಿಜರ್ವ್ ಬ್ಯಾಂಕಿನ ಪರವಾನಗಿ ಬೇಕಿರಲಿಲ್ಲ. ಸದಸ್ಯರಲ್ಲದವರ ಠೇವಣಿಗಳನ್ನು ಈ ಸಹಕಾರ ಸಂಘಗಳು ಸ್ವೀಕರಿಸುವುದು ನಿಷಿದ್ಧವಾಗಿತ್ತು ಅಷ್ಟೇ. ಎರಡು: ಠೇವಣಿಗಳನ್ನು ಸಂಗ್ರಹಿಸಲಾಗದ ಸಂಘಗಳು, ಅಥವಾ ಠೇವಣಿಗಳು ಸಾಲದ ಸಂಘಗಳು ಇನ್ನಷ್ಟು ಹಣ ಬೇಕಿದ್ದರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ ಸಾಲವನ್ನು ಪಡೆಯುತ್ತಿದ್ದುವು. ಪ್ರಾಥಮಿಕ ಸಹಕಾರ ಸಂಘಕ್ಕೂ - ಜಿಲ್ಲಾ ಕೇಂದ್ರ ಬ್ಯಾಂಕಿಗಿದ್ದ ಸಂಬಂಧ ಸದಸ್ಯರಿಗೂ ಸಂಘಕ್ಕೂ ಇದ್ದ ಸಂಬಂಧದಂತೆಯೇ ಇತ್ತು. ಹತ್ತು ರೂಪಾಯಿನ ಬಂಡವಾಳ, ಅದರ ಮೇಲೆ ನೂರು ರೂಪಾಯಿನ ಸಾಲ. ಜಿಲ್ಲಾ ಕೇಂದ್ರ ಬ್ಯಾಂಕು, ಬ್ಯಾಂಕಾದದ್ದರಿಂದ ಸದಸ್ಯರಲ್ಲದ ಜನತೆಯಿಂದ, ಪರಸ್ಪರತೆಯ ಸೂತ್ರವನ್ನು ಅನುಸರಿಸದೆಯೇ ಠೇವಣಿಗಳನ್ನು ಸಂಗ್ರಹಿಸಬಹುದಿತ್ತು. ಅಕಸ್ಮಾತ್ ಅದಕ್ಕೂ ಠೇವಣಿಗಳು ಸಾಕಾಗದಿದ್ದರೆ ರಾಜ್ಯ ಮಟ್ಟದ ಅಪೆಕ್ಸ್ ಬ್ಯಾಂಕಿನಂದ ಇದೇ ಪದ್ಧತಿ-ನಿಯಮಾನುಸಾರ ಆರ್ಥಿಕ ಸಂಪನ್ಮೂಲಗಳನ್ನು ಪಡೆಯಬಹುದಿತ್ತು. ಈ ಎಲ್ಲ ಸಂಸ್ಥೆಗಳ ಶಿಖರ ಮಟ್ಟದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕು (ನಾಬಾರ್ಡ್) ಕುಳಿತಿತ್ತು. ಎಲ್ಲೂ ಸಲ್ಲದಾಗ ಸರಕಾರದಿಂದ, ಮತ್ತು ಜನತೆಯಿಂದ ದುಡ್ಡನ್ನು ಸಂಗ್ರಹಿಸುವ ಈ ಸಂಸ್ಥೆ ಸಹಕಾರ ಕ್ಷೇತ್ರಕ್ಕೆ ಹಣವನ್ನು ಪೂರೈಸುತ್ತಿತ್ತು.