Sunday, July 15, 2012

ವ್ಯಾಪಾರಿ ಜಗತ್ತಿನಲ್ಲಿ ಮಾರಿಕೊಂಡವರು.ಮಾರುಕಟ್ಟೆಯ ನೈತಿಕ ಮಿತಿಗಳೇನು? ಮೈಕಲ್ ಸ್ಯಾಂಡಲ್ ಅವರ ಇತ್ತೀಚಿನ ಪುಸ್ತಕ What Money Can’t Buy: The Moral Limits of Markets ಈ ವಿಷಯವನ್ನು ದೀರ್ಘವಾಗಿ ಚರ್ಚಿಸುತ್ತದೆ. ನಾವು ನಮ್ಮನ್ನು ಎಷ್ಟರ ಮಟ್ಟಿಗೆ ಮಾರುಕಟ್ಟೆಯ ನಿಯಮಗಳಿಗೆ ಒಪ್ಪಿಸಿಕೊಳ್ಳಬೇಕು, ಯಾವುದನ್ನು ಮಾರುಕಟ್ಟೆಯ ನಿಯಮಗಳಿಗೆ ಒದಗಿಸುವು ಸೂಕ್ತ ಎನ್ನುವ ನೈತಿಕ ಪ್ರಶ್ನೆಗಳನ್ನು ಅವರು ಚರ್ಚಿಸುತ್ತಾರೆ. ವ್ಯಾಪರದ ಜಗತ್ತಿನಲ್ಲಿ ಬದುಕುತ್ತ, ನಮಗೆ ತಿಳಿಯದೆಯೇ ಹಲವಾರು ವಸ್ತುಗಳನ್ನು ನಾವು ವ್ಯಾಪಾರಕ್ಕೆ ಒದಗಿಸಿಬಿಡುತ್ತೇವೆ.

ಎರಡು ವರ್ಷಗಳ ಹಿಂದೆ, ನನಗೆ, ನನ್ನ ಪತ್ನಿಗೂ 24 ತಾಸುಗಳೊಳಗಾಗಿ ಮೂರುಬಾರಿ ತಿರುಪತಿ ತಿಮ್ಮಪ್ಪನ ದರ್ಶನವಾಗಿತ್ತು. ದೇವರನ್ನು ನಂಬದ, ಪೂಜಿಸದ ನಮ್ಮಿಬ್ಬರಿಗೂ ಯಾವುದೋ ಪುಣ್ಯಕ್ಕಲ್ಲದೇ ಆಗ ಬ್ಯಾಂಕೊಂದರ ನಿರ್ದೇಶಕ ಮಂಡಲಿಯಲ್ಲಿದ್ದ ನನ್ನ ಸ್ಥಾನಮಾನದ  ಫಲವಾಗಿ ಈ ಭಾಗ್ಯ ನಸೀಬಾಗಿತ್ತು. ತಿರುಪತಿಯಲ್ಲಿ ಬ್ಯಾಂಕಿನ ಸಭೆಯನ್ನು ನಿರ್ದೇಶಕ ಮಂಡಲಿಯ ಒಟ್ಟಾರೆ ಭಕ್ತಿಯ ಪ್ರಮೇಯವಾಗಿ ಇಡಲಾಗಿತ್ತು. ಅಲ್ಲಿಗೆ ಹೋಗಿ ಅಲ್ಲಿನ ಪದ್ಧತಿಯನ್ನು ಗಮನಿಸಿದಾಗ ದೇವರ ಮುಂದೂ ಕಾಂಚಾಣದ-ಅಧಿಕಾರದ ನೃತ್ಯ ನಡೆಯಬಹುದು ಎನ್ನುವ ವಿಷಯ ನನ್ನ ಅರಿವಿಗೆ ಬಂತು. ಸಾಮಾನ್ಯರಿಗೊಂದು ಸಾಲು. ಸ್ಪೆಷಲ್ ದರ್ಶನದ ತಿಕೇಟು ಪಡೆದವರಿಗೆ ಒಂದು ಬಿಂದುವಿನಲ್ಲಿ ಈ ಸಾಮಾನ್ಯರ ಸಾಲನ್ನು ಭೇದಿಸಿ ಹೋಗುವ ದರ್ಶನಭಾಗ್ಯ. ಹಾಗೂ ಈ ಎರಡೂ ಸಾಲುಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ವಿ.ಐ.ಪಿಗಳಿಗೆ ನೀಡುವ ಬ್ರೇಕ್ ದರ್ಶನ. ಬ್ರೇಕ್ ದರ್ಶನ ಪ್ರಾಪ್ತಿಯಾದವರಿಗೆ ಡೈರೆಕ್ಟಾಗಿ ದೇವರ ಪಾದಾರವಿಂದಗಳ ಬಳಿಗೆ ರಾಜಮಾರ್ಗವಿದ್ದದ್ದಲ್ಲದೇ ಎದುರಿಗೆ ಒಂದೆರಡು ಕ್ಷಣ ನಿಲ್ಲಲೂ ಪರವಾನಗಿಯಿತ್ತು.....

ನಮಗೆ ಸಿಕ್ಕ ಪ್ರಾಮುಖ್ಯತೆಯ ಸೌಭಾಗ್ಯಕ್ಕೆ ಸಂತೋಷವಾಯಿತಾದರೂ ದೇವರ ದರ್ಶನಕ್ಕೂ ಭಕ್ತಾದಿಗಳ ಭಿನ್ನ ಸಾಲುಗಳ ವಿಪರ್ಯಾಸ ನಮ್ಮನ್ನು ತಟ್ಟದಿರಲಿಲ್ಲ. ಇದರಲ್ಲಿ ಯಾವುದೇ ನಿಯಮದ ಉಲ್ಲಂಘನೆಯಿರಲಿಲ್ಲ. ದಿನದ ಕೆಲವು ಘಳಿಗೆಗಳನ್ನು ಹೀಗೆ ಆರಕ್ಷಿಸಿ ಇಟ್ಟಿರುವ ನಿಯಮವನ್ನು ದೇವಸ್ಥಾನದವರು ರೂಪಿಸಿದ್ದಾರೆ. ಆದರೆ ಹೀಗೆ ಕೆಲವು ಘಳಿಗೆಗಳನ್ನು ಮಾರಾಟ ಮಾಡುವ, ಅಥವಾ ಹರಾಜು ಹಾಕುವ ನೈತಿಕತೆಯನ್ನು ನಾವು ಒಪ್ಪಬೇಕೇ, ಪ್ರಶ್ನಿಸಬೇಕೇ ಎನ್ನುವುದೇ ಮಥನದ ವಿಷಯ. ತಿಂಗಳಿಗೆ ಮೂವತ್ತು ರೂಪಾಯಿಯ ಚಂದಾ ನೀಡಿದರೆ ಮುಂಬಯಿಯ ಸಿದ್ಧಿವಿನಾಯಕನ ಲೈವ್ ದರ್ಶನವನ್ನು ಡಿಷ್ ಮೂಲಕ ಮನೆಯ ಬೆಚ್ಚನೆಯ ವಾತಾವರಣದಲ್ಲಿ ಪರದೆಯ ಮೇಲೆ ನೋಡಬಹುದು. ಹೀಗೆ ದೇವರೇ ವ್ಯಾಪಾರದ ವಸ್ತುವಾಗಬಹುದೇ? ಪೂಜ್ಯ ಅನ್ನುವ ವ್ಯಾಪಾರಾತೀತವಾದ ವಿಷಯಗಳು ಈ ಜಗತ್ತಿನಲ್ಲಿ ಇವೆಯೇ? ಅವನ್ನು ವ್ಯಾಪಾರಾತೀತವಾಗಿಯೇ ಕಾಪಾಡುವುದು ಹೇಗೆ?