ಈ ವ್ಯಾಪಾರ ಸರಳವಾಗಿ ನಡೆಯಬೇಕೆಂದರೆ ಮೂರೂ ಸ್ಥರಗಳ ಸಂಸ್ಥೆಗಳು ಲಾಭದಾಯಕವಾಗಿ, ತಮ್ಮ ಆಡಳಿತ ಖರ್ಚುಗಳಿಗಾಗುವಷ್ಟು ಆದಾಯವನ್ನು ಆರ್ಜಿಸಿ ಮುಂದುವರೆಯಬೇಕಿತ್ತು. ಅಂದರೆ ಅಪೆಕ್ಸ್ ಬ್ಯಾಂಕು ಶೇಕಡಾ 6ರ ಬಡ್ಡಿಯಲ್ಲಿ ಹಣವನ್ನು ಸಂಗ್ರಹಿಸಿದರೆ ಸುಮಾರು ಶೇಕಡಾ 8ರ ಬಡ್ಡಿದರದಲ್ಲಿ ಜಿಲ್ಲಾ ಬ್ಯಾಂಕುಗಳಿಗೂ, ಅಲ್ಲಿಂದ ಶೇಕಡಾ 10ರ ಬಡ್ಡಿಯಲ್ಲಿ ಪ್ರಾಥಮಿಕ ಸಂಘಗಳಿಗೂ ಅಲ್ಲಿಂದ ಶೇಕಡಾ 12ರ ಬಡ್ಡಿದರದಲ್ಲಿ ರೈತರಿಗೂ ಸಾಲವನ್ನು ನೀಡಿ, ಯಾರೂ ಎಂದೂ ಬಾಕಿ ಉಳಿಸಿಕೊಳ್ಳದ ಪರಿಸ್ಥಿತಿಯಲ್ಲಿ ಈ ವ್ಯಾಪಾರ ನಡೆಯಬಹುದಿತ್ತು. ಅಂದರೆ ಇದೇ ವಾದಸರಣಿಯ ಪ್ರಕಾರ ಗ್ರಾಮದ ಸಹಕಾರ ಸಂಘಗಳು ಶೇಕಡಾ 10ರಷ್ಟು ಬಡ್ಡಿಯನ್ನು ಠೇವಣಿಗಳ ಮೇಲೆ ನೀಡಿದರೂ ಒಂದು ರೀತಿಯಿಂದ ವ್ಯಾಪಾರವನ್ನು ಮುಂದರೆಸಬಹುದಿತ್ತು. ಆದರೆ ಸರಕಾರಗಳಿಗೆ ಬಡರೈತರನ್ನು ಉದ್ಧಾರ ಮಾಡುವ ತೆವಲಿತ್ತಾದ್ದರಿಂದ ಬಡ್ಡಿಯೇ ಇಲ್ಲದೇ ಸಾಲವನ್ನೂ, ಇರುವ ಸಾಲವನ್ನು ಕಾಲಕಾಲಕ್ಕೆ ಮನ್ನಾ ಮಾಡುವ ಹುನ್ನಾರವನ್ನು ಹೂಡಿ – ರೈತರಿಗೂ ಸಹಕಾರ ಸಂಘಗಳಿಗೂ ಇದ್ದ ಸಹಜ ವ್ಯಾಪಾರಿ ಸಂಬಂಧವನ್ನು ಕಲಕಿಹಾಕಿಬಿಟ್ಟಿತು. ಈ ಲೆಕ್ಕಾಚಾರದ ನಡುವೆ ಅಪೆಕ್ಸ್ ಬ್ಯಾಂಕಿಗೆ ಶೇಕಡಾ 6ರ ಬಡ್ಡಿದರದಲ್ಲಿ ಹಣ ಸಿಗುವುದೂ ಇಲ್ಲ, ಶೇಕಡಾ 12ರ ದರದಲ್ಲಿ ರೈತರಿಗೆ ಸಾಲಕೊಡುವುದೂ ಸಾಧ್ಯವಿಲ್ಲ – ಯಾಕೆಂದರೆ ಕೃಷಿಸಾಲಕ್ಕೆ ಶೇಕಡಾ 9ರ ಬಡ್ಡಿದರವನ್ನು ಸರಕಾರವೇ ಸೂಚಿಸಿದೆ.