ಅನೇಕ ವರ್ಷಗಳ ಹಿಂದೆಯೇ ಅಮುಲ್ ಸಂಸ್ಥೆಗೆ ಮಾಡುವ ಸಹಕಾರ ಮಂಡಲಿಗಳಲ್ಲಿ ಹಾಲು ಸರಬರಾಜು ಮಾಡುವ ಹೈನುಗಾರರಿಗೆ ಪುರುಷ-ಮಹಿಳೆಯರನ್ನದೇ ಒಂದೇ ಸಾಲು. ಆ ಸಂಸ್ಥೆಯ ಮುಖ್ಯಸ್ಥರಾಗಿದ್ದ ವಿ.ಕುರಿಯನ್ ಇದನ್ನು ಜಾತಿಪದ್ಧತಿಗೇ ಕಪಾಳಮೋಕ್ಷದ ಪ್ರತೀಕ ಎಂದು ಒಂದೆಡೆ ವಿವರಿಸಿದ್ದರು."ಹಾಲು ಸುರಿಯಲು ಮೊದಲು ಬಂದ ಹರಿಜನ, ಅವನ ನಂತರ ತಡವಾಗಿ ಬಂದ ಬ್ರಾಹ್ಮಣ. ಸಾಲಿನಲ್ಲಿ ಹರಿಜನ ರೈತನ ಹಿಂದೆ ತಡವಾಗಿ ಬಂದ ಏಕಕಾರಣಕ್ಕೆ ನಿಂತ ಬ್ರಾಹ್ಮಣ. ಈ ಏರ್ಪಾಟನ್ನು ಅನುಭವಿಸಿದ ಹರಿಜನನ ಆತ್ಮಸಮ್ಮಾನಕ್ಕೂ, ಬ್ರಾಹ್ಮಣನ ಅಹಂಕಾರಕ್ಕೂ ಆಗಬಹುದಾದ ವ್ಯತ್ಯಾಸವನ್ನು ಊಹಿಸಿಕೊಂಡರೆ ಅಮುಲ್ ಪದ್ಧತಿಯ ಹೈನುಗಾರಿಕೆಯ ಮಹತ್ವ ನಿಮಗೆ ತಿಳಿಯುತ್ತದೆ." ಎಂದು ಕುರಿಯನ್ ಹೇಳಿದ್ದರು. ದೊಡ್ಡವರೇ ಇರಲಿ, ಸಣ್ಣವರೇ ಇರಲಿ, ಶ್ರೀಮಂತರಿರಲಿ, ಬಡವರಿರಲಿ, ಸಾಲಿಗೆ ನಿಂತಕೂಡಲೇ ಸಮಾನತೆ ಪ್ರಾಪ್ತವಾಗಿಬಿಡುತ್ತದೆ ಅನ್ನುವ ಮಾತನ್ನು ಮಾರುಕಟ್ಟೆಯ ನಿಯಮವನ್ನು ನಂಬಿ ನಡೆದ ಕುರಿಯನ್ ಪ್ರತಿಪಾದಿಸಿದ್ದರು. ಈ ಸಾಲಿನ ಶಿಸ್ತು ದೇವರ ಸಮ್ಮುಖದಲ್ಲಿ ವ್ಯಾಪಾರಕ್ಕೆ ಒಡ್ಡುವುದರ ಔಚಿತ್ಯದ ಬಗ್ಗೆ ನಾವು ಯೋಚಿಸಬೇಕು.