ಒಂದು ಲಕ್ಷರೂಪಾಯಿಯ ಸಾಲವನ್ನು ರೈತ ಪಡೆದರೆ, ಬೆಳೆ ನಾಟಿ ಅದು ಮಾರುಕಟ್ಟೆಗೆ ಸೇರುವ ಆರರಿಂದ ಎಂಟು ತಿಂಗಳ ಸಮಯದಲ್ಲಿ ವ್ಯಾಪಾರೀ ಸೂತ್ರದನುಸಾರ ಅದಕ್ಕಾಗುವ ಬಡ್ಡಿ ಸುಮಾರು 8,000 ರೂಪಾಯಿಗಳು. ಸರಕಾರ ನಿಗದಿ ಮಾಡಿದ ಶೇಕಡಾ 9ರ ದರವನ್ನು ಇದರ ಮೇಲೆ ಹೇರಿದರೆ ರೈತರಿಗಾಗುವ ಉಳಿತಾಯ ಕೇವಲ 2,000 ರೂಪಾಯಿಗಳು. ಮತ್ತು ರಾಜ್ಯ ಸರಕಾರದ ಕಡಿಮೆ ಬಡ್ಡಿ, ಬಡ್ಡಿರಹಿತ ಸಾಲ, ಎಲ್ಲವನ್ನೂ ಹೇರಿದರೆ ಉಳಿತಾಯ ಇನ್ನೂ 6,000 ರೂಪಾಯಿಗಳನ್ನು ದಾಟುವುದಿಲ್ಲ. ಇದಕ್ಕೆ ಮಾಡಬೇಕಾದ ಲೆಕ್ಕ ಪತ್ರದ ಸರ್ಕಸ್ಸೂ, ಕಾಯಬೇಕಾದ ಕಾಲ, ಎಲ್ಲವನ್ನೂ ಪರಿಗಣಿಸಿದರೆ ಅಂಗೈಯಲ್ಲಿ ತೀರ್ಥ ಹಾಕಲು ಅಣೆಕಟ್ಟನ್ನು ಕಟ್ಟಿದಂತೆ ಕಾಣುತ್ತದೆ. ಸಹಕಾರ ಸಂಘಗಳು ನಷ್ಟದ ಕೂಪದಲ್ಲಿಯೇ ಉಳಿಯಲು ಇದಕ್ಕಿಂತ ಸರಳ ಉಪಾಯ ಸಿಗುವುದಿಲ್ಲ! ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿ, ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವಂತೆ ಮಾಡಿದರೆ ರೈತರೇ ತಮಗೆ ಬೇಕಾದ ಸಾಲವನ್ನು ಬೇಕಾದ ಕಡೆಯಿಂದ ಪಡೆಯುತ್ತಾರೆ. ಇದಕ್ಕೆ ಉದಾಹರಣೆಯಾಗಿ ಹೈನುಗಾರಿಕೆಯ ಕ್ಷೇತ್ರ ನಮ್ಮ ಮುಂದಿದೆ.

ದೊಡ್ಡ ಉದ್ಯೋಗದಲ್ಲೂ ಇಂಥಹ ಉದಾಹರಣೆಗಳಿವೆ. ರಿಲೈಯನ್ಸ್ ನಂತಹ ದೊಡ್ಡ ಸಂಸ್ಥೆ ಮಾರಾಟ ಮಾಡುವ ಗ್ಯಾಸ್ ದರವನ್ನು ಕಂಪನಿಗೆ ಗಿಟ್ಟುವ ರೀತಿಯಲ್ಲಿ ಸರಕಾರ ನಿರ್ಧರಿಸಿದೆ. ವಿದ್ಯುತ್ತು ಸರಬರಾಜು ಮಾಡುವ ಖಾಸಗೀ ಸಂಸ್ಥೆಗಳ ಜೊತೆ ಪವರ್ ಪರ್ಚೇಸ್ ಎಗ್ರೀಮೆಂಟುಗಳಿರುತ್ತವೆ. ಆದರೆ ಕೆಲವು ಬೆಳೆಗಳನ್ನು ಬಿಟ್ಟರೆ ಕೃಷಿಯಲ್ಲಿ ಮಾರುಕಟ್ಟೆಯ ದರಗಳು ಎಷ್ಟು ಗಿಟ್ಟಬಹುದು ಎಂದು ಯೋಚಿಸುವುದೂ ಕಷ್ಟವಾಗಿರುವ ರೈತರ ಸಹಕಾರ ಸಂಘಗಳಿಗೆ ಚಿಲ್ಲರೆ ಹಣದ ತುಣುಕುಗಳನ್ನು ಉಣಬಡಿಸಿ ಸರಕಾರಗಳು ತಮ್ಮ ಕೈತೊಳೆದುಕೊಳ್ಳುತ್ತಿವೆ. ಸಹಜವಾಗಿಯೆ ನಷ್ಟಕ್ಕೆ ಬಿದ್ದಿರುವ ಮೂರು ಸ್ಥರದ ಸಹಕಾರ ಸಂಘಗಳ ಪಾತ್ರವನ್ನು ಪುನರ್ ನಿರ್ದೇಶಿಸಲು ನಾಬಾರ್ಡ್ ಅಧ್ಯಕ್ಷರಾದ ಪ್ರಕಾಶ್ ಬಕ್ಷಿ ನೇತೃತ್ವದಲ್ಲಿ ನಿಯಮಿಸಿದ ಸಮಿತಿ ಒಂದು ವರದಿಯನ್ನೂ, ಆ ವರದಿಯ ಆಧಾರದ ಮೇಲೆ ಒಂದು ಸುತ್ತೋಲೆಯನ್ನೂ ಹೊರಡಿಸಿದೆ.

ಬಕ್ಷಿ ಸಮಿತಿಯ ವರದಿ ಮತ್ತು ಸುತ್ತೋಲೆಯ ಸಾರಾಂಶವಿಷ್ಟೇ. ಮೂರು ಸ್ಥರಗಳ ಸಹಕಾರಿ ವ್ಯವಸ್ಥೆಯನ್ನು ಮರುರೂಪಿಸಬೇಕು. ಅದಕ್ಕೆ ಸಿದ್ಧ ಉಪಾಯವೆಂದರೆ ಪ್ರಾಥಮಿಕ ಸಂಘಗಳನ್ನು ಜಿಲ್ಲಾ ಬ್ಯಾಂಕುಗಳ ಏಜೆಂಟರನ್ನಾಗಿ ನಿಯಮಿಸುವುದು. ಗ್ರಾಮಸ್ಥರ ಅಷ್ಟೂ ಠೇವಣಿ, ಸಾಲ, ಬಂಡವಾಳ ಎಲ್ಲವನ್ನೂ ಜಿಲ್ಲಾ ಬ್ಯಾಂಕುಗಳಿಗೆ ವರ್ಗಾಯಿಸಿ ಸ್ಥಳೀಯತೆಯನ್ನು ಕಳೆದುಕೊಂಡು ಜಿಲ್ಲಾ ಬ್ಯಾಂಕುಗಳು ನೀಡಿದಷ್ಟು ಸೇವೆಯನ್ನು ಸ್ವೀಕರಿಸಿ ತೆಪ್ಪಗಿರುವುದು. ಆ ಸುತ್ತೋಲೆ ನಿರ್ದೇಶನರೂಪದ್ದಲ್ಲವೆಂದೂ, ಕೇವಲ ಮಾರ್ಗದರ್ಶಿರೂಪದ್ದೆಂದೂ ನಾಬಾರ್ಡ್ ಸ್ಪಷ್ಟೀಕರಣವನ್ನು ನೀಡಿದೆಯಾದರೂ ಅದರ ಧ್ವನಿಯಂತೂ ಸಮಂಜಸವಾಗಿಲ್ಲ. ಪ್ರಾಥಮಿಕ ಸಂಘಗಳು ವ್ಯವಸ್ಥೆಯ ಅಡಿಪಾಯ. ಅದನ್ನೇ ಈ ಸುತ್ತೋಲೆ ಅಲುಗಾಡಿಸುತ್ತಿದೆ. ಪರಸ್ಪರತೆ-ಸ್ಥಳೀಯತೆಯಿಂದ ದೂರ, ಕೇಂದ್ರೀಕರ6ಣದತ್ತ ಸಹಕಾರಿ ವ್ಯವಸ್ಥೆಯನ್ನು ಒಯ್ಯುತ್ತಿರುವ ಇದನ್ನು ಸಹಕಾರಿ ವಿರೋಧಿ ಸುತ್ತೋಲೆಯಂದೇ ಪರಿಗಣಿಸಬೇಕು.