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ವರ್ಷಕ್ಕೆ ಒಂದೆರಡುಬಾರಿ ನಡೆಯುತ್ತಿದ್ದ ಮಹತ್ವದ ಸಂಗತಿಯೆಂದರೆ ವರನಟ ರಾಜಕುಮಾರ್ ನಟಿಸಿದ ಚಿತ್ರದ ಬಿಡುಗಡೆ. ಆ ಚಿತ್ರ ನೋಡುವುದೇ ಒಂದು ಅನುಭವವಾದರೆ, ಅದಕ್ಕೆ ಟಿಕೇಟು ಪಡೆಯುವುದೂ ಅಷ್ಟೇ ಮಹತ್ವದ ಅನುಭವವಾಗಿತ್ತು. ಚಿತ್ರ ಬಿಡುಗಡೆಯಾದ ದಿನದಂದೇ, ಅಥವಾ ಮೊದಲ ವಾರದಲ್ಲೇ ಘಂಟೆಗಟ್ಟಲೆ ಸಾಲಿನಲ್ಲಿ ನಿಂತು ಟಿಕೇಟು ಪಡೆದಾಗಿನ ಪುಳಕ ಸಿನೇಮಾ ಮಂದಿರದ ಒಳಕ್ಕೆ ಹೋದಾಗಿನ ಸಾಫಲ್ಯವನ್ನು ಈಗಿನ ಪರಿಸ್ಥಿತಿಯಲ್ಲಿ ವಿವರಿಸುವುದು ಕಷ್ಟದ ಮಾತೇ. ಇಷ್ಟು ಕಷ್ಟಪಟ್ಟು ಪ್ರಾಪ್ತಿಯಾಗುತ್ತಿದ್ದುದರಿಂದಲೇ ಬಹುಶಃ ನಾವುಗಳು ರಾಜಕುಮಾರ್ ಅವರನ್ನು ದೇವರ ಸ್ಥಾನಕ್ಕೆ ಏರಿಸಿಬಿಟ್ಟಿದ್ದೆವೇನೋ...

ಹಾಗೆ ನೋಡಿದರೆ ಸಾಲಿನಲ್ಲಿ ನಿಲ್ಲದವರೂ, ನಿಂತೂ ಟಿಕೇಟು ಪಡೆಯಲಾಗದವರು ಆ ಸಿನೇಮಾವನ್ನು ನೋಡುತ್ತಿರಲಿಲ್ಲ ಎಂದೇನೂ ಹೇಳಲಾಗುವುದಿಲ್ಲ. ಕೌಂಟರಿನಲ್ಲಿ ಟಿಕೇಟು ಸಿಗದೇ, ಧೈರ್ಯವೂ ಇದ್ದ ಕೆಲವರು ನಿಗೂಢವಾಗಿ ಹೆಚ್ಚಿನ ಹಣ ಕೊಟ್ಟು ಬ್ಲಾಕಿನಲ್ಲಿ ಟಿಕೇಟು ಪಡೆದು ಬರುವುದಿತ್ತು. ಮಾರುಕಟ್ಟೆಯ ಬೇಡಿಕೆ-ಸರಬರಾಜಿನ ನಿಯಮಾನುಸಾರ ಥಿಯೆಟರಿಗೆ ಪ್ರಾಪ್ತವಾಗಬೇಕಿದ್ದ ಹಣ - ಮಧ್ಯವರ್ತಿಯೊಬ್ಬನಿಗೆ ಪ್ರಾಪ್ತವಾಗಿ ಆತನಿಗೂ ಉದ್ಯೋಗಾವಕಾಶ ನೀಡಿ ಸಂಪತ್ತನ್ನು ಇನ್ನಷ್ಟು ಸಮಾನವಾಗಿ ಹಂಚುವ ಅರ್ಥಪದ್ಧತಿಯಲ್ಲಿ ನಾವು ಬದುಕುತ್ತಿದ್ದೆವು! ಮಧ್ಯವರ್ತಿಯ ಮಾತು ಹಾಗಿರಲಿ, ಹೀಗೆ ಹೆಚ್ಚು ಹಣ ಕೊಟ್ಟು ಬ್ಲಾಕಿನಲ್ಲಿ ಕೊಂಡ ಅಭಿಮಾನಿ ಸಿನೇಮಾವನ್ನು ಆನಂದಿಸುವಾಗಲೂ ಬ್ಲಾಕಿನಲ್ಲಿ ಟಿಕೇಟು ಕೊಂಡ, ಸಾಲಿನಲ್ಲಿ ನಿಂತು ಟಿಕೇಟನ್ನು ಸಂಪಾದಿಸಲಾಗದ ಪಾಪಭಾವನೆಯನ್ನು ಹೊತ್ತೇ ಅಣ್ಣಾವ್ರ ಆಗಮನವನ್ನು ಬೆಳ್ಳಿತೆರೆಯಮೇಲೆ ನಿರೀಕ್ಷಿಸಬೇಕಿತ್ತು.
ಈಗ ಬಂದಿರುವ ಮಲ್ಟಿಪ್ಲೆಕ್ಸ್ ಸಂಸ್ಕೃತಿಯಲ್ಲಿ ಯಾವ ಪಾಪಭಾವನೆಯೂ ಇಲ್ಲ. ಹೆಚ್ಚಿನ ಹಣ ಕೂಟ್ಟು ಟಿಕೇಟು ಖರೀದಿಸುವುದು ಈಗ ಹಕ್ಕಾಗಿದೆ. ಮೂರೇ ವಾರದಲ್ಲಿ ಒಂದು ಸಿನೇಮಾವನ್ನು "ಹಿಟ್" ಎಂದು ಘೋಷಿಸುವ ಪರಿಸ್ಥಿತಿಯಲ್ಲಿ ಈಗ ನಾವಿದ್ದೇವೆ.

ವ್ಯಾಪಾರ ಜಗತ್ತಿನ ಬೇಡಿಕೆ-ಸರಬರಾಜಿನ ನಿಯಮಗಳು ಬೆಲೆಯನ್ನು ನಿರ್ಧರಿಸುತ್ತವೆ. ಯಾವುದೇ ವಸ್ತುವಿನ ಸರಬರಾಜು ಒಂದು ಮಿತಿಯಲ್ಲಿ ಇರುತ್ತದಾದ್ದರಿಂದ ಅದರ ಬೇಡಿಕೆಯ ನಿಯಮಾನುಸಾರ ಮಾರುಕಟ್ಟೆ ಬೆಲೆ ಕಟ್ಟುತ್ತದೆ. ಈ ನಿಯಮಾನುಸಾರ ಚಿತ್ರ ಬಿಡುಗಡೆಯಾದ ಮೊದಲವಾರದ ಪ್ರದರ್ಶನಕ್ಕೆ ಹೆಚ್ಚು ಬೇಡಿಕೆ, ರಜಾದಿನದಂದೂ ಹೆಚ್ಚು ಬೇಡಿಕೆ, ತಿಮ್ಮಪ್ಪನ ಸುಪ್ರಭಾತ ದರ್ಶನವೂ ಹೀಗೆ ಒಂದು ಮಿತಿಯಲ್ಲಿ, ದಿನಕ್ಕೊಂದುಬಾರಿ ಮಾತ್ರ ಕಾಣುವ ಅನುಭವ. ಮಾರುಕಟ್ಟೆ ನಿಯಮಾನುಸಾರ ಈ ಎಲ್ಲಕ್ಕೂ ಹೆಚ್ಚಿನ ಬೆಲೆ. ವ್ಯಾಪಾರಜಗತ್ತಿನಲ್ಲಿ ದುಡ್ಡೇ ದೊಡ್ಡಪ್ಪ.