ಸಂಘಗಳು ಕೇಂದ್ರ ಬ್ಯಾಂಕಿನ ಏಜೆಂಟರಾಗುವುದು ಕಿರಾಣಿಯಂಡಿಯ ಮಾಲೀಕರು ದೊಡ್ಡ ಸೂಪರ್ ಬಜಾರಿನ ಉದ್ಯೋಗಿಯಾಗಿ ಗಲ್ಲಾದ ಮೇಲೆ ಕೂರಬಹುದು ಎನ್ನುವಷ್ಟೇ ಕುಚೋದ್ಯದ ಮಾತಾಗಿದೆ. ಈ ಲೇಖನದ ಬಹುಭಾಗದಲ್ಲಿ ಸಹಕಾರವನ್ನು ಭೂತಕಾಲದಲ್ಲಿ ಬರೆದಿರುವುದಕ್ಕೆ ಇದೇ ನಿಜವಾಗಬಹುದೇನೋ ಎನ್ನುವ ಅನುಮಾನವೇ ಕಾರಣ. ಸಹಕಾರವು ವರ್ತವಾನವಾಗುವುದಕ್ಕೆ ಸರಕಾರ – ನಾಬಾರ್ಡ್ ಗಳು ಬಿಡುತ್ತಿಲ್ಲ. ನನ್ನ ಅನುಮಾನ ತಪ್ಪಾಗಿ ಸಹಕಾರವು ವರ್ತಮಾನವೇ ಆದಲ್ಲಿ ಒಳ್ಳೆಯದೇ. ಅದು ಹಾಗಾಗಬೇಕಾದರೆ ಸಂಸ್ಥೆಗಳನ್ನು ನಾಶ ಮಾಡುವ ಬಡ್ಡಿ ರಿಯಾಯಿತಿ, ಸಾಲಮನ್ನಾ, ಮತ್ತು ಸರಕಾರದ-ನಾಬಾರ್ಡುಗಳ ಕರುಣೆಯ ವಿರುದ್ಧ ಒಂದು ಆಂದೋಲನವನ್ನೇ ಸಹಕಾರಿ ನಾಯಕರು ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಮದಲ್ಲಿ ಟಪಾಲಾಪೀಸು, ಪಂಚಾಯ್ತಿ ಕಟ್ಟೆಗಳ ಜೊತೆಗೆ ಸಹಕಾರಿ ಸಂಘಗಳ ಸ್ಮಾರಕಗಳಷ್ಟೇ ನಾವು ಕಾಣಬಹುದು.


ಪ್ರಕಾಶ್ ಬಕ್ಷಿ ನಾಬಾರ್ಡ್ ಅಧ್ಯಕ್ಷರಾಗುವುದಕ್ಕೆ ಮುನ್ನ ಪ್ರಧಾನ ಮಹಾಪ್ರಬಂಧಕರಾಗಿದ್ದಾಗ ತಮ್ಮ ಆಡಳಿತ ವಿಭಾಗದ ಕಾಗದ ಪತ್ರಗಳ ಮೇಲೆ ಈ ಮಾತನ್ನು ಛಪಾಯಿಸಿದ್ದರು "ಸಹಕಾರವನ್ನು ಜನರು ಕಟ್ಟುತ್ತಾರೆ. ಸಹಕಾರವು ಒಂದು ತುಂಡು ಕಾಗದ, ಅದರ ಮೇಲಿನ ಅಕ್ಷರಗಳಿಂದ ಉದ್ಭವವಾಗುವುದಿಲ್ಲ. ಸಹಕಾರವನ್ನು ಜನರಿಗೇ ಬಿಟ್ಟುಬಿಡೋಣ." ಹೀಗೆ ಬರೆದ ಬಕ್ಷಿಯವರೇ ದಯವಿಟ್ಟು ನೀವು ಬರೆದದ್ದನ್ನ ಮೊದಲಿಗೆ ಓದಿ. ಅದರ ಆಧಾರದ ಮೇಲೆಯೇ ವರದಿಗಳನ್ನೂ ಸುತ್ತೋಲೆಗಳನ್ನೂ ತಯಾರಿಸಿ. ಪ್ಲೀಸ್.

ಮಂಗಳವಾರ, 13 ಆಗಸ್ಟ್ 2013
No comments:

Post a Comment