ಆದರೆ ವ್ಯಪಾರ ಜಗತ್ತಿನವರೂ ಇಲ್ಲದವರನ್ನು ಒಳಗೊಳ್ಳುವ ಮತಾಡುತ್ತಾರೆ ಎನ್ನುವುದನ್ನು ಗಮನಿಸಿ. ಆ ವಾದಸರಣಿ ಇಂತಿರಬಹುದು: ತಿಮ್ಮಪ್ಪನ ದರ್ಶನದಿಂದ ಬರುವ ಹೆಚ್ಚುವರಿ ರೊಕ್ಕದಿಂದಾಗಿ ಟಿಟಿಡಿಗೆ ಆದಾಯ ಹೆಚ್ಚುತ್ತದೆ. ಶ್ರೀಮಂತರು ಹೆಚ್ಚು ಸುಖದಿಂದ ದರ್ಶನ ಪ್ರಾಪ್ತಿ ಮಾಡುಕೊಂಡು ಆ ಖುಷಿಯಲ್ಲಿ ಹೆಚ್ಚೆಚ್ಚು ದಕ್ಷಿಣೆ ಹಾಕಬಹುದು. ಆ ಆದಾಯವನ್ನೆಲ್ಲಾ ಟಿಟಿಡಿ ಸಮಾಜ ಕಲ್ಯಾಣಕ್ಕಾಗಿ ತಾನೇ ಉಪಯೋಗಿಸುವುದು? ಇಂಥ ಕಾವ್ಯನ್ಯಾಯವಿರುವಾಗ ಶ್ರೀಮಂತರಿಂದ ಹೆಚ್ಚಿನ ಹಣ ಪಡೆದು ಅವರಿಗೆ ಸವಲತ್ತುಗಳನ್ನು ನೀಡುವುದರಲ್ಲಿ ತಪ್ಪೇನು? ಮೇಲಾಗಿ ಸಾಲುನಲ್ಲಿ ಹಚ್ಚು ಸಮಯ ಪೋಲಾಗದಂತೆ ಬಡ ಭಕ್ತರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸಲೂ ಸಾಧ್ಯ – ಸುದರ್ಶನ ಚಕ್ರದ ಟೋಕನ್ನು ಕಂಪ್ಯೂಟರೀಕರಣದ ಲಾಭದಿಂದ ಬಂದದ್ದಲ್ಲವೇ? ಸಾಲಿನಲ್ಲಿ ನಿಂತಿದ್ದಷ್ಟೂ ಕಾಲ ಅಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲು ಪಡೆವ ಭಕ್ತಿರಂಜನೆಯೂ ಶ್ರೀಮಂತರು ನೀಡಿದ ಹೆಚ್ಚುವರಿ ಆದಾಯದಿಂದ ಮಾತ್ರ ನೀಡಲು ಸಾಧ್ಯವಲ್ಲವೇ?

ಹೊಸ ಸಿನೇಮಾ ಎರಡು ವಾರಗಳಲ್ಲಿ ತನ್ನು ದುಡ್ಡನ್ನು ಮಲ್ಟಿಪ್ಲೆಕ್ಸ್ ನೋಡುಗರ ಮೂಲಕ ವಸೂಲು ಮಾಡಿಕೊಂಡರೆ ಅತಿಬೇಗನೇ ಆ ಚಿತ್ರವನ್ನು ಕೇಬಲ್-ಟಿವಿಯ ಮೂಲಕ ಮುಫತ್ತಾಗಿ ಪ್ರಸಾರಮಾಡಬಹುದು, ಅಥವಾ ಸುಲಭಧರದಲ್ಲಿ ಡಿವಿಡಿ/ವಿಸಿಡಿಗಳನ್ನು ಮಾರಾಟ ಮಾಡಬಹುದು. ವ್ಯಾಪಾರಜಗತ್ತಿನ ಮರುವಾದಗಳಿಗೆ ಅಂತ್ಯವೆಲ್ಲಿ?

ದೇವರನ್ನೇ ನಂಬದ ನನಗೆ ತಿಮ್ಮಪ್ಪನ ದರ್ಶನ ಈರೀತಿಯಾಗಿ ಆದ ವಿಪರ್ಯಾಸವನ್ನು ನಾನು ತಿಮ್ಮಪ್ಪನ ಭಕ್ತ ಗೆಳೆಯರೊಂದಿಗೆ ಹೇಳಿಕೊಂಡಾಗ ಆತ ಹೇಳಿದ ಮಾತುಗಳು ಹೀಗಿತ್ತು "ನೀನು ತಿರುಪತಿಯಲ್ಲಿ ಪಡೆದ ದರ್ಶನ ನಿನ್ನ ಶ್ರೀಮಂತಿಕೆಯ ಫಲವೂ ಅಲ್ಲ ಅಧಿಕಾರದ ವಿಷಯವೂ ಅಲ್ಲ. ಇದು ಪ್ರಾಪ್ತಿಯ ವಿಷಯ. ತಿಮ್ಮಪ್ಪನಿಗೆ ನಿಮ್ಮಿಬ್ಬರನ್ನೂ ತಿರುಪತಿಗೆ ಕರೆಯಿಸಿಕೊಂಡು ದರ್ಶನ ನೀಡಬೇಕು ಅನ್ನಿಸಿದರೆ ನಾಸ್ತಕನಾಗಿದ್ದೂ ನಿನಗೆ ಅದನ್ನು ತಡೆಯುವ ಶಕ್ತಿಯಿಲ್ಲ ಅನ್ನುವುದಕ್ಕೆ ಇದೇ ಪುರಾವೆ. ದೇವರಿದ್ದಾನೆ – ಹಾಗೂ ತಿಮ್ಮಪ್ಪನ ಕಟಾಕ್ಷ ನಿನ್ನಮೇಲಿದೆ ಅನ್ನುವುದಕ್ಕೆ ನಿಮ್ಮಿಬ್ಬರಿಗೂ ಬೇರೇನಾದೂ ಪುರಾವೆ ಬೇಕೇನು?"

ಅಮುಲ್ ಸಂಸ್ಥೆಯ ಮಂಡಲಿಗಳಲ್ಲಿ ಇಂದಿಗೂ ಸಾಲಿನ ನಿಯಮ ಮುಂದುವರೆದಿದೆ. ಹೀಗೆಂದು ಆ ಹಳ್ಳಿಗಳಲ್ಲಿ ಜಾತಿವಾದ ಕಡಿಮಯೇನೂ ಆಗಿಲ್ಲ. ಆದರೆ ಸಹಕಾರ ಮಂಡಲಿಯ ವಿಷಯಕ್ಕೆ ಬಂದಾಗ ಸಾಲಿನ ನಿಯಮವನ್ನು ಇಂದಿಗೂ ಬದಲಾಯಿಸಿಲ್ಲ. ಹೆಚ್ಚು ಹಾಲು ಸುರಿಯುವವರಿಗೆ ಬೇರೆ ಸಾಲನ್ನು ಮಾಡಬಹುದಾದರೂ ಆ ವ್ಯಾಪಾರಕ್ಕೆ ಮಂಡಲಿಗಳು ಇಳಿದಿಲ್ಲ.

ಬಿಡುಗಡೆಯ ಮೊದಲದಿನ ನೋಡಿದ "ಪ್ರೇಮದ ಕಾಣಿಕೆ" ಸಿನೇಮಾದಲ್ಲಿ ರೈಲಿನ ಬಾಗಿಲು ತೆಗೆದು ಮೊದಲಿಗೆ ಬೂಟು, ಅಲ್ಲಿಂದ ಮೇಲಕ್ಕೆ ಕಾಲು.. ಹೀಗೆ ಕ್ಯಾಮರಾ ಪ್ಯಾನ್ ಆಗುತ್ತಾ ರಾಜಕುಮಾರ್ ಮುಖದ ಮೇಲೆ ಕೇಂದ್ರೀಕೃತವಾದಾಗ ಆಗಿದ್ದ ಪುಳಕ, ತೆರೆಯ ಮೇಲಕ್ಕೆ ಚಿಮ್ಮಿದ್ದ ಚಿಲ್ಲರೆ ಕಾಸಿ ಚಿಲ್ ಚಿಲ್ ಶಬ್ದದ ಅನುಭವವನ್ನು ಖರೀದಿಸುವ ಪರಿ ಹೇಗೆ? ಕಷ್ಟವೇ ಪಡದೆ ಖರೀದಿಸಿದ ಟಿಕೇಟಿನ ಕಿಮ್ಮತ್ತೆಷ್ಟು?

ಸ್ಯಾಂಡಲ್ ಈ ದ್ವಂದ್ವಗಳ ಬಗೆಗೆ ಚರ್ಚಿಸುತ್ತಾ ಎಲ್ಲವನ್ನೂ ಮಾರುಕಟ್ಟೆಯ ನಿಯಮಕ್ಕೆ ಒಳಪಡಿಸುತ್ತಿರುವ ಈಚಿನ ವಿದ್ಯಮಾನಗಳನ್ನು ಪ್ರಶ್ನಿಸುತ್ತಾರೆ. ಕೆಲವಾದರೂ ಹಕ್ಕುಗಳನ್ನು ವ್ಯಾಪಾರಾತೀತವಾದ ಕೂಡು-ಕೊಳ್ಳುವಿಕೆಯನ್ನು ನಾವು ಜೀವಂತವಾಗಿಡಬಹುದೇ? ಸ್ಪಕ್ಟ್ರಂ ಹರಾಜು ಹಾಕುವ ಸಂದರ್ಭದಲ್ಲಿ ಬಡವರು ಅತ್ಯವಶ್ಯಕವಾಗಿ ಉಪಯೋಗಿಸುವ ಮೊಬೈಲೂ, ಕಲ್ಲಿದ್ದಲ ಗಣಿಯನ್ನು ಹರಾಜು ಹಾಕುವ ಸಂದರ್ಭದಲ್ಲಿ ಬಡವನ ಮನೆಯ ಕ್ಷೀಣಕಾಂತಿಯ ಮಿಣುಕು ಬಲ್ಬನ್ನು ನಾವು ಮರೆಯದಿದ್ದರೆ ಉತ್ತಮ ಅರ್ಥನೀತಿಯನ್ನು ಪಾಲಿಸುವ, ಉತ್ತಮ ಸಮಾಜವನ್ನು ನಿರ್ಮಿಸುವ, ಉತ್ತಮ ಸರಕಾರವಾಗುತ್ತೇವೆ. ನಮಗೆ ಆ ತಾಳ್ಮೆಯಿದೆಯೇ ಅಥವಾ ನಾವುಗಳೆಲ್ಲಾ ಮಾರಿಕೊಂಡವರೇ?

3 comments:

 1. ಬಹಳ ದಿನಗಳ ಅಂತರದಲ್ಲಿ ಲೇಖನ ಪ್ರಕಟಿಸುತ್ತೀದ್ದೀರಿ.
  ನೀವು ಆರಿಸಿಕೊಂಡ ವಿಷಯ ತೀವ್ರವಾಗಿ ಕಾಡುವಂತಹದ್ದೆ ಆಗಿದೆ. ಲೇಖನದಲ್ಲಿ ಚರ್ಚೆಯನ್ನು ಪ್ರಾರಂಭಿಸಿದ ಹಾಗೆ ಮಾಡಿ ಅಲ್ಲಿಗೆ ಕೊನೆಗಳಿಸಿದ್ದೀರಿ.
  ---
  ರವಿಪ್ರಕಾಶ

  ReplyDelete
 2. ಚಿ೦ತನೆಗೆ ಹಚ್ಚುವ ಲೇಖನ. ಇನ್ನೊ೦ದು ವಿಷಯ, ನಾನು ತಿಳಿದ೦ತೆ, ಪ್ರಸಕ್ತ ಹರಿಜನ ಎ೦ಬ ಪದದ ಬಳಕೆ ಸೂಕ್ತ ಅಲ್ಲ, ಅದು ದಲಿತ ಎ೦ದಾಗಬೇಕು ! ಎಲ್ಲೋ ಕೇಳಿ ಬಲ್ಲ೦ತೆ ಅದಕ್ಕೆ ಕಾನೂನಿನ ಕಟ್ಟುಪಾಡು ಇದೆ.

  ReplyDelete
 3. ಹರಿಜನ ಅನ್ನುವ ಪದ ಉಪಯೋಗಿಸಬಾರದು ಎನ್ನುವುದು ತಿಳಿದಿರಲಿಲ್ಲ. ಇದು ಗಾಂಧೀಜಿಯವರ ಪದಪ್ರಯೋಗ. ಅವರೇ ಹುಟ್ಟುಹಾಕಿದ್ದು. ಇಷ್ಟು ಬೇಗ ಕಾನೂನು ಬಾಹಿರವಾಯಿತೇ? ಅಂದಹಾಗೆ ತಮ್ಮ ಮೂಲ ಭಾಷಣದಲ್ಲಿ ಕುರಿಯನ್ ಸ್ಪಷ್ಟವಾಗಿ ಹರಿಜನ ಅನ್ನುವ ಮಾತನ್ನು ಉಪಯೋಗಿಸಿದ್ದಾರಲ್ಲಾ?

  ReplyDelete